ಹೇಳಲಿಕ್ಕೆ ಬಹಳವೇನಿಲ್ಲ. ಕೇಳುವುದರಲ್ಲಿ ಕಳೆದುಹೋಗಿದೇನೆ. ರಾಧೆ ಹಿಂದೆ ಬಿದ್ದಿದ್ದೆ. ಗೆಳತಿ ಬಯ್ಯುವುದೊಂದು ಬಾಕಿ. ತಪ್ಪು ನನ್ನದಲ್ಲ.ಜಯದೇವನ ಗೀತ ಗೋವಿಂದ ಓದಬಾರದಿತ್ತು. ಚಂಡೀದಾಸನ ಕವಿತಗಳನ್ನಾದರೂ ಯಾಕೆ ಓದಬೇಕಿತ್ತು? ಸಾಲದ್ದಕ್ಕೆ ವಿದ್ಯಾಪತಿ ಬೇರೆ ಜತೆಗೆ. ಈ ಎಲ್ಲದರ ನಡುವೆ ಕನ್ನಡದ ಕಾಡುವ ಕೃಷ್ಣರು…
ಭಾಗವತದಲ್ಲಿ ರಾಧೆಯಿಲ್ಲ. ಅದ್ವೈತವಾದಕ್ಕೆ ಇಲ್ಲೊಂದು ಪಾಯಿಂಟ್ ಇದೆ. ರಾಧೆ ಇಲ್ಲದಲ್ಲಿ ಕೃಷ್ಣನೂ ಇಲ್ಲ. ಸೋ, ಅಲ್ಲಿ ಬ್ರಹ್ಮತತ್ತ್ವವೋ ಪರಮ ಸತ್ಯವೋ ಇದೆ ಹೊರತು ಅದು ಕೃಷ್ಣ ಕಥೆಯೇನಲ್ಲ. ರಾಧೆ ಇಲ್ಲದಲ್ಲಿ ಕೃಷ್ಣ ಇರೋದಾದ್ರೂ ಹೇಗೆ? ಇಷ್ಟಕ್ಕೂ ಹಾಗೊಬ್ಬಳು ಇದ್ದಿರಲಿಕ್ಕೇ ಬೇಕು ಅನ್ನುವ ಜಿದ್ದಾದರೂ ಯಾತಕ್ಕೆ? ಆದರೂ ಬೇಕನ್ನುವ ಹುಚ್ಚಿನಲ್ಲಿ ಹುಡುಕಿದ್ದೇ ಬಂತು. ಬ್ರಹ್ಮವೈವರ್ತ ಪುರಾಣದಲ್ಲಿ ಅವಳು ಪೂರ್ತಿಯಾಗಿ ಇದ್ದಳು. ರಾಧೆಯನ್ನು ರುಚಿಯಾಗಿ ಬರೆದಿಟ್ಟ ಮಹರಾಯ ಜಯದೇವ, ಕೃಷ್ಣನ್ನ ಎಷ್ಟು ಜೀವಪೂರ್ಣ ತೆರೆದಿಟ್ಟ! ಹಾಗೆ ಹುಡುಕಿಕೊಂಡ ರಾಧೆ ಮತ್ತವಳ ಕೃಷ್ಣ ಎಷ್ಟೆಲ್ಲ ಬೇರೆಯಾಗಿದ್ದರು!
ಮತ್ತೆ ಮುನ್ಶಿಯ ಸರಣಿ ಪುಸ್ತಕ ಶುರುವಿನಿಂದ. ತಿರುವಿ ಹಾಕಿದ್ದು ಚೈತನ್ಯರ ಪಾಠಗಳನ್ನ. ಕಾಲಕ್ಕೆ ತಕ್ಕ ಹಾಗೆ ರಾಧೆ, ಕಾಲಕ್ಕೆ ತಕ್ಕಂತೆ ಕೃಷ್ಣ. ಬಹುಶಃ ಒಳಗಿನ ಉರಿ ಕಡಿಮೆಯಾಗಿರಬೇಕು. ಅಥವಾ ಬೂದಿಯೂ ತಣ್ಣಗಾಗಿರಬೇಕು. ಅಥವಾ ಅವನ ಪ್ರೀತಿಯ ನಿಜ ಗೊತ್ತಾಗಿ….
ಯಾವುದೂ ಇದ್ದ ಹಾಗೇ ಉಳಿಯೋದಿಲ್ಲ. ಹಾಗಾಗಲಿಕ್ಕೆ ಕಾಲ ನಿಲ್ಲಬೇಕು. ಅದೇನು ಕಂಬವಾ!?
ಕೊಟ್ಟೆಯಲ್ಲಿಟ್ಟ ಒಂದೇ ಗುಲಾಬಿ ಸಸಿ ಕೆಂಪಾಗೋದು, ಚಿಗುರಿ ಸೊರಗೋದು ನಿಚ್ಚಳ ಕಾಣುತ್ತೆ. ನಮ್ಮೊಳಗಿನ ಭಾವ ಬಗೆ…..
ಗೂಗಲಿಸುವಾಗಲೂ ರಾಧಾಕೃಷ್ಣ. ಎಷ್ಟೊಂದು ಚಿತ್ರಗಳು! ಹೊಸ ಫೋಲ್ಡರಿನಲ್ಲಿ ಉಳಿಸುವಾಗ ಬರೆದವರ ಹೆಸರು ನೆನಪಿಲ್ಲ.
ಅಲ್ಲೂ ಕೃಷ್ಣ ಬೇರೆಯೇ ಸಿಕ್ಕ. ಅಂವ ರಾಧೆಯ ಕಾಲು ಹಿಡಿದಿದ್ದ, ಹೆಗಲೊತ್ತಿ ತಬ್ಬಿದ್ದ, ತಕ್ಕಡಿಯಲಿಟ್ಟು ಸಂಪತ್ತು ಸುರಿದು ತೂಗಿದ್ದ. ಆ ಚಿತ್ರಗಳ ಕೃಷ್ಣ ಕೊರಳುಬ್ಬಿಸಿಕೊಂಡು, ಹನಿಗಣ್ಣಾಗಿ…..
ಹೇಳಲಿಕ್ಕೆ ಏನೂ ಇಲ್ಲ.
ನಮ್ಮ ಬಣ್ಣಗಳಿಗೆ ತಕ್ಕ ಹಾಗೆ ರಾಧೆ, ಕೃಷ್ಣ.
ಈಗೀಗ
ಕೃಷ್ಣ ಬಿಕ್ಕಿದ್ದೂ ಕೇಳುತಿದೆ,
ಬದಲಾಗಬಹುದೆ ದಿಕ್ಕು?
~
(ನನ್ನ ಪ್ರೀತಿಯ ಚಿತ್ರಗಳು ನಿಮಗೂ ಇಷ್ಟವಾಗಲೆಂದು-)

ಅಕ್ಕೊ ನಮಸ್ತೇ!
ಎಲ್ಲವೂ ಪ್ರೇಮಮಯ ನೋಡಿದ ಪ್ರತಿಯೊಂದು ವಸ್ತುವಿನಲ್ಲೂ ಪವಿತ್ರ ಪ್ರೇಮದ ಛಾಪು ಕಾಣಿಸ್ತಾ ಇದೆ ಯಾಕಂತ ಇದರ ಹಿನ್ನಲೆ ಹುಡುಕುತ್ತಾ ಹೋರಟೆ ತಲೆಯಲ್ಲಿ ಬಂದದ್ದು ಆವತ್ತು ನೀನು ಹಾಕಿದ ರಾಧೆ ಮತ್ತು ಕೃಷ್ಣರ ಒಂದು ಚಿತ್ರ ಇವತ್ತಿಗೂ ಕೂಡಾ ಆ ಚಿತ್ರ ಕಣ್ಣಲ್ಲಿ ಇದೆ.ಆದರೆ ಇವತ್ತು ಈ ಬರಹದಲ್ಲಿ ನೀನು ಬಳಸಿಕೊಂಡಿರೋ ಚಿತ್ರಗಳನ್ನು ಕಂಡು ನಿಜವಾಗ್ಲೂ ತುಂಬಾನೆ ಸಂತೋಷವಾಯ್ತು!! ಕೃಷ್ಣ ಪ್ರೇಮದ ಒಳ-ಹೊರಗಳನ್ನು ಅಳೆಯುವಲ್ಲಿ ಇವುಗಳು ತುಂಬಾ ಪ್ರೋತ್ಸಾಹಿಸುತ್ತಿವೆ … ತುಂಬು ಹೃದಯದ ಧನ್ಯವಾದ ಅಕ್ಕ ಕೃಷ್ಣ ರಾಧೆಯರ ಪ್ರೇಮದ ಬಗ್ಗೆ ನಮಗೆ ತಿಳಿಯಲು ಮಾಡಿದ ಈ ಪ್ರಯತ್ನ ತುಂಬಾ LIKE ಆಯ್ತು.
ಕೃಷ್ಣನ ಚಿತ್ರಗಳ ನಿಮ್ಮ ಸಂಗ್ರಹ ನಿಜವಾಗಿಯೂ ಅದ್ಭುತವಾಗಿದೆ. ನೋಡಿ ಆನಂದವಾಯಿತು. Thanks!
thanks