ಸುಮಾರು ಒಂದೂ ವರೆ ವರ್ಷದ ನಂತರ ಊರಿಗೆ ಹೊರಟಿದೀನಿ. ಪ್ರತಿ ಗ್ಯಾಪಿನಲ್ಲೂ
ಮತ್ತಷ್ಟು ದೂರಾಗುವಂಥ ಏನಾದರೂ ನಡೆದಿದ್ದಿದೆ, ಈ ಬಾರಿಯೂ ಹಾಗೇ ಆಗಿದೆ.
ಇನ್ನು, ಮುಂದಿನ ಸಾರ್ತಿ ಅನ್ನೋದು ಇರ್ತದೋ ಇಲ್ಲವೋ!
ಇರಲಿ, ಊರ ನೆನಪಲ್ಲಿ ಬರೆದಿದ್ದ ಕವಿತೆಯೊಂದು,
ಇಲ್ಲೀಗ- ಊರಿಗೆ ಹೊರಟಿರುವ ನೆವದಲ್ಲಿ...
ನನ್ನೂರ ತಿರುವುಗಳು
ಬಹಳ ದಿನವಾಯ್ತು ಊರಕಡೆ ಕಾಲಿಟ್ಟು
ಅಲ್ಲವೇನೋ ತಮ್ಮಾ?
ಬರುವೆಯಾ ಹೊಡೆದು ಬರೋಣ ಒಂದು ರೌಂಡು...
ಮರೆತುಬಿಟ್ಟಿದೀಯೆ!
ದಾರಿ ತೋರುವೆ ನಡಿ,
ಬಿಟ್ಟುಬಂದ ಮನೆಯವರೆಗೂ.
ಬಸ್ಸಿಳಿದು ಎಡಕ್ಕೆ, ಅಲ್ಲಿಲ್ಲ ವೀರಗಲ್ಲು
ಅದೀಗ ಎಸ್ಟೀಡಿ ಬೂತಿನ ಮೂರನೆ ಮೆಟ್ಟಿಲು.
ಬಲಕ್ಕೆ ತಿರುಗಿದರೆ ಆಟೋ ಸ್ಟ್ಯಾಂಡು-
ಸೋಫಾ ಸೆಟ್ಟಂಥ ಸೀಟು,
ಸ್ಟೀರಿಯೋದಲ್ಲಿ ಹೊಸ ಹಿಂದಿ ಹಾಡು.
ಉಂಡಾಡಿ ಹುಡುಗ ಬರಲೊಲ್ಲೆ ಅಂದನಾ?
ನಡಿ....
ನಾಲ್ಕೈದು ಹೆಜ್ಜೆ ಮುಂದೆ ಅರಳೀ ಕಟ್ಟೆಯ ತಿರುವು.
ಅದಲ್ಲವೆ ಸಂಡಾಸುಗುಟ್ಟಿನ ಮನೆ?
ಅದೇ, ಬೋರಿಯೊಬ್ಬಳು ಹೊಸ ಸಂಡಾಸು ಹೊಕ್ಕು
ಕೊಲೆಯಾಗಿಹೋದ ಮನೆ?
ಮಜಾ ಗೊತ್ತ,
ಅದರ ಪಾಯಿಖಾನೆಗಳೀಗ ಉಪವಾಸ ಬಿದ್ದಿವೆ.
ಬೀಗವಿಟ್ಟ ಒಡೆಯರೆಲ್ಲ ರಾಜಕಾರಣ ಸೇರಿದಾರೆ...
ಅಲ್ಲಿ ತಿರುಗುವುದು ಬೇಡ ಬಿಡು
ಅದು ಕೇರಿ ದೂರವಿಟ್ಟಿದ್ದ
ಗೆಜ್ಜೆ ಹೆಂಗಸಿನ ಮನೆ.
ಅವಳು ಸತ್ತೀಗ ಊರ ಸೂಳೆಮಕ್ಕಳು
ಆಸ್ತಿಗೆ ಕಚ್ಚಾಡುತಿರುವರು.
ಅಶೋಕ ಪಿಲ್ಲರ್ ಬಳಿಯ
ತರಕಾರಿ ಅಂಗಡಿ ಈಗಿಲ್ಲವೋ
ಅವರಿಬ್ಬರ ಮದುವೆಗೆ-
ಹೊತ್ತುರಿದ ಅಂಗಡಿ, ಸುಟ್ಟ ಲಾರಿಗಳ ಬೆಂಕಿಯೇ
ಹೋಮಕುಂಡ.
ಊರು ಬಿಟ್ಟು, ಮಕ್ಕಳು ಮಾಡಿಕೊಂಡು
ಅರಾಮಿದಾರೆ ಮಹರಾಯಾ ಅವರು,
ಬೆಂಕಿಯಿನ್ನೂ ಉರೀತಲೇ ಇದೆ
ತುಪ್ಪ ಸುರಿಯುವರಂತೆ
ಖುರ್ಚಿ ಕನಸಿನ ಜನರು.
ಪಾನಿ ಪೂರಿ ಅಂಗಡಿ, ಸೋಮಾರಿ ಕಟ್ಟೆಗಳೀಗ
ಖಾಲಿಖಾಲಿ.
ಮೀಸೆ ಚಿಗುರೊಡೆದ ಮರುಘಳಿಗೆ
ಊರು ಬಿಡತೊಡಗಿದಾರಲ್ಲ ಹುಡುಗರು
ಥೇಟು ನಿನ್ನ ಹಾಗೆ!?
ಕಣ್ ಚೆಲ್ಲಿದುದ್ದಕ್ಕೂ ಜೀವ ಜೋತುಬಿಟ್ಟ
ನಡು ಹರೆಯದ ಅಪ್ಪ, ಅಮ್ಮ....
ದಯೆಬೇಡವೋ, ಸುಮ್ಮನಿರು
ಕಂಡವರ ಕೂಲಿಂಗ್ ಗ್ಲಾಸಿಗೆ ಕರುಬಿ
ಹೊರದಬ್ಬಿದರಲ್ಲವೆ ಮಕ್ಕಳನ್ನ?
ಕಪ್ಪು ಕನ್ನಡಕದ ಹಿಂದಿನ
ಸೋತ ಕಣ್ಣುಗಳು
ಅವರಿಗೆ ಕಾಣುವುದಿಲ್ಲ ಯಾವತ್ತೂ
ಹಾಗಂತ
ಜೇಡದ ಬೀಡಲ್ಲವೋ ನಮ್ಮೂರು.
ಟೀವೀಲಿ ಬಂತಲ್ಲ, ಮೈಮೇಲಿನ ದೇವರು?
ಲಕ್ಕು ಖುಲಾಯಿಸಿತಾಗ
ಲಾಡ್ಜಿನವರಿಗೆ, ಬಾರಿನವರಿಗೆ,
ಟ್ಯಾಕ್ಸಿಯವರಿಗೆ, ಗೂಡಂಗಡಿಗೆ.
ವಾರಕ್ಕೊಂದು ಕೆಂಪು ದೀಪದ ಪುಢಾರಿ ಕಾರು,
ಹೊಸಹುಡುಗಿಯರೂ ಚೆಂದವುಟ್ಟು
ಖುಷಿಯಾಗಿರುವರು.
ಏನು? ಗಂಧದ ದಂಧೆಯಾ
ಮಳ್ಳಾ !!
ಅಳಿದುಳಿದ ಕಾಡಲ್ಲೀಗ ಗಾಂಜಾ ಹುಲುಸು.
ಅಡಗಿ ಕುಂತ ಕೆಂಪು ಹುಡುಗರು
ಉಣುಗು ಹಿಸುಕುತ್ತ ರಕ್ತ ಕ್ರಾಂತಿ ಮಾಡುತಿಹರು;
ಅಡಿಕೆ ಚೊಗರಿನ ಪೊಗರಿಳಿದು
ಒಡೆಯರ ಕೈಕಾಲಲ್ಲೂ ಕೆಸರು...
ಚಕ್ರ ಉರುಳಿದೆ ಅಲ್ಲವಾ?
ಉರುಳುರುಳಿ ಮಾಯ ಶಾಂತಿ ಚಕ್ರ
ತುದಿಮೊದಲ ಬಣ್ಣಗಳ ನಡುವೆ
ಬಿಳಿಯುಳಿದಿದೆ ಚೂರುಪಾರು.
ಇತ್ತೀಚೆಗೆ ನಮ್ಮೂರ ಸುದ್ದಿ
ದೇಶದಲ್ಲೂ ದೊಡ್ಡ ಗುಲ್ಲು...
ಅರೆರೆ! ದಾರಿ ತಪ್ಪಿದೆವಾ?
ಮಸೀದಿ ಬಳಸಿ ಶಾಲೆ ಹಾದು ಬರಬೇಕಿತ್ತು.
ನಾವು ಬಿದ್ದೆದ್ದ ಮೈದಾನದ ಮೈತುಂಬ
ಇನ್ನಷ್ಟು ರೂಮು, ಮತ್ತಷ್ಟು ಮಕ್ಕಳು.
ಬಿಡು,
ಕಲೀಗು ಹೇಳಿದ್ದ-
ಅವನೂರ ದಾರಿಯೂ ಹೀಹೀಗೇ ಇದೆಯಂತೆ,
ಪ್ರತಿ ತಿರುವಿನ ಕಥೆಗಳೂ.
ಇನ್ನೀಗ ನೇರ, ಗದ್ದೆದಾರಿಗುಂಟ ನಡೆ.
ಗದ್ದೆಯಿಲ್ಲ, ಸರಿ. ದಾರಿಗುಂಟ ನಡೆ...
ಓಹ್! ಎಷ್ಟೊಂದು ಮಾಡು,
ಎಲ್ಲಿ ನಮ್ಮ ಮನೆ?
ಅದೋ, ಹಸಿರು ಡಿಸ್ಟೆಂಪರ್ರು
ಮಂಗಳೂರು ಹೆಂಚು.
ಗೋಡೆ ಮೇಲೆ ಕರಿಹಲಗೆಯಲ್ಲಿ
ಬೇರೆ ಯಾರಪ್ಪನದೋ ಹೆಸರು!
ನೀರ ನೆರೆ ರೆಪ್ಪೆ ನೂಕಿ ಬಂತೇನು?
ಬಿಡು ಕಣ್ಣು.
ಸಮಯ ಸಿಕ್ಕಾಗ ಬಾ ಮತ್ತೆ,
ಹರಟೋಣ ಹಳತು, ಹೊಸತು.
ಎದೆಗಟ್ಟಿಯಿದ್ದರೆ ಹಾಗೇ
ಹೊಡೆದುಬರೋಣ ಊರುದ್ದಕ್ಕೆ
ಮತ್ತೆ ಮತ್ತೊಂದು ರೌಂಡು...
Kahi vaastava ninna kavithe. Tumbaa chennaagide
idu nanagishTavaada poem!! today me leaving for t’halli. coincidence alwaa?/
take care
🙂
bye
ಮೇಡಂ, ನಿಮ್ಮ್ ಕವಿತೆ ಓದಿದೆ. ಅದೇ ಕಹಿ ಭಾವ…..ನಮ್ಮೂರ ನಾವು ಕಳ್ಕೊಂಡ ಹಾಗೆ ! ಯಾವುದೋ ಅನಿವಾರ್ಯತೆ …….ಊರು ಯಾಕೆ ಬಿಟ್ಟೆ …ಮತ್ತೆ ಪಶ್ಚಾತ್ತಾಪ ! ಒಳ್ಳೆಯ ಆಭಿವ್ಯಕ್ತಿ . ನಿಮ್ಮೂರು ನಿಜವಾಗಿಯೂ ನಿಸರ್ಗದ ಐಸಿರಿ. ನನ್ನ ಪ್ರಾಧ್ಯಾಪಕರೊಬ್ಬರ ಹುಟ್ಟೂರು ಕೂಡಾ. ಈಗಾಗಲೇ ಕರೆ ಬಂದಿದೆ. ಗಳಿಗೆ ಬಂದಿಲ್ಲ.
The poem is capable of evoking mixed emotions. loved it.
chnnagide. bittu banda uru adarade aada kathe heluttade.
monne hubballIge hOdaagalU heege anisittu.
ಚೆನ್ನಾಗಿದೆ… 🙂
nice..
visit my blog @ http://ragat-paradise.blogspot.com
RAGHU
ಯಾರ ಮೇಲಿನ ಕೋಪ, ಎಲ್ಲಿಯೋ ಕಳೆದು ಹೋದ, ಏನನ್ನೋ ಕಳೆದುಕೊಂಡ ಭಾವ.. ವಿಷಯ ಸ್ಪಷ್ಟ..
ಹರಟು ಬರೋಣ ಎಂದರೆ ಗೆಳೆಯರು ಅಲ್ಲಿಲ್ಲವೇ..
ಪ್ರೀತಿಯ ಚೇತನಾ,
ಇದು ಕವಿತೆಯಂತೇ ಇದೆ. ಭಾವಗಳು ಈಸುಬಿದ್ದ ನೆನಪಿನ ಹರಿವಿಗೆ ಪ್ರತಿತಿರುವಲ್ಲೊಂದು ನಿಲುಗಡೆ, ಹೆಚ್ಚು ನಿಲ್ಲುವಂತಿಲ್ಲ, ನೀರು ಕುಡಿದು ಮುಳುಗುತ್ತೇವೆ, ಮುಂದಿನ ತಿರುವು ಬೇರೆ ಕಾಯುತ್ತಿದೆ. ಹರಿಯುವ ನೀರಿನ ಸಮಕ್ಕೂ ಈಸುಬಿದ್ದವರು ನಿಲ್ಲಲುಂಟೆ. ನಿಮಗೇ ನಂಬಿಕೆಯಿಲ್ಲದ ನಿಮ್ಮ ಧೈರ್ಯ ನೋಡಿ ನಂಗೆ ಸಿಕ್ಕಾಪಟ್ಟೆ ಸಮಾಧಾನ. ಇದೆಲ್ಲವನ್ನೂ ಸಹಿಸುವುದು ಬರೆದಷ್ಟು ಸುಲಭವಲ್ಲ.
ಹೋಗ್ಬನ್ನಿ. ಗೋಡೆಗಳೆದ್ದಿದ್ದರೆ ಕೆಡವುವ ವಿಫಲ ಪ್ರಯತ್ನ ಮಾಡುವುದಿಲ್ಲ ನೀವು ಅನ್ನಿಸ್ತದೆ ನಂಗೆ. ಅದನ್ನು ದಾಟಬೇಕೆನ್ನಿಸಿದರೆ ಒಂದು ಬಾಗಿಲು, ಕಿಂಡಿ ಹುಡುಕುವ ತಾಳ್ಮೆ ಸ್ವಲ್ಪ ಜಾಸ್ತಿ ಇರಲಿ.
ಪ್ರೀತಿಯಿಂದ,ಸಿಂಧು.
ಅರ್ಥ ಪೂರ್ಣ ಕವನ ಓದಿ ಅರ್ಥಮಾಡಿಕೊಂಡರೆ ನೆನಪುಗಳು ಮರುಕಳಿಸುತ್ತಲೇ ಇರುತ್ತವೆ. ನನಗಂಗೂ ತುಂಬಾ ಇಷ್ಟವಾಯಿತು. ನಿಮ್ಮ ಬ್ಲಾಗಿಗೆ ಮೊದಲ ಬಾರಿಗೆ ಬೇಟಿ ಕೊಟ್ಟಿದ್ದೀನಿ. ತೃಪ್ತಿಯಾಯಿತು ಮತ್ತೊಮ್ಮೆ ವಂದನೆಗಳನ್ನು ಸಲ್ಲಿಸಲು ಬಯಸುತ್ತ .
ವಸಂತ್
Yes it is,,,,,, this words matching to me . you touch my thoughts. since 25 years i am far away from my place. visiting yearly once for 2 or 3 weeks. trying to search my child hood days. but nothing there,,,,,,,,, now you make me to cry. but there is a haapyness…….. I returned to my old days. feel that innocent people,neighbours,,,, and freinds. but no one there,,,,,,,,,, thanks a lot to you. keep writing.