ಭುವನೇಶ್ವರದಿಂದ ಬರೋಬ್ಬರಿ ನಾಲ್ಕು ಗಂಟೆ ತಡವಾಗಿ ಹೊರಟ ರೈಲು ಅಂತೂ ಮರು ದಿನ ಇಳಿ ಮಧ್ಯಾಹ್ನದ ಹೊತ್ತಿಗೆ ಕರ್ನಾಟಕದ ಅಂಚು ಮುಟ್ಟಿತು.
ಬಂಗಾರ ಪೇಟೆ, ಮಾಲೂರುಗಳೆಲ್ಲ ಹಾದು ಈ ಗೌಹಾಟಿ- ಬೆಂಗಳೂರು ಎಕ್ಸ್ ಪ್ರೆಸ್ಸು ಕೆ.ಆರ್.ಪುರದ ಸ್ಟೇಶನ್ನಿನಲ್ಲಿ ಒಂದು ಕ್ಷಣ ನಿಂತಿತು ನೋಡಿ…. ಆಆಆಆಆ………. ಖ್ಷೀ…….
ಉಹ್… ನನ್ನ ಹಾಳು ಇಂದ್ರಿಯಗಳಿಗೆ ಬೆಂಗಳೂರು ಬಂದಿದ್ದು ಗೊತ್ತಾಗಿಹೋಯ್ತು!

ಹತ್ತು ಮತ್ತೆರಡು ದಿನಗಳ ಕಾಲ ಸಾಸಿವೆ ಎಣ್ಣೆಯಲ್ಲೇ ಮುಳುಗೆದ್ದಿದ್ದರೂ ಹೊಟ್ಟೆ ಪಿಟ್ಟೆಂದಿರಲಿಲ್ಲ. ಮೂರು ಹೊತ್ತೂ ಆಲೂಗಡ್ಡೆ ತಿಂದಿದ್ದರೂ ಕೂದಲು ಕೊಂಕಿರಲಿಲ್ಲ. ಗಂಗೆಯಲ್ಲಿ, ಸಮುದ್ರದಲ್ಲಿ ಹೊರಳಾಡಿ ಬಂದಿದ್ದರೂ ಮೂಗು ನೆಂದಿರಲಿಲ್ಲ! ಇಷ್ಟೂ ದಿನ ಕರಾವಳಿಯ ಧಗೆಯಲ್ಲಿ ( ಅಲ್ಲಿ ಚಳಿಗಾಲ ಅಂತ ಅಲ್ಲಿನವರೆಲ್ಲ ಶಾಲು ಹೊದೆಯುತ್ತಿದ್ದರು ಗೊತ್ತಾ?) ಬೆಂದು ಬಂದಾಗಲೂ ತೆಪ್ಪಗಿದ್ದ ನರ ನಾಡಿಗಳು ಬೆಂಗಳೂರಿನ ಧೂಳು ಗಾಳಿ ಹೊಕ್ಕುತ್ತಿದ್ದ ಹಾಗೆ ಹೇಗೆ ಎಗರಿಬಿದ್ದವು ನೋಡಿ!?
ಅಂತೂ ಸುಖಕರ ಪ್ರಯಾಣ ಮುಗಿಸಿ ಬಂದ ನಾನೀಗ ಹುಷಾರು ತಪ್ಪಿ, ಮೂಗೊರೆಸಿಕೊಳ್ಳುತ್ತ ಆಫೀಸಲ್ಲಿ ಕುಂತಿದ್ದೇನೆ. ಅಲ್ಲಿದ್ದಷ್ಟೂ ದಿನ ‘ಈಸ್ಟ್ ಆರ್ ವೆಸ್ಟ್, ಬೆಂಗ್ಳೂರ್ ಇಸ್ ದ ಬೆಸ್ಟ್’ ಅಂತ ಹಾಡುತ್ತಿದ್ದ ನನ್ನ ಬಗ್ಗೆಯೇ ಗಂಭೀರವಾಗಿ ಚಿಂತಿಸುತ್ತಾ….
ಕಲ್ಕತ್ತಾಗೆ ಹೋಗ್ತಿರೋದು ಇದು ಎರಡನೆ ಸಾರ್ತಿಯಾದರೂ ಡೀಟೇಲಾಗಿ ನೋಡುವ ಅವಕಾಶ ಸಿಕ್ಕಿದ್ದು ಇದೇ ಮೊದಲು. ಜನರ ಗಿಜಿಬಿಜಿ, ಕಂಬಳಿಹುಳದ ಹಾಗೆ ರಸ್ತೆ ಮಧ್ಯ ಒಡುವ ಟ್ರಾಮು, ಗಲೀಜುಮಯ ಗಲ್ಲಿಗಳು, ಅಗಲಗಲ ಬೊಟ್ಟಿನ- ತುಂಬು ಸಿಂಧೂರದ ಹೆಂಗಸರು, ಮುದ್ದಾದ ಹುಡುಗರ, ಸೊಗಸಾದ ಭಾಷೆ, ಆಹಾ! ರಸಗುಲ್ಲಾ!! ಯಾವ ಪುಣ್ಯಾತ್ಮರೋ, ‘ದೇಶ ನೋಡು, ಕೋಶ ಓದು’ ಅಂದವರು…. ಎಷ್ಟು ನಿಜದ ಮಾತು ಹೇಳಿದಾರಲ್ವ? ನಮ್ಮದೇ ದೇಶದ ಬೇರೆಯದೇ ಬಗೆಯ ಆಚಾರ ವಿಚಾರಗಳ ಜನರ ಸಹವಾಸ ಕಟ್ಟಿಕೊಡುವ ಅನುಭವವನ್ನ ಅನುಭವಿಸಿಯೇ ತೀರಬೇಕು.
ನನಗದ್ಯಾಕೋ ಬಂಗಾಳದ ಬಗೆಗೊಂಥರಾ ಆಕರ್ಷಣೆ. ಹಾಗಂತಲೇ ಕಳೆದ ವರ್ಷ ಬಂಗಾಲಿ ಓದಲು- ಬರೆಯಲು ಕಲಿತಿದ್ದೆ. ಚಿಕ್ಕ ಮಕ್ಕಳು ಹೊಸತಾಗಿ ಓದು ಕಲಿತಾಗ ಮಾಡ್ತಾರಲ್ಲ ಹಾಗೆ- ಬಂಗಾಳದ ಹಾದಿ ಬೀದಿ ಸುತ್ತುವಾಗ ಅಂಗಡಿ ಬೋರ್ಡುಗಳ ಹೆಸರನ್ನ ಓದಿದ್ದೇ ಓದಿದ್ದು! ಜೊತೇಲಿದ್ದವರೆಲ್ಲ ‘ಭಲೇ’ ಎನ್ನುವಾಗ ಬೀಗಿದ್ದೇ ಬೀಗಿದ್ದು!
ಓಹ್! ಕೆಲವೊಂದಷ್ಟು ಹಳ್ಳಿಗಳನ್ನ ಕಾಲ್ನಡಿಗೆಯಲ್ಲಿ ತಿರುಗಿದ್ದು, ಹಳ್ಳಿಗರ ಮನೆ ಹೊಕ್ಕು ಊಟ ಮಾಡಿದ್ದು, ಕಂಡ ಕಂಡ ಕೆರೆಯಲ್ಲಿ ಎಮ್ಮೆಗಳ ಹಾಗೆ ಹಾರಿದ್ದು, ನೊಣಗಳ ಸಾಮ್ರಾಜ್ಯದಂತಿದ್ದ ದಾರಿಬದಿ ಹೋಟೆಲುಗಳಲ್ಲಿ ಪರೋಟಾ ತಿಂದು ಚಪ್ಪರಿಸಿದ್ದು ಅವೆಲ್ಲ ಮಜವೇ ಮಜ. ಈ ಎಲ್ಲ ಮನರಂಜನೆಯನ್ನು ಹಿಂದಿಕ್ಕಿ ರಾಮ ಕೃಷ್ಣಾಶ್ರಮದ ತಂಪು ನನ್ನನಪ್ಪಿ ಮೈದಡವಿ ಕಳಿಸಿತಲ್ಲ, ಅದರ ನವಿರು ಹಾಗೇ ಉಳಿದಿದೆ ಇನ್ನೂ. ಸಧ್ಯದ ಮಟ್ಟಿಗಂತೂ ಪರಮಹಂಸರ ಚಿಂತನೆಗಳು ನನ್ನ ಕೆಲವು ಭ್ರಮೆಗಳನ್ನ ಅಲುಗಾಡಿಸಿವೆ. ಕೆಲವು ಆಲೋಚನೆಗಳನ್ನ ಗಟ್ಟಿಗೊಳಿಸಿವೆ. ಮನಸ್ಸೆಂಬ ಮಹಾಕೋತಿ ನಿಂತಲ್ಲಿ ಎಷ್ಟು ದಿನ ನಿಂತೀತೋ ಯಾರಿಗೆ ಗೊತ್ತು?
ನಾವು ಹೋಗಿದ್ದು ಬರೀ ಕಲ್ಕತ್ತೆಗಲ್ಲ, ಒರಿಸ್ಸಾದ ಪುರಿ ಗೂ ಹೋಗಿದ್ವಿ. ಯಾಕಾದ್ರೂ ಹೋದೆವೋ ಅನ್ನಿಸಿದ್ದು ಸುಳ್ಳಲ್ಲ. ಇದನ್ನ ಹೇಳಿಕೊಳ್ಳುವಾಗ ನಾಚಿಕೆಯಿಂದ ತಲೆ ತಗ್ಗಿಹೋಗಿದೆ. ಒಂಥರಾ ಉಸಿರುಕಟ್ಟಿದ ಅನುಭವ. ಮುಂದೆ ಕೂಡ ನಾನು ಈ ಪುರುಷೋತ್ತಮ ಕ್ಷೇತ್ರದ ಬಗ್ಗೆ ಮಾತಾಡುವಾಗ ಹೀಗೇ ಕುಗ್ಗಿಹೋಗುತ್ತೇನೆ. ಈ ಬಗ್ಗೆ ವಿವರವಾಗಿ ಹೇಳಿಕೊಳ್ಳುವೆ. ಅದಕ್ಕೆ ಮುನ್ನ, ಅಂತಹ ಪ್ರಾಮಾನಿಕತೆ ನನಗಿದೆಯಾ? ಯೋಚಿಸಬೇಕಿದೆ. ಪ್ರಸಾದ ಕ್ಷೇತ್ರದಲ್ಲಿ ಭಗವಂತನ ಹೆಸರಲ್ಲಿ ಪಂಡಾಗಳು ನಡೆಸುವ ಲೂಟಿ, ಅವರ ಪರಮ ಕೊಳಕುತನಗಳೆಲ್ಲ ಹಾಗೇ ಕಣ್ಮುಂದೆ ಹಾದು ಹೋಗುತ್ತಿದೆ.
ಹೀಗೆ ಮನಸ್ಸು ಕಸಿವಿಸಿಗೊಂಡು ‘ಇಲ್ಲಿ ಬರಲೇ ಬಾರದಿತ್ತು’ ಅಂದುಕೊಳ್ತಿದ್ದ ನಮಗೆ ಮತ್ತೆ ಸಾಂತ್ವನ ನೀಡಿದ್ದು ರಾಮಕೃಷ್ಣಾಶ್ರಮವೇ. ಅದು, ಭುವನೇಶ್ವರದಲ್ಲಿ. ಕೊನಾರ್ಕ್ ನಲ್ಲಿ ಮತ್ತಷ್ಟು ತಲೆ ಬೇಯಿಸಿಕೊಂಡು, ಅತ್ಯದ್ಭುತ ಸೂರ್ಯ ದೇಗುಲದ ಅಂದವನ್ನು ಸವಿಯುತ್ತ, ಜೊತೆಜೊತೆಗೇ ಅದರ ಅವಸ್ಥೆಗೆ ಮರಗುತ್ತಾ ‘ದೇವಾಲಯಗಳ ನಗರ’ ಹೊಕ್ಕ ನಮಗೆ ಮತ್ತಷ್ಟು ಆಘಾತ ಕಾದಿತ್ತು. ‘ಮಂದಿರವಲ್ಲೇ ಕಟ್ಟುವೆವು’ ಅಂತ ಬೊಬ್ಬೆ ಹೊಡೆಯುವವರನ್ನು ಒಮ್ಮೆ ಇಲ್ಲಿಗೆ ಕರೆತಂದು, ‘ಇರೋದನ್ನ ನೆಟ್ಟಗಿಟ್ಟುಕೊಳ್ಳಿ ಮೊದಲು’ಅಂತ ಹೇಳಬೇಕೆನಿಸಿತು. ಅದಕ್ಕೆ ಮುನ್ನ, ಆ ದೇವಾಲಯಗಳೆಲ್ಲ ಮುಜರಾಯಿಯದೋ, ಖಾಸಗಿ ಆಡಳಿತದ್ದೋ ಅಂತ ತಿಳಿಯಬೇಕು. ಸರ್ಕಾರವನ್ನು ಬಯ್ದುಕೊಳ್ಳುವ ತೆವಲಂತೂ ನನಗೆ ಇದ್ದೇ ಇದೆ. ಅದು ಸುಲಭ ಕೂಡ. ಆದರೆ, ಈ ದೇವಾಲಯಗಳೇನಾದರೂ ಖಾಸಗಿ ನಿರ್ವಹಣೆಗೆ ಒಳಪಟ್ಟಿದೆಯೆಂದಾದರೆ, ಅದನ್ನು ನಂಬಿ ಅರಗಿಸಿಕೊಳ್ಳುವುದು ಕಡು ಕಷ್ಟ.
ಇರಲಿ. ಹೀಗೆ ತಲೆ ಕೆಡಿಸಿಕೊಂಡು ಸುತ್ತುತ್ತಿದ್ದ ನಮಗೆ ಅಲ್ಲಿನ ಗುಹಾಂತರ ದೇವಾಲಯಗಳು ಖುಷಿ ಕೊಟ್ಟವು. ಧವಳಗಿರಿಯ ಬುದ್ಧ ಮೂರ್ತಿಗಳು ತಂಪೂಡಿದವು. ಭುವನೇಶ್ವರದ ರಾಮಕೃಷ್ಣಾಶ್ರಮದಲ್ಲಿ ಕಳೆದ ಮತ್ತೆರಡು ದಿನಗಳು ಶಾಂತಿ ತುಂಬಿದವು.
ಹೀಗೆ ಒಟ್ಟು ಬೇಲೂರು ಮಠ, ದಕ್ಷಿಣೇಶ್ವರ, ಜಯರಾಂಬಾಟಿ, ಕಾಮಾರಪುಕುರ ಎಂದೆಲ್ಲ ಆಶ್ರಮಗಳ ತೆಕ್ಕೆಯಲ್ಲಿ ಇದ್ದೆದ್ದು ಬಂದ ನನಗೆ-
ಈ ಆಫೀಸು, ಟ್ರಾಫಿಕ್ಕು, ಮನೆಯಲ್ಲಿ ಸತ್ತು ಬಿದ್ದಿದ್ದ ಜಿರಳೆಗಳು, ಬಾರದ ನಲ್ಲಿ ನೀರು, ಅಂಗಡಿ ಮುಚ್ಚಿರುವ ಧೋಬಿ, ಅಡುಗೆ ಮನೆಯ ಅನಿವಾರ್ಯತೆಗಳೆಲ್ಲ ಮುತ್ತಿಗೆ ಹಾಕಿ ಹೈರಾನು ಮಾಡ್ತಿವೆ. ಆದರೂ, ಎಷ್ಟು ಮಾತು ಉಳಿದು ಹೋಗಿವೆ!?
ಪ.ಬಂಗಾಳದ ರಾಜಕೀಯ, ಹಾಳು ಸುರಿಯುವ ಗಲ್ಲಿಗಳು, ಇಪ್ಪತ್ತು ದಶಕ ಹಿಂದಿರುವ ಊರುಗಳು, ಗ್ರಾಮೀಣ ಉತ್ಪನ್ನಗಳಿಗೆ ಅಲ್ಲಿ ದೊರೆಯುತ್ತಿರುವ ಪ್ರೋತ್ಸಾಹ- ನಮಗೆ ಮಾದರಿಯಾಗಬಲ್ಲ ಮತ್ತಷ್ಟು ಆ ಬಗೆಯ ಸಂಗತಿಗಳು…
ಭಗವಂತನಿಲ್ಲದ ದೇವಾಲಯಗಳು, ಧನದಾಹಿ- ಸೋಮಾರಿ ಪಂಡಾಗಳು, ಕೊನಾರ್ಕ್ ದೇವಾಲಯದ ವಿಸ್ಮಯ- ದುರವಸ್ಥೆ…
ಇವೆಲ್ಲದರ ನಡುವೆ, ಮರಳುವಾಗ ಟಿಕೆಟ್ ಕನ್ಫರ್ಮ್ ಆಗದೆ ಅನಿರೀಕ್ಷಿತವಾಗಿ ದೊರೆತ ರೈಲು ಪ್ರಯಾಣದ ರಂಜಕ ಅನುಭವಗಳು ಮತ್ತು ನನಗೆ ಸಿಕ್ಕ ಕಾದಂಬರಿಯ ಎಳೆ!
ಇವನ್ನೆಲ್ಲ ಹೇಳಲೇಬೇಕು, ಮುಂದೆಂದಾದರೂ…

Welcome back Chetana-ji,
nimma barahagalu illade ondu tara sappe anisutittu. eega odi tumba kushiyaytu. kolkatta bagge innashtu bariyiri o.k.
GURU
ಓದುತ್ತಾ ಇದ್ದಂತೆ ಅದೂ ಕೂಡ ಎಷ್ಟೆಲ್ಲಾ ಭಾರತ ಅನ್ನಿಸಿಬಿಟ್ಟಿತು.. ಹ್ಮ್..
ಚೇತನಾ,
ನೀವು ಪುರಿ ದೇವಾಲಯದ ಬಗ್ಗೆ ಹೇಳಿದ್ದು ನನ್ನ ಅನುಭವಕ್ಕೂ ಬ೦ದಿದೆ.ನಾನೊಮ್ಮೆ ಭುವನೇಶ್ವರದ ಲಿ೦ಗರಾಜ ಮ೦ದಿರಕ್ಕೆ ಹೋಗಿ ಪ೦ಡಾಗಳ ಭಯೋತ್ಪಾದಕತೆಗೆ ಹೇಸಿ ಬ೦ದಿದ್ದೆ.ಜೊತೆಗಿದ್ದ ನನ್ನ ಅಲ್ಲಿಯವಳೇ ಆದ ಗೆಳತಿ ಇದನ್ನೆಲ್ಲ ಅಸಹಾಯಕತೆಯಿ೦ದ ನೋಡುತ್ತಿದ್ದಳು ಅಷ್ಟೆ. ನಮ್ಮ ದೇವಾಲಯಗಳು ಎಷ್ಟೋ ಮೇಲು, ಅಲ್ಲವಾ?
ಬಂಗಾಳದ ಬಗ್ಗೆ ಕೃಷ್ಣಾನಂದ ಕಾಮತರು ಪುಸ್ತಿಕೆಯನ್ನ ಬರೆದಿದ್ದಾರೆ. ಹೆಸರು ವಂಗದರ್ಶನ ಅಂತ. ೭೦ರ ದಶಕದಲ್ಲಿ ಅಲ್ಲಿ ಅವರು ಹೇಳಿರುವ ಸಂಗತಿಗಳಿಗೂ ಈಗಿನ ಸಂಗತಿಗಳಿಗೂ ಒಂಚೂರೂ ವ್ಯತ್ಯಾಸಗಳಿರುವಂತಿಲ್ಲ ಅನ್ನಿಸುತ್ತಿದೆ ನಿಮ್ಮ ಲೇಖನ ನೋಡಿದರೆ.
ಪ.ಬಂಗಾಳ – ‘ಕೆಂಪುನೆಲ’ ಹಾಗೇನೇ ಉಳಿದುಬಿಟ್ಟಿದೆಯಾ..?
ನೀವು ಹೇಳ್ಬೇಕು. ನಾವಂತೂ ಕಾತರರಾಗಿದ್ದೇವೆ. ಹೊಸತನ್ನ ಓದಲಿಕ್ಕೆ.
ಗಣೇಶ್.ಕೆ
ಮತ್ತೂ ತೂಕದ ಅನುಭವ ಮತ್ತು ಯೋಚನೆಗಳೊಟ್ಟಿಗೆ ಬಂದಿಳಿದಿರುವ ಚೇತನಾ ಅವರೇ
ಆಆಆಆಆ………. ಖ್ಷೀ.. ನಂಬೆಂಗ್ಳೂರ್ಗೆ ಸ್ವಾಗತ.. 🙂
ಒಳ್ಳೆ ಪಂಡಾಗಳು.. ಕಾರಂತರಂತೂ ತಮ್ಮ ಆತ್ಮಕಥನದಲ್ಲಿ ಬೈದಿದ್ದೇ ಬೈದಿದ್ದಿದೆ..
ನಿಮ್ಮ ಕಿವಿ-ಕಣ್ಣಿನ ಅನುಭವಗಳನ್ನ ನಿಮ್ಮ ರೀತಿಯಲ್ಲಿ ಕೇಳೋದು ನಮಗೆ ಚೆಂದ..
ಕಾಯುತ್ತಾ..
ದಿ ಡಾನ್ [ಆಫಿಸಲ್ಲಿ ನನ್ನ ಒಂದು ದಿನದ ಗೆಟ್ಟಪ್ಪಿಗೆ ಕಲೀಗ್ಸು ಕೊಟ್ಟ ಸಫಿಕ್ಸು :)]
Oh!! you are back :-))
ಹೌದಪ್ಪ… ನಂಗಂತೂ ಎಲ್ಲವನ್ನೂ ನಿಮ್ಗಳ ಹತ್ರ ಹೇಳ್ಕೊಂಡ್ರೇನೇ ಸಮಾಧಾನ. ಅಲ್ಲಿನ ಒಂದಷ್ಟೂ ಫೋಟೋಗಳೂ ಇವೆ. 1942 ಮಾಡೆಲಿನ ಬಸ್ಸುಗಳು, ಹಳದಿ ಬಲ್ಬುಗಳು, ಹಲಗೆ ಗೋಡೆಯ ಮನೆಗಳು… ಅಬ್ಬಬ್ಬಾ…
ಅಲ್ಲೇ ಊರಿಂದೂರಿಗೆ ಬಸ್ಸಲ್ಲಿ, ಟ್ಯಾಕ್ಸಿಯಲ್ಲಿ ಪ್ರಯಾಣಿಸುವಾಗ ನಮಗೆಲ್ಲ ಬಾಯಿಗೆ ಬಂದಿದ್ದು ಒಂದೇ ಹಾಡು; “ಎ ಲಾಲ್ ರಂಗ್… ಕಬ್ ಮುಝೆ ಛೋಡೆಗಾ…!?”
ಡಾನ್ ಮಹಾಶಯರೇ, ನಿಮಗೆ ಪ. ಬಂಗಾಳದಲ್ಲಿ ಕೆಲಸ ಕಡಿಮೆ! (ಎಲ್ಲಾ ಥರದಲ್ಲೂ!!)
ಚೇತನಾರವರೇ,
ಪಶ್ಚಿಮ ಬಂಗಾಳದ ಒಂದು ಜನ-ಜೀವನದ ಎಳೆಯನ್ನು ನಮ್ಮೆದುರು ಹರವಿತ್ತಿದ್ದಕ್ಕೆ, ಧನ್ಯವಾದಗಳು.
-ರಾಜೇಶ್ ಮಂಜುನಾಥ್
ಪುರಿ ನೋಡಿಲ್ಲ ನಾನು – ಕಾಶಿಯಲ್ಲೂ ಈ ಕಾಟ ಇದ್ದೇ ಇದೆ.
ನಾನು ಕಾಶಿಗೆ ಹೋದಾಗ ಗಂಗೆ ಪೂರ್ತಿ ಪ್ರವಾಹದಲ್ಲಿದ್ದಳು. ದಶಾಶ್ವಮೇಧ ಘಾಟ್ ಪೂರ್ತಿ ಮುಳುಗಿ, ಊರೊಳಗೇ ನೀರು ನುಗ್ಗಿತ್ತು, ನೀರಿನಲ್ಲಿ ತೇಲುವ ಅರೆಸುಟ್ಟ ದೇಹಗಳನ್ನು ನೋಡಿದಮೇಲಂತೂ ಈ ಸಂಪತ್ತಿಗೆ ಕಾಶಿಗೆ ಬರಬೇಕೆ ಅಂತ ಅನ್ನಿಸಿದ್ದಂತೂ ನಿಜ.
..ninna pravaasada baraha odide.chenda annisitu.prati pravaasi taanavu nodugara kannalli hosadaagutte antare,antaha hosatannu ninna barahadalli torisiddi, aadare ee pravaasi taanagalannu kevala ramyvaagi nodi komalagolisibidutteveno…adara krwryada mukha ello mareyaaguteno ansutte. athava antahavugalannu pravaasi taanagale mucchittukolluttaveyeno.anta bhaya aaytu.
ರಾಜೇಶ್, ಥ್ಯಾಂಕ್ಯೂ.
ನೀಲಾಂಜನರೇ, ಮುಂದಿನ ವರ್ಷ ಕಾಶಿಗೆ ಹೋಗಬೇಕೆಂದಿದ್ದೇವಲ್ಲ!?
ಅರುಣ,
ಇಲ್ಲ…. ಈ ತಾಣಗಳ ಮತ್ತೊಂದು ಮುಖ ನಾನು ಖಂಡಿತ ಬರೆಯುವವಳಿದ್ದೀನಿ. ವಿಶೇಷವಾಗಿ ದೇವರ ಹೆಸರಲ್ಲಿ ನಡೆಯುವ ಸುಲಿಗೆಯ ಬಗ್ಗೆ.
ಉಳಿದಂತೆ, ಪ.ಬಂಗಾಳದ ದುರವಸ್ಥೆಯ ಬಗ್ಗೆ, ಅಲ್ಲಿನ ಜನ ಸಾಮಾನ್ಯರನ್ನು ಮಾತಾಡಿಸಿ ತಿಳಿದ ಸಂಗತಿಗಳ ಬಗ್ಗೆ ಕೂದ ಬರೆಯಬೇಕೆಂದಿದೆ. ಅದೊಮ್ದು ದೊಡ್ಡ ಕ್ಯಾನ್ವಾಸು. ವ್ಯವಸ್ಥಿತವಾಗಿ ಬರೆಯಬೇಕು, ಶಿಸ್ತಿನಿಂದ ಬರೆಯಬೇಕು ಅಂದುಕೊಂಡಿದ್ದೇನೆ. ಅದಕ್ಕೇ, ಕಾಲ ಮಿತಿ ಇಟ್ಟುಕೊಂಡಿಲ್ಲ.
ಇನ್ನು, ರಾಮ ಕೃಷ್ಣಶ್ರಮದ ಯಾವ ಮೂಲೆಯಲ್ಲೂ ಆಕ್ಷೇಪದ ಸಂಗತಿ ಹುಡುಕಿದರೂ ಕಾಣದು ಬಿಡು.
ನಲ್ಮೆ,
ಚೇತನಾ
ಪರವಾಗಿಲ್ಲ 🙂 ಹೋಗಿ ಬನ್ನಿ!
ಕಾಶಿಯಲ್ಲಿ ಒಂದೆರಡು ವಿಷಯಗಳು ಮನಸ್ಸನ್ನು ಸೆಳೆದವು.
೧. ಭಾಸ ಕಾಳಿದಾಸನ ಶೈಲಿಯಲ್ಲಿ ಮಾತಾಡುವ ಆಟೋ ಚಾಲಕರು
“ಸ್ಥಾನ್ ಗ್ರಹಣ್ ಕೀಜಿಯೇ – ಅಭೀ ಪ್ರಸ್ಥಾನ್ ಕರೇಂಗೇ” ಮೊದಲಾಗಿ.
೨. ಸಾರನಾಥದ ಸ್ಮಾರಕಗಳು – ಯಾವುದೇ ಕಾರಣಕ್ಕೂ ತಪ್ಪಿಸಲಾಗದ್ದಲ್ಲ
ಇನ್ನು ವಿಶ್ವನಾಥನ ದರ್ಶನಕ್ಕೆ ಹೋಗುವಾಗಲೇ ಜ್ಞಾನವಾಪಿಯ ದರ್ಶನ ನಿಮಗೆ ತಾನೇತಾನಾಗೇ ಆಗುತ್ತೆ.
ಕೌಶಾಂಬಿ ಕೂಡ ಹತ್ತಿರದಲ್ಲಿದೆ ಎಂದು ಕೇಳಿದ್ದೇನೆ. ನಾನು ಹೋಗಲಾಗಲಿಲ್ಲ.
-ನೀಲಾಂಜನ
nange thumbaa hoTTekicchaagtide, idu nanna dream trip! yaako chikkavaLiddaaginda nanagU bangali huchchu…aaga Odida ramakrishnashramada makkaLa publicationso, anuvaadita bengali kadambarigaLo, krantikarigaLa kathegaLo, allina sweetso, bengal cottonno hingE aakarshanegaLa paTTi nannadu! 10 varshada keLage hogiddaaga thogonDidda 2 rabindra sangeet albumgaLinda bengali script kaltubiTTidde! hmmm…nimm haage allina haLLi-paLLi sutthi hattiradinda allina baduku nODo, raste badi parota, loochi, jilebi thinnO kanasu bahaLa dindadinda ide, yavattu nanasaaguttO!(nimm hatra travel tips thogoteeni, aa kaala bandaaga!:)) neevantU hoTTe ursibiTri!! detailaagi bega bareeri
Sree…
I LOVE YOU!!
Khanditaaa…
A kAla bEga barli anta hAraisteeni. Okay na?
nalme,
Chetana