ನಿಜಘಮದ ಕೇದಗೆ


ಶಿವನ ಮೂಲ ಹುಡುಕುತ್ತ
ಕೆಳಗೆ ವಿಷ್ಣು,
ಮೇಲೆ ಬ್ರಹ್ಮ
ನಡುವೆ ಗುಟ್ಟು ಬಿಚ್ಚಿಟ್ಟ
ಕೇದಗೆಗೆ
ಶಿವನ ತಲೆ ಸೋಕಬಾರದ ಶಾಪ-
ಕ್ಕೆ ಹುಟ್ಟಿದ ಹೆಣ್ಣು ನಾನು
ಹೊಟ್ಟೆಯಲ್ಲಿ
ಗುಟ್ಟು ಬಚ್ಚಿಡಲು ಬರುವುದಿಲ್ಲ

ಹಿತ್ತಿಲ ಬಾಗಿಲಾಚೆ
ಮಲ್ಲಿಗೆ, ಕನಕಾಂಬರ, ತುಂಬೆ
ಪೂಜೆಗೆ ಹತ್ತು ಹೂವು
ಹೆಣೆಯುತ್ತ ಕುಂತವರು
ಕೇದಗೆ ಸೋಂಕಿಗೆ
ಉರಿಯಾಗಿದ್ದಾರೆ
ಮೈ ಮುತ್ತಿದ ಘಮ
ಶಿವನ ಪೂಜೆಗೆ ಅಡ್ಡಿ
‘ಇದು ಬಿಳಿ ಮಲ್ಲಿಗೆಯದೆ’
ಅನ್ನುತ್ತ ಸುಳ್ಳಾಗುತ್ತಿದ್ದಾರೆ…

ಕೇದಗೆ ಇರುವಿನರಿವಿಗೆ
ಜಾಹೀರಾತು ಬೇಕಿಲ್ಲ,

ಎಲೆಹೂವ ಸೆಳೆತಕ್ಕೆ
ಭುಸುಗುಟ್ಟಿವೆ ಹಾವುಗಳೂ,
‘ಶಿವನ ಕೊರಳೊಳಗೆ
ಇಂಥ ಸುಖವಿಲ್ಲ!’

ನಾನು
ನಿಜಘಮದ ಕೇದಗೆ
ಯಾರ ತಲೆ ಕಲುಗಳ
ಚಾಕರಿಯ ಹಂಗೇಕೆ?

‘ಬಿಚ್ಚಿಟ್ಟಷ್ಟೂ ಹಗುರಾಗುತಾರೆ’
ಗರತಿಯರ ನುಡಿಮುತ್ತು.
ನಾನು ಬಿಚ್ಚಿಕೊಳ್ಳುತ್ತೇನೆ,
ಅರಳಿಕೊಂಡು
ಎದೆಭಾರ ಕಳೆಯುತ್ತೇನೆ.
ಗೊತ್ತು,
ಹಗುರಾಗುತ್ತೇನೆ
ನನ್ನೊಳಗೂ
ಮಾನವಂತರ ನೋಟಕ್ಕೂ…

ಚಿಂತೆಯಿಲ್ಲ.

3 thoughts on “ನಿಜಘಮದ ಕೇದಗೆ

Add yours

  1. Ms. C..
    if there is one poetess in Kannada I rate higher than you it is pratibha nandakumar..

    you both make me feel ‘hey I could have written this if I knew wizardry like they do..’

    I would love to read more poems from you here..until I make that trip to India and buy your books..

ನಿಮ್ಮ ಟಿಪ್ಪಣಿ ಬರೆಯಿರಿ

Create a free website or blog at WordPress.com.

Up ↑