ಸುಮ್ಮನೆ ನೋಡಿದ ಸಿನೆಮಾಗಳು


ಕಳೆದೊಂದು ವಾರದಿಂದ ರಜೆ ಮೇಲೆ ರಜೆ ಬಂದು ಸೋಮಾರಿತನದಿಂದ ಮೈ ಮುರೀತಲೇ ಆಫೀಸಿಗೆ ಬಂದ ನನ್ನ ಬಾಯಲ್ಲಿ, ಅಪಸ್ವರದಲ್ಲಿ ಗುನುಗಾಡುತ್ತಿರುವ ಹಾಡು ಯಾವುದು?
ಚಲ್ಕೆ ಪಲ್ಕೋಂ ಕೆ ಪೀಚೆ, ಚಲ್ಕ ತನ್ಹ ಆಸೂಂ ಕೊಯಿ……. ಇಕ್ ಮೀಠ ಮರ್ಜ್ ದೇನೆ, ಆನಾ ತುಮ್ ಯೂಂ ಹಿ… ಫಿರ್ ದವಾ ಕ ಕರ್ಜ್ ದೇನೆ, ಆನಾ ತುಮ್ ಯೂಂ ಹಿ….
ಕೇಳಿದೀರಾ ಈ ಹಾಡನ್ನ?

~

ಅದೇನಾಯ್ತು ಅಂದ್ರೆ,
ಅಕ್ಟೋಬರ್ ಕೊನೇ ದಿನ ಸಂಜೆ ‘ಮುಂಬಯ್ ಮೇರಿ ಜಾನ್’ ನೋಡ್ಬೇಕು ಅಂತ ಡಿಸೈಡ್ ಮಾಡಿದ್ನಾ, ನಮ್ಮ ಗಣೇಶ ಸಿಡಿ ಸ್ಟೋರ್ಸ್ ಗೆ ಹೋದೆ. ಅಂವ ಡಿವಿಡಿ ಕೊಟ್ಟ. ಮನೇಗ್ ಬಂದು ನೋಡಿದ್ರೆ ಅದ್ರಲ್ಲಿ ಡಿವಿಡಿ ಇರ್ಲೇ ಇಲ್ಲ. ಸರಿ. ಇನ್ನೂ ಅಡ್ಗೆ ಮಾಡ್ಬೇಕು, ತಮ್ಮ ಬರ್ತಾನೆ ಊಟಕ್ಕೆ. ತರಕಾರಿ… ಅಂತೆಲ್ಲಾ ಗೊಣಗಾಡ್ಕೊಂಡು ಅವನಂಗಡಿಗೆ ಹೋಗಿ ದಬಾಯಿಸ್ದೆ. ಕೊನೆಗೆ ಅಲ್ಲಿದ್ದ ಅಣ್ಣ ತಮ್ಮಂದಿರಲ್ಲಿ ಬಾಡಿಗೆಗೆ ಹೋಗಿದ್ದ ಡಿವಿಡಿ ವಾಪಸು ಬಂದಾಗ ಇದ್ದವ್ರು ಯಾರು ಅನ್ನೋದರ ಬಗ್ಗೆ ವಾಗ್ವಾದ ಶುರುವಾಯ್ತು. ರಿಜಿಸ್ಟರಿನಲ್ಲಿ ಹುಡುಗಿ ಹೆಸರಿದ್ದುದು ಅವರ ಬೈದಾಟಕ್ಕೆ ಒಂದಷ್ಟು ಬಣ್ಣ ಎರಚುತ್ತಿತ್ತು. ಅವರನ್ನ ಹೊಡೆದಾಡಲು ಬಿಟ್ಟು ಡಿವಿಡಿ ಟ್ರೇ ನೋಡುತ್ತ ನಿಂತಿದ್ದ ನನ್ನ ಕಣ್ಣಿಗೆ ಬಿದ್ದಿದ್ದು ‘ವೆಲ್ ಕಮ್ ಟು ಸಜ್ಜನ್ ಪುರ್’. ಅರ್ರೆ! ಇದೊಳ್ಳೆ ಮಜವಾಗಿದೆ ಟೈಟಲ್ಲು… ಕವರಿನ ಮೇಲೆ ಸೈಕಲ್ಲಲ್ಲಿ ಹೀರೋ- ಇನ್ನು! ಹಾಗಂತ ಆಶ್ಚರ್ಯಚಕಿತಳಾಗಿ, ಅವರ ರಿಜಿಸ್ಟರಿನಲ್ಲಿ ನಾನೇ ನನ್ನ ಹೆಸರು, ಡೇಟು, ಡಿವಿಡಿ ಹೆಸರುಗಳನ್ನೆಲ್ಲ ಬರೆದು ಬೈ ಹೇಳಿ ಹೊರಟು ಬಂದೆ.

~
ಇನ್ನೀಗ ಸೆಕೆಂಡ್ ಶೋ. ಊಟ ಮಾಡ್ವಾಗ ಒಂದೋ ಓದ್ಬೇಕು, ಇಲ್ಲಾ ಲ್ಯಾಪ್ ಟಾಪ್ ನನ್ ಕಣ್ಣೆದ್ರು ಇರ್ಬೇಕು. ಇದೊಂದು ದುಶ್ಚಟ ನಂದು. ಮೂವಿ ಹಾಕಿಟ್ಟು ತಮ್ಮನಿಗೆ ಬಡಿಸಲು ಎದ್ದಾಗ ಒಂದು ದನಿ ನನಗೆ ಬಹಳ ಇಷ್ಟವಾಗುವ ಬಂಗಾಳಿ ಶೈಲಿಯ, ಸಂಸ್ಕೃತ ಮಿಶ್ರಣದ ಬಿಹಾರಿ ಹಿಂದಿಯಲ್ಲಿ ಮಾತಾಡ್ತಿತ್ತು. ಅದಾದ ಮೇಲೆ ‘ಸೀತಾ ರಾಮ್… ಸೀತಾ ರಾಮ್…’ ಹಾಡು. ಅಂತೂ ಹೀರೋ ಅವನ ಪೋಸ್ಟ್ ಆಫೀಸ್ ಕಟ್ಟೆ ತಲುಪೋ ಹೊತ್ತಿಗೆ ನಾನು ಲ್ಯಾಪ್ ಟಾಪಿನ ಮುಂದೆ ಸ್ಥಾಪಿತಳಾಗಿದ್ದೆ.
ವಾರೆ ವ್ಹಾ! ಎಷ್ಟ್ ಮುದ್ದಾಗಿದೆ ಮುಂಡೇದು! ಅನ್ನಿಸ್ತು ಹೀರೋ ಮುಖ ನೋಡಿ. ಒಂದು ಆಂಗಲ್ಲಿನಲ್ಲಿ ದೇವಾನಂದ್ ಥರ ಕಾಣ್ತಿದ್ದ ಆ ಹುಡುಗ. ಶುರುವಾಯ್ತು ಸಿನೆಮಾ.
ಈ ಸಿನೆಮಾದ ಕಥೆ, ಒಂದೊಳ್ಳೆ ಡ್ರಾಮಾ ಮೆಟೀರಿಯಲ್ಲು. ಹವ್ಯಾಸಿ ಡ್ರಾಮಾಕ್ಕೂ, ಹಳ್ಳಿ ಡ್ರಾಮಾಕ್ಕೂ… ಎರಡಕ್ಕೂ ಸೂಟ್ ಆಗತ್ತೆ. ಅದನ್ನ ಹಿರಿ ಪರದೆಗೆ ಬಹಳ ಎಚ್ಚರಿಕೆಯಿಂದ ಅಳವಡಿಸಿದಾರೆ ನಿರ್ದೇಶಕ ಮಹಾಶಯರು. ಇಡಿಯ ಸಿನೆಮಾದಲ್ಲಿ ಅದೆಷ್ಟು ಸಮಸ್ಯೆಗಳ ಅನಾವರಣ, ವ್ಯವಸ್ಥೆಯ ವಿಡಂಬನೆಗಳಿವೆ ಗೊತ್ತಾ? ಅದನ್ನೆಲ್ಲ ಎಲ್ಲೂ ಡಾಕ್ಯುಮೆಂಟರಿ ಅನಿಸದಿರುವ ಹಾಗೆ, ‘ಪ್ರಶಸ್ತಿಗಾಗಿ’ ಸಿನೆಮಾವಾಗದಿರುವ ಹಾಗೆ ಕಟ್ಟಿಕೊಟ್ಟಿದಾರೆ. ನಿಜ್ವಾಗ್ಲೂ ಹೇಳ್ತೀನಿ… ನಿಮಗೊಂದು ಬದಲಾವಣೆ ಬೇಕು ಅಂತಾದ್ರೆ, ಧಾರಾಳವಾಗಿ ವೆಲ್ ಕಮ್ ಟು ಸಜ್ಜನ್ ಪುರ್ ನೋಡಬಹುದು. ಮೂರು ಘಂಟೆಯ ಈ ಸಿನೆಮಾ ಖಂಡಿತಾ ನಿಮಗೆ ‘ಸುಮ್ಮನೆ ಸಿನೆಮಾ ನೋಡುವ’ ಖುಷಿಯ ಜತೆ, ಒಂದಷ್ಟು ಚಿಂತನೆಯನ್ನೂ ಕಟ್ಟಿಕೊಡುತ್ತೆ. ಅಷ್ಟೇ ಅಲ್ಲ, ಕಾಸ್ಟ್ಯೂಮ್ಸ್, ನಟನೆ, ಸಂಭಾಷಣೆ- ಇವೆಲ್ಲವೂ ನಿಮ್ಮನ್ನ ಹಿಡಿದಿಡತ್ತೆ.
ಮತ್ತೆ ಹಾಡುಗಳು!? ವ್ಹಾ! ಒಳ್ಳೆ ಸಾಹಿತ್ಯ, ಅದರಷ್ಟೇ ಒಳ್ಳೆ ಸಂಗೀತ. ಮೇಲೆ ನನ್ನ ಬಾಯಲ್ಲಿ ನಲುಗಿದ ಹಾಡು ಉಲ್ಲೇಖಿಸಿದೀನಲ್ಲ, ಅದು ಈ ಮೂವೀದೇ.

ಆದ್ರೆ ನಾನು ಸಿನೆಮಾ ಕಥೆ ಇಲ್ಲಿ ಹೇಳೋಕೆ ಹೋಗೋಲ್ಲ. ಮೊದ್ಲೇ ನಂಗೆ ಕಥೆ ಹೇಳೋಕೆ ಬರಲ್ಲ. ಕೊನೆಗೆ ನೀವು ‘ಓ, ಇದು ಚೆನಾಗಿಲ್ಲ’ ಅಂದ್ಕೊಂಡ್ ಬಿಟ್ರೆ ಕಷ್ಟ.
ಇದೊಂದು ಹಳ್ಳಿಯ ಕಥೆ. ಹೀರೋ, ಅಲ್ಲಿನ ಜನರಿಗೆ ಲೆಟರ್ ಬರ್ದು ಕೊಡೋದನ್ನೇ ವೃತ್ತಿ ಮಾಡ್ಕೊಂಡಿರ್ತಾನೆ. ಒಂದು ಎಲೆಕ್ಷನ್ನು- ಅದರಲ್ಲಿ ಜಮೀನ್ದಾರಿಣಿಯ ಎದುರು ಹಿಜಡಾ ನಿಲ್ಲೋದು, ಒಬ್ಬಳು ವಿಧವೆಯನ್ನ ಕಾಂಪೌಂಡರ್ರು ಪ್ರೀತಿಸಿ ಮದ್ವೆಯಾಗೋದು, ಅಮಂಗಳ ಹೆಣ್ಣು ಅಂತ ಆಕೆಗೆ ನಾಯಿ ಜತೆ ಮದ್ವೆ ಮಾಡೋದು, ಮುಂಬಯಿಯಲ್ಲಿ ದುಡೀಲಿಕ್ಕೆ ಹೋದ ಗಂಡನ ಹೆಂಡತಿ ನಮ್ಮ ಹೀರೋ ಕ್ಲಾಸ್ ಮೇಟು- ಅವನ ಫೀಲಿಂಗ್ಸು, ಆ ಗಂಡ ಮನೆ ಖರ್ಚಿಗಾಗಿ ರಕ್ತ ಮಾರಿ ಹಣ ಕಳಿಸೋದು, ಕಿಡ್ನಿ ಮಾರಲಿಕ್ಕೆ ಹೊರಡೋದು… ಇವೇ ಮೊದಲಾದ ಘಟನೆಗಳೆಲ್ಲ ಈ ಸಿನೆಮಾದಲ್ಲಿವೆ. ಆದ್ರೆ, ನನ್ನ ನಂಬಿ… ಇಷ್ಟೆಲ್ಲಾ ಸಮಸ್ಯೆಗಳಿದ್ರೂ ಈ ಇಡಿಯ ಸಿನೆಮಾ ನಿಮಗೆ ಉಪನ್ಯಾಸದ ಥರ ಅನಿಸೋದಿಲ್ಲ.

~
ಕಳೆದ ವಾರ ಸಾಲು ಸಾಲು ರಜೆಗಳಿತ್ತಲ್ಲ, ಊರಿಗೆ ಹೋಗ್ಲಿಕ್ಕೆ ಟಿಕೆಟ್ ಸಿಗದೇ ಮನೇಲೇ ಬೋರು ಹೊಡೀತಿದ್ದೆ ನಾನು. ಆಗ ಸುಮ್ಮನೆ ಒಂಡಷ್ಟು ಸಿನೆಮಾಗಳನ್ನ ನೋಡಿದೆ. ಮೊನ್ನೆ ಮೊನ್ನೆ ತನಕ ಉಪನಿಷತ್ತು ಓದಿಕೊಂಡಿದ್ದು, ಇದೀಗ ಬ್ರೋಕನ್ ಬ್ಯಾಂಗಲ್ಸ್ ಓದಲೆಂದು ತಯಾರಾಗಿದ್ದ ನನಗೆ, ಆ ಹ್ಯಾಂಗ್ ಓವರ್ ನಿಂದ ಹೊರಬಂದು ಇದನ್ನು ಓದಲು ಒಂದು ಡೈವರ್ಶನ್ ಬೇಕು ಅನಿಸಿಬಿಟ್ಟಿತ್ತು. ಈ ಗೋಜಿಗೆ ಬಿದ್ದ ನಾನು ನೋಡಬೇಕಾದ ಸಿನೆಮಾಗಳಷ್ಟೇ ನೋಡಬಾರದ ಸಿನೆಮಾಗಳನ್ನೂ ನೋಡಿಬಿಟ್ಟೆ! ಎಗ್ಸಾಂಪಲ್ಲು- ಅಗ್ಲಿ ಔರ್ ಪಗ್ಲಿ!!  ಛಿ, ಆಫೀಸಲ್ಲೂ ವಾಮಿಟ್ ಬರೋಹಾಗಾಗ್ತಿದೆ ನಂಗೆ ಅದನ್ನ ನೆನೆಸ್ಕೊಂಡು. ಈ ಸಿನೆಮಾದ ಫಸ್ಟ್ ಸೀನೇ ಮಲ್ಲಿಕಾ ಶೆರಾವತ್ ವಾಮಿಟ್ ಮಾಡೋದು!

ಇನ್ನು, ನಾನು ನೋಡಿದ ಮತ್ತೊಂದು ಒಳ್ಳೇ ಸಿನೆಮಾ- ಎ ವೆಡ್ನೆಸ್ ಡೇ. ಇದನ್ನ ನಾನು ನೋಡಿದ್ದು ಲೇಟಾಯ್ತು. ಇದರ ಬಗ್ಗೆ ಬಂದ ಲೇಖನಗಳನೆಲ್ಲ ಓದ್ಕೊಂಡು ನೋಡೋಕೆ ಕುಳಿತಿದ್ದು, ಸಿನೆಮಾದ ಸ್ವಾರಸ್ಯ ಕಸಿದುಕೊಂಡುಬಿಡ್ತು. ಆದ್ರೇನು? ನಮ್ಮ ನಾಸಿರುದ್ದಿನ್ ಷಾ, ಅನುಪಮ್ ಖೇರರ ನಟನೆಯನನ್ ಮಾತಲ್ಲಿ ಕೇಳಿ ಆನಂದಿಸೋಕಾಗಲ್ಲ ಅಲ್ವಾ?
ನಾಸಿರುದ್ದಿನ್ ಅಂದ್ಕೂಡ್ಲೆ ನಂಗೆ ಇದೇ ವೇಳೆ ನೋಡಿದ ಮತ್ತೊಂದು ಸಿನೆಮಾ ನೆನಪಾಗ್ತಿದೆ. ಅದು- ‘ಜಾನೇ ತೂ, ಯಾ ಜಾನೆ ನಾ…’ ಅದರಲ್ಲಿ ಅವರ ಚೌಕಟ್ಟಿನ ಪಾತ್ರ ಮಜವಾಗಿದೆ. ನಿಜ್ವಾಗ್ಲೂ ಅವ್ರೊಬ್ಬ ಅದ್ಭುತ ನಟ. ( ಇದ್ನ ಹೇಳೋಕೆ ನಾನೇ ಆಗ್ಬೇಕಾ? ಅಂದ್ಕೊಳ್ಬೇಡಿ ಮತ್ತೆ…)

~
ಬಿಡಿ…  ಸುಮ್ನೆ ಹರಟ್ತಿದೀನಿ. ನಂಗಿನ್ನೂ, ‘ಇಕ್ ಮೀಠಾ ಮರ್ಜ್ ದೇನೆ…’ ಯ ಗುಂಗು ಬಿಟ್ಟಿಲ್ಲ. ಅದ್ಕೆ, ನಿಮ್ ಜೊತೆ ಅದನ್ನ ಹಂಚ್ಕೊಳೋಣ ಅಂತ ಇದ್ನ ಬರೆದೆ ಅಷ್ಟೆ.
~
ಸರೀ, ತಮ್ಮನಿಗೆ ಊಟ ಬಡಿಸೋಕೆ ಎದ್ದವಳು ಟೈಟಲ್ಸ್ ನೋಡೋದ್ನ ಮಿಸ್ ಮಾಡ್ಕೊಂಡಿದ್ನಲ್ಲ, ನಿರ್ದೇಶಕರು ಯಾರು ಅಂತ ಗೊತ್ತಾಗಿರ್ಲಿಲ್ಲ. ಆಹಾ… ಓಹೋ… ಅಂದ್ಕೊಂಡು ಸಿನೆಮಾ ನೋಡಿ ಮುಗಿದ ಮೇಲೆ ಒಂದು ಸಾಲು ಬಂತು. ಅದು-
ಡೈರೆಕ್ಟೆಡ್ ಬೈ- ಶ್ಯಾಮ್ ಬೆನಗಲ್.

16 thoughts on “ಸುಮ್ಮನೆ ನೋಡಿದ ಸಿನೆಮಾಗಳು

Add yours

  1. ಎ ವೆಡ್ನೆಸ್ ಡೇ, ಮುಂಬಯ್ ಮೇರಿ ಜಾನ್, ಆಮಿರ್ ಇತ್ತೀಚಿನ ದಿನಗಳಲ್ಲಿ ಬ೦ದ ಅತ್ಯುತ್ತಮ ಚಿತ್ರಗಳು, ‘ಖುದಾಃ ಕೇ ಲಿಯೆ’ ಪಾಕಿಸ್ತಾನಿ ಚಿತ್ರ ನೋಡಿ,ಮನೋಜ್ಣವಾಗಿದೆ. ಮನಕಲಕುವ ಮೂವಿಸ್ 🙂

  2. ನಮಸ್ಕಾರ,
    ಎ ವೆಡ್ನೆಸ್ ಡೇ ಸಿನಿಮಾ ನಿಜಕ್ಕೂ ಚೆನ್ನಾಗಿದೆ. ತೆಗೆದುಕೊಂಡ ರೀತಿ ಮತ್ತು ಇಬ್ಬರೂ ನಟರ ನಟನೆ ಚೆನ್ನಾಗಿದೆ. ಅಂದ ಹಾಗೆ ಎ ವೆಡ್ನೆಸ್ ಡೇ, ಮುಂಬಯಿ ಮೆರಿ ಜಾನ್ ಮತ್ತು ಅಮೀರ್ ಮೂರು ಚಿತ್ರಗಳ ಒಂದೆ ನೆಲೆಯವು. ಒಟ್ಟಿಗೆ ನೋಡಿ…ಹೊಸ ನೋಟವೇ ಸಿಗುತ್ತೆ. ಜತೆಗೆ ಮೂರು ಚಿತ್ರಗಳ ತೌಲನಿಕ ನೋಟ ಖುಷಿ ಕೊಡುತ್ತೆ, ಪ್ರಮೋದ್ ಹೇಳಿದ ಪಾಕಿಸ್ತಾನಿ ಚಿತ್ರ ಹುಡುಕಬೇಕು..
    ನಾವಡ

  3. ಹೇಳೋದೇ ಮರೆತಿದ್ದೆ.
    ಮೊನ್ನೆ ಭಾನುವಾರ ಡಿವಿಡಿ ಅಂಗಡಿಗೆ ಹೋದಾಗ ಅಂಗಡಿಯವ ವೆಲ್ ಕಮ್ ಟು ಸಜ್ಜನಾಪುರ್ ಫಿಲ್ಮ್ ಕೊಡ್ಲಿಕ್ಕೆ ಬಂದಿದ್ದ. ನಾನೇ ಬೇಡ ಅಂದೆ. ಈಗ ನೋಡ್ಬೇಕು.
    ನಾವಡ

  4. ಪ್ರಮೋದ್, ಖುದಾ ಕೇಲಿಯೇ – ಬರುವ ಭಾನುವಾರ. ಖಾಮೋಶ್ ಪಾನಿ ಒಂದು ಹಾಗೇ ಉಳಿದು ಹೋಗಿದೆ. ಯಾರಾದ್ರೂ ನೋಡಿದೀರಾ?

    ಸಂದೀಪ್, ಸೈಕೋ ಹೇಗಿದೆ?

    ನಾವಡರೇ, ವೆಡ್ನೆಸ್ ಡೇ ಒಳ್ಳೆ ಫೀಲಿಂಗ್ ಕೊಟ್ಟ ಮೂವಿ. ಬಟ್, ನಾಸಿರುದ್ದಿನ್ ಷಾ ರೋಲ್ ಬಗ್ಗೆ ಮೊದಲೇ ಓದಿಬಿಟ್ಟಿದ್ರಿಂದ ಒಂದು ಥ್ರಿಲ್ ಕಳ್ಕೊಂಡೆ 😦
    ಮುಂಬಯ್ ಮೆರಿ ಜಾನ್, ಅಮೀರ್ ನೋಡಬೇಕು. ವೆಡ್ನೆಸ್ ಡೇ ಸೇರಿದಂತೆ ಈ ಮೂರು ಚಿತ್ರಗಳ ಚರ್ಚೆ ಬಹಳ ನಡೀತಲ್ಲ ಇತ್ತೀಚೆಗೆ?

  5. ನಿಮ್ಮ ರಿವ್ಯೂವ್ ಓದಿ..(ಹಿಂದಿ, ಕನ್ನಡ ನೋಡೋದ್ ಸ್ವಲ್ಪ ತುಂಬ ಜಾಸ್ತಿ ಕಡಿಮೇನೆ) ವೆಲ್ಕಮ್ ಟು ಸಜ್ಜನ್ಪುರ್ ನ ನೋಡೇ ಬಿಡುವಾ ಅಂದ್ಕೊಂಡು, Torent ನಲ್ಲಿ ಡೌನ್ಲೋಡ್ ಗೆ ಇಟ್ಟು ಬಂದಿದ್ದೀನಿ.. ಬಹುಶಃ ನಾಳೆ ನೋಡಲಾಗುತ್ತೇನೋ..

    ಎ ವೆನ್ಸ್ ಡೇ ನೋಡಿದ್ದೀನಿ.. ಒಳ್ಳೆ ಮೂವೀ. ನಜ್ಹಿರುದ್ದೀನ್ ಷಾ ತುಂಬಾನೆ ಮೇಚುರ್ದ್ ವ್ಯಕ್ತಿ ಮತ್ತು ನಟ.

    🙂

  6. ನಮಸ್ತೇ ರವೀಂದ್ರನಾಥ್,
    ತಮ್ಮ ವಿಕೃತ ಮನಸ್ಥಿತಿಗೆ ವಿಷಾದವಿದೆ.
    ಶೀಘ್ರ ಗುಣಮುಖರಾಗಿರೆಂದು ಹಾರೈಸುವೆ.

    ವಂದೇ,
    ಚೇತನಾ ತೀರ್ಥಹಳ್ಳಿ

  7. ‘ಖುದಾಃ ಕೇ ಲಿಯೆ’ ನೋಡಿದೆ..
    ಕಣ್ಮುಚ್ಚಿ ನಡೆವಂಗೆ ಕಣ್ತೆರೆಸಿ ನಡೆಸುವ ಚಿತ್ರ.
    20:30:50 :: ಉರ್ದು:ಹಿಂದಿ:ಇಂಗ್ಲೀಶ್

    Acting is best possible out of them..
    Nazirudeenji is in his best as he always!..

    ಪ್ರಮೋದ್ ಈ ಚಿತ್ರವನ್ನು ಪರಿಚಯಿಸಿದಕ್ಕೆ ಧನ್ಯವಾದಗಳು.. 😐

ನಿಮ್ಮ ಟಿಪ್ಪಣಿ ಬರೆಯಿರಿ

Blog at WordPress.com.

Up ↑