ವಿದ್ರೋಹದ ನವಿರಲ್ಲಿ ಉತ್ಸವದ ನೆನಪು


‘ನಿನಗೆ ನನ್ ಬಗ್ಗೆ ಕೋಪ ಬರೋದಿಲ್ವಾ?’
ತನ್ನನ್ನ ಒಡಹುಟ್ಟಿದ ಅಕ್ಕನ ಹಾಗೆ ಆದರಿಸ್ತಾ ಮನೆಯಲ್ಲಿಟ್ಟುಕೊಂಡಿದ್ದ ಅದಿತಿಯನ್ನ ನೋಡಿ ವಸಂತಸೇನೆಗೆ ಅಶ್ಚರ್ಯ. ಅದು ಹೇಗಾದ್ರೂ ಒಬ್ಬ ಹೆಂಡತಿ ತನ್ನ ಗಂಡನ ಪ್ರೇಯಸೀನ ಸಹಿಸ್ಕೊಳ್ಳಬಲ್ಲಳು?
‘ಕೋಪಾನಾ? ಖಂಡಿತಾ ಇಲ್ಲ. ಇನ್ನೂ ಹೇಳಬೇಕಂದ್ರೆ, ನೀವು ಅವರ ಬದುಕಿನಲ್ಲಿ ಬಂದಿರೋದ್ರಿಂದ ನನಗೆ ಮತ್ತಷ್ಟು ಒಳ್ಳೇದೇ ಆಗಿದೆ’ ಅವಳು ತುಸುವೇ ನಾಚಿ ಕಿಲಗುಟ್ಟುತ್ತಾಳೆ.
ವಸಂತಸೇನೆಯ ಹುಬ್ಬು ಮೇಲೇರುತ್ತದೆ. ‘ಯಾಕೆ? ಹೇಗೆ ಹಾಗೆ!?’
‘ಅವರು… ಈಗೀಗ ನನ್ನ ತುಂಬಾ ಪ್ರೀತಿಸ್ತಾರೆ. ಅವರ ವರಸೆಗಳೂ ಬದಲಾಗಿವೆ!’ ಅದಿತಿ ಪೂರಾ ನಾಚಿ ಕೆಂಪಡರಿಹೋಗಿದ್ದಾಳೆ. ನಿಲುವಿನಲ್ಲಿ ಪ್ರಣಯದ ಘಮ ತೂರಿ ಬರುತ್ತಿದೆ.
ಅದಿತಿಯ ಇಂಥ ಉತ್ತರಕ್ಕೆ ವಸಂತಸೇನಾ ಹೇಗೆ ಪ್ರತಿಕ್ರಿಯಿಸಿದ್ದಳೋ? ರೇಖಾಳ ಮುಖಭಾವ ನೆನಪಾಗುತ್ತಿಲ್ಲ. ಅನುರಾಧಾ ಪಟೇಲಳ ಬಟ್ಟಲು ಕಂಗಳ ನೋಟ ನೆಲಕ್ಕೆ ತೂಗು ಬೀಳುತ್ತ ಜೋಕಾಲಿಯಾಡಿದ್ದು ನೆನಪಿದೆ. ಇಡಿಯ ‘ಉತ್ಸವ್’ ಸಿನೆಮಾದಲ್ಲಿ ನೆನಪಿಡಬೇಕಾದ ನೂರು ಸಂಗತಿಗಳಿದ್ದದ್ದು ನಿಜ. ಆ ನನ್ನ ಬಾಲ್ಯಕ್ಕೆ ತಟ್ಟಿ ನಿಂತುಬಿಟ್ಟಿದ್ದು ಈ ಒಂದು ಸನ್ನಿವೇಶವೇ ಯಾಕೋ!?
ಇದರ ಜತೆಗೆ ನೆನಪಿರೋ ಮತ್ತೊಂದೇ ಒಂದು ತುಣುಕು, ಕೊನೆಯಲ್ಲಿ ಒಂಟಿಗಳಾಗುವ ವಸಂತ ಸೇನಾ ತಾನು ಅಲ್ಲೀತನಕ ನಿರಾಕರಿಸ್ತಾ ಬಂದಿದ್ದ ಸಂಸ್ಥಾನಕ(?)ನಿಗೆ ಬಾಗಿಲು ತೆರೆಯೋದು. ಈ ದೃಶ್ಯ ಕಣ್ಕಟ್ಟಿದರೆ, ಅದು ಮತ್ತೊಂದೇ ಕಥೆಗೆ ಎಳೆಯಾಗುತ್ತೆ.
ಭಾಸ ‘ಚಾರುದತ್ತ’ವೆಂಬ ನಾಟಕ ಬರೆದ. ಆಮೇಲಿನ ಶೂದ್ರಕನೂ ಅದೇ ಎಳೆಯಿಟ್ಟುಕೊಂಡು ‘ಮೃಚ್ಛಕಟಿಕ’ ಬರೆದ. ಕಾರ್ನಾಡರು ಅವೆರಡನ್ನೂ ಹದವಾಗಿ ಸೇರಿಸಿ ‘ಉತ್ಸವ್’ ಸಿನಿಮಾ ಮಾಡಿದರು. ಚಾರುದತ್ತನೆಂಬ ಸಂಗೀತಗಾರ, ಅದಿತಿ ಎಂಬ ಅವನ ಹೆಂಡತಿ, ವಸಂತಸೇನೆಯೆಂಬ- ಆಸ್ಥಾನ ನರ್ತಕಿಯೂ ಆಗಿದ್ದ ಸುಂದರಿ ಅವನ ಪ್ರೇಯಸಿ. ಸಿನೆಮಾದ ತಿರುಳು- ಹರಹುಗಳೆಲ್ಲ ಬೇರೆಯೇ ಇವೆ. ನನ್ನ ಪಾಲಿಗೆ ಮಾತ್ರ ಉತ್ಸವ್ ಸಿನೆಮಾ, ವಸಂತಸೇನೆ- ಅದಿತಿಯರ ಸಂಭಾಷಣೆಯೇ.
~
ಜೋಗಿ ಒಂದುಕಡೆ ಬರೆದಿದ್ದರು, ವಂಚಿಸುವ ಹೆಂಡತಿ, ಗಂಡನ ಜತೆ ಹೆಚ್ಚು ಪ್ರೀತಿಯಿಂದ ನಡೆದುಕೊಳ್ತಾಳೆ ಅನ್ನುವ ಅರ್ಥದ ಸಾಲುಗಳನ್ನ. ಅದನ್ನ ಓದಿದಾಗ ನೆನಪಾಗಿದ್ದು ಚಾರುದತ್ತನೇ. ವಂಚನೆಗೆ ಗಂಡು ಹೆಣ್ಣು ಅನ್ನೋದಿಲ್ಲ. ಡಿಆರ್ ಬರೆದಿದ್ದರಂತೆ ಶರ್ಮರ ಪುಸ್ತಕದ ಮುನ್ನುಡಿಯಲ್ಲಿ-‘ರಮ್ಯ ಉಲ್ಲಂಘನೆಗಳನ್ನ ಮಾಡದಷ್ಟು ಅರಸಿಕನೇನಲ್ಲ ಇವನು’ ಅಂತ. ಹಾಗೆ… ಕೆಲವೊಂದು ರಮ್ಯ ಉಲ್ಲಂಘನೆಗಳು ಗಂಡು- ಹೆಣ್ಣುಗಳ ನಡತೆಯಲ್ಲಿ ಕಾಣುತ್ತವೆ. ಉಹು… ಬಚ್ಚಿಟ್ಟುಕೊಂಡಿರ್ತವೆ. ಚಾರುದತ್ತನ ಪ್ರೇಮವೂ ಅಂಥದೊಂದು ಉಲ್ಲಂಘನೆಯೇ ಆಗಿತ್ತು. ಅದಕ್ಕೇ ಅವನ ಹೆಂಡತಿ ಅದನ್ನ ಒಪ್ಪಿ-ಸಹಿಸ್ಕೊಳ್ಳಲು ಸಾಧ್ಯವಾಗಿತ್ತು ಅನ್ನಿಸುತ್ತೆ. ಈ ಕ್ಷಣದಲ್ಲೇ ನನಗೆ ಅನ್ನಿಸಿದ್ದು- ‘ವ್ಯಾಮೋಹವಾಗದ ವಿದ್ರೋಹ ಕೆಲವು ಸಾರ್ತಿ ಒಳ್ಲೆಯದನ್ನೇ ಮಾಡುತ್ತೆ’ ಅಂತ. ಅದಿತಿಯ ದಾಂಪತ್ಯ ಪ್ರಣಯ ರಂಗೇರಿದ್ದು ಒಳ್ಳೆಯದೇ ಅಲ್ಲವೆ? ಜತೆಗೆ, ತಾನು ಎಷ್ಟೆಂದರೂ ಅವನ ಹೆಂಡತಿ ಅನ್ನುವ ಹೆಚ್ಚುಗಾರಿಕೆಯ ಹೆಮ್ಮೆ ಅವಳಿಗೆ. ಆ ಹೆಚ್ಚುಗಾರಿಕೆ ಪದರಗಟ್ಟುವಂತಾಗಿದ್ದು ವಸಂತ ಸೇನೆಯ ಬರುವಿಕೆಯಿಂದಲೇ ಅಲ್ಲವೆ?
ಆದರೆ, ಅವಳ ಹೆಮ್ಮೆಯಿಂದ ವಸಂತಸೇನೆಗಾದ ಅನುಭವ… ಓಹ್, ನನಗೆ ಆ ಪಾತ್ರವನ್ನ ಮಾಡಿದ್ದ ರೇಖಾಳ ಪ್ರತಿಕ್ರಿಯೆ ನೆನಪಾಗ್ತಿಲ್ಲ. ಕಾರ್ನಾಡರ ಮನಸಲ್ಲಿ ಏನಿತ್ತೋ, ಅದು ಹಾಗೇ ಹೊಮ್ಮಿರುತ್ತೆ ಅಂತ ಗೊತ್ತು. ಭಾಸನಾಗಲೀ ಶೂದ್ರಕನಾಗಲೀ ಯಾವ ಮಾತು ಕೊಟ್ಟಿದ್ದರು ಅವಳಿಗೆ? ಕುತೂಹಲ… ಅದಕ್ಕಿಂತ, ಸ್ವತಃ ವಸಂತಸೇನೆಯೇ ಇದ್ದು,ಈ ಮಾತು ನಡೆದಿದ್ದರೆ ಅವಳ ಮುಖದಲ್ಲಿ ಯಾವ ಬಣ್ಣ ಇರುತ್ತಿತ್ತು!? ಯೋಚನೆ…
~
ಗೆಳತಿಯೊಬ್ಬಳು ಅಂತಃಪುರದಲ್ಲಿ (ಅದೊಂದು ನಮ್ಮ ಹೆಣ್ಹೆಣ್ಣು ಮಕ್ಕಳ ಫೇಸ್ ಬುಕ್ ತಾಣ) ಕೇಳ್ತಾಳೆ, ‘ಮದ್ವೆಯಾದ ಮೇಲೂ ಹೆಣ್ಮಕ್ಕಳಿಗೆ ಕ್ರಶ್ ಆಗತ್ತಾ?’ ಎಷ್ಟು ಜನ ತೆರೆಯಾಚೆಗೂ ಪ್ರಾಮಾಣಿಕರಾಗಿರ್ತಾರೋ? ಎಲ್ಲಾ ಸಲವೂ ಅಂಥ ಪ್ರಾಮಾಣಿಕತೆ ಒಳ್ಳೇದಲ್ಲ ಅನ್ನೋದು ನಿಜ- ಅದು ಬೇರೆ ಮಾತು.
ಆದರೆ ಈ ಪ್ರಶ್ನೆ ತಟ್ಟಿಹಾರಿಸೋ ಅಂಥದ್ದಲ್ಲ. ಹೌದು, ಕ್ರಶ್ ಆಗೋದಕ್ಕೆ ಮದುವೆಗೆ ಮುಂಚೆ- ನಂತರ ಅನ್ನೋ ಯಾವ ಅಂತರವೂ ಇರೋದಿಲ್ಲ. ಅದು ಯಾರ ಬಗೆಗಾದರೂ ಉಂಟಾಗಬಹುದು. ಅದೊಂದು ರಮ್ಯ ಉಲ್ಲಂಘನೆ (ಕಾಪಿ ಡೀಆರ್). ಅದೊಂದು ನಿರುಪದ್ರವಿ ವಿದ್ರೋಹ. ಕ್ರಶ್ ಬಗ್ಗೆ ಯಾವ ವ್ಯಾಮೋಹವೂ ಇರೋದಿಲ್ಲ. ಅದೊಂದು ಕನಸಿನ ಲೋಕವಷ್ಟೆ. ಮೆಚ್ಚುಗೆಯ ಮಾಯಕ. ಆದರೆ ಈ ಕ್ರಶ್ ಬಗ್ಗೆ ಚಿಕ್ಕದೊಂದು ಗಿಲ್ಟ್ ಹುಟ್ಟಿಕೊಳ್ಳದೆ ಇರಲಾರದು. ಆ ಗಿಲ್ಟ್ ಅನ್ನು ಮೀರಲಿಕ್ಕೇನೆ ಸಂಗಾತಿಯ ಮೇಲಿನ ಕಾಳಜಿ ಹೆಚ್ಚಾಗೋದು,ಪ್ರೀತಿ ಮತ್ತಷ್ಟು ಉಕ್ಕಿ ಹರಿಯೋದು. ಅದಕ್ಕೇ ಹೇಳಿದ್ದು, ಇಂಥಾ ವಿದ್ರೋಹದಿಂದ ಕೆಲವು ಸಾರ್ತಿ ಒಳ್ಳೇದೇ ಅಗತ್ತೆ ಅಂತ. ಜೋಗಿಯ ಮಾತು ಲಿಂಗಾತೀತವಾದರೆ- ಇಲ್ಲಿ ಖಂಡಿತ ಸಲ್ಲುತ್ತೆ.
~
ಕೊನೆ ಮಾತು: ಹಾಗಂತ ಒತ್ತಾಯದಿಂದ ವಿದ್ರೋಹವನ್ನೋ (ರಮ್ಯ) ಉಲ್ಲಂಘನೆಯನ್ನೋ ಮಾಡಬೇಕೆಂದಿಲ್ಲ! ಎಲ್ಲ ಗಂಡಂದಿರೂ ಚಾರುದತ್ತನಂತೆ, ಹೆಂಡತಿಯರು ಅದಿತಿಯಂತೆ ಇರೋದಿಲ್ಲ. ಹಾಗೇನೇ ವಸಂತಸೇನೆಯಂತೆ ಪ್ರೇಯಸಿಯರು ಕೂಡಾ….

14 thoughts on “ವಿದ್ರೋಹದ ನವಿರಲ್ಲಿ ಉತ್ಸವದ ನೆನಪು

Add yours

  1. ಚೇತನಕ್ಕಾ, ನಾನು ತುಂಬ ಇಷ್ಟಪಟ್ಟು ಓದುವ ಕೆಲವೇ ಕೆಲವು ಬ್ಲಾಗುಗಳಲ್ಲಿ ನಿಮ್ಮದೂ ಒಂದು, ತುಂಬಾ ದಿನಗಳಿಂದ ಒಂದಾದರೂ ಕಮೆಂಟ್ ಹಾಕಬೇಕೆಂದುಕೊಳ್ಳುತ್ತಲೇ ದಿನ ಕಳೆದೋಯ್ತು..ಹಾಗೆಂದು ನಿಮ್ಮನ್ನು ಓದುವುದನ್ನು ತಪ್ಪಿಸಿಕೊಳ್ಳುವುದಿಲ್ಲ. ಇದನ್ನು ನಾನು ಇಷ್ಟಪಟ್ಟ ನಿಮ್ಮ ಎಲ್ಲ ಬರಹಗಳಿಗೂ ಸೇರಿ ಕೊಟ್ಟ ಮೆಚ್ಚುಗೆಯ ಕಮೆಂಟೆಂದುಕೊಂಡುಬಿಡಿ, ಉಳಿದ ತಗಾದೆ,ಕ್ರಿಟಿಕ್‌ಗಲೆಲ್ಲ ಅತ್ತ ಇರಲಿ. ನನ್ನ ಬ್ಲಾಗಿನಲ್ಲಿ ನಿಮ್ಮ ಕಮೆಂಟನ್ನು ಇನ್ನೂ ನೆನಪಿಟ್ಟುಕೊಂಡಿದ್ದೇನೆ.

    ಪ್ರೀತಿಯಿಂದ,
    -ವೆಂಕಟ್ರಮಣ
    venkat.bhats@gmail.com

  2. ತುಂಬಾ ಕಾಂಪ್ಲೆಕ್ಸ್ ಆದ, ಮುಖ್ಯವಾದಂತಹ, ಆದರೆ ಸ್ವಲ್ಪ ಹದ ತಪ್ಪಿದರೆ, ಇನ್ನೇನೋ ಆಗಿಬಿಡುವ ಆತಂಕವಿರುವ, ಈ ತರಹದ ಭಾವನೆಗಳ, ಕ್ರಶ್ ಗಳ ಬಗ್ಗೆ ಮುಕ್ತವಾಗಿ, ಘನತೆಯಿಂದ ಬರೆದಿದ್ದೀರಿ. ಅಭಿನಂದನೆಗಳು. ಇಲ್ಲಿ ನಿಮ್ಮ ಇನ್ನೊಂದು ಕತೆ (ಹೊಮೊಸೆಕ್ಸುವಾಲಿಟಿ ಬಗ್ಗೆ) ಕುರಿತು ತುಂಬಾ ಹಿಂದೆ ನಾನು ಮಾಡಿದ ಕಾಮೆಂಟ್ ನೆನಪಾಯಿತು–ಲಕ್ಷ್ಮೀನರಸಿಂಹ

  3. ನಿಜ ಮೇಡಂ,
    ಚಾರುದತ್ತ, ಅದಿತಿ, ವಸಂತಸೇನಯರೂ ಅಪರೂಪ. ಕರ್ಣ, ಭಾನುಮತಿಯರೂ ಅಪರೂಪ. ಲೇಖನ ತುಂಬಾ ಚೆನ್ನಾಗಿ ಮೂಡಿಬಂದಿದೆ. ವಾಸ್ತವಕ್ಕೂ , ಇತಿಹಾಸಕ್ಕೂ ಎಡೆಬಿಡದ ನಂಟು. ಆದರೆ ಇಂದಿನ ದಿನಗಳಲ್ಲಿ ಜನರ ಮನಸ್ತಿತಿ ವಿಭಿನ್ನವಾಗಿ ರೂಪು ಗೊಳ್ಳುತ್ತಿದೆ ಎನ್ನುವುದನ್ನು ತಮ್ಮ ಸೂಕ್ಷ್ಮ ವಾದ ಮಾತುಗಳಲ್ಲಿ ತೆರೆದಿಟ್ಟಿ ದ್ದೀರಿ.
    ವಂದನೆಗಳು 🙂

  4. NAMASTE MADAM, ANAND RUGVEDI SIR NANAGE MSG MADI, CHETANA TEERTHALLIYAVA UTSAV KURITA LEKHANA AVARA FACEBOOK BLOGNALLIDE, GAMANISI ENDU SALAHE NEEDIDARU… AVARU YAKE SUGGEST MADIDRU ANTHA NIMMA LEKHANA ODIDA MELE ARTHAVAGTA IDE… REALLY EXCELLANT…

ನಿಮ್ಮ ಟಿಪ್ಪಣಿ ಬರೆಯಿರಿ

Blog at WordPress.com.

Up ↑