ಮತ್ತೊಬ್ಬ ಗೆಳೆಯನ ಕವಿತೆ ಮೆಚ್ಚಿದವರಿಗೆ ಸಿದ್ಧು ದೇವರಮನಿಯ ಪರಿಚಯ ಇಲ್ಲಿದೆ. ಓದಿರದವರಿಗೂ…
ನನಗೆ ಸಿದ್ಧು ಪರಿಚಯವಾಗಿದ್ದು ಒನ್ ಅಂಡ್ ಓನ್ಲಿ ಹಂಗಾಮಾದ ಮೂಲಕ. ಅದೊಂದು ಪುಟ್ಟ ಪತ್ರಿಕೆಯ ಮೂಲಕ ನನಗಾದ ಲಾಭವದೆಷ್ಟೋ!? ಆ ಮೂಲಕ ಪರಿಚಯವಾದವರು ವೆಂಕಟ್ರಮಣ ಗೌಡ, ಜಿ.ಎನ್.ಮೋಹನ್, ಸಿದ್ಧು ದೇವರಮನಿ ಮತ್ತು ಅರುಣ್ ಜೋಳದಕೂಡ್ಲಿಗಿ. ಅಷ್ಟೇ ಅಲ್ಲ, ಸುಮಾರು ಐದಾರು ವರ್ಷ ಕಳೆದುಹೋಗಿದ್ದ ಮತ್ತೊಬ್ಬ ಗೆಳೆಯ ವಿಕ್ರಮ್ ವಿಸಾಜಿಯನ್ನು ಹುಡುಕಿಕೊಟ್ಟಿದ್ದೂ ಇದೇ ಹಂಗಾಮಾ.
ಈ ಸಿದ್ಧು ಎನ್ನುವ ಪುಣ್ಯಾತ್ಮನನ್ನು ನಾನು ನಾನು ನೋಡಿಲ್ಲ. ಪಕ್ಕಾ ವ್ಯವಹಾರಸ್ಥನಾಗಿರುವ ಈತ ಬೆಂಗಳೂರಿಗೆ ಬಂದರೂ ಸಿಗದೆ ಕೆಲಸ ಮುಗಿಸಿ ಓಡಿಹೋಗುತ್ತಾನಾದ್ದರಿಂದ ಭೇಟಿಯಾಗುವ ಅವಕಾಶವೂ ಸಿಕ್ಕಿಲ್ಲ. ಯಾವಾಗಲೂ ‘ಹೆಲಿಕಾಪ್ಟರಲ್ಲಿ ಬರ್ತಿದೀನ್ ನೋಡವ್ವ’ ಅನ್ನುತ್ತ, ಕೆಲಸ ಸಿಕ್ಕಿದ್ದಕ್ಕೊಂದು, ಉಫೀಟ್ ಬಿಡುಗಡೆಯಾಗಿದ್ದಕ್ಕೊಂದು, ಭಾಮಿನಿ ಷಟ್ಪದಿಗೊಂದು, ಅಂವ ನನ್ನ ಅಣ್ಣನ್ನ ಭೇಟಿಯಾಗಿದ್ದ ಖುಷಿಗೊಂದು.. ಹೀಗೆ ಸಾಕಷ್ಟು ಮಸಾಲೆದೋಸೆಗಳ ಲೆಕ್ಕವಿಟ್ಟಿದ್ದಾನೆ. ನಮ್ಮ ಭಾಗವತರು ಮಸಾಲೆ ದೋಸೆ ಅಂದಾಗಲೆಲ್ಲ ನನಗೆ ಸಿದ್ಧುವಿನ ನೆನಪಾಗುತ್ತಿರುತ್ತದೆ.
ಟೀನಾ, ಕವಿಯ ಪರಿಚಯ ಮಾಡಿಸು ಮಹರಾಯ್ತೀ ಅಂದಿದ್ದಾಳೆ. ಅಸಲಿಗೆ, ನನಗೇ ಆತನ ಪರಿಚಯ ಸಂಪೂರ್ಣವಾಗಿ ಇಲ್ಲ. ಅರು ವರ್ಷದ ಹಿಂದೊಮ್ಮೆ ಪ್ರತಿಷ್ಠಿತ ಪತ್ರಿಕೆಯ (ಹೆಸರು ಕನ್ಫ್ಯೂಸು) ಕವಿತೆ ಸ್ಫರ್ಧೆಯಲ್ಲಿ ಈತ ಬಹುಮಾನ ಪಡೆದಿದ್ದ. ಈಗ ಕವನ ಸಂಕಲನವೊಂದನ್ನು ಹೊರತರುವ ಚಿಂತನೆ ನಡೆಸುತ್ತಿರುವುದು ನಮ್ಮೆಲ್ಲರ ಸೌಭಾಗ್ಯ.
ಬಹಳ ದಿನಗಳಿಂದ ಹೇಳೀಹೇಳೀ, ಕೊನೆಗೂ ಒಂದು ಬ್ಲಾಗ್ ತೆರೆದಿದ್ದಾನೆ (ಅಂತೆ!). ಸಧ್ಯದಲ್ಲೇ ಅವನ ಲಿಂಕ್ ನನ್ನ ಬ್ಲಾಗ್ ರೋಲಿನಲ್ಲಿ ಕೊಡುತ್ತೇನೆ. ಮತ್ತಷ್ಟು ಚೆಂದದ ಕವಿತೆಗಳಿಗಾಗಿ ಅಲ್ಲಿಗೆ ಹೋಗಬಹುದು.
ಸಿದ್ಧು ದೇವರಮನಿಯ ‘ಆಯುಷ್ಯದ ಕೆಲ ದಿನಗಳನ್ನು ದಾನ ಮಾಡಿದ್ದೇನೆ’ ಕವಿತೆಯಿದೆಯಲ್ಲ, ಅದನ್ನವನು ಬರೆದ ಸಂದರ್ಭ ತೀರಾ ವಿಷಾದದ್ದು. ರಸ್ತೆ ಅಗಲೀಕರಣಕ್ಕಾಗಿ ಅವನ ಅಂಗಡಿ, ಮನೆ- ಮುಂಗಟ್ಟುಗಳನೆಲ್ಲ ಬುಲ್ಡೋಜರ್ರು ಸವರುತ್ತ ಸಾಗಿತಲ್ಲ, ಆಗ ಹುಟ್ಟಿದ್ದು. ಅಸಹನೆ, ಕೋಪ, ಹತಾಶೆಗಳು ಚಿಗಿಯಬೇಕಿದ್ದ ಹೊತ್ತಿನಲ್ಲಿ ಈ ಹುಡುಗ ಕವಿತೆಹುಟ್ಟಿಸಿಕೊಂಡು ಕುಳಿತಿದ್ದು ಸೋಜಿಗವಲ್ಲವೆ? ಅದೂ ಇಂತಹ ಮಾನವೀಯ ಮೌಲ್ಯದ ಕವಿತೆ… !
ಈ ಗೆಳೆಯನ ನೋವುಗಳದೆಷ್ಟಿವೆಯೋ ನನಗಂತೂ ಗೊತ್ತಿಲ್ಲ. ಅದನ್ನವನು ಯಾವತ್ತೂ ತೋರಿಸಿಕೊಂಡಿದ್ದೂ ಇಲ್ಲ. ಸದಾ ನಗುನಗುತ್ತಲೇ ಮಾತನಾಡುವ ಸಿದ್ಧು ದೇವರಮನಿ ಅನುಗಾಲವೂ ಹೀಗೇ ಇರಲಿ ಎಂದು ಹಾರೈಸುತ್ತಾ, ನನಗೆ ಗೊತ್ತಿಲ್ಲದ ಗೆಳೆಯನ ಪರಿಚಯವನ್ನು ಇಲ್ಲಿಗೆ ಮುಗಿಸುತ್ತಿದ್ದೇನೆ.

Siddu avara blog vilasa bega kodi, kaviteyannu navu odutteve.