ಕುಮುದೋಪಾಖ್ಯಾನವೆಂಬ ಚೊರ್ರೆ ಅಧ್ಯಾಯ


ಅದ್ಯಾಕೋ ಗೊತ್ತಿಲ್ಲ. ಸಿಂಚನಾ ಹೆಸರನ್ನ sin ಅಂತಲೂ ಸದಾಶಿವನ ಹೆಸರನ್ನ sad ಅಂತಲೂ ಫೀಡ್ ಮಾಡ್ಕೊಂಡಿದೀನಿ. ಮೊನ್ನೆ ಅದನ್ನ ನೋಡಿದ ಸಿಂಚನಾ, ‘ಏನಕ್ಕ ನೀವು, ಬರೀ ನೆಗೆಟಿವ್ವು. ನಾನು ಸಿನ್ನು, ಸದು ಸ್ಯಾಡ್ ಥರ ಕಾಣ್ತೀವಾ ನಿಮಗೆ?’ ಅಂದಾಗ್ಲೇ ನಂಗೆ ಅವು ನಿಕ್ ನೇಮ್ ಮಾತ್ರ ಆಗಿರುವುದಕ್ಕಿಂತ ಬೇರೆ ಸಾಧ್ಯತೆಗಳೂ ಇವೆ ಅನ್ನೋ ಅರಿವಾಗಿದ್ದು. ಅದು ಹೋಗ್ಲಿ, ಅವಳು ಹಾಗಂದಾಗಿಂದ, ನಾನು ಅವರಿಬ್ಬರ ಹೆಸರು ನೆನೆದಾಗೆಲ್ಲ ಸಿನ್- ಸ್ಯಾಡ್ ಗಳು ಅದದೇ ಅರ್ಥದಲ್ಲಿ ನೆನಪಾಗಿ ಅದೇ ಭಾವ ಗಟ್ಟಿ ಕುಂತುಬಿಡುತ್ತೆ. ಇದೆಲ್ಲೀ ಕರ್ಮ!

ಇದು ನನ್ನದೇ ವಿಷಯದಲ್ಲೂ ಆಗ್ತಿತ್ತು. ಆಗೆಲ್ಲಾ, ನನ್ನ ಹೆಸ್ರು ಗಾಯತ್ರಿ ಅಂತ ಇತ್ತಲ್ಲ, ಆಗೆಲ್ಲಾ ಅನುಭವಿಸಿದ್ದಿದು. ಬಾಲ್ಯದ ಗೆಳೆಯ ಕಲಮ್ ನನ್ನನ್ನ ‘ಮೂರು ದನ’ ಅಂತ ಛೇಡಿಸ್ತಿದ್ದ. ಅದಾದ್ರೂ ಹೋಗ್ಲಿ, ಹೈಸ್ಕೂಲಲ್ಲಿ ನಿಶಾಂತ ‘ಮೂರು ಗಾಯ’ ಅಂತಿದ್ದ. ನನ್ನ ಹೆಸರು ಹೇಳ್ಕೊಳ್ವಾಗೆಲ್ಲಾ ಅದು ನೆನಪಾಗಿ ಒಂಥರಾ ಮೈಕೆರೆತ ಆಗಿಬಿಡ್ತಿತ್ತು. ಸಂಸ್ಕೃತ ಪೀರಿಯಡ್ಡಲ್ಲಿ ಜಿಕೆವಿ ವಿವರಿಸಿದ್ದ ‘ಗಾಯನ್ತಮ್ ತ್ರಾಯತೇ ಇತಿ….’ ಗಾಳಿಗೆ ತೂರಿ, ನನ್ನ ಹೆಸರಿನ ಮೇಲೆ ಸಿಟ್ಟು ಬರ್ತಾ ಇತ್ತು. ಅದೂ ಸಾಯಲಿ…. ಅಪೂರ್ವ ಅನ್ನೋ ಸಹಪಾಠಿ ಅಯೊಡಿನ್ ಲ್ಯಾಕ್ ಆದ್ರೆ ಬರೋ ರೋಗದ ಹೆಸರು ನೆನಪಿಟ್ಕೊಳೋದು ಈಸಿ ಅನ್ನುತಿದ್ದ. ಯಾಕಪ್ಪಾ ಅಂದ್ರೆ, ಕಣ್ಣೆದ್ರು ನಾನಿರ್ತೀನಲ್ಲ? ಅದರ ಹೆಸರು ‘ಗೊಯಟ್ರಿ’ ಆರ್ ‘ಗೊಯಟೆರ’. ಆ ಹಾಳಾದವ ನನ್ನನ್ನ ಗಳಗಂಡ ರೋಗವೇ ಮಾಡಿಟ್ಟುಬಿಟ್ಟಿದ್ದ! ಸಾಲದ್ದಕ್ಕೆ, ‘ಅವಳಿಗೆ ಹುಳಿ (ನಮ್ಮೂರ ಭಾಷೇಲಿ ಜಂಭ) ಜಾಸ್ತಿ, ಅದಕ್ಕೇ ಉಪ್ಪು ಕಡಿಮೆಯಾಗಿ ಅವಳ ಹೆಸರು ಗೊಯಟ್ರಿ’ ಅನ್ನುವ ಕಮೆಂಟು ಬೇರೆ.

ಹಾಗಂತ ನಾನೇನೂ ಸುಮ್ಮನಿರ್ತಿರ್ಲಿಲ್ಲ. ಸಂಸ್ಕೃತ ಸ್ಟೂಡೆಂಟಾಗಿದ್ರಿಂದ ಹೆಸರಿನ ವ್ಯುತ್ಪತ್ತಿ ಬಗ್ಗೆ ಚೂರು ತಿಳಿವು ಜೊತೆಗೆ ಉತ್ಸಾಹ ಇರುತ್ತಿತ್ತು. ಆ ಹುಡುಗನ ತಮ್ಮನ ಹೆಸರು ‘ಕಾನೀನ’ ಅಂತ. ಅರ್ಥ- ಕನ್ಯೆಗೆ ಹುಟ್ಟಿದವನು! (ಇವರೆಲ್ಲ ಕುವೆಂಪು ಅವರ ಸಂಬಂಧಿಗಳು. ಹೆಸರನ್ನ ಇಟ್ಟಿದ್ದು ಕುವೆಂಪು ಅವರೇ)  ಅದು ಕರ್ಣ ಆಗಬಹುದು, ಕ್ರಿಸ್ತ ಆಗಬಹುದು, ವ್ಯಾಸ ಆಗಬಹುದು ಅಥವಾ ಪುರಾಣಗಳ ಅಸಂಖ್ಯಾತ ಪಾತ್ರಗಳಲ್ಲಿ ಕನಿಷ್ಠ ಹತ್ತಿಪ್ಪತ್ತು ಮಂದಿಯಾದರೂ ಆಗಿರಬಹುದು! ಆದ್ರೆ ನಾನು ಸ್ವಲ್ಪ ತಲೆಹರಟೆಯೇ. ‘ಕನ್ಯೆಗೆ ಹುಟ್ಟಿದವನು’ ಅಂದ್ರೆ… ಅಸಭ್ಯ ಭಾಷೆಯಲ್ಲಿ… ದಯವಿಟ್ಟು ಕ್ಷಮೆಯಿರಲಿ. ಇದು ಎಂಟೊಂಭತ್ತನೇ ತರಗತಿಯ ಹುಡುಗು ಬುದ್ಧಿ. ಸೇಡು ತೀರಿಸ್ಕೊಳ್ಳಲಿಕ್ಕೆ ಹೇಳ್ತಿದ್ದುದು. ಬಟ್, ಹಾಳಾದ್ದು, ಮನಸಿಗೆ ಮರೆವು ಅನ್ನೋದಿಲ್ಲ 😦
ನನ್ನ ಈ ಹಾಳಾದ ಹೆಸರಿನ ಮೂಲ ಹುಡುಕುವ ಗೀಳು ಎಷ್ಟಿತ್ತೆಂದರೆ, ದೊಡ್ಡಮ್ಮನ ಪಂಕಜ ಅನ್ನುವ ಹೆಸರಿಟ್ಟುಕೊಂಡು ‘ಕೆಸರಲ್ಲಿ ಹುಟ್ದೋಳು’ ಅಂತ ಛೇಡಿಸಿ ಬಯ್ಯಿಸ್ಕೊಳ್ತಿದ್ದೆ. ಹೀಗೆ ಚಿಕ್ಕದೊಂದು ಮನೆಜಗಳದಲ್ಲಿ ದೊಡ್ಡಮ್ಮ, ‘ನಿನ್ ಮಗಳು ನನ್ನ ಹೀಗೆಲ್ಲ ಅಂತಾಳೆ. ದೊಡ್ಡೊರು- ಚಿಕ್ಕೋರು ನಡವಳಿಕೆ ಕಲ್ಸಿಲ್ಲ ನೀನು’ ಅಂತ ಅಮ್ಮನಿಗೆ ಅಂದಾಗ, ಅಮ್ಮ ಸಮಾ ಪೆಟ್ಟು ಕೊಟ್ಟಾಗಲೇ ನನಗೆ ಇವೆಲ್ಲಾ ಸೀರಿಯಸ್ ವಿಷಯಗಳೂ ಆಗಬಹುದು ಅಂತ ಫ್ಲ್ಯಾಶ್ ಆಗಿದ್ದು!

~
ಇತ್ತೀಚೆಗೆ ‘ಲೈಟ್ ಆಫ್ ಭಾಗವತ’ ಓದ್ತಾ ಇದ್ದೆ. ಅದರಲ್ಲಿ ‘ಕುಮುದ’ಪುಷ್ಪದ ಬಗ್ಗೆ ವಿವರಣೆಯಿತ್ತು. ಕುಮುದ ಅಂದ್ರೆ ನೈದಿಲೆ. ಕುಮುದ ಅಂದ್ರೆ ನೈದಿಲೆ ಮಾತ್ರ ಅಲ್ಲ. ಯಾವ ವಿಕೃತ ಸಂತೋಷಿಯ ಹೆಸರು ಬೇಕಾದರೂ ಆಗಬಹುದು ಅಂತ ಗೊತ್ತಾಯ್ತು! ಕುಮುದ- ಕು ಮುದ. ಮುದ ಅಂದ್ರೆ ಸಂತೋಷ. ‘ಕು’ ಅಂದ್ರೆ ಅಫ್‌ಕೋರ್ಸ್ ‘ಕೆಟ್ಟ’ ಅನ್ನುವ ಅರ್ಥ ಸೂಚಿಸುವ ಸಂಸ್ಕೃತದ ಸಫಿಕ್ಸ್. ನೈದಿಲೆಗೆ ಯಾಕಪ್ಪಾ ಆಹೆಸರು ಅಂದ್ರೆ, ಅದು ರಾತ್ರಿ ಅರಳುತ್ತೆ. ಅರಳಿಕೊಳ್ಳಲಿ. ಆದ್ರೆ, ಸೂರ್ಯ ಬರ್ತಿದ್ದ ಹಾಗೇ ಮುದುಡಿಕೊಳ್ಳುತ್ತೆ. ಅಂದ್ರೆ, ಅದಕ್ಕೆ ಸೂರ್ಯನ್ನ ಧಿಕ್ಕರಿಸಿ ಮುದುಡಿಕೊಳ್ಳೋದ್ರಲ್ಲಿ, ಅಂವ ಹೋದ ಮೇಲೆ ಅರಳಿಕೊಳ್ಳೋದ್ರಲ್ಲೇ ಖುಷಿ. ಲೋಕ ರೂಢಿಗೆ ವಿರುದ್ಧವಿರೋದನ್ನ ಮಾಡೋದ್ರಲ್ಲಿ ಖುಷಿ ಪಡೋದ್ರಿಂದ ಅದು ‘ವಿಕೃತ’ವಂತೆ. ಅದಕ್ಕೇ ಅದು ‘ಕು ಮುದ’!
ಉಫ್… ಇದನ್ನ ಓದ್ಕೊಂಡಮೇಲೆ ನನ್ನ ಫಜೀತಿ ಯಾಕೆ ಕೇಳ್ತೀರಿ? ಹೊಸತಾಗಿ ಪರಿಚತವಾದ ಕುಮುದ ಅನ್ನುವವರನ್ನು ನೆನೆಯುವಾಗೆಲ್ಲ ನೆನಪಾಗೋದು ಕು-‘ಮುದ’ ಅಂತಲೇ!

9 thoughts on “ಕುಮುದೋಪಾಖ್ಯಾನವೆಂಬ ಚೊರ್ರೆ ಅಧ್ಯಾಯ

Add yours

  1. ಆತ್ಮೀಯ
    ನಾಮೋಪಾಖ್ಯಾನ ಚ೦ದ ಉ೦ಟು. ಪ್ರಾಣೇಶರ ಮ೦ದಾಕಿನಿ ಜೋಕು ನೆನಪಿಗೆ ಬ೦ತು. ಜೊತೆಗೆಬ ೆಳದಿ೦ಗಳ ಬಾಲೆಯ ನಾಯಕನ ಹೆಸರು (ಸಮುದ್ರ ತೀರದಲ್ಲಿ ಕುದುರೆ ಮೈಯುಜ್ಜುವವನು )ನ ೆನಪಾಯ್ತು
    ಚ೦ದನೆಯ ಬರಹ
    ನಿಮ್ಮವ
    ಹರಿ

ನಿಮ್ಮ ಟಿಪ್ಪಣಿ ಬರೆಯಿರಿ

Create a free website or blog at WordPress.com.

Up ↑