ನನ್ನೊಳಗಿನ ಸಿದ್ಧಾರ್ಥ….


ತಿಂಗಳಾಯ್ತು ಈ ಅಸಹನೆ ಶುರುವಿಟ್ಟು.
ಖಡಾಖಂಡಿತವಾಗಿ ಹೇಳ್ಬಿಟ್ಟಿದಾರೆ, ಇನ್ನು ‘ಅಪ್ ರೈಸಲ್’ ಪ್ರಶ್ನೆಯೇ ಇಲ್ಲ! ಲೇ ಆಫ್ ಮಾಡದಿರೋದೇ ನಮ್ಮ ಪುಣ್ಯವಂತೆ!!
ಐಟಿ ಸೆಕ್ಟರಿನ ಜತೆ, ಅಮೆರಿಕದ ಜತೆ ಪೈಸಾಪೈಸ ಸಂಬಂಧವಿರದ ಈ ಆಫೀಸಿಗೂ ರಿಸೆಷನ್ನಿನ ರೋಗ ಹರಡಿದೆ. ಇದೊಂಥರಾ ‘ಗೋಕುಲಾಷ್ಟಮಿಗೂ, ಇಮಾಮ್ ಸಾಬರಿಗೂ…’
~
ಬಹಳ ದಿನಗಳೇ ಆಗಿತ್ತು ಹೀಗೆ ಕಾಲ್ನಡಿಗೆಯಲ್ಲಿ ಓಡಾಡದೆ. ಅದರಲ್ಲೂ ಶ್ರೀರಾಮಪುರದಲ್ಲಿ ದಾರಿ ತಪ್ಪಿ ಅಲೆಯದೆ ಮೂರ್ನಾಲ್ಕು ವರ್ಷಗಳೇ ಅಗಿಹೋಗಿತ್ತು.
“ಇಲ್ಲೇ…” “ಇನ್ನೇನು ಬಂದೇಬಿಡ್ತು…” ಅನ್ನುತ್ತಾ, ನಾನೂ ದಾರಿ ತಪ್ಪಿ, ಜತೆಗಿದ್ದವಳನ್ನೂ ತಪ್ಪಿಸುತ್ತಾ ನಡೆದು, ಕೊನೆಗೆ ದೊಡ್ಡ ಗಟಾರದ ಎದುರು ನಿಂತೆ. ಅಲ್ಲಿಂದ ಮುಂದೆ ರಸ್ತೆಯೇ ಇರದುದರಿಂದ ಅಲ್ಲಿ ನಿಲ್ಲಲೇಬೇಕಾಯ್ತು.
ದೊಡ್……ಡ್ಡದಾಗಿ ಬಾಯಿ ಕಳಕೊಂಡು ಮಲಗಿದ್ದ ಗಟಾರದೊಳಗಿಂದ ಜುಳುಜುಳು ನಾದ(!?) ಕೇಳಿಬರುತ್ತಿತ್ತು. ಅದರ ಬಾಜುವಿನಲ್ಲೇ ಒಂದಷ್ಟು ಜೋಪಡಿಗಳು. ತೀರಾ ಸ್ಲಮ್ ಡಾಗಿನ ಕಲ್ಪನೆಗೆ ಹೊಗಬೇಡಿ… ಅದನ್ನ ನಾವಿನ್ನೂ ಫಿಲಮ್ಮಿನಲ್ಲಿ ನೋಡಿದೇವಷ್ಟೆ (ನಿಜವಾಗಿಯೂ ನೋಡಿ ಅರಗಿಸ್ಕೊಳ್ಳುವ ಎದೆಗಾರಿಕೆ ನಮಗಿದೆಯಾ?). ಈ ಇಲ್ಲಿ, ನಾವು ನಮ್ಮ ಕಣ್ಣಾರೆ ಹೊಸತೊಂದು ಜಗತ್ತನ್ನ ನೊಡುತ್ತಿದ್ದೆವು! ಹುಟ್ಟಿದ ಇಷ್ಟೂ ದಿನ ನಾವು ಕಾಣದಿದ್ದ ಹೊಚ್ಚ ಹೊಸ ಲೋಕ…
ಜೋಪಡಿಗಳ ಎದುರು ಚಡ್ಡಿ ಬಿಚ್ಚಿ ಕುಂತ ಮಕ್ಕಳು, ಅಲ್ಲೇ ನೆಲದ ಮೇಲೆ ಗೀಚುತ್ತ ಸುಖಿಸುತ್ತಿವೆ… ಅವುಗಳ ಬದಿಯಲ್ಲೇ ಮಗುವಿಗೆ ಮೊಲೆ ಕುಡಿಸುತ್ತ ಹೆಂಗಸೊಬ್ಬಳು ಕುಂತಿದಾಳೆ. ಅವಳಿಗೆ ಆತುಕೊಂಡು, ಕಜ್ಜಿ- ಕೀವಿನ ನಾಯಿಯೊಂದು ಮಲಗಿದೆ.
ಪಕ್ಕದ ಜೋಪಡಿಯ ಮುದುಕಿ ವಾಂತಿ ಕಕ್ತಿದಾಳೆ. ಅವಳ ಹಿಂದೆ, ಯಾವಾಗಲೋ ಸತ್ತು ನೊಣ ಮುತ್ತಿಕೊಂಡ ಮುದುಕ… ಮಣ್ಣು ಮಾಡಲು ಕೂಲಿಗೆ ಹೋದ ಗಂಡಸರು ಮನೆ ಸೇರಬೇಕು.

ಗಟಾರಕ್ಕೆ ಹಾಕಿರುವ ಉದ್ದ ಚಪ್ಪಡಿಗೊಂದು ಪ್ಲಾಸ್ಟಿಕ್ ಶೀಟು ಕಟ್ಟಿ ಗೂಡಂಗಡಿ ಮಾಡಲಾಗಿದೆ. ಅದರಲ್ಲಿ ಉದ್ದುದ್ದ ನೇತಾಡ್ತಿರುವ ಕೋಳಿ ಮಾಂಸ. ಒಳಗಿನ ಪೆಟ್ಟಿಗೆಯಲ್ಲಿ ಕಳ್ಳ ಸರಾಯಿ!

ಅಗೋ! ಹೆಂಗಸೊಬ್ಬಳು ಬೆನ್ನಿಗೇರಿಸಿದ್ದ ಪ್ಲಾಸ್ಟಿಕ್ ಚೀಲ ಕೆಳಗಿಳಿಸ್ತಿದಾಳೆ. ಅದರೊಳಗೆ, ಆಗ ತಾನೆ ಆಯ್ದು ತಂದ ಚಿಂದಿಯಿದೆ. ಅದನೆಲ್ಲ ನೆಲಕ್ಕೆ ಸುರುವಿ, ‘ಬೇಕಾದ’ ವಸ್ತುಗಳನ್ನ ಹುಡುಕಿಕೊಳ್ಳುವ ತವಕದಲ್ಲಿದಾಳೆ.
~
ಅಕಸ್ಮಾತ್ ಕೈ ಸೋಕಿದ ಗೆಳತಿ ಹೇಳಿದ್ದಳು, ‘ನಿನ್ನ ಕೈ ಎಷ್ಟು ಮೆದು!!’
ಎದ್ದ ಕೂಡಲೆ ಹಾಲು, ಮಲಗುವಾಗ ಸಕ್ಕರೆ- ಮೊಸರು. ಹೊತ್ತು ಹೊತ್ತಿಗೆ ಊಟ, ನಿದ್ರೆ ಬರದಿದ್ದರೆ ಮಾತ್ರೆಯಿದೆ. ಜೊತೆಗೆ, ಚೆಂದಗಾಣಿಸುವ ಬಟ್ಟೆ-ಬರೆ.
ನನ್ನ ಕೈ ಎಷ್ಟು ಮೆದು!!
ಈ ಸ್ಲಮ್ಮಿನ ನಡೂ ಮಧ್ಯದಲ್ಲಿ ನಿಂತವಳಿಗೆ ‘ಕೈ ಮೆದು’ವಿನ ಸಂಗತಿ ನೆನಪಾಗಿದ್ದು ಯಾಕೋ?
ಕೊನೆಗೂ ಅಲೆದಲೆದು ಸ್ಕೂಲು ತಲುಪಿ ಕೆಲಸ ಮುಗಿಸಿದೆವು.

ಮನೆಗೆ ಬಂದು ಗಂಟೆಗಳೇ ಉರುಳಿದರೂ ಕಣ್ತುಂಬ ಅವೇ ಚಿತ್ರಗಳು…
ಮುಖದ ತುಂಬ ಸಿಂಬಳ ಅಂಟಿಕೊಂಡ ಮಕ್ಕಳು; ದೊರಗು ಮೈಯಿನ, ಕನಸು ಗೊತ್ತಿರದ ಹೆಣ್ಣುಗಳು; ದುಡಿದು ಕುಡಿಯುವ ಗಂಡಸರು; ವಾಂತಿಯ ಮುದುಕಿ; ನೊಣ ಮುತ್ತಿದ ಸತ್ತ ಮುದುಕ; ನಾಳಿನ ಮಳೆಯಲ್ಲಿ ಕೊಚ್ಚಿ ಹೋಗಬಹುದಾದ ಅವರೆಲ್ಲ ಜೋಪಡಿಗಳು, ಮಕ್ಕಳು, ಕೀವಿನ ಕಜ್ಜಿ ನಾಯಿ….
ಊಟ ಗಂಟಲಲ್ಲಿ ಇಳಿಯಲಿಲ್ಲ. ಮೆತ್ತನೆ ಹಾಸಿಗೆ ಮೈ ಚುಚ್ಚಿದಂತಾಗಿ ಚಾಪೆ ಹಾಸಿ ಮಲಗಿದೆ. ಸ್ಲಮ್ಮಿನ ಚಿತ್ರಗಳು ಎರಗಿ ಎರಗಿ ನಿದ್ದೆ ಕಸಿದವು.
ಜಗತ್ತು ಅಂದರೆ ಮನೆ, ಆಫೀಸು, ಸಂಬಳ, ಶಾಪಿಂಗು, ಅವನು, ಅವನ ಪ್ರೀತಿ- ಮುನಿಸು….
ಜಗತ್ತು ಅಂದರೆ ಗಟಾರ, ಕಾಯಿಲೆ, ಜೋಪಡಿ ಕೂಡಾ!!

ತಲೆಯ ತುಂಬ ಸಮಾಜ ಸಂರಚನೆಯ ಲೆಕ್ಕಾಚಾರದ ಸೂತ್ರ. ತಿಂಗಳಿನ ಖರ್ಚು- ವೆಚ್ಚದ ಲೆಕ್ಕದ ತಾಳೆ. ಹಸಿದ ಹೊಟ್ಟೆಯ ದಾರುಣ ಕೂಗು…
~
ಸೋಮವಾರದ ಬೆಳಗು.
ಎಂದಿನಂತಿರದ ರಾತ್ರಿಗೆ ತಕ್ಕನಾದ ಬೇರೆಯದೇ ಬೆಳಗು. ಕಣ್ಣು ನಿದ್ದೆಯಿಲ್ಲದೆ ಸೋತಿದೆ. ರಾತ್ರಿಯ ಊಟ ದಕ್ಕದ ಹೊಟ್ಟೆ, ಸ್ನಾನಕ್ಕೆ ಮುನ್ನವೇ ಬ್ರೇಕ್ ಫಾಸ್ಟ್ ಮುಗಿಸಿದೆ.

“ಇವತ್ತೇ ಬೇರೆ ಕಂಪೆನಿಗಳಿಗೆ ಅಪ್ಲಿಕೇಶನ್ ಹಾಕಬೇಕು! ಈಗಿನ ಸಂಬಳ ಹಾಸಲು- ಹೊದೆಯಲು ಸಾಕಷ್ಟೆ!!”- ಅಂದುಕೊಂಡು ವ್ಯಾನಿಟಿ ಹೆಗಲೇರಿಸಿದೆ.

ಯಾಕೋ ಬುದ್ಧ ನಕ್ಕಂತಾಯ್ತು.

ಇರುಳಿಡೀ ನಿದ್ದೆ ಬಿಟ್ಟಿದ್ದರೂ, ನನ್ನೊಳಗಿನ ಸಿದ್ಧಾರ್ಥನಿಗೆ ಎಚ್ಚರವಾಗಿರಲಿಲ್ಲ…

15 thoughts on “ನನ್ನೊಳಗಿನ ಸಿದ್ಧಾರ್ಥ….

Add yours

  1. ಚೇತನಾರವರೆ,
    ಮನ ತಟ್ಟುವ ಚಿತ್ರಣ …. ಅಭಿನಂದನೆಗಳು! “ಇರುಳಿಡೀ ನಿದ್ದೆ ಬಿಟ್ಟಿದ್ದರೂ, ನನ್ನೊಳಗಿನ ಸಿದ್ಧಾರ್ಥನಿಗೆ ಎಚ್ಚರವಾಗಿರಲಿಲ್ಲ…” ಈ ಕೊನೆಯ ಸಾಲು ನಿಜಕ್ಕೂ ಇಡಿ ಲೇಖನದ ಪಂಚ್ ಲೈನ್ … ಹೌದು, ಮನ ತಟ್ಟುವಂತಹ ಏನೇನೆಲ್ಲ ನೋಡುತ್ತೇವೆ..ಆದರೆ ಕೊನೆಗೆ, ಮನದಲ್ಲಿ ಏನೂ ಮಾಡಲಾಗದ ಚಡಪಡಿಸುವಿಕೆ… ಒಮ್ಮೆ ಬರೆದ ಈ ಸಾಲುಗಳು ನೆನಪಿಗೆ ಬರುತ್ತಿವೆ…
    ಯಾರು ಬಲ್ಲರು ಆ ದೇವರ ಮಾಯದಾಟ ?
    ಸೂತ್ರ ಅವನ ಕೈಯಲ್ಲಿ, ನಾವು ಬರಿಯ ಪಟ !!
    – ದಿವ್ಯಾ

  2. ವಾಸ್ತವ ಎಂಥಾ ಕಟುವಲ್ಲವೇ ? ನಮ್ಮೊಳಗಿನ ಮನಸ್ಸನ್ನೂ ತಿವಿಯುವಷ್ಟು…ಚೆನ್ನಾಗಿದೆ ಲೇಖನ. ಅಂದ ಹಾಗೆ ವ್ಯಾನಿಟಿ ಬ್ಯಾಗ್ ಹಿಡಿದು ಹೊರಟ ದಾರಿ ಹಸನಾಗಲಿ.
    ವಂದನೆಗಳೊಂದಿಗೆ
    ನಾವಡ

  3. ನಮ್ಮೊಳಗಿನ ಸಿದ್ದಾರ್ಥ ನಮ್ಮಿಂದ ದೂರ ಹೋಗಿ ತುಂಬಾ ದಿನಗಳಾಗಿವೆ, ಇಲ್ಲದಿದ್ದರೆ ಈ ಮಹಾನಗರಗಳೆಂಬ ಕೂಪದಲ್ಲಿ ದಿನಕ್ಕೊಂದು ಮುಖವಾಡ ಹಾಕಿ ಬದುಕಲು ನಮ್ಮಿಂದ ಸಾಧ್ಯವಿತ್ತೆ?

    -ಶೆಟ್ಟರು

  4. “ಅಮೆರಿಕದ ಜತೆ ಪೈಸಾಪೈಸ ಸಂಬಂಧವಿರದ ಈ ಆಫೀಸಿಗೂ ರಿಸೆಷನ್ನಿನ ರೋಗ ಹರಡಿದೆ”
    ನೀವಂದಿದ್ದು ಸರಿ. ಎಲ್ಲಾ ಕಡೆ ಆಗೋದು ಹೀಗೆ. ಖರ್ಚು ಕಡಿತ ಮಾಡಲು, ಇದ್ದೋರನ್ನೇ ಹಿಂಡಿ ಹಿಂಡಿ ದುಡಿಸಲು, ಅಥವಾ ದುಡಿಸಿ ದುಡಿಸಿ ಹಿಂಡಲು, ಈ ರಿಸೆಷನ್ ರೋಗ ವ್ಯಾಪಕವಾಗಿ ಹರಡ್ತಾ ಇದೆ.

    “ಜಗತ್ತು ಅಂದರೆ ಮನೆ, ಆಫೀಸು, ಸಂಬಳ, ಶಾಪಿಂಗು, ಅವನು, ಅವನ ಪ್ರೀತಿ- ಮುನಿಸು…. ಜಗತ್ತು ಅಂದರೆ ಗಟಾರ, ಕಾಯಿಲೆ, ಜೋಪಡಿ ಕೂಡಾ!!”
    ಹೌದು. ನಾವು ನಮ್ಮದೇ ದೊಡ್ಡ ಸಮಸ್ಯೆ ಅಂತ ತಿಳ್ಕೋತೀವಿ. ಆದ್ರೆ ಆ ಸ್ಲಮ್ಮಿನವರು? ಇದ್ದುದರಲ್ಲೇ ಸುಖ ಪಡೆಯೋ ಕಲೆ ಗೊತ್ತಿದೆ ಅವ್ರಿಗೆ. ಅದ್ಕೇ ಇರ್ಬೇಕು ನಮ್ಮನ್ನು ಮಧ್ಯಮ ವರ್ಗದವ್ರು ಅನ್ನೋದು!

  5. ಚೇತನಾ,
    ತೀರಾ ಇಷ್ಟಲ್ಲದೇ ಇದ್ದರೂ ಇದಕ್ಕಿಂತ ಚೆನ್ನಾಗೇನೂ ಇರದಿದ್ದ ನನ್ನ ಬಾಲ್ಯವನ್ನು ಈ ಬರಹ ನೆನಪು ಮಾಡಿ ಕೊಟ್ಟಿತು..

    ನಮ್ಮೊಳಗಿನ ಸಿಧ್ಧಾರ್ಥ ಕಳೆದು ಹೋಗಿದ್ದಾನೋ ಅಥವಾ ಅವನ ಇರುವು ನಮಗೇ ಬೇಡವೋ .. ಗೊಂದಲಕ್ಕೆ ಇನ್ನೂ ಉತ್ತರ ಸಿಕ್ಕಿಲ್ಲ.. ಜಗತ್ತು ಹೀಗೆ ನಡೆಯುತ್ತಿರುವುದೇ ನಾವು ಸಿಧ್ಧಾರ್ಥರಲ್ಲದೆ ಇರುವ ಕಾರಣ ಅಲ್ಲವೇ …ಇನ್ನು ಬೇರೆಯವರ ನೋವು ನೋಡಿ ಏಳುವ ಸಿಧ್ಧಾರ್ಥ ಬಹುಶಃ ಸಿಗಲು ಕಷ್ಟವೇನೋ… ಆದ್ದರಿಂದಲೇ ಈ ವರೆಗೆ ಅವನೊಬ್ಬ ಮಾತ್ರ ಜಗತ್ತಿಗೆ ಬುಧ್ಧ.. ಅದಿರಲಿ ವ್ಯಾನಿಟಿ ಹಿಡಿದು ಹೊರಟ ಕಾರ್ಯಕ್ಕೆ ಜಯವಾಗಲಿ…

    ಮತ್ತೆ ನೀವು ಬರೆಯುವ ಇಂಥ ಬರಹಗಳನ್ನು ಚೆಂದ ಇದೆ ಅನ್ನೋದು ಹೇಗೆ ಎಂಬುದೇ ನನ್ನ ಮಿಲಿಯನ್ ಡಾಲರ್ ಪ್ರಶ್ನೆ..

  6. ಚೇತನಾ ಮೇಡಮ್ ನಾವೆಲ್ಲ ಹೀಗೆ ವಾಸ್ತವ ಬೆತ್ತಲಾಗಿ ಎದಿರಾದಾಗ ದಂಗಾಗುತ್ತೇವೆ ಆದರೆ ನಮ್ಮ
    ಆಫೀಸುಗಳ ಏಸಿಯಲ್ಲಿ, ಯುಸುಫ ಹೊಡೆಯುವ ಸಿಕ್ಸರ್ ಗಳಲ್ಲಿ ಅದ ಮರೆಯುವ ವ್ಯರ್ಥ ಪ್ರಯತ್ನ ಮಾಡುತ್ತೇವೆ…!

  7. ಒಳ್ಳೆಯ ಬರಹ.
    “ಇವತ್ತೇ ಬೇರೆ ಕಂಪೆನಿಗಳಿಗೆ ಅಪ್ಲಿಕೇಶನ್ ಹಾಕಬೇಕು! ಈಗಿನ ಸಂಬಳ ಹಾಸಲು- ಹೊದೆಯಲು ಸಾಕಷ್ಟೆ!!”- ಅಂದುಕೊಂಡು ವ್ಯಾನಿಟಿ ಹೆಗಲೇರಿಸಿದೆ.
    ಹಾಸಲು-ಹೊದೆಯಲು ಸಾಕಾಗಿ ಕ೦ತೆ ಕ೦ತೆ ಮಿಗಿಸುವವರು ಎಷ್ಟು ಸುಖಿ!ನಾಳೆಯೆ೦ಬುದರ ಬಗ್ಗೆ ಚಿ೦ತೆ ಇಲ್ಲಾ ಎ೦ಬುದಾದರೆ ನಿತ್ಯ ಎಲ್ಲರೂ ಸುಖಿಗಳೆ…..ಸ್ಲಮ್ಮಿನ ಜನ ಮಾತ್ರ ಪ್ರತಿ ನಿತ್ಯ ಸುಖಿಗಳಾಗಿರಲು ಸಾಧ್ಯ..ಸುಖವನ್ನ ನೋಡಿಲ್ಲದಿರುವವರಿಗೆ ಕಷ್ಟವೇ ಸುಖ.
    ನಿಮ್ಮ ಹಾದಿ ಸುಗಮವಾಗಿರಲಿ.

  8. ನಮ್ಮೊಳಗಿನ ಸಿದ್ಧಾರ್ಥನಿಗೆ ಎಚ್ಚರವಾದಾಗೆಲ್ಲಾ ನಾವೇ ಅವನ ಬೆನ್ನು ಮೆತ್ತಗೆ ತಟ್ಟಿ ಪುನಃ ಮಲಗಿಸುತ್ತೇವೆ……… ನಾವು ಆತ್ಮವಂಚಕರು… ಭೀಕರ ಅಪಘಾತಗಳಲ್ಲಿ ರಕ್ತ ಮಡುವಿನಲ್ಲಿ ಚಲ್ಲಾಪಿಲ್ಲಿಯಾಗಿ ಬಿದ್ದಿರುವ ಶರೀರಗಳನ್ನು ಕಂಡು ನಮಗೆ ತಲೆಸುತ್ತು ಬಂದು ವಾಕರಿಕೆ ಬಂದಂತಾಗುತ್ತದೆ…. ವಾರ್ತೆಗಳಲ್ಲಿ , ಸಿನಿಮಾಗಳಲ್ಲಿ …. ಮತ್ತು ನೈಜ ಜೀವನದಲ್ಲಿ ರೋಗಪೀಡಿತರನ್ನು, ಮನೆ ಕಳಕೊಂಡವರನ್ನು, ದಾಹ ಮತ್ತು ಹಸಿವಿನಿಂದ ಬಳಲುತ್ತಿರುವವರನ್ನು, ಜೀವನ ಗುರಿಪಡಿಸುವ ಸತ್ವಪರೀಕ್ಷೆಗಳಲ್ಲಿ ನಿಸ್ಸಹಾಯಕರಾದವರನ್ನು …. ಮತ್ತಿಂತಹ ಅನೇಕರನ್ನು ಕಂಡು ನಾವು ತೋರುವ ಕನಿಕರ , ಸ್ಪಂದನ …ನಮ್ಮ ನಟನೆಯ ಒಂದು ಭಾಗ ಮಾತ್ರ … ಅಂತರಾತ್ಮ ವಿಲ್ಲದ ನಟನೆ… ಜನರ ನೋವನ್ನು ಕಂಡು ನಮ್ಮ ಕಣ್ಣಂಚಿನಲ್ಲಿ ತೇಲಾಡುವ ಕಣ್ಣೀರ ಹನಿಗಳು.. ಅವರ ದುಸ್ಥಿತಿಯನ್ನು ನೋಡಿ ಮಿಡಿಯುವ ನಮ್ಮ ಹ್ರದಯ, ಅವರ ಸಂಕಟ, ಸಂಕಷ್ಟಗಳನ್ನು ಕಂಡು ನಾವು ಹೊರಡಿಸುವ ಪದಗಳು…. ಪ್ರಾಮಾಣಿಕವಾಗಿರದೆ ನಮ್ಮ ಕಾಪಟ್ಯಕ್ಕೆ ಸಾಕ್ಷಿಯಾಗಿರುತ್ತದೆ… ನಮ್ಮೊಳಗಿನ ಸಿದ್ಧಾರ್ಥ ಕಣ್ಣು ತೆರೆಯುವುದಿಲ್ಲವೆಂಬುದಕ್ಕಿಂತ … ಅವನು ಕಣ್ಣು ತೆರೆಯುವುದು ನಾವು ಬಯಸುವುದೇ ಇಲ್ಲವೆಂಬುದಾಗಿದೆ ಸತ್ಯ….. ನಮ್ಮೆಲ್ಲ ಸಮಾಜ ಪ್ರವರ್ತನಗಳೂ ಇಂತಹದ್ದೇ .. ಕಣ್ಣಿಗೆ ಮಣ್ಣೆರಚುವವುಗಳು…

ನಿಮ್ಮ ಟಿಪ್ಪಣಿ ಬರೆಯಿರಿ

Blog at WordPress.com.

Up ↑