ಒಂದು ಕತೆ ಓದಿದೆ.
ಒಬ್ಬ ಇರ್ತಾನೆ. ಅವಂಗೆ ಒಂದು ಸಿಹಿ ತಿಂಡಿ ಇಷ್ಟ. ಅದನ್ನ ಯಾವಾಗಂದ್ರೆ ಆವಾಗ ತಿನ್ನುತಿರುತ್ತಾನೆ. ಅದಕ್ಕೆ ಅವಂಗೆ ಆ ತಿಂಡಿ ಹೆಸರು ವಿಶೇಷಣವಾಗಿ ಅಂಟಿಕೊಂಡುಬಿಡ್ತದೆ. ಅವಂಗೆ ಅದರಿಂದ ಮುಜುಗರವಾದ್ರೂ ತಿನ್ನುವ ಚಪಲ ಮಾತ್ರ ಬಿಟ್‌ಹಾಕೋಕೆ ಆಗೋದಿಲ್ಲ. ಅದ್ಕೆ, ಒಂದು ಟವೆಲನ್ನ ಯಾವಾಗ್ಲೂ ಕುತ್ತಿಗೆಗೆ ಸುತ್ತಿಕೊಂಡಿರ್ತಾನೆ. ಆ ತಿನಿಸು ತಿನ್ನುವಾಗೆಲ್ಲ ಟವೆಲನ್ನ ಚೂರು ಓರೆ ಮಾಡಿಕೊಂಡು, ಅದರ ಮರೆಯಲ್ಲಿ ಮುಕ್ಕುತಿರ್ತಾನೆ.
ಒಂದಿನ ಏನಾಗತ್ತೆ, ಅಂವ ಮಾಮೂಲಿ ಸಿಹಿತಿಂಡಿ ಅಂಗಡಿಗೆ ಬರ್ತಾನೆ. ಅಲ್ಲಿ, ಗಾಜಿನ ಕಪಾಟಿನಲ್ಲಿ ಆಗತಾನೆ ಮಾಡಿದ ಅವನ ಮೋಹದ ತಿಂಡಿ ಇಟ್ಟಿರ್ತಾರೆ. ಅಂವ ಅದನ್ನ ತರಿಸ್ಕೊಳ್ಳಬೇಕು, ಅಯ್ಯೋ! ಟವೆಲ್ಲೇ ಇಲ್ಲ! ಟವೆಲನ್ನ ಅಡ್ಡ ಹಿಡಿಯದೆ ತಿನ್ನೋದಾದ್ರೂ ಹೆಂಗೆ? ಅವಂಗೆ ಕೋಪ ಬರತ್ತೆ. ಇದೆಲ್ಲೋ ಹೆಂಡ್ತಿ ಕೆಲಸವೇ ಅಂದ್ಕೊಂಡು ಧುಮುಗುಡ್ತಾ ಮನೆಗೆ ಹೋಗ್ತಾನೆ. ಹೆಂಡತಿ ಹತ್ತಿರ, ಒಳ್ಳೇ ಮಾತಲ್ಲಿ ನನ್ನ ಟವೆಲು ಕೊಡು ಅಂತಾನೆ. ಅವಳು ಮುಸಿನಕ್ಕು ತನ್ನ ಕೆಲಸ ಮುಂದುವರೆಸ್ತಾಳೆ. ಅವಂಗೆ ಚಪಲ, ಕೋಪ ಎಲ್ಲ ಸೇರಿ ತಲೆ ಕೆಡುತ್ತೆ. ರೋಡಲ್ಲಿ ಆಡ್ತಿದ್ದ ಮಕ್ಕಳೇನಾದ್ರೂ ಟವೆಲು ತೆಗೆದಿರಬಹುದು ಅಂತ ಅವರ ಬಳಿ ಹೋಗ್ತಾನೆ. ಟವೆಲು ಕೊಡಿ ಅಂತ ರೇಗ್ತಾನೆ. ಮಕ್ಕಳು ಮುಖಮುಖ ನೋಡ್ಕೊಂಡು ಕಿಸಿಯುತ್ತ ಗೋಲಿ ಹೊಡೆದು ಆಟ ಮುಗಿಸ್ತಾರೆ.
ಎಲಾ! ಈ ಟವೆಲನ್ನೆಲ್ಲೊ ಆ ತಿಂಡಿ ಅಂಗಡಿಯವನೆ ಮುಚ್ಚಿಟ್ಟಿರಬೇಕು ಅಂದುಕೊಳ್ತಾನೆ. ಅಂಗಡಿ ಮೆಟ್ಟಿಲು ಹತ್ತಿ ಕೂಗಾಟ ಶುರು ಹಚ್ತಾನೆ. ಆ ಹೊತ್ತಿಗೆ ಮತ್ತೊಂದು ಒಬ್ಬೆ ಹಬೆಯಾಡುವ ತಿನಿಸು ಗಾಜಿನ ಕಪಾಟಲ್ಲಿ ಕುಂತಿರುತ್ತೆ. ಅವನ ಕಣ್ಣೆದುರೇ ಮತ್ತೊಬ್ಬ ಆಸಾಮಿ ಆ ತಿನಿಸನ್ನ ತಿನ್ನುತಿರ್ತಾನೆ. ಇವನ ಚಡಪಡಿಕೆ ಹೇಳಿ ಮುಗಿಸೋದಾ? ಕೂಗಾಟ ಮತ್ತೂ ಜೋರೇ! ಅಂಗಡಿಯವ, ‘ಹೋಗ್ಲಿ, ಬಂದು ತಿನ್ನಿ, ಎಲ್ಲ ಸರಿ ಹೋಗ್ತದೆ’ ಅಂದಿದ್ದೂ ಅಣಕದಂತೆ ಅನಿಸ್ತದೆ. ಇಲ್ಲ…. ಟವೆಲು ಅಡ್ಡ ಹಿಡಿಯದೆ ಗಂಟಲಲ್ಲಿ ತಿಂಡಿ ಇಳಿಯೋದೇ ಇಲ್ಲ! ಜನಕ್ಕೆ ಮೊದಲೇ ನಾನು ತಿನ್ನೋದರ ಮೇಲೆ ಕಣ್ಣು! ‘ದೇವಾ!’ ಅಂತ ತಲೆ ಮೇಲೆ ಕೈಹೊರುತ್ತಿದ್ದ ಹಾಗೆ…
ಅವನ ಮುಖ ಅರಳತ್ತೆ! ಟವೆಲನ್ನ ಯಾವಾಗಲೋ ತಲೆಗೆ ಮುಂಡಾಸಿನ ಹಾಗೆ ಕಟ್ಟಿಕೊಂಡುಬಿಟ್ಟಿರ್ತಾನೆ ಮಹರಾಯ!
– ಈ ಕತೆಯನ್ನ ಮಕ್ಕಳ ಕತೆ ಪುಸ್ತಕದಲ್ಲಿ ಓದಿದೆ.
~
ನಮ್ಮ ವ್ಯಸನಗಳು ಜಾಹೀರು. ಆದರೂ ನಮಗೊಂದು ಮುಖವಾಡ ಬೇಕು. ವ್ಯಸನ ಬೀಡಲಾರೆವು, ಮುಕ್ತವಾಗಿ ತೊಡಗಲಾರೆವು. ಜನದ ಮಾತು ನಮ್ಮನ್ನ ಕಳ್ಳುಬೀಳಿಸುತ್ತದೆ ಕೆಲವು ಸಾರ್ತಿ. ಆಮೇಲೆ ಕಳ್ಳ ಅನ್ನುತ್ತದೆ. ಈ ಸಂಗತಿಯನ್ನ ಆಲ್ಜೀಬ್ರಾ ಸೂತ್ರದ ಥರ ಇಟ್ಟುಕೊಂಡರೆ, ಅಲ್ಲಿ ಯಾವ ಯಾವುದೋ ವಿಷಯವನ್ನ, ಸನ್ನಿವೇಶಗಳನೆಲ್ಲ ಹಾಕಿ- ತೆಗೆದು ಲೆಕ್ಕಾಚಾರ ಮಾಡಬಹುದು.
ನೀತಿ: ಮಕ್ಕಳ ಕಥೆಗಳನ್ನ ದೊಡ್ಡವರು ಮುದ್ದಾಮ್ ಓದಬೇಕು.

tumba chennagide
nija….