ಬಣ್ಣಗಳ ಸುಳಿಯಲ್ಲಿ ಇಲ್ಲವಾದ ಹುಡುಗಿ….


‘ಇಲ್ಲ’ವಾಗಿ ಉಳಿಯುವ ಪ್ರಕ್ರಿಯೆ ಬಹಳ ದೊಡ್ಡ ಸಾಧನೆ!
ಪ್ರವಚನ ಕೇಳಿದ್ದಳು ಹುಡುಗಿ.
ಬಾಗಿ ಬಾಗಿ ಬಾಗಿ, ಇಲ್ಲವಾಗುತ್ತ ನಡೆದಳು.
ಕಳೆದು ಉಳಿಯುವ ಸೊನ್ನೆಗೆ ಬೆಲೆಯಿಲ್ಲ-
ಅನ್ನುವುದು ಅವಳಿಗೆ ಗೊತ್ತಿರಲಿಲ್ಲ.
~
ಗೊಂದಲಕ್ಕೆ ಬಿದ್ದಿದ್ದಳು.
ಕನ್ನಡಿಯಲ್ಲಿನ ಬಿಂಬ
ತನ್ನ ಮುಖವೋ? ಮುಖವಾಡವೋ!?
ಸ್ವಂತಿಕೆ ಮರೆತು ಕುಂತವಳಿಗೆ ಆತಂಕ.

ಗಿಡದ ಮರೆಯ ಗೋಸುಂಬೆಯ ಬಣ್ಣ,
ಅಲ್ಲಿದ್ದಷ್ಟು ಕಾಲವೂ ಹಸಿರೇ.
ಹೊತ್ತುಹೊತ್ತಿಗೆ ಬದಲಾಗುವ ಸತ್ಯವನ್ನ
ನೆಚ್ಚಿಕೊಳ್ಳೋದು ಹೇಗೆ?
ತನ್ನ ಮೇಲಿನ ನಂಬಿಕೆಯನ್ನೇ ಕಳೆದು ಕುಂತಳು.

ಬದುಕಲಿಕ್ಕೆ ಬಣ್ಣ ಬದಲಿಸಬೇಕು.
ತಾನೊಂದು ಗೋಸುಂಬೆಯೇ?
ಗೊಂದಲಕ್ಕೆ ಬಿದ್ದಿದ್ದಳು.
~
ಅವಳಾದರೂ ಅವನ ಕಣ್ಣ ಬೊಂಬೆ.
ತನ್ನ ಪ್ರತಿಬಿಂಬ
ಅವಳಲ್ಲಿ ಕಾಣುವ ಹಂಬಲ ಅವನಿಗೆ.
ಆದರೇನು?
ಬಲವನ್ನ ಎಡವಾಗಿ ತೋರುವ ಪ್ರತಿಬಿಂಬ
ಅವನಿಗೆ ಇಷ್ಟವಾಗಲಿಲ್ಲ…
ಹಾಗಂತಲೇ ಅಂವ,
ಕನ್ನಡಿ ಎತ್ತಿಟ್ಟುಬಿಟ್ಟ.

ಅವಳೀಗ
ಬಣ್ಣಗಳನ್ನ ಕಳಕೊಂಡು ಕಪ್ಪಾದಳು
ಅವನ ಕಾಲ ಬಳಿ ಸುಳಿಯುವ ನೆರಳಾದಳು.
~
ನೆರಳಾದರೂ
ಹೊತ್ತುಹೊತ್ತಿಗೆ ಉದ್ದವಾಗಬಹುದೇ ಹಾಗೆ?
ಇದನ್ನವನು ಸಹಿಸಬಹುದು ಹೇಗೆ?
ಊಹೂಂ….
ತನ್ನನ್ನು ಮೀರುವ ನೆರಳೂ ಅವನಿಗೆ ಬೇಕಿಲ್ಲ.
ಹಾಗಂತಲೇ ಅಂವ,
ಕತ್ತಲಲ್ಲಿ ಹೋಗಿ ಕುಂತ.
~
ಕೊನೆಗೂ
ಅವಳು ಕರಗಿ ಇಲ್ಲವಾದಳು,
ಬಣ್ಣಗಳು ಚಪ್ಪಾಳೆ ತಟ್ಟಿ ನಕ್ಕವು…

8 thoughts on “ಬಣ್ಣಗಳ ಸುಳಿಯಲ್ಲಿ ಇಲ್ಲವಾದ ಹುಡುಗಿ….

Add yours

  1. ಅಕ್ಕ,
    ಬದುಕಿನ ದ್ವಂದ್ವ ಮತ್ತು ಒಂದು ಹಂತದ ಅಸಹಾಯಕತೆಯನ್ನು ಕಣ್ಣೆದುರು ಕಟ್ಟಿದ್ದೀರಿ,
    “ನೆರಳಾದರೂ
    ಹೊತ್ತುಹೊತ್ತಿಗೆ ಉದ್ದವಾಗಬಹುದೇ ಹಾಗೆ?
    ಇದನ್ನವನು ಸಹಿಸಬಹುದು ಹೇಗೆ?
    ಊಹೂಂ….
    ತನ್ನನ್ನು ಮೀರುವ ನೆರಳೂ ಅವನಿಗೆ ಬೇಕಿಲ್ಲ.
    ಹಾಗಂತಲೇ ಅಂವ,
    ಕತ್ತಲಲ್ಲಿ ಹೋಗಿ ಕುಂತ.”

    ಈ ಸಾಲುಗಳು ತುಂಬಾ ಇಷ್ಟವಾಯಿತು, ಎಷ್ಟೇ ಪ್ರೀತಿಯ ತುಡಿತವಿದ್ದರು ಹೊಂದಿಕೆಯಾಗದ ಎರಡು ಮುಖಗಳನ್ನು ನೋಡಿದಂತಾಯಿತು, ಒಮ್ಮೊಮ್ಮೆ ಬದುಕು ಎಷ್ಟು ಹೆದರಿಸಿ ಬಿಡುತ್ತಲ್ವ ??!!

  2. “ನೆರಳಾದರೂ
    ಹೊತ್ತುಹೊತ್ತಿಗೆ ಉದ್ದವಾಗಬಹುದೇ ಹಾಗೆ?
    ಇದನ್ನವನು ಸಹಿಸಬಹುದು ಹೇಗೆ?
    ಊಹೂಂ….
    ತನ್ನನ್ನು ಮೀರುವ ನೆರಳೂ ಅವನಿಗೆ ಬೇಕಿಲ್ಲ.
    ಹಾಗಂತಲೇ ಅಂವ,
    ಕತ್ತಲಲ್ಲಿ ಹೋಗಿ ಕುಂತ.”

    ಈ ಸಾಲುಗಳು ತುಂಬಾ ಇಷ್ಟವಾಯಿತು. ಎಷ್ಟೇ ಪ್ರೀತಿಯ ಹೃದಯ ಎನಿಸಿದರೂ ಕೂಡ ಎಲ್ಲೋ ಒಂದು ಕಡೆ ವ್ಯಕ್ತಿಗತ ಅಹಂ ಎಲ್ಲವನ್ನು ತುಳಿದು ಬಿಡುತ್ತದೆ ಎಂಬುದು ಸತ್ಯ. ಬದುಕಿನ ಕಹಿ ಸತ್ಯಗಳು ಹೀಗೆ ಇರುತ್ತವೆ. ಹೊರಗಿನವರ ಕಣ್ಣಿಗೆ ಏನೂ ಕಾಣಿಸದು; ಆದ್ರೆ ಅನುಭವಿಸೋದು ಸಾಧ್ಯವಾಗದು. ನೆರಳು ತನ್ನನ್ನು ಮೀರುವ ಭಯಕ್ಕೆ ಕತ್ತಲೆಯೇ ತನ್ನ ಜತೆಗಿರಲಿ ಎಂಬ ಮನೋಭಾವದ ಮಂದಿ ಬದಲಾಗರು. ತೀವ್ರವಾಗಿ ಜೀವನ ಪ್ರೀತಿ ಬೆಳೆಸಿಕೊಂಡ ಜೀವ ಮಾತ್ರ ಇಂಥ ಸೂಕ್ಷ್ಮಗಳನ್ನು ಅರಿಯಲು ಸಾಧ್ಯ.

    ಸ್ನೇಹದಿಂದ,
    ಶಮ, ನಂದಿಬೆಟ್ಟ

  3. ನಮಸ್ತೆ,

    ಕನ್ನಡದ ಎಲ್ಲ ಯುವ ಕವಿಗಳನ್ನು ಒಂದು ಗೂಡಿಸಲು ವೇದಿಕೆಯಾಗಿ ಯುವ ಕವಿ ಯನ್ನು ಪ್ರಾರಂಭಿಸುತ್ತಿದ್ದೇವೆ. ಕನ್ನಡದ ಎಲ್ಲ ಕವಿಗಳು ಮತ್ತು ಕಾವ್ಯ ಪ್ರೇಮಿಗಳು ಜೊತೆಸೇರಿ ಕಾವ್ಯವನ್ನು ಓದೋಣ, ಕಾವ್ಯವನ್ನು ಚರ್ಚಿಸೋಣ. ನಮ್ಮೊಡನೆ ಸೇರಿ..
    http://yuvakavi.ning.com/

  4. ಗೊಂದಲಕ್ಕೆ ಬಿದ್ದಿದ್ದಳು.
    ಕನ್ನಡಿಯಲ್ಲಿನ ಬಿಂಬ
    ತನ್ನ ಮುಖವೋ? ಮುಖವಾಡವೋ!?
    ಸ್ವಂತಿಕೆ ಮರೆತು ಕುಂತವಳಿಗೆ ಆತಂಕ.

    Idannu odi yaako kannu tumbi bantu kanri, yeshtu nijavagi barediddiri.

  5. ಅವಳಾದರೂ ಅವನ ಕಣ್ಣ ಬೊಂಬೆ.
    ತನ್ನ ಪ್ರತಿಬಿಂಬ
    ಅವಳಲ್ಲಿ ಕಾಣುವ ಹಂಬಲ ಅವನಿಗೆ.
    ಆದರೇನು?
    ಬಲವನ್ನ ಎಡವಾಗಿ ತೋರುವ ಪ್ರತಿಬಿಂಬ
    ಅವನಿಗೆ ಇಷ್ಟವಾಗಲಿಲ್ಲ…
    ಸುಂದರ, ಮಜಬೂತಾದ ಕವಿತೆ.

ನಿಮ್ಮ ಟಿಪ್ಪಣಿ ಬರೆಯಿರಿ

Create a free website or blog at WordPress.com.

Up ↑