ಪುಸ್ತಕ ಸಂತೆಯಲ್ಲಿ ಸಿಕ್ಕ ನೀಲಾ ಮೇಡಮ್


ಅದು ನೀಲಾ ಮೇಡಮ್ ಕಥೆ.
ಅದೇ, ಅಮ್ಮ ಇಲ್ಲದ ಹುಡುಗಿ… ಮದುವೆಯಾದ ಹೊಸತರಲ್ಲೆ ಗಂಡನ್ನ ಕಳಕೊಂಡು ಅಪ್ಪನ ಮನೆ ಸೇರಿದ ಹುಡುಗಿ…
ಚೆನ್ನಾಗಿ ಓದು ಬರಹ ಕಲಿತು, ನೀಲಾಳಿಂದ ನೀಲಾ ಮೇಡಮ್ ಆದ ಹುಡುಗಿ. ಅಪ್ಪನೂ ಇಲ್ಲವಾಗಿ, ಮತ್ತೆ ಒಬ್ಬಂಟಿಯಾದ ಹುಡುಗಿ. ತಮ್ಮನ್ನ ಓದಿಸಲಿಕ್ಕೆ ಕವಡೆಕಟ್ಟಿಕೊಂಡು ದುಡಿದ ಹುಡುಗಿ. ಟೀಚರ್ ಆಗಿದ್ದಾಗಲೇ ನಾಟಕದ ಪಾತ್ರವಾಗಿದ್ದ ಅರ್ಜುನನ್ನ ಮೋಹಿಸಿ, ಊರು ಬಿಟ್ಟು, ಕೇರಿ ಬಿಟ್ಟು, ಜಾತಿ ಬಿಟ್ಟು, ತಮ್ಮನ್ನೂ ಬಿಟ್ಟು ಮದುವೆಯಾದ ಹುಡುಗಿ.
ಅರ್ಜುನ ಕುಡಿದು ಅವಾಂತರ ಮಾಡಿದ ದಿನ ಅಂವನ್ನ ಬಿಟ್ಟು ನಡೆದು ಮತ್ತೊಂದು ಊರು ಸೇರಿ ಅಗಸಗಿತ್ತಿಯಾಗಿ ಬಾಳಿದ ಹುಡುಗಿ… ತಮ್ಮನ ಮದುಮಗಳ ಸೀರೆಯನ್ನ ತಾನೇ ಒಗೆಯುತ್ತೇನೆಂದು, ಓರಗೆಯ ಅಗಸಗಿತ್ತಿಯಿಂದ ಕಿತ್ತುಕೊಂಡು, ಅದನ್ನು ಮರಳಿ ಕೊಡದೆ ಸತಾಯಿಸಿದ ಹುಡುಗಿ…
ತಮ್ಮನೇ ಬರಲಿ ಅಂತ ಹಟ ಹಿಡಿದು, ಅವನನ್ನ ಕಣ್ತುಂಬಿಸಿಕೊಂಡು ‘ಹೋಗೆಲೋ’ ಅಂತ ಕಳಿಸಿಬಿಟ್ಟ ಹುಡುಗಿ…

~
ನೀಲಾ ಮೇಡಮ್…
ಯಾರು ಹೇಳಿದ್ದರು ಈ ಹಿಂದೆ ಅವಳ ಕಥೆಯನ್ನ?
ಊಹೂಂ… ತಲೆ ಕಿತ್ತು ಗಲಬರಿಸಿದರೂ ನೆನಪಾಗಲೇ ಇಲ್ಲ. ಆದರೆ ಅದನ್ನ ಓದುತ್ತ ಓದುತ್ತ, ಈ ಕಥೆಯನ್ನ ಎಲ್ಲೋ ಕೇಳಿದ ಹಾಗಿದೆ ಅಂದುಕೊಳ್ಳುತ್ತ ನನ್ನ ಸುತ್ತಮುತ್ತಲೆಲ್ಲ ಕಥೆಗಳು ಹುಟ್ಟಿಕೊಂಡು ಬಳ್ಳಿಯಾಗಿ ನನ್ನ ಸುತ್ತುತ್ತ, ಉಸಿರು ಕಟ್ಟುತ್ತ, ಕಥೆಯಿಂದ ಹೊರಬರಲಾರದೆ ನಾನು ಒದ್ದಾಡ್ತಿರುವಾಗ ಕರೆಂಟು ಹೋಗಿ, ತಮ್ಮ ಊಟಕ್ಕೆ ಬಂದು, ‘ಬುಕ್ಕು ತೆಗೆದಿಡೇ ಮಾರಾಯ್ತಿ, ಕಣ್ ಯಾತಕ್ಕೆ ಬರತ್ತೆ?’  ಅಂತ ಗದರಿ, ಅವುಗಳನ್ನೆಲ್ಲ ಸವರಿಬಿಟ್ಟ.

ಇಷ್ಟಕ್ಕೂ ನಾನ್ಯಾಕೆ ನೀಲಾ ಮೇಡಮ್ ಳನ್ನು ತಲೆಮೇಲೆ ಹತ್ತಿಸ್ಕೊಳ್ಳಲಿ? ಆ ಕಥೆಯನ್ನ ಯಾರು ಹೇಳಿದ್ದರೋ, ಯಾಕಾಗಿ ಹೇಳಿದ್ದರೋ, ಹೇಳಿದ್ದರೋ- ಇಲ್ಲವೋ? ನನಗೇನು? ಹಾಗಂದುಕೊಂಡು ಒರಿಯಾ ಕಥೆಗಳನ್ನ ಮುಚ್ಚಿಟ್ಟು ಕುಳಿತೆ. ಆದರೂ, ಒರಿಯಾ ಕಥೆಯೆಂದ ಮಾತ್ರಕ್ಕೆ, ಅದು ಒರಿಸ್ಸಾದಲ್ಲಿ ಮಾತ್ರ ನಡೆಯಬಹುದಾಗಿರೋದೇನೂ ಅಲ್ಲವಲ್ಲ? ಅನಿಸುತ್ತಲೇ ಇತ್ತು.
ನನಗ್ಗೊತ್ತು. ಹಾಗೆಲ್ಲ ಯೋಚಿಸುವ ಜರೂರತ್ತೇ ಇರಲಿಲ್ಲ.  ಆಫ್ಟರ್ ಆಲ್ ಅದೊಂದು ಕಥೆ. ಆದರೂ…

ತಲೆಯಲ್ಲಿ ಕೆಂಪು ಹೆಲಿಪೆಟ್ಟರ್ ಗುಂಯ್ ಗುಡುತ್ತಿತ್ತು. ಆಮದನ ಪ್ರೇಮ ಪ್ರಾಪ್ತವಾಗಿ ಅವನ ಕಥೆ ಸುಖಾಂತವಾಗುತ್ತ ನಡೆದರೆ, ಆಮಿನಾಳ ಬೆಕ್ಕು ವಿಷ ಬೆರೆತ ನೀರು ಕುಡಿದು ಸತ್ತ ಮೀನಿನ ಕರುಳು ತಿಂದು ತೊಂಡೇ ಚಪ್ಪರದ ಬಳಿ ಕಣ್ಣು ಹೊರಚಾಚಿ ನೆಗೆದುಬಿದ್ದಿತ್ತು. ಇದನ್ನ ಪ್ರಣಯದ ಕಥೆ ಅಂತ ಓದಿಕೊಳ್ಳಲೋ, ಆಧುನಿಕತೆಯ ಕರಾಳತೆ ಅಂತಲೋ ಅಂತೆಲ್ಲ ಕನ್ಫ್ಯೂಸ್ ಆಗುತ್ತಿದ್ದ ನನಗೆ ಕಥೆಗಳ ಸಹವಾಸವೇ ಸಾಕೆನಿಸುತ್ತ ಶಕ್ತಿಶಾರದೆಯ ಮೇಳದತ್ತ ಮನಸಾಗಿ ಹೊರಳಿ ಕುಂತೆ.

ನೀಲಾ ಮೇಡಮ್? ಆಮೇಲೇನಾಯ್ತು ಅವಳಿಗೆ? ಬೆಳ್ಳಿಕ್ಕಾರನ ಮತ್ತಿನಲ್ಲಿದ್ದ ಆಮಿನಾ ಆಮದನನ್ನ ನಿಖಾ ಮಾಡ್ಕೊಂಡಳೇನು? ಈ ಎರಡು ಪ್ರಶ್ನೆಗೆ ಉತ್ತರ ಸಿಗದೆ ಶಕ್ತಿ, ಶಾರದೆಯರೆಲ್ಲ ನನ್ನ ಕೈಬಿಟ್ಟು ಹೋದರು. ಅಲ್ಲೆಲ್ಲೂ ಕಾಣದ ಡಿ. ಆರ್. ತಣ್ಣಗೆ ನಕ್ಕರು.

~

~

“ಹೋದ ಜನ್ಮದಲ್ಲಿ ಇದು ಪುಸ್ತಕದ ಹುಳುವಾಗಿ ಹುಟ್ಟಿತ್ತು” ಹಾಗಂತ ಅಮ್ಮ ಬಲವಾಗಿ ನಂಬಿಬಿಟ್ಟಿದಾಳೆ.
ನಾನು ಓದಿದರೆ, ಓದುವುದು ಹೀಗೇ. ಓದಿನೊಳಗೆ ನಾನೇ ಕಳೆದುಹೋಗುವ ಹಾಗೆ. ಅದಕ್ಕೇ, ಆದಷ್ಟೂ ಕಥೆ ಪುಸ್ತಕಗಳನ್ನ ಓದುವುದನ್ನ ನನಗೆ ನಾನೇ ಅವಾಯ್ಡ್ ಮಾಡಿಕೊಂಡು ಬೇರೆ ಪುಸ್ತಕಗಳತ್ತ ವಾಲುತ್ತಿರುತ್ತೇನೆ. ಸಾಮಾನ್ಯವಾಗಿ ನನಗೆ ಮಾಡಲು ಬೇರೇನೂ ಕೆಲಸವಿರುವುದಿಲ್ಲವಾದ್ದರಿಂದ, ಓದೋದನ್ನೇ ನನ್ನ ಫುಲ್ ಟೈಮ್ ಡ್ಯೂಟಿಯೂ ಮಾಡ್ಕೊಂಡು ಬಿಟ್ಟಿದೇನೆ. ಎಷ್ಟೇ ಕಣ್ತಪ್ಪಿಸಿಕೊಂಡು ಓಡಾಡಿದರೂ ಈ ಕಥೆಗಳು ನನ್ನ ಕೈಬೀಸಿ ಕರೆಯುತ್ತವೆ. ಹಾಗೆಂದೇ ಈ ಬಾರಿಯ ಬುಕ್ ಫೇರಿನಿಂದ ಒಂದಷ್ಟು ಅನುವಾದಿತ ಒರಿಯಾ, ಬಂಗಾಳೀ, ಸಮಕಾಲೀನ ಹಿಂದೀ, ಗುಜರಾಥಿ ಮೊದಲಾದ ಕಥಾ ಸಂಗ್ರಹಗಳನ್ನ ಹೊತ್ತು ತಂದಿದ್ದೇನೆ. ಈ ಮೇಲಿನ ಡ್ರಾಮಾವೆಲ್ಲ ಅದರದೇ ಎಫೆಕ್ಟು!

~
ಮ್ಮ್…  ನಾನೂ ತಂದಿದೇನೆ ಮೂವತ್ತು ಪುಸ್ತಕಗಳನ್ನ, ಹದಿನೆಂಟು ಡಿವಿಡಿ, ಸೀಡಿಗಳನ್ನ. ಎಲ್ಲಾ ಬಿಟ್ಟು ‘ಈ ತನಕದ ಕಥೆಗಳು’ ಮತ್ತು ಒರಿಯಾ ಕಥೆಗಳನ್ನ ಓದಲು ಕುಳಿತಿದ್ದೇ ಕೆಲಸ ಕೆಟ್ಟಿತು ನೋಡಿ.
ಏನು ಮಾಡಿದರೂ ಪೂಚೆಕುಟ್ಟಿಯ ಹೊರಚಾಚಿದ ಕಣ್ಣು, ನೀಲಾಳ ಕೊಳಕು ಬಟ್ಟೆಗಳ ಮೂಟೆಗಳು… ಎರಡೇ ಮತ್ತೆ ಮತ್ತೆ ನೆನಪಾಗ್ತಿವೆ. ಕಥೆಗಳನ್ನ ಹೆಣೆದ ಕಥೆಗಾರರ ಶೈಲಿ ಕೂಡ ನನಗೆ ಮೋಡಿಮಾಡಿಬಿಟ್ಟಿವೆ. ಅದನ್ನೆಲ್ಲ ನನಗಂತೂ ಹೆಳಲಿಕ್ಕೆ ಬರೋಲ್ಲ. ನೀವೇ ಖುದ್ದಾಗಿ ಓದಬೇಕು, ಹೇಳಬೇಕು. ಅಷ್ಟೆ.

ಇಷ್ಟಾದರೂ ನೆನಪಾಗ್ತಿಲ್ಲ ನಂಗೆ.
ತೀರ ಇತ್ತೀಚೆಗೆ ನೀಲಾ ಮೇಡಮ್ಮಳ ಕಥೆಯನ್ನ ನನಗೆ ಹೇಳಿದ್ದು ಯಾರು? ಅವಳ್ಯಾಕೆ ನನ್ನ ಹೀಗೆ ಕಾಡಬೇಕು? ಅದೂ, ಕಾಲರಾದಲ್ಲಿ ಅಪ್ಪ ಸತ್ತು, ಅಮ್ಮ ಸತ್ತು, ಪ್ರಿಯತಮನೂ ಸತ್ತು, ತಾನೂ ಸತ್ತೇ ಹೋದ ರೇವತಿಗಿಂತ ಹೆಚ್ಚಾಗಿ…!?

ರೇವತಿಯ ಕಥೆ, ಮತ್ತೊಮ್ಮೆ ಹೇಳುವೆ.
ಪುಸ್ತಕ ಸಂತೆಗೊಮ್ಮೆ ಹೋಗಿಬನ್ನಿ.

4 thoughts on “ಪುಸ್ತಕ ಸಂತೆಯಲ್ಲಿ ಸಿಕ್ಕ ನೀಲಾ ಮೇಡಮ್

Add yours

  1. ಬರಹ ಚೆನ್ನಾಗಿದೆ ಚೇತನಾ. ನಾನೂ ಬುಕ್ ಫೇರ್ ಗೆ ಹೋಗಿದ್ದೆ.
    ಈ ನೀಲಾ ಮೇಡಮ್ ಕಥೆ ಯಾರದ್ದು? ಈ ತನಕದ ಕಥೆಗಳು ಕೂಡ ಒರಿಯಾ ಕಥೆಗಳ ಸಂಗ್ರಹವೇ ಅಥವ ಕನ್ನಡದ್ದೇ? ಗೊತ್ತಾಗಲಿಲ್ಲ.

  2. ಕೆಲವು ಪುಸ್ತಕಗಳು ನಮ್ಮನ್ನು ಸಂಪೂರ್ಣವಾಗಿ ಆವರಿಸಿಕೊಂಡುಬಿಡುತ್ತವೆ. ಬಹುಶಃ ಕಾಲೇಜು ದಿನಗಳಲ್ಲಿ ಕಥೆ-ಕಾದಂಬರಿಗಳನ್ನು ಓದುತ್ತಿದ್ದ ನಾನು ಇದೇ ಕಾರಣಕ್ಕೆ ಪುಸ್ತಕ ಓದುವುದಕ್ಕೆ ಕಡಿವಾಣ ಹಾಕಿಕೊಂಡೆನಾ ಅಂತಲೂ ಯೋಚಿಸ್ತೀನಿ.

    ಓದಿಸಿಕೊಂಡು ಹೋಗುವ ಕಥೆಗಳು, ನಮ್ಮ ಮನದಾಳಕ್ಕೆ ಇಳಿಯುತ್ತಾ, ಹೊತ್ತು ಹೋಗಿದ್ದು ಗೊತ್ತಾಗದೆ, ಅರ್ಧದಲ್ಲಿ ಯಾವುದೇ ಕೆಲಸದ ನಿಮಿತ್ತ ಎದ್ದುಹೋಗಲೇಬೇಕಾದ ಅನಿವಾರ್ಯತೆ ಬಂದಾಗ, ಆಗುವ ಚಡಪಡಿಕೆ, ಮನಸ್ಸಿನೊಳಗೇ ಎದ್ದು ಮಲಗುವ ಆ ಕೋಪ… (ಅಂದ್ರೆ ಓದುವುದಕ್ಕೆ ತಡೆಯಾಯಿತಲ್ಲಾ ಎಂಬ ಹತಾಶೆ)…

    ಪುಸ್ತಕ ಓದಬೇಕು. ಆದರೆ ಪುಸ್ತಕದ ಹುಳುವಾಗಬಾರದು ಅಂತ ಆಗಲೇ ತೀರ್ಮಾನಿಸಿಬಿಟ್ಟೆ 🙂

    “ತಮ್ಮನ ಮದುಮಗಳ ಸೀರೆಯನ್ನ ತಾನೇ ಒಗೆಯುತ್ತೇನೆಂದು, ಓರಗೆಯ ಅಗಸಗಿತ್ತಿಯಿಂದ ಕಿತ್ತುಕೊಂಡು, ಅದನ್ನು ಮರಳಿ ಕೊಡದೆ ಸತಾಯಿಸಿದ ಹುಡುಗಿ… ತಮ್ಮನೇ ಬರಲಿ ಅಂತ ಹಟ ಹಿಡಿದು, ಅವನನ್ನ ಕಣ್ತುಂಬಿಸಿಕೊಂಡು ‘ಹೋಗೆಲೋ’ ಅಂತ ಕಳಿಸಿಬಿಟ್ಟ ಹುಡುಗಿ…”
    – ಈ ಸಾಲುಗಳು ಅದೇಕೋ ಮನಸ್ಸನ್ನು ಒದ್ದೆಯಾಗಿಸಿದವು.

  3. ಬೆಂಗಳೂರಿಗೆ ಬಂದ ಮೊದಲ ವರ್ಷದಲ್ಲೇ ನಾನು ಗೆಳೆಯನನ್ನು ಕಟ್ಟಿಕೊಂಡು ಅರಮನೆ ಮೈದಾನದ ಪುಸ್ತಕ ಸಂತೆಗೆ ಹೋಗಿದ್ದೆ. ಕೆಲವು ಅದ್ಭುತವಾದ ಪುಸ್ತಕಗಳನ್ನು ಕೊಂಡು ಕೊಂಡಿದ್ದೆ. ನನಗೆ ಲಂಕೇಶರು ಸಂಪೂರ್ಣ ಪರಿಚಯವಾದದ್ದೇ ಅಲ್ಲಿ. ಅವರ ಟೀಕೆ ಟಿಪ್ಪಣಿ ಪುಸ್ತಕದ ಮೂಲಕ… ಎರಡು ವರ್ಷ ಹೋಗಲು ಆಗಿಲ್ಲ…

  4. @ ವೀಣಾ,
    ‘ನೀಲಾ ಮೇಡಮ್’ ಕಥೆ ಗೋದಾವರೀಶ್ ಮಾಹಾಪಾತ್ರರದ್ದು. ಈತನಕದ ಕಥೆಗಳು- ರಷೀದರದ್ದು.

    @ ಅವಿನಾಶ್, ಧನ್ಯವಾದ.

    @ ಸುಪ್ರೀತ್,
    ಈ ಸಾರ್ತಿ ಖಂಡಿತ ಹೋಗಿ ಬಾ. ಕನ್ನಡ ಪುಸ್ತಕಗಳಂತೂ ಸರಿಯೇ… ಅಪರೂಪದ ಇಂಗ್ಲಿಶ್ ಪುಸ್ತಕಗಳೂ ಅಲ್ಲಿ ಸಿಗುತ್ತವೆ. ನಾನಂತೂ ಹುಚ್ಚಿಗೆ ಬಿದ್ದವಳ ಹಾಗೆ ಒಂದಷ್ಟು ಜೀವನ ಚರಿತ್ರೆಗಳನ್ನ ಹೊತ್ತು ತಂದಿರುವೆ.

ನಿಮ್ಮ ಟಿಪ್ಪಣಿ ಬರೆಯಿರಿ

Create a free website or blog at WordPress.com.

Up ↑