ತಮ್ಮ ನೆನಪಿಸಿದ ಕಥೆ


ಇದು ನಂಗಿಷ್ಟದ ಕಥೆ. ನೆನ್ನೆ ಒಬ್ಬ ಪ್ರೀತಿಯ ತಮ್ಮ ಇದನ್ನ ನೆನಪಿಸಿದ… ಅವಂಗೂ ಥ್ಯಾಂಕ್ಸ್… ನಂಗೂ ಥ್ಯಾಂಕ್ಸ್ 🙂
ನಡೆಯುತ್ತ ನಡೆಯುತ್ತ ಹಾಗೇ ಅಂಗಾತ ಬಿದ್ದ ರೋಡು ಸುರುಳಿ ಸುತ್ತಿ, ಆಸುಪಾಸಿನ ಅಂಗಡಿಗಳೆಲ್ಲ ಅಡ್ಡಬಿದ್ದು, ಹೆಜ್ಜೆಹೆಜ್ಜೆಗೂ ಹಾದಿ ಮುಗಿದು, ಊರಿಗೂರೇ ಉಂಡೆಯಾಗಿ, ಭೂಮಿ ಬುಗರಿಯಂತೆ ರೊಂಯ್ಯನೆ ತಿರುಗಿ, ಅದರೊಳಗೆ ನಾನೂ ಗಿರ ಗಿರ ಗಿರ ಗಿರ….

ಹಾಗೇ ನಿಂತಿರುವೆ ಡಿವೈಡರಿನ ಮೇಲೆ. ಬಸ್ಸು ಕಾರುಗಳು ಸಾಲುಸಾಲು ಹೊಗೆಯುಗುಳುತ್ತ ಹೋಗುತ್ತಿವೆ. ನನ್ನೊಳಗೆ ಧಗಧಗ ಬೆಂಕಿ! ಅಸಹನೆಯ ಕುದಿ ಉಕ್ಕುತ್ತಿದೆ ಹಾಗೇ…
ದಿನಾ ಹೀಗೇ… ಆಫೀಸಿಗೆ ಹೋಗುವಾಗೆಲ್ಲ ಪುಟ್ಟ ಮಕ್ಕಳ ಹಾಗೆ. ಅವನ ಎಡತೊಡೆಯೇರಿ ಕುಂತು, ” ಇವತ್ತು ಹೋಗಲ್ಲ, ಯಾವತ್ತೂ ಹೋಗಲ್ಲ! ” ಅಂತ ಮುದ್ದುಗರೆಯಬೇಕನಿಸುತ್ತೆ. ಆದರೇನು? ನೂರೆಂಟು ಅನಿವಾರ್ಯತೆಗಳ ವಾಸ್ತವ ಛಟೀರನೆ ಕೆನ್ನೆಗೆ ಬಿಗಿದು ಎಚ್ಚರಿಸುತ್ತೆ. ಮತ್ತೆ ಅಳುಮೋರೆ ಹಾಕಿಕೊಂಡು ಬ್ಯಾಗೇರಿಸಿ, ಜುಟ್ಟು ಕುಣಿಸುತ್ತ ಹೊರಡುತ್ತೇನೆ.

* * *

ಕಾಲೇಜಿನ ದಿನಗಳು!
ನನ್ನ ಪಾಲಿಗೆ ಅಂಥದೇನೂ ಖಾಸ್ ಆಗಿರಲಿಲ್ಲ ಅವು. ಏನೇನೋ ತೋಚಿದ್ದು ಗೀಚುತ್ತ ನನ್ನ ಪಾಡಿಗೆ ಇದ್ದುಬಿಡುತ್ತಿದ್ದ ನನಗೆ ವಿಪರೀತ ಯಾವ ಮಹತ್ವಾಕಾಂಕ್ಷೆಗಳೂ ಇರಲಿಲ್ಲ.
ಈಗ ನೆನಪಾಗುತ್ತೆ. ನೆನಪಾಗಿ ನಗು ಬರುತ್ತೆ! ಅದರೊಟ್ಟಿಗೆ ಮುಖ ಹಿಂಡಿ, ಎರಡು ಹನಿ ಕಣ್ಣೀರೂ…

ಸೆಕೆಂಡ್ ಪಿ.ಯು. ಮುಗಿಯುತ್ತ ಬಂದಿತ್ತು. ಆಗ ಆಟೋಗ್ರಾಫ್ ಗಳದ್ದೇ ಕಾರುಬಾರು. ಅವುಗಳಲ್ಲಿ- ನನ್ನ ಇಷ್ಟದ ಬಣ್ಣ……, ನನ್ನ ಇಷ್ಟದ ತಿಂಡಿ…… ಇತ್ಯಾದಿ “ಫಿಲ್ ಇನ್ ದ ಬ್ಲ್ಯಾಂಕ್”ಗಳು!
ಅವುಗಳಲ್ಲಿ ಕಟ್ಟಕಡೆಯದು, ” ನನ್ನ ಜೀವನದ ಗುರಿ…..”
ನಾನು ನನ್ನ ಜಿಗಮಿಣಗಿ ಪೆನ್ನಿನಲ್ಲಿ ಶ್ರದ್ಧೆಯಿಂದ ತುಂಬಿದ್ದೆ; “ಒಳ್ಳೆಯ ಮಗಳು, ಹೆಂಡತಿ, ತಾಯಿ ಮತ್ತು ಗೃಹಿಣಿಯಾಗೋದು!”
ಕಾಲೇಜುಮೇಟುಗಳೆಲ್ಲ ಛೇಡಿಸಿ ಛೇಡಿಸಿ ನಕ್ಕಿದ್ದರು. “ಅರ್ಜೆಂಟಲ್ಲಿದಾಳಪ್ಪೋ!” ಅಂದು ಕಿಚಾಯಿಸಿದ್ದರು.

ನಿಜ. ಹಾಗೆಲ್ಲಾ ಸುಮ್ಮನೆ ಹೆಣ್ಣಾಗಿ ಇದ್ದುಬಿಡೋದು ಸುಲಭವಲ್ಲ ಅಂತ ಆಗ ನಂಗೆ ಖಂಡಿತ ಗೊತ್ತಿರಲಿಲ್ಲ.

* * *

ಈಗ ಮತ್ತೆ ಡಿವೈಡರಿನ ಮೇಲೆ….
ಆಚೀಚೆ ಒನ್ ವೇ ರಸ್ತೆಗಳು. ಹೋದ ದಾರಿಯಲ್ಲೇ ಮರಳಿದರೆ ಸಾಕಷ್ಟು ದಂಡ ಕಟ್ಟಬೇಕು, ನಷ್ಟ ಭರಿಸಬೇಕು!

ಅಗೋ! ಆ ಒಂಟಿ ಕಣ್ಣಿನ ಕಾರು ಹೋದಮೇಲೆ ರಸ್ತೆ ಹಾಯಬೇಕು. ” ಆಟೋ” ಕೂಗಬೇಕು.

ಮನೆಗೆ ಹೋಗಿ ಅಡುಗೆ ಮಾಡಲೇಬೇಕೆಂದೇನೂ ಇಲ್ಲ.
ಹೇಗೂ ಒಬ್ಬಳೇ. ಊಟ ಬೇಜಾರು.

5 thoughts on “ತಮ್ಮ ನೆನಪಿಸಿದ ಕಥೆ

Add yours

  1. ಎರಡು ಕಣ್ಣ ಹನಿ ಮತ್ತು ಒಂದು ಬೆಚ್ಚನೆ ಕೈಒತ್ತುವುದರೆ ಹೊರತಾಗಿ ಇನ್ನೇನು ರೆಸ್ಪಾಂಡ್ ಮಾಡಲಿ ಚೇತನಾ.. 😦
    ಧೈರ್ಯ ಸುಮ್ ಸುಮ್ನೆ ಬರೋದಲ್ಲ. ಸಂಕಟಗಳ ಕೆನ್ನೆಗೆ ಪಟೀರಂತ ಕೊಟ್ಟಾಗಲೆ ಅದು ಒಳಗಿಂದ ಒದ್ದುಕೊಂಡು ಬರೋದು. ಏಕಾಕಿತನವನ್ನ ಸಹಿಸುವ ಸಹಿಷ್ಣುತೆಯನ್ನ ಅದೆಲ್ಲಿಂದ ಗಳಿಸಿದೀರೋ ನಂಗೊತ್ತಾಗ್ತಾ ಇಲ್ಲ. ನಂಗಂತೂ ಆಗ್ತಿರಲಿಲ್ಲ.
    -ಪ್ರೀತಿಯಿಂದ,ಸಿಂಧು

ನಿಮ್ಮ ಟಿಪ್ಪಣಿ ಬರೆಯಿರಿ

Blog at WordPress.com.

Up ↑