ಇದನ್ನ ಹೇಳಬಹುದಿತ್ತಾದರೂ ಹೇಗೆ!?


ಡಾರ್ಕ್ ರೂಮ್

ಇದರ ತುಂಬ ಬರೀ ಮಡಚಿಟ್ಟ ಪುಟಗಳೇ. ಈ ರೂಮಿಗೆ ಬೀಗ ಹಾಕಿ, ನಾನೇ ಕೀಲಿ ಕಳೆದು ಹಾಕಿದ್ದೇನೆ. ಹೀಗೆ ಕತ್ತಲಲ್ಲಿ ಕೂಡಿಟ್ಟರೂ ಈ ಕತೆಗಳು ನೂರಾಗಿ, ಸಾವಿರವಾಗಿ, ಕೊಳೆತ ತರಕಾರಿಯ ಮೇಲೆ ಗಿಜಿಗುಟ್ಟುವ ಹುಳಗಳಂತೆ ತೆವಳುತ್ತ ತೆವಳುತ್ತ ಎಲ್ಲೆಲ್ಲೂ ಹರಿದಾಡಿ, ಗೋಡೆಯೊಳ ತೂರಿ, ಇತ್ತಲಿಂದ ಹೊರಬರುತ್ತಿವೆ, ನನ್ನ ಹುರಿದು ಮುಕ್ಕುತ್ತಿವೆ. …… (ಒಂದು ಹಳೆಯ ಬರಹ)

 ಎಲ್ಲರೂ ಕೇಳ್ತಾರೆ. ಮೂವತ್ತು ದಾಟಿದ್ರೂ ಮದುವೆಯತ್ತ ಮನಸ್ಯಾಕೆ ಮಾಡಿಲ್ಲ ಅಂತ. ಈಗಿನ ಕಾಲದಲ್ಲಿ ಮದುವೆಗೆ ಇಂತಿಷ್ಟೇ ವಯಸ್ಸಾಗಿರಬೇಕು ಅಂತೇನಿಲ್ಲ ಬಿಡಿ. ಆದ್ರೂ,   ಸಂಪ್ರದಾಯಸ್ಥ  ಮನೆತನ, ಕೆಳ್ತಾರೆ.

ಹಾಗಂತ ನಾನು ಚೆಂದವಿಲ್ಲ ಅಂತೆನಲ್ಲ. ಅವತ್ತಿನ ಸಹಪಾಠಿಗಳಿಂದ ಹಿಡಿದು, ಇವತ್ತಿನ   ಸಹೋದ್ಯೋಗಿಗಳವರೆಗೂ ಎಲ್ರೂ ನನ್ನ ಸ್ಮಾರ್ಟ್ ಅಂತಾರೆ. ಇಪ್ಪತ್ತೈದರ ಹಾಗೆ ಕಾಣುವ ನನ್ನ ಮೂವತ್ತರ ಬಗ್ಗೆ ನನಗೂ ಹೆಮ್ಮೆ ಇದೆ. ಆದರೆ, ಯಾವ ಪುರುಷಾರ್ಥಕ್ಕೆ?

ಅವನೊಬ್ಬನಿದ್ದ. ಅಂದಗಾರ. ಚಂದಿರ ಮುಖ, ಬೋಳು ಮೀಸೆ, ನುಣ್ಣನೆ ಗಡ್ಡ.ಕಣ್ಣಲ್ಲಿ ತೀರದ ತುಂಟತನ. ನನಗಿಷ್ಟವಾಗುವ ಬಣ್ಣ ಅವಂಗೂ ಇಷ್ಟ. ನಾನಿಷ್ಟಪಡುವ ಪರ್ಫ್ಯೂಮ್, ಐಸ್ ಕ್ರೀಮ್ ಎಲ್ಲವೂ ಅವನಿಗಿಷ್ಟ. ಅವಂಗೆ ಕಂಪನಿ ಕೊಡಲೆಂದೇ ಕುಡಿಯೋದು ಕಲ್ತಿದ್ದೆ ನಾನು.

ನಾನವನkitaki jpgನ್ನ ಹುಚ್ಚುಚ್ಚಾಗಿ ಪ್ರೀತಿಸ್ತಿದ್ದೆ. ಅವನನ್ನ ಮಾತ್ರ. ಅವನ ಕೈಬೆರಳ ತುದಿ ಸೋಂಕಿದರೂ ರೋಮ ನಿಮಿರಿ ನಿಲ್ತಿತ್ತು. ಉಸಿರಾಟ ಏರುಪೇರಾಗಿ ಹೋಗ್ತಿತ್ತು. ಸಧ್ಯ. ಯರೂ ಇದನ್ನ ಗಮನಿಸ್ತಿರಲಿಲ್ಲ ಅನ್ನೋದೇ ಸಮಾಧಾನ! ಆದರೆ… ಅಂವ ಕೂಡ ಇದನ್ನ ತಲೆಗೆ ತೊಗೊಳ್ಳದೆ ಉಳಿದುಬಿಟ್ಟ. ಉಳಿದೆಲ್ಲ ಗಂಡಸರ ಹಾಗೆ ಅವನಿಗೂ ಒಬ್ಬಳು ಸುಂದರಿ ಗಂಟು ಬಿದ್ದಳು. ನಾನು ಅವನ ಬಳಿ ಪ್ರೀತಿ ತೋರಿಕೊಳ್ಳುವ ಸಾಹಸವನ್ನೇ ಮಾಡಲಿಲ್ಲ.

ಮನೆಯಲ್ಲಿ ನನ್ನ ಮದುವೆ ಮಾತುಕಥೆ. “ಜೀವ ಕಳ್ಕೊಳ್ತೀನಿ ಹೊರತು, ಮದ್ವೆಯಾಗೋಲ್ಲ” ನಾನೂ ಹಟ ಹಿಡಿದೆ. “ಯಾರನ್ನದ್ರೂ ಪ್ರೀತಿಸ್ತಿದೀಯಾ?” ಕೇಳಿದರು. ನನು ಹೌದೆಂದೆ. ಅದು ಯಾರು ಯಾರೆಂದು ಪೀಡಿಸಿದರು.

ಊಹೂಂ… ಹೇಗೆ ಹೇಳಲಿ? ನಾನು ಡಾರ್ಕ್ ರೂಮಲ್ಲಿ ಕೂಡಿಟ್ಟಿರೋದು ಅದನ್ನೇ.  ಈ ಮನೆಮಂದಿ ಬೇಕಿದ್ದರೆ ಹೀಗೆ ಜೀವಮಾನವಿಡೀ ದೇವದಾಸನಂತೆ ಇರೋದನ್ನ ನುಂಗಿಕೊಂಡು ನಕ್ಕಾರು.

ಆದರೆ…. ನಾ ಪ್ರೀತಿಸಿದ್ದು ಒಬ್ಬ ಗಂಡಸನ್ನ ಅಂದರೆ ಸಹಿಸಿಯಾರು? ಅದರಲ್ಲೂ,

ಹತ್ತು ದೇವರಿಗೆ ಹರಕೆ ಹೊತ್ತು ಹುಟ್ಟಿದ ಕಿರಿಮಗ ನಾನಾಗಿರುವಾಗ!?

21 thoughts on “ಇದನ್ನ ಹೇಳಬಹುದಿತ್ತಾದರೂ ಹೇಗೆ!?

Add yours

  1. ಚೇತನಾ ಮೇಡಂ,

    ಡಿಝೈನ್ ಕಮ್ ಮ್ಹೇನುಫಾಕ್ಚರಿನ್ಗ್ ಡಿಫೆಕ್ಟ್ ಗೋಳಾ ಇದು?

    ಯಾರ್ಯಾರ್ ಗೋಳೂಂತ ಓದೋದಪ್ಪ.., ಈ ಪೋಸ್ಟು, ಆ ಪೋಸ್ಟು, ಆಆ ಪೋಸ್ಟು.. ಒಳ್ಳೇ ಗೋಳು(ಳ) ಪ್ರಪಂಚ ತೋರಿಸ್ತಾ ಇದೀರಿ.. 🙂

    -ಅಆಇಈ ;-(

  2. ಚೇತನಾ, ಕಳೆದ ವರ್ಷ ಸ್ಪೆಶಲ್ ಸ್ಟೋರಿ ಮಾಡೊಕೆ ಅಂತ ಹೋದಾಗ್ಲೇ ಲೆಸ್ಬಿಯನ್ಸ್‌, ಗೇಯ್ಸ್‌, ಹಿಜಡಾ, ಕೋತೀಸ್‌, ಡಬಲ್ ಡಕ್ಕರ್‍ ಇನ್ನೂ ಏನೇನೋ ಪಂಗಡಗಳಿದಾವೆ ಅಂತ ಗೊತ್ತಾಗಿದ್ದು. ಸಂಗಮ ಫೌಂಡೇಶನ್ ಅಂತ ಇದೆ. ಅಲ್ಲಿಗೆ ಹೋಗಿದ್ದೆ. ಅವ್ರೆಲ್ಲರ ಜೊತೆ ಮಾತಾಡಿದೆ. ವಿಚಿತ್ರ ಜಗತ್ತು. ನಾವು ಯಾವುದೋ ಒಂದು ಸಣ್ಣ ಸಮಸ್ಯೆಯನ್ನಿಟ್ಕೊಂಡು ಕೆಲವೊಮ್ಮೆ ಎಷ್ಟೋಂದ್ ಗೋಳಾಡ್ತಿರ್‍ತೀವಿ. ಆದ್ರೆ ಅವರನ್ನೆಲ್ಲ ನೋಡಿದ್ಮೇಲೆ, ನಮ್ ಸಮಸ್ಯೆ ಏನು ಅವರಿಗಿಂತ ದೊಡ್ಡದಲ್ಲವಲ್ಲ ಅನ್ನಿಸ್ತು.

    ಆದ್ರೆ ಈ ವಿಷಯವನ್ನಿಟ್ಖೊಂಡೇ ಕಥೆ ಹಾಗೆ ಹೆಣೆದಿದ್ದು ನಿಜಕ್ಕೂ ಕ್ರಿಯೇಟಿವ್‌. ರಿಯಾಲಿಟಿಯನ್ನ ಕಥೆಯಲ್ಲಿ ಹಿಡಿದಿಡುವ ನಿಮ್ ಶೈಲಿ ಇಷ್ಟವಾಗತ್ತೆ ಎಂದಿನಂತೆ.

  3. ಇವತ್ತು ಬೇಗನೆ ಮನೆಗೆ ಹೊಗಣ ಅಂತ, ಇನ್ನೇನು ಶಟ್‌ಡೌನ್ ಮಾಡೋಕ್ಕೆ,ready ಆಗಿದ್ದವನು, ಇರಲಿ ಅಂತ ನಿಮ್ಮ blog ಕಡೆ ಕಣ್ಣು ಹಾಯಿಸಿದೆ, both content and style super ಆಗಿದೆ. ಇನ್ನು drive ಮಾಡ್‌ಬೇಕಾದ್ರೆ ಪೂರ್ತಿ ಇದೆ ತಲೆಲ್ಲಿ ಓಡತ್ತೇನೋ ಏನೋ??

    -ಪ್ರಸಾದ್.

  4. ರಮೇಶ್, ಸ್ಸಾರಿ 😦

    ನೀಲಿಹೂವಿನೊಡೆಯರಿಗೆ ಧನ್ಯವಾದ.

    ಶ್ರೀದೇವಿ, ಕೋತೀಸ್, ಡಬಲ್ ಡಕ್ಕರ್!? ಹೆಸರುಗಳು ಮಜವಾಗಿವೆ!!
    ಥ್ಯಾಂಕ್ಸ್.

    ಪ್ರಸಾದ್,
    ಯಾವುದಕ್ಕೂ ನಾಳೆ ಆಫೀಸಿಗೆ ಬಂದಮೇಲೊಂದು mail ಮಾಡಿಬಿಡಿ 🙂
    ಇಷ್ಟವಾಗಿದ್ದು ಖುಶಿಯಾಯ್ತು.

    ವಂದೇ,
    ಚೇತನಾ

  5. ಲೈಂಗಿಕ ಅಲ್ಪಸಂಖ್ಯಾತರದೇ ಒಂದು ಕಮ್ಯುನಿಟಿ ಮಾಡ್ಕೊಂಡಿದಾರೆ. ಸುಮಾರು ಎಂಟ್ಹತ್ತು ಕೆಟಗರಿಯವ್ರು ಅಲ್ಲಿದಾರೆ. ಇನ್ನೂ ಹೆಚ್ಚಿನ ಮಾಹಿತಿ ಬೇಕು ಅಂದ್ರೆ ಕೊಡ್ತಿನಿ. ನಿಮಗೀಗಾಗಲೇ ಗೊತ್ತಿರಬಹುದು ಅನ್ಕೊಳ್ತೀನಿ. ತುಂಬಾ ದೊಡ್ಡ ಕಮ್ಯುನಿಟಿಯದು. ಬಿಲ್ ಗೇಟ್ಸ್ ಫೌಂಡೇಶನ್‌ನಿಂದ ಫಂಡ್ ಬರತ್ತೆ ಆ ಸಂಗಮ ಫೌಂಡೇಶನ್‌ಗೆ…

  6. ಶ್ರೀದೇವಿ, ನಂಗೆ ಹೆಚ್ಚಿನ ಮಾಹಿತಿ ತಿಳಿದಿಲ್ಲ. ಆಸಕ್ತಿ ಇದೆ. please mail me @ chetanachaitanya@gmail.com.
    Thank you.

    ವಿಜಯ್, 🙂

    ರಾಧಿಕಾ, ರಘು,
    ಧನ್ಯವಾದ. ಡಿಲೀಟ್ ಮಾಉವ ಮುನ್ನ ಸಿಡಿ ರೈಟ್ ಮಾಡಿಟ್ಟುಕೊಂಡಿದ್ದೆ. ಆದರೆ ಈಗ ಮತ್ತೆ ಹಾಕೋದು ಎಷ್ಟು ಚೆಂದ ಅಂತ ಯೋಚಿಸ್ತಿದೇನೆ. ಯೋಚಿಸಿ ಮುಗಿದಮೇಲೂ ಹಾಕಬೇಕು ಅನಿಸಿದರೆ ಖಂಡಿತ ಹಾಕ್ತೇನೆ.

    ವಂದೇ,
    ಚೇತನಾ

  7. ದೇವರೇ………. ನಿಮ್ಮ ಹಳೆಮನೆಯ ಕೋಣೆಯಲ್ಲಿ ಕೂಡಿಟ್ಟಿರುವ ಎಲ್ಲದ್ದನ್ನ ಎಳೆದು ಹರಗೆ ತಂದು ಹಿಂಗೆ ಸುರಿದು ಬಿಡಿ..ಅಲ್ಲೇನು ಇರಬಾರದು..ಅಲ್ಲಿರುವುದಕ್ಕಿಂತ ಹೀಗೆ ಹೊರಗೆ ಬಂದು ಹರಿದು ಹೋಗುತ್ತಿರಬೇಕು..

    ನಿಮ್ಮ
    ಸೋಮು

  8. ಹಯ್ಯೋ.. ಸೀಡೀಲಿ ರೈಟ್ ಮಾಡಿಟ್ಟುಕೊಂಡಿದ್ದೀರಾ? ಒಂದ್ ಚೂರೇ ಚೂರು ಸ್ಕ್ರಾಚ್ ಆದ್ರೂ.., ಡೇಟಾ ಉಡೀಸ್.
    ಬೆಟರ್ ಅಂದ್ರೇ.., ಆ ಡೇಟಾನ ಝಿಪ್ ಮಾಡಿ, Gಮೈಲ್ ಗೆ ಕಳೀಸ್ಕೋಂಡ್ ಬಿಡೋದು.. 😉

    ನೀವು ಆ ಲೇಖನ(ಟೈಪನ 😉 )ಗಳನ್ನ ಮತ್ತೆ ಬ್ಲಾಗಿನಲ್ಲಿ ಹಾಕ್ತೀರೋ ಏನೋ.. 😦
    ಪ್ಲೀಸ್.., ನಂಗೂ ಒಂದ್ ಕಾಪಿ ಹಾಕ್ಬಿಡಿ.. ನಿಮ್ ಬ್ಲಾಗನ್ನ ನಾನು ಪೂರಾ ಓದಿರಲಿಕ್ಕಿಲ್ಲ..
    [ಉಪದೇಶ ಮಾಡಿ, ದಾನ ಕೇಳ್ತಾ ಇದೀನಿ!, ಅಮ್ಮಾ ತಾಯೀ ಮೂರ್ದಿನದಿಂದ ಏನೂ ಓದಿಲ್ಲಾ.. ಓದಕ್ ಏನಾದ್ರು ಇದ್ರೆ ಕೊಡಿ ತಾಯೀ.. ಇದ್ ಅತಿಯಾಯ್ತು ಅಂತೀರಾ:) ]
    -ಅಆಇಈ (rameshabv @Gಮೈಲ್)

  9. ರಮೇಶ್, ಬಿಡ್ತು ಅನ್ನಿ! ಸಿಡಿ ಎಷ್ಟು ಜೋಪಾನವಾಗಿಟ್ಟಿದೀನಿ ಅಂದ್ರೆ….
    ಈಗ ಹುಡುಕಿದ್ರೂ ಅದು ನಂಗೆ ಸಿಗಲಿಕ್ಕಿಲ್ಲ!!
    ಆಯ್ತು. ನಾನು ಅದನ್ನ ಝಿಪ್ ಮಾಡಿ ಜಿ ಮೈಲ್ ಗೆ ಕಳಿಸೋಕಾಲಕ್ಕೆ ನಿಮಗೂ ಕಾಪಿ ಹಾಕ್ತೀನಿ. ಸದ್ಯಕ್ಕಂತೂ ಹಳೆ ಬರಹಗಳನ್ನ ಬ್ಲಾಗ್ ನಲ್ಲಿ ಹಾಕೋ ಪ್ಲ್ಯಾನ್ ಇಲ್ಲ.
    (ಹೂಂ ಮತ್ತೆ…. ಇದು ಅತೀನೇ. ನಿಮ್ಮ ಬ್ಲಾಗ್ ನೀವು ಒಂದು ತಿಂಗ್ಳಿಂದ ಅಪ್ ಡೇಟ್ ಮಾಡದೆ ಕುಳಿತಿದೀರಿ… ನನ್ನ ಕೇಳೋಕೆ ಬಂದ್ ಬಿಟ್ರಲ್ಲ!? )

  10. ಅಕ್ಕಾ ಇದನ್ನು ಕಥೆ ಥರ ಅಂತ ಬರೆದಿರೋದಕ್ಕೆ ಅದನ್ನು ಅದೇ ಥರ ಓದಿ ಕೊಂಡೆ. ಇಷ್ಟವಾಯಿತು. ಆದರೆ ಇದು ಕಥೆ ಅಂತ ಹೇಳಿದ್ದರೆ ನನಗೆ ಈ ಮಾತು ಹೇಳಲು ಆಗುತ್ತಿರಲಿಲ್ಲ.

    ಸುಪ್ರೀ

  11. ಸುಪ್ರೀ,
    ನಂಗೊತ್ತು… ನಂಗೆ ಕಥೆ ಬರೀಲಿಕ್ಕೆ ಬರೋಲ್ಲ 😦
    ಅದ್ಕೆ, ನನ್ನ ಯಾವುದನ್ನೂ ‘ಕಥೆ’ ಅಂತ ಕರೆಯೋ ಸಾಹಸಕ್ಕೆ ಕೈ ಹಾಕೋಲ್ಲ ನಾನು!

  12. ಅಕ್ಕಾ,
    ನಾನು ಹೇಳಿದ್ದು ಹಾಗಲ್ಲ. ಈ ಸಂಗತಿಯ ಬಗ್ಗೆ ಕಥೆ ಅನ್ನುವುದನ್ನು ಬರೆಯುವುದಿದ್ದರೆ ಇನ್ನೂ ಸೂಕ್ಷ್ಮವಾಗಿ ಬರೆಯಬಹುದಾಗಿತ್ತು ಅಂತಷ್ಟೇ ಹೇಳುವುದಿತ್ತು. ನಿಮಗೆ ಕಥೆ ಬರೆಯಲು ಬರುವುದಿಲ್ಲ ಎಂದು ಹೇಳುವಷ್ಟು ದಾರ್ಷ್ಟ್ಯ ನನ್ನಲ್ಲಿಲ್ಲ…

ನಿಮ್ಮ ಟಿಪ್ಪಣಿ ಬರೆಯಿರಿ

Blog at WordPress.com.

Up ↑