ನದಿ
ಹರೀತಿದೀನಿ ಅಂದುಕೊಳ್ಳತ್ತೆ
ಉಹು… ಅದು,
ಉಗಮ – ಅಂತಗಳ ನಡುವೆ ನಿಂತಿದೆ.
ನಾವು
ಬಾಳುವೆ ನಡೆಸ್ತಿದೀವಿ ಅಂದುಕೊಳ್ತೀವಿ.
ತಾವೋ ಹೇಳುತ್ತೆ, ‘ಬಾಳು ಅದರ ಪಾಡಿಗೆ ನಡೆಯುತ್ತೆ. ಅಸ್ತಿತ್ವ ಅದರ ಕಾಳಜಿ ವಹಿಸತ್ತೆ.’
ಬಾಳು,
ಹುಟ್ಟು – ಸಾವುಗಳ ನಡುವೆ ನಿಂತಿದೆ. ನಾವು ನಡೆದರೂನು ನಿಂತರೂನು ಅದು ಶತಸ್ಸಿದ್ಧವೇ.
~
ಅಹಂಕಾರ ಇರೋವನಿಗೆ ಸಮುದ್ರದಲ್ಲಿ ಅಲೆಗಳ ವಿರುದ್ಧ ಈಜೋ ಆಸೆ. ಹರಿವಿನೊಳಗೆ ಒಂದಾಗಿ ಹರಿದರೆ ಹಮ್ಮಿಗೆ ತೃಪ್ತಿ ಎಲ್ಲಿ?
ಮರದ ಕುಂಟೆ ಹರಿವಿಗೆ ತನ್ನ ಕೊಟ್ಟುಕೊಂಡು, ಅದು ಕರೆದೊಯ್ಯುವಲ್ಲಿಗೆ ತೇಲಿ ಬರುತ್ತೆ. ಎಲ್ಲಿಂದಲೋ ಕೊಚ್ಚಿಬಂದು, ಮತ್ತೆಲ್ಲೋ ಸೇರಿ, ಯಾರಿಗೋ ಉಪಯೋಗವಾಗುತ್ತೆ, ಉರುವಲಾಗುತ್ತೆ.
ಕಣ್ಣೆದುರೊಂದು ಚಿತ್ರವಿಟ್ಟುಕೊಂಡು, ಟೇಪು ಕಟ್ಟಿದ ಗುರಿಯಿಟ್ಟುಕೊಂಡು ಓಡಿ ಗೆಲ್ಲೋದು ನಿಜಕ್ಕೂ ಸಾಧನೆಯಾ? ಹರಿವನ್ನು ಸೆಣೆಸಿ ಗೆದ್ದು ವಾಪಸು ದಡಕ್ಕೇ ಮರಳೋದು?
ಅಥವಾ
ಹರಿವಿನೊಟ್ಟಿಗೆ ಬಂದು ಅನೂಹ್ಯ ತಿರುವು ಕಂಡು, ಮೂಲದ ಗುರುತೇ ಮರೆತು ಮತ್ತೆಲ್ಲೋ ಸಾರ್ಥಕಗೊಳ್ಳೋ ಸಾಹಸ ಇದೆಯಲ್ಲ, ಅದು ಸಾಧನೆಯಾ?
ನಿಜವಾದ ಸವಾಲು ಯಾವುದು ಹಾಗಾದರೆ?
~
ಬುದ್ಧ ಅಂಗುಲೀಮಾಲನ್ನ ನೋಡೋಕೆ ಹೋಗ್ತಾನೆ. ಅಂಗುಲೀಮಾಲ ನಿಂತಲ್ಲೇ ಕಣ್ಣು ಕೀಲಿಸಿ ನೋಡ್ತಾನೆ. ಎಲಾಎಲಾ! ನನ್ನಂಥ ನನ್ನ ಹತ್ತಿರ ಬರ್ತಿರುವ ಇಂವ ಯಾರಪ್ಪಾ!? ‘ಏಯ್! ನಿಲ್ಲು ಅಲ್ಲೇ…’ ಅವನ ಅಬ್ಬರ.
ಬುದ್ಧನಿಗೆ ನಗು. ‘ನಾನು ನಿಂತು ಯಾವುದೋ ಕಾಲವಾಗಿದೆ… ನಡೀತಾ ಇರೋನು ನೀನು!’
ಅಂಗುಲೀಮಾಲನಿಗೀಗ ಖಾತ್ರಿ. ‘ತಲೆ ನೆಟ್ಟಗಿರುವ ಯಾವನೂ ಇತ್ತ ಬರಲಾರ. ಇವನ ಮಾತು ಕೇಳಿದರೆ ಇಂವ ಹುಚ್ಚ ಅನ್ನೋದು ನಿಜ!’
ಬುದ್ಧ ನಡೀತಲೇ ಇದ್ದ. ನಡೆದು ನಡೆದು ಹತ್ತಿರ ಬಂದ.
ಬುದ್ಧನ ಹೊರಗು ನಡೀತಿತ್ತು. ತಾನು ಹುಟ್ಟು ಸಾವಿನ ನಡುವೆ ನಿಂತವನು ಅನ್ನೋ ಅರಿವು ಬುದ್ಧನ ಒಳಗಿಗಿತ್ತು.
ಅಂಗುಲೀಮಾಲನ ದೇಹ ನಿಂತಲ್ಲೇ ಇತ್ತು. ಅವನ ಒಳಗಿಗೆ ಸಾವಿರ ಕಾಲಿನ ಚಲನೆ. ತಾನೇನೋ ಮಾಡಲಿಕ್ಕಿದೆ… ಮಾಡೇಬಿಡುವೆ ಅನ್ನುವ ಛಲ. ತನ್ನ ಮೂಲಗುಣವಲ್ಲದ ಕ್ರೌರ್ಯವನ್ನ ಆವಾಹಿಸಿಕೊಂಡು, ಹರಿವಿನ ಎದುರು ಈಜುವ ಸಾಹಸ.
ಇಷ್ಟೇ…
ನಿಲ್ಲಬಲ್ಲವನು ಬುದ್ಧ. ನಡೆಯುತ್ತಲೇ ಇರುವವನು ಅಂಗುಲೀಮಾಲ.
~
ತಾವೋ ಸಾಧ್ಯವಿರುವ ಅತಿ ದೊಡ್ಡ ಬಂಡಾಯ.
ತಾವೋ ಸಾಧ್ಯವಿರುವ ಅತ್ಯುನ್ನತ ಶರಣಾಗತಿ.
ಸುಮ್ಮನಿರುವುದು ಕಷ್ಟ. ಪ್ರತಿಕ್ರಿಯೆ ಸಾಮಾನ್ಯ. ಕಾಲಕ್ಕೆ ತಲೆಯನ್ನೂ ಬೆಲೆಯನ್ನೂ ಕೊಟ್ಟು ಸುಮ್ಮನಿರುವುದನ್ನೆ ಉತ್ತರವಾಗಿಸಿದರೆ, ಅದಕ್ಕಿಂತ ದೊಡ್ಡ ಇದಿರೇಟು ಯಾವುದಿದ್ದೀತು?
ಹಾಗೆ ಕಾಲಕ್ಕೆ ತಲೆಯನ್ನೂ ಬೆಲೆಯನ್ನೂ ಕೊಟ್ಟು ಸುಮ್ಮನಾಗುವುದಿದೆಯಲ್ಲ, ಅದಕ್ಕಿಂತ ದೊಡ್ಡ ಸಮರ್ಪಣೆ ಯಾವುದಿದ್ದೀತು?
~
ನನಗೇನೇ, ವಿ.ಸೂ: ಇವೆಲ್ಲ ಅರ್ಥವಾದರಷ್ಟೆ ಸಾಲದು. ಮಾತಲ್ಲಿ ಹೇಳೋದು ಜಾಣತನದ ಪ್ರದರ್ಶನ. ಅನುಸರಿಸಿದಾಗಲಷ್ಟೆ ಅರ್ಥೈಸಿಕೊಂಡಿರೋದು ಖಾತ್ರಿಯಾಗೋದು. ಯಾವುದೇ ಸಂಗತಿಯಾದರೂ ಅಷ್ಟೇ. ನಾವು ಕಂಡುಕೊಂಡರಷ್ಟೆ ಅದು ನಿಜವಾಗೋದು.

ಸದ್ಯ, ಅನುಸರಿಸುವುದು ಕಷ್ಟ ಎಂದು ಪಲಾಯನಗೊಳ್ಳಲಿಲ್ಲ . 🙂
(ಒಹ್ ಪ್ರತಿಕ್ರಿಯಿಸಿಬಿಟ್ಟೆ! ಮುಂದಿನ ಬಾರಿ ಸುಮ್ಮನಿರಲು ಪ್ರಯತ್ನಿಸುತ್ತೇನೆ)
ಬಹಳ ಚೆನ್ನಾಗಿದೆ ಲೇಖನ.
ತಾವೋ ಓದಿ ಬರೆಯುವುದಲ್ಲ…? ಅರಿಯುವುದು… ಅರಿತು ಮರೆಯುವುದು…:)