ಭಾನುವಾರ ಕಳೀಬೇಕಲ್ಲ, ಎಂಥದೋ ತರಲೆ ಕೆಲಸ ಹಚ್ಚಿಕೊಂದು ಬುಕ್‌ಶೆಲ್ಫಿನ ಗ್ರಾಚಾರ ಬಿಡಿಸ್ತಿದ್ದೆ. ಅಕಸ್ಮಾತ್ ನನ್ನ ಹಳೆ ಡೈರಿಗಳು ಸಿಕ್ಕಾಕಿಕೊಂಡವು.
ಈ ಹಳೆ ಡೈರಿಗಳು ಮಜಾ ಇರ್ತವೆ. ಅರ್ಧ ಬರೆದ ಕಥೆ ಥರದ್ದು, ಕವಿತೆ ಥರದ್ದು, ಯಾರನ್ನೋ ನೆನೆದು ಬಯ್ದುಕೊಂಡ ‘ಈಡಿಯಟ್’, ಒಂದು ಹೂವಿನ ಚಿತ್ರ, ನೀಟಾಗಿ ಶ್ರದ್ಧೆಯಿಂದ ಬರೆದ ಒಂದು ಹೆಸರು, ಹೀಗೆಲ್ಲ.
ಹಾಗೆ ಅವು ಸಿಕ್ಕಿದ್ದೇ ಸಿಕ್ಕಿದ್ದು, ಸಂಜೆಯ ತನಕ ಪುಟಗಳನ್ನ ತಿರುವಿ ಹಾಕುವುದಾಯ್ತು. ಆ ನನ್ನ ಗುಜರಿ ನಿಧಿಯಲ್ಲಿ ಸಿಕ್ಕ ಕಟ್ಲರಿಗಳು ಒಂದೆರಡಲ್ಲ. ಅವುಗಳ ಜತೆ ಈ ಕೆಳಗಿನ ಒಂದು ಅರ್ಥವಾಗದ ಕವಿತೆಯೂ.
ನಾನ್ಯಾತಕ್ಕೆ ಇದನ್ನ ಬರೆದೆ, ಎಂತ ಯೋಚಿಸ್ಕೊಂಡು ಬರೆದೆ, ಅಂತ ಚೂರೂ ನೆನಪಾಗ್ತಿಲ್ಲ. ಇದೊಂಥರಾ ಖುಷಿಖುಷಿಯಾಗಿ, ಹಗುರಹಗುರವಾಗಿ ತನ್ನಷ್ತಕ್ಕೆ ತಾನಿರುವ ಹಾಗೆ ಅನಿಸ್ತು. ಚೆಂದ ಇದೆಯೋ ಇಲ್ಲೋ ಅದು ಬೇರೆ ಮಾತು. ಒಂಥರಾ ಸಿಹಿಯಾಗಿದೆ ಅಂತ ನನಗೇನೆ ಖುಷಿಯಾಯ್ತು. ನನ್ನ ಯಾವತ್ತಿನ ಗೋಳಾಟ, ಕಹಿಗಳಿಗಿಂತ ಬೇರೆಯಾಗಿ…
ಆ ಕವಿತೆಯೀಗ ಇಲ್ಲಿ, ನನಗೆ ನಾನೇ ಸಮಾಧಾನಪಟ್ಟುಕೊಳ್ಳಲು….
(ನೀವು ಅಕಸ್ಮಾತ್ ಇದನ್ನ ಓದಿದರೆ ಸೀರಿಯಸ್ಸಾಗಿ ತಗೊಳ್ಬೇಡಿ ಪ್ಲೀಸ್!)
ಅಶ್ವಯುಜದ ಸಂಜೆ
ಅಶ್ವಯುಜದ ಸಂಜೆ
ಗಾಳಿಗೆ ಗೊತ್ತಾಗಿದೆ
ಮಾಸ ಮುಗಿಯುತ್ತಿರುವುದು
ಬೀಸುತ್ತಿದೆ ತಣ್ಣಗೆ
ಮೈಯೊಳಗೆ ಕುದುರೆ ದೌಡು
ಧಡಬಡಾ ಬೇಡ ಬೇಡ
ಕಂಪನಕ್ಕೆ ಅಡಗುದಾಣವಿದಲ್ಲ.
ಅಶ್ವಯುಜದ ಸಂಜೆ
ಆಗಸಕ್ಕೆ ಗೊತ್ತಾಗಿದೆ
ಇರುಳಿನ್ನು ದೀರ್ಘ
ಯಾವತ್ತೂ ಮುಗಿಯದೆನ್ನುವಂತೆ
ಮಾವುಹೂಗಳ ಬಾಣಗಳು
ಅವನಲ್ಲಿ ದಾಸ್ತಾನಿದೆ
ವಸಂತಕ್ಕೇನೀಗ ಕಾಯಬೇಕಿಲ್ಲ.
ಅಶ್ವಯುಜದ ಸಂಜೆ
ಕೂಟ ಹೂಡುವ ಮಾತು
ಚೌಕ ಮನೆಗಳ ಲೆಕ್ಕ
ಸಜ್ಜೆಮನೆ ಸಜ್ಜಾಗುತಿದೆ
ರಾತ್ರಿ ಕಳೆದರೆ ಕಾರ್ತೀಕ,
ಕಾತರಿಸಿ ಕುಂತವರ
ಕಣ್ಣಲ್ಲಿ ದೀಪಸಾಲು.

ನೋಡಿ. ಎಷ್ಟ್ ಚನಾಗ್ ಬರ್ದಿದ್ರಿ. ಹಿಂಗೇ ಬರೀರಿ ಮತ್ತೆ ಅಂದ್ರೆ ಏನೇನೋ ಬರೀತೀರ. 😡
ಸುಶ್,
🙂 ಹ್ಮ್…
ಸರಳ..ಸುಂದರ, ಅರ್ಥಪೂರ್ಣ ಕವನ..ಕಮೆಂಟಿಸದೇ ಇರಲಾಗಲಿಲ್ಲ 🙂
Thanks VeNu… 🙂
ನಿಮ್ಮ ಎಲ್ಲ ಬರಹಕ್ಕಿಂತ ತೀರಾ ಭಿನ್ನ. ನೀವೇ ಬರದಿದ್ದಾ ಅಕ್ಕ? ಅಥವಾ ನಿಮ್ಮ ಡೈರಿಯಲ್ಲಿ ಬೇರೆ ಯಾರಾದ್ರು ಬರ್ದಿಟ್ಟಿದ್ರಾ 🙂
ಯಾಕೆ ಬರೆದೆ ಗೊತ್ತಿಲ್ಲ ಅಂತ ಬೇರೆ ಹೇಳ್ತೀರ 🙂
chennagide saalugalu