ಯಾವ ಹೊತ್ತಿಗಾದರೂ ಅನಂತತೆಯ ಕೊಳಕ್ಕೆ ಜಿಗಿಯಲಿರುವ ಝೆನ್ ಕಪ್ಪೆಯಂತೆ ಅವನು ನಿಶ್ಚಲ ಕುಳಿತಿರುತ್ತಾನೆ. ಅವನು ಇಲ್ಲದಾಗ, ಕಪ್ಪೆ ಹೊಕ್ಕ ಕೊಳದಂತೆ ಅಲ್ಲೆಲ್ಲ ಅವನಿರುವಿನ ಕಂಪನ.
~
ಅಲ್ಲೊಂದು ಕಿಟಕಿಯಿದೆ. ಕುರ್ಚಿಯ ಮೂಲೆಗೆ ಪೂರಾ ವಿರುದ್ಧ ದಿಕ್ಕಿನಲ್ಲಿ. ನನ್ನ ನೋಟ ಸದಾ ನೆಡುವ ಮತ್ತೊಂದು ಮಗ್ಗುಲಲ್ಲಿ. ಯಾವುದೋ ಕಥೆಯಲ್ಲಿ ಓದಿದ್ದಂತೆ ಅದೊಂದು ಖಾಯಂ ಕ್ಯಾನ್ವಾಸ್. ಅದರೊಳಗೆ ಆಗಾಗ ಹಣಕಿ ಚಿತ್ರವಾಗುವ ಅಳಿಲುಗಳನ್ನ ನೋಡೋಕೆ ಚೆಂದ. ಹಾಗೇ ಅದರಾಚೆಗಿನ ಪುರಾತನ ಗೋಡೆ, ಜಾಲರಿಯ ಗವಾಕ್ಷಿ, ಅಪರೂಪಕ್ಕೆ ಹೊತ್ತಿಕೊಳ್ಳುವ ಹಳದಿ ಲೈಟು. ಹಾಗೇನೇ ಕೆಲವು ಸರ್ತಿ ಆ ಕ್ಯಾನ್ವಾಸಿನೊಳಗೆ ಶಬ್ದಗಳೂ ಹಣಕಿ ಬಣ್ಣವಾಗ್ತವೆ.
~
ಬ್ರಹ್ಮ ಹಣೆಬರಹ ಬರೆಯುತ್ತಾನಂತೆ.
ಅಂದುಕೊಳ್ತೇನೆ, ನನ್ನ ಹಣೆಮೇಲೆ ಪುಟಗಟ್ಟಲೆ ಬರೆಯುವಾಗ ಕೆಲವು ಮಡಚಿ ಹೋಗಿರಬೇಕು. ಇಲ್ಲಾ ಹಾಳೆ ಕಳಚಿರಬೇಕು. ಎಗರಿಸಿಯಂತೂ ಇದ್ದಾನೆ ಒಂದಷ್ಟು ವರ್ಷದ ಲೆಕ್ಕ. ಅದು ಕಳೆದುಹೋಗಿದ್ದರೂ ಸರಿಯೇ, ಗಣನೆಗೆ ಸಿಕ್ಕುಬಿಟ್ಟಿದೆ. ಯಾರು ಕಂಡರೋ ಎಣಿಕೆ- ಕಳಿಕೆಗಳ ಈ ಹಾಳು ಗಣಿತ. ಕಂಡವರಿಗೆಲ್ಲ ಎಣಿಸೋಕೆ ಸಿಗ್ತದಂತಲೇ ವಯಸ್ಸಿಗೆ ನಾಚಬೇಕು. ತಥ್!

ನಿಮ್ಮ ಟಿಪ್ಪಣಿ ಬರೆಯಿರಿ