ಸೃಜನ್ ಅನುವಾದಿಸಿದ ಜಯಪ್ರಭಾ ಕವಿತೆ, ನನ್ನದೆರಡು ಮಾತು…


ಮೊನ್ನೆವರೆಗೂ ಸೃಜನ್ ಚೆಂದದ ಚಿತ್ರಗಳನ್ನು ಬರೆಯುತ್ತಾರೆ, ಸೊಗಸಾದ ವಿನ್ಯಾಸ ಮಾಡುತ್ತಾರೆ ಎಂದಷ್ಟೆ ಗೊತ್ತಿದ್ದ ನನಗೆ, ಅವರು ಕಥೆಯನ್ನೂ ಕವನವನ್ನೂ ಬರೆಯುವುದಲ್ಲದೆ ಒಳ್ಳೆಯ ಅನುವಾದವನ್ನೂ ಮಾಡುತ್ತಾರೆಂದು ತಿಳಿಯಿತು. ನಮ್ಮ ವಾರಗೆಯ ಬರಹಗಾರರ ಬಗ್ಗೆ ಇರುವ ಅಜ್ಞಾನಕ್ಕೆ ನಾಚಿಕೆಯಾಗುವುದರ ಜೊತೆಗೇ ಓದಿನ ಕೊರತೆ ಮುಖಕ್ಕೆ ಹೊಡೆದಂತಾಯ್ತು!

ಈ ಜ್ಞಾನೋದಯವಾಗಿದ್ದು, ಸೃಜನ್ ಅವರ ‘ಯಶೋಧರೆ, ಈ ವ್ಯಥೆಯೇತಕೆ?’ ಎಂಬ ಅನುವಾದಿತ ಕವಿತೆಯನ್ನೋದಿದಾಗ.
ಈ ಕವಿತೆಯ ಮೂಲ ತೆಲುಗಿನದು. ಅಲ್ಲಿನ ಸ್ತ್ರೀ ಸಂವೇದನೆಯ ಕವಯತ್ರಿ ಡಾ.ಜಯಪ್ರಭಾ ಅವರ ಅದೇ ಹೆಸರಿನ ಕವನ ಸಂಕಲನದ ಹಲವು ಕವಿತೆಗಳನ್ನು ಸೃಜನ್ ಕನ್ನಡಕ್ಕೆ ತಂದಿದ್ದಾರೆ.
ಈ ಯಶೋಧರೆಯಂಥವರು ಎಲ್ಲ ನೆಲದ, ಗಾಳಿಯ, ಜೀವನ ಶೈಲಿಯ ಹೆಣ್ಣುಮಕ್ಕಳನ್ನೂ ಏಕಕಾಲದಲ್ಲಿ, ಬಹುತೇಕ ಏಕರೀತಿಯಲ್ಲಿ ತಟ್ಟುತ್ತಾಳೆಂಬುದು ನನಗೆ ವಿಸ್ಮಯವಾಗಿ ಕಾಡಿದೆ. ಯಾಕೆಂದರೆ, ‘ಪ್ರತಿ ಹೆಣ್ಣೂ ತನ್ನಷ್ಟಕ್ಕೆ ತಾನೊಂದು ದ್ವೀಪ’ ಎನ್ನಲಾಗುತ್ತದೆ. ಹೀಗೆ ಪ್ರತ್ಯೇಕ ಅಸ್ತಿತ್ವದ ನಡುವೆಯೂ ಹೆಣ್ಣುಭಾವದ ಏಕಸೂತ್ರ ವಿಭಿನ್ನ ದೇಶಕಾಲಗಳ ನಮ್ಮನ್ನು ಬೆಸೆಯುತ್ತದೆ, ಪರಸ್ಪರ ಸ್ಪಂದಿಸುವಂತೆ, ಮಿಡಿಯುವಂತೆ ಮಾಡುತ್ತದೆ.

ಜಯಪ್ರಭಾ ಅವರ   ಕವನವನ್ನು ಸೃಜನ್ ಅನುವಾದದ ಮೂಲಕವೂ ಉಳಿದವುಗಳಲ್ಲಿ ೨೨ ಕವಿತೆಗಳನ್ನು ನೆಟ್ಟಿನಲ್ಲಿ ಇಂಗ್ಲೀಶಿನಲ್ಲೂ ಓದಿದೇನೆ. ಉಳಿದಂತೆ, ನನ್ನ ಮಿತಿ ಚಿಕ್ಕದು.

 ಜಯಪ್ರಭಾ ಅವರು ಈವರೆಗೆ ಒಟ್ಟು ಏಳು ಕವನ ಸಂಕಲನಗಳನ್ನು ಹೊರತಂದಿದ್ದಾರೆ. ಅವುಗಳಲ್ಲಿ ಕೆಲವು ಇಂಗ್ಲಿಶ್, ಹಿಂದೀ ಭಾಷೆಗಳಿಗೆ ಅನುವಾದಗೊಂಡಿವೆ. ಒಸ್ಮಾನಿಯಾ ವಿಶ್ವವಿದ್ಯಾಲಯದಿಂದ ಪಿ.ಎಚ್.ಡಿ ಹಾಗೂ ಎಮ್.ಫಿಲ್ ಪದವಿಗಳನ್ನು ಪಡೆದಿರುವ ಇವರು ಅದಕ್ಕಾಗಿ ಸಂಶೋಧನೆ ನಡೆಸಿದ್ದು ಕೂಡ ಸ್ತ್ರೀಕೇಂದ್ರಿತ ವಿಷಯಗಳ ಕುರಿತೇ. ತಾಯ್ನುಡಿಯ ಮೇಲೆ ಅಪಾರ ಹಿಡಿತವಿರುವ ಜಯಪ್ರಭಾ, ಎರಡು ವರ್ಷ ಅಮೆರಿಕೆಯ ವಿಶ್ವವಿದ್ಯಾಲಯವೊಂದರಲ್ಲಿ ತೆಲುಗು ಭಾಷೆ ಹಾಗು ಸಂಸ್ಕೃತಿ ಕುರಿತು ಅಧ್ಯಾಪನ ನಡೆಸಿದ್ದರು. ೧೯೯೧ರಿಂದೀಚೆಗೆ ಸಂಪೂರ್ಣವಾಗಿ ಸಾಹಿತ್ಯಕ್ಷೇತ್ರದಲ್ಲಿ ತೊಡಗಿಕೊಳ್ಳುವ ಬಯಕೆಯಿಂದ ಶಿಕ್ಷಣಕ್ಷೇತ್ರದ ದುಡಿಮೆಗೆ ವಿದಾಯ ಹೇಳಿದರು.

– ಈ ಎಲ್ಲ ಸಂಗತಿ ತಿಳಿದಿದ್ದು ಸೃಜನ್ ಅವರಿಂದ. ಉಳಿದಂತೆ, ಅಂತರ್ಜಾಲ ತಾಣದ ಮಾಹಿತಿ.
ಓದಬೇಕೆನ್ನುವ ಅದಮ್ಯ ಆಸೆಯ ಹೊರತಾಗಿ ಸಾಹಿತ್ಯ ಕ್ಷೇತ್ರದ ಅಕ್ಷರಮಾಲೆಯೂ ಗೊತ್ತಿಲ್ಲದ ನನಗೆ ಇಂತಹ ಸ್ನೇಹಿತರೇ ಗೈಡ್ ಗಳು ಎಂದರೆ ಅತಿಶಯವಲ್ಲ.

ಇರಲಿ. ಸದ್ಯಕ್ಕೆ,
ಸೃಜನ್ ಅನುವಾದಿಸಿರುವ ಜಯಪ್ರಭಾ ಅವರದೊಂದು ಕವಿತೆಯನ್ನು ಓದಿಕೊಳ್ಳೋಣ…           

ಸೃಜನ್ ತೆಲುಗಿನ ಇತರ ಪ್ರಮುಖ ಕವಿಗಳನ್ನೂ ಕನ್ನಡಕ್ಕೆ ಪರಿಚಯಿಸಿದ್ದಾರೆ. ಅವನ್ನು ಓದುವ ಅವಕಾಶ ಸಿಕ್ಕಿದ್ದು ಸಂತಸ. ಮುಂದೆಂದಾದರೂ ನಿಮ್ಮೊಂದಿಗೆ ಅವನ್ನೂ ಹಂಚಿಕೊಳ್ಳುವೆ.

ಯಶೋಧರೆ ಈ ವ್ಯಥೆ ಏತಕೆ?

ಯಶೋಧರೆ ಈ ವ್ಯಥೆ ಏತಕೆ?
ಅವರು ಸಂತರು, ಯೋಗಿಗಳು
ಆವರಿಸದು ಚಿಂತೆ ಎಂದೂ ಅವರನ್ನು

ಹುಟ್ಟು ಸಾವಿನ ಭಯವಿರುವುದಿಲ್ಲ
ಬೋಧಿ ವೃಕ್ಷದ ಕೆಳಗೆ
ಜ್ಞಾನೋದಯವಾಗುತ್ತದೆಯೆಂದು
ಅವರಿಗೆ ಮೊದಲೇ ಗೊತ್ತಿತ್ತು

ಆ ಅರ್ಧ ರಾತ್ರಿಯ ಅನಂತ ಯಾತ್ರೆಯ ಆರಂಭ
ಗೊತ್ತಿಲ್ಲದ್ದು ನಿನಗೇ ಕಣೇ
ಯಶೋಧರೆ ಈ ವ್ಯಥೆಯೇತಕೆ ಹೇಳೆ?

ಗೋಡೆಗೊರಗಿ ಗವಾಕ್ಷಿ ಕಡೆ
ಕಣ್ಣೀರಿನ ನೋಟವೇಕೆ?
ನಿನಗೆ ಬೆಳಗೆಂದರೆ ಭಯವೇ ಗೆಳತಿ?
ಹೋಗಲಿ ಬಿಡು
ನಿನ್ನ ಕಾಯುವಿಕೆ ವ್ಯರ್ಥವಾಗುವುದಿಲ್ಲ
ಎಂದೋ ಒಂದು ದಿನ ದೀಕ್ಷೆಪಡೆದ ಕಾವಿಧಾರಿಯೊಬ್ಬ
ಭಿಕ್ಷಾಪಾತ್ರೆ ಹಿಡಿದು
ನಿನ್ನ ಮನೆಯೆದುರು ಕೈಚಾಚಿ ಬರುತ್ತಾನೆ

ಶಿಥಿಲ ದೇಹದಿಂದ
ದೀನ ಮೊಗದಿಂದ ನೀನು
ಎದಿರುಗೊಳ್ಳುತ್ತೀಯ

ಯಾವ ಜೀವನವನ್ನು ಭಿಕ್ಷೆ ಹಾಕುತ್ತೀಯೆಂದು
ಅವರ ಮನದಲ್ಲೆಲ್ಲೋ ಒಂದು ಕಡೆ ಇರುತ್ತದೆ ಬಹುಶಃ
ಯಶೋಧರೆ ಈ ವ್ಯಥೆ ಏತಕೆ?
ಅವರು ಸಂತರು ಯೋಗಿಗಳು
ಚಿಂತೆ ಆವರಿಸುವುದಿಲ್ಲ ಅವರನ್ನು
ಹುಟ್ಟು ಸಾವಿನ ಭಯವಿರುವುದಿಲ್ಲ

ಅಷ್ಟಾಂಗ ಮಾರ್ಗದಲ್ಲಿ ನೀನು ಮಾತ್ರ
ಹಾಗೆ ತಾರೆಗಳನ್ನು ನೋಡದಿರು ಯಶೋಧರೆ
ನೀನಿನ್ನು ತ್ಯಾಗಗಳನ್ನೂ ಮಾಡದಿರು ಗೆಳತಿ

6 thoughts on “ಸೃಜನ್ ಅನುವಾದಿಸಿದ ಜಯಪ್ರಭಾ ಕವಿತೆ, ನನ್ನದೆರಡು ಮಾತು…

Add yours

  1. ಸ್ರುಜನ್ ಅವರ ಅನುವಾದ ಹಿಡಿಸಿತು… ಕವಿತೆ ಒದಿ ಮುಗಿಸಿದಾಗ ನೆನಪಾದದ್ದು ಜಯಪ್ರಕಾಶ ಮಾವಿನಕುಳಿಯವರ “ರೂಪಾಂತರ” ನಾಟಕ ಮತ್ತು ಚೀನಿ ಸಿನಿಮಾ “ಸಂಸಾರ್”. ಇವು ಕೂಡಾ ಯಶೋಧರೆಯನ್ನು, ಅವಳ ಸ್ವಗತಗಳನ್ನು ಭಿನ್ನ ರೀತಿಯಲ್ಲಿ ಪರಿಚಯಿಸುತ್ತವೆ.

  2. ಪ್ರೀತಿಯ ಚೇತನ ಮೇಡಮ್..

    ನನ್ನ ಹೊಸ ಪುಸ್ತಕ ‘ಅಮ್ಮ ಹೇಳಿದ ಎಂಟು ಸುಳ್ಳುಗಳು’ ಇದೇ ಏಪ್ರಿಲ್ ೨೬ರಂದು ಬಿಡುಗಡೆಯಾಗಲಿದೆ.
    ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ, ಬೆಳಗ್ಗೆ ೧೦.೩೦ಕ್ಕೆ ಕಾರ್ಯಕ್ರಮ ಆರಂಭವಾಗಲಿದೆ. ಹೆಸರಾಂತ ಚಿತ್ರನಟ ಶ್ರೀ ಪ್ರಕಾಶ್ ರೈ ಅವರು ಪುಸ್ತಕ ಬಿಡುಗಡೆ ಮಾಡಲಿದ್ದಾರೆ.
    ಅಂದು ನಮ್ಮೊಂದಿಗೆ ಹೆಸರಾಂತ ಕವಿ-ಸಾಹಿತಿಗಳು, ಸಾಂಸ್ಕೃತಿಕ ಲೋಕದ ಗಣ್ಯರು ಹಾಜರಿರುತ್ತಾರೆ. ರಮೇಶ್ಚಂದ್ರ ,ಉಪಾಸನಾ ಮೋಹನ್, ಪಂಚಮ್ ಹಳಿಬಂಡಿ, ಅರ್ಚನಾ ಉಡುಪ, ರಮೇಶ್ಚಂದ್ರ ಮುಂತಾದವರಿಂದ ಮಧುರ ಭಾವಗೀತೆ ಗಾಯನವಿರುತ್ತದೆ.
    ಪುಸ್ತಕ ಬಿಡುಗಡೆಯ ನೆಪದಲ್ಲಿ ಚೆಂದದ ಹಾಡು ಕೇಳೋಣ. ಚತುರ್ಭಾಷಾ ಕಲಾವಿದ ಪ್ರಕಾಶ್ ರೈ ಅವರ ಅದ್ಭುತದ್ಭುತ ಎಂಬಂಥ ಮಾತುಗಳಿಗೆ ಕಿವಿಯಾಗೋಣ.
    ನೆಪ ಹೇಳಬೇಡಿ : ದಯವಿಟ್ಟು ಬನ್ನಿ.
    ಸ್ಥಳ: ರವೀಂದ್ರ ಕಲಾಕ್ಷೇತ್ರ.
    ಸಮಯ: ಬೆಳಗ್ಗೆ ೧೦.೩೦.
    ದಿನಾಂಕ: ಏಪ್ರಿಲ್ ೨೬, ಭಾನುವಾರ

ನಿಮ್ಮ ಟಿಪ್ಪಣಿ ಬರೆಯಿರಿ

Blog at WordPress.com.

Up ↑