ಮಗುವಿಗೊಂದು ಪತ್ರ


ನಾನು, ಪ್ರಾಣ್

ಹೆಜ್ಜೆ ಕಿತ್ತು ಬಂದ ದಿನದ ನೆನಪು ಹಾಗೇ ಇದೆ.
ಮುಳ್ಳು ಕಿತ್ತ ನೋವು,
ಮುಳ್ಳು ಕಿತ್ತ ನಿರುಮ್ಮಳ,
ಹಾಗೇ ಇದೆ.

ಕಿವುಡಾಗಲೇಬೇಕಿತ್ತು ನಾನು,
ಕುರುಡಾಗಲೇಬೇಕಿತ್ತು.
ಮೂಕತನವನೆಲ್ಲ ಹುಗಿದು
ಮಾತಾಡಲೇಬೇಕಿತ್ತು.
ಅಬ್ಬರದ ಸಂತೆಯಲಿ ನೀನು
ಅಮ್ಮಾ ಅಂದಿದ್ದು-
ಎದೆಯ ಆಚೆಗೇ ನಿಂತು ಹೋಗಿತ್ತು…

ನಿನ್ನ ಪುಟ್ಟ ಕೈಗಳು ನನ್ನ
ತಡೆಯಲಾಗಲಿಲ್ಲ.
ಪ್ರಶ್ನೆಗಳ ಕಂಬನಿ ಕರೆಗಟ್ಟಿದ್ದ
ಕಣ್ಣುಗಳನ್ನ
ತಪ್ಪಿಸಿಬರಬೇಕಿತ್ತು…

ನಾ ಕಳೆದ ನಿನ್ನ ಬದುಕಿನ ಮೊತ್ತ
ಲೆಕ್ಕವಿಟ್ಟಿದೇನೆ ಮಗೂ,
ನಿನ್ನ ನೋವಿನ ಋಣ
ನನ್ನ ಹೆಗಲ ಮೇಲಿದೆ.

ನೆನಪಿಗೊಂದು ಕಂಬನಿ ಸುರಿದು
ಸಾಗರವಾಯ್ತೆಂದು ಸುಳ್ಳಾಡಲಾರೆ,
ನಿನ್ನ ನೆನೆಯುವ ಧೈರ್ಯ ನನಗಿಲ್ಲವಾಗಿದೆ.

ಮಗೂ,
ಸೋಗು ನಗುವಿನ ನನ್ನ
ಕಣ್ಣುಗಳನೊರೆಸಿ,
ಉತ್ತರ ಗೊತ್ತೆಂದು ಹೇಳುವ ದಿನಕಾಗಿ
ಕಾದಿದ್ದೇನೆ.

ಅದಕೆಂದೇ ಅಕ್ಷರಗಳ ಸಾಲು ಹಾಸಿ,
ಸೇತುವೆ ಕಟ್ಟಿದೇನೆ.
ನಿನ್ನ ಹೆಮ್ಮೆಗೆ ಉಬ್ಬಿ,
ಹಗುರಾಗುವ ದಿನಕಾಗಿ
ಕಾದಿದ್ದೇನೆ ಮಗೂ,
ಮುಳ್ಳು ಕಿತ್ತ ಗಾಯ
ಮಾಯುವುದನ್ನೆ ಕಾಯುತ್ತಿದ್ದೇನೆ…

(ನಾಳೆ, ಅಂದರೆ ೧೯ಕ್ಕೆ ಮಗು ಪ್ರಣವನಿಗೆ ೧೦ ವರ್ಷ ತುಂಬಿಹೋಗತ್ತೆ! ಅದಕ್ಕೇ, ಈ ಹೊತ್ತಲ್ಲಿ, ಪ್ರೀತಿ ಮತ್ತು ನೋವಿನಿಂದ ಈ ಕವಿತೆ, ನನ್ನ ಮಗನಿಗಾಗಿ….)

15 thoughts on “ಮಗುವಿಗೊಂದು ಪತ್ರ

Add yours

  1. ಅಕ್ಕಾ,
    ಎದೆಯ ನರ ತಂತುವೊಂದನ್ನು ಹಿಡಿದು ಮೀಟಿದ ನೋವಿನ ಭಾವ. ಎಲ್ಲಾ ಭಾವನೆಗಳು ಅಮೂರ್ತವೇನೋ ಅನ್ನುವ ಕಲ್ಪನೆ. ಕವನ ನೋವಿನಾಳದಲ್ಲಿ ಅರಳಿದೆ. ಮುಳ್ಳು ಕಿತ್ತ ಗಾಯ ಮಾಯುವುದಷ್ಟೇ ಅಲ್ಲ, ಅದರ ಕಲೆಯು ಸಾಧ್ಯವಾದಷ್ಟು ಅಳಿಸಿ ಹೋಗಲಿ.

    ಪ್ರೀತಿಯ ಪುಟ್ಟ ಪ್ರಣವನಿಗೆ ಹುಟ್ಟು ಹಬ್ಬ ಹಾರ್ಧಿಕ ಶುಭಾಷಯಗಳು, ಬದುಕು ಬಂಗಾರವಾಗಲಿ.

    ಪ್ರೀತಿಯಿಂದ
    ರಾಜೇಶ್

  2. ಮನಮುಟ್ಟುವ ಕವನ. ನವಿರಾದ ಭಾವಗಳನ್ನು ಅಷ್ಟೇ ನವಿರಾಗಿ ಮೂಡಿಸಿದೆ ಎಂದರೆ ಅತಿ ಮಾತಾಡಿದಂತಾಯಿದೇನೋ. ಸುಂದರ ಕವನಕ್ಕೊಂದು ಮೌನ ಮೆಚ್ಚುಗೆ, ನಿಮ್ಮ ಮಗನಿಗೆ ಹುಟ್ಟುಹಬ್ಬದ ಶುಭಾಶಯಗಳು.

  3. ಪ್ರೀತಿಯ ಚೇತನಾ,

    ಓದಿ ಮನಸ್ಸು ಭಾರವಾಗಿದೆ. ಶಿಲುಬೆಯ ನೊಗ ಹೊತ್ತವರಿಗೆ ಮಾತ್ರ ಅದರ ನೋವು-ನಿರಾಳ ಸಂಕಟ-ಸಾಮರ್ಥ್ಯ ಗೊತ್ತಾಗುತ್ತದೆ.
    ಸಂತಯಿಸುವ ಮಾತುಗಳು ಮಾತುಗಳಷ್ಟೇ. ನಿಮ್ಮ ಅಕ್ಷರಗಳ ಅಕ್ಕರೆಯ ಸಾಲಿನಲ್ಲಿ ನನ್ನದೊಂದು ಸಾಲು ಪ್ರೀತಿ,ಅಪ್ಪುಗೆ ಮತ್ತು ಮೆಚ್ಚುಗೆ – ನಿಮಗೆ ಮತ್ತು ಪ್ರಣವನಿಗೆ.

    ಪ್ರೀತಿಯಿಂದ,
    ಸಿಂಧು

  4. ಬಡಿ ಬೇ -ದರ್ದ್ ದುನಿಯಾ ಹೈ ಕಿಸೀ ಕೆ ಘಂ ಕೋ ಕ್ಯಾ ಜಾನೆ
    ಮಝೇ ಲೇ -ಲೇ ಕೆ ಹಂಸ್ತೀ ಹೈ ಖುಷ್ ಹೋತೀ ಹೈ ರುಲಾನೇ ಸೆ

    ಝರಾ ಸೆ ದಿಲ್ ಕೆ ಗೊಶೇ ಮೇ ಹಝಾರೊನ್ ಘಂ ತಡಪ್ತೆ ಹೈನ್
    ಝರಾ ಸೆ ಖೂನ್ ಕೆ ಕತ್ರೆ ಕೋ ಶಿಕಾಯತ್ ಹೈ ಝಮಾನೇ ಸೆ

ನಿಮ್ಮ ಟಿಪ್ಪಣಿ ಬರೆಯಿರಿ

Create a free website or blog at WordPress.com.

Up ↑