ಹೀಗೇ ಮೂರು, ವೇದದ ಚೂರು


ಏಕೋಹಮ್ ಬಹುಷ್ಯಾಮ…

ಅಲ್ಲಿ ಏನೂ ಇರಲಿಲ್ಲ.
ಇರಲಿಲ್ಲವೆಂದರೆ, ಇತ್ತು… 
ಹಾಗೆ ‘ಇದೆ’ ಎನ್ನಲು ಮತ್ತೊಂದು
ಜೊತೆಗಿರಲಿಲ್ಲ.
ಹಾಗೆ ಇದ್ದದ್ದು ಅಗಾಧವಾಗಿತ್ತು.
ಏನಿದ್ದರೇನು? ಒಂಟೊಂಟಿಗೆ
ಬೆಲೆಯಿಲ್ಲವೆನ್ನುವುದು ಅದಕ್ಕೆ ಗೊತ್ತಾಯ್ತು.
ತಿಳಿವಿಗೆ ಬಿರಿದು ಚೂರಾಯ್ತು.
ಪ್ರತಿ ಚೂರಲ್ಲೂ ತಾನೇ ತಾನಾಗಿ ತಾನೇ ತಾನಾಗಿ ತಾನೇ ತಾನಾಗಿ…
ಚೂರಿನ ಚೂರಿನ ಚೂರಿನ…. ಚೂರು ತನ್ನನ್ನೇ ತಾನು ಮರೆತು,
ಜಗತ್ತು,
ಜೀವದಿಂದ ತುಂಬಿಕೊಂಡಿತು.

~

ತತ್ ತ್ವಮ್ ಅಸಿ

ಬಣ್ಣವಿಲ್ಲ, ರುಚಿಯಿಲ್ಲ, ಆಕಾರವಿಲ್ಲ.
ತ್ರೀ ರೋಸಸ್ ಜಾಹೀರಾತಿನ ಸ್ಲೋಗನ್ ಇದಲ್ಲ.
ಯಾಕಂದರೆ,
ಅದೇನಿಲ್ಲದಿದ್ದರೂ ನಿನಗೆ ಶಕ್ತಿಯಿದೆ.
ನಿನ್ನ ಶಕ್ತಿಯ ಬಣ್ಣ ನನ್ನ ಕಣ್ಣಿಗೆ ಮೀರಿ,
ನಿನ್ನ ರುಚಿಯ ಸ್ವಾದ ಸವಿಯಲಾಗದೆ
ನಾಲಗೆಯೆ ಸೋತು,
ನಿನ್ನಾಕಾರವ ತಬ್ಬಲಾಗದ ನಾನು
ಹಾಗಂದದ್ದು ನಿಜ.

ಯಾವುದು ಪಾತ್ರಕ್ಕೆ ಆಕಾರ,
ಬಣ್ಣಕ್ಕೆ ಬಣ್ಣ
ರುಚಿಗೆ ರುಚಿ ಕೊಟ್ಟು
ಭಾವಕ್ಕೆ ಭಕುತಿಗೆ ನಿಲುಕುತ್ತಲಿರುವುದೋ,
ಗೊತ್ತಾಗಿದೆ ನನಗೆ-
ಅದು ನೀನೇ ಆಗಿರುವೆ.

~

ಅಹಂ ಬ್ರಹ್ಮಾಸ್ಮಿ

ಹೆಸರು ಬದಲಿಸಿದೆ,
ಮೂರು ಮೂರು ಬಾರಿ.
ಹೇರ್ ಸ್ಟೈಲು, ಸ್ನೋ- ಶಾಂಪೂ
ಸಾಕಷ್ಟು ಬಾರಿ.

ಮೈ ಚರ್ಮ ಬದಲಾಗಿದೆ
ತಲೆಗೂದಲು ಬದಲಾಗಿದೆ
ಒಳಗೊಳಗಿನ ಒಂದೊಂದು ಜೀವಕೋಶವೂ
ಬಲಿಯಾಗಿದೆ ಕಾಲಕ್ಕೆ.

ಮೂರು ದಶಕದ ಮಹಾನಾಟಕದಲ್ಲಿ
ಒಮ್ಮೊಮ್ಮೆ ಒಂದೊಂದು ರೋಲು
ಬದಲಿಸುತ್ತಲೇ ಬಂದಿರುವೆ  ಪ್ರತಿ ಬಾರಿ.

ಆದರೂ,
‘ನಾನು’ ‘ನಾನೇ’ ಆಗಿರುವೆ
ಅಮ್ಮನ ಹೊಟ್ಟೆಯಿಂದೀಚೆ ಬಿದ್ದ ಮಗು,
ಗಿಡ್ಡ ಲಂಗದ ಸ್ಕೂಲಿನ ಮಗು
ತುಂಬು ಸೀರೆಯ ತಾಯಿ- ನನಗೊಂದು ಮಗು!
ನಾನೇ ಆಗಿರುವೆ, ನಾನು ಬದಲಾದರೂ…

ಹೌದು.
ಹೊರಗಿನ ಮುಖ ಧೋಕಾ ನೀಡಿದರೂ
ನನ್ನ ನಾನೇ ಎಂದು
ಪರಿಚಯ ಹೇಳುವುದು
ನನ್ನೊಳಗಿನ ನಾನು.
ನಿತ್ಯ, ಸತ್ಯ, ಶುದ್ಧ, ಮುಕ್ತ
ಅದು-
ನಿಜವಾದ ‘ನಾನು’

7 thoughts on “ಹೀಗೇ ಮೂರು, ವೇದದ ಚೂರು

Add yours

  1. ಪ್ರಿಯ ಆತ್ಮೀಯ ಸ್ನೇಹಿತರೆ,

    ಬಹಳ ಸೊಗಸಾಗಿದೆ….

    ನಾನು ಕನ್ನಡ ಹನಿಗಳ ಬಳಗದಿಂದ ವಿನಂತಿಸಿಕೊಳ್ಳುತ್ತಿರುವುದೇನೆಂದರೆ, ನಮ್ಮ ಕನ್ನಡ ಹನಿಗಳು ಹಾಸ್ಯ್, ಕವನ, ಹನಿಗವನ ಇನ್ನೂ ಹತ್ತು ಹಲವನ್ನು ಹೊಂದಿದೆ.

    http://kannadahanigalu.com/

    ನೀವು ಮೀಕ್ಷಿಸಿ, ನಿಮ್ಮ ಬ್ಲಾಗ್‍ನಲ್ಲಿ ಪ್ರಕಟಿಸುವಿರಾ, ಹಾಗೆಯೇ ಕನ್ನಡ ಹನಿಗಳಲ್ಲಿಯು ನಿಮ್ಮ ಬ್ಲಾಗ್‍ನ್ನು ಪ್ರಕಟಿಸುತ್ತೇವೆ.

    ಹಾಗೆಯೇ ಸಾದ್ಯವಾದಲ್ಲಿ ನಿಮ್ಮಲ್ಲೂ ಕವನ, ಚುಟುಕ, ಕವಿತೆ, ಹಾಸ್ಯ ಮುಂತಾದವುಗಳಿದ್ದರೆ ನಿಮ್ಮ ಹೆಸರಿನಲ್ಲಿ ಪ್ರಕಟಿಸಬಹುದು.

    ದಯವಿಟ್ಟು ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಾಗಳಿಗೆ ನಮಗೆ ಬರೆದು ತಿಳಿಸಿ – kannadajokes@gmail.com

    ಧನ್ಯವಾದಗಳೊಂದಿಗೆ…..

ನಿಮ್ಮ ಟಿಪ್ಪಣಿ ಬರೆಯಿರಿ

Create a free website or blog at WordPress.com.

Up ↑