ಹತ್ತು, ಇಪ್ಪತ್ತು… ನಲವತ್ತು ಮುಂಬತ್ತಿಗಳು!! ಮುಗಿದ ಬದುಕಿನ ಲೆಕ್ಕ. ಬೆಳಕು ಹರಡಿದ ಸಾರ್ಥಕ ಘಳಿಗೆಗಳೂ ಇವೆಯಿದರಲ್ಲಿ. ಈಗ ಉಪಯೋಗವಿಲ್ಲದ ಮೇಣದ ಚರಟದ ಹಾಗೆ ಉಳಿದಿದೀನಾ? ಯೋಚಿಸಬೇಕಿದೆ.
ಬೆಳಗಿಂದ ಒಂದೇ ಸಮ ಫೋನ್ ಕಾಲ್ ಗಳು. ಹರಕೆ ಹೊತ್ತಂತೆ ಶುಭ ಹಾರೈಕೆಯ ಶಾಸ್ತ್ರ ಮುಗಿಸ್ತಿದಾರೆ. ಗೊತ್ತಿರುವ ಗೆಳೆಯ ಗೆಳತಿಯರೆಲ್ಲರೂ ‘ಇನ್ನೇನು ಆಂಟಿಯಾದೆ’ ಅಂತ ಛೇಡಿಸುವವರೇ. ಹೀಗೆ ಎಲ್ಲರ ಹಾರೈಕೆಯೂ ಬಂದಿದೆ, ಬರುತ್ತಿದೆ. ಅವರಿಬ್ಬರದನ್ನ ಬಿಟ್ಟು. ‘ನನ್ನತನ ಮೀರಿದ ಜೀವ’ ಅಂದುಕೊಂಡ ವ್ಯಕ್ತಿಗಳು ಬಹಳಷ್ಟು ಸಾರ್ತಿ ಬದಲಾಗಿದಾರೆ. ಕೊನೆಗೂ ಉಳಿದವರು ಇವರಿಬ್ಬರೇ. ಇವರು ನಾನು ಬಿಟ್ಟವರಲ್ಲ, ನನ್ನ ಬಿಟ್ಟವರು. ಅರಸ ಸುಲಭಕ್ಕೆ ಸೋಲುವುದಿಲ್ಲ. ಸೋತರೆ, ಗುಲಾಮನಿಗಿಂತ ಗುಲಾಮನಾಗ್ತಾನೆ. ಪ್ರೇಮದ ಗುಲಾಮಗಿರಿ ಎಷ್ಟು ಚೆಂದ!
ನನ್ನ ಕಿವಿ ಮುಟ್ಟದ ಅವರನ್ನ ಇಷ್ಟು ಹೊತ್ತು ಕಾದಿದ್ದಾಯ್ತು. ಕಾದು ಕಾದು ಕುದಿಬಂದು ಆವಿಯಾಗತೊಡಗಿದ್ದೇನೆ. ಇನ್ನು ನಿರೀಕ್ಷೆ ಸಾಧ್ಯವಿಲ್ಲ. ಇಬ್ಬರದೂ ಒಂದೇ ಹಾದಿ. ಪರಸ್ಪರ ಸಂಬಂಧವೇ ಇರದ ಅವರಿಬ್ಬರು ನನ್ನ ಸೂತ್ರದಿಂದ ಒಂದೇ ರೇಖೆಯಲ್ಲಿರುವರಲ್ಲ? ನನ್ನ ಈಗಿನ ನಿರ್ಧಾರ ಅವರ ಕಾರಣದಿಂದ ಅಲ್ಲ ಅನ್ನೋದನ್ನ ಸ್ಪಷ್ಟ ಮಾಡಿಡಬೇಕು. ಅವರಿಗೆ ನೋವಾಗ್ತದೆ ಅಂತಲ್ಲ. ‘ನನ್ನ ಈ ಪರಿ ಪ್ರೇಮಿಸಿದ್ದಳು’ ಅನ್ನುವ ಅಹಂಕಾರ ಬರಬಾರದಲ್ಲ, ಅದಕ್ಕೆ.
ಇವತ್ತು ಬೆಳಗಿನ ಮೊದಲ ಕಾಲ್ ನನ್ನ ಪ್ರಿಯ ಶತ್ರುವಿನದು. ಆಮೇಲೆ ಅಮ್ಮ ಕಾಲ್ ಮಾಡಿದ್ದಳು. ವೆಂಕಟರಮಣನಿಗೆ ಪಂಚಾಮೃತ ಅಭಿಷೇಕಕ್ಕೆ ಕೊಟ್ಟಿದಾಳಂತೆ. ‘ಮನೇಲಿ ಒಂದು ದೀಪಾನಾದ್ರೂ ಹಚ್ಚು. ತಲೆಗೆ ಎಣ್ಣೆ ಇಟ್ಕೊಂಡು ನೀರು ಹಾಕ್ಕೋ’ ಅಂದಿದ್ದಳು. ಅಪ್ಪ ‘ಒಳ್ಳೇದಾಗ್ಲಿ ಕಣಮ್ಮಾ’ ಅಂದಿದ್ದ. ಅದು ಎಷ್ಟು ವಿಚಿತ್ರವಾಗಿ ಕೃತಕವಾಗಿ ಅನ್ನಿಸ್ತೆಂದರೆ, ಅಂವ ‘ಹಾಳಾಗಿ ಹೋಗು’ ಅಂದುಬಿಟ್ಟಿದ್ದರೆ ತೃಪ್ತಿಯಾಗಿ ಖುಷಿಪಡಬಹುದಿತ್ತೇನೋ. ಅವನ ದನಿಗೆ ಈ ಹಾರೈಕೆ ಒಗ್ಗುವುದೇ ಇಲ್ಲ!
‘ಪಾರ್ಟಿ ಯಾಕೆ ಅರೇಂಜ್ ಮಾಡಿಲ್ಲ? ನಾವು ಬಂದೇ ಬರ್ತೀವಿ ಮನೇಗೆ’ ಗೆಳೆಯರ ತಾಕೀತು. ನಾನಂತೂ ಊರಲ್ಲಿ ಇಲ್ಲವೆಂದುಬಿಟ್ಟಿದೇನೆ. ಹೇಗಿದ್ದರೂ ಅವರೆಲ್ಲ ಇವತ್ತು ರಾತ್ರಿಯೋ, ನಾಳೆ ಬೆಳಗ್ಗೆಯೋ ಸುದ್ದಿ ತಿಳಿದು ಬಂದೇಬರಬೇಕು, ಬರುತ್ತಾರೆ ಕೂಡ. ನಾನೀಗ ಈ ನನ್ನ ನೆಚ್ಚಿನ ಕಿಟಕಿ ಪಕ್ಕದ ಟೇಬಲಿನ ಮೇಲೆ ನಲವತ್ತು ಮುಂಬತ್ತಿಗಳನ್ನ ಉರಿಸುವವಳಿದ್ದೇನೆ. ಮುಂಬತ್ತಿಯ ಮೇಣದ ಹಾಗೆ ಕರಗಿಳಿದು ಹೆಪ್ಪುಗಟ್ಟೋದಿಲ್ಲ ಕಂಬನಿ. ಲಾವಾದಂತೆ ಕಣ್ಣಿಂದ ಎದೆಯೊಳಗಿಳಿದು ಸ್ಫೋಟಕ್ಕೆ ಕಾಯುತ್ತದೆ. ಎದೆಯೊಳಗೆ ಹೂತ ನೆನಪು ಕನಸುಗಳೆಲ್ಲ ಶಾಖಕ್ಕೆ ಬೇಯತೊಡಗುತ್ತವೆ. ಬೆಂದು ಬೆಂದು ಕರಗಿ ಕಳೆದುಹೋಗುತ್ತವೆ.
ಸ್ಫೋಟ!
ವರ್ಷಗಳ ಹಿಂದೆ ಅಂವ ಕೌನ್ಸೆಲಿಂಗಿಗೆ ಕರೆದೊಯ್ದಿದ್ದ. ‘ಎಲ್ಲಾದ್ಕೂ ಓವರ್ ರಿಯಾಕ್ಟ್ ಮಾಡ್ತಾಳೆ’ ಅಂತ. ಸೈಕಿಯಾಟ್ರಿಸ್ಟ್, ಈಕೆ ತುಂಬಾ ನಾರ್ಮಲ್ ಆಗಿದಾರೆ ಅಂತ ರಿಪೋರ್ಟ್ ಕೊಟ್ಟರು. ‘ಪ್ರತಿಭಟಿಸೋದು ಈಕೆಯ ಹುಟ್ಟುಗುಣ. ತಪ್ಪೇನಿಲ್ಲ’ ಅಂದರು. ಕರಕೊಂಡು ಹೋದವ, ‘ಇವರೆಲ್ಲ ಬಾಯಿಪಾಠದ ಡಾಕ್ಟರುಗಳು. ಪುಸ್ತಕ ನೋಡಿ ಮನಸ್ಸು ತಿಳಿಯೋಕಾಗತ್ತಾ?’ ಅಂತೇನೋ ಗೊಣಗಿದ್ದ. ಅವನ ಅವಸ್ಥೆ ನೋಡುವಾಗೆಲ್ಲ ಅವಂಗೇ ಸೈಕಿಯಾಟ್ರಿಸ್ಟರ ಅಗತ್ಯವಿದೆ ಅಂತನ್ನಿಸಿ ಹೋಗ್ತಿತ್ತು. ‘ನಿನಗಿಂತ ಜಾಸ್ತಿ ನೊಂದ….’ ಉಪನ್ಯಾಸ ಶುರುವಿಡುತ್ತಿದ್ದ. ನಾನು ಕೇವಲ ‘ನಾನು’ ಆಗಿದೇನಂತ ತಿಳಿಸಿಕೊಡಲು ಪಟ್ಟ ಪ್ರಯತ್ನವೆಲ್ಲ ಹುಸಿಹೋಗುತ್ತಿತ್ತು. ನಾನೊಂದು ಪ್ರತ್ಯೇಕ ವ್ಯಕ್ತಿ. ನಿನ್ನ ಹಾಗಲ್ಲದ, ಮತ್ಯಾರದೋ ಹಾಗಲ್ಲದ ಇಂಡಿವಿಜುವಲ್. ಪಕ್ಷಿಯ ಹಾಗೆ, ಪ್ರಾಣಿಯ ಹಾಗೆ, ಬ್ಯಾಕ್ಟೀರಿಯಾ, ವೈರಸ್ಸುಗಳ ಹಾಗೆ, ಕೋಟ್ಯಂತರ ಮನುಷ್ಯರು ಪ್ರತಿಯೊಬ್ಬರಿಗೂ ಅಸ್ತಿತ್ವವಿರುವ ಹಾಗೆ ನಾನೂ…. ಒಳಗೊಳಗೆ ಚೀರಿಕೊಳ್ಳುತ್ತಿದ್ದೆ. ಅವನ ಪ್ರೀತಿ ಉಳಿದೆಲ್ಲ ಭಿನ್ನಾಭಿಪ್ರಾಯಗಳನ್ನೂ ಮರೆಸಿಹಾಕ್ತಿತ್ತು. ಮರೆಸಿದ್ದಕ್ಕಿಂತ, ಮರುಮಾತನ್ನ ತಳ್ಳಿ ಹಾಕ್ತಿತ್ತು ಅನ್ನುವುದೇ ಸರಿಯೇನೋ?
~
ಈ ಹೊತ್ತು, ಕೊನೆಯಾಗಬೇಕನ್ನುವ ನಿಶ್ಚಯ ಹೊತ್ತು ಕುಳಿತಿದೇನೆ. ಮುಂಬತ್ತಿಗಳು ಒಂದೊಂದೇ ಹೊತ್ತುರಿದು ಕರಗಿ ಮುಗಿಯುವವರೆಗೆ, ಬರದಿರುವ ಅವನ ನಿರೀಕ್ಷೆಯನ್ನ ಮೆಟ್ಟಿನಿಲ್ಲಲು ಬಿಟ್ಟ ಹೆಜ್ಜೆಗಳನ್ನ ಎಣಿಸಿಕೊಳ್ಳಲೆ?
~
ಇವತ್ತಿಗೆ ಸರಿಯಾಗಿ ನಲವತ್ತು ವರ್ಷಗಳ ಮೇಲೊಂದು ದಿನದ ಹಿಂದೆ….
ಶ್ರಾವಣದ ಮಳೆ. ಬಿಡಾರದವರ ಹುಂಜ ಮೈಮುರಿದು ಕೂಗಿದ್ದೇ ಅವತ್ತು ಏಳು ಗಂಟೆಗೆ. ಆ ಹೊತ್ತಿಗೆ ಸರಿಯಾಗಿ ನಡುಮನೆಯಲ್ಲಿ ಹದಿನಾರರ ಎಳೆಬಸುರಿಗೆ ಹೆರಿಗೆ ನೋವು. ದೊಡ್ಡಮ್ಮ, ಮಂಜಿ ಅವಳ ಪಕ್ಕ ಕೂತು ‘ಸ್ವಲ್ಪ ಮುಕ್ಕು ತಾಯೀ’ ಅಂತ ಧೈರ್ಯ ಹೇಳ್ತಿದ್ದರು. ಗಾಬರಿಯಾಗಿಹೋಗಿದ್ದ ಅವಳು ಅವರು ಹೇಳಿದ ಹಾಗೇ ಕಾಲಗಲಿಸಿ ಮುಕ್ಕುತ್ತ ನೋವಿಗೆ ಚೀರುತ್ತಿದ್ದಳು. ಅಷ್ಟೇನೂ ತ್ರಾಸಾಗದೆ ಸಪೂರ ಮೈಯಿನ ಮಗು ಭೂಮಿಗಿಳಿಯಿತು. ನಾನು ‘ಹುಟ್ಟಿದ್ದೆ’. ಮಂಗಳವಾರದ ಬೆಳಗಿನ ಏಳೂಕಾಲರ ಸಮಯ. ದೊಡ್ಡಮ್ಮ ಘಳಿಗೆ ಬರೆದಿಟ್ಟರು. ನಾನಂತೂ ಅಳುತ್ತಿದ್ದೆ. ಸಜೀವವಿರುವುದರ ಸಂಕೇತವಾಗಿ ನಾನು ಅಳಲೇಬೇಕಿತ್ತು. ನನ್ನ ನೊಡಿದ್ದೇ ಅಮ್ಮನೂ ಮುಸುಗರೆಯತೊಡಗಿದ್ದಳು. ದೊಡ್ಡಮ್ಮನ ಬಾಣಲೆಯಗಲದ ಮುಖವೂ ಹಿಡಿಯಾಗಿಹೋಗಿತ್ತು. ನನ್ನ ಅಳು ಕೇಳ್ತಲೇ ನಡುಮನೆಯತ್ತ ಜೋಡಿ ಕಾಲ್ಗಳು ನಡೆದುಬಂದವು. ಬಾಗಿಲಿಗೆ ಕಿವಿಯಾನಿಸಿ, ‘ಇವ್ಳೇ’ ಅಂದವು. ದೊಡ್ಡಮ್ಮ ಬಾಯಿಬಿಡಲಿಲ್ಲ. ಮಂಜಿ ಹಗೂರ ದನಿಯಲ್ಲಿ ‘ಲಕ್ಷ್ಮಿ ಒಡೇರೇ’ ಅಂದಳು.
ಬಳ್ಳಿ ಕತ್ತರಿಸಿ ಅಮ್ಮನ ಜೀವದಿಂದ ನನ್ನದನ್ನ ಬೇರೆ ಮಾಡಲಾಯ್ತು. ಆ ಕ್ಷಣದಿಂದ ನಾನೊಬ್ಬಳು ಸ್ವತಂತ್ರ ವ್ಯಕ್ತಿಯಾಗಿದ್ದೆ.
( ಸಶೇಷ)
(ಶಾಸನ ವಿಧಿಸಿದ ಎಚ್ಚರಿಕೆ: ಇದು ಏನು, ಏನಾಗಲಿದೆ ಅಂತ ನಮಗೆ ಬ್ಲಾಗೇಶ್ವರಿಯಾಣೆ ಗೊತ್ತಿಲ್ಲ. ಯಾರೂ ತಲೆಕೆಡಿಸ್ಕೊಬಾರದು.)

ಅಕ್ಕ,
ಬೊಂಬಾಟ್ ಶೈಲಿ… ಹೆಚ್ಚು ಹೇಳಲು ಏನು ಉಳಿದಿಲ್ಲ, ನಂಗಂತೂ ತುಂಬಾ ಇಷ್ಟವಾಗಿದೆ :-).
Yeneno bhavanegalu manasinalli haadu hoytu kanri, nimma lekhanagale heege ratri nidde kedisutte.
Guru.
Chetana madam
naanu nimma gadyada abhimaani. nimma baraha, shaili nanage achchu mechchu. heege bareyuttiri. ee `kathe tharaddu’ mundenaaguvudo ennuva kutuhalavide.
nimma, Sumana
>ಮುಟ್ಟುನಿಂತ ಹೆಂಗಸಿನ ಹಾಗೆ ತಟವಟಗುಟ್ಟುವ ಶ್ರಾವಣದ ಮಳೆ.
ಹೆಣ್ಣಿಗೆ ತನ್ನದೇ ಆದ ವ್ಯಕ್ತಿತ್ವವಿದೆ ಎಂದು ಹೇಳುತ್ತಲೇ, ಹೆಣ್ಣಿನ ದೇಹದಲ್ಲಾಗುವ ಕಷ್ಟದ ಹಾಗು ನೈಸರ್ಗಿಕ ಬದಲಾವಣೆಯನ್ನು insensitive ಆಗಿ ವರ್ಣಿಸುವ ಉಪಮೆ. ಯಾಕೆ?
-VK
baraha ishta aaytu… barahadaaLadali aDagairuva viShaadada bhaava lekhana Odida mele bahu hottina tanaka kaaDuvudu khandita…
ಪ್ರೇಮದ ಗುಲಾಮಗಿರಿ ಎಷ್ಟು ಚಂದ!!! ಉಫ್… ಶಸ್ತ್ರ ಕೆಳಗಿಟ್ಟಿದ್ದೀನಿ….
ಅದಿರ್ಲಿ…
ಇದು ಕಥೆ ಥರಾನೇ ಇದೆಯಲ್ಲ…. ಬ್ಲಾಗೇಶ್ವರಿಯಾಣೆಗೂ ತಲೆ ಕೆಡಿಸಿಕೊಂಡು ಕೂತಿದ್ದೇನೆ.. ಮುಂದೇನು????
ಈ ನಲ್ವತ್ತು ಮೇಣಗಳ ಮೇಲಿನ್ನೆರಡು ಉರಿಸಿ ಮುಗಿಸಿ ಮುಂದಿನದನ್ನು ಕೊಳ್ಳುವ ತಯಾರಿಯಲ್ಲಿದ್ದಾಗಲೇ ನಿಮ್ಮೀ ಬರಹ ಹೃದಯ ತಟ್ಟಿದೆ. ಮುಟ್ಟು ನಿಲ್ಲುತ್ತಿರುವ ವಯಸ್ಸಿನ ತಟವಟ ಸಾಕ್ಷಾತ್ ಅಂಗಳದಲ್ಲಿಯೇ ಕೂತಿದೆ. ಬ್ಲಾಗೇಶ್ವರಿಯ ಆಣೆ ಬೇರೆ ಬಾಯಿ ಕಟ್ಟಿಹಾಕಿದೆ. ಮುಂದೇನು?
Nice post!
( ಸಶೇಷ)>> ellakka shesha?