ನಾನೂ ಸೈತಾನನ ಮಗಳೇನೆ!


ಚೆಂದದ ಫೋಟೋಗಳನ್ನೆ ಹೆಕ್ಕಿ ಫೇಸ್ ಬುಕ್ಕಿಗೆ ಹಾಕುವಾಗ ಗಲ್ಲದ ಮೇಲಿನ ಪಿಂಪಲ್ ಅಣಕಿಸುತ್ತ ಇರುತ್ತದೆ. ಡಿಸೆಂಬರಿನ ತುಟಿಯ ಬಿರುಕಲ್ಲಿ (ಎಲಾ ನಿನ್ನ ಅನ್ನುವಂಥ) ಮುಗುಳು ನಗು ತುಂಬಿಕೊಳ್ಳುತ್ತದೆ. ಈ ಚಳಿಗೆ ಮೈಕೊರೆಯುವಾಗ ಯೋಚನೆ. ಅವಳು ಬೆನ್ನಿಗೆ ಹಾಕಿದ ಚೂರಿ ಫ್ರೀಜರಿನಲ್ಲಿಟ್ಟು ತೆಗೆದ ಐಸ್ ಕ್ಯೂಬಾ?
ಕೊರಳ ತಿರುವಲ್ಲಿ ಸದಾ ಅವನ ಹೂಮುತ್ತಿರುವ ಈ ದಿನಗಳಲ್ಲಿ ಕೊರಗಲೊಂದು ನೆವ ಬೇಕು. ಅವಳ ದ್ರೋಹಕ್ಕೆ ಋಣಿ. ಒಂದಲ್ಲ ಒಂದು ಬೇಸರಕ್ಕೆ ಜೋತುಕೊಳ್ಳಲು ಎಷ್ಟೊಂದು ಹಲಬುತ್ತೀವಿ! ಉತ್ಕಟವಾಗಿ ಬದುಕೋದಿಕ್ಕೆ ಪ್ರೀತಿ ಹೇಗೆ ಕಾರಣವೋ ಸ್ಪರ್ಧೆಯೂ ಅಷ್ಟೇ ದೊಡ್ಡ ಕಾರಣ ಅನ್ನಿಸುತ್ತೆ. ಹೊರಗಿನ ಯಾರೂ ಸಿಕ್ಕದಿದ್ದರೆ ನೆನ್ನೆಯ ನನ್ನ ಮೇಲೆ ನಾಳಿನ ನನ್ನ ಪೈಪೋಟಿ…
~
ನನ್ನ ಸಿಮೆಂಟ್ ಅಂಗಳದಲ್ಲೊಂದು ಪುಟ್ಟ ಪಾತಿ ಇದೆ. ಅದರಲ್ಲೊಂದು ಗುಲಾಬಿ ಗಿದ. ಅದು ಪ್ರತಿ ತಿಂಗಳೂ ತಪ್ಪದೆ ಹೂಗಳನ್ನ ಕೊಡುತ್ತೆ. ಮತ್ತೊಂದು ಮೊಗ್ಗು ಅರಳಿಕೊಳ್ಳೋವರೆಗೆ ಒಣಗಿದ್ದೂ ಕೆಂಪು ಉಳಿಸಿಕೊಂಡಿರುತ್ತೆ. ಅಮ್ಮ ಎಲ್ಲಿಂದಲೋ ಒಂದು ಪಿಳಿಕೆ ಸಾಂಬಾರಬಳ್ಳಿ ಗಿಡದ ತುಂಡು ತಂದು ನೆಟ್ಟು ದೊಡ್ಡ ಮಾಡಿದ್ದಾಳೆ. ಮತ್ತೊಂದು ಕಪ್ಪನೆಯ ಪ್ಲಾಸ್ಟಿಕ್ ಕೊಟ್ಟೆಯಲ್ಲಿ ಐದು ಸುತ್ತಿನ ಮಲ್ಲಿಗೆ ಗಿಡ ಬೆಳೆದು ನಿಂತಿದೆ.
ನನಗೆ ಸುವಾಸನೆ ಅಲರ್ಜಿ. ಒಂದು ಬೆಳಗು ಅಕ್ಶೀ…. ಹೊರಟರೆ ಇಡೀ ದಿನ ಕಣ್ಣು ಊದಿಕೊಳ್ಳುವಷ್ಟು ಸರಣಿ ಹೊರಡುತ್ತೆ. ಅದಕ್ಕೇ ಈ ಗಿಡವನ್ನ ನಾನು ಕೂರುವ ಕಟ್ತೆಯಿಂದ ಸಾಕಷ್ಟು ದೂರ ಇರಿಸಿದ್ದೇನೆ. ಮಲ್ಲಿಗೆಯ ಅಂದ ಮಾತ್ರ ಕಾಣುವಂತೆ, ಸಹವಾಸ ಬೇಡದಂತೆ… ಅನ್ನಿಸುತ್ತೆ, ಕೆಲ ಸಂಬಂಧಗಳೂ ಹೀಗಿದ್ದರೆ ಚೆಂದ. ಎಲ್ಲವೂ ಸರಿಸರಿಯೇ ಇರ್ತವೆ. ಏನೇನೋ ಕಾರಣಕ್ಕೆ ನನಗೆ ಮಾತ್ರ ಅಪಥ್ಯವಾಗುವಂತೆ… ಒಂದಷ್ಟು ವಿಷಯಗಳಲ್ಲಿ ನಾನೂ ಸೈತಾನನ ಮಗಳೇನೆ!
~
ಯೂಟ್ಯೂಬಲ್ಲಿ ಒಂದು ವಿಡಿಯೋ ನೋಡುತ್ತಾ ಇದ್ದೆ. ಅಬ್ಬಬ್ಬಾ ಅಂದರೆ ಎರಡು ವರ್ಷಗಳ ಪುಟ್ಟಪೋರ ಅಳುಅಳುತ್ತಾ ದುಂಬಾಲು ಬೀಳ್ತಿರುತ್ತೆ. ಅಮ್ಮ ಕಂಡಲ್ಲೆಲ್ಲ ಉಸಿರುಗಟ್ಟುವ ಅಳು. ಅವಳಿಲ್ಲದಲ್ಲಿ ಸುಮ್ಮನೆ ನಡಿಗೆ. ಮತ್ತೆ ಅವಳೆದುರು ನೆಲದ ಮೇಲೆ ಹೊಡಕಾಡುತ್ತ ಅಳು. ಗಮನ ಸೆಳೆಯೋದಿಕ್ಕೆ ಏನೆಲ್ಲ ಉಸಾಬರಿ! ಮನೆ ತುಂಬ ಜನ ನೆರೆದ ಹೊತ್ತು ಏನಾದರೊಂದು ನೋವು ಹೇಳುವ ಮಕ್ಕಳ ಹಾಗೇನೆ ನಾವು. ಗಮನ ನಮ್ಮಿಂದಾಚೆ ಇದೆಯೆಂದರೆ ಚಡಪಡಿಕೆ. ಊಹ್… ಎಷ್ಟೆಲ್ಲ ಕಷ್ಟಗಳ ಹೊರೆ ಅಡಗಿ ಕುಳಿತಿರುವಂತೆ ಭಾಸ.
ಮಕ್ಕಳ ಹಾಗೇನೆ ನಾನೂ. ರೊಚ್ಚಿಗೆಳುತ್ತೇನೆ, ಅತ್ತು ಸುಮ್ಮನಾಗುತ್ತೇನೆ. ಗೊತ್ತಿದೆ, ಮುದ್ದಿಸುವ ತುಟಿಗಳು ನನಗಾಗಿ ಕಾದಿರುತ್ತವೆ. ಬಳಸುವ ತೋಳುಗಳು ನನಗಾಗಿ ಕಾತರಿಸುತ್ತಿವೆ. ನಾನು ಕಂಡುಕೊಂಡಿದ್ದೀನಿ. ಹೀಗೆ ಸಂಭಾಳಿಸೋರು ಇರುವಾಗ ಮಾತ್ರ ನನಗೆ (ನಮಗೆ ಅಂತಲೂ ಅಂದ್ಕೊಳ್ಳಿ) ಅಳು ಬರ್ತದೆ. ಆಶ್ಚರ್ಯ…ಇಲ್ಲಿ ಅನೈಚ್ಛಿಕವಾದ್ದು ಯಾವುದಿದೆ!?
~
ಪಕ್ಕದ ಮನೆ ಗಯ್ಯಾಳಿ (ನನಗೆ ಹಾಗೆ ಕಾಣುವ) ಹೆಂಗಸು ನಮ್ಮ ಸಿಮೆಂಟ್ ಅಂಗಳದಲ್ಲಿ ಹಪ್ಪಳ ಹರಡೋದಕ್ಕೆ ಬರುತ್ತಾಳೆ. ಗೇಟು ತೆಗೆದಿಟ್ಟು ಹೋಗ್ತಾಳೆನ್ನುವ ಕೋಪ ನನಗೆ. ಎದ್ದು ಹೋಗಿ ಗೇಟು ಹಾಕಿ ಬರಲಿಕ್ಕೆ ಎರಡು ನಿಮಿಷ ಬೇಕು. ಕೋಪ ಬರಿಸಿಕೊಂಡರೆ ಜೀವಮಾನ ಪೂರ್ತಿಯೂ  ಸಾಕಾಗದು.
ತೆಲುಗು ಪಿಚ್ಚರ್ ರೌಡಿಯ ಹಾಗಿರುವ ಮೀಸೆ ಡ್ರೈವರ್ ನಮ್ಮ ಗೇಟೆದುರೇ ವ್ಯಾನ್ ನಿಲ್ಲಿಸಿ ಹೋಗ್ತಾನೆ.  ಹತ್ತು ಥರ ಹೇಳಿಯೂ ಉಪಯೋಗವಾಗದೆ ನನ್ನ ತಲೆ ಕೆಡುತ್ತದೆ. ಯೋಚಿಸ್ತೀನಿ, ಹೇಳಿದ ಹತ್ತೂ ಥರದಲ್ಲಿ ಮೆದುವಾಗಿದ್ದು, ತಣ್ಣನೆಯದ್ದು ಯಾವುದಾದರೂ ಇತ್ತಾ? ಯಾರೆಲ್ಲರ ಎದುರು ಹೇಳುವಾಗ ‘ಹ್ಮ್’ ಅಂದುಬಿಡ್ತೀನಿ. ಆದರೆ… ಅದು ನಿಜಾನಾ?
~
ಅದೆಲ್ಲ ಹಾಗೇನೇ. ಒಳಗೊಳಗೆ ಸಾವಿರದೆಂಟು ಹುಳುಕು ಇರ್ತವೆ. ಎಲ್ಲವನ್ನ ತೆರೆದಿಡಲಿಕ್ಕಾಗ್ತದೆಯೇನು? ಬಂದವರಿಗೆ ರುಚಿಯಾದ್ದನ್ನ ತಿನ್ನಿಸಿ ತಳದ ಸೀದ ಉಪ್ಪಿಟ್ಟು ತಿನ್ನೋ ಹಾಗೆ. ನಿನ್ನೆಯ ತಂಗಳಿಗೆ ಮೊಸರು ಹಾಕ್ಕೊಂದು ಮುಗಿಸೋ ಹಾಗೆ. ನಾನೊಬ್ಬಳೇ ಇದ್ದರೆ ಇರುವ ಹಾಗೆ ಅವನೆದುರು ಮಾತ್ರ ಇರಬಲ್ಲೆ. ಎಲ್ಲರೆದುರು ಆಗ್ತದೇನು? ಆಗಿಸ್ಕೊಳ್ಳೋಕೆ ಅಕ್ಕ ನಾನಲ್ಲ. ಅವಳಂಥವರು ಎಲ್ಲೋ ಕೆಲವು ನೂರು ಮಾತ್ರ.
ಫೇಸ್ ಬುಕ್ಕಲ್ಲಿ ಚೆಂದದ ಪ್ರೊಫೈಲ್ ಫೋಟೋ ಹಾಕುತ್ತ ಈ ಎಲ್ಲ ಯೋಚನೆ ತಲೆಯಲ್ಲಿ ಮೆರವಣಿಗೆ ಹೋಗ್ತವೆ. ಇವನ್ನ ಸಮಜಾಯಿಷಿಗಳು ಅಂತ ಗಟ್ಟಿ ಹೇಳ್ಕೊಳ್ಳಲೂ ನಾಚಿಕೆಯಂಥ ಭಯ.
~
ಇಂಥ ಆಲೋಚನೆಗಳ  ಪಲ್ಲಕ್ಕಿಯಲ್ಲಿ ನಾನು. ಅದನ್ನ ಹೊತ್ತಿರುವ ನಾಕು ಮಂದಿಯೂ ನಾನೇ. ಅರೆ… ಚಾಮರ ಪತಾಕೆ ಹೊತ್ತವರೆಲ್ಲ ನಾನೇನೇ! ಅಗೋ, ಅಲ್ಲಿ ಪರಾಕು ಹೇಳ್ತಿರುವರೆಲ್ಲ ನಾನೇ. ಸುತ್ತ ಮುತ್ತ ನನ್ನೇ ತುಂಬಿಟ್ಟುಕೊಂಡು, ನಾನೇ ನನ್ನ ಕೇಂದ್ರಬಿಂದು. ಎಲ್ಲರೂ ಹೀಗೇನಾ? ಅಥವಾ ನಾನು ಮಾತ್ರಾನಾ? ಪ್ರಾಮಾಣಿಕತೆಯ ಅರ್ಥ ಹುಡುಕಬೇಕು!
ಆದರೂ ಈಗ- ‘ಮೊದಲಿನ ಹಾಗಲ್ಲದೆ ನಾನೇನು ಮಾಡ್ತಿದ್ದೀನಿ ಅನ್ನೋದನ್ನ ನೋಡಬಲ್ಲವಳಾಗಿದ್ದೀನಿ. ಅಥವಾ, ಕೊನೆಪಕ್ಷ ಹಾಗಂತ ಅಂದುಕೊಂಡಿದ್ದೀನಿ….’
ಸ್ಟೇಟಸ್ ಮೆಸೇಜಿಗೆ ಒಂದಷ್ಟು ಲೈಕ್ಸು,ಮತ್ತಷ್ಟು ಕಮೆಂಟ್ಸ್ ಬಂದಿವೆ.
ಸದ್ಯ…. ಜನ ನನ್ನನ್ನ ಗಮನಿಸ್ತಿದಾರೆ!

ನಿಮ್ಮ ಟಿಪ್ಪಣಿ ಬರೆಯಿರಿ

Blog at WordPress.com.

Up ↑