ಹಾಗೆ ನಾನು ಅವಳನ್ನ ನೋಡಿದ ತಕ್ಷಣ ಅನಿಸಿದ್ದನ್ನೇ ನೆಚ್ಚಿಕೊಂಡಿದ್ದರೆ ತಪ್ಪಾಗಿಬಿಡ್ತಿತ್ತು. ಕೆಲವರಿಗೆ ಹೀಗಾಗುತ್ತೆ. ಮೊದಲ ನೋಟದಲ್ಲಿ ಅನಿಸಿದ್ದಕ್ಕೇ ಜೋತುಬಿದ್ದು ಎಷ್ಟೋ ಅಮೂಲ್ಯವಾದ್ದನ್ನ ಕಳಕೊಂಡುಬಿಡ್ತೇವೆ, ಪಡೆಯುವ ಮೊದಲೇ. ಇಂತಹ ಸನ್ನಿವೇಶದ ಭೇಟಿಯಲ್ಲಿ ಅವಳು ಅಪರಿಚಿತತೆಯನ್ನ ಹೋಗಲಾಡಿಸ್ಕೊಳ್ಳಲು ಹಾಗೆ ಆಡಿದಳು ಅನಿಸುತ್ತೆ ಈಗ.
ಅವಳನ್ನೇ ನಾನು ಕಾಯ್ತಿದ್ದುದು ಅಂತ ಗೊತ್ತಾದ ಮೇಲೆ ಇಬ್ಬರೂ ನಾನು ಮೊದಲೇ ನೋಡಿಟ್ಟುಕೊಂಡಿದ್ದ ಕಾರ್ನರ್ ಟೇಬಲಿನೆಡೆಗೆ ಬಂದೆವು. ನನ್ನ ಕಣ್ಣು ಇನ್ನೂ ಕಿಟಕಿಯ ಗಾಜಿನಾಚೆ ನಡುರೋಡಿನ ಹುಡುಗಿಯನ್ನೇ ಹುಡುಕುತ್ತಿತ್ತು.
‘ಅವಳು ನನ್ನ ಫ್ರೆಂಡ್. ಬ್ಲೂ ಕ್ರಾಸ್‌ಗಾಗಿ ಕೆಲಸ ಮಾಡ್ತಾಳೆ’ ಅಂದವಳ ಮುಖ ನೋಡಿದೆ. ಕೊರಳ ತಿರುವಲ್ಲಿ ಉತ್ಸಾಹ ಗೂಡು ಕಟ್ಟಿತ್ತು. ಗಲಿಬಿಲಿಗೊಂಡವನಂತೆ ಇದ್ದ ನನ್ನ ನೋಡಿ ಏನನಿಸ್ತೋ, ‘ನಾನು ಮೀರಾ…’ ಅನ್ನುತ್ತ ಮತ್ತೊಮ್ಮೆ ಕೈ ಚಾಚಿದಳು. ಈಗ ನನ್ನ ಪಾಲಿನ ಅಭಿನಯ. ನಾನು ಕೂಡ ಕೈ ಚಾಚಬೇಕು. ಹೆಸರು ಹೇಳ್ಕೊಳ್ಳಬೇಕು… ‘ನಾನು…’ ಅನ್ನುತ್ತಿದ್ದ ಹಾಗೆ ತಡೆದಳು. ‘ನೀವು ರಾಜ್ ಅಥವಾ ಜಯ್, ವಿಜಯ್ ಆಗಿರಲಿಕ್ಕೆ ಸಾಧ್ಯ ಇಲ್ಲ. ಯಾಕಂದ್ರೆ ನೀವು ಶಾರುಖ್ ಯಾ ಅಮಿತಾಭ್ ಅಲ್ವಲ್ಲ!’
ಉಫ್… ಎಂಥಾ ಕೆಟ್ಟ ಜೋಕ್! ನಾನು ಪೆಚ್ಚುಪೆಚ್ಚಾಗಿ ನಗು ತಂದುಕೊಂಡೆ. ಅವಳಂತೂ ಜಗತ್ತಿನ ಎಲ್ಲ ಪ್ರಶ್ನೆಗಳನ್ನೂ ತಂದು ಸುರಿಯುತ್ತಿದ್ದಳು. ‘ಏನಾದ್ರೂ ಆರ್ಡರ್ ಮಾಡೋಣವಾ?’ ಅನ್ನುತ್ತ ಸುಮ್ಮನೆ ನಕ್ಕಳು. ‘ಏನು ಬೇಕೋ ಎಲ್ಲವನ್ನೂ ಗಳಪಿ ಮೊದಲು ತೊಲಗು ಇಲ್ಲಿಂದ’ ಅನ್ನುವ ಭಾವದಲ್ಲಿ ತಲೆ ಆಡಿಸಿದೆ.
ನಾನೇನೋ ಹಾಗಂದುಕೊಂಡೆ. ಅದು ಅವಳನ್ನು ತಟ್ಟಿದ ಯಾವ ಸೂಚನೆಯೂ ಕಾಣಲಿಲ್ಲ. ಅವಳು ನನ್ನ ಉಡಾಫೆಯನ್ನ ತಾಕಿಸಿಕೊಳ್ಳದೆ ಇರುವಳೆಂದ ಮೇಲೆ ಏನು ಪ್ರಯೋಜನ? ಯಾಕೋ ನನ್ನ ವೇಷ, ಪಾತ್ರಗಳ್ಯಾವುದೂ ಉಪಯೋಗಕ್ಕೆ ಬರುವ ಹಾಗೆ ಕಾಣಲಿಲ್ಲ. ಅವಳ ಪಾಡಿಗೆ ಅವಳು ವೈಟರನಿಗೆ ಕಾಫಿ, ಕೇಕ್‌ಗಳ ಪಟ್ಟಿ ಕೊಟ್ಟಳು. ಅವನಾದರೋ, ನಾವು ಅವನ ಖಾಸಾ ಅತಿಥಿಗಳು ಅನ್ನುವಂತೆ ಮುಖ ಮಾಡಿಕೊಂಡು, ಚೂರೆ ಸೊಂಟ ಬಗ್ಗಿಸಿ ಹೊರಟ.
ಆದರೆ ಅವನ ಈ ನೆಂಟಸ್ತನ ಬರೀ ಭಾವಭಂಗಿಗಷ್ಟೆ ಸೀಮಿತವಿತ್ತು. ಹೋದ ವೇಗದಲ್ಲಿ ವಾಪಸು ಬಂದವ ನಯವಾಗಿ ‘ಸರ್, ಕೌಂಟರಿನಲ್ಲಿ ಕೂಪನ್ ತೆಗೆದ್ಕೊಳ್ಳಿ’ ಅಂದ.
ಬಹಳ ಸಾರ್ತಿ ಆಗುವುದು ಹೀಗೇನೆ. ಯಾರದೋ ಬಯಕೆಗಳಿಗೆ ನಾವು ಬೆಲೆ ತೆರಬೇಕಾಗ್ತದೆ. ಇವಳು ತನ್ನಿಷ್ಟದ ಚೆರ್ರಿ ಕೇಕ್ ತಿನ್ನೋಕೆ ನಾನು ದಂಡ ಕಟ್ಟಬೇಕು. ಅದು ಕೂಡ ಎಂಥ ಗೋಳು ಗೊತ್ತಾ. ನನ್ನ ಈಗ ತಾನೆ ಒಣಗ್ತಿರೋ ಪಂಚೆಯನ್ನ ಮೇಲಕೆತ್ತಿ, ಅದರೊಳಗಿನ ನಿಕ್ಕರ್ ಜೇಬಿನಲ್ಲಿ ಜೋಪಾನ ಇಟ್ಟಿರುವ ಪರ್ಸಿಂದ ದುಡ್ಡು ತೆಗೆಯಬೇಕು. ನನ್ನ ಬಂಡುತನವೂ ಒಂದು ಘಳಿಗೆ ಹಿಂಜರಿಯಿತು. ಇಷ್ಟು ಜನರ ಎದುರೇನಾ? ಇಶ್ಶೀ…!
‘ಇಲ್ಲಿ ಟಾಯ್ಲೆಟ್ ಎಲ್ಲಿದೆ?’ ವೈಟರನನ್ನೇ ಕೇಳಿದೆ. ಅವಂಗೆ ಯಾಕಂತ ಅರ್ಥವಾಗಲಿಲ್ಲ. ‘ಕೂಪನ್‌ಗೆ ದುಡ್ಡು ಕೊಡಬೇಕಂದರೆ ದುಡ್ಡು ತೆಗೀಬೇಕಾಗ್ತದಲ್ಲ, ಅದಕ್ಕೆ ಕೇಳಿದ್ದು’ ಮೈಯನ್ನೆ ಕೊಶ್ಚನ್ ಮಾರ್ಕ್ ಮಾಡ್ಕೊಂಡವನ ಮೇಲೆ ರೇಗಿದೆ.
‘ಸರ್, ನಾವು ಟಾಯ್ಲೆಟ್ಟಲ್ಲಿ ದುಡ್ಡು ತೊಗೊಳೋದಿಲ್ಲ’ ಅಂದು ಮತ್ತಷ್ಟು ರೇಗಿಸಿದ. ಯಾಕೋ ನಾನು ಇಲ್ಲಿಗೆ ಬಂದಿದ್ದೇ ಸರಿಯಾಗಿಲ್ಲ ಅನ್ನಿಸಿಬಿಟ್ಟಿತು. ಅಂತೂ ಮಾತುಕತೆಯ ಕೆಟ್ಟ ಪ್ರಹಸನ ನಡೆದು ಕೌಂಟರಿಗೆ ಹೋಗಿ ಕೂಪನ್ ತಂದೆ.
ಹೊರಗೆ ಮಳೆಯ ಅಬ್ಬರ ಕಡಿಮೆಯಾಗತೊಡಗಿತ್ತು. ಎದುರು ಕುಂತವಳ ತೊನೆದಾಟವೂ. ನಾನಂತೂ ಅವಳು ತಿಂದು ಕುಡಿದು ಎದ್ದುಹೋಗುವುದನ್ನೇ ಕಾಯುತ್ತ ಸುಮ್ಮನೆ ಕುಳಿತಿದ್ದೆ.
~
ಸುಮಾರು ಅರ್ಧ ಗಂಟೆ ಕಳೆದಿರಬಹುದು. ನಮ್ಮ ನಡುವೆ ಮೌನ ಸುಳಿದಾಡುತ್ತಿತ್ತು. ಅದೀಗ ಇಷ್ಟವಾಗತೊಡಗಿತ್ತು. ಅವಳ ಮುಂಗುರುಳ ಮೇಲಿಂದ ಚಿಕ್ಕದೊಂದು ಹನಿ ಹಣೆಯ ಮೇಲೆ ಜಾರಲು ಹವಣಿಸುತ್ತಿತ್ತು. ಆ ಪುಟ್ಟ ಹನಿಯಲ್ಲಿ ಛಾವಣಿಯ ದೀಪಗೊಂಚಲಿನ ಪ್ರತಿಬಿಂಬ ಹೊಳೆದು ವಜ್ರದ ಮೆರುಗು. ಮಳೆಯ ನೀರಿಗೆ ಸೋಕಿ ಅವಳ ರೇಶಿಮೆಗೂದಲು ಅಲ್ಲಲ್ಲಿ ಸಿಕ್ಕುಗಟ್ಟಿತ್ತು. ಬಿಳಿಯ ಚೂಡಿದಾರಿನಲ್ಲಿ ಅವಳು ನನ್ನ ನೋಡಲೆಂದೇ ಏಳು ಸಾಗರ ದಾಟಿ ಬಂದ ದೇವಕನ್ನಿಕೆಯಂತೆ ಕಾಣ್ತಿದ್ದಳು. ಅವಳ ಕಣ್ಣುಗಳಲ್ಲೀಗ ಚಂಚಲತೆಯಿಲ್ಲ. ಅವಳ ಒಳಗೂ. ಮನಸಿನ ಶಾಂತತೆಯನ್ನ ಅವಳ ಕಣ್ಣುಗಳು ಸ್ಪಷ್ಟ ಘೋಷಿಸ್ತಿದ್ದವು. ಚಿರಕಾಲದಿಂದ ಅನ್ನುವಂತೆ ತೆಳುವಾದ ನಗುವೊಂದು ಅವಳ ತುಟಿಯಲ್ಲಿ ನೆಲೆಸಿತ್ತು.
‘ಸೋ… ನೀವ್ಯಾಕೆ ಬದುಕಿಗೆ ಬೆನ್ನು ಹಾಕ್ತಿದೀರಿ? ನಾನು ರಿಜೆಕ್ಟ್ ಮಾಡಲೀಂತ ತಾನೆ ಈ ಎಲ್ಲ ನಾಟಕ?’ ಒಂದು ಸಿಪ್ ಎಳೆದು ನನ್ನಲ್ಲೆ ನೋಟ ನೆಟ್ಟಳು.
ಅವಳು ನನ್ನಿಷ್ಟದ ಟ್ರಾಪಿಕಲ್ ಐಸ್‌ಬರ್ಗ್ ಅನ್ನು ಆರ್ಡರ್ ಮಾಡುವಾಗಲೇ ಅಂದುಕೊಳ್ತಿದ್ದೆ. ಎಲ್ಲೋ ಮಾಹಿತಿ ಲೀಕ್ ಆಗಿದೆ ಅಂತ. ಅನುಮಾನ ನಿಜವಾಗಿತ್ತು. ತಮ್ಮ ರಿಕಿ, ಅವಳಿಗೆ ನನ್ನೆಲ್ಲ ಮಸಲತ್ತುಗಳನ್ನೂ ಪೂರ್ವಪರಗಳನ್ನೂ ಹೇಳಿ ತಯಾರು ಮಾಡಿದ್ದ.
ಈ ರಿಕಿಯಾದರೂ ಎಂಥ ಹುಡುಗ… ಚಿಕ್ಕವರಿರುವಾಗ ನಾನು ಅವನು ಇದ್ದುದಕ್ಕೂ ಈಗ ನಾವು ಇರುವುದಕ್ಕೂ ಪೂರಾ ತಿರುಗುಮುರುಗು. ಆಗೆಲ್ಲ ಅಂವ ತನ್ನಷ್ಟಕ್ಕೆ ತಾನೆ ಇರುತ್ತಿದ್ದ. ಓದಿನಲ್ಲೂ ಅಷ್ಟಕ್ಕಷ್ಟೆ. ನಾನು ಆಗೆಲ್ಲ, ಪ್ರೈಮರಿ ಲೆವೆಲ್ಲಿನ ಓದಿನಲ್ಲಿರುವಾಗೆಲ್ಲ ಬಹುತೇಕ ಮುಂಚೂಣಿಯಲ್ಲಿ ಇರುತ್ತಿದ್ದೆ. ನನ್ನ ಮೇಲೆ ಭಾರೀ ಭರವಸೆ ಇಡಲಾಗಿತ್ತು. ನಾನು ಐಐಎಮ್‌ಎಸ್‌ನಿಂದ ಎಮ್‌ಬಿಎ ಪದವಿ ಪಡೆದು ಹೊರಬರುವೆನೆಂದು ನಿರೀಕ್ಷಿಸಲಾಗಿತ್ತು. ನನ್ನ ತಿಕ್ಕಲುತನಗಳಿಂದಾಗಿ ನನ್ನ ಓದು ತುಂಡಾಯ್ತು. ಡ್ರಾಪ್‌ಔಟ್ ಸ್ಟೂಡೆಂಟ್ ಅನ್ನುವ ಹಣೆಪಟ್ಟಿ ಹೊತ್ತು ಈಚೆ ಬಂದಿದ್ದೆ. ರಿಕಿಯ ಓದಿನ ಬದುಕು ಸರಾಗ ನಡೆಯಿತು. ಅವನು ಎಂಜಿನಿಯರ್ ಪದವಿ ಪಡೆದ. ಅವನೀಗ ನಮ್ಮ ಕುಟುಂಬದಲ್ಲಿ ಪ್ಲೇಬಾಯ್ ಅಂತಲೇ ಕರೆಸಿಕೊಳ್ಳುವಷ್ಟು ಅರಾಮದ ಹುಡುಗ. ರಿಕಿ ಇಂಥದ್ದೇನಾದರೂ ಮಾಡುವನೆಂದು ನನಗೆ ಗುಮಾನಿ ಇತ್ತಾದರೂ ಮಾಡೇಬಿಡುತ್ತಾನೆ ಅನಿಸಿರಲಿಲ್ಲ. ಈಗಲಾದರೂ ಎನು? ಅವನು ತನ್ನ ಇರುವಿಕೆಗೆ ತಕ್ಕನಾಗಿ ತನ್ನ ಪಾತ್ರ ನಿರ್ವಹಿಸಿದ್ದ ಅಷ್ಟೆ!
ಇಗ ಮೀರಾ ಕೇಳ್ತಿದಾಳೆ. ನಾನ್ಯಾಕೆ ಬದುಕಿಂದ ದೂರ ಓಡ್ತಿದೀನಿ ಅಂತ.
ಹೌದಾ? ನಾನು, ಬದುಕಿಂದ ದೂರ ಓಡ್ತಿದೀನಾ!?

Chennagide Chetana 🙂 Bega bega barieeri !!!!!!
ತುಂಬಾ ಚೆನ್ನಾಗಿ ಓದಿಸಿಕೊಂಡು ಹೋಗುತ್ತಿದೆ!