ಚಿಕ್ಕಮ್ಮಾ, ಚಾಟರ್ ಬಿಲ್ಲು ಕೊಡಿಸ್ತೀರಾ?


ನೂರೊಂದು ನೆನಪು ಎದೆಯಾಳದಿಂದ
ಹಾಡಾಗಿ ಬಂತು ಆನಂದದಿಂದ…

ಎಂಟು ವರ್ಷದ ಮಧು ಗಿಟಾರ್ ಬಾರಿಸ್ತಿರೋ ಹಾಗೆ ಪೋಸು ಕೊಟ್ಕೊಂಡು ಹಾಡ್ತಾ ಇದ್ರೆ, ಮುದ್ದಿಸಿ ಹಿಂಡಿ ಹಿಪ್ಪೆ ಮಾಡ್ಬಿಡ್ಬೇಕು ಅನಿಸ್ತಿತ್ತು.

ಅದೊಂದು ದೊಡ್ಡ ಮನೆತನ. ನೂರೆಂಟು ಕಚ್ಚಾಟ- ಕಿತ್ತಾಟಗಳ ನಡುವೆಯೂ ಆದಿ ಮನೆಯ ಭದ್ರ ತೇಪೆ. ಹಬ್ಬ ಹರಿದಿನ, ಮದುವೆ ಮುಂಜಿ ಅಂದ್ರೆ ಎಲ್ರೂ ಅಲ್ಲಿ ಸೇರಲೇಬೇಕು.
ಊರಗಲ ಹೊಳಪು ಕಣ್ಣೂ, ಮೂಗಿನ ತುದಿ ಮೇಲೆ ಕೋಪ, ಮೊಂಡು ವಾದ ಮತ್ತು ಅಗ್ದಿ ತಲೆ ಹರಟೆ- ಇವು ಆ ಮನೆತನದವರ ಬ್ರ್ಯಾಂಡು. ಅವರೆಲ್ಲರೂ ರಸಿಕ ಜನ. ಹಾಡು ಗೀಡು ಪಂಚಪ್ರಾಣ.

ಅಂಥ ಮನೆತನದ ಪುಟಾಣಿ ಪೋರ ಮಧು. ಅಪ್ಪ ಒಂದು ಕಾಲದ ಗಿಟಾರ್ ಮಾಸ್ಟರ್. ಮಧು ಹುಟ್ಟಿ ಬೆಳೆಯೋ ಹೊತ್ತಿಗೆ ಗಾಂಜಾ ಚರಸ್ ಅಂದ್ಕೊಂಡು, ಅಲ್ಲಿಲ್ಲಿ ದುಡ್ಡು ಕಳ್ಕೊಂಡು ಬೇಕಾರ್ ಆಗಿಬಿಟ್ಟಿದ್ದ. ಇದೀಗ ಆದಿಮನೆಗೆ ಬಂದ್ಕೊಂದು ಅದ್ಯಾವ್ದೋ ಹಳೆ ಜಾಗದ ವಿಷ್ಯದಲ್ಲಿ ಕ್ಯಾತೆ ತೆಕ್ಕೊಂಡು ಕುಂತಿದ್ದ. ಅಂಥಾ ಕುಟುಂಬಕ್ಕೆ ನಾನೊಬ್ಬ ಸೊಸೆಯಾಗಿದ್ದೆ.

ಮಧುಗೊಬ್ಬ ಅಕ್ಕ ಬೇರೆ ಇದ್ಲು. ಅವಳೋ, ಶುದ್ಧ ಅಮ್ಮನ ಬಾಲ. ಅಂತೂ ಇಂತೂ ಅತ್ತಿಗೆ ಹಿಡಿತದಲ್ಲಿ ಕುಂಟುತ್ತ ಸಾಗ್ತಿತ್ತು ಅವರ ಮನೆ.  ಮಕ್ಕಳ ಸ್ಕೂಲು, ಫೀಸು, ಸಾಮಾನು, ಸರಂಜಾಮುಗಳ ಹಡದಿಯಲ್ಲಿ ಹೈರಾಣಾಗಿ ಹೋಗ್ತಿದ್ದರವರು. ಸಾಲದ್ದಕ್ಕೆ ಕುಡುಕ ಗಂಡನ ಅವಾಂತರಗಳು ಬೇರೆ.

ಹೀಗೇ ಒಂದು ಫಂಕ್ಷನ್ನಿಗೆ ಆ ಕುಟುಂಬ ಆದಿಮನೆಗೆ ಬಂದಿತ್ತು. ಮನೆ ತುಂಬ ಜನ. ನಾನು ಆ ಕುಟುಂಬದ ಮಕ್ಕಳಿಗೆಲ್ಲ ಹೊಸಾ ಚಿಕ್ಕಮ್ಮ. ಸಹಜವಾಗೇ ಅವುಗಳ ಹಿಂಡು ನನ್ನ ಹಿಂದೆ ಮುಂದೆ. ಮಧೂನ ಅಪ್ಪ ಹಿಂದಿನ ದಿನ ಕೆಲಸದ ಮಂದಿಯೊಟ್ಟಿಗೆ ಕುಡಿದು ತೋಟದಲ್ಲಿ ಬಿದ್ದಿದ್ದ. ನಾಳಿನ ಸೀರೆ ಒದವೆಗಳ ಜಿಜ್ಞಾಸೆ ನಡೆಸಿದ್ದ ಹೆಂಗಸರ ನಡುವೆ ಕುಳಿತಿದ್ದ ಅತ್ತಿಗೆಗೆ ಹೆಳತೀರದ ಚಡಪಡಿಕೆ. ಇತ್ತ ನಾನು, ರಾತ್ರಿ ಹನ್ನೆರಡು ಮೀರುತ್ತ ಬಂದರೂ ಇಸ್ಪೀಟಾಡುತ್ತ ಕುಂತಿದ್ದ ಗಂಡನ ಮೇಲೆ ಸಿಟ್ಕೊಂಡು ರೂಮಿನ ತುಂಬಾ ಟೆಡ್ಡಿಬೇರುಗಳನ್ನ ಬಿಸಾಡಿಕೊಂಡು ಮೂಲೆಯಲ್ಲಿ ಕುಳಿತಿದ್ದೆ.
ಇರೋ ರಂಪಾಟಗಳ ಜತೆ ನನ್ನದು ಬೇರೆ ವಿಪರೀತ ಅನಿಸಿದ್ದಿರಬೇಕು ಅತ್ತೆಗೆ, ಚಿಕ್ಕಮ್ಮನ್ನ ಕರ್ಕೊಂಡು ಬಾ ಅಂತ ಮಧೂನ ಕಳಿಸಿದ್ದರು. ಅಂವ ಬಂದು ಬಾಗಿಲು ತೆಗೆದವನೇ, ರೂಮಿನ ಚೆಲ್ಲಾಪಿಲ್ಲಿ ನೋಡಿ ಗಾಬರಿಯಾಗಿಹೋದ. ಆಳಆಳದ ದನಿ ಅವನದು. ‘ಚಿಕ್ಕಮ್ಮ, ಗೊಂಬೆ ಜೋಡ್ಸಿಕೊಡ್ಲಾ?’ ಅಂದವನ ಕಣ್ಣಲ್ಲಿ ನನ್ನ ಬಗ್ಗೆ ‘ಅಯ್ಯೋ ಪಾಪ’ ಕಂಡಿತ್ತು!

~
ಅದು, ಪೂಜೆ ಪುನಸ್ಕಾರಗಳೆಲ್ಲ ಮುಗಿದ ಲೋಕಾಭಿರಾಮದ ಸಂಜೆ. ಮಕ್ಕಳು ಅಂಗಳದ ತುಂಬ ಚಾಟರ್ ಬಿಲ್ಲು, ಗಾಳಿಪಟ ಅಂತೆಲ್ಲ ಹಾರಾಡ್ತಿದ್ದವು. ಯಾರನ್ನೂ ಎನನ್ನೂ ಕೇಳಿ ಅಭ್ಯಾಸವಿಲ್ಲದ ಮಧು, ತನ್ನ ಕಸಿನ್ನುಗಳ ಸಂಪತ್ತನ್ನ ಕಡೆಗಣ್ಣಲ್ಲಿ ನೋಡುತ್ತ, ತನ್ನ ಬಳಿ ಇಲ್ಲದ್ದನ್ನು ಉದಾಸೀನದಿಂದಲೇ ನೋಡಲು ಪ್ರಯತ್ನ ಪಡುತ್ತ ಕುಳಿತಿದ್ದಿದು ಗೊತ್ತಾಗುತ್ತಿತ್ತು. ಅವನ ತಲೆ ನೇವರಿಸ್ತಾ ಕಾಡುಹರಟೆ ಹರಟುತ್ತಾ ಕೊನೆಗೂ ನಾನು ವಿಶ್ವಾಸ ಸಂಪಾದಿಸ್ಕೊಂಡೆ. ಮಗುವಿನ ಮನಸಲ್ಲಿ ಏನಿದೆ ಅಂತ ತಿಳೀಬೇಕಿತ್ತು ನಾನು. ನನ್ನ ಮಾತುಕತೆ ಅವಂಗೂ ಹಿತ ತಂದಿತೇನೋ, ಹಗೂರ ಕೇಳಿದ, “ಚಿಕ್ಕಮ್ಮಾ, ಚಾಟರ್ ಬಿಲ್ಲು ಬೇಕು. ಕೊಡಿಸ್ತೀರಾ?”

ಮುಸ್ಸಂಜೆಯಾಗುತ್ತ ಬಂದಿತ್ತು. ಇನ್ನು ಭಜನೆ ಮಾಡಿ ರಾತ್ರಿಯ ಇತರ ಕೆಲಸಗಳು ಶುರುವಾಗಬೇಕು. ನಾನು, “ಓಹೋ, ಎರಡು ಕೊಡಿಸ್ತೀನಿ. ಆದ್ರೆ, ನಾಳೆ ಬೆಳಗ್ಗೆ. ಸರೀನ?” ಅಂದೆ. ಮಧು ಮುಖ ಅಗಲವಾಯ್ತು. ಅವನನ್ನ ಹಗೇ ಎತ್ಕೊಂಡು ಹೋಗಿ ರೂಮಲ್ಲಿದ್ದ ಪೆನ್ನು ಪೆನ್ಸಿಲುಗಳನೆಲ್ಲ ಕವರಲ್ಲಿ ಹಾಕಿಕೊಟ್ಟು ಖುಷಿ ಪಟ್ಟೆ. ಕುಣಿಯುತ್ತ ಓಡಿ ಹೋದ ಹುಡುಗ.
ಆದರೆ,
ಆ ಖುಷಿಯ ಆಯಸ್ಸು ಹತ್ತೇ ನಿಮಿಷ. ಕುಡಿದು ಹೆಚ್ಚಾಗಿ ತೂರಾಡುತ್ತ ಬಂದ ಅವನಪ್ಪ, ಜಾಗದ ವಿಷಯಕ್ಕೆ ಪಂಚಾಯ್ತಿ ಶುರುವಿಟ್ಟ. ಮನೆ ಹುದುಗರು ದನಿ ಎತ್ತರಿಸಿದರು. ಅಂವ ತೋಳು ಮಡಚಿದ. ಗದ್ದಲ ಜೋರಾಯ್ತು. ನೆಂಟರಲ್ಲಿ ಎರಡು ಬಣವಾಯ್ತು. ನೋಡ ನೋಡ್ತಲೇ ಅಂವ ತನ್ನ ಹೆಂಡತಿ ಮಕ್ಕಳನ್ನ ದರದರ ಎಳ್ಕೊಂಡು ಹೊರಟೇಬಿಟ್ಟ. ಹೊರಟು, ದಾರಿ ತಿರುಗೋವರೆಗೂ ಮಧು ಹೆಜ್ಜೆ ತಡವರಿಸ್ತಲೇ ಇತ್ತು. ತೀರಾ ಹಾದಿ ತಿರುಗುವಾಗ ಒಂದ್ಸಲ ಹೊರಳಿ, ನನ್ನ ನೋಡಿದ, ಅಷ್ಟೇ.

~
ಎಲ್ಲ ಕಳೆದು ಮೂರ್ನಾಲ್ಕು ತಿಂಗಳಾಗಿರಬಹುದು. ಒಂದು ಕಪ್ಪು ಸಂಜೆ, ಫೋನು ಕರ್ಕಶವಾಗಿ ಬಡ್ಕೊಳ್ಳತೊಡಗಿತು. ಅತ್ತಲಿಂದ ಬಂದ ಸುದ್ದಿ ಇನ್ನೂ ವಿಕಾರವಾಗಿತ್ತು. ಮಧೂಗೆ ಬ್ಲಡ್ ಕ್ಯಾನ್ಸರ್! ಮಣಿಪಾಲಕ್ಕೆ ಅಡ್ಮಿಟ್ ಮಾಡಿದಾರಂತೆ…
ಮಧು ಮೈಯಲ್ಲಿನ ರಕ್ತ ಮೊಸರುಮೊಸರಾಗಿತ್ತು. ಎಂಟರ ಮಗು ನೋವಿಂದ ನರಳೋದನ್ನ ನೋಡಲಾಗದೆ ದೊಡ್ಡವರು ಮೂರ್ಛೆ ಹೋಗ್ತಿದ್ದರು. ಡಾಕ್ಟರ್ ಬೇರೆ, ‘ಮೊದ್ಲೇ ಕರ್ಕೊಂಡ್ ಬಂದಿದ್ರೆ ಏನಾದ್ರೂ ಮಾಡಬಹುದಿತ್ತು ಅಂದಂದು ಹೊಟ್ಟೆ ಉರಿಸ್ತಿದ್ದರು.

ಮಗುವಿನ ಮೈ- ಕೈಯೆಲ್ಲ ತೂತು ಮಾಡಿ ಪೈಪು ತೂರುತ್ತಿದ್ದರು. ಅತ್ತಿಗೆಗೆ ಬಹುಶಃ ಎದೆಯಲ್ಲಿ ಚೂರಿ ಹಾಕಿದಹಾಗೆ ಆಗ್ತಿತ್ತೇನೋ. ಮಾತು ಕಳಕೊಂಡು, ಕಣ್ಣೂ ಬತ್ತಿಸಿಕೊಂಡು ಮೂಲೆ ಹಿಡಿದುಬಿಟ್ಟಿದ್ದರು. ನಾಲ್ಕು ದಿನಗಳಲ್ಲಿ ಮಧು ಕಣ್ಮುಚ್ಚಿದ್ದ.
ಆದಿಮನೆಗೆ ಮಧುವಿನ ದೇಹ ತರಲಾಯ್ತು. ಆಡ್ತಿದ್ದ ಮಗೂನ ಬಿಳೀ ಬಟ್ಟೆಯಲ್ಲಿ ಸುತ್ತಿ ಮಲಗಿಸಿದ ಹಾಗಿತ್ತು. ಅವನ ದೇಹವನ್ನ ಹಿತ್ತಲ ಬ್ಯಾಣದ ದೊಡ್ಡ ಮಾವಿನಮರದ ಬುಡದಲ್ಲಿ ಹೂತಿದ್ದಾಯ್ತು.

ಮಧು ಅಪ್ಪ ಅವತ್ತು ಕುಡಿದಿರಲಿಲ್ಲ. ಸೀದಾ ಬಂದವ, ತುಂಬು ಬಸುರಿಯಾಗಿದ್ದ ನನಗೆ ಹೇಳಿದ, “ನೋಡು, ನಿಂಗೆ ಗಂಡುಮಗು ಹುಟ್ಟಿದ್ರೆ, ಮಧು ಅಂತಲೇ ಹೆಸರಿಡು ಆಯ್ತಾ?”
ಅಂವ ಹೇಳಿದ ಹಾಗೆ ನಂಗೆ ಗಂಡುಮಗುವೇ ಹುಟ್ಟಿತು. ಆದ್ರೆ, ಮಧು ಹೆಸರಿಡೋಕೆ ಧೈರ್ಯ ಸಾಲದೆ ಹೋಯ್ತು.

~
ಮೊನ್ನೆ ಆಚೀಚೆ ಮಕ್ಕಳು ಗೇರು ಉದುರಿಸ್ತಿದ್ರು. ಕೈಯಲ್ಲಿ ಚಾಟರ್ ಬಿಲ್ಲ. ಮಗ ಬಂದ. ಒಂದೇ ಸಮ, ಅಮ್ಮಾ, ಚಾಟರ್ ಬಿಲ್ಲು ಕೊಡ್ಸು ಅಂತ ದುಂಬಾಲುಬಿದ್ದ. ಅದಾಗಲೇ ಏಳು ವರ್ಷ ಕಳೆದಿತ್ತು. ನಾನೂ ಬಲಿತಿದ್ದೆ. ಮಕ್ಳು ಏನೇ ಕೇಳಿದ್ರೂ ಕೂಡ್ಲೇ ಕೊಡಿಸಿಬಿಡಬಾರ್ದು ಅಂತ ಬುಕ್ಕು ಓದಿ ಕಲ್ತುಕೊಂಡಿದ್ದೆ. ಬೊಬ್ಬೆ ಹೊಡೀತಿದ್ದ ಮಗನ್ನ ಸಮಾ ಬಯ್ದು ಅಟ್ಟಿಬಿಟ್ಟೆ.

ಆಗ ಇದ್ದಕ್ಕಿದ್ದ ಹಾಗೇ, ಆಳಆಳದ ದನಿಯೊಂದು ಎದ್ದು ಬಂತು… “ಚಿಕ್ಕಮ್ಮಾ, ಚಾಟರ್ ಬಿಲ್ಲು ಕೊಡಿಸ್ತೀರಾ!?”
ಒಮ್ಮೆಗೆ ಬೆಚ್ಚಿಬಿದ್ದೆ. ಹುಚ್ಚಿ ಹಾಗೆ ಮಗುವನ್ನ ಕೂಗುತ್ತ ಹೊರಟವಳಿಗೆ ಅಂವ ಆಸುಪಾಸಲ್ಲೆಲ್ಲೂ ಕಾಣಲೇ ಇಲ್ಲ. ಕೆಟ್ಟ ಯೋಚನೆಗಳೆಲ್ಲ ಸಾಲುಗಟ್ಟಿ ನಿಂತುಬಿಟ್ಟಿದ್ದವು ಅದಾಗಲೇ. ಎದ್ದೂ ಬಿದ್ದೂ ಬ್ಯಾಣಕ್ಕೇ ಓಡಿತು ಕಾಲು.

ಅಲ್ಲಿ,
ಮಾವಿನ ಮರದ ಕೆಳಗೆ ನನ್ನ ಮಗು!
ಓರಗೆ ಹುಡುಗರೊಟ್ಟಿಗೆ ಕಾಯಿ ಉದುರಿಸೋದ್ರಲ್ಲಿ ಮುಳುಗಿಹೋಗಿತ್ತು… ಅದರ ಕೈಯ್ಯಲ್ಲಿ ಚಾಟರ್ ಬಿಲ್ಲು!

ನನ್ನ ಹೃದಯಕ್ಕೆ ಆ ಘಳಿಗೆಯಲ್ಲಿ ಮಧು, ನನ್ನ ಮಗನಾಗಿ ಬಂದಿದ್ದ. ಎದೆಯಾಳದಲ್ಲಿ ಹುದುಗಿಹೋಗಿದ್ದ ಅವನ ನೆನಪು ಕಣ್ಣಂಚಲ್ಲಿ ಮಿನುಗಿತ್ತು.

10 thoughts on “ಚಿಕ್ಕಮ್ಮಾ, ಚಾಟರ್ ಬಿಲ್ಲು ಕೊಡಿಸ್ತೀರಾ?

Add yours

  1. ಇದ್ನ ‘ಗರ್ವ’ಕ್ಕಾಗಿ ಬರೆದು ಹೆಚ್ಚೂಕಡಿಮೆ ಮೂರು ವರ್ಷವಾಯ್ತು. ಆಗಲೂ ಬರೀತ ಬರೀತಲೇ ಕಣ್ಣೂ ತುಂಬಿ ನೊಂದುಹೋಗ್ತಿದ್ದೆ. ಈಗಲೂ ಇದ್ನ ಓದುವಾಗೆಲ್ಲ ದುಃಖ ಉಮ್ಮಳಿಸಿ ಬರುತ್ತೆ. ಇದು ಫಿಕ್ಶನ್ ಹೌದು. ಅದರೆ, ಹಾಗೊಬ್ಬ ಓರಗಿತ್ತಿಯ ಮಗನಿದ್ದ, ಮತ್ತು ಅವನನ್ನು ಕ್ಯಾನ್ಸರ್ ಕಸಿದುಕೊಂಡು ಹೋಗಿ ಹನ್ನೊಂದು ವರ್ಷಗಳು ಆಗಿಹೋಗಿವೆ. ನೆನಪು- ನೋವು ಮಾತ್ರ ಇನ್ನೂ ಹಚ್ಚಸಿಯಾಗೇ ಇವೆ.

    ರಮೇಶ್,
    ಇಲ್ಲ ಕಣೋ. ಚಾಟರ್ ಬಿಲ್ಲು ಕೊಡಿಸಲಾಗ್ಲೇ ಇಲ್ಲ.

  2. ತುಂಬಾ ಚೆನ್ನಾಗಿ ಬರೆದಿದ್ದೀರ. ನನ್ನ ಮಗ ಕೂಡ ಇದೇ ರೀತಿ ನಿರಾಕರಿಸಲಾಗದಂತೆ ಮುದ್ದುಮುದ್ದಾಗಿ ಡಿಮ್ಯಾಂಡ್ಸ್ ಮುಂದಿಡುತ್ತಾನೆ. ನಾನು ಹೊರಗೆ ಹೋಗಿ ಬಂದಾಗ ತನಗೇನೋ ತಂದಿರಬೇಕೆಂದು ನನ್ನ ಬ್ಯಾಗ್ ತೆರೆದು ನೋಡುತ್ತಾನೆ!

  3. ಅಂವ ಹೇಳಿದ ಹಾಗೆ ನಂಗೆ ಗಂಡುಮಗುವೇ ಹುಟ್ಟಿತು. ಆದ್ರೆ, ಮಧು ಹೆಸರಿಡೋಕೆ ಧೈರ್ಯ ಸಾಲದೆ ಹೋಯ್ತು.
    ಬೇಡ ಅಂತ ತುಟಿ ಕಚ್ಚಿ ಹಿಡಿದ್ರೂ ಕಣ್ಣಂಚು ಒದ್ದೆ ಆಗ್ತ ಇದೆ
    ಈ ಕತೆಲಿ ಎನೋ ಇದೆ ಮೇಡಮ್

ನಿಮ್ಮ ಟಿಪ್ಪಣಿ ಬರೆಯಿರಿ

Create a free website or blog at WordPress.com.

Up ↑