ಕರ್ಮಕಾಂಡ!
ತಡ್ಕೊಳಾಗ್ತಿಲ್ಲ.
ಟೀವಿ ನೋಡದ ನಾನೇ ಹೀಗೆ ತಲೆಚಚ್ಕೊಳ್ತಿರುವಾಗ, ಬಿಟ್ಟೂಬಿಡದ ಹಾಗೆ ಅದರ ಮುಂದೆ ಕೂತಿರೋ ಮಂದಿ ಹೆಂಗಾಗಿರಬೇಡ!?
ಹಾಗಂತ ನೋಡದೆ ಇರೋಕೂ ಸಾಧ್ಯವಿಲ್ಲ. ಇದೊಂದು ಥ್ರಿಲ್ಲರ್ ಕಿಲ್ಲರ್ ಸಿನೆಮಾ!
ಅಲ್ಲಿ ಯಾರಾದರೊಬ್ಬರು ವಾರದ ಇಪ್ಪತ್ನಾಲ್ಕೂ ಗಂಟೆ ‘ಗಳ’ ಹಿಡಿಯುವವರು ‘ಸರ್ಕಾರ ಉರುಳತ್ತಾ ಉಳಿಯತ್ತಾ? ವೀಕ್ಷಕರೇ ಕಾದು ನೋಡಿ…’ ಅನ್ನುತ್ತ ಕಾವಲಿಯ ಮೇಲೆ ಕೂರಿಸುತ್ತಿದ್ದರೆ, ಇಲ್ಲಿ ಕುಂತವರು ಅಂಡು ಸುಟ್ಟ ಬೆಕ್ಕಿನ ಥರ ಚಡಪಡಚಡಪಡ!!
~
ಯ್ಯೀಕ್ಸ್! ಇದು ಪಾಲಿಟಿಕ್ಸ್!!
ನಮಗೆ ನಾವೇ ಉಗಿದುಕೊಳ್ಬೇಕು. ನಮಗೆ ನಿಜ್ಜ ಇವರನ್ನೆಲ್ಲ ಬಯ್ಯೋ ಅಧಿಕಾರವೇ ಇಲ್ಲ. ಒಬ್ಬ ಸಾದಾಸೀದಾ ಕಳಕಳಿಯ ಮನುಷ್ಯನೊಬ್ಬ ಎಲೆಕ್ಷನ್ನಿಗೆ ನಿಂತ್ರೆ ಗೆಲ್ಲಿಸ್ತೀವಾ ನಾವು? ಅಂಥಾ ಶಿವರಾಮ ಕಾರಂತರನ್ನೇ ಸೋಲಿಸಿದ ಭೂಪರು! ನಮಗೆ ರೋಚಕವಾಗಿರುವ ರಸಿಕ ಶಿಖಾಮಣಿಗಳೇ ಬೇಕು!!
ಅಂದಹಾಗೆ, ನಂಗೆ ಹೀಗೆಲ್ಲ ಬಯ್ಕೊಳೋ ಅಧಿಕಾರವೂ ಇಲ್ಲ. ಯಾಕಂದ್ರೆ, ನಾನು ಈ ಸರ್ತಿ ವೋಟ್ ಹಾಕ್ಲಿಲ್ಲ. ಕಾರ್ಡ್ ಇರ್ಲಿಲ್ಲ ಅನ್ನೋದು ನೆವ. (ಮೊನ್ನೆ ಗ್ರಾ.ಪಂ.ಎಲೆಕ್ಷನ್ನಿಗೆ ಓಟು ಹಾಕಿಬರೋ ಮೂಲಕ ಪ್ರಾಯಶ್ಚಿತ್ತ ಮಾಡ್ಕೊಂಡೆ).
~
ಈಗ ಈ ಡ್ರಾಮಾ ಶುರುವಾಗಿದ್ದರ ಹಿನ್ನೆಲೆ ಏನು?
ಅದು ನಮ್ಮ ಮನೆ ಪಾಪಚ್ಚಿಗೂ ಗೊತ್ತಿರತ್ತೆ ಬಿಡಿ.
ಆದ್ರೆ ನಂಗೆ ಬೇಜಾರಂದ್ರೆ, ಶೋಭಾ ಅನ್ನುವ ಹೆಣ್ಣುಮಗಳು ಅಧಿಕಾರ ಹಿಡಿದಾಗೆಲ್ಲ ಈ ಜನ ಹೀಗೆ ದೊಂಬಿ ಎಬ್ಬಿಸ್ತಾರಲ್ಲ ಅನ್ನೋದು.
ಆಕೆ ಇಂಧನ ಖಾತೆ ವಹಿಸ್ಕೊಂಡ ಕೂಡಲೇ ಚಕಚಕ ಕೆಲಸ ಶುರುವಿಟ್ಟು ಓಡಾಡಿಕೊಂಡರು. ದಿನಾ ಪತ್ರಿಕೆ ಓದೋ ಅಭ್ಯಾಸ (ನಮ್ ಪೇಪರ್ರು ಅಂತಲೇ ಇಟ್ಕೊಳಿ!!) ಇರೋರ್ಗೆಲ್ಲ ಒಂದು ಚಿಕ್ಕ ಪಟ್ಟಿಯಾದ್ರೂ ಸಿಗತ್ತೆ. ಆಕೆಯ ಕೆಲಸದ ಕಾಳಜಿಯ ಝಲಕ್ ಕಾಣುತ್ತೆ. ಇಂಥವ್ರು ಈ ಸುಡುಗಾಡು ಪೊಲಿಟಿರಾಜ್‌ನಲ್ಲಿ ಒಣಗಿ ಹೋಗ್ತಾರಲ್ಲ ಅಂತ.
ಇನ್ನು, ಧೃತರಾಷ್ಟ್ರನ ಹಾಗೆ ಖುರ್ಚಿ ಮೋಹ ತೋರ್ತಿರುವ ಯಡ್ಯೂರಪ್ಪನವರ ಬಗ್ಗೆ ಹೇಳೋದೇನಿದೆ? (ಬಹಳ ಜನ ದೇವೇಗೌಡರನ್ನ ಧೃತರಾಷ್ಟ್ರ ಅಂತಾರಪ್ಪ. ಇರಲಿ. ಮತ್ತೆ ಮು.ಮಂ. ಪಟ್ಟದ ಜತೆ ದೃತರಾಷ್ಟ್ರ ಪಟ್ಟಕ್ಕೂ ಇವರ ಪೈಪೋಟಿ ಶುರುವಾದೀತು).
ಇನ್ನು ಈ ಗಣಿಧಣಿ ಗಣಿಧಣಿ ಅಂತಾರಲ್ಲ…. ಅಂದಹಾಗೆ ಈ ಪ್ರಾಸ ಚೆನಾಗಿದೆ. ಮೊದಲು ಇದನ್ನ ಚಾಲ್ತಿಗೆ ತಂದವರು ಯಾರೋ ಅಂತ ಕುತೂಹಲ. ಈ ಮನುಷ್ಯರ ದುಡ್ಡಿನ ಮದ ವಾಕರಿಕೆ ತರಿಸುತ್ತೆ. ಜತೆಗೇ ವಾಕರಿಕೆ ತರಿಸೋ ಮತ್ತೊಂದು ವಿಷಯ… ಈ ಅಪಸವ್ಯಗಳನ್ನೆಲ್ಲ ಮುಗಿಬಿದ್ದು ಸೆರೆಹಿಡಿದು ನೇರ ಪ್ರಸಾರ ಮಾಡೋದು. ಈ ಮಹರಾಯರು ಇಂಥ ಅಸಹನೆ ಹುಟ್ಟುಹಾಕದಿದ್ರೆ, ಜನ ಯಾವತ್ತೂ ರಾಜಕಾರಣದ ಬಗ್ಗೆ ತಲೆಕೆಡಿಸ್ಕೊಳೋದಿಲ್ಲ. ಈ ರಗಳೆಗಳನ್ನೆಲ್ಲ ನೋಡಿ ಜನಕ್ಕೆ ಜ್ಞಾನೋದಯವಾಗಿ ಹುಷಾರಿಯಿಂದ ಮುಂದಿನ ಪ್ರತಿನಿಧಿಯನ್ನ ಚುನಾಯಿಸ್ತಾರೆ ಅಂತ ನಂಬೋಕಾಗತ್ತಾ? ಅಂಥ ನಂಬಿಕೆ ಯಾ ಅಜೆಂಡಾ ಈ ಮಂದಿಗಿದೆಯಾ?
ಈ ಕುದುರೆ ಜೂಜಿನಲ್ಲಿ (ಇದು ಕ್ಲೀಷಾತ್ಮಕ ಪ್ರಯೋಗ!) ರಾ.ಕಾ.ಗಳಿಗೆ ಆಗುವ ಲಾಭದ ಎರಡಂಶವಾದರೂ ಇವರಿಗೆ ಆಗದೆ ಇರುತ್ತಾ!?
ಸರ್ಕಾರಾನೂ ಸರಿ… ಯಾವ್ಯಾವಾಗ್ಲೋ ಪವರ್ ಕಟ್ ಮಾಡತ್ತೆ… ಇಂಥ ನೇರಪ್ರಸಾರಗಳ ಟೈಮಲ್ಲಾದ್ರೂ ಮಾಡಬಾರದಾ?
~
ಅದ್ಯಾರು ಬೀಜೇಪಿಗೆ ಶಿಸ್ತಿನಪಕ್ಷ ಅಂತ ಅದ್ಯಾವ ಹೊತ್ತಲ್ಲಿ ಹೆಸರಿಟ್ಟರೋ? ಯಾವತ್ತೂ ಕಾಣದ ಹೈ ಡ್ರಾಮಾಗಳು ನಡೆದುಹೋಗ್ತಿವೆ. ಗೊಳೋ ಅಳುವ, ಆಣೆ ಭಾಷೆ, ಹೋಮ ಹವನಗಳಲ್ಲೇ ನೆಮ್ಮದಿ ಕಾಣುವ ಮುಖ್ಯಮಂತ್ರಿಯನ್ನ ಒಪ್ಕೊಳೋಕೇ ಬೇಸರವಾಗತ್ತೆ.
ಅವರ ಕಾಲೆಳೆಯಲು ಸಜ್ಜು ನಿಂತ ಜನರೇನೂ ಕಡಿಮೆ ಸಾಚಾಗಳ ಹಾಗೆ ಕಾಣೋದಿಲ್ಲ. ಬಹುಶಃ ಅಂಕಿಅಂಶ ತೋರಿಸದೆ ಇಂತಹ ಮಾತು ಬೇಜವಾಬ್ದಾರಿತನದ ಹೇಳಿಕೆಯಾಗುತ್ತೇನೋ? ಆದರೂನು, ದಿನಗಟ್ಟಲೆ ಹೈಫೈ ರೆಸಾರ್ಟಿನಲ್ಲಿ ದಾಳ ಉರುಳಿಸುತ್ತ ಕುಂತಿರುವ ಇವರಿಗೆ ಸಭ್ಯಮಾರ್ಗದ ದುಡಿಮೆಯಿಂದಲಂತೂ ಹಣ ಒದಗಲಾರದು ಅನ್ನುವುದು ಬಚ್ಚಾ ಬಚ್ಚಾಗಳಿಗೂ ಗೊತ್ತಾಗುವ ವಿಚಾರ. ನಾನೂ ಸರಿ. ಎಲ್ಲಾ ಬಿಟ್ಟು ರಾಜಕಾರಣಿಗಳ ದುಡ್ಡಿನ ಮೂಲ ಕೇಳ್ತಾರೇನು?
~
ಕೊನೆಯದಾಗಿ…
ಬಿಡಿ… ಇಂಥ ರಾಜಕಾರಣ ಎಲ್ಲ ಕಡೆ ಇದೆ. ಅಥವಾ ಎಲ್ಲ ಕಡೆ ನಡೆಯೋ ಹೇರಾಫೇರಿ/ಕಾಲೆಳೆತಗಳನ್ನ ರಾಜಕಾರಣ ಅನ್ನಲಾಗುತ್ತದೆ.
ಆಫೀಸಲ್ಲಿ ಕಲೀಗು ಮತ್ತೊಬ್ಬರನ್ನ ಹಗೂರ ಮುಗಿಸುತ್ತಾನೆ, ನಗುನಗುತ್ತಲೇ.
ಮನೆಯಲ್ಲಿ, ಮನೆತನದಲ್ಲಿ ಒಬ್ಬರು ಮತ್ತೊಬ್ಬರನ್ನು ಗೆದ್ದಲಿನ ಹಾಗೆ ಆವರಿಸಿ ಕಬ್ಜಾ ಮಾಡ್ತಾರೆ.
ಅಕಾಡೆಮಿ ಸರ್ಕಲ್ಲುಗಳಲ್ಲಿ, ಸಾಹಿತ್ಯ ಅಂಗಳದಲ್ಲೆಲ್ಲ ಜಾತಿ, ಬಣ್ಣ, ಊರು ಕೇರಿಗಳ ಹೆಸರಲ್ಲಿ ಕೆಸರೆರಚಾಟ ನಡೆಯುತ್ತೆ. ಕೆಲವರು ಅದಕ್ಕೆ ಆಸ್ಪದ ಕೊಡುವುದು ನಿಜ. ಬೆಟ್ಟು ಮಾಡುವವರೂ ಅದೇ ದಾರಿಯ ಪಥಿಕರೇ ಅನ್ನೋದೂ ನಿಜ.
ಅನಿಸುತ್ತೆ…
ನಮ್ಮೊಳಗೊಬ್ಬ ಯಾರೂ ಬೆಂಬಲಕ್ಕಿಲ್ಲದ ಯಡ್ಯೂರಪ್ಪ, ಯಾರನ್ನೋ ಮುಗಿಸುವ ಹುನ್ನಾರದ ಭಿನ್ನಮತೀಯರು, ಕೆಲಸದ ತುಡಿತದ ಶೋಭಾ, ಲಾಭ ಲೆಕ್ಕಾಚಾರದ ಧಣಿಗಳು ಎಲ್ಲರೂ ಇದ್ದಾರೆ…
ಪುಣ್ಯ ಅಂದರೆ,
ನಮ್ಮೊಳಗಿನ ಈ ರಾಜಕಾರಣದ ನೇರ ಪ್ರಸಾರ ಮಾಡಲಿಕ್ಕೆ ಯಾರಿಗೂನು ಸಾಧ್ಯವಾಗೋದಿಲ್ಲ ಅನ್ನೋದು!!

chethana you are right kanri…….
ಬೆಳ್ಳಂಬೆಳಗ್ಗೆ ಮನೆಯಂಗಳದಿ ಬಿದ್ದ ದಿನಪತ್ರಿಕೆಯಿಂದ ಹಿಡಿದು ಟೀವಿ ಯಲ್ಲಿನ “ಬ್ರೆಕಿಂಗ್ nuisance” ತನಕ ತರಾವರಿ ಸರ್ಕಸ್ಸು ನೋಡಿ ಬೇಸ್ತು ಬಿದ್ದಿದ್ದೀರಾ ಚೇತನ. ನಾವಿಷ್ಟು ಮಾಡಬಹುದು, ಸುದ್ದಿ ಎಲ್ಲಾ ಓದಿದ, ನೋಡಿದ ಮೇಲೆ ಬಚ್ಚಲಿಗೆ ಹೋಗಿ ಹಲ್ಲುಜ್ಜುತ್ತಾ ಕ್ಯಾಕರಿಸಿ ಕ್ಯಾಕರಿಸಿ ಉಗೀಬೋದು “ಸಿಂಕ್” ತುಂಬಾ. ಅಬ್ದುಲ್
chennagi helidri,
aadre jana (nannannuu serisi) bega maretubbidtare… 😦
>> ನಮ್ಮೊಳಗಿನ ಈ ರಾಜಕಾರಣದ ನೇರ ಪ್ರಸಾರ ಮಾಡಲಿಕ್ಕೆ ಯಾರಿಗೂನು ಸಾಧ್ಯವಾಗೋದಿಲ್ಲ ಅನ್ನೋದು!!
ಹು ನೇರ ಪ್ರಸಾರ ಬಹುಶಃ ಸಾಧ್ಯವಿಲ್ಲ ಆದರೆ ಇದರ ದಾಖಲೀಕೃತ ಪ್ರಸಾರ ನಮ್ಮ ಸಾಹಿತ್ಯದಲ್ಲಿ ಯಾವ ಕಾಲದಿಂದಲೋ ನಡೆಯುತ್ತಾ ಬಂದಿದೆಯಲ್ಲ…
ನನಗನ್ನಿಸುತ್ತೆ ಅದು ಗಳ ಹಿಡಿಯೋದು ಅಲ್ಲ ಗಳ ಹಿರಿಯೋದು. ಅಂದ್ರೆ ಚಟ್ಟ ಕಟ್ಟಕ್ಕೆ ಗಳ ಭಾಗ ಮಾಡ್ತಾರಲ್ಲ ಅದು … ಅಲ್ವಾ?
ಹೌದು ಅವಿನಾಶ್, ‘ಹಿರಿಯೋದು’ ಸರಿ. ಥ್ಯಾಂಕ್ಸ್
ಹಿರಿಯೋದು anta tiddi matte. tappu hange bidbardu.
ನಮ್ಮ ಮನೆ ಮನ ಗುಡಿಸುವ ಕೈಂಕರ್ಯ ಮೊದಲು ನಡೆಸೋಣ. ಚಕ್ರವರ್ತಿ ಸೂಲಿಬೆಲೆ “ಜಾಗೋ ಭಾರತ”ದಲ್ಲಿ ಹೇಳಿದ್ರು, ಮನೆ ಯಜಮಾನ ಅಕ್ರಮ ಸಂಪಾದನೆ ಮಾಡಿದ ದಿನ ಮನೆ ಹೆಣ್ಣು ಮಗಳು ಅಡಿಗೆ ಮಾಡಬಾರದು. ಹೌದು! ಚಳುವಳಿ, ಸತ್ಯಾಗ್ರಹ ಅಲ್ಲಿ ಶುರುವಾಗಲಿ. ಆಗ ತನ್ನಿಂತಾನೆ ಹೆಚ್ಚು ಕಾರಂತರು ಚುನಾವಣೆ ಗೆಲ್ಲುತ್ತಾರೆ. ಬದಲಾವಣೆ ತಳ ಮಟ್ಟದಲ್ಲಿ ನಡೆದು, ಊರ್ಧ್ವ ಮುಖಿಯಾಗಬೇಕು. ಬದಲಾವಣೆ ಯಾವತ್ತೂ ಮಂದ ಮತ್ತು ಸಹಜ. ಕಾಯೋಣ. ಕಟ್ಟುವೆನು ನಾವು……….