ಪ್ರವಾಸದಲ್ಲಿ ನಮ್ಮ ಕಥನ


ನಂಗೆ ಹೋದ ಸಾರ್ತಿಯೇ ನಮ್ಮ ಅನುಭವಗಳನೆಲ್ಲ ಒಟ್ಟು ಹಾಕಿ ಊದ್ದನೆಯದೊಂದು ಕಥನ ಬರೆದಿಟ್ಟುಕೋಬೇಕು ಅನಿಸಿತ್ತು. ಸೋಮಾರಿತನದಿಂದ ಆ ಪ್ರಾಜೆಕ್ಟ್ ಹಾಗೇ ಬಿದ್ದುಹೋಗಿ, ಕೆಂಡಸಂಪಿಗೆಯಲ್ಲಿ ಎರಡು ಕಂತಿಗೇ ಸರಣಿ ತುಂಡಾಗಿ ನೆನೆಗುದಿಗೆ (ನಂಗೆ ಈ ಪದ ಅದ್ಯಾಕೋ ಇಷ್ಟ!) ಬಿದ್ದಿತ್ತು. ಆ ಎರಡನ್ನು ಹೆಕ್ಕಿಕೊಂಡು ಬಂದಿದೇನೆ. ಮತ್ತೆ ಮುಂದುವರೆಸೋ ಇರಾದೆಯಿಂದ!

ಅಂವ ಒಂದೇ ಸಮ ಬೆನ್ನು ಬಿದ್ದಿದ್ದ.
“ಬಸ್ ಏಕ್ ಸೆಟ್ ಲೇಲೋ ಭಯ್ಯಾ!”
ನಾವಂತೂ ಡಿಸೈಡ್ ಮಾಡಿಯಾಗಿತ್ತು. ಜಪ್ಪಯ್ಯಾ ಅಂದ್ರೂ ಶಾಪಿಂಗ್ ಮಾಡೋದಿಲ್ಲ ಅಂತ!! ನಮ್ಮ ಹಿಂದೆಯೇ ಸುಮಾರು ದೂರ ನಡೆದು ಬಂದವನ ಕಾಟ ತಪ್ಪಿಸ್ಕೊಳ್ಳಲು ಅಣ್ಣ ಕೇಳಿದ, “ಪಚಾಸ್ ರುಪಯೇ ಮೆ ದೋಗೇ?”
ಒಂದು ಸೆಕೆಂಡೂ ತಲೆ ಕೆರಕೊಳ್ಳದ ಹುಡುಗ ಅದಾಗಲೇ ಪೇಪರಿನಲ್ಲಿ ಅದನ್ನು ಸುತ್ತತೊಡಗಿದ್ದ. ಮುನ್ನೂರು ರುಪಾಯಿಯ ಬಣ್ಣಬಣ್ಣದ ಬಳೆ ಸೆಟ್ ಅನ್ನು ಬರೀ ಐವತ್ತು ರುಪಾಯಿಗೆ ಅಂವ ಕೊಟ್ಟುಬಿಡಲು ತಯಾರಾಗಿದ್ದ!

ತಗೋ… ಜತೆಗಿದ್ದ ಇನ್ನಿಬ್ಬರೂ ತಮಗೆರಡು ಅಂತ ವ್ಯಾಪಾರ ಕುದುರಿಸಿದರು. ನಿಂತನಿಂತಲ್ಲೇ ಆರು ಸೆಟ್ ಬಳೆ ಮಾರಾಟವಾಗಿ ಹೋಗಿತ್ತು. ಯಾವತ್ತೂ ಚೌಕಶಿ ಮಾಡಿಯೇ ಗೊತ್ತಿಲ್ಲದ ಅಣ್ಣನ ಹೊಟ್ಟೆಯಲ್ಲಿ ಸಂಕಟ ಶುರುವಾಯ್ತು. “ನಿಂಗೆ ಲಾಸ್ ಆಗ್ಲಿಲ್ವೇನಪ್ಪಾ?” ಅಂದಾಗ ಹುಡುಗ ಸಣ್ಣಗೆ ನಕ್ಕ. “ಆಗದೆ ಏನು ಭಯ್ಯಾ? ಆದ್ರೆ ನೋಡ್ತಾ ಇರಿ… ಇನ್ನು ಹತ್ ನಿಮಿಷ ನನ್ ಜೊತೆ ಇರಿ. ಇದೇ ಸೆಟ್ಟನ್ನ ಸಾವಿರ ರುಪಾಯಿಗೆ ಮಾರಿ ತೋರಿಸ್ತೀನಿ. ಒಬ್ಬ ವಿದೇಶಿ ಸಿಕ್ರೂ ಸಾಕು, ಲಾಸಿನ ಡಬಲ್ ಲಾಭ ಮಾಡ್ಕೋಳ್ತೀನಿ!” ಅಂದ. ಅವನ ಕಾನ್ಫಿಡೆನ್ಸು ಖುಷಿ ಕೊಟ್ಟಿತು. ಅವನ ಲಾಭದ ಗಣಿತ ಚೆನ್ನಾಗಿತ್ತು. “ಇರೋರ ಹತ್ರ ತೊಗೊಂಡ್ರೆ ಯಾರಿಗೇನು ಲಾಸು? ನಮ್ಮವರಿಗೆ ಕಡಿಮೆಗೆ ಕೊಟ್ರೆ ವಿಶ್ವಾಸನಾದ್ರೂ ಉಳಿಯತ್ತೆ. ಒಬ್ರ ಹತ್ರಾನೇ ಎಲ್ಲ ಇರ್ಬೇಕು ಅಂದ್ರೆ ಹೆಂಗೆ?”

ಅರೆ! ಬಳೆ ಮಾರುವ ಹುಡುಗನ ಬಾಯಲ್ಲಿ ಸಮಾಜವಾದದ ಮಾತು!

ಸೋಜಿಗವಿಲ್ಲ. ಹೇಳಿಕೇಳಿ ಅದು ಸಮಾಜವಾದಿಗಳ ನೆಲ. ಅದು ಪಶ್ಚಿಮ ಬಂಗಾಳ… ಅದು ಕೋಲ್ಕೊತಾ!!

********

ಕಲ್ಕತ್ತಾ. ಇದೇ ಸುಲಭ ಮತ್ತು ಆಪ್ತ.
ಆಪ್ತ ಯಾಕೆಂದರೆ, ಈ ಬಂಗಾಳವೆಂಬ ಬಂಗಾಳದ ಊರುಗಳು ನಮ್ಮ ಬಾಲ್ಯ ಕಾಲದ ಸುತ್ತಮುತ್ತಲನ್ನ ನೆನಪಿಸಿಕೊಡುತ್ತವೆ. ನಮ್ಮ ಅಂದರೆ… ಸರಿ ಸುಮಾರು ಮೂವತ್ತು- ನಲವತ್ತರ ಆಸುಪಾಸಿನಲ್ಲಿರುವವರ…

ಮರದ ಬಾಡಿ ಹೊತ್ತ ಬಸ್ಸುಗಳು, ಅದಕ್ಕೆ ರಬ್ಬರಿನ- ಮಡಚುವ ಕಿಟಕಿ ಪರದೆಗಳು, ಮೀನು ಗಾಡಿಯ ಥರದ ಹಾರನ್ನು…ಮಣ್ಣಿನ ಗೋಡೆಯ ಮನೆಗಳು, ಚಿಕ್ಕ ಚಿಕ್ಕ ಗಲ್ಲಿಗಳು, ಹೆಜ್ಜೆಗೊಂದು ಕೆರೆ, ಕೆರೆ ತುಂಬ ನೀರು! ಕೈಉದ್ದದ ಕೆಂಪು ರವಿಕೆ, ಕೆಂಪಿನದೇ ಬಾರ್ಡರಿನ ಬಿಳಿ ಕಾಟನ್ ಸೀರೆ- ಉಟ್ಟು ತೊಟ್ಟು ಸೈಕಲ್ಲಿನಲ್ಲಿ ಸೊಂಯ್ಯನೆ ಹೈಸ್ಕೂಲಿಗೆ, ಕಾಲೇಜಿಗೆ ಹೋಗುವ ಹುಡುಗಿಯರು!

ನಮ್ಮ ಪ್ರವಾಸೀ ಗ್ಯಾಂಗಿನಲ್ಯಾರೋ ಸಣ್ಣಗೆ ಕೇಳಿದರು- “ನಾವು ಗುಜರಾತಿನಲ್ಲಿದ್ದೇವಾ?”

~

ನಾವು ಪಶ್ಚಿಮ ಬಂಗಾಳದಲ್ಲೇ ಇದ್ದೆವು. ಬರೋಬ್ಬರಿ ಹತ್ತು ದಿನಗಳ ಕಾಲ ಇದ್ದೆವು. ಮುಖ್ಯವಾಗಿ ಹೋಗಿದ್ದು ಆಶ್ರಮಕ್ಕೆ ಅಂತಲಾದರೂ ಇದ್ದಷ್ಟೂ ದಿನ ನಾನು ಹಳ್ಳಿ ಹಳ್ಳಿ ತಿರುಗಿ ಮನಸ್ಸು ತುಂಬಿಕೊಂಡೆ. ಪ್ರಗತಿಯ ಮನೆ ಹಾಳಾಗಿ ಹೋಗಲಿ, ಆ ಮರ, ಗಿಡ, ಕಾಡು, ಟಾರಿಲ್ಲದ ರಸ್ತೆ, ರಸ್ತೆ ಮಧ್ಯದ ಟ್ರಾಮು, ಮುಗ್ಧತೆ, ಸರಳತೆ, ಮಣ್ಣಿನ ಮಡಿಕೆಯ ಅನ್ನ- ಸಾಂಬಾರು…! ಯಾವುದನ್ನೆಲ್ಲ ನಾವು ಕಳಕೊಂಡಿದ್ದೇವೆ ಅಂತ ಹಲಬುತ್ತಿದ್ದೇವೆಯೋ ಸಧ್ಯಕ್ಕಂತೂ ಅವನ್ನು ಬಂಗಾಳದಲ್ಲಿ ಇನ್ನೊಂದು ದಶಕದ ಕಾಲವಾದರೂ ಕಟ್ಟಿಕೊಳ್ಳಬಹುದು ಅನಿಸುತ್ತದೆ ನನಗೆ.

ಹೀಗೆ ನನ್ನನ್ನ ನಾಸ್ಟಾಲ್ಜಿಯಾಕೆ ಒಳಪಡಿಸಿದ ಬಹಳ ಮುಖ್ಯ ಸಂಗತಿಯೆಂದರೆ ಅಲ್ಲಿನ ಬಸ್ಸುಗಳು. ಆಗೆಲ್ಲಾ, ಅಂದರೆ ಸರಿಸುಮಾರು ಇಪ್ಪತ್ತು ವರ್ಷದ ಕೆಳಗೆ ತೀರ್ಥಹಳ್ಳಿಯಲ್ಲಿ ‘ದೇವಂಗಿ ಬಸ್ಸು’ ಅಂತ ಒಂದಿತ್ತು. ಉಳಿದೆಲ್ಲವಕ್ಕಿಂತ ಅದು ಹಳತು, ಹಳೆ ಮಾಡೆಲ್ಲಿನದು. ಕಣ್ತೆರೆದಾಗಿಂದ ಗಾಜಿನ ಕಿಟಕಿಯ ಬಸ್ಸುಗಳಲ್ಲೇ ಓಡಾಡಿದ್ದ ನನಗೆ ಶಿವಮೊಗ್ಗದಿಂದ ತೀರ್ಥಹಳ್ಳಿಗೆ ಹೋಗಬೇಕೆಂದರೆ ವಿಷಾದ ಉಕ್ಕುತ್ತಿತ್ತು. ಅದ್ಯಾಕೋ ನಮ್ಮಮ್ಮನಿಗೆ ದೇವಂಗಿ ಬಸ್ಸಲ್ಲಿ ಹೋಗೋದು ಅಂದ್ರೆ ಪ್ರೀತಿ. ನಮಗೋ, ಅದರ ಮಡಚಿ- ಎತ್ತಿಕಟ್ಟುವ ರಬ್ಬರಿನ ಪರದೆಯ ಕಿಟಕಿಯೆಂದರೆ ವಿಪರೀತ ದುಃಖ. ಈ ಓಲ್ಡ್ ಮಾಡೆಲಿನಲ್ಲಿ ಹೋಗೋದಂದರೆ ಪ್ರತಿಷ್ಟೆಗೆ ಕಡಿಮೆ ಅನ್ನುವ ಅಹಂಕಾರ ಬೇರೆ! ಹೀಗೆ ಸೊಕ್ಕು ಮಾಡಿಕೊಂಡು ಒಂದು ಸಾರ್ತಿ, “ದೇವಂಗಿ ಬಸ್ಸಿಗೆ ಆಕ್ಸಿಡೆಂಟ್ ಆಗಿಹೋಗ್ಲಿ” ಅಂದುಬಿಟ್ಟಿದ್ದ ತಮ್ಮ, ಅಮ್ಮನ ಕೈಸೋಲುವ ತನಕ ಪೆಟ್ಟು ತಿಂದು ಕೆಂಪಾಗಿದ್ದ. ಆಮೇಲಿಂದ ನನಗೆ ಹಠಾತ್ತನೆ ಅದರ ಮೇಲೆ ಅಕ್ಕರೆ ಮೂಡಿಬಿಟ್ಟಿತ್ತು.

ಉಳಿದೆಲ್ಲವಕ್ಕಿಂತ ಡಿಫರೆಂಟಾಗಿದ್ದ, ಕಂದು ಬಣ್ಣದ ಪಟ್ಟೆಗಳಿದ್ದ ಆ ಹಳೇ ಹಪ್ಪಟ್ಟು ಬಸ್ಸು ನನ್ನ ಭಾವಕೋಶದಲ್ಲಿ ಶಾಶ್ವತ ಜಾಗ ತೊಗೊಂಡುಬಿಟ್ಟಿತು. ಮೊದಮೊದಲು ಲಾಲ್ ಡಬ್ಬಾಗಳಲ್ಲಿ (ಇದು ಕೂಡ ಚಿಕ್ಕಂದಿನ ನಮ್ಮ ದುರಹಂಕಾರದ ಭಾಷೆ- ಕೆಂಪು ಬಸ್ಸಿಗೆ ಬಳಸುತ್ತಿದ್ದುದು), ಆಮೇಲಾಮೇಲೆ ತಗಣಿ ಬಸ್ಸುಗಳಲ್ಲಿ (ಅಂದ್ರೆ ಏಸಿ ಬಸ್ಸು ಅಂತ ಗೊತ್ತಿದೆ ಅಲ್ವ?) ಈಗೀಗ ಸ್ಲೀಪರ್ ಕೋಚುಗಳಲ್ಲಿ ಓಡಾಡತೊಡಗಿದ್ದರೂ ದೇವಂಗಿ ಬಸ್ಸಿನ ಪ್ರೀತಿ ಅಡಗಿರಲಿಲ್ಲ.

ನನ್ನ ಈ ಬಸ್ಸಿನಲ್ಲಿ ಓಡಾಡುವ ಹುಚ್ಚಿನಿಂದಾಗಿ ನಮ್ಮ ಗ್ಯಾಂಗು ಸಾಕಷ್ಟು ಪಡಿಪಾಟಲು ಪಡಬೇಕಾಯ್ತು. ಬರೀ ನಾಲ್ಕು ರುಪಾಯಿಗೆ ಕಲ್ಕತ್ತೆಯಿಂದ ಬೇಲೂರಿಗೆ ಓಡಾಡಿದ್ದೇ ಓಡಾಡಿದ್ದು!

~

ಚಾ ದುಕಾನು

ನಿಮಗೇನಾದರೂ ಜೀವಮಾನದ ರುಚಿಕಟ್ಟಾದ ಚಹಾ ಕುಡಿಯಬೇಕು ಅನ್ನುವ ಖ್ವಾಯಿಶ್ಶಿದ್ದರೆ, ಬಂಗಾಳಕ್ಕೇ ಹೋಗಬೇಕು. ಅಲ್ಲಿನ ತೆರೆದ ಗಟಾರದ ಎದುರಿಗಿರುವ, ನೊಣಗಳಿಂದ ಜೀರ್ಗುಡುವ, ಶತಮಾನದ ಹಿಂದಿನ ಮರದ ಬೆಂಚುಗಳ ದುಕಾನಿನಲ್ಲಿ ಕೂರಬೇಕು. ಅಲ್ಲಿ ಸುಕ್ಕು ಮುಖದ ನಲವತ್ತೈದರ ‘ಮುದುಕ’ ಮಲಾಯಿ ಹಾಕಿ ಮಡಿಕೆ ಲೋಟದ ಭರ್ತಿ ಕೊಡುವ ಚಾ ಕುಡಿಯಬೇಕು. ಅದೂ ಬರೀ ಮೂರು ರುಪಾಯಿಗೆ!! ಅದೇನು ಹಾಲಿನ ಸಮೃದ್ಧಿಯೋ, ಚಾಲಾಕಿತನದ ಕೊರತೆಯೋ, ಪ್ರಾಮಾಣಿಕತೆಯೋ ಅಥವಾ ಆ ಜನಗಳು ಅಲ್ಪ ತೃಪ್ತರೋ ಅಥವಾ ಸಂತೃಪ್ತರೋ? ಬಂಗಾಳದಲ್ಲಿ ಎಲ್ಲಿಂದ ಎಲ್ಲಿ ಹೋದರೂ ಅಂಥದೇ ಸಮೃದ್ಧ ಚಹಾ ಅಷ್ಟೇ ಮೊತ್ತಕ್ಕೆ ಲಭ್ಯ.

ಈ ಚಹಾ ಕುಡಿಯಲಿಕ್ಕಾಗಿ ಅವರು ಮಡಿಕೆ ಲೋಟಗಳನ್ನ ಬಳಸ್ತಾರಲ್ಲ, ಅದರಿಂದ ಅದೆಷ್ಟು ಕುಟುಂಬಗಳು ಉದ್ಯೋಗ ಮಾಡುತ್ತ ಊಟ ಮಾಡಿಕೊಂಡಿವೆಯೋ ಗೊತ್ತಿಲ್ಲ. ಜೊತೆಗೆ, ಇಲ್ಲಿ ಒಮ್ಮೆ ಬಳಸಿದ ಚಹಾ ಕುಡಿಕೆಯನ್ನ ಮತ್ತೆ ಬಳಸೋದಿಲ್ಲ. ಕುಡಿದು ಬಿಸಾಡುವ ನಿಯಮ. (ನಾವು ಮಾತ್ರ ಜೋಪಾನ ತೊಳೆದಿಟ್ಟುಕೊಂಡು ಬೆಂಗಳೂರಿನವರೆಗೆ ತಂದು ಕ್ಯಾಕ್ಟಸ್ ಪಿಳ್ಳೆಗಳನ್ನ ಹುಗಿದಿಟ್ಟಿದೀವಿ ಅನ್ನೋದು ಬೇರೆ ಮಾತು!)ಹೀಗಾಗಿ ಪ್ರತಿ ಬಾರಿಯ ಚಹಾಕೂ ಹೊಸ ಕುಡಿಕೆ. ಐಸ್ ಕ್ರೀಮ್, ಮೊಸರುಗಳಿಗೂ ಇಂಥದೇ ವ್ಯವಸ್ಥೆ. ಕೊನೆಗೆ, ಬಾವಿಗೆ- ಬೋರ್ವೆಲ್ಲಿಗೆ ಇಳಿಸುವ ರಿಂಗೂ ಮಣ್ಣಿನದೇ. ಮನೆ ಮೇಲಿನ ಸಿಂಟೆಕ್ಸಿನ ಥರದ ಟ್ಯಾಂಕೂ ಮಣ್ಣಿನದೇ!! ಎಲ್ಲರಿಗೂ ಬದುಕುವ ಹಕ್ಕು! ಜತೆಗಿದು ಪರಿಸರದ ಗೆಳೆಯ ಬೇರೆ!! ಮಣ್ಣಲ್ಲಿ ಕರಗಿ, ಮಣ್ಣಲ್ಲಿ ಮಣ್ಣಾಗಿ…
ಅದಕ್ಕೇ ಹೇಳಿದ್ದು, ಪ್ರಗತಿ, ಪಿಂಗಾಣಿ ಕಪ್ಪುಗಳಿಗಿಂತ ಮಾನವನ ಬದುಕಿಗೆ ದಾರಿಯಾಗುವ ಮಣ್ಣಿನ ಲೋಟ… ಯಾರಾದರೂ ಬಯ್ಯುವರೇನೋ ಬಹುಶಃ. ಅಷ್ಟಕ್ಕೂ ಈ ಕಾನ್ಸೆಪ್ಟೇ ಗೊಂದಲದ್ದು. ಪ್ರಗತಿಯೂ ಬೇಕು, ನೆಮ್ಮದಿಯೂ ಬೇಕು. ಪ್ರಗತಿ ತುಂಬಾ ತುಟ್ಟಿ. ಅದನ್ನ ನೆಮ್ಮದಿಯ ಬೆಲೆಗೇ ಕೊಳ್ಳಬೇಕು…

ಇದು ಚಹಾ ದುಕಾನಿನಲ್ಲಿ ಕುಂತು ನಾವು ನಡೆಸಿದ ಜಿಜ್ಞಾಸೆ.

ಚಹಾ ಮಾತ್ರವಲ್ಲ, ಬಂಗಾಳದಲ್ಲಿ ಬಹುತೇಕ ಆಹಾರ ಸಾಮಗ್ರಿಗಳು ಅಗ್ಗ. ಒಂದು ರೋಟಿಗೊಂದು ರುಪಾಯಿ, ಬಾಜಿ ಬೌಲಿಗೆ ಮೂರು ರುಪಾಯಿ, ನಾಲ್ಕು ರುಪಾಯಿಗೊಂದು ಭರ್ಜರಿ ಪರೋಟಾ, ಮೂರು ರುಪಾಯಿಗೆ ರಸರಸದ ರಸಗುಲ್ಲಾ, ಹತ್ತು ರುಪಾಯಿಗೆ ಪೊಟ್ಟಣದ ತುಂಬ ಬಿಸಿಬಿಸಿ ಜಿಲೇಬಿ!

ತಿನ್ನುವುದೇ ಜೀವಮಾನದ ಧ್ಯೇಯವಾಗಿದ್ದ ನಮ್ಮಲ್ಲನೇಕರು ‘ಒಂದು ನಾಲ್ಕು ವರ್ಷ’ ಅಲ್ಲಿದ್ದು, ತಿಂದುಂಡು ದುಡ್ಡುಳಿಸಿ, ಬೆಂಗಳೂರಿಗೆ ಮರಳಿ ಮನೆಕಟ್ಟುವ ಪ್ಲ್ಯಾನು ಹಾಕಿಬಿಟ್ಟಿದ್ದರು ಅಂದರೆ…

ಅರೆ ಹಾ! ರಸಗುಲ್ಲಾದ ಕಥೆ ಹೇಳಬೇಕಲ್ಲ? ಇದರ ಜತೆಗೆ ಅಲ್ಲಿನ ತಿಂಡಿ ತೀರ್ಥದ ಸಂಗತಿಯನ್ನೂ ಹೇಳ್ತೇನೆ ಕೇಳಿ.

ನಾವು ಬೇಲೂರಲ್ಲಿಳಿದ ಮರುದಿನ ಗ್ಯಾಂಗಿನ ಮೂವರು ಹೊರಸಂಚಾರಕ್ಕೆ ಹೋದರು. ಅಲ್ಲೆಲ್ಲಾ ಕರೆಕ್ಟಾಗಿ ಏಳು ಗಂಟೆಗೆ ತಿಂಡಿ ಕೊಟ್ಟುಬಿಡ್ತಾರೆ. ನಾವು ಉಳಿದಿದ್ದು ಆಶ್ರಮದ ಗೆಸ್ಟ್ ಹೌಸಿನಲ್ಲಾದ್ದರಿಂದ ತುಂಬಾ ಶಿಸ್ತು ಬೇರೆ. ಹೊತ್ತು ಅಂದರೆ ಹೊತ್ತಿಗೆ ಸರಿಯಾಗಿ ಜೋಡಿಸಿಟ್ಟ ತಾಟುಗಳ ಮುಂದೆ ಕುಂತುಬಿಡಬೇಕು.

ಏಳು ಗಂಟೆಗೆ ಅದೆಂಥಾ ತಿಂಡಿ ಕೊಡ್ತಾರಪ್ಪಾ ಅಂತ ಗಡಿಬಿಡಿಯಲ್ಲಿ ಆಶ್ರಮದಿಂದ ಓಡಿ ಬಂದು ಕುಂತಿದ್ದೆವು. ಈ ಮೂವರು ನಾಪತ್ತೆ. ಮಹರಾಜರ (ಅಡುಗೆ ಭಟ್ಟರನ್ನ ಹಾಗನ್ನುತ್ತಾರೆ) ಕೈಲಿ ಸಣ್ಣಗೆ ಬುದ್ಧಿ ಹೇಳಿಸ್ಕೊಂಡು ಉಳಿದವರೆಲ್ಲರೂ ತಿಂಡಿಗೆ ಕಾದು ಕುಳಿತೆವು.

ಬಂದೇಬಿಟ್ಟಿತು! ಒಂದು ದೊಡ್ಡ ಬೇಸನ್ನಿನ ತುಂಬ ಮಂಡಕ್ಕಿ. ನಾವು ಕುಳಿತ ಸಾಲಿನುದ್ದಕ್ಕೂ ಮಂಡಕ್ಕಿ ಹಾಕಿ ನಿಮಿಷ ಕಳೆದರೂ ಯಾರೂ ತಿನ್ನಲು ಶುರುವಿಟ್ಟಿರಲಿಲ್ಲ. ‘ಅನ್ನಪೂರ್ಣೇ ಸದಾ ಪೂರ್ಣೇ’ ಹೇಳಲಿಕ್ಕಿದೆಯೇನೋ ಅಂದುಕೊಂಡು ನಾವೂ ಸುಮ್ಮನಾದೆವು. ಅಷ್ಟಕ್ಕೂ ಹಗಲಾಗೆದ್ದು ‘ಬರಗೆಟ್ಟವರ’ ಹಾಗೆ ಮಂಡಕ್ಕಿ ತಿನ್ನುವ ಯೋಚನೆ ನಮಗೆ ಆಕರ್ಷಕವಾಗಿ ಕಾಣಲಿಲ್ಲ. ಎದ್ದು ಹೋಗುವಂತಿಲ್ಲ. ಪ್ರಸಾದ ಅನ್ನುವ ಸೆಂಟಿಮೆಂಟು ಬೇರೆ.

ಇನ್ನು ಹತ್ತು ದಿನ ಹೆಂಗಪ್ಪಾ ಅಂದುಕೊಳ್ತಿರುವಾಗಲೇ ಮತ್ತೊಂದು ಬೌಲಿನ ತುಂಬ ಅದನ್ನು ಬಡಿಸುತ್ತ ಬಂದರು. ಅದನ್ನ ಅಂದರೆ, ಆಲೂಗಡ್ಡೆ ಭಾಜಿಯನ್ನ! ಈಗಂತೂ ಮತ್ತಷ್ಟು ಗಲಿಬಿಲಿ. ಮಂಡಕ್ಕಿಯ ಜತೆ ಈ ಭಾಜಿಯನ್ನಿಟ್ಟುಕೊಂಡು ಮಾಡುವುದೇನು? ಅಕ್ಕ ಪಕ್ಕ ಮಂಗಗಳ ಹಾಗೆ ನೋಡುತ್ತ ಕುಂತೆವು. ಅವರೆಲ್ಲ ಭರ್ಜರಿಯಾಗಿ ಅದನ್ನ ಮಂಡಕ್ಕಿ ಬೇಸಿನ್ನಿಗೆ ಸುರಿದುಕೊಳ್ಳುತ್ತ, ಚಮಚೆಯಿಂದ ಕಲಸಿಕೊಳ್ಳುತ್ತ, ಆನಂದದಿಂದ ಸವಿಯುತ್ತ…

ಉಫ್! ಮಂಡಕ್ಕಿಗೆ ಭಾಜಿ ಹಾಕ್ಕೊಂಡು ತಿನ್ನೋದು! ಅರೆ!! ಈ ತಿಂಡಿ ಅದೆಷ್ಟು ಸುಲಭ! (ಮಾರನೆ ದಿನ ಮಂಡಕ್ಕಿ ಜೊತೆ ಭಾಜಿಗೆ ಬದಲು ಶಾವಿಗೆ ಪಾಯಸ ಕೊಟ್ಟಿದ್ದರು. ಅವರೆಲ್ಲ ಅದನ್ನ ಮಂಡಕ್ಕಿ ಮೇಲೆ ಸುರಿದುಕೊಂಡು ತಿನ್ನುತ್ತಿದ್ದರು. ನಾವು ಮಾತ್ರ ಮಂಡಕ್ಕಿಯನ್ನ ಬಳಿದು ಮುಕ್ಕಿ, ಪಾಯಸವನ್ನ ಆಮೇಲೆ ತಿಂದೆವು)

ಅಡುಗೆ ಮೈಗಳ್ಳತನಕ್ಕೆ ಕುಖ್ಯಾತಳಾಗಿದ್ದ ನನ್ನ ಮುಖವನ್ನೇ ಎಲ್ಲರೂ ಗುರಾಯಿಸಿದರು. “ಊರಿಗೆ ವಾಪಸಾದ ಮೇಲೆ ಚೇತನಕ್ಕ ಬೆಂಗಾಳಿ ಸ್ಪೆಶಲ್ ತಿಂಡಿ ಮಾಡ್ಕೊಡ್ತಾರೆ” ಅಣಕಿಸಿ ನಕ್ಕರು. ‘ಮೊದಲ ದಿನ ಮೌನ, ಅಳುವೇ ತುಟಿಗೆ ಬಂದಂತೆ’ ಗಬಗಬನೆ ತಿಂದು ಮುಗಿಸಿದರು. ನಮಗೆ ಮಾತ್ರ ಅದು ಪ್ರಸಾದ ಅನ್ನುವ ಒಂದೇ ಅಂಶ ಮಹದಾಕಾರವಾಗಿ ಬೆಳೆದು ಅಮೃತ ಸಮವಾಗಿ ನಿಂತು ಗಡದ್ದಾಗಿ ತಿಂದೆವು. ಹಿಂದಿನ ರಾತ್ರಿ ಊಟ ಬಿಟ್ಟಿದ್ದು ಒಳಗೊಳಗೆ ನೆನಪಾದರೂ ಪ್ರಸಾದದ ಗೌರವಕ್ಕೆ ಅನ್ನುವುದನ್ನೇ ಸ್ಥಾಪಿಸಿಕೊಂಡು ಸುಮ್ಮಗಾದೆವು!

ಈ ನಡುವೆ, ಹೊರಗೆ ಹೋಗಿದ್ದ ಆ ಮೂವರು ಮರಳಿದ್ದರು. ಒಬ್ಬನ ಮುಖ ಥೇಟು ಕೋತಿಮೂತಿಯಾಗಿತ್ತು. ಏನು ಅಂತ ಕೇಳಿದರೆ ಬಾಯಿ ಬಿಡುತ್ತಿಲ್ಲ. ಉಳಿದಿಬ್ಬರು ಬ್ಲ್ಯಾಕ್ ಮೇಲ್ ಮಾಡೋರ ಹಾಗೆ ಮುಸಿಮುಸಿ ಮಾಡ್ತಿದಾರೆ. ಮಿತ್ರ ಸಮ್ಮಿತ, ಕಾಂತಾ ಸಮ್ಮಿತಗಳೆಲ್ಲ ಮುಗಿದು, ಕೊನೆಗೆ ಪ್ರಭುಸಮ್ಮಿತಕ್ಕಿಳಿದು ಗದರಿದ ಮೇಲೆ ಒಬ್ಬ ಬಾಯ್ಬಿಟ್ಟ. ‘ಅವಂಗೆ ವಾಮಿಟ್ ಆಯ್ತು..’

ಅರ್ರೆ! ವಾಮಿಟ್ ಆದ್ರೆ ಮೊದ್ಲು ಹೆಳೋದಲ್ವಾ? ಮುಚ್ಚಿಡೋ ಅಂಥದೇನು? ಮುಟ್ಟು ತಪ್ಪಿದ ಕನ್ಯೆ ಹಾಗೆ? ರೇಗಿ ಬಂತು ನನಗೆ.

ಹಾಗೆ ರೇಗುವುದರೊಳಗೆ ಮತ್ತೊಬ್ಬ ಕಿಸಿದ, ‘ರಸಗುಲ್ಲಾ…’

ನಮ್ಮ ತಲೆಗಳು ಸಾವಿರ ಮೈಲು ವೇಗದಲ್ಲಿ ಓಡಿದವು. ‘ಇವಂಗೆ ವಾಮಿಟ್ ಆಗಿದ್ದು ರಸಗುಲ್ಲದಿಂದಲೇ!’ ಆದರೆ ಪಾಪ ನಾವು, ರಸಗುಲ್ಲದ ಖರಾಬು ಕ್ವಾಲಿಟಿ ವಾಂತಿ ಮಾಡಿಸಿತೇನೋ ಅಂದುಕೊಂಡು, ಅಂಗಡಿಯವನನ್ನ ತರಾಟೆಗೆ ತೆಗೆದುಕೊಳ್ಳಲು ರೆಡಿಯಾದೆವು. ಆ ಹೊತ್ತಿಗೆ ವಾಂತಿಮಹಾಶಯ ಖುದ್ದು ಬಾಯ್ಬಿಟ್ಟ. “ಮೂರು ರುಪಾಯಿಗೊಂದು. ಬೆಲ್ಲದ್ದು ಬೇರೆ. ಬಹಳ ಚೆನ್ನಾಗಿತ್ತು. ಫ್ರೆಶ್ಶು ಬೇರೆ. ಒಟ್ಗೆ ಆರೇಳು ತಿಂದ್ಬಿಟ್ಟೆ. ಅಭ್ಯಾಸವಿಲ್ಲ ನೋಡಿ, ದಾರೀಲಿ ಬರುವಾಗ… ಈಗ ಒಂಥರಾ ಹೊಟ್ಟೆ ತೊಳೆಸ್ತಿದೆ…”

ಅವನ ಹಣೆ ಬರಹಕ್ಕೆ ಹೊಟ್ಟೆ ತುಂಬ ನಕ್ಕ ನಾವು, ನಾವು ಕೂಡ ಅಷ್ಟನ್ನು ತಿಂದು ನೋಡುವ ಶಪಥ ಹೂಡಿ ಹೊರಟೆವು. ಮೂರಕ್ಕೇ ಮಕ್ಕಟ್ಟಿ ಹೋಗಿ, ಅವನ ರೆಕಾರ್ಡನ್ನ ಶಾಶ್ವತಗೊಳಿಸಿದೆವು.

ಹಾಗೆ ಬೆಳಗಿನ ಎಂಟು ಗಂಟೆಯ ಸಮಯದಲ್ಲಿ ರಸಗುಲ್ಲಾ ಜಿಲೇಬಿಗಳನ್ನು ಸತ್ತರೂ ಕರ್ನಾಟಕದ ನೆಲದಲ್ಲಿ ನಿಂತು ತಿನ್ನಲು ಸಾಧ್ಯವೇ ಇಲ್ಲವೇನೋ! ಅಲ್ಲಿನ ಮಾಹೋಲಿಗೆ ಅದು ಹೊಂದುತ್ತದೆ. ಅಷ್ಟು ಮಾತ್ರವಲ್ಲದೆ, ಅಲ್ಲಿ ಸೂರ್ಯ ನಮಗಿಂತ ಮುಂಚೆ ಹುಟ್ಟುತಾನೆ. ನಮಗಿಲ್ಲಿ ಏಳುಗಂಟೆಗೆ ಪೂರ್ತಿ ಬೆಳಗಾದರೆ, ಅಲ್ಲಿ ಆರು ಗಂಟೆಗೇ ಸೂರ್ಯ ಹೊಳೆಯುತ್ತಿರುತಾನೆ.
ಈ ಜಿಯಾಗ್ರಫಿಗೂ ರಸಗುಲ್ಲಾ ತಿಂದಿದ್ದಕ್ಕೂ ಏನಾದರೂ ಲಿಂಕ್ ಇದೆಯಾ ಅಂತ ತಲೆಕೆಡಿಸಿಕೊಳ್ಳೋಕೆ ಹೋಗಬೇಡಿ. ಅಷ್ಟು ಮುಂಚೆ ಹೊಟ್ಟೆಬಿರಿಯ ತಿಂದ ನಮ್ಮನ್ನ ನಾವು, ಅಲ್ಲಿ- ಆ ಹೊತ್ತಲ್ಲಿ ನಿಂತು ಸಮರ್ಥಿಸಿಕೊಂಡಿದ್ದು ಹೀಗೆ!

One thought on “ಪ್ರವಾಸದಲ್ಲಿ ನಮ್ಮ ಕಥನ

Add yours

ನಿಮ್ಮ ಟಿಪ್ಪಣಿ ಬರೆಯಿರಿ

Create a free website or blog at WordPress.com.

Up ↑