‘ಜಂಭಗಾತಿ’ ಹುಡುಗಿಯನ್ನ ಎದುರಿಟ್ಟುಕೊಂಡು…


ಯಾಕೆ ಯಾವಾಗಲೂ ಹೀಗಾಗುತ್ತದೆ? ಹೆಣ್ಣೊಬ್ಬಳು ಆತ್ಮವಿಶ್ವಾಸದ ಗರ್ವದಿಂದ ನಡೆದುಕೊಂಡಾಕ್ಷಣ ಯಾಕೆ ಪುರುಷಲೋಕದ ನಿದ್ದೆ ಕೆಡುತ್ತದೆ? ಈ ಪ್ರಶ್ನೆ ಕೇಳಲು ಕಾರಣವಿದೆ. ನಮ್ಮ ಚಲನಚಿತ್ರ ರಂಗದ ಇತಿಹಾಸವನ್ನ ಒಮ್ಮೆ ಪ್ರಾಮಾಣಿಕವಾಗಿ ಅವಲೋಕಿಸಿದರೆ ಅದು ಹೊಳೆಯುತ್ತದೆ ಕೂಡ….

ಚಿತ್ರ ನಟಿ ರಮ್ಯಾ ನೃತ್ಯ ನಿರ್ದೇಶಕರನ್ನ, ಸ್ಪಾಟಲ್ಲಿದ್ದ ಕೆಲವರನ್ನ ಅವಾಚ್ಯವಾಗಿ ಬಯ್ದು, ಸುದ್ದಿಯಾಗಿ ಕ್ಷಮೆ ಕೇಳಿದ ಘಟನೆ ಇವತ್ತಿಗೆ ಹಳೇಹಪ್ಪಟ್ಟೆನಿಸಬಹುದು. ರಮ್ಯಳೋ, ರಂಜಿತಳೋ, ಯಾವ ನಟಿ, ನಟ, ನಿರ್ದೇಶಕ, ಒಟ್ಟಾರೆ ಮನುಷ್ಯ ಜಾತಿಯ ಜೀವಿಯೋ, ಹಾಗೆಲ್ಲ ಅಸಭ್ಯವಾಗಿ ವರ್ತಿಸೋದು ಶುದ್ಧ ತಪ್ಪು. ಹಾಗೆ ನಡೆದುಕೊಳ್ಳುವ ಯಾರ ಮೇಲೆಯೇ ಆಗಲಿ ನನ್ನ ವಿರೋಧವಂತೂ ಇದ್ದೇ ಇದೆ. ರಮ್ಯ ಕೂಡ ಇದಕ್ಕೆ ಹೊರತಾಗಿಲ್ಲ. ಹೀಗಾಗಿ ಒಟ್ಟಾರೆಯಾಗಿ ರಮ್ಯಳ ವರ್ತನೆಯನ್ನ ಖಂಡಿಸಿಯೇ ಮಾತನ್ನ ಮುಂದುವರೆಸಬೇಕಾಗುತ್ತದೆ. ಮೊದಲೇ ಸ್ಪಷ್ಟಪಡಿಸುವುದೆಂದರೆ, ನಾನಿಲ್ಲಿ ಚರ್ಚಿಸಹೊರಟಿರೋದು ರಮ್ಯಾಳ ಪ್ರಕರಣ ಸುದ್ದಿಯಾದುದರ ಬಗ್ಗೆ. ಮತ್ತು ಆಕೆಯ ಘಮಂಡಿತನಕ್ಕೆ ಸಿಕ್ಕ ಪ್ರತಿಕ್ರಿಯೆಯ ಹಿಂದಿರಬಹುದಾದ ರಾಜಕಾರಣದ ಬಗ್ಗೆ.

ಯಾಕೆ ಯಾವಾಗಲೂ ಹೀಗಾಗುತ್ತದೆ? ಹೆಣ್ಣೊಬ್ಬಳು ಆತ್ಮವಿಶ್ವಾಸದ ಗರ್ವದಿಂದ ನಡೆದುಕೊಂಡಾಕ್ಷಣ ಯಾಕೆ ಪುರುಷಲೋಕದ ನಿದ್ದೆ ಕೆಡುತ್ತದೆ? ಈ ಪ್ರಶ್ನೆ ಕೇಳಲು ಕಾರಣವಿದೆ. ನಮ್ಮ ಚಲನಚಿತ್ರ ರಂಗದ ಇತಿಹಾಸವನ್ನ ಒಮ್ಮೆ ಪ್ರಾಮಾಣಿಕವಾಗಿ ಅವಲೋಕಿಸಿದರೆ ಅದು ಹೊಳೆಯುತ್ತದೆ ಕೂಡ.

ನಮ್ಮಲ್ಲಿ ಕೆಲವು ಹಿರಿಯ ನಿರ್ದೇಶಕರುಗಳು, ಗರ್ವಿಷ್ಟ ನಿರ್ದೇಶಕರುಗಳು ತಮ್ಮ ಕೆಳಗಿನ ಉದ್ಯೋಗಿಗಳಿಗೆ ಕಪಾಳಕ್ಕೆ ಹೊಡೆಯುವ, ರೇಗುವ, ವಾಚಾಮಗೋಚರ ಬಯ್ಯುವ ಉದಾಹರಣೆಗಳು ಲೆಕ್ಕವಿಲ್ಲದಷ್ಟಿವೆ. ಉತ್ತಮ ಗುಣಮಟ್ಟದ ಫಲಿತಾಂಶ ಪಡೆಯಲಿಕ್ಕಾಗಿ ಅಂಕೆತಪ್ಪಿ ಹೀಗೆ ಪ್ರಮಾದಗಳಾಗ್ತವೆ ಅಂತ ಹೇಳಲಾಗ್ತದೆ. ಇದನ್ನ ಕೆಲವೊಮ್ಮೆ ಒಪ್ಪಬಹುದಾದರೂ ನೆತ್ತಿಗೇರಿದ ತಲೆಪ್ರತಿಷ್ಟೆಯಿಂದ ಇಂತಹ ದಬ್ಬಾಳಿಕೆ ನಡೆಸುವವರ ಸಂಖ್ಯೆ ಯಾವ ರಂಗದಲ್ಲೂ ಕಡಿಮೆಯೇನಿಲ್ಲ. ಆದರೆ ಬಹುತೇಕ ಇಂತಹ ಪ್ರಕರಣಗಳು ಹಾಹಾಗೇ ಸಹಜವೆಂಬಂತೆ ಮುಚ್ಚಿಹೋಗ್ತವೆ. ಹೀರೋ ಪಾತ್ರಧಾರಿಗೆ ಏನೋ ಸರಿ ಕಂಡು ಬರದಿದ್ದಾಗ, ಅಗತ್ಯವಸ್ತು ಪೂರೈಕೆಯಲ್ಲಿ ತಪ್ಪಾಗಿಯೋ, ಮತ್ತೇನು ಅನಾನುಕೂಲವೋ ಆದಾಗ ಆತ ಕೆಂಗಣ್ಣು ಮಾಡಿಕೊಂಡು ಉದುರಿಸುವ ಪ್ರತಿ ಬಯ್ಗುಳ ಅಮೂಲ್ಯ ಮುತ್ತು. ಕಪಾಳಕ್ಕೆ ಹೊಡೆದರೆ ಪರಮ ಪ್ರಸಾದ. ದುಡಿತದ ಮಟ್ಟದಲ್ಲಿ ವರ್ಗ ತಾರತಮ್ಯದ ಬಗ್ಗೆ ಆಗೆಲ್ಲ ಯಾರೂ ಮಾತನಾಡೋದಿಲ್ಲ. ಅದೇ, ಹೀರೋಇನ್ ಪಾತ್ರಧಾರಿ ಹೊಡೆಯೋದಿರಲಿ, ನಾಲ್ಕು ಮಾತು ಗಟ್ಟಿಬಯ್ದರೆ? ಅದು ಆಕೆಯ ಅಹಂಕಾರ, ಶ್ರೀಮಂತಿಕೆಯ ಪೊಗರು, ದಬ್ಬಾಳಿಕೆ ಇತ್ಯಾದಿ ಆಗುತ್ತದೆಯಲ್ಲವೆ? ಈಗ ರಮ್ಯಾಳಿಂದ ಬಯ್ಸಿಕೊಂಡು ಸುದ್ದಿಯಾಗುತ್ತಿರುವ ಮಂದಿಯನ್ನ ಕೇಳುತ್ತೇನೆ ನಾನು, ಈಗ ನಿಮ್ಮ ಆತ್ಮ ಸಮ್ಮಾನಕ್ಕೆ ಪೆಟ್ಟುಬಿದ್ದಿರೋದು ಒಟ್ಟಾರೆ ಒಂದು ವ್ಯಕ್ತಿ ನಿಮ್ಮನ್ನು ದೂಷಿಸಿದ್ದಕ್ಕೋ, ಒಬ್ಬ ಹೆಣ್ಣು ನಿಮ್ಮನ್ನು ದೂಷಿಸಿದಳೆಂತಲೋ ಎಂದು…

ಬಹುಶಃ ಇದು ಎಲ್ಲರಿಗೂ ಗೊತ್ತಿರುವ, ಯಾರೂ ಆಡದೆ ಸುಮ್ಮನಿರುವ ಮಾತು. ಚಿತ್ರರಂಗದಲ್ಲಿ ಹೆಣ್ಣುಮಕ್ಕಳು ಯಾವ ಪರಿ ದುರ್ಬಳಕೆಯಾಗ್ತಾರೆ, ಅವರ ಮಹತ್ವಕಾಂಕ್ಷೆಯನ್ನ ಯಾವೆಲ್ಲ ರೀತಿ ಎನ್ ಕ್ಯಾಶ್ ಮಾಡಿಕೊಳ್ಳಲಾಗತ್ತೆ, ಮುಗ್ಧರಂತೂ ಹೇಗೆ ನಾಶವಾಗಿ ಹೋಗ್ತಾರೆ ಅನ್ನೋದು… ಬಹುಶಃ ಯಾವತ್ತೂ ಹಲ್ಲುಗಿಂಜಿಕೊಂಡು ಅವಕಾಶ ಕೇಳುತ್ತಲೋ, ಅದಕ್ಕಾಗಿ ಯಾರ ಯಾರದೋ ಚೇಲಾಗಿರಿ ಮಾಡ್ತಲೋ ಹಿಂದಲೆಯದ, ಯಾರಿಗೂ ಯಾವತ್ತೂ ಸೊಪ್ಪು ಹಾಕದ ರಮ್ಯಾ ಗಾಂಧೀನಗರದ ಕಣ್ಣಮುಳ್ಳಾಗಿರಬೇಕು. ಅದಕ್ಕೇ ಅಲ್ಲವೆ ಆಕೆ ನಿಂತರೂ ಕುಂತರೂ ಸುದ್ದಿ? ಹೆಣ್ಣೊಬ್ಬಳ ಆತ್ಮವಿಶ್ವಾಸವನ್ನ, ಅದು ತಂದುಕೊಡುವ ಗರ್ವವನ್ನ ಪುರುಷ ಸಮಾಜ ಸಹಿಸೋದು ಕಷ್ಟ. ಇತ್ತಲಾಗಿ ಹೆಣ್ಣುಗಳೂ ತಮಗಿಲ್ಲದ ಆಕೆಯ ಹೆಚ್ಚುಗಾರಿಕೆಯನ್ನ ಕಂಡು ಮೆಚ್ಚೋದು ಕಷ್ಟ. ಅದಕ್ಕೇ ಯಾವಾಗಲೂ ಹೀಗೆ ದಿಟ್ಟೆಯರಾಗಿ ಬದುಕುವ ಹೆಣ್ಣುಮಕ್ಕಳಿಗೆ ಸೋಲು. ಆದರೆ ಈ ಸೋಲು ಮೇಲ್ತೋರಿಕೆಯದಷ್ಟೆ. ವಾಸ್ತವದಲ್ಲದು ಆವರ ಅಸ್ತಿತ್ವದ ಗೆಲುವೇ ಆಗಿರುತ್ತದೆ.

ಆದರೂ ಒಂದು ಖುಷಿಯ ವಿಚಾರ. ಡಿ ಎನ್ ಎ ಯಲ್ಲಿ ಓದಿದ್ದು. ಅಂದ್ರಿತಾ ರೇ, ಪೂಜಾ ಗಾಂಧಿ, ಪ್ರಿಯಾಂಕಾ ಉಪೇಂದ್ರ ಮತ್ತು ಶರ್ಮಿಳಾ ಮಾಂಡ್ರೆ ಚಿತ್ರರಂಗದಲ್ಲಿ ಹೆಣ್ಣುಮಕ್ಕಳ ಮೇಲೆ ದೌರ್ಜನ್ಯವಾಗ್ತಿರೋದು ಹೌದು ಎಂದು ಹೇಳಲು ಹಿಂಜರಿದಿಲ್ಲ. ಖಂಡಿಸುವ ಮಾತಿರಲಿ, ಹೀಗೆ ತಮಗನಿಸಿದ್ದನ್ನ ಮುಕ್ತವಾಗಿ ಹೇಳಿಕೊಳ್ಳುವ ಮನಸಾದರೂ ಮಾಡಿದರಲ್ಲ ಅನ್ನೋದೇ ಸಮಾಧಾನ. ಎಲ್ಲ ರಂಗದಲ್ಲೂ ಹೆಣ್ಣುಮಕ್ಕಳು ಸಂಘಟಿತರಾಗಿ ತಮ್ಮ ವಿರುದ್ಧ ಯಾರೂ ಪಿಟ್ಟೆನ್ನದಂತೆ ನಿಭಾಯಿಸಿಕೊಳ್ಳುವ ಎದೆಗಾರಿಕೆ ತೋರಿದರಷ್ಟೆ ಇವೆಲ್ಲ ಒಂದು ಹದಕ್ಕೆ ಬಂದೀತು. ಆದರೇನು ಮಾಡೋದು? ‘ಹೆಂಗಸರು ಒಟ್ಟಾಗೋದಿಲ್ಲ’ ಅಂತ ಹೇಳಿಹೇಳಿಯೇ ನಮ್ಮನ್ನು ದ್ವೀಪಗಳಾಗಿಸುವ ಕಾಯಕ ವ್ಯವಸ್ಥಿತವಾಗಿ ನಡೆದೇ ಇದೆ. ಮೌಢ್ಯತೆಯ ತುದಿಯಲ್ಲಿ ನಿಂತಿರುವ ನಾವಂತೂ ಅದನ್ನು ನಂಬಿಯೇ ಕುಳಿತಿದೇವೆ ಅಲ್ಲವೆ?

ಅದ್ಯಾಕೋ ಗೊತ್ತಿಲ್ಲ. ರಮ್ಯಾಳ ಜಂಭದ ಮುಖ ನೋಡುವಾಗ ಖುಷಿಯಾಗತ್ತೆ. ಚೆಲ್ಲುಬಡಿಯುತ್ತಾ ಯಾರನ್ನೋ ಇಂಪ್ರೆಸ್ ಮಾಡಲು ಹೆಣಗಾಡುತ್ತ, ಒಳ್ಳೆತನದ ಪೋಸು ಕೊಡುವ ಹುಡುಗಿಯರಿಗಿಂತ ಈಕೆ ಜಾಸ್ತಿ ಇಷ್ಟವಾಗ್ತಾಳೆ. ಚಿತ್ರರಂಗದ ಪರಿಭಾಷೆಯಲ್ಲಿ ಹೆಣ್ಣುಗಳು ದುರುಪಯೋಗಗೊಳ್ತಾರಲ್ಲ, ಹಾಗೆ ಈಕೆ ಆಗಿಲ್ಲ ಅಂತೇನೋ ಅನಿಸತೊಡಗುತ್ತೆ. ಅವಕಾಶಗಳಿಗಾಗಿ ಯಾವುದಕ್ಕೂ ರಾಜಿಯಾಗದ, ತನ್ನನ್ನು ತಾನು ಇರುವಹಾಗೇ ನಿರೂಪಿಸಿಕೊಳ್ಳಲು ಹಿಂಜರಿಯದ ಆಕೆಯ ಬಗ್ಗೆ ಹೆಮ್ಮೆ ಮೂಡತ್ತೆ. ದಶಕದ ಹಿಂದೆ ಮಾಲಾಶ್ರೀ ತನ್ನ ಹೆಚ್ಚುಗಾರಿಕೆ ಮೆರೆದು ಕಮೆಂಟ್ ಮಾಡಿದಾಗ ಇವತ್ತಿಗೂ ಇಪ್ಪತ್ತರ ಹುಡುಗಿಯರ ಸೊಂಟಬಳಸಿ ಸಿಂಹಾವಲೋಕನ ಮಾಡ್ತಿರುವ ನಟರೊಬ್ಬರು ಆಕೆಯೊಟ್ಟಿಗೆ ಯಾವತ್ತೂ ನಟಿಸೋದೇ ಇಲ್ಲ ಅಂತ ಪ್ರತಿಜ್ಞೆ ಮಾಡಿದ್ದರು. ಆದರೆ ತನ್ನ ಇರುವಿಕೆಯಿಂದಲೇ ಸಿನೆಮಾ ಓಡಿಸುತ್ತಿದ್ದ ಮಾಲಾಶ್ರೀ ನನಗೆ ಕಾಲೇಜು ದಿನಗಳ ಆ ವಯಸ್ಸಿನಲ್ಲಿ ಬಹಳ ಪ್ರಿಯವಾಗಿಬಿಟ್ಟಿದ್ದಳು. ಈಗ ಯಾಕೋ ಅದರ ನೆನಪು… ಹಾಗೇನೇ ನಾಯಕ ನಟನೊಬ್ಬನಿಗೆ ಚಪ್ಪಲಿತೋರಿಸಿ ವಿವಾದ ಎಳೆದುಕೊಂಡ ವಿಜಯಲಕ್ಷ್ಮಿ (ಅದೇ ಹೆಸರು ಅಂದುಕೊಳ್ತೇನೆ, ನಾಗಮಂಡಲ ಹುಡುಗಿಯದು…) ಕೂಡ ಕಣ್ಮುಂದೆ ಬರ್ತಾಳೆ. ಅವಳು ಹಾಗೆ ಮಾಡುವುದಕ್ಕೆ ಹಿನ್ನೆಲೆಯಾಗಿ ಯಾವ ಕಿತಾಪತಿ ನಡೆದಿತ್ತು? ನನಗಂತೂ ಅದು, ಈವರೆಗೆ ಹೆಣ್ಣನ್ನು ಹಲವು ಮಗ್ಗುಲಲ್ಲಿ ಹುರಿದು ಮುಕ್ಕಿ ಚಪ್ಪರಿಸುತ್ತಿರುವ ಚಿತ್ರರಂಗದ ಗಂಡಸುತನಕ್ಕೇ ಆಕೆ ಚಪ್ಪಲಿ ತೋರಿಸಿದಂತೆನಿಸಿತ್ತು. ಹೀಗೆ ತೋರಿಸಿಕೊಳ್ಳುವ ಎಲ್ಲ ಯೋಗ್ಯತೆಯೂ ಅದಕ್ಕಿದೆ ಅಲ್ಲವ?

ಇಂಥಾ ‘ಜಂಭಗಾತಿ’ ಹುಡುಗಿಯರನ್ನ ಎದುರಿಟ್ಟುಕೊಂಡು ಎಲ್ಲ ಹುಡುಗಿಯರಿಗೊಂದು ಕಿವಿಮಾತು. ಅದು ಯಾವುದೇ ಫೀಲ್ಡ್ ಇರಲಿ. ನಮ್ಮನ್ನು ಕೊಟ್ಟುಕೊಂಡು ಪಡೆಯುವ- ರಾಜನ ಕಾಲ್ಕೆಳಗಿನ ಹೂವಿನಂಥ ಬಾಳಿಗಿಂತ, ಯಾರಿಗೂ ಗುರುತಾಗದೆಯೇ ಸುಮ್ಮನೆ ಅರಳಿಕೊಂಡು ಬಿದ್ದುಹೋಗುವ ಕಾಡು ಹೂವಿನಂಥ ಬದುಕು ನಿಜಕ್ಕೂ ಸಾರ್ಥಕ. ಮನದಣಿಯೆ ಬಿರಿದು, ಬಾಳಿ, ಕಳಚಿಕೊಂಡ ತೃಪ್ತಿಯಾದರೂ ಆಗ ನಮ್ಮ ಪಾಲಿಗೆ ಉಳಿದುಕೊಳ್ಳುವುದು.

ಗಂಡು ಪ್ರಾಬಲ್ಯದ ಈ ಜಗತ್ತನ್ನ ಮೆಚ್ಚಿಸೋದಂತೂ ಕಷ್ಟವೇ. ಒಂದೇ ತಪ್ಪಿಗೆ ಇಲ್ಲಿ ‘ಗಂಡು ಮಾಡಿದರೆ’, ‘ಹೆಣ್ಣು ಮಾಡಿದರೆ’ ಎನ್ನುವ ಪಕ್ಷಪಾತಗಳಿವೆ. ಇದು ಬಡವ- ಶ್ರೀಮಂತ, ಮೇಲ್ಜಾತಿ- ಕೆಳ ಜಾತಿಗಳೆಂಬ ಪಕ್ಷಪಾತಗಳಿಗಿಂತಲೂ ಹೆಚ್ಚು ಪ್ರಬಲವಾಗಿ ಚಾಲ್ತಿಯಲ್ಲಿದೆ (ಈ ಹಳೆಯ ಮಾತು ಇವತ್ತಿಗೂ ಎಷ್ಟೊಂದು ಪ್ರಸ್ತುತ!) ಅದಕ್ಕೆಲ್ಲ ತಲೆಕೆಡಿಸಿಕೊಳ್ಳದೆ ಸಾಧ್ಯವಾದಷ್ಟೂ ಜೊತೆಯವರಿಗೆ ತೊಂದರೆಯಾಗದ ಹಾಗೆ ಎಚ್ಚರವಹಿಸುತ್ತ, ನಮ್ಮ ಆತ್ಮವಿಶ್ವಾಸವನ್ನೂ, ಹೆಮ್ಮೆಯನ್ನೂ ಕಾಯ್ದುಕೊಂಡು ದಾಪುಗಾಲಿಡುವುದಷ್ಟೆ ನಾವು ಮಾಡಬೇಕಿರುವ ಕೆಲಸ.

ರಮ್ಯಾಳ ಪ್ರಕರಣದಂಥ ಘಟನೆಗಳು ನಡೆದಾಗಲಾದರೂ ನಾವು ಇಂಥದನೆಲ್ಲ ಯೋಚಿಸಬೇಕು ಅಲ್ಲವ?

11 thoughts on “‘ಜಂಭಗಾತಿ’ ಹುಡುಗಿಯನ್ನ ಎದುರಿಟ್ಟುಕೊಂಡು…

Add yours

  1. ಚೇತನಾ,
    ನೀವು ಹೇಳಿರುವುದು ನೂರು ಪ್ರತಿಶತ ಒಪ್ಪತಕ್ಕಂತಹ ಮಾತು. ರಮ್ಯಳ ಘಟನೆ ಓದಿದ ನಂತರ ನಾನೂ ಸಹ ಇದೇ ರೀತಿ ಯೋಚಿಸುತ್ತಲಿದ್ದೆ..ನಿಜವಾಗಿಯೂ, ಮಾಲಾಶ್ರಿ, ರಮ್ಯ ರಂತವರು ಇಷ್ಟವಾಗುವುದು ಇದೇ ಕಾರಣಕ್ಕೆ.

  2. ನಿಮಗೆ ನೆನಪಿದೆಯಾ? ಹಿಂದೊಮ್ಮೆ ಶಕ್ತಿಕಪೂರ್ ಎಂಬ ನಟ, ನಟಿಯರನ್ನು ದುರುಪಯೋಗಪಡಿಸಿಕೊಂಡದ್ದನ್ನು ಒಪ್ಪಿಕೊಂಡುಬಿಟ್ಟಿದ್ದ. ಆಗ ಹೆಚ್ಚು ಬೊಬ್ಬೆ ಹೊಡೆದದ್ದು ಈ ನಮ್ಮ ಘನವಂತ ಪುರುಷಲೋಕವೇ! ರಮ್ಯಾಳ ಘಟನೆ ಅತಿರೇಕಗೊಳ್ಳಲು ನಮ್ಮಕನ್ನಡದ ನ್ಯೂಸ್ ಚಾನೆಲ್ಲುಗಳ ಕೊಡುಗೆ ಅಪಾರ. ಹೆಸರಿಗೆ ಮಾತ್ರ ನ್ಯೂಸ್ ಚಾನೆಲ್. ಆದರೆ ದಿನಕ್ಕೆ ಕನಿಷ್ಠ ಮೂರುಗಂಟೆಯಾದರೂ ಸಿನಿಮಾ ಸುದ್ದಿ, ಗಾಸಿಫ್ ಗಳನ್ನೇ ಪ್ರಸಾರ ಮಾಡುವ ೀ ಚಾನೆಲ್ಲುಗಳ ವರ್ತನೆ ಖಂಡನಾರ್ಹ.

  3. ಚೇತನಕ್ಕ ,
    “ರಾಜನ ಕಾಲ್ಕೆಳಗಿನ ಹೂವಿನಂಥ ಬಾಳಿಗಿಂತ, ಯಾರಿಗೂ ಗುರುತಾಗದೆಯೇ ಸುಮ್ಮನೆ ಅರಳಿಕೊಂಡು ಬಿದ್ದುಹೋಗುವ ಕಾಡು ಹೂವಿನಂಥ ಬದುಕು ನಿಜಕ್ಕೂ ಸಾರ್ಥಕ. ಮನದಣಿಯೆ ಬಿರಿದು, ಬಾಳಿ, ಕಳಚಿಕೊಂಡ ತೃಪ್ತಿಯಾದರೂ ಆಗ ನಮ್ಮ ಪಾಲಿಗೆ ಉಳಿದುಕೊಳ್ಳುವುದು” . ತು೦ಬಾ ಅರ್ಥ ಗರ್ಬಿತ ಮಾತನ್ನು ಹೇಳಿದ್ದಿರಿ . ಮೇಲಿನ ಸಾಲು ನನಗೆ ತು೦ಬಾ ಇಷ್ಟ ವಾಯಿತು .

  4. ಚೇತನಾ,

    ಒಂದರ್ಥದಲ್ಲಿ ನೀವು ಹೇಳುವುದನ್ನು ಒಪ್ಪಿದರೂ, ಇನ್ನೊಂದು ಸ್ಥರದಲ್ಲಿ ನೋಡಿದಾಗ ರಮ್ಯಂದು ತಪ್ಪಿರಬಹುದು ಎನ್ನುವುದು ಸುಳ್ಳಲ್ಲ. ಯಾಕೆಂದರೆ ಸ್ವಾಬಿಮಾನಕ್ಕೂ ಮತ್ತು ದುರಭಿಮಾನಕ್ಕೂ ಕೇವಲ ಒಂದು ಎಳೆಯ ಅಂತರ.

    -ಶೆಟ್ಟರು

  5. ಎಷ್ಟು ಸತ್ಯದ ಮಾತು! ಹುಟ್ಟಿದಾಗಿನಿಂದ ಕೇಳುತ್ತ ಬಂದ ‘ಹೆಣ್ಣಿಗೆ ಇಷ್ಟು ಹಠ ಒಳ್ಳೆಯದಲ್ಲ’, ‘ಹುಡುಗಿ ನೀನು! ಹುಡುಗರಂತೆ ಮೆರೀಬೇಡ – ಗಂಡುಬೀರಿ ಅಂದಾರು’, ‘ಹೆಣ್ಣಾಗಿ ಹುಟ್ಟಿದ್ದಕ್ಕಾದರೂ ತುಸು ಸಹನೆ ಕಲಿ’, ‘ಹೆಣ್ಮಗಳು ಬೆಳಿಗ್ಗೆ ಎಂಟರವರೆಗೆ ಮಲಗುವುದು ಏನು ಚಂದ’ … ಈ ಮಾತುಗಳು ಮತ್ತೊಮ್ಮೆ ಕಿವಿಯಲ್ಲಿ ರಿಂಗಣಿಸಿ – ಕೆಚ್ಚು ಹೆಚ್ಚಿಸಿದವು ಚೇತನಾ. ಕಾಲ ಬದಲಾಗಿದೆ ನಿಜ, ಆದರೆ ಪೂರ್ತಿ ಬದಲಾಗಿಲ್ಲ ಅನ್ನುವುದೂ ಅಷ್ಟೇ ನಿಜ.

  6. ನಿಜ ಎಲ್ಲ ರಂಗದಲ್ಲು ಹೆಣ್ಣುಗಳ ಮೇಲೆ ನಡೆಯುವ ದೌರ್ಜನ್ಯ,ತಾರತಮ್ಯ ಅಪಾರ. ಅನೇಕ ವೇಳೆ ಇದಕ್ಕೆ ಹೆಣ್ಣುಗಳೂ ಅಷ್ಟೇ ಕಾರಣರಾಗಿರುತ್ತಾರೆಂಬುದೂ ಕೂಡ ಸತ್ಯ. ಹುಟ್ಟಿದಾಗಿನಿಂದಲೆ ಅವಳ ಆತ್ಮವಿಶ್ವಾಸವನ್ನು ಕೊಲ್ಲುವ ಎಲ್ಲ ಪ್ರಯತ್ನಗಳನ್ನು ಸಮಾಜ ಅದರಲ್ಲೂ ಹೆಚ್ಚಾಗಿ ಹಿರಿಯ ಹೆಂಗಸರೇ ಮಾಡುತ್ತಾರೆ. ಇಂತಹ ವ್ಯವಸ್ಥೆಯ ವಿರುದ್ಧ ದನಿಯೆತ್ತುವವರಿಗೆ ಬಜಾರಿಯೆಂಬ ಹಣೆಪಟ್ಟಿ ದೊರಕಿಬಿಡುತ್ತದೆ.

  7. “ಹುಟ್ಟಿದಾಗಿನಿಂದಲೆ ಅವಳ ಆತ್ಮವಿಶ್ವಾಸವನ್ನು ಕೊಲ್ಲುವ ಎಲ್ಲ ಪ್ರಯತ್ನಗಳನ್ನು ಸಮಾಜ ಅದರಲ್ಲೂ ಹೆಚ್ಚಾಗಿ ಹಿರಿಯ ಹೆಂಗಸರೇ ಮಾಡುತ್ತಾರೆ”.

    ಇದಕ್ಕೆ ಕಾರಣಗಳೇನಿರಬಹುದು?

ನಿಮ್ಮ ಟಿಪ್ಪಣಿ ಬರೆಯಿರಿ

Create a free website or blog at WordPress.com.

Up ↑