ಒಂದು ಹಳೆಯ ತರ್ಲೆ ಪೋಸ್ಟ್


“ಪ್ರಾಮಾಣಿಕವಾಗಿ ಹೇಳ್ತೀನಿ, ನನಗೊಂದು ದುರ್ಬುದ್ಧಿ ಇದೆ. ಅದು ಬಹುತೇಕರಿಗೆ ಇರಬಹುದಾದ ಮೋಸ್ಟ್ ಕಾಮನ್ ದುರ್ಬುದ್ಧಿಯೂ ಹೌದು. ಅದೇನು ಅಂತ ಈ ಲೇಖನ ಓದುವಾಗ ನಿಮ್ಗೆ ಗೊತ್ತಾಗತ್ತೆ” ಅಂತ ಶುರು ಹಚ್ಕೊಂಡು ಬರೆದ ತರಲೆ ಪೋಸ್ಟ್ ಒಂದನ್ನ ಮತ್ತೆ ಓದಿಕೊಳ್ತಿದ್ದೆ. ನನನನಗೇನೆ ಸಿಕ್ಕಾಪಟ್ಟೆ ನಗು. ನೀವೂ ಹಿಂಗೆ ನಿಮ್ಮ ಹಳೆ ತರಲೆಯನ್ನ ನೆನಪು ಮಾಡ್ಕೊಳ್ಳಲಿಕ್ಕೆ ಈ ಪೋಸ್ಟ್ ಕಾರಣವಾಗಬಹುದು. ಟೈಮ್ ಇದ್ರೆ ಓದ್ನೋಡಿ….

~

ಕೊಕನಕ್ಕಿಯ ಹೆಸರು ಹುಡುಕುತ್ತಾ….

ಮೊನ್ನೆ ಮಲ್ಲೇಶ್ವರಕ್ಕೆ ಹೋಗಿದ್ನಾ, ಅಚಾನಕ್ಕಾಗಿ ಒಬ್ಬಳನ್ನ ನೋಡಿದೆ. ಅದೇ ಮುಖ, ಅದೇ ನಗು, ಅದೇ ಉದ್ದದ ಕಾಲು… ಕೊಕನಕ್ಕಿ!!
ಇನ್ನೇನು, ನಾನು ಕೂಗೋದೊಂದು ಬಾಕಿ!

ಹೀಗೆ ನಂಗೆ ಬೆಂಗಳೂರಿನ ಬೀದಿಬೀದಿಗಳಲ್ಲಿ ಯಾರ್ಯಾರೋ ಊರವರು ಕಾಣ್ತಿರ್ತಾರೆ. ಕೆಲವರಿಗೆ ನನ್ನ ಗುರುತು ಸಿಕ್ಕು, ನನಗೆ ಅವರದು ಸಿಗದೆ (ಅದರಲ್ಲೂ ಯಾರೋ ದೂರದ ನೆಂಟರದ್ದು) , ‘ಗಾಯತ್ರಿಗೆ  ಜಂಭ ಬಂದ್ಬಿಟ್ಟಿದೆ ಕಣೇ ಶೈಲಾ’ ಅಂತ ಅಮ್ಮನ ಹತ್ರ ದೂರು ಒಯ್ದಿರ್ತಾರೆ. ಅಮ್ಮ ಅಂತೂ ಸಿಕ್ಕಿದ್ದೇ ಚಾನ್ಸು ಅಂತ ‘ಅಯ್ಯೋ! ಈ ಅಪ್ಪ ಮಗ್ಳಿಬ್ರೂ ಒಂದೇ ಜಾತಿ. ಮನುಷ್ಯ ಮಾತ್ರದವರ ಗುರುತು ಸಿಗೋಲ್ಲ ಅವ್ರಿಗೆ!!’ ಅಂದುಬಿಟ್ಟಿರ್ತಾಳೆ.

ಅದೇನೇ ಇರಲಿ. ಹೀಗೆ ಮೊನ್ನೆ ಕೊಕನಕಿಯನ್ನ ನಾನು ನೋಡಿದ್ದು ಮತ್ತಷ್ಟು ಹಳೆ ನೆನಪುಗಳ ಭಂಡಾರದ ಕೀಲಿ ತೆರೆದಂತೆ ಆಗಿತ್ತು. ಗೊಂಬೆ ಹಬ್ಬಕ್ಕೆ ಭಾರತ ಮಾತೆಯ ಪುಟ್ಟದೊಂದು ಗೊಂಬೆ ಹುಡುಕುತ್ತ ನಿಂತಿದ್ದೆ ನಾನು. ಅಗೋ, ಅಲ್ಲಿ, ತನ್ನ ಕಾಲಿನಷ್ಟೆತ್ತರದ ಮಗನನ್ನ ‘ಮಂಡೆ ಸಮ ಇಜ್ಜ?’ ಅಂತೇನೋ ಗದರುತ್ತ ಅವಳು ನಿಂತಿದ್ದಳು. ನೋಡಿದ್ದೇ ತಡ, ಗೊಂಬೆ ಹುಡುಕೋ ಪ್ರೋಗ್ರಾಮನ್ನ ಪೋಸ್ಟ್ ಪೋನ್ ಮಾಡಿ ಕಣ್ಣುಗಳನ್ನ ಅವಳ ಹಿಂದೆ ಅಟ್ಟಿಬಿಟ್ಟೆ, ಅವಳು ಆ ಬೀದಿಯ ಇಳಿಜಾರಿನಲ್ಲಿ ಕಳೆದುಹೋಗುವವರೆಗೂ.
ಅರೆ! ಅವಳ ಹೆಸರೇನು!? ಇದ್ದಕ್ಕಿದ್ದ ಹಾಗೆ ತಲೆ ಕೆರೆತ ಶುರುವಾಯ್ತು. ಅವಳು ನನಗೆ ಅಷ್ಟೇನೂ ಪರಿಚಿತಳಲ್ಲದ ನನ್ನ ಸೀನಿಯರ್ರು. ಒಂಥರಾ ಗಂಡುಗಂಡು ದನಿ ಮಾಡ್ಕೊಂಡು ರ್ಯಾಗಿಂಗ್ ಮಾಡ್ಕೊಂಡು ಓಡಾಡ್ತಿದ್ದ ಆ ಹುಡುಗಿಯನ್ನ  ನಾವು ಹಿಂದಿನಿಂದ ಕೊಕನಕಿ ಅಂತ ಆಡಿಕೊಳ್ತಿದ್ವಿ. ಅವಳ ಊದ್ದದ ಕೊಕ್ಕರೆ ಕಾಲು ಅವಳಿಗೆ ಆ ಹೆಸರಿಡುವಂತೆ ಮಾಡಿತ್ತು. ತುಳುವಿನ ಕೊಕನಕ್ಕಿ, ಕನ್ನಡದಲ್ಲಿ ಕೊಕ್ಕರೆ.

ನಮಗೆ ಆಗೆಲ್ಲಾ (ಈಗಲೂ!) ಅದೊಂದು ಮೋಜು. ಅಡ್ಡ ಹೆಸರುಗಳನ್ನಿಡೋದು. ಇದು ಪ್ರೈಮರಿ ದಿನಗಳಿಂದಲೂ ಅಂಟಿಕೊಂಡ ಗೀಳು ಬಿಡಿ.
ಮೊಟ್ಟ ಮೊದಲು ನಾನು, ನನ್ನ ತಮ್ಮ ಇದನ್ನ ಪ್ರಯೋಗ ಮಾಡಿದ್ದು ಲಾರಾ ಟೀಚರಿನ ಮೇಲೆ. ಅವರ ಬಗ್ಗೆ ಮಾತಾಡುವಾಗೆಲ್ಲಾ ‘ಕುಳ್ಳಿ ಟೀಚರ್’ ಅಂದು, ಅದನ್ನ ಕೇಳಿಸ್ಕೊಂಡ ಕ್ಲಾಸ್ ಮೇಟು ನಮ್ಮನ್ನ ಬ್ಲ್ಯಾಕ್ ಮೇಲ್ ಮಾಡುವವರೆಗೂ ಸಂಗತಿ ಗಂಭೀರವಾಗಿತ್ತು.
ಸೂಸನ್ ಮೇರಿ ಟೀಚರು ಉದ್ದಕ್ಕಿದ್ರು. (ತಮ್ಮ ಅವರನ್ನ ಸೊಸೆ ಮೇರಿ ಅಂತಿದ್ದ!). ಅವರನ್ನ ಅಮಿತಾಬ್ಬಚ್ಚನ್ ಅಂತ ಕರೀತಿದ್ವಿ. ಅಮ್ಮ ಪೆಟ್ಟು ಕೊಟ್ಟಿದ್ಳು. 😦
ಆದರೆ ಹೀಗೆ ಟೀಚರ್ ಗಳಿಗೆ ಹೆಸರಿಡೋದು ಅತಿರೇಕಕ್ಕೆ ಹೋಗಿ ಅಮ್ಮ ಸಮಾ ಬಾರಿಸಿದ್ದು, ನಾವು ಮಾಸ್ಟರೊಬ್ಬರಿಗೆ ಚಾರ್ ಕೋಲ್ ಅಂತ ಹೆಸರಿಟ್ಟಾಗ. ಕರೀ ಕಪ್ಪಗಿದ್ದ ಸೈನ್ಸ್ ಮಾಸ್ತರು ಯಾವಾಗಲೂ ನೋಟ್ಸ್ ತೋರಿಸು ಅಂತಾರೆ ಅಂತ ನಮಗೆಲ್ಲ ಕೋಪ. ನನಗಾದರೋ, ನೋಟ್ಸ್ ಬರೆಯೋದಂದರೇನು ಅನ್ನೋದೇ ಗೊತ್ತಿರಲಿಲ್ಲ. ಸಾಲದ್ದಕ್ಕೆ, ಅವರು ಹೊಡೀತಿದ್ದರು ಕೂಡ.  ಕಿತಾಪತಿಗಳಿಗೆಲ್ಲ ಲೀಡರ್ ಆಗಿದ್ದ ನನ್ನನ್ನ ಮುಂದಿಟ್ಟುಕೊಂಡು ಸಭೆ ನಡೆಸಿದ ಗೆಳತಿಯರು, ನಾನು ಹೆಕ್ಕಿ ತೆಗೆದ ಚಾರ್‍ ಕೋಲ್ ಹೆಸರನ್ನು ಸರ್ವಾನುಮತದಿಂದ ಅಂಗೀಕರಿಸಿದ್ದರು.
ಹೀಗೇ ಒಬ್ಬ ಗೆಳತಿ ಮನೆಗೆ ಬಂದಾಗ ಚಾರ್ ಕೋಲಿನ ಸಂಗತಿ ಬಂದು, ಅಮ್ಮ ಕಿವಿಗೊಟ್ಟು ಕೇಳಿ ನನ್ನನ್ನ ಬಡಿದು, ಅವಳನ್ನ ಬಯ್ದು, ಅವರಮ್ಮನಿಗೂ ಚಾಡಿ ಹೇಳಿಬಿಟ್ಟಿದ್ದಳು! ಆಗ ನಾನು ಹೈಸ್ಕೂಲು.
ಸಂಜೆ ನನ್ನನ್ನ ತೊಡೆಮೇಲೆ ಕೂರಿಸ್ಕೊಂಡ ಅಮ್ಮ, ಗುರುಗಳಿಗೆ ಗೌರವ ಕೊಡಬೇಕು ಇತ್ಯಾದಿ ಪಾಠ ಹೇಳಿದ್ದಳು. ಅವತ್ತೇ ಕೊನೆ. ನಾನು ಟೀಚರ್ ಗಳಿಗೆ ಅಡ್ಡ ಹೆಸರಿಡೋದು ಬಿಟ್ಟುಬಿಟ್ಟೆ.
~
ಆದರೇನು? ಊರಲ್ಲಿ ಬೇರೆ ಜನರೂ ಇದಾರಲ್ಲ?
ಮೀನು ಇಲಾಖೆಯಲ್ಲಿ ಕೆಲಸ ಮಾಡುವ ಮಂಜುನಾಥರ ಹೆಂಡತಿ ನಮ್ಮ ಬಯಲ್ಲಿ ಮೀನ್ ಮಂಜಿಯಾಗಿದ್ದರು. (ಅವರು ನಮಗೆ ಪೇರಳೆ ಹಣ್ಣು ’ಕದಿಯಲು’ ಬಿಡ್ತಿರಲಿಲ್ಲ 😦 ). ಗೊಬ್ಬರದ ಪರ್ಬುಗಳು ನಮ್ಮ ಹಾಳು ಬಾಯಲ್ಲಿ ’ಸೆಗಣಿ ಪರ್ಬು’ ಆಗಿದ್ದರೆ, ವೆಂಕಟ ರಮಣ ದೇವಸ್ಥಾನದ ಭಟ್ಟರು ’ಬಾಂಡ್ಲೆ ಭಟ್ಟರು’ ಆಗಿಬಿಟ್ಟಿದ್ದರು.
ಕೆಲವೊಮ್ಮೆ ಪುಸ್ತಕದ, ಟೀವಿಯ ಕ್ಯಾರೆಕ್ಟರುಗಳೂ ನಮ್ಮ ನಾಮಕರಣದ ಕಷ್ಟ ನೀಗಿಸಲು ಸಹಕರಿಸ್ತಿದ್ದವು. ಅದ್ಯಾಕೋ ಪಕಕ್ದ ಮನೆ ಪಾಂಡಣ್ಣನ್ನ ‘ಬಾಲು’ ಅಂತಲೂ, ಕೆಳಗಿನ ಬೀದಿಯ ಬೆನ್ನಿಯನ್ನ ‘ಬಗೀರಾ’ ಅಂತಲೂ, ಎಸ್ಟೇಟಿನ ಶರೀಫರನ್ನ ‘ಶೇರ್ ಖಾನ್’ ಅಂತಲೂ, ಪೀಚಲು ಹುಡುಗ ವಿನ್ನುವನ್ನ ‘ಮೋಗ್ಲಿ’ ಅಂತಲೂ ಕರೀತಿದ್ದೆವು. ಇವೆಲ್ಲ ಜಂಗಲ್ ಬುಕ್ಕಿನ ರೋಲುಗಳು ಅಂತ ಪ್ರತ್ಯೇಕ ಹೇಳಬೇಕಿಲ್ಲ ತಾನೆ?
ಕೀರಲು ದನಿಯ ರೇಣುಕೆಯನ್ನ ನಾನು ಈಗಲೂ ಪೀಂಚಲು ಅಂತಲೇ ಕರೆಯೋದು. ನಾನು ಹಾಗೆ ಹೇಳೋದನ್ನ ಕೇಳಿ ಕೇಳಿ ಉಳಿದವರೂ ಕಾರಣ ಗೊತ್ತಿಲ್ಲದೆ ಹಾಗೇ ಶುರುಹಚ್ಚಿಕೊಂಡು ಅವರೆಲ್ಲರ ಬಾಯಲ್ಲೂ ಪೀಂಚಲು ಅನ್ನೋ ಹೆಸರೇ ನಿಂತುಬಿಟ್ಟಿದೆ. ಪೀಂಚಲು, ಮಲೆಗಳಲ್ಲಿ ಮದುಮಗಳು ಕಾದಂಬರಿಯ ಒಂದು ಪಾತ್ರ.
~
ಆಗ – ನಾನು ಟೀಚರ್ ಗಳಿಗೆ ಹಾಗೆಲ್ಲ ಹೆಸರಿಟ್ಟು ಕರೆಯೋದನ್ನ ನಿಲ್ಲಿಸಿಬಿಟ್ಟೆ ಅಂತ ಹೇಳಿದ್ನಲ್ಲ? ಆದ್ರೆ ಕಾಲೇಜಿಗೆ ಬಂದ್ಮೇಲೆ ಸ್ವಲ್ಪ ತಪ್ಪಬೇಕಾದ ಪ್ರಸಂಗ ಬಂದುಬಿಡ್ತು. ನಮ್ಮ ಲೆಚ್ಚರರ್ ಒಬ್ರನ್ನ ಇಡೀ ಕಾಲೇಜಿಗೆ ಕಾಲೇಜೇ ‘ಪಾಂಡು’ ಅಂತ ಕರೀತಿತ್ತು. ನಾನೊಬ್ಬಳು ಅವರ ಸರಿ ಹೆಸರು ಹಿಡಿದು ಹೇಳಿದರೆ ಅವರಿಗೆ ಸುಲಭಕ್ಕೆ ತಲೆಗೆ ಹೋಗ್ತಿರಲಿಲ್ಲ. ಹೀಗಾಗಿ ನಾನೂ ಪಾಂಡು ಅನ್ನೋದನ್ನೇ ರೂಢಿಸ್ಕೊಂಡ್ ಬಿಟ್ಟಿದ್ದೆ.
ಮತ್ತೊಂದು ದಿನ, ನಾನು ವಿಪರೀತ ಹಸಿವಾಯ್ತು ಅಂತ ಇಂಗ್ಲಿಶ್ ಪೀರಿಯಡ್ ಬಂಕ್ ಮಾಡಿ ಕ್ಯಾಂಟೀನಿಗೆ ಹೋಗಿ ಕುಂತಿದ್ದೆ. ಅದನ್ನ ನಮ್ಮ ಲಕ್ಚರರ್ರು ನೋಡಿಬಿಟ್ಟರು. ಆಮೇಲೆ ನನಗಿಂತ ಒಂದೇ ವರ್ಷ ಸೀನಿಯರಾಗಿದ್ದ ನನ್ನಣ್ಣನ ಹತ್ರ ಹೇಳಿಬಿಟ್ಟರು. ಅವತ್ತಿಂದ ಅನಿವಾರ್ಯವಾಗಿ ನಾನು ಅವರನ್ನ ‘ಕಾರ್ಟೂನ್’ ಅಂತ ಕರೀಬೇಕಾಯ್ತು. (ಯಾಕೇಂದ್ರೆ ಅವ್ರು ಕಾರ್ಟೂನ್ ಬರೀತಿದ್ರು). ಆಮೇಲೆ ಅದು ನನ್ನ ಫ್ರೆಂಡ್ಸಿಗೂ ಇಷ್ಟವಾಗಿ, ಅವರೆಲ್ಲರೂ ಹಾಗೇ ಕರೆಯೋಕೆ ಶುರು ಮಾಡಿದ್ದು ಖಂಡಿತ ನನ್ನ ತಪ್ಪಲ್ಲ ಅಲ್ವಾ?
~
ಹೀಗೆ ನಾನು- ತಮ್ಮ ಸೇರಿ ಇಟ್ಟ ಹೆಸರುಗಳು, ಗೆಳತಿಯರೊಟ್ಟಿಗೆ ಇಟ್ಟ ಹೆಸರುಗಳು ಸಾಕಷ್ಟಿವೆ. ಜಿಡ್ಡು,  ಎಪ್ಡು, ಬೋರ್ ವೆಲ್, ಟಿನ್, ಮೊಳೆ, ಕಾಳು, ಡಬ್ಬ, ಕಾಂಗ್ರೆಸ್, ತುರುಚಿಗಿಡ, ತಬಲ, ಕೆಸ, ಮುಂಗೇರಿ ಲಾಲ್, ಫಟೀಚರ್, ಕ್ರೇಜಿ ಕರ್ನಲ್, ಡೆಡ್ಲಿ, ಕರ್ಮ ವೀರ (ಇದು- ಯಾವಾಗಲೂ ‘ಕರ್ಮ’ ಅಂತಿದ್ದ ನಮ್ಮ ಮಾವನಿಗೆ ಇಟ್ಟಿದ್ದಿದ್ದು!), ಜಲ್ಮೇಪಿ ದೊಡ್ಡಮ್ಮ, ಮೂತಿ ಮುರ್ಕಿ, ತುರೇಮಣೆ (ಸ್ಸಾರಿ…), ಗಾಂಧಿ, ಆಜಾದ್, ಬಿಳಿ ಜಿರಳೆ…. ಹೀಗೇ…
ಕೊನೆಯದಾಗಿ, ಅಣ್ಣನ ಸ್ನೇಹಿತ ಒಬ್ಬ ಇದ್ದ. ಅವನದು ಕೋಲು ಕೋಲು ಮೈ. ನಾನು ಅವಂಗೆ ಕೋಲ ಮಹರ್ಷಿ ಅಂತ ಹೆಸರಿಟ್ಟಿದ್ದೆ. ನಮ್ಮ ನಮ್ಮ ಮಾತಲ್ಲಿ ಮಹರ್ಷಿ ಕಳೆದು ಬರೀ ಕೋಲ ಉಳೀತು. ಕೋಲ ಅನ್ನುತ್ತ ಅನ್ನುತ್ತ ಅದಕ್ಕೆ ಕೋಕಾ ಸೇರಿ ‘ಅವನೆಲ್ಲಿ? ಕೋಕಾ ಕೋಲ?’ ಅನ್ನುವವರೆಗೆ ಬಂತು. ಕೊನೆಯಲ್ಲಿ ಕೋಲ ಹೋಗಿ ‘ಕೋಕ್ಸ್’ ಉಳೀತು. ಅವನ ಬಗ್ಗೆ ಮಾತಾಡುವಾಗ ನಾವಿವತ್ತು ‘ಕೋಕ್ಸ್’ ಅಂತಲೆ ಮತಾಡೋದು! ಮೊನ್ನೆ ಇದಕ್ಕೆ ಕಾರಣ ಹುಡುಕುವಾಗಲೇ ನನಗೆ ನಾನಿಟ್ಟ ಮೂಲ ಹೆಸರು ಹೊಳೆದಿದ್ದು!
~
ಭಾರತ ಮಾತೆಯ ಶೋಧದಲ್ಲಿ ತೊಡಗಿರ್ವಾಗಲೇ ನನ್ನ ತಲೇಲಿ ಇವೆಲ್ಲ ಹಣಕಿ, ಒಬ್ಬೊಬ್ಬಳೆ ನಗಾಡಿಕೊಳ್ಳುವ ಹಾಗೆ ಮಾಡಿ ಓಡಿಹೋದವು.
ಅಷ್ಟಾದರೂ, ಅದಕ್ಕೆ ಕಾರಣಳಾದ ಕೊಕನಕಿಯ ನಿಜವಾದ ಹೆಸರು ನೆನಪಾಗಲಿಲ್ಲ.
ಒಂಥರಾ ಕಡಿತ ಶುರುವಾಯ್ತು! ತಮ್ಮನಿಗೆ ಕಾಲ್ ಮಾಡಿದೆ. ಪಾಪ ಅದ್ಯಾವ ವಯರನ್ನ ಹಲ್ಲಲ್ಲಿ ಕಚ್ಚಿಕೊಂಡು ಒದ್ದಾಡ್ತಿದ್ದನೋ, ಫೋನ್ ಕಟ್ ಮಾಡಿದ. ನಾನು ಮತ್ತೆ ಮಾಡಿದ. ರಿಸೀವ್ ಮಾಡಿದವನೇ, ‘ಏನೇ ಅಷ್ಟ್ ಅರ್ಜೆಂಟು!?’ ಅಂತ ರೇಗಿದ.
ನಾನು ‘ಕೊಕನಕಿಯನ್ನ ನೋಡಿದೆ ಕಣೋ!’ ಅಂತ ಸಂಭ್ರಮಿಸಿದೆ. ಅಂವ ಎದುರಿಗಿದ್ದಿದ್ದರೆ ಕೊಂದೇಬಿಡ್ತಿದ್ದನೇನೋ? ‘ಆರತಿ ಎತ್ಬೇಕಿತ್ತು’ ಅಂತ ಬಯ್ದು ಫೋನ್ ಕಟ್ ಮಾಡಿದ.
ನಾನು ಉರ್ರ್ ಅಂದುಕೊಂಡು ಮನೆಗೆ ಹೋಗಿ ಓದುತ್ತ ಕುಳಿತಿದ್ದಾಗ ಅವನ ಫೋನು ಬಂತು.  ‘ಸಾರಿ, ಬ್ಯುಸಿ ಇದ್ದೆ’  ಅಂತ ಪಾಲಿಶ್ ಮಾಡಿಕೊಂಡೇ ಕೊಕನಕಿ ಬಗ್ಗೆ ವಿಚಾರಿಸಿದ. ಅವಳ ನಿಜ ಹೆಸರು ಏನು ಅಂತ ಐದು ನಿಮಿಷ ಯೋಚನೆ ಮಾಡಿ, ‘ಇವ್ಳನ್ನ ಬಿಡೋಕೆ ಊರಿಗ್ ಹೋಗ್ತೀನಲ್ಲ, ಪತ್ತೆ ಮಾಡ್ಕೊಂಡ್ ಬರ್ತೀನಿ ಬಿಡು’ ಅಂದು ಸಮಾಧಾನ ಮಾಡಿದ.
ಅಂದಹಾಗೆ, ಕೊಕನಕಿ ನನ್ನನ್ನ ಅಲ್ಲಿ ನೋಡಿದ್ದಳಾ?  ನೋಡಿ ಗುರುತು ಸಿಕ್ಕಿದ್ದಿದ್ದರೆ, ‘ಅರೆ! ಲಿಲ್ಲಿಪುಟ್!!’ ಅಂದ್ಕೊಂಡಿದ್ದಾಳು…
ಹೌದು… ನಂಗೊತ್ತು…
ಅವ್ರೆಲ್ಲಾ ಐದಡಿ ಸೊನ್ನೆ ಇಂಚಿನ ನನ್ನನ್ನ ‘ಲಿಲ್ಲಿಪುಟ್’  ಅಂತ ಕರೀತಿದ್ರು!

7 thoughts on “ಒಂದು ಹಳೆಯ ತರ್ಲೆ ಪೋಸ್ಟ್

Add yours

  1. ಡಾಲ್ಡ,,,,ಔದ್ಲೇನ್ನೇ,,,,,ವಾಲಿಬಾಲ್.ಧಾರವಾಡ್ ಫೇಡ….ಸುಮ್ಬ್ಳ್ಯಾ…ಪ್ರಭಾಕರ…ಬಾಟ್ಲಿ..ಚಿಪ್ದ…ಜರ್ಸಿ ….ರಾಜ್ದೂತ್….ಬುಲೆಟ್ ….ಭರತನಾಟ್ಯ…ಅಯ್ಯೋ ಈ ಲಿಸ್ಟು ಮುಗಿಯೋ ಥರ ಕಾಣುತ್ತಿಲ್ಲಾ…..ಅಂದ ಹಾಗೆ ನನಗೆ ನಿನಿತ್ತಿರೋ ಅಡ್ಡ ಹೆಸರು ಮೆಸೇಜ್ ಮಾಡಿಬಿಡು..ಆಯ್ತಾ….

  2. ಲಿಲಿಪುಟ್- ಹಹಹ…ಚನ್ನಾಗಿದೆ…ಅಡ್ಡ ಹೆಸರುಗಳ ಹಿಡಿದು ಗಡ್ಡಎಳೆಯೋ ನಿಮ್ಮ ತುಂಟಾದ ದಿನಗಳ ದಿನಚರಿಯಲ್ಲಿನ ಅಲ್ಲಿಂದ ಇಲ್ಲಿಂದ ತೆಗೆದು ಉಣಬಡಿಸಿದ ಅನುಭವ ಮಾತುಗಳು….. ನಿಮ್ಮ ಬ್ಲಾಗಿಗೆ ಮೊದಲ ಭೇಟಿ…

  3. ಬರಹ ಚೆನ್ನಾಗಿದೆ. ಓದುತ್ತಾ ಓದುತ್ತಾ ಏನೇನೋ ನೆನಪಾಗತೊಡಗಿದವು… ಅಂದಹಾಗೆ, ಲಿಲಿಪುಟ್ ಚೆನ್ನಾಗಿಲ್ಲ. ಕವಿ ಎಂ. ಎನ್. ಜೈಪ್ರಕಾಶ್ ಮೂರು ದಶಕಗಳ ಹಿಂದೆ ಸೃಷ್ಟಿಸಿದ “ಲಿಲ್ಲಿಪುಟ್ಟಿ” ಚಂದ. ಮತ್ತೆ, ಇತ್ತೀಚೆಗೆ ನಿಮ್ಮ ಕಥೆಗಳು ಎಲ್ಲೂ ಕಾಣುತ್ತಿಲ್ಲ ಯಾಕೆ?

ನಿಮ್ಮ ಟಿಪ್ಪಣಿ ಬರೆಯಿರಿ

Blog at WordPress.com.

Up ↑