ಹೀಗೊಂದು ಆಟದ ಪ್ರಸಂಗ…


 

ಥೈಯ್ಯ ಥೈಯ್ಯ ಥೈಯ್ಯ ತಾಂಗುಡಿತ ತಾಂಗುಡಿತ ಥೈ!
ನಾರೀ ಮಣಿಯೆ ಬಾರೇಮಣಿಯೆ ಬಾರೇಬಾ ಬಾರೇ

ಛೀ! ಪಾಪಿ!! ಸರಿ ದೂರ

ಬಾ ಬಾರೇಮುಖ ತೋರೇ

ದುರುಳ, ಸರಿ ದೂರ…!

ಕೀಚಕ ವಧೆ ಪ್ರಸಂಗ. ಮಂಜು ಭಾಗವತ ಗಂಟಲು ಕಿತ್ತುಕೊಂಡು ಹಾಡ್ತಿದ್ದ. ಶಾಮ ಪೂಜಾರಿಯ ಭರ್ಜರಿ ಕೀಚಕ ವೇಷ. ಅವನ ಕಾಕು, ಪಟ್ಟು, ಕುಣಿತಅಬ್ಬ!
ಅವನೆದುರು ಸ್ತ್ರೀ ವೇಷದ ದಾಮೋದರದಾಮೂ ಹುದುಗಿಹೋದಂತಿತ್ತು
.
ದಾಮೂ ಪೀಚಲು ಹುಡುಗ. ದನಿಯೂ ಕೀರಲು. ಸ್ತ್ರೀ ವೇಷಕ್ಕೆ ಹೇಳಿ ಮಾಡಿಸಿದ ಸಪೂರ ಸಪೂರ ಕೈಕಾಲು. ಬಳಕು ಮೈಕಟ್ಟು. ಬಿಳಿ ಬಣ್ಣ. ಅವನು ಸೈರಂಧ್ರಿ ಪಾತ್ರ ಕಟ್ಟಿದರೆ ಎಲ್ಲರೂ ಅಂವನ್ನ  ಬಾ ಬಾರೇ…. ಅಂತ ಹಾಡಿ ಛೇಢಿಸೋರೇ. ಅಷ್ಟು ಚೆಂದ.

ಶಾಮ ಪೂಜಾರಿ ಭಾರೀ ರಸಿಕ. ಮೇಳದ ಮಿಕ್ಕವರೆಲ್ಲ ಮನೆ ಮಠ ಅಂತ ಇದ್ದುಕೊಂಡಿದ್ದರೆ, ಶಾಮನಿಗೆ ಊರೆಲ್ಲಾ ಮನೆಮಕ್ಕಳು!
ರಂಗದ ಮೇಲೆ ಭಾರೀ ಕುಣೀತ. ಅವನ ಒಂದೊಂದು ಪಟ್ಟಿಗೂ ದಾಮೂ ಧಸಧಸನೆ ಉಸಿರು ಬಿಡುತ್ತಿದ್ದ. ಬೆವರುಬೆವರಾಗುತ್ತಿದ್ದ.

ನಾರೀ ಮಣಿಯೆ ಬಾರೇ
ಕೀಚಕ ಸೈರಂಧ್ರಿಗೆ ಮರುದಿನ ನರ್ತನ ಶಾಲೆಗೆ ಬರುವಂತೆ ಒತ್ತಾಯಿಸುತ್ತಿದ್ದ
.
ಶಾಮ ದಾಮೂವಿಗೆ ಕೊಟ್ಟಿದ್ದ ದಿನದ ಗಡುವು ಅಂದಿಗೆ ಮುಗಿದಿತ್ತು. ಕುಣಿತದ ತೆವಲಿಗೆ ಬಿದ್ದು, ಮನೆ ಬಿಟ್ಟು ಬಂದಿದ್ದ ದಾಮೂ ಯಾವ ಕಾರಣಕ್ಕೂ ಮನೆಗಂತೂ ಹೋಗುವ ಹಾಗಿರಲಿಲ್ಲ
.
ಶಾಮನ ಕೆಣಕುಗಣ್ಣು, ಅಸಹ್ಯದ ತುಟಿ, ಉಬ್ಬಿದ ಹೊಟ್ಟೆ, ಬೆವರು ನಾತ
….
ಥೂ! ಅಳುವೇ ಬಂತು ದಾಮುವಿಗೆ ರಂಗದ ಮೇಲೂ.

ನನ್ನ ಐವರು ಪತಿಯರು ದೇವ ಗಂಧರ್ವರು. ಅವರಿಗೆ ಹೇಳಿದರೇ….
ಸೈರಂಧ್ರಿ ರೋಪು ಹೊಡೀತಿದ್ದಳು
.
ಅವಳೊಳಗಿದ್ದ ದಾಮುವಿನ ತೊಳ್ಳೆ ನಡಗುತ್ತಿತ್ತು
.
ಗಂಡಸು ಗಂಡಸೊಂದಿಗೇ…! ಇಶ್ಶೀ ಅದೆಂಥದು? ಅದು ಹೇಗೆ
…?
ಅಂತೆಲ್ಲ ವಾಕರಿಸಿಕೊಂಡ
.
ಭೀಮ ಸೈರಂಧ್ರಿಯನ್ನು ಸಂತೈಸುತ್ತಿದ್ದದಾಮುವಿಗೆ ಯಾರು ದಿಕ್ಕು
?
ಶಾಮ ಜೊಲ್ಲು ಸುರಿಸುತ್ತಿದ್ದ
.
ಬೆಳಗು ಹರಿಯೋದೇ ಬೇಡಹೀಗೇ, ಇಲ್ಲೇ, ರಂಗದ ಮೇಲೇ

ಥೈಯ್ಯ ಥೈಯ್ಯ ಥೈಯ್ಯ
….
ಮಂಗಳ. ಇನ್ನೇನು ಆಟ ಮುಗೀತು.

ದಾಮೂಗೆ ಅಮಂಗಳ. ಈಗ ಶುರುವಾಗಲಿದೆ ಅವನ ಪಾಲಿನ ದೊಡ್ಡಾಟ
ಕೀಚಕ ಭೀಮನ ಕೈಲಿ ನೆಗೆದುಬಿದ್ದಿದ್ದ. ಶಾಮದಾಮುವಿನ ಟೆಂಟಲ್ಲಿ ನಿಂತಿದ್ದ
!
ನಿಶ್ಚಯ ಮಾಡಿಯೇ ಮೂಲೆಯಲ್ಲಿ ಕುಂತಿದ್ದ ದಾಮೂ ಧಿಗ್ಗಂತ ನೆಗೆದು ಶಾಮೂ ಕುತ್ತಿಗೆ ಗಿರಿದು ಹಿಡಿದ
.
ಶಾಮನ ತಲೆ ತಿರುಗಹತ್ತಿತು. ಅಂವ ಕಕ್ಕಾಬಿಕ್ಕಿಯಾಗಿ ನೋಡ್ತಲೇ ವಿಲವಿಲಾಂತ ಬಿದ್ದವ ದಾಮೂ.

ಛೀದುರುಳ. ನನ್ನ ಪತಿಯರು ದೇವಗಂಧರ್ವರು!- ಅಂತೆಲ್ಲ ವಟವಟಿಸ್ತಿದ್ದ. ಭಿಮ ಬರಲಿಲ್ಲ? ಹಾಂ? ವಿಷ ನುಂಗಿದೆ, ವಿಷ!
ಹಹ್ಹಾ ನಗು ನಗಲು ಹೋದ ದಾಮೂ. ಬಾಯಲ್ಲಿ ಬುರಬುರ ನೊರೆ
.
ಚಾಪೆಯ ಬದಿಯಲ್ಲಿ ವಿಷದ ಶೀಶೆ.

ನೂರು ಚಂಡೆ ಬಡಿದ ಸದ್ದುಶಾಮನ ಗಂಟಲಿನದ್ದು!
ಮೇಳಕ್ಕೆ ಮೇಳವನ್ನೇ ಎಬ್ಬಿಸಿದ. ಸಾರಾಯಿ ಮತ್ತು ಸರ್ರಂತ ಇಳಿದಿತ್ತು.

ಶಾಮ ಎಚ್ಚೆತ್ತ.
ಸರ್ಕಾರಿ ಆಸ್ಪತ್ರೆಯ ಮಂಚದ ಮೇಲೆ ಮಲಗಿದ್ದ ದಾಮುವಿನ ಪಕ್ಕದಲ್ಲವ ಮೂಸುಂಬಿ ಸುಲಿಯುತ್ತ ಕುಂತಿದ್ದ.

ದಾಮೂ ಸಾಯಲಿಲ್ಲ.
ಶಾಮನೂ ಬದುಕಿದ್ದ
.
ಒಳಗಿನ ಕೀಚಕ ಮಾತ್ರ ಭೀಮ ಕೊಲ್ಲದೇ ನೆಗೆದುಬಿದ್ದಿದ್ದ
.
ಆಟ ಮುಗಿದಿತ್ತು

 (November 22, 2007 at 2:58 am ರಂದು ಪೋಸ್ಟ್ ಮಾಡಿದ್ದ ಹಳೆ ಬರಹ)

 

One thought on “ಹೀಗೊಂದು ಆಟದ ಪ್ರಸಂಗ…

Add yours

ನಿಮ್ಮ ಟಿಪ್ಪಣಿ ಬರೆಯಿರಿ

Blog at WordPress.com.

Up ↑