ಮಾರ್ಚ್ ಎಂಟು ಮತ್ತು ಏಳರಾಟ


ಈ ‘ಹೆಣ್ಣುದಿನ’ ನಂಗಿಷ್ಟ ಆಗೋದು ಎರಡು ಕಾರಣಕ್ಕೆ. ನಾನು ಹೆಣ್ಣು ಅನ್ನೋ ಹೆಮ್ಮೆಗೆ, ನಾನು ಬದುಕು ಕಟ್ಟಿಕೊಂಡ ದಿನ ಅನ್ನೋ ಖುಷಿಗೆ.
ಏಳು ವರ್ಷ ಹಿಂದಿನ ಮಾತು. ಮಾರ್ಚ್ 8ರ ರಾತ್ರಿ ತೀರ್ಥಹಳ್ಳಿಯನ್ನ ಕಣ್ತುಂಬಿಕೊಳ್ತಾ ಊರು ಬಿಟ್ಟಾಗ, ಇದು ಇಂಥಾ ದಿನ ಅಂತೇನೂ ಗೊತ್ತಿರಲಿಲ್ಲ. ಆಮೇಲೆ ತಿಳಿದುಕೊಂಡ ಹಾಗೆ, ಈ ದಿನವನ್ನ ಶುರು ಮಾಡಿದ್ದು ‘ದುಡಿಯೋ ಹೆಣ್ಣುಮಕ್ಕಳ ದಿನ’ ಅಂತಲಂತೆ. ಇದೇ ದಿನ ನಾನೂ ದುಡಿಯುವ ಹೆಣ್ಣಾಗಲು ಹೊರಟಿದ್ದು, ಅದು ಕೂಡಾ ಸೇರಿದ್ದ ಮನೆಮಂದಿಯ ಕಾಟ, ಆ ಜನಗಳ ಧೋರಣೆಗಳನ್ನ ತಣ್ಣಗೆ ತಿರಸ್ಕರಿಸಿ ಹೊರಟಿದ್ದು, ಹತ್ತಾರು ಆರೋಪಗಳು- ಸಮಾಜದ ಕಟ್ಟುಪಾಡಿನ ಹದಗಳನ್ನೂ ಮೀರಿ ಹೊಸ್ತಿಲು ದಾಟಿದ್ದು…. ಈ ಎಲ್ಲವೂ ಮಾರ್ಚ್ ಎಂಟರ ಜತೆ ತಳಕು ಹಾಕಿಕೊಂಡಿದ್ದು ಒಂದು ಪವಾಡ.
ಆರೂ ಮುಕ್ಕಾಲು ವರ್ಷಗಳ ಮೆಗಾ ಸೀರಿಯಲ್ ನಂಥ ಬದುಕು ಎಲ್ಲ ಬಣ್ಣಗಳನ್ನೂ ತೋರಿಸಿಬಿಟ್ಟಿತ್ತು. ಕನಸಿನ ಹಾಗೆ ಕೆಲಸ ಸಿಕ್ಕು ಬೆಂಗಳೂರಿನತ್ತ ಮುಖ ಮಾಡಿದ್ದೆ. ಅವತ್ತು ಶಿವರಾತ್ರಿ ಬೇರೆ. ಬಸ್ಸಲ್ಲಿ ನನಗೆ ಗಡದ್ದು ನಿದ್ದೆ. ಅದು ಬಂದಿದ್ದು ನಿರುಮ್ಮಳಕ್ಕೋ, ಭಯ ತಪ್ಪಿಸ್ಕೊಳ್ಳಲಿಕ್ಕೋ ಅಂತ ನೆನಪಾಗ್ತಾ ಇಲ್ಲ. ಮೊದಲ ಬೆಂಚಲ್ಲೇ ಕೂತು ನೋಟ್ಸಿನ ಬದಲು ಗೀಚುತ್ತಿದ್ದ ಕಥೆ ಕವಿತೆಗಳೇ ಈಗ ಕರೆದು ಕೆಲಸ ಕೊಡಿಸಿದ್ದವು. ಬಹುತೇಕ ಎಲ್ಲ ‘ಓಡಿ ಹೋದವರ’ ಹಾಗೆ ನನ್ನ ಪರ್ಸಲ್ಲಿ ಇದ್ದುದು ಆರುನೂರು ರುಪಾಯಿಗಳಷ್ಟೆ. ಅದು ಕೂಡಾ ಯಾವುದೋ ಅನುವಾದದಿಂದ ಸಿಕ್ಕಿದ್ದ ರೆಮ್ಯುನರೇಷನ್ನು.
~
ಜೀವಮಾನದಲ್ಲೆ ಮೊದಲ ಸಾರ್ತಿ ಅಷ್ಟು ದೂರದ ಪ್ರಯಾಣ ನಾನೊಬ್ಬಳೇ ಮಾಡಿದ್ದೆ. ಮೆಜಸ್ಟಿಕ್ ತಲುಪಿಕೊಂಡಾಗ ಅಕ್ಷರಶಃ ಅನಾಥೆ.*1 ನನ್ನ ಕರೆದೊಯ್ದು ಹಾಸ್ಟೆಲ್ ಮುಟ್ಟಿಸಬೇಕಿದ್ದ ಅಣ್ಣನ ಬಸ್ ಲೇಟಾಗಿತ್ತು. ಅವನು ಭಾಷಣ ಮಾಡೋಕೆ ಗುಲ್ಬರ್ಗಕ್ಕೋ ಬಿಜಾಪುರಕ್ಕೋ ಹೋಗಿದ್ದ ನೆನಪು. ಒಂದು ಗಂಟೆಗೂ ಹೆಚ್ಚು ಕಾಲ ಬೆಂಚೊಂದರ ಮೇಲೆ ಕಳೆದಿದ್ದೆ. ಅಣ್ಣನ ನಗುಮುಖ ನೋಡ್ತಿದ್ದ ಹಾಗೇ ಆಯಾಸ ನೆಗೆದುಬಿದ್ದು ಹೋಗಿತ್ತು. ಸ್ವಲ್ಪ ಹೊತ್ತಿನಲ್ಲೇ ನಾನು ಅವನ ಜತೆ ಸುಕೃಪಾ ಎದುರು ನಿಂತಿದ್ದೆ.
ಈಗ ನೆನೆಸ್ಕೊಂಡರೆ ಮಜಾ ಅನ್ನಿಸತ್ತೆ. ನನ್ನ ಬದುಕಲ್ಲಿ ಎಷ್ಟೆಲ್ಲ ಕಾಕತಾಳೀಯಗಳು!
ರಸ್ತೆಯ ಈ ತುದಿಯಿಂದ ಆ ತುದಿಗೆ ನಾಲ್ಕು ಸಾರ್ತಿ ದಾರಿ ತಪ್ಪುವ ನನಗೆ ಕೆಲಸದ ಜಾಗವೆಲ್ಲೋ, ಹಾಸ್ಟೆಲಿಂದ ದೂರವೆಷ್ಟೋ ಅನ್ನುವ ಆತಂಕ. ಆಗಿನ್ನೂ ಇಪ್ಪತ್ತಮೂರು ವರ್ಷ ದಾಟುತ್ತಿದ್ದ ನನಗಿಂತ ಚಿಕ್ಕ ವಯಸ್ಸಿನ ಅಣ್ಣನಿಗೂ ಈ ಬಗ್ಗೆ ಏನೂ ತಿಳಿದಿರಲಿಲ್ಲ. ಮರಿಯಪ್ಪನ ಪಾಳ್ಯ ಅಂತ ಹುಡುಕಿಕೊಂಡು ಹೋದರೆ, ಅರ್ರೆ! ನಡೆಯೋಕೆ ಹೆಚ್ಚೆಂದರೆ ಹತ್ತು ನಿಮಿಷದ ದಾರಿ, ಗಾಯತ್ರಿ ನಗರದಿಂದ!!
~
ಒಂದು ದಿನ ರೆಸ್ಟ್ ಪಡೆದು, ಮಾರ್ಚ್ 10ರಿಂದ ನನ್ನ ದುಡಿಮೆ ಶುರುವಾಗಿತ್ತು. ಹಾಸ್ಟೆಲಿಂದ ಬಂಡಾಯವೆದ್ದು ಹುಡುಗಿಯರ ಜತೆ ಮನೆ ಮಾಡಿ, ಅವರೆಲ್ಲ ಮದುವೆಯಾದ ಮೇಲೆ ಒಬ್ಬಳೇ ಇರುತ್ತಾ- ಚೂರು ಚೆಂದದ ಮನೆ, ಚೂರು ದೊಡ್ಡ ಮನೆ; ಅಮ್ಮನ್ನ ಕರೆತಂದು, ಮಗನ್ನ ಕರೆಸ್ಕೊಂಡು ಮತ್ತಷ್ಟು ಸವಲತ್ತುಗಳ ಮತ್ತಷ್ಟು ದೊಡ್ಡ ಮನೆ… ಆಫೀಸಿಂದ ಮಿನಿಮಮ್ ದೂರ, ಹತ್ತು ರುಪಾಯಿ ಹೆಚ್ಚು… ದಿನಕ್ಕೆ ಒಟ್ಟು ಅರವತ್ತು ರುಪಾಯಿ ಅಂತರ… ಹೀಗೆ.
ಮೊದಲ ಕೆಲಸದ ಬಾಸ್ ರಗಳೆಗೆ ತಲೆಕೆಟ್ಟು ಬೇರೆ ಕೆಲಸ ಸೇರಿ; ಅದನ್ನೂ ಬಿಟ್ಟು ಮತ್ತೊಂದಕ್ಕೆ ಹಾರಿ; ಬೆಂಗಳೂರು ಸೇರಿದ 7 ವರ್ಷದಲ್ಲಿ ಈಗಿನದ್ದು 6ನೇ ಆಫೀಸು. ಉಹು… ಓಡಿದ್ದು ಸಾಕು ಅನ್ನಿಸ್ತಿದೆ. ಇಲ್ಲಿ ಒಂದಷ್ಟು ಕಾಲ ನಿಲ್ಲುವ ನಿರ್ಧಾರ.
~
ಹಹ್ಹ… ಇದನ್ನೆಲ್ಲ ಬರೀತಾ ಇದೇನು ನನ್ನ ಚರಮಗದ್ಯ ಬರೆದುಕೊಳ್ತಾ ಇದ್ದೀನಾ ಅನ್ನಿಸಿ ನಗು ಬರ್ತಾ ಇದೆ. ಆದರೂ ಇವತ್ತೇನೋ ಹುಕ್ಕಿ. ಎಲ್ಲವನ್ನೂ ಹೀಗೆ ಬರೆದುಕೊಂಡು ನನಗೆ ನಾನೆ ಓದಿಕೊಳ್ಳೋಕೆ. ಈ ನಡುವೆ ಒಂದಷ್ಟು ಪುಸ್ತಕ, ರಗಳೆ, ರೂಮರ್ರು…
ನನ್ನ ಪಾಡಿಗೆ ನಾನು ಹರಾ ಶಿವಾ ಇರುವಾಗ ಊರಲ್ಲಿ ನಾನು ಯಾರೊಟ್ಟಿಗೋ ಓಡಿ ಹೋದ, ಹುಚ್ಚಾಸ್ಪತ್ರೆಯಲ್ಲಿರುವ, ಸತ್ತೇಹೋಗುವ ಕೆಟ್ಟ ಕಾಯಿಲೆ ಬಂದಿದೆ ಅನ್ನುವ ಥರಾವರಿ ಗಾಸಿಪ್ಪುಗಳು, ಅವನ ಮನೆಯಿಂದ ಹುಟ್ಟಿಕೊಂಡು ಊರು ತುಂಬ ಮಾತಿನ ಮಕ್ಕಳು. ಅವಾದರೂ ಎಷ್ಟು ದಿನ? ಈ ಮಾತಿನ ಮಕ್ಕಳಿಗೆ ಸರಿಯಾದ ಪುಷ್ಟಿ ಸಿಕ್ಕದೆ ಅವೆಲ್ಲ ಸತ್ತೂ ಹೋಗಿದ್ದಾವೆ ಅಂದುಕೊಂಡಿದ್ದೀನಿ ನಾನು.
~
ಇವತ್ತು ಮಾರ್ಚ್ 8. ಮೊದಲೇ ಹೇಳಿದೆನಲ್ಲ. ನನಗೆ ಇದು ಎರಡು ಥರದಲ್ಲಿ ಮಹತ್ವದ ದಿನ. ಈ ಸಾರ್ತಿಯೇ ಯಾಕೆ ಇದೆಲ್ಲ ಅಂದ್ರೆ, ಈ ‘ಏಳು’ ಅನ್ನೋ ಸಂಖ್ಯೆ ನನ್ನ ಬದುಕಲ್ಲಿ ಸಾಕಷ್ಟು ಆಟ ಆಡಿದೆ (ಏಳರಾಟದ ಶನಿ ಥರ :-)) ಇದು ನನ್ನ ನೆಮ್ಮದಿಯ ಬದುಕಿನ ಏಳನೇ ವರ್ಷದ ಸೆಲೆಬ್ರೇಷನ್ನು ಅಂದುಕೊಳ್ಬಹುದು. ಜೊತೆಗೆ, ನನ್ನ ‘ಆಲ್ ಮೆನ್ ಆರ್ ಬಾಸ್ಟರ್ಡ್ಸ್’ ನಂಬಿಕೆಯೂ ಬದಲಾಗಿದೆ. ನಾನು ಬದುಕಿದ್ದೀನಿ ಅಂದ್ರೆ ಅದಕ್ಕೆ ಯಾರು ಕಾರಣಾನೋ ಆ ಪುಣ್ಯಾತ್ಮ ನನ್ನ ಅಣ್ಣ ಚಕ್ರವರ್ತಿ ಇದ್ದಾನಲ್ಲ, ಅವನ ಒಡನಾಟದಲ್ಲಿದ್ದ ಮೇಲೂ ಹಾಗೆ ಜನರಲೈಸ್ ಮಾಡೋದು ಹೇಗೆ ಸಾಧ್ಯ? ಮತ್ತೆ ನನಗೆ ಮಗನೊಬ್ಬ. ಸಾಲದ್ದಕ್ಕೆ ನನಗೆ ಬ್ಲಾಗಿನಲ್ಲಿ, ಜೀಮೇಲು, ಫೇಸ್ ಬುಕ್ಕು, ಆಫೀಸು- ಎಲ್ಲ ಕಡೆ, ಬಹಳ ಕಡೆ ಅಸಂಖ್ಯಾತ ಅಣ್ಣ ತಮ್ಮಂದಿರು, ಗೆಳೆಯರು… ಅವರೆಲ್ಲರ ಪ್ರೀತಿ- ನಡವಳಿಕೆ ನೋಡಿದ ಮೇಲೂ…
ಹಾಗೇನೇ, ‘ರೂಹಿಲ್ಲದ ಕೇಡಿಲ್ಲದ’ ಅವನೆಂಬ ಅವನೊಬ್ಬ ಸಜೀವ ಸದೇಹ ಇರುವಾಗಲೂ…
ಮನಸ್ಸು ತಿಳಿಯಾಗದೆ ಇರೋಕೆ ಹೇಗೆ ಸಾಧ್ಯ?
~
ಕೊನೆಗೊಂದು ಕಥೆ ಹೇಳಿ ಮುಗಿಸೋಣ ಅಂತ….
ಒಂದು ಕಾರವಾನ್ ಒಂದೂರಿಂದ ಮತ್ತೊಂದೂರಿಗೆ ಮರಳುಗಾಡಲ್ಲಿ ಹೊಗ್ತಾ ಇರತ್ತೆ. ಮುಸ್ಸಂಜೆ ಆಗ್ತಿದ್ದ ಹಾಗೇ ಒಂದು ಕಡೆ ಬೀಡು ಬಿಡಬೇಕಾಗತ್ತೆ. ಅವರ ಬಳಿ 7 ಒಂಟೆಗಳಿವೆ. ಆದ್ರೆ, ಇರೋದು ಆರೇ ಗೂಟ, ಆರೇ ಹಗ್ಗ. ರಾತ್ರಿ ಒಂಟೆ ಏನಾದ್ರೂ ತಪ್ಪಿಸ್ಕೊಂಡ್ರೆ ದೇವರೇ ಗತಿ!
ಅಲ್ಲೇ ಒಂದ್ಕಡೆ ಒಬ್ಬ ಸಾಧು ಬಾಬಾ ಕೂತಿರ್ತಾನೆ. ಅವನ ಹತ್ರ ಅವರಲ್ಲೊಬ್ಬ ಹೋಗಿ ಕೇಳ್ತಾನೆ, ‘ಹಿಂಗಿಂಗಾಗಿದೆ, ಏನ್ಮಾಡೋದೀಗ?’
ಬಾಬಾ ಹೇಳ್ತಾನೆ, ‘ಆ ಏಳನೇ ಒಂಟೆಯ ಸುತ್ತ ಮುತ್ತ ಓಡಾಡಿ ಅದನ್ನ ಕಟ್ತಾ ಇರೋ ಹಾಗೆ ನಟನೆ ಮಾಡಿ ಸಾಕು’
ಹಂಗೇ ಮಾಡಿ ಮಲಗ್ತಾರೆ. ಬೆಳಗಾಗತ್ತೆ. ಸದ್ಯ! ಸುಳ್ಳು ಗೂಟದ ಒಂಟೆ ಪೆದ್ದರ ಹಾಗೆ ಮಲಕ್ಕೊಂಡೇ ಇದೆ!!
ಉಳಿದವನ್ನೆಲ್ಲ ಬಿಚ್ಚಿ, ಕಾರವಾನ್ ಹೊರಡಿಸ್ತಾರೆ. ಆದ್ರೆ, ಅರ್ರೆರ್ರೇ…. ಈ ಏಳನೆ ಒಂಟೆ ಜಪ್ಪಯ್ಯ ಅನ್ತಾ ಇಲ್ಲ! ಟುರ್… ಅಂದ್ರೂ ಇಲ್ಲ, ಹೋಯ್ ಅಂದ್ರೂ ಇಲ್ಲ… ಒಂದು ಹೆಜ್ಜೆ ಮುಂದೆ ಇಡೋದಿಲ್ಲ ಅಂತ ಮುಷ್ಕರ ಮಾಡ್ತಾ ನಿಂತುಬಿಟ್ಟಿದೆ…
ಈ ಜನರಲ್ಲೊಬ್ಬ ಸಾಧು ಬಾಬಾ ಏನೋ ಮೋಡಿ ಹಾಕಿದಾನೆ ಅಂತ ಅನುಮಾನ ಮಾಡಿ ಅವನ ಹತ್ರ ಹೋಗ್ತಾನೆ.
ಬಾಬಾ ಹೇಳ್ತಾನೆ, ‘ನೀವು ಕಟ್ಟೋ ಥರ ನಟಿಸಿದ್ರಿ ಸರಿ. ಬಿಚ್ಚೋ ಥರ ನಟಿಸಿದ್ರಾ? ಮೊದಲು ಆ ಕೆಲಸ ಮಾಡಿ…’
ಹಾಗೇ ಮಾಡಿದ ಮೇಲೆ ಒಂಟೆ ವಿಧೇಯವಾಗಿ ಹೊರಡತ್ತೆ.
ನೀತಿ: ನಾವು ಹೆಣ್ಮಕ್ಳು, ಒಂಟೆ ಥರ
(ಧೈರ್ಯವಂತರಷ್ಟೆ ಸುಳ್ಳು ಗೂಟವನ್ನ ಗುರುತಿಸ್ತಾರೆ)

 

 

 

 

10 thoughts on “ಮಾರ್ಚ್ ಎಂಟು ಮತ್ತು ಏಳರಾಟ

Add yours

  1. ಚೇತನಾ,

    ಈ ಲೇಖನ ಅದರಲ್ಲೂ ಕೊನೆಯಲ್ಲಿನ ಕಥೆ… ಅದರಲ್ಲೂ ಆ ಕೊನೆಯ ಸಾಲು.. >>ಧೈರ್ಯವಂತರಷ್ಟೆ ಸುಳ್ಳು ಗೂಟವನ್ನ ಗುರುತಿಸ್ತಾರೆ…
    ತುಂಬಾ ತುಂಬಾ ಇಷ್ಟವಾಯ್ತು. ಆ ಧೈರ್ಯ ಎಲ್ಲಾ ಹೆಣ್ಣುಮಕ್ಕಳಲ್ಲೂ ತುಂಬಿರಲೆಂದು ಹಾರೈಸುವೆ. 🙂

  2. ಅಕ್ಕೋ ಇವತ್ತಿಗೆ Confirm ಆಯ್ತು ಲೈಫ್ ನಲ್ಲಿ ಕಷ್ಟ ಪಡದೆ ಏನೇನು ಆಗೋದಿಲ್ಲಾ ಅಂತಾ .. ನಂಗೋತ್ತಿರೋ ಮಟ್ಟಿಗೆ ನೀವು ಸಿಕ್ಕಾ ಪಟ್ಟೆ ಕಷ್ಟ ಪಟ್ಟು ಬಂದಿದ್ದಿರಿ ಅದಕ್ಕೆ ಅಲ್ವಾ ಇವತ್ತು ಈ ನಿಲುವನ್ನಾ ಕೈಯಲ್ಲಿ ಹಿಡಿದುಕೊಂಡು ಎಲ್ಲರಿಗು ಮೆಚ್ಚುಗೆ ಯಾಗಿದ್ದಿರಿ .. ಇವತ್ತಿನ ದಿನ ಎಲ್ರೂ ಎನೇನು Post ಮಾಡಿದ್ದಾರೆ ಅಂತಾ ಕಣ್ನಾಡೀಸ್ತಾ ಇದ್ದಾಗ ನಿಮ್ಮ ಈ ಲೇಖನ ನಿಮ್ ಓದಿ ನಿಮ್ಮೆಲಿದ್ದ ಗೌರವ,ಪ್ರೀತಿ ಇನ್ನೂ ಜಾಸ್ತಿ ಯಾಯ್ತು… I think ಒಂದೈದು ವರುಷದ ಹಿಂದೆ ಇದೇ ದಿನ ನೀವು ” ಈ – ಟಿವಿ” ಯಲ್ಲಿ ನಾನು ಸಾಧಕ ಮಹಿಳೆ ಅಂತಾ ಒಂದು Footage ಕೊಟ್ಟಿದ್ರಿ ಅದನ್ನಾ ನಾನು ನೋಡಿದ್ದೆ ಆವತ್ತಿನ ದಿನಕ್ಕೂ ಇವತ್ತಿನ ದಿನಕ್ಕೂ ಸಿಕ್ಕಾ ಪಟ್ಟೆ ಕಷ್ಟ ಪಟ್ಟು ನಿಜವಾಗ್ಲೂ ಸಾಧಕಿ ಯಾಗಿದ್ದಿರಕ್ಕಾ ( ಆವತ್ತು ಇದ್ರಿ 🙂 ) .. ನಿಮಗೊಂದು ನಲ್ಮೆಯ ಶುಭಾಷಯ.

    (ನಿಮ್ಮದೆ ಸಾಲುಗಳು ಇವತ್ತು ನೆನಪಾದವಕ್ಕಾ)
    ನಾನು
    ನಿಘಮದ ಕೇದಗೆ
    ಯಾರ ತಲೆ ಕಾಲುಗಳ
    ಚಾಕರಿಯ ಹಂಗೇಕೆ?

    ಬಿಚ್ಚಿಟ್ಟಷ್ಟೂ ಹಗುರಾಗುತಾರೆ
    ಗರತಿಯರ ನುಡಿಮುತ್ತು.
    ನಾನು ಬಿಚ್ಚಿಕೊಳ್ಳುತ್ತೇನೆ,
    ಅರಳಿಕೊಂಡು
    ಎದೆಭಾರ ಕಳೆಯುತ್ತೇನೆ.
    ಗೊತ್ತು,
    ಹಗುರಾಗುತ್ತೇನೆ
    ನನ್ನೊಳಗೂ
    ಮಾನವಂತರ ನೋಟಕ್ಕೂ…
    ಚಿಂತೆಯಿಲ್ಲ ….

  3. ಪ್ರೀತಿಯ ಚೇತನಾ,

    ಮೊದಲು ಒಂದು ಅಪ್ಪುಗೆ ಆಮೇಲೆ ಮುಂದಿನ ಮಾತು.

    ಆಲ್ ಮೆನ್ ಆರ್ ಬಾಸ್ತರ್ಡ್ಸ್ ನಂಬುಗೆ ಬದಲಾಗೊಕ್ಕೆ ತುಂಬಾ ಕಾಲ ಬೇಕು. ನೀವಂದಂತೆ ನಮ್ಮ ಸನಿಹದ ಗಂಡು ಜೀವಗಳು ಬದಲಾಯಿಸೋದಕ್ಕೆ ಕಾರಣ ಹೌದಾದ್ರು, ಅವಾಗಾವಾಗ ಹಂಗೆ ಅನ್ನಿಸ್ತಾನೆ ಇರತ್ತೆ.
    ಚರಮ ಗದ್ಯದ ಮಾತು ಈಗ ಬೇಡ. ಸ್ವಲ್ಪ ಕೊರಮ ಪದ್ಯ ಬರೀರಿ ತಮಾಷಿಯಾಗಿ.
    ಹೊಸ ಬದುಕು ಹುಟ್ಟಿಸುವ ಕಟ್ಟುವ ಕ್ರಿಯೆ ತುಂಬಾ ಕಷ್ಟದ್ದು. ಆದರೆ ನೀವು ಸೃಜನಶೀಲೆ. ಕಷ್ಟ ಗೊತ್ತಾಗದ ಹಾಗೆ ಕಟ್ ಬಿಡ್ತೀರಿ. ಕಟ್ಟಿ, ಅರಳಿಸಿ. ಗಂಧ ಸೂಸಿ..
    ನೇಮಿಚಂದ್ರ ಹೇಳಿದ ಹಾಗೆ ” ಬದುಕು ಬದಲಿಸಬಹುದು”
    ಶುಭಾಶಯಗಳು ಮತ್ತು ಪ್ರೀತಿ,
    sin

  4. Cheth, “ನಾವು ಹೆಣ್ಮಕ್ಳು, ಒಂಟೆ ಥರ…”
    ಅದಕ್ಕೆ ಬಹುಶಃ ಹೆಣ್ಣು ಮಕ್ಕಳು ಬದುಕಿನ ಯಾವುದೇ ಭಾರ ಹೊರೋದ್ರಲ್ಲಿ ಬಹಳ ಹುಷಾರು… (ಹೊರಿಸುವುದರಲ್ಲಿ ಇತರರೂ..) ಗತ್ತಿಗಿತ್ತಿಯರಾಗೋದು ಕಷ್ಟ ಆದ್ರೆ ಸಾದ್ಯ. ಗೆಲುವಿನ ಹಾದಿಯಲ್ಲಿ ಟೀಕೆಗಳು ತುಂಬಾ ಜಾಸ್ತಿ.. ಅದರಲ್ಲೂ ಶೋಷಣೆಗೆ ಒಳಗಾದ ಹೆಣ್ಣು ತಣ್ಣಗೆ ಧಿಕ್ಕರಿಸಿ ಹೊರಟಿದ್ದಾಳೆ ಅಂದ್ರೆ ಕಲ್ಲು ಮಣ್ಣಿಗೂ ಬಾಯಿ… ನಿನಗೆ, ನಿನ್ನ ಗೆಲುವಿಗೆ ಹ್ಯಾಟ್ಸ್ ಆಪ್ ಕಣೆ ಸುಂದರೀ… ಜತೆಗೆ “All men are bastards” ಎಂಬ ನಿನ್ನ ನಂಬಿಕೆಯನ್ನು ಬದಲಾಯಿಸಿದ ಎಲ್ಲರಿಗೂ ನನ್ನದೊಂದು ಸಲಾಮ್ ದಾಟಿಸಿಬಿಡು… ಗೆಲುವಿನ ಹುಡುಗಿಗೆ ಸುಳ್ಳು ಗೂಟ ಗುರುತಿಸಿದ ಧೈರ್ಯವಂತೆಗೆ ನೂರು ಮುತ್ತು…

  5. ಎಲ್ಲಿದೆ ಮೆಡಮ್, ಅ ಸುಳ್ಳು ಗೂಟ. ಮಹಿಳೆಯರು ಅದನ್ನಿ ಕಿತ್ತು ಹಾಲಿ ಎಷ್ಟೊ ದಿನ ಅಗಿದೆ. ಏಕೆಂದರೆ ಅದುನಿಕ ಬದುಕಿಗೆ ಒಗ್ಗಿ ಕೊಳ್ಳಲು ಅದು ಅನಿರ್ವಾವು ಅಗಿತ್ತು. ಅದರು ನಿಮ್ಮಂತ ಅಮ್ಹೀಲೆಯರನ್ನು ಮಚ್ಚಲೇಬೇಕು. ಸಮಾಜದ ಅನೇಕ ಕುಹಕ ಮಾತಗಳನ್ನು ಕೇಳಬೇಕು. ಬದುಕು ಕಟ್ಟಿಕೋಳ್ಳಲು ಮಹಿಳೆ ಮನೆ ಬಿಟ್ಟು ಅಚೆ ಬಂದರೆ ಜನ ತಮಗೆ ತಿಳಿದ ಮಾತಗಳನ್ನೆಲ್ಲ ಮಾತನ್ಡುತ್ತಾರೆ. ಇಂತ ಮಾತಗಾಳನ್ನು ಬಿಟ್ಟು ನಿಮ್ಮಂತ ಮಹಿಳೆಯರನ್ನು ಪ್ರೊತ್ಸಹಿಸುವ ಕೆಲಸವಾಗಬೇಗಾಗಿದೆ. ನಿಮ್ಮ ಲೇಖನ ಅಥವಾ ಜೀವನ ಕಥೆ ಚನ್ನಾಗಿದೆ. ಇದು ಇತರರಿಗೆ(ಮಹಿಳೆಯರಿಗೆ, ಪುರುಷರಿಗೆ) ಮಾದರಿಯಾಗಲಿ.

  6. ಎಲ್ಲಿದೆ ಮೆಡಮ್, ಅ ಸುಳ್ಳು ಗೂಟ. ಮಹಿಳೆಯರು ಅದನ್ನಿ ಕಿತ್ತು ಹಾಲಿ ಎಷ್ಟೊ ದಿನ ಅಗಿದೆ. ಏಕೆಂದರೆ ಅದುನಿಕ ಬದುಕಿಗೆ ಒಗ್ಗಿ ಕೊಳ್ಳಲು ಅದು ಅನಿರ್ವಾವು ಅಗಿತ್ತು. ಅದರು ನಿಮ್ಮಂತವರನ್ನು ಮೆಚ್ಚಲೆಬೇಕು. ಸಮಾಜದ ಅನೇಕ ಕುಹಕ ಮಾತಗಳನ್ನು ಕೇಳಬೇಕು. ಬದುಕು ಕಟ್ಟಿಕೋಳ್ಳಲು ಮಹಿಳೆ ಮನೆ ಬಿಟ್ಟು ಅಚೆ ಬಂದರೆ ಜನ ತಮಗೆ ತಿಳಿದ ಮಾತಗಳನ್ನೆಲ್ಲ ಮಾತನ್ಡುತ್ತಾರೆ. ಇಂತ ಮಾತಗಾಳನ್ನು ಬಿಟ್ಟು ನಿಮ್ಮಂತ ಮಹಿಳೆಯರನ್ನು ಪ್ರೊತ್ಸಹಿಸುವ ಕೆಲಸವಾಗಬೇಗಾಗಿದೆ. ನಿಮ್ಮ ಲೇಖನ ಅಥವಾ ಜೀವನ ಕಥೆ ಚನ್ನಾಗಿದೆ. ಇದು ಇತರರಿಗೆ(ಮಹಿಳೆಯರಿಗೆ, ಪುರುಷರಿಗೆ) ಮಾದರಿಯಾಗಲಿ.

ನಿಮ್ಮ ಟಿಪ್ಪಣಿ ಬರೆಯಿರಿ

Blog at WordPress.com.

Up ↑