ಈ ಹಾಳಾದವ ಸಿಗದೆಹೋಗಿದ್ದರೆ….


ಮೊನ್ನೆ ಸಣ್ಣಗೆ ಮಳೆ ಬಿದ್ದು ಹೋಯ್ತು. ಈ ಹೊತ್ತು ಬೆವರಲ್ಲಿ ಮೈಯೆಲ್ಲ ಒದ್ದೆಒದ್ದೆ. ಫ್ಯಾನಿನ ತಣ್ಣನೆ ಗಾಳಿಗೆ ಬೆವರಿನ ಮೈ ಆರಿ ಒಂಥರಾ ಅಂಟು. ಮಗ್ಗಲು ಬದಲಿಸಿದರೆ, ಹರಡಿಟ್ಟ ಪುಸ್ತಕ ರಾಶಿ. ಅಗೋ ಅಲ್ಲಿ, ಅವುಗಳ ಮಧ್ಯ ಗೆಳೆಯನೊಬ್ಬ ಹಾವು ಹಾವು ಅಂತ ಕನವರಿಸ್ಕೊಂಡು ಬರೆದಿಟ್ಟ ಕವನ ಪುಸ್ತಕ. ಅದನ್ನ ಓದಿಕೊಳ್ತಲೇ ಮಲಗಿದ್ದಕ್ಕೋ ಏನೋ ಕನಸ ತುಂಬ ಹಾವು. ಅದೊಂದಕ್ಕೆ ಅವನ ಕಣ್ಣು. ಕಾಣಬಾರದಂತೆ ಹಾವು ಕನಸಲ್ಲಿ. ಹಾವಂದರೆ ಕಾಮವಂತೆ! ಗೊತ್ತಿರೋದು ಇಷ್ಟೇನೇ… ಹಾವಂದರ‍ೆ ಅಧ್ಯಾತ್ಮ ಕೂಡ! ಮೇಲೇರುವ ಹಾವು ಅಧ್ಯಾತ್ಮ, ಕೆಳಗಿಳಿಯೋದು ಕಾಮ. ಕನಸಿನ ಹಾವು ಎತ್ತ ಹೋಯ್ತು? ಹುಡುಕಬೇಕು. ಸೊಂಟದಲ್ಲಿ ಛಳಕು. ಕುಂಡಲಿನಿ ಮೈಮುರಿದರೆ ಛಳಕಾಗುತ್ತದಂತೆ. ಅಥವಾ…. ಅನುಭವ ಚಿಕ್ಕದು.

ಅಲ್ಲಿ ಮತ್ತೊಂದು ಕವನ ಪುಸ್ತಕ. ಗೋಡೆಗಿಡ. ಬಿರಿಬಿಟ್ಟ ಕಾಂಪೌಂಡ್ ಗೋಡೆ ಸಂದಿನಿಂದ ಹಣಕುತ್ತದಲ್ಲ, ಅರಳೀಗಿಡದ ಪಿಳಿಕೆ, ಅದನ್ನ ಕಂಡಾಗೆಲ್ಲ ಅಚ್ಚರಿ. ದೊಡ್ಡಜ್ಜಿ ಹಳ್ಳಿತೋಟದಲ್ಲಿ ಔದುಂಬರ ನೆಟ್ಟಿದ್ದೇ ನೆಟ್ಟಿದ್ದು, ಕಟ್ಟೆ ಕಟ್ಟಿದ್ದೇ ಕಟ್ಟಿದ್ದು… ಒಂದು ಮೊಳಕೆಯೂ ಹಸಿರು ನಿಲ್ಲಲಿಲ್ಲ. ಈ ಗೋಡೆಮಣ್ಣು ಮುಟ್ಟಿಸ್ಕೊಂಡ ಮಾತ್ರಕ್ಕೆ ಗಿಡ ಹೆರುವುದೆ? ಅಲೆಮಾರಿ ಬೀಜದ ತಾಕತ್ತು ಅದು! ಯಾವ ಯಾವ ಋಷಿಗಳದೆಲ್ಲ ನೆನಪು! ರಾಜರು ಹೆಂಡತಿರಿಯರಿಗೆ ಗರ್ಭ ನಿಲ್ಲಿಸಲು ಅಲೆಮಾರಿ ಜೋಗಿಗಳ ಮೊರೆ ಹೋಗ್ತಿದ್ದರಂತೆ! ನಿಜ… ನಿಂತಿದ್ದು ಕೊಳೆಯುತ್ತದೆ. ದೀರ್ಘತಮಸ ನಿಟ್ಟುಸಿರಿಟ್ಟ. ವ್ಯಾಸರು ನಕ್ಕಿದ್ದು ದಿಟ. ವ್ಯಾಸರು ಮೊಳಕೆಯೊಡೆಸಿದ್ದು ಗೋಡೆ ಬಿರುಕಿನಲ್ಲಲ್ಲ, ಚಿನ್ನದಿಟ್ಟಿಗೆಯ ರಾಜಮಹಲಿನಲ್ಲಿ. ಅದಕ್ಕೇ ಬಹುಶಃ, ಅವರ ಸಂತಾನ, ದೊಡ್ಡಜ್ಜಿಯ ಔದುಂಬರ ಗಿಡ. ದಾಸಿಯ ಮಗ ಚಿಗಿತು ಬೆಳೆದು ತಂಪೂಡಿದನಲ್ಲವೆ?

ಹೊರಳಾಟ ಮುಗಿಯುವ ಹೊತ್ತಿಗೆ ಹೋಗಿದ್ದ ಕರೆಂಟು ಬಂದು ಬಾಯ್ಮುಚ್ಚಿಕೊಂಡಿದ್ದ ಎಫ್ಫೆಮ್ ಕಿರುಚಾಡುತ್ತಿದೆ. ಪಕ್ಕದ ಮನೆ ಆಂಟಿಯ ಕಿರಿಕಿರಿ… ‘ಆ ಫೋನಿನ ಹುಡುಗಿ ಯಾವಾಗ್ಲೂ ಹಿಂದಿ ಹಾಡು ಹಾಕ್ಕೊಂಡಿರ್ತಾಳೆ’! ಸದ್ಯಕ್ಕೆ ಮನೆ ಬದಲಿಸ್ತೇನಲ್ಲ, ಹೊಸತೇನಾದರೂ ರಗಳೆ ಸಿಕ್ಕೀತು ಮಜಾ ತೊಗೊಳ್ಳಲಿಕ್ಕೆ! ಪವಿತ್ರಾ ಅರಳು ಹುರೀತಿದಾಳೆ…. ಕನ್ನಡ, ಹಿಂದಿ, ಇಂಗ್ಲೀಷುಗಳ ಮಿಸಳಭಾಜಿ ಸಖ್ಖತ್ ರುಚಿ. ಆ ಹುಡುಗಿಯೇನು ಕನ್ನಡದ ಕೊಲೆ ಮಾಡ್ತಿದಾಳೆ ಅಂತ ನನಗನಿಸೋದಿಲ್ಲ. ಕೆಲವರು ಮೈಲಿಗೆಯಾದ ಹಾಗೆ ವಟಗುಟ್ತಾರೆ… ಬೇರೆ ಭಾಷೆಯನ್ನ ಮುಟ್ಟಿಸ್ಕೊಳ್ಳದವರೂ ಹಾಗೇನೇ… ಮಡಿ ಹಾರುವಾಯಿಗಳ ಹಾಗೆ… ಈ ಹಾರುವಾಯಿ ಅನ್ನೋ ಪದ ತಮ್ಮ ನಿಕೇತ ಹೇಳಿಕೊಟ್ಟಿದ್ದು. ತುಮಕೂರು ಕಡೆಯ ಹುಡುಗ. ಅಂವ ಹೇಳುವ ಕಥೆಗಳು, ಅವನ ಭಾಷೆ, ಅವನ ಮಿಮಿಕ್ರಿ ಎಲ್ಲವೂ ಸುಟಿ ಸುಟಿ ಸೊಗಡು. ಅಂವ ನಗೋದು ಹೇಗಂದರೆ, ಅಕ್ಷರಶಃ ಬಿದ್ದೂಬಿದ್ದು… ಹೊಟ್ಟೆ ಹುಣ್ಣಾಗೋ ಹಾಗೆ ನಗೋದು ಅಂತಾರಲ್ಲ, ಅದವನ ಪಾಲಿಗೆ ನಿಜ್ಜ ನಿಜ. ಅಪೆಂಡಿಕ್ಸ್ ಅಂತ ಹೊಟ್ಟೆ ಕೊಯ್ಸಿಕೊಂಡವನಿಗೀಗ ಅಲ್ಸರ್- ಹೊಟ್ಟೇಲಿ ಹುಣ್ಣು 😦

ಪವಿತ್ರಾಳ ದನಿ ಕೆಳಿದಾಗೆಲ್ಲ ಪೃಥ್ವಿಯ ನೆನಪು. ಅಂವ ನನ್ನ ಮಾವನ ಮಗ ಏನಲ್ಲ. ಅವನೊಂಥರಾ ನನ್ನ ಸುಪ್ರಭಾತ. ಅಲರಮ್ಮಿನ ಬಾಯ್ಮುಚ್ಚಿಸಿ ಬಟನ್ ಅದುಮಿದರೆ ಅಂವ ಹಾಜರ್. ಯಾರಿಗೋ ಮಾರ್ನಿಂಗ್ ಡೋಸ್ ಕೊಡುತ್ತ, ಕಿಚಾಯಿಸ್ತ, ರಿಕ್ವೆಸ್ಟ್ ಹಾಡುಗಳನ್ನ ಪ್ಲೇ ಮಾಡ್ತಾ… ಅಂವ ಬರ್ತ್ ಡೇ ಬಕರಾ ಮಾಡುವ ಹೊತ್ತು ಅಂದರೆ ನನ್ನ ತಿಂಡಿಯ ಸಮಯ. ಬಸ್ ದೋ ಮಿನಿಟ್, ನೂಡಲ್ಸ್ ರೆಡಿ. ನಂದು ಟಾಪ್ ರಾಮನ್ ಬ್ರ್ಯಾಂಡು. ಬ್ರೆಡ್ ಟೋಸ್ಟಿಗೂ ಅಷ್ಟೇ ಹೊತ್ತು. ಅಮ್ಮ ಉಪ್ಪಿಟ್ಟು ಮಿಕ್ಸ್ ಮಾಡ್ಕೊಟ್ಟು ಹೋಗಿದಾಳೆ. ನೀರು ಕುದಿಸಿ ಮಿಕ್ಸ್ ಹಾಕಿ ಕೈಯಾಡಿದರಾಯ್ತು. ಬಿಸ್ಸಿಬಿಸಿ ಉಪ್ಪಿಟ್ಟು ರೆಡಿ! ಥೇಟು ಅಮ್ಮ ಮಾಡಿದ ಹಾಗೇ… ಅದಕ್ಕೂ ತಗುಲೋದು ಎರಡರಿಂದ ಮೂರು ನಿಮಿಷ. ಅಷ್ಟೊತ್ತಿಗೆ ಯಾರೋ ಬಕ್ರಾ ಆಗಿ ನಗಾಡ್ತಿರ್ತಾರೆ. ಘಂಟಾ ಸಿಂಗ್ ಯಾರದೋ ತಲೆ ತಿಂತಿರ್ತಾನೆ. ಅಂವ ಫೋನ್ ರಿಸೀವ್ ಮಾಡದ ಶೋಕದಲ್ಲಿ ಮುಖ ಉರಿಸ್ಕೊಂಡಿರುವ ನಾನು ಕಿಸಕ್ಕನೆ ನಗುತ್ತೇನೆ. ದಿನ ಆರಾಮವಾಗುತ್ತೆ.

ಈ ಮುಂಜಾನೆ ಗೆಳೆಯನ ಬಾಯ್ಮುಚ್ಚಿಸಿ ಆಫೀಸಿಗೆ ಹೊರಡಬೇಕು. ಸೂರ್ಯಂಗೆ ಬುರುಡೆ ಕಾಯಿಸೋದಂದ್ರೆ ಪೂರಾ ಪ್ರೀತಿ. ಸಾಯುತ್ತಾನೆ ಮಹರಾಯ ಸುಟ್ಟೂಸುಟ್ಟು. ನನ್ನ ಗುಟ್ಟಿನ ಬಯ್ಗುಳವೊಂದಿದೆ. ಅದನ್ನೆ ಶಿವಾಜಿ ನಗರಕ್ಕೆ ಬರಲ್ಲ ಅಂದ ಡ್ರೈವರಿಗೂ, ಸೂರ್ಯಂಗೂ, ಮೈಮೇಲೆ ಹಾದು ಹೋಗುವಂತೆ ಬರುವ ಬೈಕಿನವನಿಗೂ, ಮೈತಾಕಿಸುವ ಅಸಹ್ಯಕ್ಕಿಳಿಯುವ ಹಾದಿಹೋಕನಿಗೂ ಸಾರೋದ್ದಾರ ಬಯ್ತೇನೆ. ಸಿಟ್ಟು ರುಮ್ಮನೆ ಉರಿಯುತ್ತೆ ಅಂತಾರಲ್ಲ, ಅದು ಈ ಹೊತ್ತು ನಂಗೆ ಪುರಾ ಅನುಭವಕ್ಕೆ ಬರುತ್ತೆ. ನಿಮಗ್ಗೊತ್ತಾ, ರುಮ್ಮನೆ ಉರಿಯೋದು ಹೆಂಗೆ ಅಂತಾ? ಬಿಸಿಲಲ್ಲಿ ಅರ್ಧ ಗಂಟೆ ಆಟೋ ಕಾಯಿರಿ ಗೊತ್ತಾಗುತ್ತೆ!

ಈಗೀಗ ನಾನು ಏನು ಯೋಚಿಸ್ತಿದೇನೆ ಅಂತಲೇ ಗೊತ್ತಾಗದ ಹಾಗೆ ಆಗಿಹೋಗಿದೆ. ಹಿಂಗೆಲ್ಲ ಮಳ್ಳು ಹಿಡಿಸಿದ ಅಂವ ತಣ್ಣಗಿದ್ದಾನೆ. ಕೈಲಿ ಪಿಟೀಲು ಕೊಟ್ಟರೆ ಥೇಟು ನೀರೋನೇ. ನನ್ನ ಎದೆ ಹೊತ್ತುರೀತಿದೆ. ಅಂದುಕೊಳ್ತೇನೆ… ಈ ಹಾಳಾದವ ನನಗೆ ಸಿಕ್ಕದೆ ಹೋಗಿದ್ದರೆ ಏನಾಗ್ತಿತ್ತು ಅಂತ! ಅಂವ ಜತೆಯಾದ ಮೇಲೇನೇ ನಂಗೆ ನನ್ನ ಒಂಟಿತನ ಹುಚ್ಚುಹಿಡಿಸತೊಡಗಿದ್ದು. ಎಷ್ಟು ಹಾಯಾಗಿದ್ದೆ ಒಬ್ಬಳೊಬ್ಬಳೇ! ಅಂವ ಮೂರು ಹೊತ್ತೂ ಮಾತಿಗೆ ಬೇಕು ಅಂದ್ಕೊಳ್ಳೋದು ಕಾಲೇಜು ಹುಡುಗರ ಹಸಿಹಸಿ ಪ್ರೀತಿಯಾ? ಬದುಕು ಯಾವಾಗ ಬೇಕಿದ್ದರೂ ಮೊದಲಿಂದ ಶುರುವಾಗಬಹುದು. ಶುರುವಿನ ಬಿಂದು ಕೊನೆಯಲ್ಲೂ ಇರಬಹುದು, ಯಾರಿಗೆ ಗೊತ್ತು?
ಆಫೀಸಲ್ಲಿ ಕೆಲಸದ ಕಾವು ನೆತ್ತಿಗೇರಿದ ಹೊತ್ತಲ್ಲಿ ಕಣ್ಮುಂದೆ ಅಂವನ ತಣ್ಣನೆ ನಗು, ನನ್ನ ವ್ರತಭಂಗ. ಕಿವಿಗೊಂದು ಪುಟ್ಟ ಹರಳಿನ ಓಲೆ ಹಾಕಿಕೊಳ್ಳುವ ಮನಸಾಗ್ತಿದೆ. ಅದಕ್ಕೂ ಇದಕ್ಕೂ ಎಂಥ ಸಂಬಂಧವೋ? ಹೆಣ್ಣು ಅಲಂಕರಿಸ್ಕೊಳ್ಳೋದೇ ಅವನಿಗಾಗಿಯಾ? ಹಾಗಿದ್ದರೆ ಬೇಕಿಲ್ಲ! ನಾನೇ ಕಟ್ಟಿಕೊಂಡ ಗಂಡುದ್ವೇಷದ ಚೌಕಟ್ಟು. ಅಂವ ಮಾತ್ರ ಪ್ರೀತಿ ನನಗೆ. ‘ಯಾಕೆ ಹಾಗೆ?’ ಅಂವ ಕೇಳಿದಾಗ ‘ನೀನು ಗಂಡಸೇ ಅಲ್ಲ!’ ಅಂತೀನಲ್ಲ, ಅವನ ಮುಖ ನೋಡುವ ಹಾಗಿರುತ್ತೆ ಆಗ!!

ಈಗಿಲ್ಲಿ ಮತ್ತೆ ಬೆವರಿನಂಟು. ಫ್ಯಾನಿನ ಗಾಳಿ ಸಾಕಾಗ್ತಿಲ್ಲ. ಬಂದುಹೋದ ಮಳೆಯ ಮೇಲೆ ಸಿಟ್ಟು ಸಿಕ್ಕಾಪಟ್ಟೆ. ತಂಪು ತೋರಿಸಿ ಹೋಗಿದ್ದಕ್ಕೇನೇ ಈ ಧಗೆ ಅಸಹನೀಯ. ಅವನ ಮೇಲೂ, ಅಂಥದೇ ಸಿಟ್ಟು. ಮುಂದೆ ಮಾತು ಬೇಡ…

16 thoughts on “ಈ ಹಾಳಾದವ ಸಿಗದೆಹೋಗಿದ್ದರೆ….

Add yours

  1. ಚೇತನಾ…
    ತುಂಬ ಇಷ್ಟ ಆಯ್ತು ಇಡೀದು.

    ನಿಮ್ಮ ಗುಟ್ಟಿನ ಬೈಗುಳ ನಂಗೊತ್ತು, ಹೇಳ್ಲಾ? ಹೇಳಿಬಿಡ್ಲಾ?
    ” ನಿನ್ನ ಹೆಂಡ್ತಿ ಹೆಣ್ ಹಡಿಯ” ಅಂತಿರಬೇಕು. ತುಂಬ ದಿನ ಆಯ್ತು ನಿಮ್ಮ ಆ ಬೈಗುಳ ಕೇಳಿ, ಸರಿಯಾಗಿ ನೆನಪಾಗ್ತಿಲ್ಲ 🙂

  2. ತು೦ಬಾ ದಿನದ ನ೦ತರ ಬ್ಲಾಗ್ ಅಪ್ಡೇಟ್ ಮಾಡಿದ್ದಿರ…. ಸ೦ತೋಷ
    ಆಪ್ತ ಬರಹಗಳ ಮೂಲಕ ಆಪ್ತರಕ್ಷಕಿಯಾಗಿದ್ದಿರಿ….. ಇನ್ನು ಮು೦ದೆಯು ನಿಮ್ಮಿ೦ದ ಇದನ್ನೆ ನಿರಿಕ್ಷಿಸಬಹುದೆ…?

  3. ಶಾಂತಲಾ, ಊಹೂ… ಅದಲ್ಲ… ಇದಿನ್ನೂ ಅಸಭ್ಯ ಬೈಗುಳ!! ಬಿಸಿಲಲ್ಲಿ ತಲೆ ಉರಿದಾಗಲೇ ಬಾಯಿಗೆ ಬರೋ ಅಂಥದ್ದು!!
    ರಂಜಿತ್, 🙂
    ಅವಿನಾಶ, ದಮ್ಮಯ್ಯ ಆಪ್ತರಕ್ಷಕಿ ಅನ್ಬೇಡ ಮಹರಾಯ!!
    ಸುಶೃತ… ಇಷ್ಟವಾಗಿದ್ದಕ್ಕೆ ತುಂಬಾ ಥ್ಯಾಂಕ್ಸ್ 🙂
    ಮಾಲತಿ, 🙂 🙂 ಮತ್ತು, ಯೆಸ್, ಹೊಸತು 🙂 🙂
    ಶ್ವೇತಾ, ಥ್ಯಾಂಕ್ಸ್…
    ಶ್ರೀನಿಧಿ, ಥ್ಯಾಂಕ್ ಥ್ಯಾಂಕ್ಸ್! 🙂
    ಸುಪ್ರಿ, ಮ್… ಎಷ್ಟೆಂದರೂ ಅದು ಕನವರಿಕೆ ಮಾತ್ರ… ‘ಮಾತ್ರ’ದ ಆಳ ವಿಪರೀತ ಅಲ್ವಾ?

    ಪ್ರೀತಿಯಿಂದ….
    ಚೇ

  4. ತುಂಬಾ ಚೆನ್ನಾಗಿದೆ. ಹಾವಿನ ಬಗೆಗಿನ ಕವನ ಓದಿ ಅದು ಕನಸಲ್ಲಿ ಬಂದರೆ ಕಾಮ, ಮೇಲ್ಮುಕವಾಗಿ ಹೋದರೆ ಆಧ್ಯಾತ್ಮ,ಕೆಳಮುಖವಾಗಿ ಚಲಿಸಿದರೆ ಕಾಮ. what a wonder sir.

  5. ಚೇತೂ,
    ಬರಹದ ಜಿಗ್-ಜ್ಯಾಗ್ ಶೈಲಿ, ಎಲ್ಲಿಂದೆಲ್ಲಿಗೋ ಕರೆದುಕೊಂಡು ಹೋಗುವ ಪರಿ ಕಟ್ಟಿಹಾಕಿತು. ಖುಶಿಯಾಗಿ ಬರೆಯುತ್ತಿದೇನೆ.
    ಕಥೆ ಬರೀತೀಯಾ ಇಲ್ವಾ?
    ಧಮಕಿ ಇದು.

  6. ಮೊನ್ನೆ ಸಣ್ಣಗೆ ಮಳೆ ಬಿದ್ದು ಹೋಯ್ತು,
    ಈ ಹೊತ್ತು ಬೆವರಲ್ಲಿ ಮೈಯೆಲ್ಲ ಒದ್ದೆಒದ್ದೆ

    ಫ್ಯಾನಿನ ತಣ್ಣನೆ ಗಾಳಿಗೆ ಬೆವರಿನ ಮೈ ಆರಿ ಒಂಥರಾ ಅಂಟು.

    ಮಗ್ಗಲು ಬದಲಿಸಿದರೆ, ಹರಡಿಟ್ಟ ಪುಸ್ತಕ ರಾಶಿ.

    ಅಗೋ ಅಲ್ಲಿ, ಅವುಗಳ ಮಧ್ಯ ಗೆಳೆಯನೊಬ್ಬ

    ಹಾವು ಹಾವು ಅಂತ ಕನವರಿಸ್ಕೊಂಡು ಬರೆದಿಟ್ಟ ಕವನ ಪುಸ್ತಕ.

    ಅದನ್ನ ಓದಿಕೊಳ್ತಲೇ ಮಲಗಿದ್ದಕ್ಕೋ ಏನೋ ಕನಸ ತುಂಬ ಹಾವು.

    ಅದೊಂದಕ್ಕೆ ಅವನ ಕಣ್ಣು. ಕಾಣಬಾರದಂತೆ ಹಾವು ಕನಸಲ್ಲಿ.

    ಹಾವಂದರೆ ಕಾಮವಂತೆ! ಗೊತ್ತಿರೋದು ಇಷ್ಟೇನೇ…

    ಹಾವಂದರ‍ೆ ಅಧ್ಯಾತ್ಮ ಕೂಡ! ಮೇಲೇರುವ ಹಾವು ಅಧ್ಯಾತ್ಮ, ಕೆಳಗಿಳಿಯೋದು ಕಾಮ.

    ಕನಸಿನ ಹಾವು ಎತ್ತ ಹೋಯ್ತು?

    ಹುಡುಕಬೇಕು?

    ಸೊಂಟದಲ್ಲಿ ಛಳಕು.

    ಕುಂಡಲಿನಿ ಮೈಮುರಿದರೆ ಛಳಕಾಗುತ್ತದಂತೆ.

    …. ಅನುಭವ ಚಿಕ್ಕದು.

    ಅಲ್ಲಿ ಮತ್ತೊಂದು ಕವನ ಪುಸ್ತಕ.

    ಗೋಡೆಗಿಡ.

    ಅರಳೀಗಿಡದ ಪಿಳಿಕೆ,

    ದೊಡ್ಡಜ್ಜಿ ಹಳ್ಳಿತೋಟದಲ್ಲಿ ಔದುಂಬರ ನೆಟ್ಟಿದ್ದೇ ನೆಟ್ಟಿದ್ದು,

    ಕಟ್ಟೆ ಕಟ್ಟಿದ್ದೇ ಕಟ್ಟಿದ್ದು…

    ಒಂದು ಮೊಳಕೆಯೂ ಹಸಿರು ನಿಲ್ಲಲಿಲ್ಲ.

    ಅಲೆಮಾರಿ ಬೀಜದ ತಾಕತ್ತು ಅದು!

    ಯಾವ ಯಾವ ಋಷಿಗಳದೆಲ್ಲ ನೆನಪು!

    ರಾಜರು ಹೆಂಡತಿರಿಯರಿಗೆ ಗರ್ಭ ನಿಲ್ಲಿಸಲು ಅಲೆಮಾರಿ ಜೋಗಿಗಳ ಮೊರೆ ಹೋಗ್ತಿದ್ದರಂತೆ! ನಿಜ…

    ನಿಂತಿದ್ದು ಕೊಳೆಯುತ್ತದೆ.

    ವ್ಯಾಸರು ನಕ್ಕಿದ್ದು ದಿಟ.

    ವ್ಯಾಸರು ಮೊಳಕೆಯೊಡೆಸಿದ್ದು ಗೋಡೆ ಬಿರುಕಿನಲ್ಲಲ್ಲ, ಚಿನ್ನದಿಟ್ಟಿಗೆಯ ರಾಜಮಹಲಿನಲ್ಲಿ.

    ದಾಸಿಯ ಮಗ ಚಿಗಿತು ಬೆಳೆದು ತಂಪೂಡಿದನಲ್ಲವೆ?

    ———

    ನಾನು ಓದಿಕೊಂಡಿದ್ದು ಹೀಗೆ.

    ರಾಜಿ.

ನಿಮ್ಮ ಟಿಪ್ಪಣಿ ಬರೆಯಿರಿ

Create a free website or blog at WordPress.com.

Up ↑