ನಂಗೆ ಮಿಂಚುಳ ತುಂಬಾ ಇಷ್ಟ. ಚಿಕ್ಕವಳಿರುವಾಗ ತಮ್ಮನೊಟ್ಟಿಗೆ ಅವನ್ನ ಹಿಡಿದು ಮೈಮೇಲೆ ಬಿಟ್ಟುಕೊಳೋದೊಮ್ದು ಆಟವಾಗಿತ್ತು. ಗೊತ್ತಾ!? ನಮ್ಮ ಸಂಬಂಧಿಕರೊಬ್ಬರ ಮದ್ವೆ ಹಳ್ಳೀಲಾಗಿತ್ತು. ರಾತ್ರಿ ವರಪೂಜೆ ಹೊತ್ತಿಗೆ ಕರೆಂಟ್ ಹೊರ್ಟೋಯ್ತು. ಅಲ್ಲಿ ದೇವಸ್ಥಾನದ ದಬ್ಬೆ ಬೇಲಿ ಉದ್ದಕ್ಕೂ ಗೊಂಚಲುಗೊಂಚಲು ಬೆಳಕು! ಅವು ಮಿಂಚುಹುಳು!! ಆ ನೋಟ ಕಟ್ಟಿಕೊಟ್ಟ ಅನುಭಾವ (ಭಾ- ಸ್ಪೆಲಿಂಗ್ ಮಿಸ್ಟೇಕ್ ಅಲ್ಲ)ವನ್ನ ಮರೆಯೋದು ಹೇಗೆ? ಅದನ್ನ ನೆನೆಸ್ಕೊಂಡ್ರೆ ಈಗ್ಲೂ ಅಷ್ಟೇ ಪ್ರಮಾಣದಲ್ಲಿ ರೋಮಗಳು ಎದ್ದೇಳ್ತವೆ. ಹಾಗೆ ಎದ್ದ ಘಳಿಗೆಯಲ್ಲಿ ಹುಟ್ಟಿದ ಕೆಲವು ಮಿಣುಕುಗಳು……
~1~
ಚಂದ್ರನ ಮೋಹಿಸಿದ
ಹುಳುಗಳು
ಬೆಳಕಿನ ಬಸಿರು ಹೊತ್ತಿವೆ.
~2~
ಜೀವದ ಹಣತೆಗಳು
ಬೆಳಕು ಹೊತ್ತು
ಹಾರಿವೆ
~3~
ಅಗೋ!
ಬೆಳಕಿನ ಹನಿಗೆ
ರೆಕ್ಕೆ ಮೂಡಿದೆ
~4~
ಬೆಂಕಿಯಿಲ್ಲದ
ಬೆಳಕು,
ಬುದ್ಧನಿಗೆ ಖುಷಿಯಾಗಿದೆ.
~5~
ನಕ್ಷತ್ರಗಳಿಗೆ
ಮಣ್ಣ ಮೋಹ,
ಶಾಪಕ್ಕೆ ಹುಳುವಾದವು
~6~
ಕತ್ತಲಲ್ಲಿ
ಸೂರ್ಯನ ಕಣ್ಣೀರು,
ಮೈದಳೆಯಿತು
ಮಿಂಚುಹುಳು.
~7~
ಬೆನ್ನಲ್ಲಿ ಬೆಳಕು,
ಮಿಂಚುಹುಳು
ದಾರಿತಪ್ಪುತ್ತಿದೆ.

ಆತ್ಮೀಯ.
ಚಿಕ್ಕ೦ದಿನಿ೦ದಲೂ ಮಿ೦ಚುಹುಳುಗಲು ಎಲ್ಲರ ಅಚ್ಚರಿಗೆ ಮತ್ತು ಸ೦ತೋಷಕ್ಕೆ ಕಾರಣ. ಕವನ ಅದ್ಭುತವಾಗಿದೆ. ನಿಮ್ಮ ಕವನದ ಸ್ಪೂರ್ತಿಯಿ೦ದ ಒ೦ದಷ್ಟು ಹನಿಗಳು
ಮಿ೦ಚು ಹುಳುಗಳೆ೦ದರೆ
ಮಿ೦ಚು ಕ೦ಗಳ
ಚೆಲುವೆಯ ಕಣ್ಣ೦ಚಿನಿ೦ದ
ಹೊರಟ ಕಿಡಿ
೨
ನಗುವ ಕ೦ದನ
ನಗೆಯ ಸ೦ಚಿನ
ಹೊಳಪಿನ ಧಾರೆ
೩
ಅದು ನಾನಾಗಿದ್ದರೆ
ಎ೦ಬ ಆಸೆಯ
ಉಸಿರ ಹೊತ್ತ ಅಸೂಯೆ
೪
ಕತ್ತಲಲಿ ಹಸಿರೆಲೆಯ
ತೋರುವ ಚ೦ದದ
ಪುಟ್ಟ ಕಾಲ್ದೀಪ
೫
ಸೂರ್ಯನೆಳೆ ಕಿರಣಕೆ
ಫಳಗುಡುವ ಹನಿಯ
ನು೦ಗಿದ ನೀಲಮಣಿ
೬
ಸುಮ್ಮನೆ ಕೂತ
ಮನಸಿಗೆ ಮುತ್ತಿಟ್ಟು
ಹಗುರಾಗಿಸುವ ಪ್ರಿಯೆ
ನಿಮ್ಮವ
ಹರೀಶ್ ಆತ್ರೇಯ
superb
Wow very lovely
ಬೆಂಕಿಯಿಲ್ಲದ ಬೆಳಕು….superb!!!!!!
🙂
malathi S
chethna its awesome !!
ಎಲ್ಲಾ ಬರಹಗಳನ್ನು ಓದುತ್ತಿದ್ದೆ. ಕಾಮೆಂಟ್ ಹಾಕದೇ ಪರಾರಿಯಾಗಲು ಈ ಕವಿತೆ ಬಿಡಲಿಲ್ಲ. ಸೂಪರ್ ಎಂಬ ಪದಕ್ಕಿಂತ ಮಹತ್ವದ ಪದ ನನಗೆ ಗೊತ್ತಿಲ್ಲ.