ಒಂದು ಪೀಠಿಕೆ, ಸಮಜಾಯಿಷಿ, ವರದಿ ಮತ್ತು ವಂದನಾರ್ಪಣೆ


ಪೀಠಿಕೆಗೊಂದು ಕಥೆ…

ಇದು ನಿಜ್ವಾಗ್ಲೂ ನಡೆದ- ಇನ್ನೂ ಪರಿಹಾರ ಕಾಣದಿರುವ ಸಂಗತಿ.
ನನ್ನ ಹಳೆ ಗೆಳತಿಯೊಬ್ಬಳ ಹೆಸರು ಭವ್ಯಾ. ಅವಳ ಗಂಡ ಚಂದನ್. ಅವರಿಬ್ರೂ ಪ್ರೀತಿಸಿ ಮದುವೆಯಾದ್ರು. ಪ್ರೀತಿ ಅಂದ್ರೆ… ಅದೆಂಥದ್ದು ಅಂತೀರಾ!? ಅಂವ ಇದ್ದಿದ್ದು ಮುಂಬಯಿಯಲ್ಲಿ. ಇವಳು- ಇಲ್ಲೇ, ಬೆಂಗ್ಳೂರಲ್ಲಿ. ದಿನಾ ಗಂಟೆಗೊಂದು ಸಾರ್ತಿ ಅಂವ ಇವಳಿಗೆ ಕಾಲ್ ಮಾಡಿ ಕಾಲು ಗಂಟೆಯಾದ್ರೂ ಮಾತಾಡ್ತಿರ್ತಿದ್ದ. ರಾಟ್ರಿಯಂತೂ ನಿದ್ದೆ ಬಿಟ್ಟು ಫೋನಲ್ಲಿ ಹರಟೆ ಕೊಚ್ತಿದರು.

ಸರಿ. ಎರಡೂ ಕಡೆಯವರು ಒಪ್ಪಿ ಖುಶಿಖುಶಿಯಾಗೇ ಮದುವೆ ಮಾಡಿಕೊಟ್ಟರು. ಆದರೆ, ಮದುವೆಯಾದ ಎರಡನೇ ತಿಂಗಳಿಗೇ ಭವ್ಯಾಳ ಕಳೆ ಕುಂದಿಹೋಗಿತ್ತು. ಚಂದನ್ ಕೂದ ಬೆಂಗಳೂರಿಗೇ ಶಿಫ್ಟ್ ಆಗಿದ್ದ. ಅಂವ ಕೂಡ ಗೆಲುವಾಗಿರಲಿಲ್ಲ. ‘ಏನ್ರೋ?’ ಅಂದ್ರೆ, ಇಬ್ಬರೂ ಪ್ರತ್ಯೇಕ ಪ್ರತ್ಯೇಕವಾಗಿ, “ಯಾಕೋ ಕಸಿವಿಸಿ, ಇಬ್ರೂ ಒಟ್ಗೆ ಮನೇಲಿದ್ರೆ ಸಾಕು ಏನಾದ್ರೂ ಒಂದ್ ಜಗಳ ಆಡ್ಕೊಂಡು ಫಜೀತಿ ಮಾಡ್ಕೊಳ್ತೀವಿ. ಆಫೀಸಿಗೆ ಹೋದಾಗ ಫೋನಲ್ಲಿ ಚೆನಾಗೇ ಮಾತಾಡ್ಕೊಳ್ತೀವಿ. ಆದ್ರೆ ಮನೇಲಿ ಒಬ್ರನ್ನ ಒಬ್ರು ಸರಿಯಾಗಿ ಫೇಸ್ ಮಾಡೋಕೇ ಆಗೋಲ್ಲ” ಅಂತ ಹೇಳ್ಕೊಂಡ್ರು.
ಕೌನ್ಸೆಲಿಂಗಿಗೆ ಅಂತ ಅವರಿಬ್ರನ್ನೂ ನಾನು ಗೀತಕ್ಕನ ಬಳಿ ಕರೆದೊಯ್ದೆ. ಅವರು ಎಲ್ಲಾವ್ದನ್ನೂ ಕೇಳಿ, ಒಂದಷ್ಟ್ ದಿನ ಫೋನಲ್ಲಿ ಮಾತಾಡೋದು ನಿಲ್ಸಿ, ಒಬ್ಬರಿಗೊಬ್ರು ಮುಖಾಮುಖಿಯಾಗಿ ಮಾತಾಡೋದನ್ನ ರೂಢಿಸ್ಕೊಳ್ಳಿ ಅಂತ ಸಲಹೆ ಕೊಟ್ರು.

ಇದೆಲ್ಲಾ ಆಗಿ ನಾಲ್ಕು ತಿಂಗಳಾಗ್ತಾ ಬಂತು. ಪರವಾಗಿಲ್ಲ, ಈಗ ಅವರ ಜಗಳ ಕಡಿಮೆಯಾಗಿದೆ. ಮನೇಲಿ ಕೂತು ಹರಟೋದನ್ನ ಅಭ್ಯಾಸ ಮಾಡ್ಕೊಳ್ತಿದಾರೆ…

~

ಸಮಜಾಯಿಷಿ!

ಈಗ್ಯಾಕೆ ಇದನ್ನ ಹೇಳ್ದೆ ಅಂತ ಯೋಚ್ನೆ ಮಾಡ್ತಿದೀರಾ? 
ನೆನ್ನೆ (೧೮ ಅಗಸ್ಟ್) ನನ್ನ ಪುಸ್ತಕ ಬಿಡುಗಡೆ ದಿನ ನನ್ನ ಫಜೀತಿ ಹಿಂಗೇ ಆಗಿತ್ತಲ್ವಾ? ಅದ್ಕೆ!
ನಂಗೆ ಸ್ಟೇಜ್ ಮೇಲೆ ಮಾತಾಡೋದೇನೂ ಹೊಸತಲ್ಲ. ಆದ್ರೂ ನೆನ್ನೆ ಯಾವ ಪರಿ ತಡಬಡಾಯಿಸ್ದೆ ಅಂದ್ರೆ, ದೇವಾ! ಬೆಳಗ್ಗೆಯಿಂದ ಅಣ್ಣ ವಿಡಿಯೋ ಕ್ಲಿಪ್ಪಿಂಗ್ ತೋರ್ಸೀ ತೋರ್ಸೀ ಪ್ರಾಣ ಹಿಂಡ್ತಿದಾನೆ!
ಕೊನೆಗೆ, ಅಲ್ಲಿ ಸೇರಿದ್ದ ಬ್ಲಾಗಿಗರನ್ನ, ಬ್ಲಾಗ್ ತಮ್ಮಂದಿರನ್ನಾದ್ರೂ (ವಿಕಾಸ್, ಸುಪ್ರೀ ಇತ್ಯಾದಿ) ನೆಟ್ಟಗೆ ಮಾತಾಡ್ಸಿದ್ನಾ? ಊಹೂಂ… ಅದೂ ಇಲ್ಲ! ಸಮಯಾವಕಾಶ ಆಗ್ಲಿಲ್ಲ ಅನ್ನೋದು ಬೇರೆ ಮಾತು. ಇದ್ದ ಸಮಯದಲ್ಲಾದ್ರೂ ಯಾರೊಟ್ಟಿಗೂ ಬೆರೀಲಿಕ್ಕಾಗ್ಲಿಲ್ಲ 😦

ಕೀಬೋರ್ಡ್ ಕುಟ್ಟಿಕೊಂಡು ಹೀಗೆಲ್ಲ ಸಿಕ್ಕಾಪಟ್ಟೆ ಹರಟುವ ನಾನು ಮುಖಾಮುಖಿಯಾಗಿ ಮಾತಾಡಲಾರೆನೇನೋ ಅನಿಸಿತು. ಆಗ ಭವ್ಯಾ ಕಥೆ ನೆನಪಾಯ್ತು. ಇಷ್ಟೂ ದಿನ ನಿಮ್ಮೊಟ್ಟಿಗೆ ಬರೀ ಕಂಪ್ಯೂಟರಲ್ಲಿ ಹರಟಿದ್ದರ ಪರಿಣಾಮವೇನೋ ಇದು? ಟೀನಾ ಬಹಳ ಮುಂಚೆಯೇ ಸಿಕ್ಕು, ಗೆಳತಿಯಾಗಿದ್ದಳು ಅನ್ನುವ ಒಂದೇ ಕಾರಣಕ್ಕೆ ಬಹುಶಃ ಅವಳೊಂದಿಗೆ ನನಗೆ ಮಾತು ಸಾಧ್ಯವಾಗುತ್ತದೆ.
~

ಕಾರ್ಯಕ್ರಮ ವರದಿ

‘ಭಾಮಿನಿ ಷಟ್ಪದಿ’ ಪುಸ್ತಕ ಬಿಡುಗಡೆ ಕಾರ್ಯಕ್ರಮ ಬಹಳ ಚೆನ್ನಾಗಿ ನಡೀತು. ಜಿ.ಎನ್. ಮೋಹನ್ ಬಹಳ ವಿಭಿನ್ನವಾಗಿ ಅದನ್ನ ಅಯೋಜಿಸಿದ್ದರು. ನನ್ನ ‘ಭಾಮಿನಿ’, ಕುಂಭ ಸಂಭವೆಯಾಗಿ ಹೊರಹೊಮ್ಮಿದಳು. ಅಂದರೆ, ಡಾ.ವಿವೇಕ್ ರೈ ಅವರು ಪುಸ್ತಕವನ್ನು ಮಡಿಕೆಯಿಂದ ಹೊರತೆಗೆಯುವ ಮೂಲಕ ಬಿಡುಗಡೆ ಮಾಡಿದರು. ‘ಚಿತ್ತಾರ’ದಿಂದ ಅಲಂಕೃತವಾಗಿದ್ದ ಕುಡಿಕೆಗಳು ಸ್ಟೇಜನ್ನು ಅಲಂಕರಿಸಿದ್ದವು.
ಬ್ಯಾಕ್ ಡ್ರಾಪಿನಲ್ಲಿ ಮೀಸೆ ಬರೆಸಿಕೊಳ್ತಿದ್ದ, ಬರೀತಿದ್ದ ಹುಡುಗಿಯರಿದ್ದರು. ನನ್ನ ಅಪ್ಪ ಅಮ್ಮ ಕೂಡ ಒಂದು ಸಲ ಅದು ನನ್ನದೇ ಚಿಕ್ಕಂದಿನ ಫೋಟೋ ಅಂದ್ಕೊಂಡು ಬೇಸ್ತು ಬೀಳುವಷ್ಟು ಆ ಮೀಸೆಯ ಹುಡುಗಿಗೆ ನನ್ನ ಹೋಲಿಕೆ ಇತ್ತು. ಆದರೆ ಅದು ನಾನು ಖಂಡಿತಾ ಅಲ್ಲ ಅನ್ನೋದು ನನ್ನ ಕ್ಲಾರಿಫಿಕೇಶನ್ನು. ಫೋಟೋ ತೆಗೆದ ಮಲ್ಲಿಕಾರ್ಜುನರಿಗೆ ಜಯವಾಗಲಿ!

ಪುಸ್ತಕದ ಬಗ್ಗೆ ಬಸವರಾಜು ಅವ್ರು ಮಾತಾಡ್ತಾ ಸ್ವಲ್ಪ ಶೈಲಿ ಬದಲಾಯಿಸೋದಕ್ಕೆ ಗಂಡಸರ ಕಷ್ಟ ಸುಖಗಳನ್ನೂ ಬರೆಯೋದಕ್ಕೆ ಪ್ರಯತ್ನಪಡಿ ಅಂದ್ರು. ‘ಜೀವ ದನಿ’ ಬ್ಲಾಗಿನಲ್ಲಿ ನನ್ನಣ್ಣ ‘ಗಂಡಸರ ಗೋಳು’ ಅಂತ ಬರೀತಿದ್ದ. ಸಮಯ ಸಾಲದೆ ಅದನ್ನ ನಿಲ್ಲಿಸಿಬಿಟ್ಟ, ಆ ಬ್ಲಾಗಿನ ಗೆಳೆಯರು ಬ್ಲಾಗನ್ನೇ ನಿಲ್ಲಿಸಿಬಿಟ್ಟರು. ಅವನು ಶುರು ಮಾಡಿದ್ದನ್ನ ಮುಂದುವರೆಸೋ ಪ್ರಯತ್ನ ಖಂಡಿತ ಮಾಡ್ತೇನೆ!

ವಿವೇಕ್ ರೈ ಬಹಳ ಚೆನ್ನಾಗಿ ವಿಶ್ಲೇಷಣೆ ಮಾಡಿದರು. ಆ ಕೃತಿ ಬೇರೆ ಯಾರದ್ದೋ ಆಗಿದ್ದರೆ ಬಹಳ ಮುಕ್ತ ಮನಸಿನಿಂದ ಅವರ ಮಾತನ್ನ ಎಂಜಾಯ್ ಮಾಡ್ತಿದ್ದೆನೇನೋ? ಆದರೆ ಅದು ನನ್ನದೇ ಆಗಿದ್ದರಿಂದ ಬಹಳ ಮುಜುಗರದಿಂದ ಕುಳಿತಿದ್ದೆ ನಾನು.

ಟೀನಾ ನನ್ನ ಬರಹ ಸಾಮರ್ಥ್ಯ ಕೇವಲ ‘ಭಾಮಿನಿ ಷಟ್ಪದಿ’ಗೆ ಮಾತ್ರ ಸೀಮಿತವಲ್ಲ ಅಂತ ಸರಿಯಾಗಿಯೇ ಗುರುತಿಸಿದ್ಲು. ನಂಗೂ ಕೂಡ ಬರೀ ಅದಕ್ಕೇ ಬ್ರ್ಯಾಂಡ್ ಆಗುವ, ಸೀಮಿತವಾಗುವ ಇರಾದೆ ಏನೂ ಇಲ್ಲ.

ಮೋಹನ್ ಅವರ್ ಕ್ರಿಯೇಟಿವಿಟಿ, ಆಸಕ್ತಿ, ಕಳಕಳಿ ಪ್ರತಿಯೊಂದು ಹಂತದಲ್ಲೂ ಎದ್ದು ಕಾಣ್ತಿತ್ತು. ಒಂದು ಒಳ್ಳೆಯ ಪ್ರೋಗ್ರಾಮ್ ಮಾಡಿಕೊಟ್ಟ ಅವರಿಗೆ ಹ್ಯಾಟ್ಸ್ ಆಫ್.

ಪುಸ್ತಕ ಬಹಳ ನೀಟಾಗಿ ಬಂದಿದೆ. ಈ ಕಾರಣಕ್ಕೂ ಮೋಹನ್ ಗೆ ಥ್ಯಾಂಕ್ಸ್ ಹೇಳಬೇಕು. ಇಂಥದೊಂದು ಔಟ್ ಪುಟ್ ಗೆ ಅಪಾರ, ಪ.ಸ.ಕುಮಾರ್, ಇಳಾ ಮುದ್ರಣದವರು ಕೂಡ ಕಾರಣರು. ನನ್ನ ಪುಸ್ತಕವನ್ನ ತೊಗೊಳ್ಳಿ ಅಂತ ನಾನೇ ಹೇಗೆ ಹೇಳ್ಕೊಳ್ಳಲಿ? ಅಂತ ಹಿಂಜರಿಕೆಯಾದ್ರೂ, ಅದು ನನ್ನದಲ್ಲ ಅಂದ್ಕೊಂಡು ಹೇಳ್ತಿದೇನೆ, ನೀವೂ ಅದನ್ನ ಕೊಳಿ, ಓದಿ! ಅದರಿಂದೇನು? ಅಂತ ಕೇಳ್ತೀರಾ? ಅದರಿಂದ ನಿಮಗೇನೂ ಉಪಯೋಗವಿಲ್ಲ ಸರಿ, ಆದರೆ ಹೊಸ ಬರಹಗಾರರಿಗೆ ಪ್ರೋತ್ಸಾಹ ಕೊಟ್ಟಹಾಗಾಗುತ್ತೆ ಅಂತಷ್ಟೆ!

ಮುಂದೇನು? ಏನೂ ಇಲ್ಲ!
ನನ್ನ ಪಾಡಿಗೆ ಬ್ಲಾಗಿಸ್ಕೊಂಡು ಇದ್ದುಬಿಡೋದು, ಅಷ್ಟೆ.
ಆದ್ರೆ, ನಾವು ಹೀಗೆ ಪರಿಚಿತರಾಗಿಯೂ ಅಪರಿಚಿತರಾಗಿರೋದನ್ನ ತಪ್ಪಿಸ್ಕೊಳ್ಳಲಿಕ್ಕೆ ಏನಾದ್ರೂ ಮಾಡ್ಬೇಕು ಅನಿಸ್ಬಿಟ್ಟಿದೆ. ನಾವೆಲ್ಲಾ ತಿಂಗಳಿಗೊಮ್ಮೆ ಎಲ್ಲಾದ್ರೂ ಸೇರೋದು ಬಹಳ ಒಳ್ಳೆಯದು ಅನಿಸ್ತಿದೆ.
ಈ ಬಗ್ಗೆ ನೀವೂ ಯೋಚನೆ ಮಾಡ್ತೀರಾ?

ಕೊನೆಯಲ್ಲಿ…

ನನ್ನ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದವರೆಲ್ಲರಿಗೂ ಥ್ಯಾಂಕ್ಸ್. ನಿಮ್ಮ ಪ್ರೀತಿಯ ಋಣ ನನ್ನ ಮೇಲಿದೆ.

ವಂದೇ,
ಚೇತನಾ ತೀರ್ಥಹಳ್ಳಿ

19 thoughts on “ಒಂದು ಪೀಠಿಕೆ, ಸಮಜಾಯಿಷಿ, ವರದಿ ಮತ್ತು ವಂದನಾರ್ಪಣೆ

Add yours

  1. ಹೌದುದು,
    ಅಟ್‌ಲೀಸ್ಟ್ ಮುಖಾಮುಖಿಯಾಗಿ ಜಗಳವಾಡಲಿಕ್ಕಾದರೂ ಒಟ್ಟಿಗೆ ಸೇರಬೇಕು. ಟೀನಾ ಮೇಡಂ ಸಹ ಹಂಗೇ ಹೇಳಿದ್ರು.
    ನಾನು ವಿಕಾಸ್, ಸುಶ್ರುತ, ಶ್ರೀನಿಧಿ ಮಳೆಯಲ್ಲಿ ಸಿಕ್ಕಿ ಹಾಕಿಕೊಂಡು ಸೆನೆಟ್ ಹಾಲಿನ ಹೊರಗಡೆ ನಿಂತು ಹತ್ತು ಗಂಟೆವರೆಗೆ ಹರಟಿದ್ವಿ!

  2. Hi Chethana,

    Congratulations on the occation of getting your first book pulished. I am sure, this is just the beginning 🙂 ..

    Cheers!
    Guru
    (ಕನ್ನಡದಲ್ಲಿ ಬರೀಲಿಕ್ಕೆ ಹೋದೆ. ಯಾಕೋ ನಾಟಕೀಯ ಅನ್ನಿಸ್ಬಿಡ್ತು :(. )

  3. ದೂರದ ಅಮೇರಿಕೆಯಲ್ಲಿ ಕುಳಿತೇ ನಿಮ್ಮ ಬರಹಗಳನ್ನು ಓದಿರುವ ನನಗೆ … ಈಗ ನಿಮ್ಮ ಪುಸ್ತಕ ಬಿಡುಗಡೆಗೆ ಖುದ್ದಾಗಿ ಇರಲು ಆಗಲಿಲ್ಲವಲ್ಲಾ ಎನ್ನುವ ಬೇಸರ.
    ವರದಿ ಓದಿ ಮತ್ತು ಚಿತ್ರಗಳನ್ನು ನೋಡಿ ಖುಷಿಯಾಯ್ತು. ಹೀಗೇ ಬರೀತಾ ಇರಿ . ಮೀಸೆ ಬರೆಸಿಕೊಳ್ಳುತ್ತಿದ್ದ ಹುಡುಗಿ ನೀವೇ ಅಂದುಕೊಂಡಿದ್ದೆ.

  4. ಚೇತನಾ ಮೇಡಂ,
    ಅಭಿನಂದನೆಗಳು…. 🙂

    ನಿಮ್ಮ ಪುಸ್ತಕಾನ ಓದ್ಲೇ ಬೇಕು ಅಂದ್ಕೊಂಡಿದೀನಿ. ಎಲ್ಲಿ ಸಿಗುತ್ತೆ? ..ಸಪ್ನಾ ಬುಕ್ ಹೌಸಲ್ಲಿ?

    ಅಂದಹಾಗೆ, ಕಾಮೆಂಟ್ಸಗಳಲ್ಲಿ ಓದ್ದೆ, ಅದೆನೋ ಹುಡ್ಗೀಗೆ ಮೀಸೆ ಬರೆಸಿ,ಫೋಟೋನ ಕವರ್ ಪೇಜಲ್ಲಿ ಹಾಕಿಸಿದ್ದೀರಂತಲ್ಲ.. ತಿಳಿಸಲೇ ಬೇಕಂತೇನು ರಚ್ಚೆ ಮಾಡೊಲ್ಲ..ಕುತೂಹಲಕ್ಕೆ ಕೇಳ್ತಿದ್ದೀನಿ, ಏನನ್ನ ಸೂಚಿಸುತ್ತೆ ಈ ಮೀಸೆ ಫೊಟೋ?!

    ನಿಮ್ಮ ತಮ್ಮನಂತಹ,
    ಅಆಇಈ!

  5. ಸಖತ್ ಖುಷಿಯಾಯ್ತು ಚೇತನಾ.
    ನಿಮ್ಮ ಮುಂದಿನ ಪುಸ್ತಕ ಬಿಡುಗಡೆ ಹೊತ್ತಿಗಾದ್ರೂ ನಾನಲ್ಲಿದ್ರೆ… ಹ್ಯಾಗೆ ತಡಬಡಾಯ್ಸಿದ್ರಿ ನೋಡಬಹುದು 😉

  6. @ Ramesh,

    ಸಾರ್ ಕವರ್ ಪೇಜ್ ನಲ್ಲಿ ಆ ಹುಡುಗಿಯ ಫೋಟೊ ಇಲ್ಲ :(( ಅದಿಕ್ಕೆ ನಂಗೆ ಸಿಟ್ಟು !
    ಇನ್ನು ಮೀಸೆ ಬರೆಸೋ ಹುಡುಗಿ ಚಿತ್ರ ಏನು ಸೂಚಿಸುತ್ತೆ ಅಂದ್ರೆ …
    .
    .
    .
    ಎಲ್ಲ ಹುಡುಗಿಯರಿಗೂ ಗಂಡಸಾಗೋ ಆಸೆ ಇದೆ ಅಂತ !!!!!!!!!.

    .
    .
    ಚೇತನ ಸುಮ್ನೆ ತಮಾಶೆಗಂದೆ ಬೇಜಾರ್ ಮಾಡ್ಕೋಬೇಡಿ:)

  7. ಚೇತನರವರೆ,
    ಹುಶಾರಿರದೆ ನಿಮ್ಮ ಪುಸ್ತಕ ಬಿಡುಗಡೆಯಾಗುವುದನ್ನು ಕಣ್ಣಾರೆ ನೋಡಲು ಆಗಲಿಲ್ಲ. ಆದರೆ ಪುಸ್ತಕವನ್ನು ಖಂಡಿತ ಓದುತ್ತೇನೆ. congratulations.

    – ಕಿರಣ್

  8. ನಿಮ್ಮ ಪುಸ್ತಕ ಬಿಡುಗಡೆಗೆ ಬರಲೇ ಬೇಕು ಅಂತ ಅಂದುಕೊಂಡಿದ್ದೆ, ಆದ್ರೆ ಯಾವತ್ತು ಅಂತ ಗೊತ್ತಿರಲಿಲ್ಲ, ಊರಿನಲ್ಲಿ ಇರದಿದ್ದರಿಂದ ನಿಮ್ಮ ಮೆಸೇಜ್ ಸಿಕ್ಕೋ ಹೊತ್ತಿಗೆ ಕಾರ್ಯಕ್ರಮ ಅರ್ಧ ಮುಗಿದಿತ್ತು:( ಮೈಲ್ ಕಳಿಸಿದ್ದೀನಿ,…congrats agn:) ಸದ್ಯದಲ್ಲೇ ದರ್ಶನ ಭಾಗ್ಯ ಸಿಗ್ಲಿ ಅಂತ ಆಶಿಸ್ತಾ,
    ಅಭಿಮಾನಿ

  9. ಹೆಲೋ, ನಮಸ್ತೇ
    ಭಾಮಿನಿ… ಬಿಡುಗಡೆಗೆ ಸಾಕ್ಷಿಯಾದವರಿಗೆಲ್ಲ ಥ್ಯಾಂಕ್ಸ್.
    ಬಾರದಿದ್ದವರೇ, ದಯವಿಟ್ಟು ನಿಮ್ಮ ಕಾರ್ಯಕ್ರಮಗಳಿಗೆ ನನ್ನನ್ನ ಕರೀರಿ. ನಾನು ಬಂದು ಸೇಡು ತೀರಿಸ್ಕೊಳ್ತೇನೆ!

    ಮೀಸೆ ಬರೆಸಿಕೊಂಡ ಹುಡುಗಿ ಬಗ್ಗೆ ತಲೆ ಕೆಡಿಸ್ಕೊಂಡವರೇ…
    ನಿಮ್ಮಾಣೆ, ಅದು ನಾನಲ್ಲ. ಮಲ್ಲಿಕಾರ್ಜುನ್ ತೆಗೆದ ಫೋಟೊ ಅದು. ಆದ್ರೆ, ಒಂದಂತೂ ಹೌದು. ಅದನ್ನ ನೋಡಿದ ಅಪ್ಪ ಅಮ್ಮ ಕೂಡ ನಿನ್ ಫೋಟೋ ಹೀಗೆ ನಾವ್ಯಾವಾಗ ತೆಗೆಸಿದ್ವಿ! ಅಂತ ಅಚ್ಚರಿಪಟ್ಟಿದ್ರು!!

    ನಲ್ಮೆ,
    ಚೇತನಾ

  10. ನಾನು ಕನ್ನಡ ಹನಿಗಳ ಬಳಗದಿಂದ ವಿನಂತಿಸಿಕೊಳ್ಳುತ್ತಿರುವುದೇನೆಂದರೆ, ನಮ್ಮ ಕನ್ನಡ ಹನಿಗಳು ಹಾಸ್ಯ್, ಕವನ, ಹನಿಗವನ ಇನ್ನೂ ಹತ್ತು ಹಲವನ್ನು ಹೊಂದಿದೆ.

    http://kannadahanigalu.com/

    ನೀವು ಮೀಕ್ಷಿಸಿ, ನಿಮ್ಮ ಬ್ಲಾಗ್‍ನಲ್ಲಿ ಪ್ರಕಟಿಸುವಿರಾ, ಹಾಗೆಯೇ ಕನ್ನಡ ಹನಿಗಳಲ್ಲಿಯು ನಿಮ್ಮ ಬ್ಲಾಗ್‍ನ್ನು ಪ್ರಕಟಿಸುತ್ತೇವೆ.

    ದಯವಿಟ್ಟು ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಾಗಳಿಗೆ ನಮಗೆ ಬರೆದು ತಿಳಿಸಿ.

    ಧನ್ಯವಾದಗಳೊಂದಿಗೆ…..

ನಿಮ್ಮ ಟಿಪ್ಪಣಿ ಬರೆಯಿರಿ

Blog at WordPress.com.

Up ↑