ಪ್ರಜಾಪ್ರಭುತ್ವವಿರುವ ಈ ಹೊತ್ತಿನಲ್ಲೂ ಹೀಗೆ ಯಾವುದೋ ಒಂದು ಪಡೆ ತನಗೆ ಸೇರದೇ ಹೋಗುವ ಸಂಗತಿಯನ್ನ ಈ ಪರಿಯ ಹಿಂಸೆಯ ಮೂಲಕ ವಿರೋಧಿಸತ್ತೆ ಅಂದ್ರೆ, ಪ್ರಜಾಪ್ರಭುತ್ವ ಯಾಕೆ ಬೇಕು? ಈ ಜನರಿಗೆ ಸಂಸ್ಕೃತಿ ರಕ್ಷಣೆಯ ಗುತ್ತಿಗೆ ಕೊಟ್ಟವರಾದರೂ ಯಾರು? ಇದು ರಾಮಸೇನೆಗೆ ಮಾತ್ರ ಹೇಳುತ್ತಿರುವ ಮಾತಲ್ಲ. ಇದು, ಶಿವಸೇನೆಗೂ ಅನ್ವಯವಾಗುವಂಥದ್ದು, ಕ.ರ.ವೇ ಗೂ ಅನ್ವಯವಾಗುವಂಥದ್ದು. ಧರ್ಮಾಂಧತೆಯಷ್ಟೇ ಭಾಷಾಂಧತೆ- ರಾಷ್ಟ್ರಾಂಧತೆಗಳೂ ಅಪಾಯಕಾರಿ.
ಈ ಘಟನೆ ಕುರಿತು ಬರೆದಿರುವ ಇತರ ಬ್ಲಾಗ್ಗೆಳೆಯರು: ಸಂಕೇತ್, ದಾರಾಶಿಕೋ, ಟೀನಾ. ಈ ಬ್ಲಾಗುಗಳಲ್ಲಿ ನಾವು ಚರ್ಚಿಸಬಹುದಾದ ಬೇರೆ ಬೇರೆ ಆಯಾಮಗಳಿವೆ. ಒಮ್ಮೆ ನೋಡಿ ಬನ್ನಿ… ಈ ಕುರಿತು ಬರೆದ ಇತರ ಲೇಖನಗಳಿದ್ದರೆ ದಯವಿಟ್ಟು ತಿಳಿಸಿ.
ಅವಳೊಬ್ಬ ಪುಟ್ಟ ಹುಡುಗಿ.
ದೂರದೂರಲ್ಲಿ ಓದುತ್ತಿದ್ದವಳು ರಜೆಗೆಂದು ಶ್ರೀನಗರಕ್ಕೆ ಬಂದಿದ್ದಳು. ಹೊತ್ತು ಕಳೀಬೇಕಲ್ಲ? ಮನೆಯಲ್ಲಿದ್ದ ಸೈಕಲ್ಲು ತುಳಿದುಕೊಂಡು ಊರು ಸುತ್ತಿದಳು. ಅದೆಲ್ಲಿದ್ದನೋ ಅವಳ ಚಿಕ್ಕಪ್ಪ? ಸೈಕಲ್ಲು ತುಳೀತಿದ್ದ ಹುಡುಗಿಯ ತೊಡೆಗೆ ಗುಂಡು ಹೊಡೆದ. ಅಷ್ಟೇ… ಪುಟ್ಟ ಜೀವ ಉರುಳಿ ಬಿತ್ತು.
ಈ ಚಿಕ್ಕಪ್ಪ ಅವಳನ್ನು ಕೊಂದಿದ್ದು ಯಾಕೆ ಗೊತ್ತಾ?
ಆಕೆ ಜೀನ್ಸ್ ತೊಟ್ಟಿದ್ದಳಲ್ಲ, ಅದಕ್ಕೆ!
ತಾಲಿಬಾನ್!!
ಇಷ್ಟು ಹೇಳಿದರೆ ಸಾಕಲ್ವೆ? ನೂರೆಂಟು ಭೀಭತ್ಸಗಳು ಕಣ್ಮುಂದೆ ಸುಳಿದು ಹೋಗುತ್ತಲ್ವೇ?
ಲಿಪ್‌ಸ್ಟಿಕ್ಕು ಹಚ್ಚಿಕೊಂಡ ಹುಡುಗಿಯ ತುಟಿ ಹರಿದಿದ್ದು, ಪರಕೀಯನೊಟ್ಟಿಗೆ ಮಾತಾಡಿದವಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದು, ಮಾಡ್ ಆಗಿ ಕಾಣಿಸ್ಕೊಂಡ ಹೆಣ್ಮಕ್ಕಳನ್ನ ನಡು ಬೀದಿಯಲ್ಲಿ ಹಿಡಿದು ಜಪ್ಪಿದ್ದು ॒ಇತ್ಯಾದಿಗಳೆಲ್ಲ ಮನಸಲ್ಲಿ ಪೆರೇಡು ಮಾಡಿದವು ತಾನೆ?
ಶುರುವಲ್ಲಿ ಪುಟಾಣಿ ಹುಡುಗಿಯ ಕಥೆ ಹೇಳಿದೆನಲ್ಲ? ಅದು ಸತ್ಯ ಘಟನೆ. ಕಾಶ್ಮೀರದ ಶ್ರೀನಗರದಲ್ಲೇ ನಡೆದಿದ್ದು. ಮತಾಂಧ ಚಿಕ್ಕಪ್ಪನ ಕೈಲಿ ಹುಡುಗಿ ಸತ್ತಿದ್ದು…
~
ನನಗೊಂದು ಘಮಂಡ್ ಇತ್ತು. ನಿಜವಾಗ್ಲೂ ಇತ್ತು, ಇದೆ… ಅದು, ನಾನು ‘ಹಿಂದೂ’ ಅನ್ನುವ ಘಮಂಡ್. ನಮ್ಮಲ್ಲಿ ಸಂಸ್ಕೃತಿ ಉಳಿಸುವ ನೆಪದಲ್ಲಿ, ಧರ್ಮ ಉಳಿಸುವ ನೆಪದಲ್ಲಿ ಹೆಣ್ಮಕ್ಕಳ ಮೈ ಕೈ ಮುಟ್ಟೋದಿಲ್ಲ, ಅವಮಾನಿಸೋದಿಲ್ಲ ಅಂತೆಲ್ಲ ನನ್ನ ವಾದವಾಗಿತ್ತು ( ಕೆಲವು ಅಪವಾದಗಳ ಹೊರತಾಗಿ). ಗಂಧದ ಮರಕ್ಕೂ ವರಳೆಯ ಕಾಟ ಇರುತ್ತದೆ ಅನ್ನೋದು ಯಾಕೆ ಹೊಳೆದಿರಲಿಲ್ವೋ? ಸನಾತನ ವಟ ವೃಕ್ಷಕ್ಕೆ ಈಗ ವಿಷ ಕ್ರಿಮಿಗಳು ಹೊಕ್ಕಿವೆ. ಮರ ಉಳಿಸ್ತೇವೆ ಅಂತ ಬೊಬ್ಬೆ ಹೊಡೆಯುತ್ತ ಒಳಗೊಳಗೆ ಕೊರೆದು ಹಾಳುಗೆಡವುತ್ತಿವೆ. ಇಂತಹ ಕ್ರಿಮಿಗಳ ಕಾರಣದಿಂದ್ಲೇ ಇವತ್ತು ‘ರಾಷ್ಟ್ರ’, ‘ಹಿಂದೂ’ ಅಂತೆಲ್ಲ ಮಾತಾಡುವವರು ಅನುಮಾನಗಳಿಗೆ, ಅಪವಾದಗಳಿಗೆ ಒಳಗಾಗಬೇಕಾದ ಪರಿಸ್ಥಿತಿ ಬಂದಿರೋದು ಅಂತ ನನಗನಿಸುತ್ತೆ. ಅನಿಸೊದೇನು ಬಂತು? ಗ್ಯಾರೆಂಟಿಯೇ ಇದೆ!
ಸರಿ… ಈಗಾಗಲೇ ಇಷ್ಟೆಲ್ಲ ಯಾಕೆ ಹರಟ್ತಿದೇನೆ ಅನ್ನೋದು ನಿಮಗೆ ಗೊತ್ತಾಗಿರಬಹುದು. ಶಿರೋನಾಮೆಯಲ್ಲೇ ಅದರ ಸುಳಿವು ಸಿಕ್ಕಿದೆಯಲ್ಲ? ನಡೆದ ಘಟನೆ ಬಗ್ಗೆ ಮತ್ತೆ ವರದಿ ಕೊಡೋದಕ್ಕಿಂತ ಅದನ್ನ ಮುಂದಿಟ್ಕೊಂಡು ನಿಮ್ಮೊಂದಿಗೆ ಮಾತಾಡೋಣ ಅನ್ನಿಸಿತು ನನಗೆ.
ನಿಜ ಹೇಳಿ… ಸಂಸ್ಕೃತಿಯ ಹೆಸರಲ್ಲಿ ಹೀಗೆ ಹೆಣ್ಮಕ್ಕಳನ್ನ ಹೊಡೆಯೋದು, ಬೀಳ್ಸೋದು, ಹಿಂಸಿಸೋದು ನಿಮಗೆ ಸರಿ ಅನ್ನಿಸ್ತಾ? ಇದು ಸಂಸ್ಕೃತೀನಾ? ಅಬ್ಬ… ಎಂಥ ದುರಹಂಕಾರ! ಇಷ್ಟಕ್ಕೂ ಈ ಥರದ ಮನ್‌ಮಾನಿಯಿಂದ ಯುವ ಜನರಲ್ಲಿ ಸೋ ಕಾಲ್ಡ್ ಸಂಸ್ಕೃತಿಯ ಅರಿವು ಮೂಡಿಸಿಬಿಡ್ತೀವಿ ಅನ್ನೋದು ಮೂರ್ಖತನವಲ್ವಾ? ಪ್ರಜಾಪ್ರಭುತ್ವವಿರುವ ಈ ಹೊತ್ತಿನಲ್ಲೂ ಹೀಗೆ ಯಾವುದೋ ಒಂದು ಪಡೆ ತನಗೆ ಸೇರದೇ ಹೋಗುವ ಸಂಗತಿಯನ್ನ ಈ ಪರಿಯ ಹಿಂಸೆಯ ಮೂಲಕ ವಿರೋಧಿಸತ್ತೆ ಅಂದ್ರೆ, ಪ್ರಜಾಪ್ರಭುತ್ವ ಯಾಕೆ ಬೇಕು? ಈ ಜನರಿಗೆ ಸಂಸ್ಕೃತಿ ರಕ್ಷಣೆಯ ಗುತ್ತಿಗೆ ಕೊಟ್ಟವರಾದರೂ ಯಾರು?
ಸಮಾಜಕ್ಕೆ ಮಾರಕ ಅನಿಸುವ ಯಾವುದೇ ಸಂಗತಿಯನ್ನ ನಿರ್ಬಂಧಿಸುವಂತೆ ಮನವಿ ಮಾಡೋದಿಕ್ಕೆ ಸಂವಿಧಾನದಲ್ಲಿ ಖಂಡಿತ ಅವಕಾಶವಿದೆಯಲ್ಲ… ಇಷ್ಟಕ್ಕೂ ಇಲ್ಲೀಗಲ್ ಅನಿಸುವ ಕೆಲಸ ಯಾರೋ ಮಾಡ್ತಿದಾರೆ ಅಂದ್ರೆ ಅದನ್ನ ವಿಚಾರಿಸ್ಕೊಳೋಕೆ ಕಾನೂನಿದೆ, ಪೋಲಿಸರಿದ್ದಾರೆ. ನಡು ರಾತ್ರೀಲಿ ಪಾರ್ಟಿ ಮಾಡ್ತಿದಾರೆ, ಮತ್ತು ಆ ವಿಷಯ ತಮಗೆ ಗೊತ್ತು- ಇಂಥಿಂಥ ಕಾರಣಗಳಿಗಾಗಿ ಅದು ನಡೀಬಾರ್ದು ಅಂತೆಲ್ಲ ವಾದಗಳಿವೆಯಾ? ದೂರು ಕೊಟ್ಟು ಅದನ್ನ ನಿಲ್ಸೋಕೆ ಪ್ರಯತ್ನಿಸಲಿ. ಅಷ್ಟು ಮಟ್ಟಿನ ಅವಕಾಶ ಇದ್ದೇ ಇದೆ. ಅದು ಬಿಟ್ಟು, ಈ ಥರದ ಗೂಂಡಾಗಿರಿ! ಇದು, ಇತ್ತೀಚಿನ ಟ್ರೆಂಡು.
~
ಇಲ್ಲೀಗ ನಾನು ಪಬ್‌ಗಳ ಬಗ್ಗೆ ಮಾತಾಡೋದಿಲ್ಲ. ಸರ್ಕಾರಗಳ ಪ್ರೋತ್ಸಹವಿಲ್ದೆ ಅದು ನಡೆಯೋದಿಲ್ಲ. ಸರ್ಕಾರ ಅಂದ್ರೆ, ಜನರೇ ಚುನಾಯಿಸೋದು ತಾನೆ? ಅಲ್ಲಿಗೆ- ಮೆಜಾರಿಟಿ ಜನರ ಅಪೇಕ್ಷೆಗೆ ತಕ್ಕಂತೆಯೇ ವ್ಯವಸ್ಥೆಗಳು ಇರುತ್ವೆ ಅಂತಾಯ್ತು. ದಣಿದ ಮಾನವ ಜೀವಿ ಹೀಗೆ ಸುರಾಪಾನ, ನೃತ್ಯ ಗೋಷ್ಠಿಗಳಿಗೆ ಹೋಗೋದು ಎಲ್ಲ ಕಾಲದ, ಎಲ್ಲ ಧರ್ಮದ, ಎಲ್ಲ ದೇಶದಲ್ಲಿ ಚಾಲ್ತಿಯಲ್ಲಿದ್ದ- ಇರುವ ರಿವಾಜು. ನಮ್ಮಲ್ಲೂ ಹಾಗಿತ್ತು ಅನ್ನೋದಕ್ಕೆ ಮತ್ತೆ ಪುರಾವೆಗಳನ್ನ ಕೊಡಬೇಕಿಲ್ಲ ಅಂದ್ಕೊಳ್ತೀನಿ.
ಇನ್ನೀಗ ಹೊಸತಾಗಿ ‘ಪಬ್ ಸಂಸ್ಕೃತಿ’ ಬಗ್ಗೆ ಮಾತಾಡೋದೇನಿದೆ?
ಮಜದ ಸಂಗತಿ ಹೇಳ್ತೇನೆ ಕೇಳಿ…
ಯಾರೋ ಒಬ್ಬ ಅಂಗ್ಲ ಅಧಿಕಾರಿ ಭಾರತದ ಬುರ್ಖಾ ಪದ್ಧತಿ ಬಗ್ಗೆ ಬರೆದಿದ್ದ. ಆಗ ನಮ್ಮ ‘ಕಾವಲುಗಾರ ಪಡೆ’, ಅದು ನಮ್ಮ ಪದ್ಧತಿಯಲ್ಲ, ಮೊಘಲರಿಂದ ಬಂದಿದ್ದು, ನಮ್ಮ ಹೆಣ್ಮಕ್ಕಳಿಗೆ ಫುಲ್ ಸ್ವಾತಂತ್ರ್ಯ ಇತ್ತು, ಬುರ್ಖಾ ಇತ್ಯಾದಿಯೆಲ್ಲ ಅವರಿಂದಲೇ ಬಂದಿದ್ದು… ಹೀಗಾಗೇ ದಕ್ಷಿಣದಲ್ಲಿ ನಾವು ಅಂಥದನ್ನೆಲ್ಲ ನೋಡೋಕೆ ಸಾಧ್ಯವಿಲ್ಲ- ಮೊದಲಾಗಿ ವಾದಿಸಿತು.
ಮತ್ತೊಂದು ಕಡೆ- ಹಿಂದೆಲ್ಲ ನಮ್ಮ ಹೆಂಗಸರು ‘ಗೂಂಘಟ್’ ಇಲ್ಲದೆ ಹೊರಗೆ ಬರ್ತಿರಲಿಲ್ಲ, ತುಂಬಾ ಲಜ್ಜಾವತಿಯರಾಗಿದ್ರು, ಮನೆಗೆ ಆತುಕೊಂಡಿರುತಿದ್ರು… ಮೊದಲಾಗಿ ಕೊಚ್ಚಿಕೊಂಡಿತು!
ಹಾಗಾದರೆ ಭಾರತದ ಸಂಸ್ಕೃತಿ ಯಾವುದು? ಅದು ಹರಿಯುತ್ತ ಹರಿಯುತ್ತ ಜತೆ ಸೇರಿದ ಕಿರುತೊರೆಗಳನೆಲ್ಲ ಕೂಡಿ ಸಮೃದ್ಧವಾಗಿ ಬೆಳೆದುಬಂದುದಲ್ವೇ?
ದಿನ ದಿನ ಹೆಣ್ಣುಮಕ್ಕಳು ವರದಕ್ಷಿಣೆ ದುರಾಸೆ, ಮಾನಸಿಕ- ದೈಹಿಕ ಕಿರುಕುಳಗಳಿಂದ ಸಾಯ್ತಲೇ ಇದ್ದಾರೆ. ಭ್ರೂಣವಾಗಿರುವಾಗಲೇ ಹೆಣ್ಣುಮಕ್ಕಳು ಸಾಯ್ತಿವೆ. ಇವೆಲ್ಲ ನಮ್ಮ ದೇಶ ತಲೆತಗ್ಗುವಂತೆ ಮಾಡುವ ಸಂಗತಿಗಳಲ್ವಾ? ಯಾವುದು ಭಾರತೀಯ ಸಂಸ್ಕೃತಿ? ಅದನ್ನು ಹಾಳುಗೆಡವ್ತಿರೋರು ಯಾರು? ಬದಲಾದ ಕಾಲಕ್ಕೆ ತಕ್ಕಂತೆ ನಡೆಯುತ್ತಾ ಗಂಡಸಿನ ಜತೆಜತೆಗೂ ದುಡೀತಿರುವ ಹೆಣ್ಣು ಮಕ್ಕಳಾ, ಅಥವಾ ಇಷ್ಟೆಲ್ಲ ‘ಪ್ರಗತಿ’ಯ ನಂತರವೂ ಹೆಣ್ಣನ್ನು ಕೀಳಾಗಿ ನಡೆಸಿಕೊಳ್ತಲೇ ಬಂದಿರುವ ಗಂಡಸರಾ? ಯಾವ ಮಾನದಂಡದ ಆಧಾರದ ಮೇಲೆ ಅಳೆಯಲು ಹೊರಟಿದ್ದಾರೆ ಇವರು ಸಂಸ್ಕೃತಿಯನ್ನ?
ಇಷ್ಟಕ್ಕೂ,, ಸಂಸ್ಕೃತಿ ಅಂದ್ರೆ ಏನು?
ಸಾವಿರ ಸಾವಿರ ವರ್ಷಗಳಿಂದ ಮೂಲವನ್ನ ಕಾಯ್ದಿಟ್ಟುಕೊಂಡೂ ಬದಲಾಗುತ್ತ ಉಳಿದುಬಂದಿರುವ ಭಾರತದ ಸಂಸ್ಕೃತಿಯನ್ನ ಯಾರೋ ಒಂದಷ್ಟು ಪುಂಡರು ಉಳಿಸಿಕೊಡ್ತಾರೆ ಅನ್ನೋದು ಮೂರ್ಖತನವಲ್ವೆ?
ಹೀಗೆ ಕಾಲಕ್ಕೆ ತಕ್ಕ ಹಾಗೆ ತನ್ನನ್ನ ತಾನು ಪರಿವರ್ತನೆಗೆ ಒಡ್ಡಿಕೊಂಡು ಬಂದಿರೋದ್ರಿಂದ್ಲೇ ಇವತ್ತಿಗೂ ಭಾರತದಂಥ ಭಾರತ ಉಳಿದಿದೆಯೇ ಹೊರತು, ಈ ಥರದ ಕಾವಲಿನವರಿಂದಲ್ಲ.
~
ನಾನು ನೋಡಿದೇನೆ… ಅಷ್ಟುದ್ದ ಜಡೆ ಹೆಣೆದುಕೊಂಡು, ಕುಂಕುಮವಿಟ್ಟು ಪೋಸು ಕೊಡುತ್ತಿದ್ದ ಹೆಣ್ಣುಮಗಳೊಬ್ಬಳು ಕಾವಲುಗಾರರ ಮಾನದಂಡದ ಪ್ರಕಾರ ‘ಅನೈತಿಕ’ ಎನ್ನಬಹುದಾದ ಕೆಲಸ ಮಾಡ್ತಿದ್ದುದನ್ನು ಕಣ್ಣಾರೆ ನೋಡಿದೇನೆ. ಆದರೆ ಆಕೆ ಮಾಡ್ತಿದ್ದುದು ನೀತಿ ಬಾಹಿರ ಅಂತ ನಾನು ಹೇಳೋದಿಲ್ಲ. ಮೆಚ್ಯೂರ್ಡ್ ಹೆಣ್ಣು ಹುಡುಗಿ. ತಾನು ಮಾಡುತ್ತಿದ್ದುದರ ಫಲ ಉಣ್ಣಲು ರೆಡಿಯಿದ್ದವಳು, ಅದನ್ನ ಸರಿದೂಗಿಸ್ಕೊಂಡು ಹೋಗುವ ಛಾತಿಯಿದ್ದವಳು ಅವಳು.
ಆದರೂ ಅಂಥ ಕೆಲಸ ಈ ಥರದವರ ಬಾಯಲ್ಲಿ ‘ಅನೈತಿಕ’ ಎಂದು ಕೇಳಿ ಬಲ್ಲೆ. ಅಟ್ ದ ಸೇಮ್ ಟೈಮ್, ಪಾಷ್ ಆಗಿ ಡ್ರೆಸ್ ಮಾಡ್ಕೊಂಡು ಓಡಾಡುವ ಹುಡುಗಿಯೊಬ್ಬಳು ಮಾನಸಿಕವಾಗಿ ಅಪ್ಪಟ ಸಾಂಪ್ರದಯಿಕವಾಗಿದ್ದುದೂ ನನಗೆ ಗೊತ್ತಿದೆ. ಅಷ್ಟೆಲ್ಲ ಸಂಭ್ರಮ ಮಾಡಿಕೊಂಡು ಓಡಾಡುವ ಹೆಣ್ಣುಮಕ್ಕಳಿಗೆ ಇರಬಹುದಾದಷ್ಟೇ, ಅಥವಾ ಅದಕ್ಕಿಂತ ಹೆಚ್ಚು ಗೌರವ, ಒಬ್ಬ ಮಾಡ್ ಹುಡುಗಿಗೆ ತನ್ನ ಧರ್ಮ- ದೇಶ- ಸಂಸ್ಕೃತಿ ಬಗ್ಗೆ ಇರಲೂಬಹುದು. ಆಡಂಬರಕ್ಕಿಂತ ಆಚರಣೆಯಲ್ಲಿ, ಚಿಂತನೆಯಲ್ಲಿ ಸಂಸ್ಕೃತಿ ಎದ್ದು ತೊರುತ್ತದೆಯಲ್ವೇ?
ಹ್ಹ್! ಬಟ್ಟೆಯಿಂದ ಮನಸ್ಸನ್ನು ಅಳೆಯುವುದು ಎಂಥ ಮೂರ್ಖತನ!
~
ನನ್ನ ಮುನಿಸಿರೋದು ಪಾಶ್ಚಾತ್ಯ ಶೈಲಿಯ ಬಟ್ಟೆಗಳ್ನ ಹಾಕ್ಕೊಂಡಿದ್ರು ಅನ್ನೋ ಕಾರಣಕ್ಕೆ ಆ ಪುಂಡರು ಹೆಣ್ಮಕ್ಕಳ ಮೈಮುಟ್ಟಿದರಲ್ಲ, ಅದಕ್ಕೆ. ಹಾಗೊಬ್ಬ ಪರ ಹೆಣ್ಣುಮಗಳ ಮೈಮುಟ್ಟುವ ಅಧಿಕಾರ ಅವರಿಗೆ ಕೊಟ್ಟಿದ್ದು ಯಾರು?
ಪರ ಸ್ತ್ರೀಯರು ತಾಯಿ ಸಮ, ತಂಗಿ ಸಮ ಅಂತೆಲ್ಲ ಭಾಷಣ ಬಿಗೀತಾರಲ್ವೆ?
ಅವರು ತಪ್ಪು ಮಾಡ್ತಿದಾರೆ ಅನ್ನಿಸಿತು ತಾನೆ? ಹಾಗೆಲ್ಲ ಬಟ್ಟೆ ಧರಿಸೋದ್ರಿಂದ ಅವರಿಗೇ ಸಮಸ್ಯೆಯಾಗಬಹುದು ಅನಿಸಿತು ತಾನೆ? ಬುದ್ಧಿ ಹೇಳಲು ಸಭ್ಯವಾದ ಅದೆಷ್ಟು ದಾರಿಗಳಿಲ್ಲ ಹೇಳಿ? ಒಳಗಿಂದ ಸಂಸ್ಕೃತಿಯ ಬಗ್ಗೆ ಅವೇರ್‌ನೆಸ್ ಬೆಳೆಸದೆ ಹೀಗೆ ತೋರ್ಪಡಿಕೆಯ ಮಾರ್ಪಾಟುಗಳನ್ನ ಮಾಡಿಕೊಳ್ಳಿ ಅಂತ ಒತ್ತಾಯಿಸೋದು ಅದೆಂಥ ದಾರ್ಷ್ಟ್ಯ!? ಹೋಗಲಿ, ಖುದ್ದು ಈ ಪಡೆಗಾದರೂ ನಮ್ಮ ಇತಿಹಾಸ, ಸಂಸ್ಕೃತಿ ಬಗ್ಗೆ ಎಷ್ಟು ಗೊತ್ತಿದೆ? ಎಷ್ಟು ಗೌರವವಿದೆ? ಈ ಮಟ್ಟದ ಅಸಹಿಷ್ಣುಗಳಾಗಿರುವ ಇವರು ‘ಹಿಂದೂ’ ಅನಿಸಿಕೊಳ್ಳುವುದಕ್ಕಾದರೂ ಲಾಯಖ್ಖಿದ್ದಾರೆಯೇ?
ಕಳೆದುಹೋಗುತ್ತಿರುವ ಸಾಮಾಜಿಕ ಮೌಲ್ಯ, ಸಾಂಸ್ಕೃತಿಕ ಮೌಲ್ಯಗಳ ಬಗ್ಗೆ ಖಂಡಿತ ಪ್ರತಿಯೊಬ್ಬರಿಗೂ ಕಾಳಜಿ ಇರಬೇಕು. ಅದನ್ನ ಮನ ಬಂದ ಹಾಗೆ ತೋರ್ಪಡಿಸಿಕೊಳ್ಳುವ ಮೊದಲು, ಸಮಾಜ ಜೀವನ ಮತ್ತು ಸಂಸ್ಕೃತಿಯ ಬಗ್ಗೆ ಚೆನ್ನಾಗಿ ಅರಿತುಕೊಂಡಿರಬೇಕು.
ಇದು ರಾಮಸೇನೆಗೆ ಮಾತ್ರ ಹೇಳುತ್ತಿರುವ ಮಾತಲ್ಲ,.. ವ್ಯಾಲೆಂಟೈನ್ ಡೇ ಸಮಯದಲ್ಲಿ ಹುಡುಗ ಹುಡುಗಿಯರನ್ನು ಹಿಂಸಿಸುವ ಶಿವಸೇನೆಗೂ ಅನ್ವಯವಾಗುವಂಥದ್ದು. ರೇವ್ ಪಾರ್ಟಿಯ ಮೇಲೆ, ಪಬ್‌ಗಳ ಮೇಲೆ ದಾಳಿ ಮಾಡಿ ಕಾನೂನು ಕೈಗೆತ್ತಿಕೊಂಡು ಪೋಸು ಕೊಡುವ ಕ.ರ.ವೇ ಗೂ ಅನ್ವಯವಾಗುವಂಥದ್ದು.
ಧರ್ಮಾಂಧತೆಯಷ್ಟೇ ಭಾಷಾಂಧತೆ- ರಾಷ್ಟ್ರಾಂಧತೆ (ತಮಿಳು ನಾಡು, ಮಹಾರಾಷ್ಟ್ರಗಳ ವಿಷಯದಲ್ಲಿ ‘ರಾಜ್ಯಾಂಧತೆ!)ಗಳೂ ಅಪಾಯಕಾರಿ.
~
ಹೋಗಲಿ ಬಿಡಿ…
ಇದೊಂದು ವಿಷಯವನ್ನ ಯಾವತ್ತೋ ಡಿಸ್ಕಸ್ ಮಾಡಬೇಕು ಅಂದ್ಕೊಂಡಿದ್ದೆ. ಮಂಗಳೂರು ಘಟನೆ ಇದಕ್ಕೆ ನೆವವಾಗಿ ಒದಗಿಬಂತಷ್ಟೆ.
ಸುಮ್ಮನೆ ರಾಮನನ್ನು ರಾಜಕಾರಣಕ್ಕೆ, ಪುಂಡಾಟಿಕೆಗೆ ಎಳೆದು ತಂದು ಹಾಳು ಮಾಡ್ತಿರೋದರ ಬಗ್ಗೆ ನನಗೆ ಬೇಸರವಿದೆ. ಮಾಡಬಹುದಾದ, ಮಾಡಬೇಕಿರುವ ರಚನಾತ್ಮಕ ಕೆಲಸಗಳು ಸಾವಿರ ಬಿದ್ದಿವೆ. ನಮ್ಮ ಮುಂದಿನ ಪೀಳಿಗೆಯೀಗ ಪ್ರೈಮರಿ- ಹೈಸ್ಕೂಲುಗಳಲ್ಲಿ ಕುಂತು ನಮ್ಮ ಮಂಗಾಟಗಳನ್ನ ಗಮನಿಸುತ್ತಿದೆ. ನಮ್ಮ ಇಂದಿನ ಹೆಜ್ಜೆ- ಆ ಪೀಳಿಗೆಯ ಮುಂದಿನ ಹೆಜ್ಜೆಯಾಗಲಿದೆ.
ನಾವು ಇದನ್ನೆಲ್ಲ ನೋಡುತ್ತ ಸುಮ್ಮನೆ ಇರುವ ಬದಲು, ‘ಸಂಸ್ಕೃತಿ’ ಉಳಿಸುವ ಹೆಸರಲ್ಲಿ ಹೀಗೆ ನಮ್ಮ ಮಾನ ಹರಾಜು ಹಾಕುತ್ತಿರುವವರಿಗೆ – “ಹೋಗ್ರಯ್ಯಾ, ನಮ್ಮದನ್ನ ಉಳಿಸ್ಕೊಳೋಕೆ ನಮಗೆ ಗೊತ್ತು. ನಿಮ್ಮ ಬದುಕು ನೋಡಿಕೊಳ್ಳಿ ಅನ್ನುವ ಸಂದೇಶ ಕಿವಿ ಮುಟ್ಟಿಸಿದರೆ ಅಷ್ಟೇ ಸಾಕು. ಇಲ್ಲದಿದ್ದರೆ,
ಇಲ್ಲದಿದ್ದರೆ…
ತಾಲಿಬಾನಿಗೊಂದು ಸಂಸ್ಕೃತ ಪದ ಹುಡುಕಬೇಕಾದೀತು ಮತ್ತೆ!

ಅಲ್ಲಿ ಹುಡುಗರನ್ನು ಕೂಡ ಹಿಡ್ಕೊಂಡು ಹೊಡೆದಿದ್ದಾರಲ್ಲ. ಅವರೂ ಕೂಡ ಜೀನ್ಸ್ ಪ್ಯಾಂಟ್ ಹಾಕಿದ್ರು ಅಂತಲೇ ಹೊಡೆದಿದ್ದಾ? ಅಥವಾ ಹುಡುಗರನ್ನ ಹೊಡೆಯೋದು ನಮ್ ಸಂಸ್ಕೃತಿಯಲ್ಲಿ allowed ಅಂತನಾ?!! Timesnews, TV9 ಗಳಂತಹ channelಗಳಿಗೂ ಈ ಬರಹಕ್ಕೂ ಏನೂ ವ್ಯತ್ಯಾಸವೇ ಕಾಣ್ತಾ ಇಲ್ಲ.
ವಿಕಾಸ್,
ಪಬ್ ಗೆ ಹೋಗುವುದನ್ನು ಹೀಗೆಲ್ಲಾ ಅಸಂಬದ್ಧವಾಗಿ ವಿರೋಧಿಸೋದೇ ಒಂದು ದುಷ್ಕೃತಿ. ಇದರ ವಿರುದ್ಧ ಲೇಖನದಲ್ಲಿ ಮಾತಾಡಿದ್ದೇನೆ. ಆದರೂ, ನಿರ್ದಿಷ್ಟವಾಗಿ ನನ್ನ ವಿರೋಧ ಹೇಳಬಯಸುತ್ತಿರುವುದು ಹೆಣ್ಣುಮಕ್ಕಳನ್ನ ಅಸಭ್ಯವಾಗಿ ನಡೆಸಿಕೊಂದುದರ ಬಗ್ಗೆಯೇ. ಊಟ, ಉಡುಗೆ ತೊಡುಗೆ ಅವರವರ ಖಾಸಗಿ ವಿಚಾರ. ಅದರಲ್ಲೂ ಪಬ್ ಗೆ ಹೋಗುವ ಹೆಣ್ಣು ಮಕ್ಕಳು ತಮಗೆ ಕಮ್ಫರ್ಟ್ ಅನ್ನುವ ಬಟ್ಟೆ ತೊಟ್ಟರೆ ಇವರ ಗಂಟೇನು ಹೋಯ್ತು?
ಕಾಲೇಜಿಗೆ ಹೋಗುವ ಹುಡುಗಿಯರು ತೀರ ಪ್ರಚೋದನಕಾರಿಯಾಗಿ ಡ್ರೆಸ್ ಹಾಕಿದರೆ ಅದರಿಂದ ಹುಡುಗರ ಏಕಾಗ್ರತೆಗೆ ಭಂಗ ಅಥವಾ ಹುಡುಗಿಯರಿಗೇ ತೊಂದರೆ ಇತ್ಯಾದಿ ಕಾರಣ ಹೇಳಬಹುದು. ಹೋಗ್ತಿರೋದೇ ಪಬ್ ಗೆ ಅಂತಾದಮೇಲೆ, ಉಡುಗೆಗೆ ನಿರ್ಬಂಧವೇಕೆ?
ಸಂಸ್ಕೃತಿಯ ಬಗ್ಗೆ ಮಾತಾಡೋರು ಹುಡುಗಿಯೊಬ್ಬಳ ಮೈಮುಟ್ಟುವಾಗ ನೂರು ಸಾರ್ತಿ ಯೋಚಿಸಬೇಕಿತ್ತು. ಇಂಥ ಹುಂಬರನ್ನ ಯಾವ ಕಾರಣಕ್ಕೂ ಸ್ವಸ್ಥ ಮನಸ್ಸಿನ ಯಾರೂ ಸಮರ್ಥಿಸಲಾರರು.
ತುಂಬಾ ಸಮಯದ ನಂತರ ನಿನ್ನ ಬ್ಲಾಗಲ್ಲಿ ಕಮೆಂಟು ಬಿಡ್ತಾ ಇದೀನಿ. ಆದರೆ ಎಲ್ಲಾ ಓದ್ತಾ ಇದ್ದೆ — ಭಯಂಕರ ಕಾವು ಇದ್ದುದರಿಂದ ಸ್ವಲ್ಪ ದೂರದಿಂದಲೆ. 😉
ಒಳ್ಳೆಯ ಬರಹ. ಅಲ್ಲ, ಸಾವಿರಾರು ವರ್ಷಗಳಿಂದ ಉಳಿದು, ವಿಕಸಿಸಿ, ಬೆಳೆದಿರುವ ಸಂಸ್ಕೃತಿ, ಭಾಷೆ, ಧರ್ಮ ಇಂಥವನ್ನು ಒಂದಷ್ಟು ಗುಂಪುಗಳು ರಕ್ಷಿಸುವ ಹೊಣೆ ಹೊರುತ್ತವೆ ಎಂಬುದರ ಅರ್ಥವಾದರೂ ಏನು? ಅದೆಂಥ ಸೊಕ್ಕು ಅದು?
ಥ್ಯಾಂಕ್ಯೂ ಸಂಕೇತ್.
ಛಳಿಗಾಲ ಅಲ್ವಾ? ಅದಕ್ಕೇ ಈಗ ‘ಕಾವು’ ಸ್ವಲ್ಪ ತಣ್ಣಗಾಗಿದೆ! 🙂
ನಿಜ… ಇದು ಸೊಕ್ಕಲ್ಲದೆ ಮತ್ತೇನು? ಸೊಕ್ಕಿನ ಪರಮಾವಧಿಯೇ ಸರಿ…
Chetana,
Its good that, you have raised this issue.ಟೆಲಿವಿಷನ್ ನಲ್ಲಿ, ಆ visuals ನೋಡಿ ಮೈ ಉರಿದು ಹೋಯ್ತು. ಇದೇನು ರಾಮ ಸೇನೆಯೋ ಅಥವಾ ರಾವಣ ಸೇನೆಯೋ? ಸಂಸ್ಕೃತಿ ಹಾಗೂ ಭಾಷೆ ಯ ರಕ್ಷಣೆಯ ಸೋಗು ಹಾಕುತ್ತಾ, ಹಫ್ತಾ ವಸೂಲಿ ಮಾಡುವ, ಇಂತಹ ವರ ವಿರುದ್ದ ಸರ್ಕಾರ ನಿಜವಾಗ್ಲೂ ಕಠಿಣ ಕ್ರಮ ಕೈಗೊಳ್ಳಬೇಕು.
-ಪ್ರಸಾದ್.
Avaru madiddu tappu oppikollona. adre neevu helta irodu yenu. pub ge hodre hogli antiralla. kudiyodu tappalva. neevu kuditira hege? hindomme gnanapeeti girish karnad saha heege helida nenapu.
ಬಹಲ ದಿನಗಳಿಂದ ಮಂಗಳೂರಿನಲ್ಲಿ ಸಂಸ್ಕೃತಿಯ ಹೆಸರಿನಲ್ಲಿ ಸಂಘಪರಿವಾರ ಗೂಂಡಾಗಿರಿ ನಡೆಸುತ್ತಿದ್ದು ಮಾದ್ಯಮಗಳ ಜಾನ ಮೌನ ಮತ್ತು ಎಲೈಟ್ ಪಭ್ ಸಂಸ್ಕೃತಿಯನ್ನು ಮೆಚ್ಚುವವರು ಮೌನವಹಿಸಿದುದರ ಪರಿಣಾಮ ಇಂದು ಹಾಡು ಹಗಲೆ ಹೆಣ್ಮಕ್ಕಲ ಮೇಲೆ ಕೈಮಾಡುವಷ್ಟು ಬೆಳೆದಿದ್ದಾರೆ. ಪೋಲೀಸರ ಮೌನ ಮುಕ್ತ ಪರವಾನಿಗೆಯು ಇದಕ್ಕೆ kaaranavendare ತಪ್ಪಾಗಳಾರದು. ಸಮಾಜದಲ್ಲಿ ದಲ್ಲಿ ನೈತಿಕತyannu ಬೆಳೆಸಲು ಸೂಕ್ತವಾದ ಹಾದಿಗಳಿಗೆ ಅದನ್ನು ಅನುಸರಿಸದೆ ಕಾಣೂನನ್ನು ಕೈಗೆತ್ತಿಕೊಂಡು ಭಯದವಾತಾವರಣವನ್ನು ಸೃಷ್ಟಿ ಸೂದು ದೇಶದ್ರೋಹದ ಕೃತ್ಯವಾಗಿದೆ. ಸಮಾಜದ ಸೌಹರ್ದ ಪ್ರಿಯರೆಲ್ಲರು ಒಂದಾಗಿ ಈ ಕೃತ್ಯವನ್ನು ಖಂಡಿಸಿ ಪ್ರತಿಭಟಿಸಲೇಬೇಕು…
ಧನ್ಯವಾದಗಳು
ಪ್ರಸಾದ್,
ಸರ್ಕಾರದ ಮೇಲೆ ಕಠಿಣ ಕ್ರಮ ಕೈಗೊಳ್ಳೋರು ಯಾರು!? 🙂
ಪೂರ್ವಿ,
ನೀವು ಯಾವ ಕಾಲಘಟ್ಟದಲ್ಲಿರುವಿರೆಂದು ನೆನೆಸಿಕೊಳ್ಳಿ. ಕುಡಿತವನ್ನು ಕೆಟ್ಟದ್ದಾಗಿಸಿಕೊಳ್ಳೋದು ಮನುಷ್ಯನೇ. ಮಿತಿಯಲ್ಲಿದ್ದರೆ ಎಲ್ಲವೂ ಒಳಿತೇ. ನಾನು ಕುಡಿಯದೆ ಇರೋದು- ಅದು ತಪ್ಪು ಅನ್ನುವ ಕಾರಣಕ್ಕಲ್ಲ.
ಶಿಹಾಬ್,
ಹೌದು. ಖಂಡಿಸಬೇಕು. ಖಂಡಿಸೋಣ.
ವಂದೇ,
ಚೇತನಾ ತೀರ್ಥಹಳ್ಳಿ
ಭಾಷೆ,ಧರ್ಮ,ಸಂಸ್ಕೃತಿಯ ಹೆಸರಲ್ಲಿ ಯಾವ ರೀತಿಯಾದರೂ ದಾಳಿ ನಡೆಸಬಹುದೆಂದು ಕೆಲವರು ಅಂದುಕೊಂಡಿದ್ದಾರೆ.ನಮ್ಮತನ ಉಳಿಸಲು ಹೋರಾಟ ಮಾಡಬೇಕು ಸರಿ,ಆದರೆ ಈ ರೀತಿಯ ಹೋರಾಟ-ಹಾರಾಟಗಳು ನಮ್ಮ ಸಂಸ್ಕೃತಿಯಲ್ಲ ಎಂದು ಈ ‘ಸುಸಂಸ್ಕೃತರು’ ತಿಳಿದುಕೊಳ್ಳಬೇಕು.
ಅಶೋಕ ಉಚ್ಚಂಗಿ
http://mysoremallige01.blogspot.com/
ಚೇತನಾ ಅವರೇ, ನಿಜಕ್ಕೂ ಚೆನ್ನಾಗಿ ಬರೆದಿದ್ದೀರಿ. ’ಎಲ್ಲಿ ಮಹಿಳೆಯರು ವಾಸಿಸುತ್ತಾರೆ ಅಲ್ಲಿ ದೇವತೆಗಳು ನೆಲೆಸುತ್ತಾರೆ’ ಎನ್ನುವ ದೇಶದಲ್ಲಿ ಲಕ್ಷಾಂತರ ಹೆಣ್ಣು ಭ್ರೂಣಗಳು ಜಗತ್ತನ್ನು ನೋಡುವ ಮುಂಚೆ ಕಣ್ಮುಚ್ಚಿ ಹೋಗಿವೆ. ಮಹಿಳೆಯರ ಮೇಲೆ ದೇಶದಲ್ಲಿ ಪ್ರತಿದಿನ ಒಂದಲ್ಲ ಒಂದುಕಡೆ ಲೈಂಗಿಕ ಕಿರುಕುಳ, ಅತ್ಯಾಚಾರ ನಡೆಯುತ್ತಿವೆ. ದೇವದಾಸಿ ಪದ್ಧತಿ ಇನ್ನೂ ಜೀವಂತವಾಗಿದೆ. ಮುಸ್ಲಿಂ ಮಹಿಳೆಯರು ಬುರಕಿಯಲ್ಲಿ ಅವಿತರೆ, ಹಿಂದೂ ಮಹಿಳೆಯರು ಸೆರಗಿನ ಮರೆಯಲ್ಲಿ ಅವಿತುಕೊಳ್ಳುತ್ತಾರೆ. ಇವರೆಲ್ಲಾ ಭಾರತದ ಆದರ್ಶನಾರಿಯರು!
ಹುಡುಗಿಯರು ಜಿನ್ಸ್ ಹಾಕಿದರೆ ಸಂಸ್ಕೃತಿ ಹಾಳಾಗುತ್ತದೆ!!
ಎಲ್ಲಾ ಧರ್ಮಗಳ ಧರ್ಮಾಂಧರಿಗೆ ಮಹಿಳೆ ಮಾತ್ರ ಯಾಕೇ ’ಹೀಗಿರಬೇಕು’ ಎಂದು ಹೇಳುತ್ತಿವೆ. ಇದು ಮೂಲಭೂತ ಪ್ರಶ್ನೆ? ಇಂತಹ ಪ್ರಶ್ನೆಯ ಬಗ್ಗೆ ಕೂಡಾ ಚರ್ಚೆ ಆರಂಭವಾಗಬೇಕು.
ನಿಮ್ಮ ಬಗ್ಗೆ ನನಗಿರುವ ಪೂರ್ವಗ್ರಹಗಳು ಕಡಿಮೆಯಾಗುತ್ತಿವೆ. ಚರ್ಚೆ ಮೂಲಕ ನಮ್ಮ ನಮ್ಮ ಅನುಮಾನಗಳನ್ನು ಬಗೆಹರಿಸಿಕೊಂಡು ಹೋಗಬಹುದು ಎಂದು ನಂಬಿರುವವನು ನಾನು.
– ಪರಶುರಾಮ ಕಲಾಲ್
ಚೇತನ,
ಹೌದು, ಈ ’ರಾಮ ಸೇನೆ’ಗೂ ತಾಲಿಬಾನಿಗೂ ಯಾವುದೇ ವ್ಯತ್ಯಾಸವಿಲ್ಲ. ಕ್ರಿಶ್ಚಿಯನ್ನರ ಹಾಗೂ ದಲಿತರ ಮೇಲೆ ಹಲ್ಲೆ ಮಾಡುತ್ತಿದ್ದವರು ಈಗ ಎಲ್ಲ ಹಿಂದೂ ಹೆಂಗಸರು ಹೇಗೆ ಬದುಕಬೇಕು ಎಂದು ಪಾಠ ಹೇಳಲು ಶುರುಮಾಡಿದ್ದಾರೆ. ಆ ಪಬ್ ನಲ್ಲಿದ್ದವರಿಗೆ ನಮ್ಮ ಸಂವಿಧಾನ ಕೊಡುವ ಹಕ್ಕುಗಳನ್ನು ಉಲ್ಲಂಘಿಸಿದ್ದಾರೆ.
ಸಂವಿಧಾನಕ್ಕೆ ಬದ್ಧವಾಗಿ ಬದುಕುವುದು ಪ್ರಜಾಪ್ರಭುತ್ವವನ್ನು ಸಾಕಾರಗೊಳಿಸುವ ರೀತಿ ಎನ್ನುವ ತಿಳುವಳಿಕೆ ನಮ್ಮ ದೇಶದಲ್ಲಿ ಇನ್ನೂ ಬಂದಿಲ್ಲ. ಸಂವಿಧಾನ ಬದ್ಧ ನಡವಳಿಕೆಯನ್ನು ಎತ್ತಿ ಹಿಡಿಯಲು justice system ಹಾಗೂ ಪೋಲಿಸರು, ಸರ್ಕಾರದ ರಾಜಕೀಯ ಶ್ರದ್ಧೆಗಳ ಪ್ರಭಾವವಿಲ್ಲದೆ ಸ್ವತಂತ್ರವಾಗಿ ಕಾರ್ಯ ನಿರ್ವಹಿಸಬೇಕಾಗುತ್ತದೆ. ಆದರೆ ನಮ್ಮ ದೇಶದಲ್ಲಿ ಇದು ಎಂದಿಗೆ ಸಾಧ್ಯವಾಗುವುದೊ ಗೊತ್ತಿಲ್ಲ.
ಯಾರೋ videotape ಮಾಡಿದ್ದರಿಂದ ನಮಗೆ ಈ ಘಟನೆಯ ಪೂರ್ಣ ಚಿತ್ರ ದೊರೆತಿದೆ. videotape ಆಗದೇ, ವರದಿಯಾಗದೇ ಇರುವ ಇನ್ನೂ ಎಷ್ಟು ಕುಕೃತ್ಯಗಳನ್ನು ರಾಮಸೇನೆಯವರು ಮಾಡಿದ್ದಾರೋ ಗೊತ್ತಿಲ್ಲ.
ವಿಕಾಸ್,
ನಿಮ್ಮ ತಿಳುವಳಿಕೆಯ ಮಟ್ಟ ಹಾಗೂ ವಿಷಯ ಗ್ರಹಣದ ಮಟ್ಟ ಅತಿ ಸಾಧಾರಣವಾಗಿದೆ. ರಾಜಕಾರಣಿಗಳಿಗೂ ಅರ್ಥವಾಗಿರುವ ಈ ಸುದ್ದಿ ನಿಮಗೆ ಸರಿಯಾಗಿ ಅರ್ಥವಾದಂತಿಲ್ಲ. ಪಬ್ ನಲ್ಲಿ ನಡೆದ ಘಟನೆಗೆ ಸಾಮ್ಯವಿರುವ ಇತರ ಆಘಾತಕಾರಿ ಘಟನೆಗಳ ಬಗ್ಗೆ ಚೇತನಾ ಬರೆದ್ದಿದ್ದಾರೆ. ಇಷ್ಟು ಸರಳವಾಗಿ ಬರೆದಿರುವ ಬರಹ ನಿಮಗೆ ಅರ್ಥವಾಗಿಲ್ಲವೆಂದ ಮೇಲೆ, ನೀವು ಯಾವುದೇ ಕೆಲಸ ಮಾಡಿದರೂ, ಅದರ ಪೂರ್ಣ ಪರಿಣಾಮ ತಿಳಿದುಕೊಳ್ಳಲು ನಿಮಗೆ ಸಾಧ್ಯವಾಗದ ಕಾರಣ, ಬೇರೆಯವರಿಗೆ ನಿಮ್ಮಿಂದ ಅಪಾಯವಾಗುವ ಸಂಭವ ಇರುತ್ತದೆ. ನಿಮ್ಮ ಬಾಲ್ಯದಲ್ಲಿ ನಡೆದಿರಬಹುದಾದ ಯಾವುದೋ ಆಘಾತಕಾರಿ ಘಟನೆ/ಗಳು ಇದಕ್ಕೆ ಕಾರಣವಿರಬಹುದು. ನೀವು ನಿಮ್ಮ ಮನಸ್ಥಿತಿಯ ಬಗ್ಗೆ ಗಂಭೀರವಾಗಿ ಯೋಚಿಸಬೇಕೆಂದು ನನ್ನ ಅನಿಸಿಕೆ.
-ಅನುರಾಧ
ಹೆಂಗಸಿನ ಬಟ್ಟೆಯ ವಿಚಾರವಾಗಿ ನಮ್ಮ ಇತಿಹಾಸವನ್ನೋ ಕಾವ್ಯಗಳನ್ನು ಓದಿದರೆ ತಿಳಿಯುವುದು.
ಕಾಳಿದಾಸನ ಶಾಕುಂತಲೆಯ ವಸ್ತ್ರವಿನ್ಯಾಸ, ಬೇಲೂರಿನ ಶಿಲಾಬಾಲಿಕೆಯರು, ತಿರುಪತಿಯಲ್ಲಿರುವ ಕೃಷ್ಣದೇವರಾಯನ ಹೆಂಡತಿಯರ ವಿಗ್ರಹಗಳು, ಅಷ್ಟೇ ಯಾಕೆ ನಮ್ಮ ಕನ್ನಡನಾಡಿನ ಹಳ್ಳಿಗಾಡಿನ ಹೆಂಗಸಿನ ಉಡುಗೆ ಇವೆಲ್ಲವುಗಳನ್ನು ಗಮನಿಸಿದರೆ ನಮ್ಮಲ್ಲಿ ಹೆಂಗಸಿಗೆ ಇಸ್ಲಾಂ ದೇಶಗಳ ಹಾಗೆ ತುಂಬುತೋಳು, ಪಾದದ ತನಕ, ಕುತ್ತಿಗೆಯ ವರೆಗೆ, ಹೊಟ್ಟೆ ತೋರದ ಹಾಗೆ, ತಲೆ ಮುಖ ಮುಚ್ಚಿಕೊಳ್ಳುವ ಹಾಗೆ ಬಟ್ಟೆಯ ಸಂಸ್ಕೃತಿ ಇದೆಯೇ?
ಪೂಚಂತೇ ಅವರ ಕಿರಗೂರಿನ ಗಯ್ಯಾಳಿಗಳಲ್ಲಿ ಬರುವ ಕಿರಗೂರಿನ ರೈತಾಪಿ ಹೆಂಗಸರ ಉಡುಗೆಯ ಉಲ್ಲೇಖ ನೋಡಿದರೆ ತಿಳಿಯುವುದು.
“ಬಟ್ಟೆಯಿಂದ ಮನಸ್ಸನ್ನು ಅಳೆಯುವುದು ಎಂಥ ಮೂರ್ಖತನ!” ಗಾಂಧಿಯವರ ಬಟ್ಟೆ ನೋಡಿ ಬ್ರಿಟೀಶರು ಮೊದಲು ನಕ್ಕರಂತೆ.
“ತಾಲಿಬಾನಿಗೊಂದು ಸಂಸ್ಕೃತ ಪದ ಹುಡುಕಬೇಕಾದೀತು ಮತ್ತೆ!” ಹಿಂದೂ ಕೂಡ ಸಂಸ್ಕೃತದ ಪದವಲ್ಲ. ಅದೂ ’ತಾಲಿಬಾನ್’ ಪದವಿರುವ ಭಾಷೆಯದೆ ಅಲ್ಲವೇ.! ಹಾಗೇ ’ಗುಲಾಬಿ’, ’ನೀಯತ್ತು’, ’ಖಾಸಗಿ’ ಮುಂತಾದವೂ ಅದೇ ಭಾಷೆಯ ಪದ.
ಚೇತನಾ ಅವರೆ ನಿಮ್ಮ ಬರಹ ಚನ್ನಾಗಿದೆ. ನಮ್ಮ ಹೆಂಗಸರು ಈ ಬಗ್ಗೆ ದನಿಯತ್ತಿದ್ದಕ್ಕೆ ಮಾದರಿ ನೀವು.
ನನ್ನಿ.
ಈಗ ನಡೆದ ಘಟನೆ ಒಂದು ಪೀಠಿಕೆ ಅಷ್ಟೇ. ಆದ್ರೆ ಲೆಕ್ಕಾಚಾರ ತಪ್ಪಿ ಹೋಯ್ತು.
ಒಂದು – ರಾಜ್ಯದಲ್ಲಿರೋ ಸರ್ಕಾರದ ಸಹಾಯ ಹಸ್ತ ತಲೆ ಮೇಲೆ ಇದೆ ಎನ್ನುವ ಭಂಡ ಧೈರ್ಯ ಈ ಗುಂಪುಗಳಿಗೆ.
ಎರಡು – ಅಲ್ಲಿರೋ ಜನ ಎಲ್ಲ ಬಾಡಿಗೆಯವರು. ಬೇಕಾದಾಗ ಗಲಾಟೆ ಮಾಡೋದಕ್ಕೆ ಬರ್ತಾರೆ. ಹಣ ಕೊಟ್ರೆ ಪೆಟ್ಟು ತಿನ್ನೋಕೇನಂತೆ. ಕೆಲಸ ಹೇಗೂ ಇಲ್ಲ.
ಅವರ ಮೇಲೆ ಇರೋ ಪ್ರಖಂಡ ತಲೆಗಳು – ಅವು ಮೊದಲು ಸ್ವಸ್ಥವಾಗಬೇಕು. ಆದ್ರೆ, ಆ ರಾಜಕಾರಣಿಗಳು ಮತ್ತು ಸರಕಾರಗಳಿಗೆ ಬೇಕಾಗೋದೇ ಇಂತಹ ಕೆಲಸವಿಲ್ಲದ ಮಂಗಗಳು. ಸಮಸ್ಯೆ ಯಾವಾಗಲೂ ಜ್ವಲಂತವಾಗಿದ್ದರೆ ತಾನೆ ಅವರ ಬೇಳೆ ಬೇಯೋದು !!!! ಅದು ಈ ಪೆದ್ದು ತಲೆಗಳಿಗೆ ಹೇಗೆ ಅರ್ಥವಾಗುತ್ತೆ ಪಾಪ !
ಮೂರು – ದೊಡ್ಡ ದೊಡ್ಡದಾಗಿ ಮಾತೋಡೋ ಜನಗಳೇ ಸಣ್ಣ ದೊಡ್ಡ ಪಾರ್ಟಿಗಳಲ್ಲಿ ಕುಡ್ದು ಅವಾಂತರ ಮಾಡ್ಕೊಳ್ತಾರೆ. ಅದನ್ನೆಲ್ಲಾ ಎಂತದ್ದು ಹೇಳೋದು !!! ಹೇಳಿ ಮುಗಿಯುತ್ತಾ ???
ನಾಲ್ಕು – ಈ ರೂಲ್ಸ್ – ಕಟ್ಟು ಪಾಡು ಇವೆಲ್ಲಾ ನಮ್ಗೇ … ಹೆಂಗಸರಿಗೇ ಅಲ್ವಾ. !!! ಅದನ್ನು ನಾವೇ ಬ್ರೇಕ್ ಮಾಡ್ಬೇಕು !!!
we love to break the rules ! forever !!!
ಈ ವಿಷಯ ಎತ್ತಿಕೊಂಡದ್ದಕ್ಕೆ thanks.
ಎಲ್ಲರದ್ದೂ ತಪ್ಪು ಇದೆ.
ನಾವೇ ಇಡೀ ದೇಶವನ್ನು ರಕ್ಷಿಸ್ತಾ ಇದ್ದೇವೆ ಎ೦ಬ ಅತಿಯಾದ ಕಾಳಜಿ/ಅಧಿಕಪ್ರಸ೦ಗದ ಪರಮಾವಧಿ.
ಅಷ್ಟು ರಾತ್ರಿ ಪಬ್ ಓಪನ್ ಮಾಡೋದಿಕ್ಕೆ ಅನುಮತಿ ಕೊಟ್ಟಿದ್ದು.
ಓದೋದು ಬಿಟ್ಟು ಪಬ್ ಅಲ್ಲಿ ಬಿದ್ಕೊಳ್ಳೋದು.
ಮಾಧ್ಯಮದ ಪ್ರಚಾರ ಅಥವಾ ಬೆ೦ಬಲ. ಯಾಕ೦ದ್ರೆ ರಾಮ ಸೇನೆಯವ್ರು tv9 ಅವ್ರನ್ನು ಕರ್ಕೊ೦ಡು ಬ೦ದಿದ್ದಾರೆ. ಮಾಧ್ಯಮದವರಿಗೂ ನ್ಯೂಸ್ ಬೇಕಲ್ಲ. ಇ೦ತಹ ಘಟನೆಯನ್ನು ಅವ್ರು ತಡೆದಿದ್ರೆ( ಸಮ್ ಹೌ..) ಪಾಪ ಅವ್ರು ಏನ್ ಮಾಡ್ತಾರೆ!!!
ವಾರೆವ್ವ! ಚೇತನಾ, ನಿಮ್ಮ ವಿಚಾರಧಾರೆ ಓದಿ ಸಮಾಧಾನವಾಯಿತು. ವ್ಯಕ್ತಿ ಸ್ವಾತಂತ್ರ್ಯದ ಹಂಬಲ ಇರುವ ತನಕ ಇಂತಹ ಕುಕೃತ್ಯಗಳನ್ನು ಖಂಡಿಸುವವರೂ ಇರುತ್ತಾರೆ. ಧರ್ಮ,ಜಾತಿ,ಭಾಷೆ,ಲಿಂಗ ಗಳ ಹೆಸರಿನಲ್ಲಿ ನಡೆಯುವ ಇಂತಹ ಸರ್ವಾಧಿಕಾರ ಧೋರಣೆಗೆ ನಿಮ್ಮೊಡನೆ ನನ್ನದೂ ಒಂದು ಧಿಕ್ಕಾರದ ದನಿಯಿದೆ.
– ವಿಶಾಲಮತಿ
There are two sides to every question..
ವಿಶಾಲಮತಿಯವರಿಗೆ ಧನ್ಯವಾದ.
ಬರುತ್ತಾ ಇರಿ…
ಹೀಗೆಲ್ಲಾ ಮಾಡಿ ಹಿಂದು ಸಂಸ್ಕೃತಿಯನ್ನ , ಧರ್ಮವನ್ನ ಉಳಿಸಿತಿನಿ ಅನ್ನೋದು ಮಾತ್ರ ಸುಳ್ಳು….. ಜಾಗೃತಿ ಮತ್ತು ಸಂಘತಿತ ಹೋರಟದಿಂದ ಮಾತ್ರ ಸಾದ್ಯ..ಇದು ನನ್ನ ಅಭಿಪ್ರಾಯ
ಮಧು ಮಯ್ಯ
maiya.tumblr.com
ಹೀಗೆಲ್ಲಾ ಮಾಡಿ ಹಿಂದು ಸಂಸ್ಕೃತಿಯನ್ನ , ಧರ್ಮವನ್ನ ಉಳಿಸಿತಿನಿ ಅನ್ನೋದು ಮಾತ್ರ ಸುಳ್ಳು….. ಜಾಗೃತಿ ಮತ್ತು ಸಂಘಟಿತ ಹೋರಾಟದಿಂದ ಮಾತ್ರ ಸಾದ್ಯ..ಇದು ನನ್ನ ಅಭಿಪ್ರಾಯ
ಮಧು ಮಯ್ಯ
maiya.tumblr.com
ಇನ್ನಷ್ಟು ಅಭಿಪ್ರಾಯಗಳು..
http://kannada.webdunia.com/newsworld/news/current/0901/28/1090128044_1.htm
ಮಧು,
ಜಾಗೃತಿಯಾಗಬೇಕು, ಸಂಗಟಿತ ಹೋರಾಟ ಸರಿಯಾದ ನಿಟ್ಟಿನಲ್ಲಿ ಸಾಗಬೇಕು. ನಿನ್ನ ಅಭಿಪ್ರಾಯ ಸರಿಯೇ ಸರಿ.
ಪ್ರಮೋದ್,
ಲಿಂಕ್ ಕಳಿಸಿಕೊಟ್ಟಿದ್ದಕ್ಕೆ ಧನ್ಯವಾದ.
true. all those thugs basically wanted to ‘have fun’ breaking some furniture and if possible molest some girls, which they did successfully.
moral policing!! eh..!
ಚೇತನ ಅಕ್ಕಾ!!
ಈ ವಿಷಯ ಪ್ರಸ್ತಾಪಿಸಿದ್ದಕ್ಕೆ ಹಾಗು ಸಕಾಲಿಕ ಬರಹಕ್ಕೆ ಥ್ಯಾಂಕ್ಸ್ ಹೇಳ್ತಿದ್ದೀನಿ (ಹಾಗೆ ಸ್ವಲ್ಪ ದಿನಗಳ ನಂತರ ಈ ಘಟನೆಯ ಬಗ್ಗೆ ನಿಮಗೆ ನೀವು ಅತಿಯಾಗಿ ಪ್ರತಿಕ್ರಿಯಿಸಿದ್ದೆನೆಂದು ಅನ್ನಿಸಿ ಇಡೀ ಬರಹವನ್ನೇ ಡಿಲೀಟ್ ಮಾಡೋಲ್ಲ ಎಂದು ನಂಬಿದ್ದೇನೆ;))
– ಶರತ್ ಚಂದ್ರ
ವಿಕಾಸ,
ನಾನು ಅಕ್ಷರವಿಹಾರ ಓದಿದೆ. ಜೈಲಿಗೆ ಹೋಗಿರುವ ಸೇನೆಯವರ ಮನೆಯವರ ಬಗ್ಗೆ, ಚರ್ಚು ಮುರಿದವರ ಬಗ್ಗೆ ಸಂತಾಪ ವ್ಯಕ್ತಪಡಿಸುವ ತಮ್ಮ ಸ್ನೇಹಿತ ಮಹಾಶಯರಿಗೆ ಆ ಧರ್ಮಾಂಧರು ಮಾಡಿರುವ ಕೆಲಸದ ಕರ್ಮಾಂತರಗಳ ಬಗ್ಗೆ , ಅವರು ಮುರಿದಿರುವ ಮನಸ್ಸುಗಳ ಬಗ್ಗೆ ಅರಿವೇ ಇದ್ದಂತಿಲ್ಲ. ಅವರಿಗೆ ವಿವೇಚನೆಯಿಂದ ಒಂದು ಘಟನೆಯೆಡೆ ನೋಡುವ, ವಿಶ್ಲೇಷಿಸುವ ಶಕ್ತಿಯೆ ಹೊರಟುಹೋಗಿದೆ ಅನ್ನಿಸ್ತಿದೆ. ಸಾಧ್ಯವಾದರೆ ಅವರಿಗೆ ಸ್ನೇಹಿತ ಮಯೂರ ಕಳಿಸಿರುವ ಈ ಕ್ಜೆಳಗಿನ ಲಿಂಕು ಕೊಡಿ. ಹೆಣ್ಣುಮಕ್ಕಳ ಮೇಲೆ ಹಲ್ಲೆಯಾದರೆ ಅದನ್ನು ಪ್ರತಿಭಟಿಸುವವರು ನಿಮ್ಮ ಸ್ನೇಹಿತರ ಪ್ರಕಾರ ಬಾಯಿಬಡಾಯಿ ಮಾಡುವ ಫೆಮಿನಿಸ್ಟರು. ದಾಳಿಯನ್ನು ಪ್ರತಿಭಟಿಸುವವರ ಮನೆಯ ಹೆಣ್ಣುಮಕ್ಕಳು ಕೂಡ ನಾಳೆ ಪಬ್ಬಿನಲ್ಲಿ ಸಿಗಬಹುದು ಎಂದು ಉಡಾಫೆಯಾಗಿ ಮಾತನಾಡುವ ಇವರು ನಾಳೆ ಇವರ ಮನೆಯ ಹೆನ್ಣುಮಕ್ಕಳನ್ನು ಯಾರಾದರು ಛೇಡಿಸಿದರೂ ಸುಮ್ಮನಿರುವರೆ? ನನ್ನ ಪ್ರಕಾರ ನಿಮ್ಮ ಸ್ನೇಹಿತನಿಗೆ ಹಗಲುಕುರುಡು.ವಿಕಾಸ್, ದಯವಿಟ್ಟು ಯಾರೊ ಹೇಳಿದ್ದನ್ನೆಲ್ಲ ಸರಿ ಅನ್ನುವುದು, ಅದಕ್ಕೆ ವಿಶ್ಲೇಷಣೆಯ ಹೆಸರು ಕೊಡುವುದನ್ನ ಬಿಟ್ಟು ಆಗಿದ್ದು ಸರಿಯೊ ತಪ್ಪೊ ನಿಮ್ಮ ಸ್ವಂತ ಅಭಿಪ್ರಾಯ ತಿಳಿಸಿ . ಓದಿದ ಮೇಲೂ ನಿಮ್ಮ ಸ್ನೇಹಿತ ತನ್ನ ವಿತಂಡವಾದವನ್ನ ಬಿಡಲಾರರೆಂದು ತಿಳಿದಿದ್ದೂ ಈ ಪ್ರಯತ್ನ ಮಾಡುತ್ತಿದೇನೆ.
http://www.hindu.com/2009/01/27/stories/2009012759421000.htm
ವಿಷಾದದೊಡನೆ, ಟೀನಾ.
ಸುಬ್ಬು ಅವರ ಪ್ರತಿಕ್ರಿಯೆಗೆ ಧನ್ಯವಾದ.
ಟೀನ್, ಸರಿಯಾದ ಉತ್ತರ!
ಶರತ್… ಈ ವರ್ಷ ಪ್ರತಿಜ್ಞೆ ಮಾಡಿದೇನೆ. ಆಕಾಶ ಬಿದ್ರೂ ಬ್ಲಾಗ್ ಡಿಲೀಟ್ ಮಾಡೋಲ್ಲ!
ನಲ್ಮೆ,
ಚೇತನಾ
ಆತ್ಮೀಯ ಚೇತನ ರವರೆ ಬರಹ ಬಹಳ ವಿಶೇಷವಾಗಿದೆ
ಧನ್ಯವಾದಗಳು