ಒಂದು ಸೋಮಾರಿ ಸಂಜೆಯ ಬೋರುಬೋರು ಸೆಖೆ. ಫ್ಯಾನಿನ ತಣ್ಣನೆ ಗಾಳಿಗೆ ಬೆವರಿನ ಮೈ ಆರಿ ಒಂಥರಾ ಅಂಟು. ಮಗ್ಗಲು ಬದಲಿಸಿದರೆ, ಹರಡಿಟ್ಟ ಪುಸ್ತಕ ರಾಶಿ. ಹುಡುಕುತ್ತಿದ್ದುದೊಂದು ಬಿಟ್ಟು ಮಿಕ್ಕೆಲ್ಲಾ ಸಿಗುತ್ತಿದೆ. ಅಂದರೆ, ಕಳೆದ ವಾರ ಬೇಕಿದ್ದುದು, ಹೋದ ತಿಂಗಳು ಕಳೆದಿದ್ದು, ಇತ್ಯಾದಿ. ವಾರ್ಡ್ರೋಬ್ ಕೆದರುತ್ತಲೇ ಅದು ಸಿಗದೆನ್ನುವ ಆತಂಕಕ್ಕೆ ನಿದ್ದೆ. ನುಣುಚಿಕೊಳ್ಳಲು ಬಹಳಷ್ಟು ದಾರಿ. ಪ್ರಯತ್ನವನ್ನ ಎಷ್ಟು ಹೊತ್ತು ಮುಂದಕ್ಕೆ ಹಾಕಿರ್ತೇವೋ ಅಷ್ಟು ಹೊತ್ತು ವೈಫಲ್ಯದ ಬೇಸರವೂ ಮುಂದಕ್ಕೆ. ಎಂಥ ಒಳ್ಳೆ ಉಪಾಯ!
ಪುಸ್ತಕ ಗುಡ್ಡೆಯ ನಡುವೆ, ಹಾವು ಹಾವು ಅಂತ ಕನವರಿಸ್ಕೊಂಡು ಬರೆದಿಟ್ಟ ಕವನ ಸಂಕಲನ. ಅದನ್ನ ಓದಿಕೊಳ್ತಲೇ ಮಲಗಿದ್ದಕ್ಕೋ ಏನೋ ಕನಸಿನ ತುಂಬ ಹಾವು ಅದೊಂದಕ್ಕೆ ಅವನ ಕಣ್ಣು. ಕಾಣಬಾರದಂತೆ ಹಾವು ಕನಸಲ್ಲಿ. ಹಾವಂದರೆ ಕಾಮವಂತೆ! ಗೊತ್ತಿರೋದು ಇಷ್ಟೇನೇ… ಹಾವಂದರೆ ಅಧ್ಯಾತ್ಮ ಕೂಡ! ಮೇಲೇರುವ ಹಾವು ಅಧ್ಯಾತ್ಮ, ಕೆಳಗಿಳಿಯೋದು ಕಾಮ. ಕನಸಿನ ಹಾವು ಎತ್ತ ಹೋಯ್ತು? ಹುಡುಕಬೇಕು. ಸೊಂಟದಲ್ಲಿ ಛಳಕು. ಕುಂಡಲಿನಿ ಮೈಮುರಿದರೆ ಛಳಕಾಗುತ್ತದಂತೆ. ಅಥವಾ…. ಅವನ ನೆನಪಿಗೂ!

Very nice.