ಕೊನೆಗೂ ಸಿದ್ದಣ್ಣನ ಪುಸ್ತಕ ರೆಡಿಯಾಗ್ತಿದೆ!!


ಹಾಗೆ ನೋಡಿದರೆ, ಸಿದ್ದು ದೇವರ ಮನಿ ಎಂಬ ಯುವ ಕವಿಯ ಕವನ ಸಂಕಲನ ಯಾವತ್ತೋ ಪುಸ್ತಕವಾಗಿ ಹೊರಬರಬೇಕಿತ್ತು.
ಆದರೆ, ಚೆಂದ ಚೆಂದದ ಕವಿತೆಗಳನ್ನು ಬರೆದೂ ಗೆಳೆಯರು ‘ಚೆನ್ನಾಗಿದೆ’ ಅಂದಾಗ ಸ್ವತಃ ‘ಹೌದಾ’ ಅನ್ನುತ್ತ ಬೆರಗಿಗೆ ಒಳಗಾಗುವ ಸಂಕೋಚದ ಹುಡುಗ ಸಿದ್ದು, ಹಾಗೆ ತನ್ನಿಂದ ತಾನೆ ಪುಸ್ತಕ ಹೊರಡಿಸುವುದು ಅಸಾಧ್ಯದ ಮಾತಾಗಿತ್ತು.

ಕನ್ನಡ ಪುಸ್ತಕ ಪ್ರಾಧಿಕಾರ ಪ್ರತಿ ವರ್ಷ ಆಯ್ದ ಯುವ ಕವಿಗಳ ಚೊಚ್ಚಲ ಕೃತಿ ಪ್ರಕಟಣೆಗೆ ನೀಡುವ ‘ಪ್ರೋತ್ಸಾಹ ಧನ ಪ್ರಶಸ್ತಿ’ಗೆ ಸಿದ್ದುವಿನ ಕವನ ಸಂಕಲನ ಆಯ್ಕೆಯಾಗಿದೆ. ಈ ಪ್ರಶಸ್ತಿ ಪಡೆದವರು ಪುಸ್ತಕ ಅಚ್ಚುಹಾಕಿಸಲೇಬೇಕಿರೋದ್ರಿಂದ ಸಿದ್ದುವಿನ ‘ಬರುವ ನಾಳೆಗಳಿಗೆ ರಾತ್ರಿಗಳೇ ಇರುವುದಿಲ್ಲ’ ಕವನ ಸಂಕಲನವೂ ಮುದ್ರಣ ಭಾಗ್ಯ ಕಾಣುತ್ತಿದೆ!
ಈತನ ಈ ಸಾಹಸದ ಹಿಂದೆಯೂ ಗೆಳೆಯರ ಬಳಗದ ಒತ್ತಾಯವಿದೆ. ನಿರಂತರ ಪ್ರೋತ್ಸಾಹವಿದೆ. ಹೀಗಾಗಿ, ಕವಿ ಗೆಳೆಯನ ಗೆಳೆಯರಿಗೆಲ್ಲ ನನ್ನ ಕಡೆಯಿಂದೊಂದು ಥ್ಯಾಂಕ್ಸ್ ಹೇಳುತ್ತಾ, ಸಿದ್ದುವಿಗೊಂದು ಕಂಗ್ರ್ಯಾಟ್ಸ್ ಹೇಳುತ್ತಾ ನನಗಾದ ಸಂತಸವನ್ನ ನಿಮ್ಮ ಜೊತೆ ಹಂಚಿಕೊಳ್ತಿದೇನೆ.
ಸದ್ಯಕ್ಕೆ, ಸಿದ್ದುವಿನದೊಂದು ಕವಿತೆಯನ್ನ ಓದಿಕೊಳ್ಳಿ. ಮತ್ತೂ ಚೆಂದದ ಕವಿತೆಗಳಿಗಾಗಿ ಇಲ್ಲಿ ಭೇಟಿ ಕೊಡಿ.

ಆಕಾಶಕ್ಕೀಗ ಪ್ರೀತಿ ಅರಸುವ ಕಾಲ !

ಹೌದು,
ನಾನು ಬೀದಿ ಬದಿಯ ಅಜ್ಞಾತ ನಾಯಿ !

ಪ್ರೀತಿ ಬಿತ್ತಿ ಪ್ರೀತಿ ಬೆಳೆಯಲು
ಪಟ್ಟ ಪರಿಪಾಟುಲುಗಳೆಲ್ಲಾ ಆಕಾಶಕ್ಕೆ ಮರೆಯುವ೦ತೆ ಕೋರಿ
ನಾನು ಬಯಲಿಗೆ ಬಿದ್ದಿದ್ದೇನೆ.

ಸಾಕು, ನಿಮ್ಮಗಳ ಅಪ್ಪುಗೆ ಉಸಿರುಗಟ್ಟಿಸಿದೆ.
ನಿಮ್ಮ “ನಗೆ” ಗೆ ಕೃತಕದ ಕಳೆ ಕೂತಿದೆ.
ಬೆಳಕ ನೀಡುವ ಬಾನು, ಹೆಜ್ಜೆ ಇಡಬಹುದಾದ ಬೆನ್ನ ಮೆಟ್ಟಿಲು,
ನಿಮ್ಮ೦ಗಳದಲ್ಲೇ ತಿ೦ದ “ತು೦ಡು ರೊಟ್ಟಿ” ,
ಈಗೂ ನಿಮ್ಮಗಳ ನಟನೆಯ ಪಾತ್ರಗಳಾಗಬಹುದೆ೦ದು ಈಗೀಗ ಗೊತ್ತಾಗಿದೆ.
ನಿಮ್ಮ ಮನ..ಮನೆಗಳಿಗೆ ಯಾವುದೋ ಬುದ್ದಿರಹಿತ ಬಣ್ಣ ಬಳಿದಿದೆ.
ಬಣ್ಣ ಮಾಸಿ, ಬುದ್ದಿ ಬ೦ದು ಹುಡುಕಾಡಿದರೆ
ನನ್ನದೋ … ಥಡ್೯ ರೇಟ್ ಸ್ಲ್೦ ನ ವಿಳಾಸ !
ಭಾಗಶ:  ನೀವು ಹುಡುಕಲಾರಿರಿ…
ಅದು ನನ್ನ ಸೋಲಿರಬಹುದು.

ಆಕಾಶದ ಹಾರ್‍ಐಕೆಯೆಲ್ಲಾ ನಿಮ್ಮ ಮೇಲಿದೆ
ನಿಜಕ್ಕೂ ಇದು ನಿಮ್ಮ ಗೆಲುವೇ ಸರಿ.
ಚೌಕಟ್ಟಿನಾಚೆಯ ಕಾಲದ ಯ೦ತ್ರ ಏನನ್ನೋ ಹೇಳುತ್ತಿದೆ.

ಕ೦ಗಳ ಕನವರಿಕೆಗಳು ಮೊಳಕೆಯೊಡೆದು
ದಿಗ೦ತದಾಚೆಯಲ್ಲಿ ಅದೆ೦ಥದೋ ಪರಿಮಳ.
ಕೆಲವೊಮ್ಮೆ ಚಿಗುರು ಕಮರಿದಾಗೆಲ್ಲ
” ಪ್ರೀತಿ ” ಪಡೆಯಲು ” ಪ್ರೀತಿ ” ಹ೦ಚು
ಆಕಾಶದ ಅರಿವಿನ ಮಾತಿನ ಎಚ್ಚರ!

ಪ್ರೀತಿಗಾಗಿ ಹಪಾಹಪಿಸಿ ಕಳೆದ ಕಾಲದಿ೦ದ
ನಿಮ್ಮ ಕಾಲ ಬಳಿ ನಿ೦ತೇ ಇದ್ದೇನೆ.
ಒಡೆದ ಮನದ ಮಾಳಿಗೆಯ ಮ೦ದಿ
ಬಿದ್ದ ಬೆಳದಿ೦ಗಳ ಸವಿಯಲ್ಲಿದ್ದಾರೆ.

ಎಲ್ಲವನ್ನೂ ಆವಕಾಶವಿತ್ತ ಆಕಾಶಕ್ಕೀಗ ಪ್ರೀತಿ ಅರಸುವ ಕಾಲ !

– ಸಿದ್ದು ದೇವರಮನಿ

ನಿಮ್ಮ ಟಿಪ್ಪಣಿ ಬರೆಯಿರಿ

Blog at WordPress.com.

Up ↑