ಸಂಕೋಚದಿಂದಲೇ….


ಹೌದಲ್ಲ? ನಾನೂ ನೆರೂದನ ಕವಿತೆ ಅನುವಾದ ಮಾಡಿದೀನಿ ಅಂತ ಹೇಳ್ಕೊಂಡು ಅದನ್ನ ಹಾಕದೆ ಹೋದರೆ ತಲೆತಪ್ಪಿಸ್ಕೊಂಡ ಹಾಗೆ ಆಗುತ್ತೇನೋ? ಅದಕ್ಕೇ, ಸಂಕೋಚದಿಂದಲೇ ಇಲ್ಲಿ ಹಾಕ್ತಿದೇನೆ. ಈಗಾಗಲೇ ಟೀನಾ ಮತ್ತು ಮಹೇಶ್ ಅನುವಾದಗಳನ್ನ ಓದಿದೀರಲ್ಲ? ನಿಮ್ಮಲ್ಲೂ ಯಾರಾದರೂ ಇದೇ ಕವಿತೆಯನ್ನ ಅನುವಾದಿಸಿದ್ದರೆ ದಯವಿಟ್ಟು ನಮ್ಮ ಜೊತೆ ಹಂಚಿಕೊಳ್ಳಿ. ನಿಸಾರರು ಮಾಡಿರುವರೆಂದು ಕೇಳಿದ್ದೇನೆ. ಯಾರಲ್ಲಾದರೂ ಅದರ ಪ್ರತಿ ಇದ್ದರೆ ಪೋಸ್ಟ್ ಮಾಡಬೇಕೆಂದು ವಿನಂತಿ.

ಇಂದಿನಿರುಳು ನಾ ಬರೆಯಲಿರುವೆ ಅತಿ ವಿಷಾದದ ಸಾಲುಗಳ…

ಇಂದಿನಿರುಳು  ನಾ ಬರೆಯಲಿರುವೆ
ಅತಿ ವಿಷಾದದ ಸಾಲುಗಳ.
ಬರೆಯಲಿರುವೆ ಹೀಗೆ,
“ ಈ ರಾತ್ರಿ ನಕ್ಷತ್ರಗಳಿಂದ ತುಂಬಿ ಹೋಗಿದೆ.
ಮತ್ತು ನಕ್ಷತ್ರಗಳು,
ನೀಲಿಗಟ್ಟಿ ದೂರದಲ್ಲಿ ನಡಗುತ್ತಿವೆ”

ರಾತ್ರಿಯ ಗಾಳಿ ಅಕಾಶದಲ್ಲಿ
ಸುಳಿಸುತ್ತಿ ಹಾಡುತ್ತಿದೆ.

ಇಂದಿನಿರುಳು ನಾ ಬರೆಯಲಿರುವೆ
ಅತಿ ವಿಷಾದದ ಸಾಲುಗಳ.
ನಾನವಳ ಮುದ್ದಿಸಿದ್ದೆ,
ಕೆಲವೊಮ್ಮೆ ಅವಳು ಕೂಡ.

ಇಂಥದ್ದೇ ರಾತ್ರಿಗಳಲ್ಲಿ
ಅವಳಿದ್ದಳು ನನ್ನ ತೋಳಲ್ಲಿ.
ಅನಂತ ಆಕಾಶದಡಿಯಲ್ಲಿ
ಅವಳ
ನಾ ಲೆಕ್ಕವಿಡದೆ ಚುಂಬಿಸಿದ್ದೆ.

ಅವಳು ನನ್ನ ಮುದ್ದಿಸಿದ್ದಳು.
ಕೆಲವು ಬಾರಿ ನಾನವಳ ಮುದ್ದಿಸಿದ್ದೆ.
ಅವಳ ವಿಶಾಲ, ನಿಶ್ಚಲ ಕಣ್ಣುಗಳ
ನಾ ಪ್ರೀತಿಸದೆ ಇರಬಹುದಿತ್ತಾದರೂ ಹೇಗೆ?

ಇಂದಿನಿರುಳು ನಾ ಬರೆಯಲಿರುವೆ
ಅತಿ ವಿಷಾದದ ಸಾಲುಗಳ.
ಆಕೆ ನನ್ನೊಡನಿಲ್ಲವೆಂದು ಯೋಚಿಸಲು,
ಅವಳ ನಾ ಕಳಕೊಂಡೆನೆಂದು ಭಾವಿಸಲು.
ಅವಳಿಲ್ಲದೆ ಮತ್ತೂ ದಟ್ಟವಾಗಿರುವ
ಈ ಗಾಢ ರಾತ್ರಿಯ ಸದ್ದು ಕೇಳಲು.

ಕವಿತೆಯ ಸಾಲು ಒಳಗೆ ಹನಿಯುತ್ತಿದೆ ಹೀಗೆ,
ಹುಲ್ಲಿನಲಗಿನ ಮೇಲೆ ಇಬ್ಬನಿ ಹನಿದ ಹಾಗೆ.

ನನ್ನ ಪ್ರೀತಿ,
ಅವಳನುಳಿಸಿಕೊಳ್ಳಲಾಗಲಿಲ್ಲ.
ಸಂಗತಿ ಅದಲ್ಲ,
ರಾತ್ರಿ- ನಕ್ಷತ್ರಗಳಿಂದ ತುಂಬಿಹೋಗಿದೆ
ಅವಳೆನ್ನ ಬಳಿಯಿಲ್ಲ.

ದೂರದಲ್ಲಿ ಯಾರದೋ ಗುನುಗು,
ದೂರದೂರದಲ್ಲಿ…
ಅವಳಿಲ್ಲದೇ ನಾನು ಕಳೆದುಹೋಗಿದ್ದೇನೆ.
ಸನಿಹಕ್ಕೆ ಕರೆತರಲು ಅವಳನ್ನು,
ಹುಡುಕುತ್ತಿವೆ ಕಣ್ಣು ಅವಳನ್ನು.
ಹೃದಯ ಹುಡುಕುತ್ತಿದೆ ಅವಳನ್ನು…
ಆದರವಳು ನನ್ನೊಂದಿಗಿಲ್ಲ.

ಇದು ಮರಗಳನ್ನ ಬಿಳುಚುಗಟ್ಟಿಸುವ
ಅದೇ ರಾತ್ರಿ.
ನಾವು,
ನಾವಾಗಿದ್ದ ನಾವು-
ಅದೇ ನಾವಾಗಿ ಈಗ ಉಳಿದಿಲ್ಲ.

ಈಗ ನಾನವಳ ಪ್ರೀತಿಸುತ್ತಿಲ್ಲ.
ನಿಜ,
ಆದರೆ ನಾನವಳ ಅದೆಷ್ಟು ಪ್ರೀತಿಸಿದ್ದೆ!
ಅವಳ ಕಿವಿ ಸವರಲು ನನ್ನ ದನಿ
ಗಾಳಿಯನ್ನ ಹುಡುಕುತ್ತಿತ್ತು!!

ಬೇರೆಯವರ ಸೊತ್ತು…
ಆಗಬಹುದವಳು ಬೇರೆಯವರ ಸೊತ್ತು.
ಒಂದೊಮ್ಮೆ ಅವಳೆನ್ನ
ಮುತ್ತುಗಳ ಸೊತ್ತಾಗಿದ್ದ ಹಾಗೆ-
ಅವಳ ದನಿ, ಹಗುರ ಮೈ,
ಅವಳ ಅನಂತ ಕಣ್ಣುಗಳು…

ಈಗ ನಾನವಳ ಪ್ರೀತಿಸುತ್ತಿಲ್ಲ,
ನಿಜ.
ಆದರೆ,
ಪ್ರೀತಿಸುತ್ತಲೂ ಇರಬಹುದೇನೋ ಬಹುಶಃ
ಪ್ರೀತಿಯ ದಾರಿ ಚಿಕ್ಕದು, ಮರೆವು ಬಲು ದೂರ.

ಇಂಥದೇ ರಾತ್ರಿಗಳಲ್ಲಿ,
ಅವಳಿದ್ದಳು ನನ್ನ ತೋಳಲ್ಲಿ.
ಅದಕ್ಕೇ, ಅವಳಿಲ್ಲದೆ ನಾನು ಕಳೆದುಹೋಗಿರುವೆ.
ಇದು,
ಅವಳೂಡುವ ಕೊನೆಯ ನೋವಾಗಿದ್ದರೂ ಸರಿ,
ಅವಳಿಗಾಗಿ ನಾ ಬರೆವ ಕೊನೆಯ ಕವಿತೆಯಾಗಿದ್ದರೂ ಸರಿ…

3 thoughts on “ಸಂಕೋಚದಿಂದಲೇ….

Add yours

ನಿಮ್ಮ ಟಿಪ್ಪಣಿ ಬರೆಯಿರಿ

Blog at WordPress.com.

Up ↑