ಮೇಲೇಳುತ್ತೇನೆ ನಾನು


ಚರಿತ್ರೆಯ ಪುಟಗಳಲ್ಲಿ ತುಂಬಿರಬಹುದು ನನ್ನ
ಕಹಿ ಮಾತುಗಳಿಂದ, ತಿರುಚಿದ ಸುಳ್ಳುಗಳಿಂದ
ಮಣ್ಣಂತೆ ಹೊಸಕಿ ತುಳಿಯಬಹುದು ನೀ ನನ್ನ,
ದೂಳ ಕಣವಾಗಿಯಾದರೂನು
ಮೇಲೇಳುತ್ತೇನೆ ನಾನು

ನನ್ನ ಭಾವಭಂಗಿ ಬೇಸರವೇನು?
ಮುಖ ಸೋತು ಕುಳಿತಿರುವೆ ಯಾಕೆ?
ಕೋಣೆ ಮೂಲೆಯಲ್ಲಿ ನೂರು
ತೈಲಬಾವಿಗಳನಿರಿಸಿಕೊಂಡಂಥ
ಠೀವಿ ನನ್ನ ನಡೆಯಲಿದೆಯೆಂದೆ?

ಸೂರ್ಯರಂತೆ, ಚಂದ್ರರಂತೆ
ಕಡಲ ಮಹಾಪೂರದಂತೆ
ಚಿಮ್ಮುಕ್ಕುವ ಭರವಸೆಯಂತೆ
ಮೇಲೇಳುತ್ತೇನೆ ನಾನು

ನಾನು ಮುರಿದು ಬೀಳುವುದ ನೋಡಬೇಕೆ?
ತಲೆತಗ್ಗಿಸುವುದನ್ನು, ಕಣ್ ಕುಗ್ಗುವುದನ್ನು?
ಎದೆಯ ಚೀರಾಟಕ್ಕೆ ಸೋತು
ಕುಸಿದು ಬೀಳುವುದನ್ನು?

ನನ್ನ ಗತ್ತು ನೋಯಿಸಿತೆ ನಿನ್ನ?
ಹಿತ್ತಲಲ್ಲಿ ಚಿನ್ನದ ಗಣಿ
ಹೂತಿಟ್ಟುಕೊಂಡಂಥ ನನ್ನ ನಗುವನ್ನ
ಅರಗಿಸಿಕೊಳ್ಳಲು ಕಷ್ಟವಾದೀತು ನಿನಗೆ

ಬರಿ ಮಾತಲ್ಲೆ ಹೊಡೆಯಬಹುದು,
ಕಣ್ಣಲ್ಲೆ ಸೀಳಬಹುದು
ದ್ವೇಷದಲೆ ನೀ ನನ್ನ ಕೊಲ್ಲಬಹುದು
ಆದರೂನು ಗಾಳಿಯಂತೆ
ಮೇಲೇಳುತ್ತೇನೆ ನಾನು

ನನ್ನ ಹಾವ್ಭಾವ ಮಂಕಾಗಿಸುವುದೆ ನಿನ್ನ?
ತೊಡೆಗಳ ನಡುವೆ ವಜ್ರವಿರುವ ಹಾಗೆ
ನರ್ತಿಸುವ ನನ್ನ ಬಗೆ
ನಿನಗೆ ಅಚ್ಚರಿ ತರಬಹುದು

ನಾಚಿಗ್ಗೆಟ್ಟ ಚರಿತ್ರೆಯ ಗುಡಿಸಲಿಂದ
ಮೇಲೇಳುತ್ತೇನೆ ನಾನು
ನೋವಲ್ಲೆ ಬೇರುಬಿಟ್ಟ ಭೂತದಿಂದ
ಮೇಲೇಳುತ್ತೇನೆ ನಾನು
ನಾನೊಂದು ವಿಶಾಲ ಕಪ್ಪು ಸಾಗರ
ಉಬ್ಬುತ್ತ, ಮಾಯುತ್ತ ಪೂರಗಳ ಸಹಿಸುತ್ತೇನೆ
ಭಯದ ಕರಾಳ ರಾತ್ರಿಗಳ ಹಿಂದಿಕ್ಕಿ
ಮೇಲೇಳುತ್ತೇನೆ ನಾನು
ನಿಚ್ಚಳ ಕಾಣುವ ಅರುಣೋದಯದ ಬೆಳಕಲ್ಲಿ
ಮೇಲೇಳುತ್ತೇನೆ ನಾನು
ಪೂರ್ವಜರು ನನಗಿತ್ತ ಕೊಡುಗೆಗಳ ಹೊತ್ತು
ಗುಲಾಮರೆಲ್ಲರ ಕನಸು, ಭರವಸೆಯಂತೆ
ಮೇಲೇಳುತ್ತೇನೆ
ಮೇಲೇಳುತ್ತೇನೆ
ಮೇಲೇಳುತ್ತೇನೆ

– ಮಾಯಾ ಏಂಜೆಲೋ

11 thoughts on “ಮೇಲೇಳುತ್ತೇನೆ ನಾನು

Add yours

  1. 🙂
    ಅಂದ ಹಾಗೆ ನನ್ನ ಬ್ಲಾಗ್ ನಲ್ಲಿ ಯುಗಾದಿಯ ಕಲ್ಪನೆಗೆ ಚಿತ್ರವನ್ನು ಹಾಕಿದ್ದೇನೆ…ನಿಮ್ಮೆಲ್ಲಾ ಬ್ಲಾಗ್ ಗೆಳೆಯರು ಇಲ್ಲಿಗೊಮ್ಮೆ ಭೇಟಿನೀಡಿ ಯುಗಾದಿಯ ಚಿಂತನೆಯನ್ನು,ನಿಸರ್ಗದ ವಿಸ್ಮಯವನ್ನು ಕಥೆ,ಕವಿತೆ,ಹಾಡು,ಪದಪುಂಜಗಳೊಂದಿಗೆ ಎಲ್ಲರೊಂದಿಗೂ ಹಂಚಿಕೊಳ್ಳಲು ಭೇಟಿ ನೀಡಲಿ ಎಂಬುದು ನನ್ನ ಆಕಾಂಕ್ಷೆ…ನೀವು ಬನ್ನಿ….ನಿಮ್ಮ ಸ್ನೇಹಿತರನ್ನೂ ಕರೆತನ್ನಿ…
    ಅಶೋಕ ಉಚ್ಚಂಗಿ
    http://mysoremallige01.blogspot.com

  2. ಆತ್ಮೀಯ ಚೇತನಾ,
    ಕವನ ತುಂಬ ಚೆನ್ನಾಗಿದೆ. ತುಳಿದಷ್ಟೂ ಪುಟಿದೇಳುವ Undying spirit ಅನ್ನು ತುಂಬ ಸಮರ್ಥವಾಗಿ ಹಿಡಿದಿಟ್ಟಿದೆ. ಮಹಿಳಾದಿನಕ್ಕೆ ಅತ್ಯುತ್ತಮ ಕೊಡುಗೆ. ಹೀಗೆ ಎಂದಿನಂತೆ ನಿಮ್ಮ ಬ್ಲಾಗ್‌ ಹೊಸತನ್ನು ಹೊತ್ತು ತರಲಿ.
    ಹೇಮಾ

  3. ರಂಜಿತ್, ಮಾಯಾ ಬಗ್ಗೇನೇ ಒಂದು ಪೋಸ್ಟ್ ಬರೀಬೇಕು… ಬ್ಲಾಗು ಬರೆಸ್ಕೊಂಡಾಗ!
    ಸಾಗರಿ, ರಮೇಶ್, ಅಶೋಕ್… ಥ್ಯಾಂಕ್ಸ್.
    ಮಾಲತಿ, 🙂
    ಕೇಶವ ಪ್ರಸಾದ್, ಸುನಿಲ್, ಜಯ (ಯಾ), ಹೇಮಾ… ನಿಮಗೂನು ಧನ್ಯವಾದ.
    ಪ್ರೀತಿಯಿಂದ,
    ಚೇತನಾ

ನಿಮ್ಮ ಟಿಪ್ಪಣಿ ಬರೆಯಿರಿ

Blog at WordPress.com.

Up ↑