ಪ್ರೀತಿಯೂ ಇಲ್ಲದ, ದ್ವೇಷಿಸಲಾಗದ….


‘ಆಹ್! ಚೆಂದವಿದೆ!’ ಅಂದುಕೊಂಡ ಹೊತ್ತಲ್ಲೆ ಕುರೂಪವೂ ಹುಟ್ಟಿಕೊಂಡಿರುತ್ತೆ. – ಹಾಗನ್ನುತ್ತೆ ತಾವೋ.
‘ನಾ ನಿನ್ನ ಪ್ರೀತಿಸ್ತೀನಿ’ ಅಂದುಕೊಳ್ಳುವಾಗಲೇ ಯಾವತ್ತಾದರೂ ಚಿಗುರಬಹುದಾದ ದ್ವೇಷದ ಬೀಜ ಬಿತ್ತಿರುತ್ತೀವಾ?- ಅಂದುಕೊಳ್ತೀನಿ ನಾನು.
~
ಎಷ್ಟು ನಿಜ ನೋಡಿ… ಯಾರೋ ದಾರಿಹೊಕನ ಮೇಲೆ ನಮಗ್ಯಾಕೆ ಪ್ರೀತಿ? ಆ ಕಾರಣಕ್ಕೇ ಅಲ್ಲಿ ದ್ವೇಷವೂ ಇರೋದಿಲ್ಲ. ಬಹುಶಃ ಜಗತ್ತನ್ನೆಲ್ಲ ಸಮವಾಗಿ ಕಂಡ ದೊಡ್ಡವರು ಎಲ್ಲರನ್ನೂ ಹೀಗೇ- ದಾರಿಹೋಕರ ಹಾಗೇ ಕಂಡಿರಬೇಕು…
ಒಂದು ಇದೆ ಅಂದಾಗಲೇ ಮತ್ತೊಂದು ಹುಟ್ಟಿಕೊಳ್ಳೋದು. ಆ ಒಂದನೆಯದರ ಇರುವಿಕೆ ಸಾಬೀತಾಗಲೆಂದೇ ಮತ್ತೊಂದರ ಬರುವಿಕೆಗೆ ದಾರಿಯಾಗೋದು. ಬಂಧುಗಳ ಕಿವಿಮಾತು ಹೇಳೋಲ್ವೇ, ‘ಆಗಾಗ ಜಗಳಾಡ್ತ ಇದ್ರೇನೇ ಪ್ರೀತಿ ಎಷ್ಟಿದೆ ಅಂತ ಗೊತ್ತಾಗೋದು’ ಅಂತ!
ಪ್ರೀತಿಯ ಸಾಬೀತಿಗೆ ಶುರುವಾಗುವ ಜಗಳ ರೂಢಿಯಾಗಿಬಿಟ್ಟರೆ ಕಷ್ಟ. ಕೈಮೀರಿ ಹೋದರೆ ತುಂಬಾನೇ ಕಷ್ಟ.
~
ಅನ್ನಿಸುತ್ತೆ, ‘ನಿನ್ನ ಬಿಟ್ಟಿರಲಾರೆ ಕಣೋ’ ಅನ್ನುವಾಗಿನ ಆರ್ತತೆಯಲ್ಲಿ ಬಿಟ್ಟಿರ ಬೇಕಾದ ಭಯ ಮತ್ತು ಬಿಟ್ಟಿರಬೇಕೆಂಬ ಹಂಬಲಗಳೆರಡೂ ಹುದುಗಿರುತ್ತವೇನೋ!
ಅಂಥದ್ದೊಂದು ಹಂಬಲ ಹುಟ್ಟದ ಹೊರತು, ಅ ಭಯ ಬರೋದಾದರೂ ಎಲ್ಲಿಂದ!?
~
ಅದಕ್ಕೇ, ಪ್ರೀತಿಯೂ ಇಲ್ಲದ, ದ್ವೇಷಿಸಲಾಗದ,
ಅಂಟಿಕೊಂಡಿಲ್ಲದ, ಬಿಡಲಾಗದ
ಚೆಂದದೊಂದು ಸಂಬಂಧ ಅವನೊಡನೆ ಸಾಧ್ಯವಾಗಬೇಕು.
ಆಗಲಾದರೂ ಅವನೂ ಒಬ್ಬ ಹಾದಿಹೋಕನಂತೆ, ಜೊತೆಯಾತ್ರಿಯಂತೆ, ಎಲ್ಲರಂತೆ ಅನ್ನಿಸುತ್ತ ಕೊನೆತನಕ ಜತೆ ನಡೆಯಬಹುದು.
ಅಥವಾ ಎಲ್ಲರನ್ನು ಅವನಂತೆ ಭಾವಿಸ್ತಾ, ಹರಿವಿನಲ್ಲಿ ಒಂದಾಗಿ ಕ್ಷಣಕ್ಷಣದ ತುದಿಯನ್ನ ಮುಟ್ಟುತ್ತ ಇರಬಹುದು.

3 thoughts on “ಪ್ರೀತಿಯೂ ಇಲ್ಲದ, ದ್ವೇಷಿಸಲಾಗದ….

Add yours

  1. ತುಂಬಾ ಚೆನ್ನಗಿ ಮೂಡಿ ಬಂದಿದೆ,ಎಲ್ಲೋ ಒಂದೆಡೆ ನಿಜ ಜೀವನದ ಅನುಭವ ಬುಧ್ದನ ಜ್ನಾನೋಧಯಕ್ಕೆ ಕಾರಣವಾದಂತೆ ತೋರುತ್ತದೆ. ಎಲ್ಲರ ಜೀವನದಲ್ಲೂ ಸರ್ವೇ ಸಾಮಾನ್ಯವಾಗಿ ನಡೆದು ಹೋಗುವುದನ್ನು ಅತಿ ಸೂಕ್ಶ್ಮವಾಗಿ ಪರಿಗಣಿಸಿ ವ್ಯಕ್ತಪಡಿಸಿದ್ದೀರಿ. ನನಗೂ ಸಹ ನನ್ನ ಅನುಭವಗಳನ್ನು ಮೆಲುಕು ಹಾಕುವಂತೆ ಮಾಡಿಸಿತು ನಿಮ್ಮ ಬರವಣಿಗೆ.

ನಿಮ್ಮ ಟಿಪ್ಪಣಿ ಬರೆಯಿರಿ

Create a free website or blog at WordPress.com.

Up ↑