ನಾನು ನೆಟ್ ತೆಗೆಸಿ ನಾಲ್ಕು ತಿಂಗಳಾಗ್ತಾ ಬಂತು. ಅವತ್ತಿಂದ ರೆಗ್ಯುಲರ್ರಾಗಿ ಮೇಲ್ ಚೆಕ್ ಮಾಡಲು ಸಾಧ್ಯವೇ ಆಗ್ತಿಲ್ಲ. ಕೆಲಸ ಮಾಡೋದ್ ಬಿಟ್ಟು ಚಾಟ್ ಮಾಡ್ಕೊಂಡು ಕೂರ್ತಾರೆ ಅಂತಲೋ ಏನೋ ಆಫೀಸಲ್ಲೂ ಬ್ಲಾಕ್ ಮಾಡಿಬಿಟ್ಟಿದಾರೆ ನೋಡಿ! ಅದಕ್ಕೇ.
ಹಾಗೂ, ನೆನ್ನೆ ಸಂಜೆ ಸೈಬರ್ ನತ್ತ ಹೆಜ್ಜೆ ಹಾಕಿದೆ. ಆಮೇಲೆ ‘ಯಾಕಪ್ಪಾ ಬೇಕಿತ್ತು ಈ ಉಸಾಬರಿ’ ಅಂತ ಬೇಸರಪಟ್ಕೊಂಡು ಉಳಿದ ಸಮಯ ಹಾಳು ಮಾಡ್ಕೊಂಡೆ.
ಕಾರಣ, ಸ್ವಲ್ಪ ಗಂಭೀರವಾಗಿದೆ.
ಒಬ್ಬ ಪುಣ್ಯಾತ್ಮರು ಮೇಲ್ ಮಾಡಿದ್ದರು. (ಅವರನ್ನು ವೈಯಕ್ತಿಕವಾಗಿ ತರಾಟೆಗೆ ತೆಗೆದ್ಕೊಳ್ಳುವ ಉದ್ದೇಶ ನನ್ನದಲ್ಲ ಮತ್ತು ಅದರಿಂದ ಉಪಯೋಗವೂ ಇಲ್ಲವಾದ್ದರಿಂದ ಹೆಸರು, ಐಡಿಗಳನ್ನು ಇಲ್ಲಿ ನಮೂದಿಸುತ್ತಿಲ್ಲ). ಅವರದೊಂದಷ್ಟು ಆರೋಪ. ಅವರ ಪ್ರಕಾರ;
* ಭಾಮಿನಿ ಷಟ್ಪದಿ ಬರೆದ ನಾನು ಮತೀಯ ದುರಂತಗಳ ಬಗ್ಗೆ ನನ್ನದೊಂದು ಸತ್ತ ದನಿ (ಹತ್ತು-ಹನ್ನೆರಡು ದಿನಗಳ ಕೆಳಗೆ ನನ್ನ ಬ್ಲಾಗಲ್ಲಿ ಬರೆದಿದ್ದು) ಥರದ ಲೇಖನಗಳನ್ನು ಮತ್ತೆ ಮತ್ತೆ ಬರೀತಿರೋದು ನನ್ನ ಹಿಪಾಕ್ರಸಿಯನ್ನು ಸೂಚಿಸುತ್ತದೆ.
* ಪೌರಾಣಿಕ ಪಾತ್ರಗಳನ್ನು ಇಟ್ಟುಕೊಂಡು ಕಥೆ ಹೆಣೆದಿರುವ ನಾನು ಇಸ್ಕಾನ್ ನಲ್ಲಿ ಕೆಲಸ ಮಾಡ್ತಿರೋದು ನನಗೆ ಬದ್ಧತೆಯಿಲ್ಲ ಎಂಬುದನ್ನ ಸಾಬೀತುಪಡಿಸುತ್ತೆ.
* ಇಷ್ಟಕ್ಕೂ ನನಗೆ ಭಾಮಿನಿ ಷಟ್ಪದಿಗಾಗಿ ಅನಗತ್ಯ ಪ್ರಚಾರ ಸಿಕ್ಕಿದ್ದು, ಅದೊಂದು ನೀರಮೇಲಿನ ಗುಳ್ಳೆಯ ಥರದ ಜನಪ್ರಿಯತೆಯಷ್ಟೆ. ಬ್ಲಾಗಿಗೆ ಬರುವ ಕಮೆಂಟುಗಳೂ ಕೇವಲ ಗೆಳೆಯರ ಬಳಗದ್ದು ಮಾತ್ರ. ಅಷ್ಟಾದರೂ ನಾನು ಟಾಪ್ ಬ್ಲಾಗರ್ ಎಂದು ಬೀಗುತ್ತಿದ್ದೇನೆ!!
ಎಲ್ಲಕ್ಕಿಂತ ಮುಖ್ಯ ಆರೋಪ- * ನಾನು ಕೋಮುವಾದಿಗಳ ಪರ ಬರೆಯುತ್ತ ಬ್ಲಾಗ್ ಮಾಧ್ಯಮದ ಸ್ವಾಸ್ಥ್ಯ ಕದಡಲು ಪ್ರಯತ್ನಿಸುತ್ತಿದ್ದೇನೆ. ಗುಂಪುಗಾರಿಕೆ ಹುಟ್ಟುಹಾಕುತ್ತಿದ್ದೇನೆ.
ಇವನ್ನೆಲ್ಲ ನಿಮ್ಮ ಬಳಿ ಹೇಳ್ಕೊಳ್ಳುವ ಮುನ್ನ ಅದರ ಅಗತ್ಯ ಇದೆಯಾ, ಇದನ್ನೂ ವಿವಾದ ಹುಟ್ಟುಹಾಕುವ ಸ್ಟಂಟ್ ಎಂದುಬಿಟ್ಟರೆ ಏನು ಮಾಡೋದು? ಅಂತ ಯೋಚಿಸಿದೆ. ಆದರೆ ಇಲ್ಲಿ ಬ್ಲಾಗಿಂಗಿಗೆ ಸಂಬಂಧಪಟ್ಟ ಆರೋಪಗಳು ಇದ್ದುದರಿಂದ ನಿಮ್ಮ ಜತೆ ಒಂದು ಮಾತು ಹೇಳಿನೋಡುವಾ ಅನಿಸಿತು.
ಈ ಮೇಲಿನ ಆರೋಪಗಳಿಗೆ ಖಂಡಿತ ಉತ್ತರಗಳಿವೆ. ಆದರೆ ಅದನ್ನು ಕೊಡುತ್ತ ಕೂರುವುದು ಸಮಯ ಹಾಳುಮಾಡಿದಂತೆ ಅನಿಸ್ತಿದೆ. ಒಂದೊಮ್ಮೆ ನಿಮಗೆಲ್ಲರಿಗೂ ಅವು ನಿಜವೆನಿಸಿದಲ್ಲಿ, ದಯವಿಟ್ಟು ನಿಮ್ಮನಿಮ್ಮ ಬ್ಲಾಗ್ ರೋಲುಗಳಿಂದ ನನ್ನ ಲಿಂಕು ತೆಗೆದುಬಿಡಿ. ಯಾರೂ ಓದದೆ ರಿಜೆಕ್ಟ್ ಮಾಡಿಬಿಡಿ.
ಯಾಕೆಂದರೆ,
ಯಾರೇನೇ ಹೇಳಿದರೂ ಬರೆಯದೆ ಸುಮ್ಮನಿರುವುದು ನನ್ನಿಂದಾಗದ ಕೆಲಸ.

ಅಕ್ಕಾ,
– ನಾನು ಇದನ್ನೇ ಯೋಚಿಸುತ್ತಿದ್ದೆ. ನಮ್ಮ ಅನೇಕ ಜನಪ್ರಿಯ ವ್ಯಕ್ತಿಗಳು, ಬರಹಗಾರರು, ಚಿಂತಕರು ಎನ್ನಿಸಿಕೊಂಡವರು ಯಾಕೆ ಸ್ವಾಭಿಮಾನವನ್ನು ಕಳೆದುಕೊಂಡವರಂತೆ ವರ್ತಿಸುತ್ತಾರೆ ಎಂದು. ಮುಸ್ಲೀಮನಾದವನಿಗೆ ಕುರುಚಲು ಗಡ್ಡ ಬಿಟ್ಟು, ಟೊಪ್ಪಿ ಧರಿಸುವುದು ಧಾರ್ಮಿಕ ಹಕ್ಕು ಹಾಗೂ ಹೆಮ್ಮೆ ಎನ್ನುವುದಾದರೆ ಜನಿವಾರ ತೊಟ್ಟು, ಶಿಖೆ ಬಿಟ್ಟುಕೊಂಡಿರುವುದು ಏತಕ್ಕೆ ಅವಹೇಳನಕ್ಕೆ ಆಸ್ಪದವಾಗುತ್ತದೆ? ಏಕೆ ಅದು ಹೆಮ್ಮೆಯ ಸಂಗತಿಯಾಗುವುದಿಲ್ಲ? ಸ್ವಾಭಿಮಾನ ಹೊಂದಿರುವುದು ಸಂಕುಚಿತತೆ ಎನ್ನುವುದಾದರೆ ಈ ಚಿಂತಕ ಮಹಾಶಯರು ತಮ್ಮಲ್ಲಿರುವ ಅಪಾರ ಕರುಣೆಯಿಂದ ನಮ್ಮಂತಹ ಸಾಮಾನ್ಯರನ್ನೆಲ್ಲಾ ಕ್ಷಮಿಸಿಬಿಡಲಿ…
ನೀವು ಈ ಬಗ್ಗೆ ಸ್ವಲ್ಪ ಎಚ್ಚರವಾಗುವುದು ಒಳಿತು… ಮುಂದೆ ಪುಸ್ತಕಗಳು ಪ್ರಕಟವಾದರೆ ಬೆನ್ನುಡಿ ಬರೆಯಲಿಕ್ಕೆ, ಮುನ್ನುಡಿ ಬರೆಯಲಿಕ್ಕೆ, ಪತ್ರಿಕೆಯಲ್ಲಿ ಒಳ್ಳೆಯ ವಿಮರ್ಶೆ ಬರೆಯಲಿಕ್ಕೆ ಯಾರ್ಯಾರು ಬೇಕಾಗುತ್ತಾರೆ ಎಂಬುದನ್ನು ಮೊದಲೇ ಯೋಚಿಸಿಟ್ಟುಕೊಂಡು ಅವರು ಯಾವ ನಿಲುವು ಹೊಂದಿದ್ದಾರೆ ಎಂಬುದನ್ನು ತಿಳಿದು ಆ ಪ್ರಕಾರವಾಗಿ ನಿಮ್ಮ ಪ್ರತಿಕ್ರಿಯೆ ನೀಡಿ. ಆಗ ಅದು ಹಿಪಾಕ್ರಸಿ ಆಗದು!
೨. ಇದಕ್ಕೆ ನೀವೇ ಉತ್ತರಿಸುವುದು ಒಳಿತು.
೩. ಒಂದೊಳ್ಳೆಯ ಗುಲಾಬಿ ಹೂವನ್ನು ಕಳಿಸಿ ‘ಗೆಟ್ ವೆಲ್ ಸೂನ್’ ಎಂದಷ್ಟೇ ಹೇಳಬಹುದು ಇದಕ್ಕೆ!
ಆದರೆ ಬ್ಲಾಗ್ ಲೋಕದ ಸಕ್ರಿಯ ಸದಸ್ಯನಾಗಿ ನಾನು ಕೆಲವಕ್ಕೆ ಉತ್ತರಿಸಬೇಕು. ಬ್ಲಾಗುಗಳು ಗಳಿಸುವ ಹಿಟ್‌ಗಳು ಶ್ರೇಷ್ಟತೆಯ ಮಾನದಂಡವೇನಲ್ಲ, ಬ್ಲಾಗು ಬರೆಯುವವರು ಇಲ್ಲಿ ಚಿನ್ನದ ಪದಕ ಗಳಿಸಲು, ಎವರೆಸ್ಟ್ ಏರಿ ನಿಂತು ಸಾಧನೆ ಮಾಡುವುದಕ್ಕಾಗಿ ಬರೆಯುವುದಿಲ್ಲ. ಹಣ ಸಂಪಾದನೆಯಿರಲಿ, ಪ್ರತಿಷ್ಠೆ ಸಂಪಾದನೆ, ‘ಬುದ್ಧಿಜೀವಿತ್ವ’ ಸಂಪಾದನೆ ಯಾವುದೂ ಉದ್ದೇಶವಲ್ಲ. ಕೆಲವು ಪ್ರಿಜುಡೀಸ್ಡ್ ಪತ್ರಿಕೆಗಳಲ್ಲಿ, ಮಾಧ್ಯಮಗಳಲ್ಲಿ ಎಂದೂ ಪ್ರಕಟವಾಗದ ನಮ್ಮ ಧ್ವನಿಗಳಿಗಾಗಿ ನಾವು ರೂಪಿಸಿಕೊಂಡಿರುವ ಅತ್ಯಂತ ಖಾಸಗಿ ನೆಟವರ್ಕ್ ಇದು. ಇದರ ಬಗ್ಗೆ ಅನವಶ್ಯಕವಾಗಿ ಟೀಕೆ ಅಥವಾ ಆರೋಪಗಳು ಬಂದರೆ ಅವು ವೈಯಕ್ತಿಕವಾಗಿ ಮಾಡಿದ ಆರೋಪಗಳೇ ಆಗಿರುತ್ತವೆ.
ಬ್ಲಾಗುಗಳಿಗೆ ಪ್ರತಿಕ್ರಿಯೆಗಳನ್ನು ಬರೆಯುವವರು ಅವನ್ನು ಓದುವವರು. ಓದುವವರು ಗೆಳೆಯರೇ ಆಗಬೇಕಂತೇನಿಲ್ಲ. ದಿನಕ್ಕೆ ನಾಲ್ಕೈದು ‘ಅಸಭ್ಯ’ ಕಮೆಂಟುಗಳನ್ನು ಡಿಲಿಟ್ ಮಾಡುವವರಿಗೆ ಇದರ ಅರಿವಿರುತ್ತದೆ. ಪತ್ರಿಕೆಗಳ ಓದುಗರ ಓಲೆಗಳನ್ನು ತೆಗೆದು ನೋಡಿದರೆ ನಮ್ಮ ಬ್ಲಾಗುಗಳಲ್ಲಿನ ಇಂಪಾರ್ಷಿಯಲ್ ಧೋರಣೆ ಕಣ್ಣಿಗೆ ಬೀಳುತ್ತದೆ. ಯಾವುದೇ ರೀತಿಯ ಪ್ರತಿಕ್ರಿಯೆಯನ್ನು ನೀವು ಬ್ಲಾಗುಗಳಲ್ಲಿ ನೀಡಬಹುದು. ಅವು ಪ್ರಕಟವಾಗದಿದ್ದರೆ ಅದಕ್ಕೆ ಕಾರಣವನ್ನು ತಿಳಿಯುವ ಸೌಕರ್ಯ ಕೂಡ ಇಲ್ಲಿ ಸಿಕ್ಕುತ್ತದೆ.
ಇವೆಲ್ಲವನ್ನು ಗುರುತಿಸದೆ ಸುಮ್ಮನೆ ಬ್ಲಾಗಿಗರ ಬಗ್ಗೆ ಬೇಜವಬ್ದಾರಿಯಿಂದ ಕಮೆಂಟ್ ಮಾಡಿದರೆ ಕೇಳಿಕೊಂಡು ಸುಮ್ಮನಿರಲಿಕ್ಕೆ ಆಗದು..
supreeth
ಈ ರೀತಿ ಕಮೆಂಟ್ ಬರೆಯೋರ ಉದ್ಧೇಶ ಇಷ್ಟೆ. ನಿಮ್ಮ ಜನಪ್ರಿಯತೆ ಕಂಡು ಅವರಿಗೆ ಹೊಟ್ಟೆಯಲ್ಲಿ ಗುಳುಗುಳು ಅಂದಿರುತ್ತೆ. ಅದಕ್ಕೆ ಒಂದಕ್ಕೊಂದು ಸಂಬಂಧವಿಲ್ಲದ ವಿಷಯಗಳನ್ನು ಹೆಣೆದು ನಿಮಗೆ ಮೇಲ್ ಕಳಿಸಿದ್ದಾರೆ.
ನೀವು ಸರಿಯಾಗಿಯೇ ಹೇಳಿದ್ದೀರಿ. ಇಂತವರನ್ನೆಲ್ಲ ನಿರ್ಲಕ್ಷಿಸುವುದೆ ಅವರಿಗೆ ಸರಿಯಾದ ಉತ್ತರ.
ತಮ್ಮ ಎಲೆಯಲ್ಲಿ ಆನೆ ಸತ್ತು ಬಿದ್ದಿದ್ರೂ ಪಕ್ಕದವನ ಎಲೇಲಿ ನೊಣ ಬಿದ್ದಿದೆ ಅಂತ ತೋರಿಸಿಕೊಂಡು ನಗುವ ಇಂತವರು ಬೇಕಾದಷ್ಟು ಜನ ಇರ್ತಾರೆ ಬಿಡಿ…..
ಹೀಗೆ ಬೈದಿರೋರು ಯಾರು ಅಂತ ನನಗೆ ತುಂಬಾ ಕುತೂಹಲವಾಗಿದೆ ,ಏನ್ ಮಾಡ್ಲಿ? 😦
Chetana,
Do not pay attention to these kind of comments. I presume, it must be your old “friend” Venkatesh, who attacked you and tina some time back ?
Just ignore such comments and continue the good work you are doing.
Regards,
Mayura
ಬೀದೀಲಿ ನಡೆಯೋವಾಗ ಕಲ್ಲು ಮುಳ್ಳು ಚುಚ್ಬಹುದು. ಅದಕ್ಕೇಂತ ಹೊರಗೆ ಹೋಗೋದನ್ನೇ, ನಡೆಯೋದನ್ನೇ ನಿಲ್ಸಿಬಿಡಕ್ಕಾಗತ್ತೇನ್ರೀ!!
-ನೀಲಾಂಜನ
ಬರಹಗಾರರಿಗೆ, ಸಮಾಜಿಕ ಕ್ಷೇತ್ರದಲ್ಲಿ ಇರುವವರಿಗೆ, ಆರೋಪಗಳು ಸಹಜ ಹಾಗು ಬೆಳವಣಿಗೆಯ ದೃಷ್ಟಿ ಇಂದ ಅಗತ್ಯ ಕೂಡ.
ಅವರ ಅನೇಕ ಆರೋಪಗಳಲ್ಲಿ ಅರ್ಥವಿದೆ ಎಂದೆ ನನ್ನ ಭಾವನೆ. ಉದಾಹರಣೆಗೆ, ನಿಮ್ಮ ಇತ್ತೀಚಿಗೆ ಬಿಡುಗಡೆ ಆದ ‘ಭಾಮಿನಿ ಷಟ್ಪದಿ’ ಯನ್ನೇ ನೋಡಿ. ಕೇವಲ ನಿಮ್ಮನ್ನು ಬಲ್ಲ ವಯಕ್ತಿಕ ಮಟ್ಟದ ಸೊ ಕಾಲ್ಡ್ ವಿಮರ್ಶಕರು ಲಂಗು ಲಗಾಮಿಲ್ಲದೆ ಪ್ರಚಾರ ಕೊಟ್ಟರು. ಕೈಯಲ್ಲಿ ಹಿಡಿದುಕೊಲ್ಲಬೇಕದ್ದನ್ನು, ತಲೆಯಮೇಲೆ ಇಟ್ಟು ತಿರುಗಿದರು. ನಿಜಕ್ಕೂ ಅದು ಆರನೇ ತರಗತಿಯ ಪುಟ್ಟಿ ಕ್ಯಾನ್ವಾಸ್ ಮೇಲೆ ಗೀಚಿದ ಹಾಗಿತ್ತು. ನೀವು ಬೀಗಿದಿರಿ. ನಿಮ್ಮಲ್ಲಿನ ಅಧ್ಯಯನ ಶೀಲತೆ ಸತ್ತು ಹೋಯ್ತು ಮಾತ್ರವಲ್ಲ ಶ್ರೀಷ್ಟತೆಗೆ ತುಡಿಯುವ ಗುಣ ನಶಿಸಿ ಹೊಇತು ಎನ್ನುವುದಕ್ಕೆ ನೀವೇ ಬರೆದ “ಯಾರೇನೇ ಹೇಳಿದರೂ ಬರೆಯದೆ ಸುಮ್ಮನಿರುವುದು ನನ್ನಿಂದಾಗದ ಕೆಲಸ.” ಎನ್ನುವ ವಾಕ್ಯವೇ ಸಾಕ್ಷಿ.
ನೆನಪಿರಲಿ, ಇದು ನಿಮ್ಮ ಸಾಹಿತ್ಯಿಕ ಬ್ಲಾಗ್, ಇದು ನಿಮ್ಮ personal diary (PD) ಅಲ್ಲ. PD ಯಲ್ಲಿ ಮಾತ್ರ ನಾವು ಏನು ಬೇಕಾದರು ಬರೆದುಕೊಳ್ಳಬಹುದು, ಆದರೆ ಇದು ಹತ್ತಾರು ಜನ ಓದುವ ಸಾಹಿತ್ಯಿಅಕ ಬ್ಲಾಗ್. ನಾನು ಬೇಕಾದ್ದು ಬರೆಯುತ್ತೇನೆ, ಓದಬೇಕಾದ್ದು ನಿಮ್ಮ ಕರ್ಮ – ಎನ್ನುವ ಮನಸ್ತಿತಿ ಯಾವ ಲೇಖಕನಿಗೂ ಒಳ್ಳೆಯದಲ್ಲ (ಲೇಖಕಿಗು ಒಳ್ಳೆಯದಲ್ಲ- ಒಹ್ ಕ್ಷಮಿಸಿ, ಸ್ತ್ರೀವಾದ ಮರೆತೇಬಿಟ್ಟಿದ್ದೆ).
ಕೊನೆಗೊಂದು ಮಾತು- ಗುಣಾಹ ಸರ್ವತ್ರ ಪೂಜ್ಯಂತೆ, ಪಿತ್ರುವಮ್ಸ್ಹೋನಿರರ್ಥಕಹ . ನಾನು ಅವರ ತಂಗಿ, ಇವರ ಮಗಳು ಉಹುಂ, ಇವ್ಯಾವುದು ನಗಣ್ಯ. ಬರವಣಿಗೆಯಲ್ಲಿ ಹಾಲೆಷ್ಟು ನೀರೆಷ್ಟು ಎನ್ನುವುದು ಮಾತ್ರ ಮುಖ್ಯ.
ಯಾರು ಏನೇ ಅಂದ್ರೂ ಬರೆಯೋದು ನಿಲ್ಸಲ್ಲ ಅಂದ್ರಲ್ಲ, ಅಷ್ಟು ಸಾಕು ಬಿಡಿ.
ಯಾರು ಏನೇ ಅಂದ್ರೂ ಬರೆಯೋದು ನಿಲ್ಸಲ್ಲ ಅಂದ್ರಲ್ಲ, ಅಷ್ಟು ಸಾಕು ಬಿಡಿ!
Mr Phonon,
ಒಂದೇ ಒಂದು ಕ್ಲಾರಿಫಿಕೇಶನ್ನು,
ಇದು ನನ್ನ ‘ಸಾಹಿತ್ಯಕ ಬ್ಲಾಗ್’ ಅಲ್ಲ.
ಚೇತನಾ ನೀವು ಬರೀರಿ,
ಬೇಕಾದವ್ರು ಓದ್ತಾರೆ ,ಯಾರನ್ನೊ ನೀವು ಕುರ್ಚಿಯಲ್ಲಿ ಕಟ್ಟಿ ಹಾಕಿ,laptop ನಲ್ಲಿ ನಿಮ್ಮ ಲೇಖನ ಓಪನ್ ಮಾಡಿ ಬಲವಂತವಾಗಿ ಓದಿಸ್ತಾ ಇಲ್ವಲ್ಲ??
ನಾನು ಡೆಬೋನೇರ್ ನ ಎಷ್ಟು ಖುಶಿಯಾಗಿ ಓದ್ತೀನೋ ’ಮರಳಿ ಮಣ್ಣಿಗೆ’ ಕೂಡಾ ಅಷ್ಟೆ intense ಆಗಿ ಓದ್ತೀನಿ.ಬರೆಯುವವ್ರು ಬರೀತ ಇರ್ಬೇಕು ,ಓದುವವರು ಓದ್ತಾ ಇರ್ಬೇಕು!ಓದಿರೋದು ಇಷ್ಟ ಆಗಿಲ್ವ ಕಮೆಂಟ್ ಮಾಡ್ಬೇಕು,ಅಥವ ಪುಸ್ತಕವನ್ನು ರದ್ದಿಗೆ ಮಾರ್ಬೇಕು .ಅದು ಬಿಟ್ಟು ಈ ರೀತಿ ಕೊರಗೋದು ಸರಿ ಅನ್ನಿಸಲ್ಲ.
ಯಾವುದೇ ಒಂದು ಪುಸ್ತಕ ಕೊಳ್ಳದೇ ಓದೋದಕ್ಕೆ ಸಾಧ್ಯ ಇಲ್ಲ.ಕೊಂಡು ಓದಿ ಚೆನ್ನಾಗಿಲ್ಲ ಅಂದ್ರೆ ಯಾರೂ ಹಣ ವಾಪಸ್ ಕೊಡಲ್ಲ !
ಪರ್ಸ್ನಲ್ ಡೈರಿಯಲ್ಲಿ ಏನು ಬೇಕಾದ್ರೂ ಬರೀಬಹುದು ಅನ್ನೋರು ಬಹುಶ: ಡೈರಿ ಬರೆದಿಲ್ಲ ,ಅಥವ ಓದಿಲ್ಲ .’ನಾನು ಸತ್ತ ಮೇಲೆ ನನ್ನ ಡೈರು ಓದೇ ಓದ್ತಾರೆ ಅನ್ನೋ ಭಯ/ಆಶಯ ಇಟ್ಟುಕೊಂಡೇ ಜನ ಡೈರಿ ಬರೀತಾರೆ!
ಹ್ಮ್ಮ್…
’ಕೋಮುವಾದ’ದ ಬಗ್ಗೆ ದೊಡ್ಡ ಜನಗಳ ಸತ್ತದನಿಗಳ ಹಿಪಾಕ್ರೆಟಿಕ್ ಲೇಖನಗಳೇ ಬೇಕು ಅನ್ನೋವ್ರಿಗೆ ನಿಮ್ಮ ಬರಹ ಇಷ್ಟವಾಗದೇ ಇರಬಹುದು, ಏನ್ ಮಾಡೋದು, ನಮಗೆ ನಿಮ್ಮ ದನಿ ಕೇಳಬೇಕನ್ನಿಸಿದ್ರೆ ಅದು ನಮ್ಮ ಬಾಲಿಶತನ ಇರಬಹುದೇನೋ!
ಯಾವುದೇ ಬ್ಲಾಗಿಗೂ ಒಂದು character ಇರುತ್ತೆ, ಅದರಿಂದ ಅದನ್ನು ಮೆಚ್ಚಿ ನಿರಂತರವಾಗಿ ಓದುವ ಒಂದಷ್ಟು ಜನ ಇದ್ದೇ ಇರ್ತಾರೆ, ಹೀಗೆ ಓದಿ, ಪ್ರತಿಕ್ರಿಯೆ ನೀಡಿ ಗೆಳೆಯರಾಗುವ ಬಗ್ಗೆ ನಿಮ್ಮ ಕಮೆಂಟಿಗರಿಗೆ ಆಕ್ಷೇಪವಿದ್ದರೆ ಅವರಿಗೂ ಇಂತಹ ಸ್ನೇಹ ಸಿಗಲಿ ಅಂತ ಹಾರೈಕೆಯಷ್ಟೇ!
ಇಷ್ಟವಾದದ್ದನ್ನ ಬರಿಯುವ, ಅದನ್ನು ಸಲಹೆ-ಅಭಿಪ್ರಾಯಗಳಿಗ ಒಡ್ಡುವ ಸ್ವಾತಂತ್ರ್ಯವೇ ಬ್ಲಾಗ್ ಬರಹಗಳ ವಿಶೇಷ. ’ಸಾಹಿತ್ಯಿಕ’ ಮುಂತಾದ ಎರವಲು ಸ್ಟ್ಯಾಂಡರ್ಡ್‌ಗಳನ್ನು ಈ ಮಾಧ್ಯಮಕ್ಕೆ ಆರೋಪಿಸಬಾರದು ಅಂತಲೇ ನನಗನ್ನಿಸೋದು. ಬ್ಲಾಗರ್ಸ್ ಮೀಟ್ ಬಗ್ಗೆ ಬರೆದಾಗ ನಾ ಈ ಬಗ್ಗೆ ನನ್ನ ಅನಿಸಿಕೆ ಹೇಳಿದ್ದೆ…
ಹಾಗೆ ಬರೆದದ್ದು ಚೆನ್ನಾಗಿಲ್ಲ ಅಂತ ಯಾರಿಗಾದ್ರೂ ಅನ್ನಿಸಿದ್ರೆ ಅದನ್ನ ಹೇಳೋ ಸ್ವಾತಂತ್ರ್ಯ, ಓದದೇ ಇರೋ ಸ್ವಾತಂತ್ರ್ಯ ಎಲ್ಲವೂ ಇದೆಯಲ್ಲ!
ನೀವ್ ಬರೀತಿರಿ, ನಾವು ಓಡ್ತಿರ್ತೀವಿ, ಇಷ್ಟವಾದದ್ದು, ಆಗದಿದ್ದದ್ದು ಹೇಳ್ತಿರ್ತೀವಿ, ಚರ್ಚೆ, ಭಿನ್ನಾಭಿಪ್ರಾಯ, ಸಹಮತ ಎಲ್ಲ ನಡೀತಿರುತ್ತೆ. ಹೊರಗೆ ನಿಂತು ಈ ಎಲ್ಲ ಮಜಾ ಮಿಸ್ ಮಾಡೋವ್ರು ಮಿಸ್ ಮಾಡ್ಕೊತಾ ಇರಲಿ!:)
ಆಹ್! ಇಂಥವರ ಮೈಲ್ ಗಳನ್ನು ಓದಿ ನಾನು ಸಾತ್ಯಕಿ ಬಿದ್ದು ಬಿದ್ದು ನಗ್ತಿರ್ತೇವೆ…
ಇಂಥವ್ರ ಮೈಲ್ಗಳು ಒಂಥರ recreationಉ. ಎಷ್ಟು ಇರಿಟೇಟಾಗಿ ಬರ್ದಿರ್ತಾರೆ ಅಂದ್ರೆ I pity them ಬರೆಯೋವಾಗ ಎಷ್ಟು ಕಷ್ಟಪಟ್ಟು ಬರ್ದಿರ್ಬೆಕಲ್ವ ಪಾಪ ಅನ್ಸತ್ತೆ. I know u ನೀವಿದ್ರಬಗ್ಗೆ ಎಲ್ಲ ತಲೆ ಕೆಡಿಸ್ಕೊಳಲ್ಲ ಅಂತ. keep writing nd enjoy…..
ಚೇತನಾ,
ಬೆಟ್ಟದ ಮೇಲೊಂದು ಮನೆ ಮಾಡಿ ಮೃಗಗಳಿಗಂಜಿದೊಡೆಂತಯ್ಯಾ?
ಎಲ್ರಿಗೂ ಧನ್ಯವಾದ.
ನಿಜ. ಬ್ಲಾಗ್ ಅನ್ನು ಕೇವಲ ಸಾಹಿತ್ಯಕ್ಕೆ ಮೀಸಲಿಡಬಾರದು. ಬ್ಲಾಗ್ ಅಂದ್ರೆ ಸಾಹಿತ್ಯಕವಾಗಿರುವಂಥದು ಅನ್ನೋ ಡೆಫ್ನಿಶನ್ ಯಾವಾಗಿಂದ ಶುರುವಾಯ್ತು?
ಇಷ್ಟಕ್ಕೂ ಇತರ ಭಾಷೆಗಳಲ್ಲಿ ಬ್ಲಾಗ್ ಸಿಟಿಝನ್ ಜರ್ನಲಿಸಮ್ಮಿನ ಮುಖ್ಯ ಮಾಧ್ಯಮವಾಗಿ ಹೊರಹೊಮ್ಮುತ್ತಿದೆ. ಹೀಗಿರುವಾಗ….
ಇರಲಿ ಬಿಡಿ. ಏನೇ ಹೇಳಿದರೂ ನಾನು ನನಗನ್ನಿಸಿದ್ದನ್ನ ನೇರವಾಗಿ ಹೇಳದೇ ಸುಮ್ಮನಿರುವುದಿಲ್ಲ ಅಂತ ಶಪಥ ಮಾಡಿದೀನಲ್ಲ?
ಜತೆಗೆ ನಿಂತು ನಾಲ್ಕು ಮಾತಾಡಿದ ನಿಮಗೆಲ್ಲ ಮತ್ತೆ ಥ್ಯಾಂಕ್ಸ್. ಎದುರು ನಿಂತು ಮಾತಾಡಿದವರಿಗೂ…
ವಂದೇ,
ಚೇತನಾ