ಟೆರೇಸಿನ ಮೇಲೆ ಒಣಹಾಕಿದ ಹಪ್ಪಳದ ವಾಸನೆಯಂತೆ ಬಿಸಿಲು. ಏನೋ ಒಥರಾ ಮಂಕು ಕವಿದ ಹಾಗೆ. ಆ ಭಾದ್ರಪದವೇ ಹಾಗಿತ್ತು. ಕೊನೆಯದರ್ಧ, ಶೂನ್ಯಮಾಸ. ಮುಗಿದ ಮಳೆ, ಶುರುವಾಗದ ಚಳಿ, ಒಳ್ಳೆ ಕೆಲಸಕ್ಕೆಲ್ಲ ಅಜ್ಜ-ಅಜ್ಜಿಯರ ಕತ್ತರಿ. ಚರ್ಮ ಬೇರೆ ಬೇಸಿಗೆಯೇನೋ ಅಂತೆಲ್ಲ ಗಲಿಬಿಲಿಯಾಗಿ ಒಡೆದುಕುಂತಿತ್ತು. ಹಾವಿನ ಚರ್ಮದ ಹಾಗೆ. ಮುಟ್ಟಿದರೆ ಹೊಟ್ಟೇಳುತ್ತಿದ್ದ ಮೈಯನ್ನ ನೋಡಿ ಚಿತ್ತಿ ವಾಚಾಮಗೋಚರ ಬಯ್ದಿದ್ದಳು.
ಬಹಳ ಕಾವ್ಯಾತ್ಮಕವಾಗಿ ಬಯ್ತಾಳೆ ಚಿತ್ರಾ. ನನ್ನ, ‘ಶಕುಂತಲೆ ಹಾಗೆ ಕುಂತಿದೀಯಲ್ಲೆ, ನಿನ್ ಉಂಗುರ ಮೀನು ನುಂಗಿಲ್ಲ, ಯಾವ್ದೋ ದೊಡ್ಡ ತಿಮಿಂಗಿಲವೇ ಎತ್ತಾಕಿಕೊಂಡು ಹೋಗಿದೆ!’ ಅಂದು ನಗಿಸಿದಳು. ಆದರೆ ನನ್ನೊಳಗೆ ಮತ್ತೂ ಗಾಬರಿ. ಅಂವ ದಷ್ಯಂತನ ಹಾಗೆ ನನ್ನ ಮರೆತು ಹೋದ್ರೆ!? ಹೊಟ್ಟೇಲಿ ಮಗುವೂ ಇಲ್ಲ, ಡಿಎನ್‌ಎ ಪರೀಕ್ಷೆಯಾದರೂ ಮಾಡಿಸಲಿಕ್ಕೆ!
ಆದರೆ, ನಿಜಕ್ಕೆ ನನ್ನ ದುಮ್ಮಾನ ಉಂಗುರ ಕಳೆದುಹೋಗಿದ್ದಕ್ಕಲ್ಲ. ದೂರ ದೇಶಕ್ಕೆ ಹೋದ ಮಹರಾಯ ಫೋನ್ ಮಾಡುತ್ತಿಲ್ಲ ಅನ್ನೋದಾಗಿತ್ತು. ನನಗೆ ಇದು ಓದಿನ ಕೊನೆಯ ವರ್ಷ. ಏನೆಲ್ಲಾ ಪ್ಲ್ಯಾನ್ ಇದೆ. ತಿಂಗಳಾದರೆ ಕ್ಯಾಂಪಸ್ ಸೆಲೆಕ್ಷನ್ನಿಗೆ ಬರ್ತಾರೆ. ಅದಕ್ಕೆ ಬೇರೆ ತಯಾರಿ ಮಾಡ್ಕೋಬೇಕು… ಛಿ! ಅವನೆಥ ಹಾಳು ಹುಡುಗ!?
~
ಅವತ್ತಿನ ಸುಡು ಮೂಡನ್ನ ನೆನೆಸಿಕೊಳ್ತ ಕುಳಿತಿದ್ದಾಗ ಇಲ್ಲಿ ಹುಡುಗರಿಬ್ಬರ ಹಾಡು. ಮನೆಗೆ ಬಂದಾಗಲೇ ಈ ಎಲ್ಲ ಬಣ್ಣಗಳನ್ನ ಕಾಣಲು ಸಧ್ಯ. ಅಲ್ಲೂ- ಹಾಸ್ಟೆಲಿನಲ್ಲೂ ನಿತ್ಯ ಹೋಳಿಯೇ. ಆದರೆ ಬಣ್ಣಗಳೆಲ್ಲ ಈಗ ಕುಂತಿದ್ದು ಮರೆಯಾಗುವ ಚಿಟ್ಟೆಯ ರೆಕ್ಕೆಗಳಂಥವು.
ಇಲ್ಲಿ, ಹುಡುಗರಿಬ್ಬರ ಕೈಲಿ ಬಣ್ಣದ ಕೋಲು, ಅದಕ್ಕೆ ಕುಚ್ಚು. ರಾಗವಾಗಿ ಹೇಳ್ತಿರುವ ಪದ್ಯ ಅದೇ… ‘ಅಶ್ವಯುಜ ಶುದಧ ಮಾನವಮಿ ಬರಲೆಂದು… ಲೇಸಾಗಿ ಹರಸಿದೆವು ಬಾಲಕರು ಬಂದು… ನಾರಾಯಣಾ ನಮೋ…’
ಹುಣಸೆ ಬೀಜದಗಲದ ಹಲ್ಲು ಬಿಟ್ಟುಕೊಂಡು, ಕಪ್ಪು ದಾರದ ಉಡಿದಾರದಲ್ಲಿ ಚಡ್ಡಿಯನ್ನ ಬಿಗಿ ಮಾಡಿಕೊಂಡು ಚೂರು ಸೊರಗುಟ್ಟುತ್ತ ಹಾಡ್ತಿರುವ ಮಕ್ಕಳು ಮುದ್ದು ಉಕ್ಕಿಸ್ತಿದ್ದರು. ಅಮ್ಮ ವರನ್ನ ಕರೆದು ತಿಂಡಿ, ದಕ್ಷಿಣೆ ಕೊಟ್ಟಳು. ನನ್ನ ರೇಜಿಗೆಗೆ ಅವಳ ಮೇಲೆ ರೇಗಾಡಿಕೊಂಡು ಟೆರೇಸಿಗೆ ಹೋಗಿದ್ದೆ ನಾನು. ಹುಡುಗರನ್ನ ಮಾತಾಡಿಸ್ವಾಗ ನನ್ನೇ ನೋಡ್ತಿದ್ದಳು. ಸಿಟ್ೀನ ಚರಟ ಹುಡುಕುತ್ತಿದ್ದಳಾ?
ಹುಡುಗರ ಹಾರೈಕೆ ಬೆನ್ನಿಗೇ ಅವರ ಮನೆಯಿಂದ ಫೋನು. ದಸರೆಯ ದಿನ ನಿಶ್ಚಿತಾರ್ಥ! ನನ್ನ ಕಸಿವಿಸಿಯೆಲ್ಲ ಒಟ್ಟಿಗೇ, ‘ನಾರಾಯಣಾ…. ನಮೋ ನಾರಾಯಣಾ!!’
(ಇದು ಏನು ಅಂತ ಸದ್ಯದಲ್ಲೇ ಹೇಳ್ತೀನಿ )

ಅದೇನಂತ ಬೇಗ ಹೇಳಿ!!
🙂
ಎಮ್ ಎಸ್
ಏನು ಅರ್ಥ ಆಗ್ಲಿಲ್ಲ ……..
ಹೊಟ್ಟೇಲಿ ಮಗುವೂ ಇಲ್ಲ, ಡಿಎನ್‌ಎ ಪರೀಕ್ಷೆಯಾದರೂ ಮಾಡಿಸಲಿಕ್ಕೆ……ತುಂಬಾ ಸೆನ್ಸಿಬಲ್ ಲೈನ್. ಇಷ್ಟವಾಯ್ತು…
ಟೆರೇಸಿನ ಮೇಲೆ ಒಣಹಾಕಿದ ಹಪ್ಪಳದ ವಾಸನೆಯಂತೆ ಬಿಸಿಲು!! ವಾವ್. ಅದ್ಭುತವಾಗಿದೆ ಸಾಲುಗಳು.
ಆಶ್ವಯುಜ ಶುದ್ದ ಮಾನವಮಿ ಬರಲೆಂದು …..ನನ್ನ ಆರನೆಯ ತರಗತಿಯನ್ನು ನೆನಪಿಗೆ ತಂದಿತು. ಧನ್ಯವಾದಗಳು .
ಕರುಣಾಕರ, ಹೋಬರ್ಟ್, ಆಸ್ಟ್ರೇಲಿಯಾ