ಅಪ್ಪನ ಮುಖ


‘ಮಗೂ ಶ್ವೇತಕೇತೂ’
ಅಪ್ಪನ ಪ್ರಶ್ನೆಗೆ ಮಗನ ಮೌನ
ಲೋಟದಲ್ಲಿ ನೀರು
ನೀರಲ್ಲಿ ಉಪ್ಪು
ಕರಗಿ, ತಿಳಿವು ಮೂಡಿ
ಹರಿಯಿತು ಬೆಪ್ಪು
 
ಕಾಲಗಟ್ಟಲೆ ಕುಂತು
ಕಲಿಯಲಾಗದ ಪಾಠಕೆ
ಕಳಿಸಿದನೇಕೋ ತಂದೆ?
ಕಲಿತು ಬಂದ ಗರ್ವ
ಮುರಿದನೇಕೋ ತಂದೆ?
 
ಅಪ್ಪಂದಿರ ಹಿರಿಮೆಯಿದು
ಬಹುಶಃ
ಕಳಿಸುವುದು
ಕೆದಕುವುದು
ಕಲಿಸುವುದು
~
‘ಹೊಸ ನೀರಿಗೆ
ಹೊಸ ಮಣ್ಣಿಗೆ
ಕಳಿತ ರುಚಿ ಬೇರೆ’
ಮರೆತವರ ಮಾತು-
ಇಂದಿನ ಹಣ್ಣು
ಹಿಂದಿನ ಹಣ್ಣಿಗಿಂತ ಕಳಪೆ!
 
ಬೇವು ಸಸಿಗೆ ಕಸಿಕಟ್ಟಿ
ಕಹಿ ತೆಗೆವ ಕಾಲವಿದು
ಹಾಡುತಿರುವರು ಇನ್ನೂ
ಬೇವಿನ ಬೀಜವ ಬಿತ್ತಿ…
ಬಿತ್ತಿದರೇನು,
ಕಟ್ಟಬಾರದೆ ಬೆಲ್ಲದ ಕಟ್ಟೆ?
ಸವಿಯಾಗಬಾರದೆ ಬಾಳು?

ಅವರಿಗದೇ ಆತ್ಮರತಿ
ತಮ್ಮ ಕಾಲದ ಚಂದ
ತಮ್ಮ ತಿಳಿವಿನ ಹೆಮ್ಮೆ
ಗರಿಗಟ್ಟಿ ನೆಲಬಿಟ್ಟು
ಬಡಾಯಿ ಬಾನಲ್ಲಿ
ರೆಕ್ಕೆಯುದುರಿದ ಹಕ್ಕಿ
~
ಸವಿಯಬೇಕು ಅಪ್ಪ
ಹಿರಿತನದ ಹಿರಿಮೆ
ಅದಕೆಂದೇ
ಕಳಿಸುವನು
ಕೆದಕುವನು
ಕಲಿಸುತಲೇ ಇರುವನು
ಬೇವ ಕಹಿ ತೆಗೆವೆನಂದರೆ
‘ರೂಢಿ ಕೆಡಿಸುವ ಕೇಡಿ’ ಅನುವನು
ಒಂದಾನೊಂದು ಕಾಲಕಂಟಿ
ಹೊಸ ಸುಖವ ಹೊಸಕುವನು

ಎಂದೆಲ್ಲ ಪಿಟಿಗುಡುವಾಗ
ನೀರು ಹರಿದು ಐವತ್ತು ಮಳೆಗಾಲ,
ಕನ್ನಡಿಯ ಬಿಂಬಕ್ಕೆ ಅಪ್ಪನ ಮುಖ.

5 thoughts on “ಅಪ್ಪನ ಮುಖ

Add yours

  1. ಶ್ವೇತಕೇತು ಕಂಡ ಸತ್ಯದ ಮುಖ ನಮ್ಮೊಳಗೆ ಇಳಿಯುವಂತೆ ಪದ್ಯ ಇದೆ. reference ಇಲ್ಲದೇ ಬರೆದ ಪದ್ಯಗಳಿಗೂ ಇಂಥ ಪದ್ಯಗಳಿಗೂ ಇರುವ ವ್ಯತ್ಯಾಸ ಅಗಾಧ. ಹಬ್ಬದ ಶುಭಾಷಯ.

ನಿಮ್ಮ ಟಿಪ್ಪಣಿ ಬರೆಯಿರಿ

Blog at WordPress.com.

Up ↑