ಅನುಗೂಂಜಿನ ನೆವದಲ್ಲಿ… (ಒಂದು ರಿಸೈಕಲ್ಡ್ ಬರಹ)


ನಾನಿಲ್ಲಿ ಎಂಭತ್ತರ ದಶಕದ ಕೆಲವು ಸೀರಿಯಲ್ಲುಗಳ ಬಗ್ಗೆ ಹರಟಿದ್ದೇನೆ. ಸೂತ್ರವಿಲ್ಲದೆ ಸಾಗಿರುವ ಬರಹವಿದು. ಒಂಥರಾ ನಾಸ್ಟಾಲ್ಜಿಯಾ.
ಅಂದಿನ ಸೀರಿಯಲ್ಲುಗಳ ಬಗ್ಗೆ ಗೊತ್ತಿಲ್ಲದವರು, ಇಂದಿನವರು ಇದನ್ನ ಓದಿ ಬಯ್ದುಕೊಳ್ಳಬೇಡಿ. ಬಹುಶಃ ಈ ಲೇಖನದಲ್ಲಿ ನಿಮಗೆ ಏನೂ ಸಿಗಲಾರದು. ಇದೊಂದು ನೆನಪಿನ ಸೆಲೆಬ್ರೇಶನ್ ಅಷ್ಟೇ.
ಆದ್ದರಿಂದ ಇದು ಕಡ್ಡಾಯವಾಗಿ ಆಸಕ್ತರಿಗೆ ಮಾತ್ರ.
ಆದರೂ ಓದುತ್ತೇವೆಂದು ಹೊರಟು ಬೋರು ಹೊಡೆಸಿಕೊಂಡರೆ, ಆಮೇಲೆ ನನ್ನನ್ನ ಮಾತ್ರ ದೂರಬೇಡಿ, ಮೊದಲೇ ಹೇಳ್ಬಿಟ್ಟಿದ್ದೀನಿ!

(ಇದು 3 ವರ್ಷ ಹಳೆಯ ಬರಹ)

~

“ಪ್ರೇಮ್ ಓ ಚಂದನ್ ಹೈ, ಜಿಸೇ ಛೂಕರ್ ಕಿಸೀಕೇ ಭಿ ಮಾಥೇ ಪರ್ ಲಗಾವೋ, ಖುದ್ ಕಿ ಉಂಗ್ಲಿಯಾ ಮೆಹೆಕ್ ಉಠ್ ಥೀ ಹೈ”
ಅದೊಂದು ಐತಿಹಾಸಿಕ ತೀರ್ಪು. ಕದ್ದು ಮದುವೆಯಾದ ಯುವ ಜೋಡಿಯ ಮೇಲೆ ಸಂಬಂಧಿಸಿದೋರು ಕೇಸು ಹಾಕಿದಾಗ ಜಡ್ಜು ಹೀಗೆಲ್ಲ ಮಾತಾಡಿ ಪ್ರೇಮಿಗಳ ಪರವಾಗಿ ನಿಲ್ತಾನೆ. ಜನ ಎಲ್ಲ ಉಘೆ ಉಘೇ ಅಂತಾರೆ.
ಮುಂದೊಂದು ದಿನ ಜಡ್ಜಿನ ಮಗಳು ಯಾರದೋ ಪ್ರೇಮದಲ್ಲಿ ಸಿಲುಕಿರೋದು ಗೊತ್ತಾಗತ್ತೆ, ಅಂವ ತಿರುಗಿಬೀಳ್ತಾನೆ. ಚಂದನ್, ಖುಶ್ಬೂ ಎಲ್ಲ ಗಾಯಬ್!
ಆಮೇಲೆ ಆ ಮಗಳು ತನ್ನ ಹುಡುಗನಿಂದ್ಲೂ ಚಕ್ಮಾ ತಿಂದು, ತಾವಿಬ್ಬರೂ ಒಟ್ಗೆ ಡ್ರಾಮ ನೋಡ್ಲಿಕ್ಕೆ ಹೋದಾಗ ಸಿಕ್ಕಿದ್ದ ನಾಯಕನ ಬಳಿ ಸಾರಿ, ಸೇರಿ… ಹೀಗೇ ಸೀರಿಯಲ್ಲು ಮುಂದುವರೆಯೋಹೊತ್ತಿಗೆ….
ನನಗೆ ಎಕ್ಸಾಮೋ, ರಜೆಯೋ ಏನೋ ಅಡ್ದಬಂದು ನಾನು ನೋಡೋದು ಬಿಟ್ಟಿದ್ದೆ.

ಹೌದು. ನಾನು ನೋಡಿದಷ್ಟೂ ಎಪಿಸೋಡುಗಳು ಬಾಯಿ ಪಾಠ ಮಾಡಿದಷ್ಟು ಚೆನ್ನಾಗಿ ನೆನಪಿದೆ. ಅದರಲ್ಲೂ ಮೊದಲ ಎಪಿಸೋಡಿನ ಆ ಡೈಲಾಗು.
ಅದು ದೂರದರ್ಶನದ ಸೀರಿಯಲ್ಲು. ಹೆಸರು ಅನುಗೂಂಜ್. ನನದನ್ನ ನೋಡಿದ್ದು ನಾನು ನಾಲ್ಕನೆಯದೋ ಐದನೆಯದೋ ಕ್ಲಾಸಲ್ಲಿರುವಾಗ. ಹೊಸತಾಗಿ ಕಲಿತಿದ್ದ ಹಿಂದಿಯಲ್ಲಿ ಎಷ್ಟು ಅರ್ಥವಾಗ್ತಿತ್ತೋ, ಅಂತೂ ಕ್ಲಾಸಿಕ್ ಅನ್ನಿಸುವ ಎಲ್ಲವನ್ನೂ ನೋಡಲು ಅಪ್ಪ ಕೊಟ್ಟಿದ್ದ ಸ್ವಾತಂತ್ರ್ಯವನ್ನ ಪೂರ್ತಿಯಾಗಿ ಬಳಸಿಕೊಳ್ತಿದ್ದೆ.
ಆಮೇಲೆ ಆ ಸೀರಿಯಲ್ಲು ಮತ್ತೆ ಪ್ರಸಾರವಾಯ್ತಾ? ಗೊತ್ತಿಲ್ಲ. ಆದ್ರೆ ಸೀರಿಯಲ್ಲಿನ ಗಾಂಭೀರ್ಯ ಮಾತ್ರ ಮನಸಿಂದ ಅಳೀಲಿಲ್ಲ.

ಹಾಗೆ ಅವತ್ತಿನ ದಿನಗಳಲ್ಲಿ ನಾವೆಲ್ಲ ಕೂತು ನೋಡ್ತಿದ್ದ ಸೀರಿಯಲ್ಲುಗಳ ಪಟ್ಟಿ ನಿಮ್ಮೆದುರಿಡುವೆ.
ಎಲ್ಲಿಂದ ಶುರು ಮಾಡಲಿ?
ಗುಲ್ ಗುಲ್ಷನ್ ಗುಲ್ಫಾಮ್? ನೆನಪಿದೆಯಾ ಕಾಶ್ಮೀರದ ಹೌಸ್ ಬೋಟ್ ಸಂಸಾರದ ಕಥೆ? ಆ ಕಸ್ಟ್ಯೂಮುಗಳು, ಕಶ್ಮೀರಿ ಹಾಡು, ಇತ್ಯಾದಿ?
ಓಹ್! ಆಗಿನ್ನೂ ಉಗ್ರಗಾಮಿ ಮುಂತಾದವೆಲ್ಲ ಗೊತ್ತೇ ಇರಲಿಲ್ಲ ನಮಗೆ. ಅಮ್ಮ ಕಾಶ್ಮೀರದಲ್ಲಿ ಹಾಗಂತೆ, ಹೀಗಂತೆ ಅಂತೆಲ್ಲ ಹೇಳುತ್ತ, ಸೀರಿಯಸ್ಸಾಗಿ ಕುಂತು ನೋಡುತ್ತಿದ್ದ ಸೀರಿಯಲ್ಲದು. ಜತೆಗೆ ಪುಟಪುಟಾಣಿ ಕಣ್ಣುಗಳ ನಾವು ಮೂವರು!
ಹಾ! ನಾನು “ನಂಗೂ ಕೋಡುಬಳೆ ಥರದ ಕಿವಿ ರಿಂಗು ಬೇಕು” ಅಂತ ಹಠ ಹಿಡಿದು ಹುಡುಕಿದ್ದು ಈ ಸೀರಿಯಲ್ಲು ನೋಡಿಯೇ!

ಬಹಳ ಚೆಂದದ ಸೀರಿಯಲ್ಲು ಅಂತ ನಾನು ಯಾವಾಗಲೂ ನೆನೆಸಿಕೊಳ್ಳೋದು ‘ಪಚ್ಪನ್ ಕಂಭೇ ಲಾಲ್ ದಿವಾರೇ’ ಅದರ ಹೀರೋ ಈಗ ಸಾಕಷ್ಟು ಅಡ್ವರ್ಟೈಸು- ಸೀರಿಯಲ್ಲುಗಳಲ್ಲೆಲ್ಲ ಬರ್ತಾನೆ, ಹೆಸರು ಮರೆತಿದೆ. ಹೀರೋಇನ್ನು ಮಿತಾ ವಸಿಷ್ಟ. ನಗುವೇ ಕಾಣದ ಆ ಮುಖವೂ ನಂಗೆ ಬಹಳ ಇಷ್ಟ.

ಕಶಿಶ್ ಅನ್ನೋ ಸೀರಿಯಲ್ಲಲ್ಲಿ ಸುಧೇಶ್ ಬೆರ್ರಿ ನಟಿಸಿದ್ದ. ಆಗಿನ ಕಾಲಕ್ಕೆ ರೊಮ್ಯಾಂಟಿಕ್ ಸೀರಿಯಲ್ಲದು. ಆಮೇಲೂ ಅದು ಸೋನಿ ಚಾನೆಲ್ಲಿನಲ್ಲಿ ಬಂತು ಅಂತ ನೆನಪು. ಆದ್ರೆ ನಾನು ಮತ್ತೆ ನೋಡ್ಲಿಲ್ಲ.

ನನ್ನ ಅತ್ಯಂತ ಪ್ರೈಮರಿ ದಿನಗಳಲ್ಲಿ ನೋಡುತ್ತಿದ್ದ ಮತ್ತೊಂದು ಮರೆಯಲಾಗದ ಸೀರಿಯಲ್ಲು- ‘ಮಿ. ಯೋಗಿ’. ತೆಳ್ಳಗಿನ ಹುಡುಗನೊಬ್ಬ ಮದುವೆಗೆ ಹೆಣ್ಣು ಹುಡುಕೋ ಕಥೆಗಳವು. ಎಷ್ಟರ ಮಟ್ಟಿಗೆ ಆ ಸೀರಿಯಲ್ಲು ನಮ್ಮನ್ನ ತಟ್ಟಿತ್ತಂದರೆ, ಹೆಣ್ಣು ಹುಡುಕಿ ಹೈರಾಣಾದ ಗಂಡುಗಳನ್ನ ನಾವು ಈಗಲೂ ಮಿ. ಯೋಗಿ ಅಂತ್ಲೇ ಛೇಡಿಸೋದು!!
ಹಾಗೆ ಇನ್ನೂ ನಮ್ಮ ಮಾತುಗಳಲ್ಲಿ ಹಸಿರಾಗಿರೋದು ‘ಮುಂಗೇರೀ ಲಾಲ್’ ಹಗಲುಗನಸು ಕಾಣೋರೆಲ್ಲ ನಮ್ಮ ಪಾಲಿಗೆ ಈಗಲೂ ಮುಂಗೇರಿಗಳೇ.

ಆಶ್ಚರ್ಯ ದೀಪಕ್ ಅನ್ನೋ ಸೀರಿಯಲ್ಲು ನೋಡಿ ನಾನು- ಅಣ್ಣ ಮಾವನ ಮನೆ ಅಟ್ಟದ ಮೆಲೆ ಸಿಕ್ಕ ಕಂಚಿನ ದೀಪ ಉಜ್ಜಿದ್ದೂ ಉಜ್ಜಿದ್ದೇ…! ಅದರೊಳಗಿಂದ ಜೀನಿ ಬರುವುದೆಂದು ಕಾದಿದ್ದೂ ಕಾದಿದ್ದೇ!!

ಹಾ…! ನಿಮಗೆ ಸ್ಟೋನ್ ಬಾಯ್ ಸೀರಿಯಲ್ಲು ನೋಡಿಕೊಂಡು ನಾವು ಸಿದ್ಧೇಶ್ವರ ಗುಡ್ಡದ ಹತ್ತಿರ ಕಾದ ಕಥೆ ಹೇಳಲೇಬೆಕು…
ಅದರಲ್ಲಿ ಮಾ. ಮಂಜುನಾಥ್ ಕಲ್ಲು ಹುಡುಗನಾಗಿದ್ದು, ಮಕ್ಕಳೆದುರು  ಜೀವ ತಳೆಯೋದು, ಆಟವಾಡೋದು ಇತ್ಯಾದಿ ಫ್ಯಾಂಟಸಿ ಇತ್ತಲ್ಲ, ಅದನ್ನ ನೋಡಿಕೊಂಡ ನಾವು (ಆಗ ಶಿವಮೊಗ್ಗದಲ್ಲಿದ್ವಿ) ತೀರ್ಥಳ್ಳಿಗೆ ಹೋದಾಗ ಹುಣ್ಣಿಮೆ ರಾತ್ರಿ ಹೇಳದೆ ಕೇಳದೆ ಗುಡ್ದದ ಹತ್ರ ಓಡಿಹೋಗಿದ್ವಿ. ಅಲ್ಲಿನ ಹುಲಿ ಬಂಡೆ ಪಕ್ಕದ ಮಾನವಕೃತಿಯ ಕಲ್ಲು ನೋಡುತ್ತ ಇಂವ ಹುಡುಗನಾದಾನು ಅಂತ ಕಾಯುತ್ತ ಕುಳಿತಿದ್ವಿ.
ನಮ್ಮನ್ನ ಹುಡುಕಿ ಬಂದ ಮಾವ, ಅಮ್ಮ, ನಮಗೆ ಸಮಾ ಪೂಜೆ ಮಾಡಿದ್ರು ಆಮೇಲೆ ಅನ್ನೋದನ್ನೆನೂ ಹೇಳ್ಬೇಕಿಲ್ಲ ತಾನೆ?

ಆಗ ‘ಅನ್ ಹೋನಿ’ ಅಂತೊಂದು ಪುನರ್ಜನ್ಮ- ಭೂತ ಇತ್ಯಾದಿ ಕಾನ್ಸೆಪ್ಟಿನ ಸೀರಿಯಲ್ಲು ಬರ್ತಿತ್ತು. ಅದೊಂದು ಹಾರರ್ ಅಂತಲೆ ಪರಿಗಣಿಸಲಾಗ್ತಿತ್ತು. “ರಾಜೀವ್ ಗಾಂಧಿ- ಜನ ಹೆದರ್ತಾರೆ ಅಂತ ಅದನ್ನ ನಿಲ್ಲಿಸೋಕೆ ಹೆಳಿದ್ರಂತೆ… ಆಮೇಲೆ ಸೀರಿಯಲ್ ನವ್ರು ಸ್ವಲ್ಪ ಮೈಲ್ಡಾಗ್ ತೋರಿಸ್ತೀವಿ ಅಂತ ಕೇಳ್ಕೊಂಡ್ರಂತೆ…” ಇತ್ಯಾದಿ ರೂಮರ್ ಗಳನ್ನ ಹುಟ್ಟುಹಾಕಿತ್ತದು. ಈಗ ಹಾಗೆಲ್ಲ ಸೀರಿಯಲ್ಲುಗಳನ್ನ ಗಂಭೀರವಾಗಿ ಪರಿಗಣಿಸಲಿಕ್ಕೆ ಸಾಧ್ಯವಾ? ಹೋಗಲಿ… ಪ್ರಧಾನಿಯೊಬ್ಬರು ಹೀಗೆ ಪ್ರತಿಕ್ರಿಯಿಸಿದರು ಅನ್ನೋದು ರೂಮರಿಗೂ ಅಸಾಧ್ಯ ಅಲ್ವಾ!?

ರಾಮಾಯಣ- ಮಹಾಭಾರತ ಸೀರಿಯಲ್ಲುಗಳ ಬಗ್ಗೆ ನಾನು ಹೇಳೋದು ಏನೂ ಇಲ್ಲ ಬಿಡಿ. ಚಾಣಕ್ಯ, ಭಾರತ್ ಏಕ್ ಖೋಜ್ ಗಳನ್ನೂ ನೀವು ಮರೆತಿರಲಾರಿರಿ. ಅಮ್ಮ ಅಂತೂ ಭರತ್ ಏಕ್ ಖೋಜಿನ ಶೀರ್ಶಿಕೆ ಗೀತೆ- ಉತ್ತರ ಭಾರತೀಯ ಶೈಲಿಯಲ್ಲಿ ಮಂತ್ರ ಪಠಣ ಬರುವಾಗಲೆಲ್ಲ ಹಲ್ಲು ಕಡಿಯುತ್ತ ‘ಯಾರದೋ ತಿಥಿ ಅನ್ನೋ ಹಾಗೆ ಹೇಳ್ತಾರೆ’ ಅಂತಿದ್ದಿದ್ದು ನಂಗೆ ಚೆನ್ನಾಗಿ ನೆನಪಿದೆ!

ಅರೆ, ಈ ಮಧ್ಯೆ ಮೃಗ ನಯನೀ, ಫೂಲ್ ವಂತಿ, ಹಿಸ್ಸಾ ಶಾಂತೀ ಕಾ (ಅದು ‘ಕಿಸ್ಸಾ’ವೋ ‘ಹಿಸ್ಸಾ’ವೋ ಅಂತ ಆಗೆಲ್ಲ ಭಾಳಾ ಕನ್ಫ್ಯೂಸು. ಈಗ್ಲೂ… ಪ್ಲೀಸ್, ಯಾರೂ ಕ್ಲಿಯರ್ ಮಾಡ್ಬೇಡಿ… ಅದು ಹಾಗೇ ಇರ್ಲಿ!), ನುಕ್ಕಡ್, ಸರ್ಕಸ್, ಸ್ಪೇಸಿನ ‘ಸಿಗ್ಮಾ’ ಸೀರಿಯಲ್ಲು ಇವೆಲ್ಲ ಮರೆತುಬಿಟ್ಟೇನು ಮತ್ತೆ!

ಹಾಗೇ, ಪ್ರತಿ ಭಾನುವಾರದ ಸ್ಪೈಡರ್ ಮ್ಯಾನ್, ಡಿಸ್ನಿ ಕಾರ್ಟೂನುಗಳು, ವಿಕ್ರಮ್ ಔರ್ ಬೆತಾಳ್, ದಾದೀ ಮಾ ಕೀ ಕಹಾನಿಯಾ, ಪೋಟ್ಲೀ ಬಾಬಾ ಕೀ, ತೆನಾಲಿ ರಾಮ…. ರಾಮ ರಾಮಾ… ಎಷ್ಟೊಂದಿವೆ!

ಕನ್ನಡದ ಬಗ್ಗೆ ಕೇಳ್ತೀರಾ? ಒಳ್ಳೆ ಸೀರಿಯಲ್ಲುಗಳು ಬರ್ತಿದ್ದ ಕಾಲದಲ್ಲಿ ಶಿವಮೊಗ್ಗಕ್ಕೆ ಕನ್ನಡ ಪ್ರಸಾರ ಇರಲಿಲ್ಲ. ಬೆಂಗಳೂರಿನ ನಮ್ ಅಂಕಲ್ಲು ಕ್ರೇಜಿ ಕರ್ನಲ್ ಅನ್ನು ರೆಕಾರ್ಡ್ ಮಾಡಿಟ್ಕೊಳ್ತಿದ್ರು. ನಾನು ನೋಡಿದ್ದು ಅದೊಂದೇ.

ಇತ್ತೀಚಿನ ವರ್ಷಗಳಲ್ಲಿ ನಾನು ನೋಡಿದ ಚೆಂದದ ಕನ್ನಡ ಸೀರಿಯಲ್ಲುಗಳೆಂದರೆ- ಈ ಟೀವಿಯ ಆರಂಭದ ದಿನಗಳ  ‘ಸರೋಜಿನಿ’, ಆಮೇಲಿನ ‘ಎಲ್ಲೋ ಜೋಗಪ್ಪ ನಿನ್ನರಮನೆ’, ದೂರ ದರ್ಶನದ ಮನ್ವಂತರ . ಕಾಮನ ಬಿಲ್ಲು ಬಗ್ಗೆ ಕೆಳಿರುವೆ. ನೋಡಿಲ್ಲ. ಅದೂ ಕೂಡ ಚೆನ್ನಾಗಿತ್ತಂತೆ.  ಗರ್ವ ಚೆನ್ನಾಗಿ ಬಂತಾದರೂ ಸ್ವಲ್ಪ ಬೋರ್ ಹೊಡೆಸ್ತಿತ್ತು. ಸರೋಜಿನಿ ನೋಡುತ್ತ ನೋಡುತ್ತ ‘ನಂಗೂ ಒಬ್ಬ ಅಂತರಂಗದ ಗೆಳೆಯ ಬೇಕು’ ಅಂತ ಬಿಕ್ಕಿದ್ದು ನೆನಪು.
ಹಾಗೇ ‘ಎಲ್ಲೋ ಜೋಗಪ್ಪ…’ ದ ಟೈಟಲ್ ಸಾಂಗನ್ನ ಹಗಲಿರುಳು ಹಾಡ್ತಿದ್ದುದು….
ಅದರ ನಿರ್ದೆಶಕರು ನಮ್ಮ ಮುಂಗಾರಿನ ಯೋಗರಾಜ ಭಟ್ಟರು.

ಈಗಲೂ ಒಳ್ಳೆ ಸೀರಿಯಲ್ಲುಗಳಿಲ್ಲವೆಂದಲ್ಲ. ಆದರೆ ಅವುಗಳ ಪ್ರಮಾಣ ಕಡಿಮೆ. ಮೊಟ್ಟಮೊದಲ ಮೆಗಾ ಸೀರಿಯಲ್ಲು ‘ಶಾಂತಿ’ ಶುರುವಾಗಿ ಪಾಪ್ಯುಲ್ಲರ್ ಆಗ್ತಿದ್ದ ಹಾಗೆ ಎಳೀಲಿಕ್ಕೆ ಶುರು ಹಚ್ಚಿದ್ರು ನೋಡಿ… ಆಗ ಕ್ವಾಲಿಟಿ ಹಾಳಾಗ್ತಾ ಬಂತು. ಹಿಂದಿಯಲ್ಲಿ ಸ್ವಾಭಿಮಾನ್, ಕನ್ನಡದಲ್ಲಿ ಜನನಿ, ಮನೆತನ ಇವೆಲ್ಲವೂ ಹೀಗೆ ಶುರುವಲ್ಲಿ ಚೆನ್ನಾಗಿ ಬಂದು ಆಮೇಲಾಮೇಲೆ ನಮ್ಮ ಬಿಪಿ ಟೆಸ್ಟ್ ಮಾಡಲು ಶುರುವಿಟ್ಟವು.

ಇರಲಿ… ಯಾಕೆ ಇವತ್ತು ಇದನ್ನೆಲ್ಲ ಹೇಳಿದೆ? ಈ ಪ್ರಶ್ನೆಗೆ ಇಂಥದ್ದೇ ಅನ್ನುವ ಕಾರಣವಿಲ್ಲ. ಯಾಕೋ ಹೀಗೇ “ಪ್ರೇಮ್ ವೋ ಚಂದನ್ ಹೈ….” ನೆನಪಾಗಿತ್ತು. ಅದರ ನೆವದಲ್ಲಿ ಸೀರಿಯಲ್ಲುಗಳ ಸರಮಾಲೆಯೇ ಕಣ್ಮುಂದೆ ಬಂತು. ನನನ್ ಕಾಲದವರು ಸಾಕಷ್ಟು ಜನರಿದ್ದರಲ್ಲ, ಹೇಳ್ಕೊಳ್ಳೋಣ ಅನ್ನಿಸ್ತು, ಅಷ್ಟೇ.

ನಾನು ಹೇಳಲು ಮರೆತ, ನಮ್ಮ ದಿನಗಳ ಸೀರಿಯಲೊಲುಗಳಿದ್ದರೆ ನೀವೂ ನೆನಪಿಸಿಕೊಡಿ ಪ್ಲೀಸ್…

ಅಯ್ಯೋ! ಪ್ರಮಾದ… ಮಾಲ್ಗುಡಿ ಡೇಸನ್ನೇ ಮರೆತುಬಿಟ್ಟಿದ್ದೆ!!

5 thoughts on “ಅನುಗೂಂಜಿನ ನೆವದಲ್ಲಿ… (ಒಂದು ರಿಸೈಕಲ್ಡ್ ಬರಹ)

Add yours

  1. ರೀ.. ನಾನು ಹಿಂದಿ ದಾರಾವಾಹಿಗಳನ್ನು ನೋಡಿಯೇ ಇಲ್ಲ.. ನಂಗೆ ಹೆಂಗೆ ಅರ್ಥ ಆಗ್ಬೇಕು.. ಆದ್ರೂ ನಿಮ್ಮನ್ನ ಮೆಚ್ಬೇಕು ಕಣ್ರೀ.. ಅದೆಷ್ಟು ಚೆನ್ನಾಗಿ ನೆನಪಿನಂಗಳಕ್ಕೆ ನೆಗೆಯಿತ್ತಿರಿ .. ? ಹಳೆ ನೆನಪುಗಳನ್ನ ಹೆಕ್ಕಿ ಹೆಕ್ಕಿ , ತೆಗಿತೀರಿ .. ನಿಮ್ಮ most of all the ಬರಹಗಳಲ್ಲೂ, ನೆನಪಿನ ಖಜಾನೆ ತೆರೆದೆ ಇರುತ್ತೆ.. ನಂಗೆ ಇಷ್ಟ ಆಯಿತು…

  2. ನಾನು school ನಿಂದ ಮನೆಗೆ ಬರ್ತಾ ಇರೋವಾಗ , ಮನೆ ಹೊರಗಡೆ ಹೆಂಗಸರು ಅಂಗಳ ಸ್ವಚ್ಛ ಮಾಡೋ ಮಾಡೋ ಸಮಯದಲ್ಲಿ ಒಳಗಡೆಯಿಂದ ಬರ್ತಾ ಇದ್ದ ಹಾಡು …” ಮಾಯಾಮೃಗ , ಮಾಯಾಮೃಗ….ಮಾಯಮೃಗವೆಲ್ಲಿ ..” ಬಲು ದೂರದಿ ನೆಗೆಯುತ್ತಿದೆ.. ಆ ನೀಲಿಯ ಬೆಳಕೇ.. ” ಹೊಳೆಯುತ್ತಿದೆ ಕಣ್ಣಂತು ಬಿಳಿ ವಜ್ರದ ಹಾಗೆ .. ” Awesome feelings.. !!

  3. ಜುನೂನ್,ಸುರಾಗ್,ದಿಲ್ ಅಪನ ಪ್ರೀತ್ ಪರಾಯಿ, ನೂಪುರ್, ಕುಚ್ ಪಾಯ ಕುಚ್ ಖೋಯ, ಶಾರುಖ್ ನಾ ಸರ್ಕಸ್.,ಅಜ್ನಬಿ ,ಏಕ ಸೆ ಬಡಕರ್ ಏಕ ,ಹಂ ಪಂಚಿ ಏಕ ಚಾಲ್ ಕೆ ,ಗ್ಹುತನ್(ghutan), ಅಮರಾವತಿ ಕೆ ಕಥಾಯೇ, ತೆಹೆಕಿಕಾತ್,ದೀವಾರ್,ಅಲಿಫ್ ಲೈಲಾ, ಲಿಸ್ಟ್ ದೊಡ್ಡದಿದೆ…..ಇನ್ನು ಕನ್ನಡಕ್ಕೆ ಬಂದರೆ..ನಾನು ನೋಡಿದ ನೆನೆಪಿತ್ತ ಮೊದಲ ಧಾರಾವಾಹಿ ಮಲ್ಲಿಕಾ ಪರಿಣಯ,ಆಮೇಲೆ ಗೂಡಿನಿಂದ ಬಾನಿಗೆ ಅಸಾಧ್ಯ ಅಳಿಯ , ಬಾಳು ಬೆಳಗಿತು, ಜೀವನ ಚಕ್ರ ,ಜೇನು ಗೂಡು ,ದ್ವೀತಿಯ, ಕಲಿ ಕರ್ಣ,ಡಿಸ್ಕೋ ರಾಗ ಆಡಿ ತಾಳ ,ಮಾಯಾಮೃಗ ಮನೆತನ ,ಅರ್ಧ ಸತ್ಯ, ,,,,,,,,,,ನನ್ನ ಧಾರಾವಾಹಿ ಪ್ರೇಮ ಅದೆಷ್ಟು ಎಂದರೆ ನಾ ೮ ನೇ ಕ್ಲಾಸ್ ನಲ್ಲಿ ಫೈಲ್ ಆಗ್ತೀನಿ ಅನ್ನೋ ನನ್ನ ಅಮ್ಮನ ಮನದಲ್ಲಿ ಕೂತು ಬಿಟ್ಟಿತ್ತು…ಪಾಸಾದೆ..ಧಾರವಾಹಿ ದಯೆ

ನಿಮ್ಮ ಟಿಪ್ಪಣಿ ಬರೆಯಿರಿ

Blog at WordPress.com.

Up ↑