ತಿನ್ನಬಾರದ ಹಣ್ಣು ತಿಂದಿದೇವೆ ನಾವು


(ಓಶೋ ನಿಷೇಧಿತ ಹಣ್ಣಿನ ಬಗ್ಗೆ ಕೊಡೋ ವ್ಯಾಖ್ಯೆ ಅದ್ಭುತ. ಅವರದನ್ನ ತಿಳಿವಿನ ಹಣ್ನು ಅನ್ನುತ್ತಾರೆ. ಅದನ್ನ ತಿಂದಾಗ ಆಡಮ್- ಈವರಿಗೆ ತಮ್ಮ ಹುಟ್ಟಿನ ಉದ್ದೇಶ ಗೊತ್ತಾಯ್ತು, ಸ್ವತಂತ್ರರಾಗಿ ಬದುಕು ಕಟ್ಟಿಕೊಂಡರು ಅನ್ನುತ್ತಾರೆ ಓಶೋ. ಅದನ್ನ ಓದುತ್ತ ನನ್ನೊಳಗಿನ ಅವರಂಥದೇ ತಲೆತಿರುಕತನ ಜಾಗೃತವಾಗಿ ಈ ಕವಿತೆ…. ಥರದ್ದು…)

ಬಾಯಿ ಒರೆಸಿಕೋ
ನೀರು ಕುಡಿದುಬಿಡು
ರುಚಿ ನಾಲಗೆಯಗಲಿ
ತೊಲಗಿಹೋಯ್ತೋ ನೋಡು.
ತಿನ್ನಬಾರದ ಹಣ್ಣು
ತಿಂದಿದೇವೆ ನಾವು.

ಮೊದಲಿಂದಲೂ ಹಾಗೇನೇ
ದೇವರೆಂಬ ಅಪ್ಪ
ತೋಟದಲಿ ಗಿಡ ನೆಟ್ಟು
ಹೂಬಿಟ್ಟು ಹಣ್ಣಿಟ್ಟು
ತಿನ್ನಬೇಡಿರೆಂದ.
ಆಗಿಂದಲು ಹಿಗೇನೇ
ತಿನ್ನಬಾರದ ಹಣ್ಣು
ತಿಂದಿದೇವೆ ನಾವು.

ಪಾಪವೆಂದರೆ ಅಷ್ಟೇನೆ
ಅಪ್ಪನ ಮಾತು ಮುರಿಯೋದು
ಅದಕ್ಕವನು ಉರಿಯೋದು
ಪಾಪವೆಂದರೆ ಅಷ್ಟೇನೆ
ಚಿನ್ನವಾದರು ಪಂಜರ
ಹೊರೆಯೆಂದು ಅರಿಯೋದು.
ತಿನ್ನಬಾರದ ಹಣ್ಣನ್ನೆ
ಪಟ್ಟು ಹಿಡಿದು ತಿನ್ನೋದು.

ಅಪ್ಪನಹಂಕಾರ ಹಣ್ಣು
ತಿಳಿವ ತಿರುಳು ಮರದಲಿಟ್ಟ
ಗುಟ್ಟು ಹೇಳೋ ಹಾವು ಬಿಟ್ಟ
ತನ್ನ ಮಾತು ಮೀರೋದಿಲ್ಲ
ಶಾಪ ಭಯವ ದಾಟೋದಿಲ್ಲ
ಅನ್ನೋ ನೆಚ್ಚಿಕೆಯವನ ಮೀಸೆಗೆ
ಮಣ್ಣು ಮುಟ್ಟಿಸಿ ನೆಲವ ಮೆಟ್ಟಿ
ಗೆದ್ದಿದೇವೆ ನಾವು.
ತಿನ್ನಬಾರದ ತಿಳಿವ ಹಣ್ಣು
ಮರಳಿ ಮತ್ತೆ ಕದ್ದು ಕದ್ದು
ತಿಂದಿದೇವೆ ನಾವು.

3 thoughts on “ತಿನ್ನಬಾರದ ಹಣ್ಣು ತಿಂದಿದೇವೆ ನಾವು

Add yours

  1. “ಪಾಪವೆಂದರೆ ಅಷ್ಟೇನೆ
    ಅಪ್ಪನ ಮಾತು ಮುರಿಯೋದು
    ಅದಕ್ಕವನು ಉರಿಯೋದು
    ಪಾಪವೆಂದರೆ ಅಷ್ಟೇನೆ
    ಚಿನ್ನವಾದರು ಪಂಜರ
    ಹೊರೆಯೆಂದು ಅರಿಯೋದು.
    ತಿನ್ನಬಾರದ ಹಣ್ಣನ್ನೆ
    ಪಟ್ಟು ಹಿಡಿದು ತಿನ್ನೋದು.”

    –WOW!! likadu ittu! 🙂

  2. ಈ ಒಂದು ಪ್ಯಾರಬಲ್ ಗೆ ಓಶೋ ಒಬ್ಬನೆ ಹತ್ತಾರು ಇಂಟರ್ ಪ್ರಿಟೇಶನ್ ಕೊಟ್ಟಿದ್ದಾನೆ. ಎಷ್ಟು ಆಯಾಮಗಳಲ್ಲಿ ಇದನ್ನು ಬಿಡಿಸಿಟ್ಟಿದ್ದಾನೆ. ಬಹುಶಃ ಬೈಬಲನ್ನು ಇಷ್ಟು ಅರ್ಥವತ್ತಾಗಿ ವಿವರಿಸಿದವರಲ್ಲಿ ರಜನೀಶ್ ಮೊದಲಿಗ ಅನ್ನಿಸುತ್ತೆ.

ನಿಮ್ಮ ಟಿಪ್ಪಣಿ ಬರೆಯಿರಿ

Blog at WordPress.com.

Up ↑