ಈ ಬರಹದ ಹಿಂದಿನದು, ಮುಂದಿನದು, ನಡೂ ಮಧ್ಯದ್ದೆಲ್ಲ ಇಲ್ಲಿದೆ, ಕ್ಲಿಕ್ಕಿಸಿ...
ಬಾಗಿಲೂ ಗೋಡೆ ಹಾಗಿರುವ ಕಟ್ಟಡದೊಳಗೆ ಕುಂತ ನನಗೆ ಮಳೆ ಬಂದ ವಿಷಯ ಗೊತ್ತಾಗಿದ್ದು ಘಮದಿಂದಲಷ್ಟೆ. ಸಿಗರೇಟಿಗೆ ಹೋದವ ಕಾಮನ ಬಿಲ್ಲು ಕ್ಲಿಕ್ಕಿಸಿ ತಂದಿದಾನೆ, ನನಗಾಗಿ. ಬ್ಲೂಟೂತಲ್ಲಿ ಮೂರುಕ್ಷಣ, ಏಳು ಬಣ್ಣದ ಕಮಾನು ನನ್ನ ಮೊಬೈಲಿನೊಳಗೆ. ಆ ಎಲ್ಲ ಬಣ್ಣಗಳು ಕಣ್ಣೊಳಗೆ ಗೂಡು ಕಟ್ಟಿ ನಾನು ಕೆಂಪುಕೆಂಪು.
~
ಕನ್ನಡಿ ಬೆನ್ನಿಗೆ ಪಾದರಸವೋ ಮತ್ತೊಂದೋ. ಅದನ್ನ ಗೀಚಿ ಹಾಕಿದರಾಯ್ತು, ಆಚೆಗಿನದು ಕಾಣ್ತದೆ. ಈ ತನಕ ಅಲ್ಲಿ ಮೂಡಿರುವ ನಾನು ಇಲ್ಲವಾಗ್ತೇನೆ. ಹಹ್ಹ್! ನಾನು ಇಲ್ಲವಾಗೋದು ಇಷ್ಟೊಂದು ಸುಲಭವಾ? ಅಜ್ಜಂದಿರು ಹೇಳಿದ್ದು ನಿಜ. ‘ನಾನು’ ಇಲ್ಲವಾದಾಗ ಮತ್ತೊಂದು ಸ್ಪಷ್ಟ ಕಾಣ್ತದೆ.
~
ಹಿಂದೆ ನೋಡಿದರೆ ಆಗ ತಾನೆ ಕುಸಿದ ನೆಲದ ಗುರುತು. ಕಿತ್ತಿಟ್ಟ ಪ್ರತಿ ಹೆಜ್ಜೆ ಅಳಿಸಿಹೋಗಿದೆ. ಅವು ಎಷ್ಟಿವೆಯೆಂದು ಕಾಣದೆ ಇರುವುದು ಒಳ್ಳೆಯದೇ. ಲೆಕ್ಕ ಯಾವತ್ತೂ ಎಣಿಕೆಯ ಆಯಾಸವನ್ನ ಹೊತ್ತುಕೊಂಡೇ ಇರುತ್ತೆ.
~
ಖಾಲಿಯಲ್ಲಿ ಬದುಕೋದು ಕಲಿತರೆ ಆವರಣ ಬೇಕಾಗೋದಿಲ್ಲ. ಆವರಣ ಕಟ್ಟಿಕೊಂಡ ಕೂಡಲೆ ಅಲ್ಲೊಂದು ಮಿತಿ. ಜಿಗಿದಾಡುವ ಚೈತನ್ಯಕ್ಕೆ ಉಬ್ಬಸ. ಮತ್ತೆ, ಈ ಆವರಣ ಇದೆಯಲ್ಲ, ಅದು ತನ್ನನ್ನ ತಾನು ಸುರಕ್ಷೆ ಅಂತ ತೋರಿಸಿಕೊಳ್ಳುತ್ತೆ. ಅದೇ ಹೊತ್ತಿಗೆ ನಮ್ಮ ದೌರ್ಬಲ್ಯವೂ ಆಗಿರುತ್ತೆ. ಅದಕ್ಕೇ ಅವನು ನನ್ನ ಆವರಣವೂ ಅಲ್ಲ, ದೌರ್ಬಲ್ಯವೂ ಆಗೋದಿಲ್ಲ. ಅಂವ ನನ್ನ ರಕ್ಷೆ ಅಂದುಕೊಂಡಾಗಲೇ ಅದು ಕದಲುವ ಆತಂಕ ಹುಟ್ಟೋದು.
ಈ ಬರಹದ ಹಿಂದಿನದು, ಮುಂದಿನದು, ನಡೂ ಮಧ್ಯದ್ದೆಲ್ಲ ಇಲ್ಲಿದೆ, ಕ್ಲಿಕ್ಕಿಸಿ…

ನಿಮ್ಮ ಟಿಪ್ಪಣಿ ಬರೆಯಿರಿ