ನನ್ನೂರ ದಾರಿಯಲ್ಲಿ ನಡೆದಾಡಿದ ಆ ದಿನ…


ಮೊನ್ನೆ ನಾನು, ನನ್ನ ತಮ್ಮ ನನ್ನೂರು ತೀರ್ಥಳ್ಳಿಗೆ ಹೋಗಿದ್ವಿ. ಬರೋಬ್ಬರಿ ಒಂದೂವರೆ ದಶಕದ ನಂತರ ನಾವಿಬ್ಬರೂ ಹಾಗೆ ನಮ್ಮೂರ ರೋಡಲ್ಲಿ ಒಟ್ಟಾಗಿ ಓಡಾಡಿದ್ದು! ಅದರದೊಂದು ಖುಷಿ ಖುಷಿ  ಸಂಕಟದ ಅನುಭವ ಹಂಚಿಕೊಳ್ತಿದೇನೆ ನಿಮ್ಮೊಟ್ಟಿಗೆ…

ಊರು, ಉಳಿದಂತೆಲ್ಲ ಹಾಗೇ ಇತ್ತು. ಗದ್ದೆಗಳಲ್ಲಿ ಕಾಂಪ್ಲೆಕ್ಸುಗಳು ಎದ್ದು ನಿಂತಿದ್ದು, ಖಾಲಿ ಹೊಡೆಯುತ್ತ ಬೀಗ ಬಡಚಿಕೊಂಡು ಬಿದ್ದಿದ್ದವು. ಊರಿನ ರೋಡಿನುದ್ದಕ್ಕೂ ನಡೆಯುವ ಖುಷಿಗೆಂದೇ ನಾನು, ಅಪ್ಪಿ ಆಟೋ ಹತ್ತದೆ ಪೇಟೆ ತನಕ ಕಾಲು ಬೀಸುತ್ತ ಹೊರಟಿದ್ದೆವು. “ಇವ್ರೆಲ್ಲ ಹೊಟ್ಟೆಗೆ ಏನು ಮಾಡ್ಕೊಳ್ತಾರೋ?” ಭೂತ ಬಂಗಲೆ ಹಾಗಿನ ಕಾಂಪ್ಲೆಕ್ಸ್ ಗಳನ್ನ ತೋರಿಸಿ ಕೇಳಿದೆ. ಅಂವ ಯಥಾಪ್ರಕಾರ ಮುಖ ಉಜ್ಜಿಕೊಂಡು ಒಣ ನಕ್ಕ.

ಅಪ್ಪಿಗೆ ಬೆಂಗಳೂರಿಗೆ ಬರೋದು ಸುತಾರಾಂ ಇಷ್ಟವಿದ್ದಿಲ್ಲ. “ತೋಟ, ಗದ್ದೆಯಿದ್ದವರು ಹಳ್ಳೀಲಿ ಬದುಕಬಹುದು. ಅದೆಲ್ಲ ಇಲ್ಲದವರು ನಗರಕ್ಕೆ ಗುಳೆ ಏಳಲೇಬೇಕಲ್ಲ? ಇಲ್ಲವಾದರೆ ಹೊಟ್ಟೆಗೇನು ಮಾಡೋದು!?” ಇನ್ನೂ ಏನೇನು ಯೋಚಿಸ್ತಿದ್ದನೋ, ಅಂತೂ ಸುಮಾರು ದೂರ ಸೈಲೆಂಟಾಗೇ ಇದ್ದ.

ಹೋಗುತ್ತ ಹೋಗುತ್ತ ವಾಟರ್ ಟ್ಯಾಂಕಿನ ಎದುರಿನ ಗದ್ದೆ ಸಾಲು ಶುರುವಾಯ್ತು. ರೋಡಿಂದ ಇಳಿಜಾರಲ್ಲಿ ನಡೆದರೆ ಗದ್ದೆ ಬೇಲಿ. ಅಲ್ಲಿ ಪುಟ್ಟ ಪುಟ್ಟ ಕೆಂಪು ಹೂಗಳು. ಅದರಿಂದ ಎದ್ದು ಬಂದ ಉದ್ದುದ್ದ ಹಳದಿ ಕೇಸರಗಳು! ಮುಟ್ಟಲಂತೂ ನುಣುಪು, ನಾಜೂಕು. ಸ್ಕೂಲಿಗೆ ಹೋಗುವಾಗೆಲ್ಲ ಅಪ್ಪಿ ಕೆಳಗಿಳಿದು, ಸಾಹಸ ಮಾಡಿ ಆ ಹೂಗಳನ್ನ ತಂದುಕೊಡ್ತಿದ್ದ. ತುಂಬ ಪ್ರೀತಿಯಿಂದ ಅವನ್ನ ಊಟದ ಬುಟ್ಟಿಯಲ್ಲಿಟ್ಟುಕೊಂಡು ಸ್ಕೂಲಿನ ಆವರಣದಲ್ಲಿದ್ದ ಚರ್ಚಿಗೆ ಒಯ್ಯುತ್ತಿದ್ದೆ. ತಮ್ಮ ಖುಷಿ ಖುಷಿಯಾಗಿರಲಿ ಅಂತ ಕೇಳ್ಕೊಳ್ತಾ ಅಲ್ಲೇ ಬಾಗಿಲಲ್ಲಿ ಹೂಗಳನ್ನಿಟ್ಟು ಬರ್ತಿದ್ದೆ. ನನ್ನೊಟ್ಟಿಗೇ ಅವನಿಗೂ ಅದೆಲ್ಲ ನೆನಪಾಗಿರಬೇಕು. ‘ಕೆಂಪು ಹೂ’ ಅನ್ನುತ್ತ, ಅಲ್ಲೆಲ್ಲೂ ಕಾಣದ ಅವುಗಳಿದ್ದ ಜಾಗ ತೋರಿಸಿ ನಕ್ಕ.

ಹಾಗೇ ಮುಂದೆ ಹೋದರೆ ಇಂದಿರಾನಗರಕ್ಕೆ ಹೋಗುವ ರೋಡು. ಅಲ್ಲೂ ಗದ್ದೆಯಲ್ಲಿ ಒಂದಷ್ಟು ಬಿಲ್ಡಿಂಗುಗಳು, ಮನೆಗಳು, ಹೋಟೆಲು. ನೊಣ ಹೊಡೆಯುತ್ತ ಕೂತಿದ್ದರು ಅದರದರ ಮಾಲೀಕರು. ಎಲ್ಲ ಬದಲಾಗಿದೆ ಅಂದುಕೊಳ್ಳುವ ಹೊತ್ತಿಗೆ ಮೀನು ಗಾಡಿಯ ಹಾರನ್ನು ಕೇಳಿಸಿ ಖುಷಿಯಾದೆ. “ಸಧ್ಯ! ಇದೊಂದು ಹಾಗೇ ಉಳಿದಿದ್ಯಲ್ಲ ಮಹರಾಯ!!” ಅನ್ನುವಾಗ ಮೀನು ಸಾಬರು ಬೆವರೊರೆಸಿಕೊಳ್ಳುತ್ತ ಸೈಕಲ್ ತುಳಿದುಕೊಂಡು ನಮ್ಮನ್ನು ಹಾದು ಹೋದರು.

ನಾವಿಬ್ಬರೂ ಇಷ್ಟಪಟ್ಟೇ ಮನೆಯಿಂದ ನಡೆದು ಹೊರಟಿದ್ದೆವು. ಆದರೀಗ ಯಾಕೋ ಕಾಲು ಸೋತಹಾಗನಿಸುತ್ತಿತ್ತು. ನಡೆದಷ್ಟೂ ದಾರಿ ಉದ್ದವಾಗುತ್ತ ಹೋಗುತ್ತಿದೆ ಅನಿಸತೊಡಗಿತ್ತು. ನಾವು ಐಸ್ ಕ್ಯಾಂಡಿ ಕುಟ್ಟುತ್ತಿದ್ದ ಕಟ್ಟೆ, ಕಲ್ಲು ಹೊಡೆಯುತ್ತಿದ್ದ ಸೀಕಂಚಿ ಮರ, ಗೆಣಸು ಕದಿಯುತ್ತಿದ್ದ ತರಕಾರಿ ಅಂಗಡಿ ಎಲ್ಲವೂ ಅವಾರ್ಡ್ ಪಿಚ್ಚರಿನ ದೃಶ್ಯಗಳಂತೆ ಬೋರು ಹುಟ್ಟಿಸುತ್ತ ಹಾದು ಹೋದವು. ಆ ಹೊತ್ತಿಗೆ ಗದ್ದೆ ಸಾಲು ಮುಗಿದು ಪೇಟೆ ಶುರುವಾಯ್ತು.

‘ಇಲ್ಲೊಂದು ಕೇಬಲ್ ಫ್ಯಾಕ್ಟರಿ ಮಾಡ್ಬೇಕು ಅಂದ್ಕೊಂಡಿದ್ದೆ…’ ಅಪ್ಪಿ ಏನೇನೋ ಹೇಳಿದ. ಅವನ ದನಿಯಲ್ಲಿ ಹತಾಶೆ ಎದ್ದುಕಾಣುತ್ತಿತ್ತು. ‘ಎಲ್ರೂ ಊರು ಬಿಟ್ಟು ಹೋದ್ರೆ ಇಲ್ಲಿರೋರು ಯಾರು? ಹೇಗೋ ಅಡ್ಜಸ್ಟ್ ಮಾಡ್ಕೋಬೇಕು…’ ಅಂತ ಪಾಠ ಹೇಳಿಕೊಂಡ. ಆದರೆ ಅದನ್ನೆಲ್ಲ ಅಂವ ಯಾರಿಗೆ ಹೇಳ್ತಿದಾನೆ? ಯಾಕೆ ಹೇಳ್ತಿದಾನೆ? ತೋಚದೆ ಪೆದ್ದುಪೆದ್ದಾಗಿ ನಕ್ಕೆ.

ಅಗೋ, ಅಲ್ಲಿ ಬೆಂಗಳೂರಿನ ಹಾಗೇ ದೊಡ್ಡ ದೊಡ್ಡ ವಿನೈಲ್ ಪೋಸ್ಟರುಗಳು ಕಟ್ಟಿಕೊಂದಿದ್ದವು. ಮಹಾಶಯರೊಬ್ಬರು ಎರಡೂ ಕೈ ಮುಗಿದು ನಗುವ ಪೋಸು ಕೊಟ್ಟಿದ್ದರು. ಉಳಿದೊಂದಷ್ಟು ಜನ ‘ತಪ್ಪಿಸಿಕೊಂಡಿದ್ದಾರೆ’ ರೀತಿಯಲ್ಲಿ ಪಾಸ್ಪೋರ್ಟ್ ಸೈಜ್ ಫೋಟೋದಲ್ಲಿ ಹುದುಗಿಕೊಂಡಿದ್ದರು. ಊರ ಜನರ ಮುಖದಲ್ಲಿ ಕಳೆ ಇರುವಂತೇನೂ ಕಾಣಲಿಲ್ಲ. ಆಟೋ ಸ್ಟ್ಯಾಂಡಿನ ಉದ್ದಕ್ಕೂ ಆಟೋಗಳು ತೂಕಡಿಸ್ತಿದ್ದವು. ಹುಡುಗರು ಅದರೊಳಗೆ ಡೆಕ್ ಹಾಕಿಕೊಂಡು ಹಾಡು ಕೇಳುತ್ತ ಮಲಗಿದ್ದರು. ಯಾಕೋ ಇಡಿಯ ಊರಿಗೂರೇ ನಿಟ್ಟುಸಿರು ಬಿಟ್ಟುಕೊಂಡು ಓಡಾಡುತ್ತಿರುವ ಹಾಗೆ ಅನಿಸಹತ್ತಿತು.

ಅಪ್ಪಿಯ ಕಣ್ಣುಗಳಲ್ಲಿ ಹಣಕಿದೆ. ಒಳಗೆಲ್ಲ ನೀರು ತುಂಬಿಕೊಂಡು ಮೇಲೆ ಮೇಲೆ ಒಣಗಿ ಬರಡಾಗಿಹೋಗಿದ್ದ. ಪೇಟೆಯ ಕೆಲಸಗಳೆಲ್ಲ ಮುಗಿಸಿಕೊಂಡು ವಾಪಸು ಹೊರಟ ಇಬ್ಬರಲ್ಲೂ ನಡೆಯುವ ಹುಮ್ಮಸ್ಸಾಗಲೀ, ಕಾಲನ ನಡೆಯನ್ನ ಅರಗಿಸಿಕೊಳ್ಳುವ ತಾಖತ್ತಾಗಲೀ ಉಳಿದಿರಲಿಲ್ಲ.

ಆಟೋ ಹತ್ತಿ ಕುಳಿತವರ ಮುಖ ನೋಡಿಯೇ ಆಟೋಹುಡುಗನಿಗೆ ನಮ್ಮ ಮನೆ ವಿಳಾಸ ಗೊತ್ತಾಗಿ ಹೋಯ್ತು. ‘ಅರಾಮ್ ಅದೀರೇನ್ರೀ ಭಟ್ರೇ?’ ಅನ್ನುತ್ತ ರೊಂಯ್ಯನೆ ಹಾರಿ ನಮ್ಮನ್ನು ಮನೆ ಮುಟ್ಟಿಸಿದ ಸುಬ್ಬು, ಚಿಕ್ಕವರಿರುವಾಗ ನಮ್ಮ ಜತೆ ಸೊಂಟಕ್ಕೆ ಹಗ್ಗ ಕಟ್ಟಿಕೊಂಡು ಬಸ್ ಆಟ ಆಡುತ್ತಿದ್ದ.

11 thoughts on “ನನ್ನೂರ ದಾರಿಯಲ್ಲಿ ನಡೆದಾಡಿದ ಆ ದಿನ…

Add yours

  1. ಚೇತನಾ, ನೀವು ಪ್ರತಿ ಸಾರಿ ತೀರ್ಥಹಳ್ಳಿಯ ಬಗ್ಗೆ ಬರೆಯುವಾಗಲೂ ನನ್ನನ್ನು ನನ್ನ ಶಾಲಾ ದಿನಗಳಿಗೆ ಕರೆದೊಯ್ಯುತ್ತೀರಿ. ಈ ಪೋಸ್ಟು ನಾನು ತೀರ್ಥಹಳ್ಳಿಯ ಸುತ್ತ ಹಳ್ಳಿಗಳ ಬಗ್ಗೆ ಈಗೀಗ ಕೇಳುತ್ತಿರುವ ಕಥೆಗಳೇ ಆಗಿವೆ. ಮಾಸ್ತಿಕಟ್ಟೆ ಕಾಲೋನಿಯಲ್ಲಿ ಇಂದು ಹೆಚ್ಚಾಗಿ ಏನೂ ಉಳಿದಲ್ಲಿ ಎಂದು ಕೇಳಿ ಬಂತು. ನಾನು ಓದಿದ ಶಾಲೆ ಏನಾಗಿದೆ ಎಂಬ ಸುಳಿವೂ ನನಗಿಲ್ಲ. ನಾನು ಅಲ್ಲಿರುವಾಗ ಆ ಜಾಗದ ಮಹತ್ವ ತಿಳಿದಿರಲಿಲ್ಲ. ಇಂದು ಆ ಊರನ್ನು ನೆನೆಸಿಕೊಂಡಾಗ, ಅಲ್ಲಿ ಆಡಿದ ಆಟಗಳು, ಬಿದ್ದು ಎದ್ದ ಜಾಗಗಳು ಎಲ್ಲಾ ಒಂದು ಹಳೆಯ ಈಸ್ಟ್ಮನ್ ಕಲರಿನ ಚಿತ್ರದಂತೆ ಓಡುತ್ತವೆ.
    ಮಾಸ್ತಿಕಟ್ಟೆಯಿಂದ ತೀರ್ಥಹಳ್ಳಿಗೆ ಹೋಗುವಾಗ ಬಲಗಡೆ ಕಾಣುವ ಸ್ಮಶಾನವನ್ನು ನೋಡಿ ನಾನು ಯಾವಾಗಲೂ ಹೆದರುತ್ತಿದ್ದೆ :P. ತೀರ್ಥಹಳ್ಳಿಯ ಎಂದೂ ಮರೆಯದ ನೆನಪುಗಳಲ್ಲಿ ಅದೂ ಒಂದು. ಅದ್ಯಾವುದೋ ಹೋಟೆಲಿನಲ್ಲಿ ತಿನ್ನುತ್ತಿದ್ದ ಕಟ್ಲೆಟ್. ಎರಡು ಹೆಂಚಿನ ಪ್ಲಾಟ್‍ಫಾರ್ಮ್‍ಗಳಿದ್ದ ಬಸ್‍ಸ್ಟ್ಯಾಂಡ್. ತುಂಗಾ ತೀರದ ದೇವಸ್ಥಾನ ಮತ್ತು ಬ್ರಿಜ್ಜು (ವಿಶ್ವೇಶ್ವರಯ್ಯ ಕಟ್ಟಿದ್ದು ಅಂತ ನಾವು ಬಾಯಿ ಅಗಲ ಮಾಡಿಕೊಂಡು ನೋಡುತ್ತಿದ್ವು). ಊರಿನ ಮಧ್ಯದಲ್ಲಿ (ಬಸ್ ಸ್ಟ್ಯಾಂಡ್ ಮತ್ತೆ ಆಸ್ಪತ್ರೆಯ ಮಧ್ಯೆ) ಇರುವ ಸರ್ಕಲ್, ಬಲಗಡೆ ತಿರುಗಿದರೆ ಇರುವ ಗದ್ದೆಗಳು. ಸರ್ಕಾರಿ ಆಸ್ಪತ್ರೆಯ ನಾರಾಯಣಪ್ಪ ಡಾಕ್ಟ್ರು, ಅಲ್ಲೇ ಡೌನಿನಲ್ಲಿದ್ದ ಡೆಂಟಿಸ್ಟು. ಬಸ್ ಸ್ಟ್ಯಾಂಡಿನಿಂದ ಶಿವಮೊಗ್ಗದ ಕಡೆ ಹೊರಟರೆ ಇರುವ ತುಂಗಾ ಕಾಲೇಜು. ಕುಪ್ಪಳ್ಳಿ.
    ನಾನು ನಿಮ್ಮ ಬೇರೆ ಬ್ಲಾಗ್ ಪೋಸ್ಟುಗಳನ್ನೂ ಒದುತೀನಿ, ಆದ್ರೆ ಮನಸ್ಸಿಗೆ ಆಪ್ತವಾಗುವುದು ಇವುಗಳು.
    ನನಗೆ ಗೊತ್ತಿರುವ ಎಲ್ಲರೂ ಬೆಂಗಳೂರಿನಲ್ಲಿದ್ದಾರೆ. ಹೀಗಾದರೆ ಬೇರೆ ಊರಿನಲ್ಲಿ ಅದರದೇ ಆದ ಎಕಾನಮಿಯೇ ಉಳಿದಿಲ್ಲವೆ? ಕೆಲಸ ಹಾಗೂ ಒಳ್ಳೆಯ ಜೀವನ (ಇದು ತುಂಬಾ ರಿಲೇಟಿವ್ ಕಾನ್ಸೆಪ್ಟು) ಎನ್ನೋದು ಬರೀ ಬೆಂಗಳೂರು ಮತ್ತು ಇತರ ನಗರಗಳಲ್ಲಿ ಮಾತ್ರವೇ? ಬೆಂಗಳೂರು ತಡ್ಕೊಳ್ಳೋಕೆ ಆಗ್ದೆ ಒದ್ದಾಡ್ತಾ ಇದೆ. ಎಲ್ಲೋ ಎಡವುತ್ತಿದ್ದೀವಿ ಅನಿಸುವುದಿಲ್ಲವೆ?
    ಈ ಪೋಸ್ಟಿಗೆ ತುಂಬಾ ಥ್ಯಾಂಕ್ಸ್ 🙂

  2. ಕೈಗಾರಿಕಾ ವಿಕೇಂದ್ರೀಕರಣ ಆಗೋ ತಂಕ, ಸಣ್ಣ ಪುಟ್ಟ ಊರು ಗಳು ಉದ್ದಾರ ಆಗೋದು ನಿಜವಾಗ್ಲೂ ಕಷ್ತ್ತ ಇದೆ. ಮೊದಲು ಜನ ಖಾಲಿ ಆಗ್ತಾರೆ, ಆಮೇಲೆ, ಭಾಷೆ, ಸಂಸ್ಕೃತಿ ಎಲ್ಲ ಖಾಲಿ.
    ಪಟ್ಟಣಕ್ಕೆ ಸೇರಿಕೊಂಡವ್ರಿಗೆ , ಪಟ್ಟಣದ ಸಂಸ್ಕೃತಿ , ಭಾಷೆ, ನಡವಳಿಕೆ ಎಲ್ಲಾನೂ ಅನಿವಾರ್ಯ ಆಗಿ ಹೋಗತ್ತೆ. ಆಮೇಲೆ ಎಲ್ಲ ಸೇರಿಕೊಂಡು, ಗ್ಲೋಬಲೈಸೇಶನ್ ನ ಬೈದು ಸುಮ್ನಾಗ್ತಿವಿ.

    -ಪ್ರಸಾದ್

  3. ಚೇತನಾರವರೆ…..

    ಕಾಲನ ನಡೆಯನ್ನು ಅರಗಿಸಿಕೊಳ್ಳುವ ತಾಕತ್ತು..ಉಳಿದಿಲ್ಲ..

    ನನ್ನೂರಿನ ಕಥೆಯೂ ಇದೆ…

    ಗತ ಕಾಲದ ಸವಿಯಲ್ಲಿ…
    ವರ್ತಮಾನದ ಕಣ್ಣುಗಳಿಗೆ..
    ಭವಿಷ್ಯ..ಭಯಾನಕವಾಗಿ ಕಾಣುತ್ತದೆ…

    ವಿಷಾದದ ಛಾಯೆ ಆವರಿಸಿ ಬಿಡುತ್ತದೆ..

    ಮತ್ತೆ ಎಂದಿನ ಹಾಗೆ ಚಂದದ ಬರಹ..
    ಅಭಿನಂದನೆಗಳು..

  4. ಅಕ್ಕ,
    ನನ್ನವರಿಲ್ಲದ ನನ್ನೂರಿನ ಬೀದಿಗಳಲ್ಲಿ ವಿಹರಿಸಿ ಬಂದಂತಾಯಿತು, ಆಜಾದ್ ರಸ್ತೆ ಪೂರ್ತಿಯಾಗಿ ತೋರಿಸಿ ಬಿಟ್ಟಿರಿ. ಎಲ್ಲೋ ಒಂದು ಕಡೆ ಏನೋ ಕಳೆದು ಕೊಂಡ ಅನಾಥ ಪ್ರಜ್ಞೆ ಮನಸ್ಸನ್ನು ಕಾಡುತ್ತದೆ. ಬರಹ ಇಷ್ಟವಾಯಿತು.

  5. Dear ಚೇತನಾ,

    ಹಾಗೆ ವಾಟರ್ ಟ್ಯಾಂಕ್ ನ ಇಳಿಜಾರು ರಸ್ತೆ ಕೆಳಗಿಳಿದು ಬಂದರೆ ಅಲ್ಲೆ ನಮ್ಮ ಮನೆ. ಯಾಕೆ ಬರ್ಲಿಲ್ಲ?

    ಎಲ್ಲರೂ ಬೆಂಗಳೂರಿಗೆ / ಪೇಟೆಗೆ ಬರುವ ಕನಸು ಕಾಣ್ತಾರಾದ್ರೆ,(ಅದು ಖಂಡಿತ ಅವರ ತಪ್ಪಲ್ಲ ಬಿಡಿ, ಪರಿಸ್ಥಿತಿ ಹಾಗಾಗಿದೆ) ನಾವು ತೀರ್ಥಹಳ್ಳಿಗೆ ಹೋಗುವ ತಯಾರಿ ನಡೆಸಿದ್ದೇವೆ. ನಾನಂತು ತುದಿಗಾಲ ಮೇಲೆ ನಿಂತಿದ್ದೇನೆ. ನಮ್ಮದು ಒಂದು ಪುಟ್ಟ ತೋಟ ಇದೆ. ಅಲ್ಲೆ self-sufficient ಆಗಿ ಬದುಕುವ ಪ್ರಯತ್ನ ಮಾಡ್ತೇವೆ. and u r most welcome to visit us.

    ಗಮ್ಮತ್ತು ಗೊತ್ತಾ? ನಮ್ಮ ತೋಟದ ಪಕ್ಕದಲ್ಲೆ ಸೀನಣ್ಣನ ತೋಟ. ಎಷ್ತು ಚೆನ್ನಾಗಿದೆ ಅಂದ್ರೆ, ನೋಡಲಿಕ್ಕೆ ಎರಡು ಕಣ್ಣುಗಳೇ ಸಾಕಾಗಲ್ಲ. touchwood. ಆದರೆ ಅವರ ಇಬ್ಬರು ಗಂಡು ಮಕ್ಕಳಿಗೆ ತೋಟದಲ್ಲಿ ಕೆಲಸ ಮಾಡಲು ’status’ಗೆ ಕಡಿಮೆ ಅಂತೆ. ’ಬೆಂಗಳೂರಿನಲ್ಲಿ ಎಂಜಲು ಲೋಟ ತೊಳಿತಾರಮ್ಮ, ಎನು ಮಾಡ್ಲಿಕ್ಕಾಗ್ತದೆ’ ಅಂತಾ ಇದ್ರು ಅವರಮ್ಮ.

    ಹೌದು ಆಜಾದ್ ರಸ್ತೆ ಅಗಲೀಕರಣ ಆಗಲಿದೆ ಅಂತ ನನ್ನ ಭಾವ ಹೇಳ್ತಾ ಇದ್ರು.

    🙂
    ಮಾಲತಿ ಎಸ್.

  6. ವಾವ್! ಮಾಲತೀ, ನೀವು ಊರಿಗೆ ಹೋಗೋ ಪ್ಲ್ಯನ್ ಮಾಡ್ತಿದೀರಾ!?
    ಹಾಗಾದ್ರೆ ಯಾವ ನೆವಗಳೂ (ನೆವಗಳು ನಿಮಗೆ ಗೊತ್ತು 😉 ) ಹೇಳದೆ ನಾನು ಖಂಡಿತ ಅಲ್ಲಿಗೆ ಬರ್ತೇನೆ.
    ಒಳ್ಲೆಯದಾಗಲಿ. ನಿಮಗೆ ನನ್ನ ಶುಭ ಹಾರೈಕೆ

  7. ಚೇತನಾರವರೆ,

    ನಿಮ್ಮೂರಿನ ಭಗವಂತ ಎಲ್ಲರಿಗೂ, ಸಾಹಿತ್ಯಿಕ ’ತೀರ್ಥ’ ನೀಡ್ತಾರಲ್ವ?

    ಅದಕ್ಕೆನೇ, ನಿಮ್ಮೂರಿನಲ್ಲಿ ಬರಹಗಾರರ ದೊಡ್ಡ ಗುಂಪೇ ಇರುವುದು?

    ನನ್ಗೂ ನಿಮ್ಮೂರ ನೋಡಿ, ಊರಿನ ಭಗವಂತ ನೀಡುವ,

    ಸಾಹಿತ್ಯಿಕ ’ತೀರ್ಥ’ ಭಕ್ತಿಯಿಂದ ಸ್ವೀಕರಿಸುವಾಶೆ!

    ತೀರ್ಥಹಳ್ಳಿಗೆ ಪ್ರಯಾಣಿಸಲು ಸಹಕರಿಸುವಿರಾ?

    ವಲ್ಲಿ ಪ್ರಭು.

ನಿಮ್ಮ ಟಿಪ್ಪಣಿ ಬರೆಯಿರಿ

Create a free website or blog at WordPress.com.

Up ↑