ಹೊಸ ವರ್ಷ ನನಗೆ ಹೊಸ ನಂಬರ್ ಮಾತ್ರ


ನಿಶಾಚರ ಪಿಚಾಚಿಯ ಹಾಗೆ 7 ಗಂಟೆಯಾದರೂ ಹೊರಳಾಡುತ್ತಿದ್ದ ನನ್ನ ಮೇಲೆ ಹಾರಿ, ಹೊದಿಕೆ ಕಿತ್ತು ಎಬ್ಬಿಸಿದ ಮಗ. ನಾವಿಬ್ಬರೂ ಕೆಲ್ವಿನ್- ಹಾಬ್ಸ್ ಹಾಗೆ ಕಿತ್ತಾಡಿ ಅಮ್ಮನ ಹತ್ತಿರ ಬಯ್ಸಿಕೊಂಡು, ಏನೂ ಆಗೇ ಇಲ್ಲ ಅನ್ನುವಂತೆ ಹೆಗಲೆಗಲ ಮೇಲೆ ಕೈಹಾಕ್ಕೊಂಡು ನಗುತ್ತ ರೂಮಾಚೆ ಬಂದೆವು. ಅಡುಗೆ ಮನೆಯಲ್ಲಿ ಅವರೆ ಕಾಳು ಸಾಗು ಮತ್ತು ಅಕ್ಕಿ ರೊಟ್ಟಿಯ ಘಮ ತುಂಬಿಕೊಳ್ಳುತ್ತಿತ್ತು. ಮಗ ತಕಪಕ ಕುಣಿಯುತ್ತ ಇವತ್ತು ಇಯರ್ ಎಂಡ್… ರಜ ಹಾಕು ಅಂತ ರಾಗ ತೆಗೆದಿದ್ದ.

ನಾವು ಮೂರು ಜನಕ್ಕೆ ಮತ್ತೆ ಮೂರು ಮಕ್ಕಳು... 🙂

ನನ್ನ ಕಾಫಿ ಕಟ್ಟೆಯ ಮೇಲೆ ಕುಂತು ಕಪ್ ನಿಂದ ತೆಳುವಾಗಿ ಏಳುತ್ತಿದ್ದ ಹಬೆಯನ್ನೆ ನೋಡುತ್ತ ಉಳಿದೆ. ಇಂಥಾ ಸಮಯದಲ್ಲೆ ಫ್ಲಾಶ್ ಬ್ಯಾಕ್ ಗೆ ಹೋಗುವಂತೆ ನನ್ನ ಮನಸ್ಸು ಯಾಂತ್ರಿಕವಾಗಿ ಪ್ರೋಗ್ರಾಮ್ ಆಗಿದೆ ಅನ್ನಿಸುತ್ತೆ. ನಮ್ಮ ಶಾಲಾ ದಿನಗಳ ವರ್ಷಾಂತ್ಯದ ನೆನಪು. ಕಾನ್ವೆಂಟ್ ನಲ್ಲಿ ಓದುತ್ತಿದ್ದ ನನಗೆ ಹೊಸ ವರ್ಷವನ್ನ ಸ್ವಾಗತಿಸೋದು ಕೂಡ ಒಂದು ಸಾಂಪ್ರದಾಯಿಕ ಹಬ್ಬದ ಹಾಗೆ. ಚರ್ಚ್ ನಲ್ಲಿ ನಡುರಾತ್ರಿ ಮೂರು ಸರ್ತಿ ಗಂಟೆ ಬಾರಿಸಿದರೆ ಹೊಸ ವರ್ಷ ಬಂತು ಅಂತಲೇ ಅರ್ಥ. ನಮ್ಮ ಮನೆವರೆಗೂ ಕೇಳುತ್ತಿದ್ದ ಗಂಟೆ ಸದ್ದನ್ನ, ಅದಿಲ್ಲದಿದ್ದರೆ ವರ್ಷ ಮುಗಿಯುವುದೆ ಇಲ್ಲವೇನೋ ಅನ್ನುವಂತೆ ಕಾಯುತ್ತ ಕೂತಿರುತ್ತಿದ್ದೆವು. ಅಮ್ಮ ಊರೆಲ್ಲ ಹುಡುಕಿ ಪ್ಲಮ್ ಕೇಕ್ ತಂದಿಟ್ಟಿರುತ್ತಿದ್ದಳು. ನಮ್ಮ ಚಡಪಡಿಕೆಗೆ ಅದೂ ಒಂದು ಕಾರಣವಾಗಿರುತ್ತಿತ್ತು. ಅಮ್ಮ ಹೊಸ ವರ್ಷದ ಸ್ವಾಗತಕ್ಕೆ ತನ್ನದೇ ಒಂದು ಸಂಪ್ರದಾಯ ರೂಢಿಸಿದ್ದಳು. ದೇವರ ಕೋಣೆಯಲ್ಲಿ ನೀಲಾಂಜನ ಹಚ್ಚಿ ಬಂದು ಟೇಬಲ್ ಮೇಲೆ ಕೇಕನ್ನಿಟ್ಟು ಕಟ್ ಮಾಡುತ್ತಿದ್ದಳು. ನಾವು ಅಪ್ಪನಿಗೆ ಹೆದರುತ್ತಾ ಸಣ್ಣಗೆ ಕೂಗಾಡುತ್ತಾ (ಕೂಗಾಡಿದರೇನೆ ಖುಷಿ ತೋರಿಸಿಕೊಂಡ ಹಾಗೆ ಅಂದುಕೊಂಡಿದ್ದರಿಂದ) ನಮನಮಗೆ ಹೊಸ ವರ್ಷದ ಶುಭಾಶಯ ಹೇಳಿಕೊಳ್ತಿದ್ದೆವು. ದೂರದರ್ಶನದಲ್ಲಿ ನಡುರಾತ್ರಿವರೆಗೂ ಹೊಸವರ್ಷಕ್ಕಾಗಿ ವಿಶೇಷ ಕಾರ್ಯಕ್ರಮಗಳನ್ನು ಬಿತ್ತರಿಸುತ್ತಿದ್ದರು. ಅವನ್ನೆಲ್ಲ ನೋಡಿಕೊಂಡು, ಹನ್ನೆರಡು ಗಂಟೆ ಮೀರಿಯೂ ಎದ್ದಿರುವುದು ಅತಿದೊಡ್ಡ ಸಾಹಸ ಎನ್ನುವಂತೆ ಜಂಭಜಂಭದ ಭಾವ ಹೊತ್ತು ಮಲಗುತ್ತಿದ್ದೆವು.
ಹೊಸ ವರ್ಷ ಬರಮಾಡಿಕೊಳ್ಳುವ ಈ ಪದ್ಧತಿ ಅಣ್ಣ ಹೈಸ್ಕೂಲಿಗೆ ಕಾಲಿಡುವ ತನಕ ನಡೆದಿತ್ತು. ಆಮೇಲೆ ಅವನು ನಾವ್ಯಾಕೆ ಇದನ್ನೆಲ್ಲ ಮಾಡಬೇಕು ಅಂತ ರಗಳೆ ತೆಗೆಯತೊಡಗಿದ್ದ. ಅವನ್ಯಾಕೆ ಹಾಗಾಡ್ತಾನೆ ಅಂತ ಗೊತ್ತಾಗದ ನಾನೂ ತಮ್ಮನೂ ಅವನನ್ನ ಬಯ್ಕೊಳ್ಳುತ್ತ ಗೊಣಗುತ್ತಿದ್ದೆವು. ನನ್ನ ಪ್ರೈಮರಿ ದಿನಗಳು ಮುಗಿಯುವ ಹೊತ್ತಿಗೆ ಎಲ್ಲವೂ ಬದಲಾಗತೊಡಗಿದ್ದವು. ಊರಿನ ಒಂದು ದೊಡ್ಡ ಬಯಲಲ್ಲಿ ಭಾರೀ ಟೆಂಟ್ ಹಾಕಿ ‘ನ್ಯೂ ಇಯರ್ ದೋಸೆ ಕ್ಯಾಂಪ್’ ಅಂತ ಶುರುವಾಯ್ತು. ರಾತ್ರಿಯಿಂದ ಬೆಳಗಿನ ತನಕ ಅಲ್ಲಿ ಬಗೆಬಗೆಯ ದೋಸೆಗಳನ್ನ ತಿನ್ನುತ್ತ ಹೊಸವರ್ಷವನ್ನ ಕರೆದುಕೊಳ್ಳುವ ಕಾನ್ಸೆಪ್ಟ್ ಅದು! ಇದರೊಂದಿಗೆ ಈ ಆಚರಣೆ ಚರ್ಚಿನಿಂದ ಆಚೆಗೂ ವಿಸ್ತರಿಸಿಕೊಳ್ಳತೊಡಗಿತು. ಬರಬರುತ್ತ ನಡುರಾತ್ರಿ ಹಾಡು ಹಸೆ, ನಗೆ ಕಾರ್ಯಕ್ರಮ ಇತ್ಯಾದಿಗಳೆಲ್ಲ ಶುರುವಾದವು. ನನ್ನೊಳಗೆ ಸಂಭ್ರಮಿಸುವ ಉತ್ಸಾಹ ಬತ್ತುತ್ತ ಹೋಯ್ತು.
ಈ ನಡುವೆ ಕಾಲೇಜಿಗೆ ಕಾಲಿಟ್ಟಿದ್ದ ಅಣ್ಣ ತನ್ನ ಧೋರಣೆಯಲ್ಲಿ ಮತ್ತೊಮ್ಮೆ ಬದಲಾವಣೆ ಮಾಡಿಕೊಂಡಿದ್ದ. ‘ಇದು ವ್ಯವಾಹರಕ್ಕೆ ಹೊಸತಷ್ಟೇ, ನಾವು ಆಚರಿಸೋದು ಬೇಡ’ ಅನ್ನುತ್ತಲೆ, `ನಾವು ಹುಡುಗರು ಒಂದ್ಕಡೆ ಸೇರ್ತೀವಿ’ ಅಂತ ಹೊರಟುಬಿಡ್ತಿದ್ದ. ಅವನ ಹಿಂದೆಹಿಂದೆಯೇ ಕಾಲೇಜು ತುಳಿದಿದ್ದ ನಾನು, ಹುಡುಗರು ಬ್ಯಾಗಿನಲ್ಲಿಟ್ಟು ಹೋಗ್ತಿದ್ದ ಗ್ರೀಟಿಂಗ್ ಕಾರ್ಡ್ ಗಳನ್ನ ಅಮ್ಮ ನೋಡದ ಹಾಗೆ ಮುಚ್ಚಿಡುವ ಆತಂಕದಲ್ಲೆ ರಾತ್ರಿ ಕಳೆಯುತ್ತಿದ್ದೆ.
ನನ್ನ ಕಾಲೇಜ್ ಅವಧಿ ತೀರ ಚಿಕ್ಕದಿತ್ತು. ಬರೀ ಎರಡೂ ವರೆ ವರ್ಷದ್ದು ಅದು. ಮದುವೆಯಾಗಿ ಹೋದವನ ಮನೆಯಲ್ಲಿ ನ್ಯೂ ಯಿಯರ್ ಪಾರ್ಟಿ ಬಹಳ ಸಿನಿಮೀಯವಾಗಿರುತ್ತಿತ್ತು. ಒಂದೆರಡು ವರ್ಷ ಅನ್ನುವ ಹೊತ್ತಿಗೆ ನನ್ನ ಪಾಲಿಗೆ ದಿನಮಾನಗಳೆಲ್ಲವೂ ಅರ್ಥ ಕಳಕೊಂಡಂತಾಗಿಬಿಟ್ಟಿದ್ದವು. ನಾನು ಉಳಿದೆಲ್ಲರ ಸಡಗರದಲ್ಲೆ ಖುಷಿ ಹುಡುಕುತ್ತ ಸಾಕ್ಷಿಯಾಗಿರುತ್ತಿದ್ದೆ.
~
ಇತ್ತೀಚೆಗೆ ಮಜಾ ಇದೆ. ಮೊನ್ನಿನ ವರ್ಷದ ತನಕ ನನ್ನ ಪಾಲಿಗೆ ವರ್ಷಗಳು ಬಂದು ಹೋಗ್ತಿದ್ದವು ತಮ್ಮ ಪಾಡಿಗೆ. ನನ್ನ ಘಮಂಡಿತನದಿಂದ ಎಳೆದುಕೊಳ್ತಿದ್ದ ನೂರೆಂಟು ಅಪಾಯಗಳಿಂದ ಪಾರಾಗುವುದರಲ್ಲಿ ದಿನ ಕಳೆಯುವುದೆ ಗೊತ್ತಾಗುತ್ತಿರಲಿಲ್ಲ. ನಾನು ಇರುವಲ್ಲೆ ಇರುವೆನೇನೋ ಅನ್ನಿಸಿಬಿಡುತ್ತಿತ್ತು.
ಈಗ, ಈ ಹೊತ್ತು ಇನ್ನೊಂಥರ ಗಮ್ಮತ್ತು. ಪ್ರತಿ ಕ್ಷಣವೂ ಹೊಸತೆನ್ನುವಷ್ಟು ನಿರಾಳ. ನನ್ನೆಲ್ಲ ತಲೆಹರಟೆಗಳ ಸಹಿತವೇ ನಾನು ನವೀಕರಣಗೊಳ್ತಿದ್ದೀನಿ, ಪ್ರತಿ ಘಳಿಗೆಯೂ. ಬಹುಶಃ ಅದಕ್ಕೇ ಹೊಸ ವರ್ಷ ನನ್ನ ಪಾಲಿಗೆ ಹೊಸ ನಂಬರ್ ಮಾತ್ರ.

– ಹಾಗಂದುಕೊಂಡು ಸುಮ್ಮನಿರುವ ಹಾಗಿಲ್ಲ. ಮಗ ಇನ್ನೂ ಎಗರಾಡ್ತಲೇ ಇದ್ದಾನೆ. ಅಮ್ಮನಿಗೆ ಹೇಳಬೇಕು ಪ್ಲಮ್ ಕೇಕ್ ತರಲಿಕ್ಕೆ. ರಾತ್ರಿ ನೀಲಾಂಜನ ಹಚ್ಚಲಿಕ್ಕೆ. ಮೊದಲಿನಂತೆ ಹೆದರಿಕೊಂಡಲ್ಲದೆ ರಾತ್ರಿ ಸಮಾ ಕೂಗಾಡಿ ಹ್ಯಾಪಿ ನ್ಯೂ ಇಯರ್ ಹೇಳಬೇಕು, ನನ್ನೆಲ್ಲರ ಪ್ರೀತಿಪಾತ್ರರ ಖುಷಿಗೆ…

4 thoughts on “ಹೊಸ ವರ್ಷ ನನಗೆ ಹೊಸ ನಂಬರ್ ಮಾತ್ರ

Add yours

  1. “ನಾನು ಉಳಿದೆಲ್ಲರ ಸಡಗರದಲ್ಲೆ ಖುಷಿ ಹುಡುಕುತ್ತ ಸಾಕ್ಷಿಯಾಗಿರುತ್ತಿದ್ದೆ. ಮೊನ್ನಿನ ವರ್ಷದ ತನಕ ನನ್ನ ಪಾಲಿಗೆ ವರ್ಷಗಳು ಬಂದು ಹೋಗ್ತಿದ್ದವು ತಮ್ಮ ಪಾಡಿಗೆ.”
    ಈಗ, ಈ ಹೊತ್ತು ಇನ್ನೊಂಥರ ಗಮ್ಮತ್ತು. ಪ್ರತಿ ಕ್ಷಣವೂ ಹೊಸತೆನ್ನುವಷ್ಟು ನಿರಾಳ. ನನ್ನೆಲ್ಲ ತಲೆಹರಟೆಗಳ ಸಹಿತವೇ ನಾನು ನವೀಕರಣಗೊಳ್ತಿದ್ದೀನಿ, ಪ್ರತಿ ಘಳಿಗೆಯೂ.

    ಮೊದಲಿನಂತೆ ಹೆದರಿಕೊಂಡಲ್ಲದೆ ರಾತ್ರಿ ಸಮಾ ಕೂಗಾಡಿ ಹ್ಯಾಪಿ ನ್ಯೂ ಇಯರ್ ಹೇಳಬೇಕು, ನನ್ನೆಲ್ಲರ ಪ್ರೀತಿಪಾತ್ರರ ಖುಷಿಗೆ… Happy New year ಕಣೇ… ನಿಂಗೆ… ಮುದ್ದು ಮರಿಗೆ… ಮತ್ತು ನಿಮ್ಮಿಬ್ಬರನ್ನೂ ಸಹಿಸಿಕೊಂಡು ಸಲಹುತ್ತಿರುವ ಅಮ್ಮನಿಗೆ…

  2. ನಾವು ಮೊನ್ನೆ ಮೊನ್ನೆ ತನಕ (ಅಂದರೆ ಇಪ್ಪತ್ತೆರಡು ವರ್ಷಗಳ ಹಿಂದೆ) ನಮ್ಮ ಪ್ರೈಮರಿ ಶಾಲೆಯ ಜಗಲಿಯಲ್ಲಿ ಐದಾರು ಜನ ಕೂತು ಇಡೀ ವರ್ಷದ ನೆನಪನ್ನೆಲ್ಲ ಬಗೆದು ಬಗೆದು ತೆಗೆಯುತ್ತಿದ್ದೆವು. ನಮ್ಮ ಇಷ್ಟದ ಹುಡುಗಿಯರು, ನಾವು ಮಾಡಿದ ತಪ್ಪು ಕೆಲಸಗಳು, ನಾವು ಯಾರನ್ನು ನೋಯಿಸಿದೆವು, ಯಾರು ನಮ್ಮನ್ನ ನೋಯಿಸಿದರು, ವರ್ಷದಲ್ಲಿ ಯಾರುಯಾರು ಸತ್ತರು, ವರ್ಷ ವರ್ಷ ಕಳೆಯುತ್ತ ನಾವು ಏನಾಗುತ್ತಾ ಇದ್ದೇವೆ, ನಮ್ಮ ನಮ್ಮ ಅರವತ್ತರಲ್ಲೋ ಎಪ್ಪತ್ತರಲ್ಲೋ ನಮಗೆ ನಮ್ಮ ಈಗಿನ ರೀತಿ-ನೀತಿ ಎಲ್ಲ ಹೇಗೆ ಕಾಣಬಹುದು ಇತ್ಯಾದಿ ಮಾತನಾಡಿದ್ದೇ ಮಾತನಾಡಿದ್ದು. ಇದನ್ನು ಡಿಸೆಂಬರ್ ಮುವ್ವತ್ತು ಅಥವಾ ಮುವ್ವತ್ತೊಂದರಂದೇ ಮಾಡುತ್ತಿದ್ದೆವು. ಆಗ ಇನ್ನೂ ಈ ಹಳೆವರ್ಷದ ಅಜ್ಜನನ್ನು ಕೂರಿಸಿ ಸುಡುತ್ತಿರಲಿಲ್ಲ. ಈಗ ಭಯ, ಎಲ್ಲಿ ನಮ್ಮ ತಲೆಗೂದಲು ಬೆಳ್ಳಗಿರುವುದನ್ನು ನೋಡಿ, ನಮ್ಮನ್ನೇ ಕೂರಿಸಿಬಿಡುತ್ತಾರೋ ಅಂತ! ಈ ತರ ಡೀಜೆ ಎಲ್ಲ ಢುಂಢುಂ ಬಡಿದು ಮನಸ್ಸು ಛಿದ್ರಗೊಳಿಸುತ್ತಿರಲಿಲ್ಲ. ಸಂಭ್ರಮದಲ್ಲಿ ಒಂದು ದಿವ್ಯ ಮೌನಕ್ಕೆ ಕೂಡ ಸ್ಥಳವಿರುತ್ತಿತ್ತು. ಅಂತರಂಗಕ್ಕೆ ಇಳಿದು ಮೇಲೆದ್ದು ಬರಲು ಸಾಧ್ಯವಾಗುತ್ತಿತ್ತು. ಈಗ ಅದೆಲ್ಲ ಕಷ್ಟ, ಸದ್ದು ಗದ್ದಲ ಹೆಚ್ಚು.

    ಹಾಗೆ ಈಗ ಸುಸ್ತಾದಂತೆ ಅನಿಸುತ್ತಿದೆ. ವರ್ಷ ಹೊಸತಾದರೇನಂತೆ, ನಾವು ಹಳಬರಾಗುತ್ತಿದ್ದೇವೆ, ವಿಶೇಷ ಎಂದರೆ ಪ್ರತಿದಿನದಂತೆ ಒಂದು ಹೊಸದಿನ ಹುಟ್ಟುವುದಷ್ಟೇ ಅನಿಸತೊಡಗಿದೆ. ಸಂಭ್ರಮಕ್ಕೆ ಮನಸ್ಸು ಸಜ್ಜಾಗುತ್ತಿಲ್ಲ. ಸಜ್ಜಾಗಬೇಕು ಅನಿಸುತ್ತದೆ ಅಷ್ಟೆ. ಎಲ್ಲ ಕಷ್ಟವಾಗಿಬಿಟ್ಟಿದೆ. ಕಳೆದ ವರ್ಷ ನನ್ನ ಡಾಕ್ಟರು ಮುರಿದು ಹೋಗಿದ್ದ ನನ್ನ ಕೈಯ ಕಾಸ್ಟಿಂಗ್ ತೆಗೆಯುತ್ತೇನೆಂದು ಆಸೆ ತೋರಿಸಿ ಕೈ ಕೊಟ್ಟಿದ್ದರಿಂದ ಆದ ಬೇಸರವೇ ಈಗಲೂ ನೆನಪಾಗಿ ಕೈ ಸರಿಯಾಗಿದ್ದಕ್ಕೂ ಆಗಬೇಕಾದಷ್ಟು ಖುಶಿಯಾಗಲೇ ಇಲ್ಲವಲ್ಲ ಅನಿಸಿ ಪಿಚ್ಚೆನಿಸುತ್ತದೆ!

    ನಿಮ್ಮ ಮಗನಿಂದ ನಿಮಗೆ ಸಜ್ಜಾಗಲು ಸಾಧ್ಯವಾಗಿದೆ ಎನ್ನುವುದೇ ಒಂದು ನಿಜವಾದ ಖುಶಿ. ಬಹುಶಃ ಮನುಷ್ಯನ ಬದುಕು ಅರ್ಥಪೂರ್ಣವಾಗುವುದೇ ಅರ್ಥಪೂರ್ಣವಾದ ಸಂಬಂಧಗಳಿಂದ. ಪ್ರೀತಿಸುವ ಜನರ ನಡುವೆ, ಅವರ ಸಾನಿಧ್ಯ-ಸಾಂಗತ್ಯ-ಸಂಪರ್ಕದಲ್ಲಿರುವುದೇ ಬಹುಷ ಜೀವನದಲ್ಲಿ ಸಂತೋಷವಾಗಿರಲು ಸಾಧ್ಯವಿರುವ ಮಾರ್ಗ ಅನಿಸುತ್ತದೆ. ಹೌದು, ಅದು Orhan Pamuk ನ ಮಾತೇ. ನಿಮಗೆ ಅಂಥ ಸಂತೋಷ ಅನವರತ ಸಿಗಲಿ ಎಂದು ಹಾರೈಸುತ್ತೇನೆ.

  3. NP, “ಮನುಷ್ಯನ ಬದುಕು ಅರ್ಥಪೂರ್ಣವಾಗುವುದೇ ಅರ್ಥಪೂರ್ಣವಾದ ಸಂಬಂಧಗಳಿಂದ. ಪ್ರೀತಿಸುವ ಜನರ ನಡುವೆ, ಅವರ ಸಾನಿಧ್ಯ-ಸಾಂಗತ್ಯ-ಸಂಪರ್ಕದಲ್ಲಿರುವುದೇ ಬಹುಷ ಜೀವನದಲ್ಲಿ ಸಂತೋಷವಾಗಿರಲು ಸಾಧ್ಯವಿರುವ ಮಾರ್ಗ ಅನಿಸುತ್ತದೆ….” ಮಾತು ತೀರ ನಿಜ…

ನಿಮ್ಮ ಟಿಪ್ಪಣಿ ಬರೆಯಿರಿ

Create a free website or blog at WordPress.com.

Up ↑