ರಾತ್ರಿಯಲ್ಲೂ ಸೂರ್ಯ!
ಏರ್‌ಪೋರ್ಟಿಂದ ಹೊರಬಂದು ನಿಂತ ನಮಗೆ ಮುಂದೆ ಎಲ್ಲಿಗೆ ಹೋಗೋದು ಅನ್ನುವ ನಿಕ್ಕಿ ಇರಲಿಲ್ಲ. ಓಡಾಟದ ಮಾಧ್ಯಮ ಯಾವುದು ಅನ್ನೋದೂ ಗೊತ್ತಿರಲಿಲ್ಲ. ಅಣ್ಣನಿಗೆ ಸೂಚನೆ ಇದ್ದಂತೆ `ವೈಷ್ಣೋಧಾಮ್’ಗೆ ಹೋಗೋದು ಅಂದುಕೊಂಡೆವು. ನಮ್ಮೆಲ್ಲರ ಪುಣ್ಯಕ್ಕೆ (ಅಥವಾ ಕರ್ಮಕ್ಕೆ) ನಮ್ಯಾರ ಸೆಲ್‌ಗಳೂ ಅಲ್ಲಿ ಕೆಲಸ ಮಾಡ್ತಿರಲಿಲ್ಲ. ಹೌದು… ಸೆಕ್ಯುರಿಟಿ ಕಾರಣಗಳಿಂದಾಗಿ ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿ ಹೊರಗಿನ ಪ್ರಿಪೇಯ್ಡ್ ಸಿಮ್‌ಗಳಿಗೆ ನಿರ್ಬಂಧವಿದೆ.
ಸುಮ್ಮನೆ ಬಿಸಿಲಲ್ಲಿ ಬೇಯುತ್ತ ನಿಂತಿದ್ದ ನಮ್ಮ ಕಣ್ಣಿಗೆ ಹೊಟ್ಟೆ ಬಿರಿಯುವಂತೆ ಜನರನ್ನ ತುಂಬಿಕೊಂಡು ಓಡಾಡುವ `ಮಿನಿಬಸ್’ಗಳು ಕಂಡವು. ನಮ್ಮೂರಿನ ಪಕ್ಕಾ ಹಳ್ಳಿಗರ ಲಾರಿಗಳಂತೆ ಅಲಂಕರಿಸಿಕೊಂಡಿದ್ದ ಬಸ್ ಒಳಗೆ ಅಬ್ಬರದ ಪಂಜಾಬಿ ಹಾಡು ಮೊಳಗುತ್ತಿತ್ತು. ಹೌದು. ಜಮ್ಮುವಿನಲ್ಲಿ ಪಂಜಾಬಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ರಸ್ತೆಗೊಂದು ಧಾಬಾ ಕೂಡ ಇಲ್ಲಿ ಸಾಮಾನ್ಯ. ನಾವು ಅಬ್ಬರದ ಅಲಂಕಾರ ಮಾಡಿಸಿಕೊಂಡಿದ್ದ ಬಸ್ ಒಂದನ್ನು ಹತ್ತಿ ಮತ್ತೆಲ್ಲೋ ಇಳಿದು, ಮತ್ತೊಂದನ್ನು ಹತ್ತಿ ವೈಷ್ಣೋಧಾಮ್ ತಲುಪುವ ಹೊತ್ತಿಗೆ ಸಂಜೆ ಐದೂವರೆಯಾಗುತ್ತ ಬಂದಿತ್ತು. ಆ ಬಸ್ ನನ್ನ ಎತ್ತರಕ್ಕೆ ಸರಿಯಿತ್ತು. ಅಣ್ಣ ಇತ್ಯಾದಿಗಲೆಲ್ಲ ಪಾಪ, ತಗ್ಗಿಬಗ್ಗಿ ನಿಂತುಕೊಳ್ಳಬೇಕಿತ್ತು! (ಕುಳ್ಳಗಿರುವುದರ ಲಾಭ ಇದು 🙂 )
ವೈಷ್ಣೋಧಾಮ್ ಪ್ರವಾಸಿಗರಿಂದ, ಅದರಲ್ಲೂ ವೈಷ್ಣೋದೇವಿ ಸಂದರ್ಶನಕ್ಕೆಂದೇ ಬರುವ ಯಾತ್ರಿಗಳಿಂದ ಸದಾ ಕಿಕ್ಕಿರಿದು ತುಂಬಿರುವ ದೊಡ್ಡ ಕಟ್ಟಡ. ಅಲ್ಲಿ ನಾಲ್ಕನೇ ಮಹಡಿಯ ಡಾರ್ಮೆಟರಿಯಲ್ಲಿ ನಮಗೆಂದು ಕಾಟ್‌ಗಳು ಬುಕ್ ಆಗಿದ್ದರೂ ಗೇಟಿನ ಒಳಕ್ಕೆ ಪ್ರವೇಶ ಪಡೆಯಲು ಹರಸಾಹಸ ಪಡಬೇಕಾಯ್ತು. ಎಂಟ್ರೆನ್ಸಿನಲ್ಲೇ ಗಿರಲು ಮೀಸೆಯ ಸರ್ದಾರ್‌ಜೀಯೊಬ್ಬ `ಹೌಸ್‌ಫುಲ್’ ಅಂತ ಬರೆದಿದ್ದ ಬೋರ್ಡು ಇಟ್ಟುಕೊಂಡು ಕುಳಿತಿದ್ದ. ಅಂವ ನಮ್ಮ ಎಲ್ಲ ಪ್ರಶ್ನೆಗೂ ಆ ಬೋರ್ಡು ತೋರಿಸುತ್ತಿದ್ದ. `ನಾವು ಕರ್ನಾಟಕದಿಂದ ಬಂದಿದ್ದೀವಪ್ಪ, ರೂಮ್ ಬುಕ್ ಆಗಿದೆ’ ಅಂತ ಹೇಳಿದರೂ ಜಗ್ಗಲಿಲ್ಲ. ಕೊನೆಗೆ ಸಂಬಂತರಿಗೆ ಕಾಲ್ ಮಾಡಿ, `ಬುಕ್ ಆಗಿದೆ ಅಂದ್ರೆ ಆಗಿದೆ ಅಷ್ಟೆ. ನೀವು ಅವನ ಮಾತು ಕೇಳದೆ ಒಳಗೆ ಹೋಗಿ’ ಅನ್ನುವ ಆದೇಶ ಪಡೆದು ನುಗ್ಗಿದ್ದಾಯ್ತು.
ಹೀಗೆ ಎಲ್ಲ ಅಡ್ಡಿ ಆತಂಕಗಳನ್ನು ನಿವಾರಿಸಿಕೊಂಡು ನಾಲ್ಕನೆ ಮಹಡಿಯಲ್ಲಿದ್ದ ನಮ್ಮ ಕೋಣೆ ತಲುಪುವ ಹೊತ್ತಿಗೆ ಮತ್ತೆ ಅರ್ಧ ಗಂಟೆ ಕಳೆದಿತ್ತು. ಜಮ್ಮುವಿನಲ್ಲಿ ಇಳಿದ ದಿನವೇ ಒಂದಷ್ಟು ಸುತ್ತಾಡಬೇಕು ಅನ್ನುವ ನಮ್ಮ ಬಯಕೆ ಈಡೇರುವಂತೆ ಕಾಣಲಿಲ್ಲ. ಆದರೆ ಹೊರಗೆ ಸೂರ್ಯ ಮಾತ್ರ ಇನ್ನೂ ನಿಗಿನಿಗಿ ಅನ್ನುತ್ತಲೇ ಇದ್ದ. ನಾವೆಲ್ಲರೂ ನಮ್ಮನಮ್ಮ ವಾಚ್‌ಗಳ ಮೇಲೆ ಅನುಮಾನ ಪಟ್ಟು, ಆರು ಗಂಟೆಯಾಗಿರೋದನ್ನು ಖಚಿತಪಡಿಸಿಕೊಂಡು ವಿಸ್ಮಯಪಟ್ಟೆವು. ಜಮ್ಮುವಿನ ಸೂರ್ಯನ ಆಫೀಸು ಮುಗಿಯೋದು ಎಂಟುಗಂಟೆಗೆ ಅಂತ ಆಮೇಲೆ ಗೊತ್ತಾಯ್ತು. ನಮ್ಮೂರಲ್ಲಿ ಎಂಟುಗಂಟೆ ರಾತ್ರಿಯ ಅವಗೆ ಸೇರೋದ್ರಿಂದ, ಈ ಸೂರ್ಯನ್ನ `ರಾತ್ರಿಸೂರ್ಯ’ ಅನ್ನಬಹುದೇನೋ!
ತಣ್ಣೀರು ಮುಖಕ್ಕೆ ಬೀಳುತ್ತಲೇ ಸುಸ್ತು ಮರೆತ ನಾವು, ಸ್ವಲ್ಪ ಕಾಲಾಡಿಸಿ ಬಂದೆವು. ಕುಲ್ಚೇ ಚೋಲೇಯ ರುಚಿ ನೋಡಿ, ನಿಂಬೂ ಸೋಡಾವನ್ನು ಗಟಗಟನೆ ಕುಡಿದು ತಂಪಾದೆವು. ಈ ನಡುವಲ್ಲೆ ಅಣ್ಣನ ಕಣ್ಣುತಪ್ಪಿಸಿ ಅನೂಪ ಮತ್ತು ನಾನು ಮನೆಗೆ ಕಾಲ್ ಮಾಡಿಬಂದಿದ್ದೂ ಆಯ್ತು. ಮಧ್ಯಾಹ್ನದಿಂದ ನನ್ನ ಫೋನ್‌ಗೆ ಕಾಯ್ತಿದ್ದ ಮಗ, ದನಿ ಕೇಳುತ್ತಲೇ ಕುಣಿದಾಡಿಬಿಟ್ಟ. ಆದರೆ ಇಲ್ಲಿರುವಷ್ಟೂ ದಿನ ಮೊಬೈಲ್‌ಗೆ ಸಿಗೋದಿಲ್ಲ ಅಂದಾಗ ಮಾತ್ರ ಗೊಳೋ ಅಂತ ಅತ್ತುಬಿಟ್ಟ. ಈಚೆ ತುದಿಯಲ್ಲಿದ್ದ ನಾನು ಮೊದಲ ಬಾರಿಗೆ ಅವನನ್ನ ಬಹಳ ಬಹಳ ಮಿಸ್ ಮಾಡಿಕೊಂಡೆ.
ಎರಡನೇ ದಿನ ಆಟೋ ಬುಕ್ ಮಾಡಿಕೊಂಡು ಜಮ್ಮು ಸುತ್ತಾಡಲು ಹೊರಟೆವು. `ಒಟ್ಟು ೮ ಜಾಗಗಳನ್ನ ತೋರಿಸ್ತೀವಿ, ನಾಲ್ಕುನೂರಾ ಎಂಭತ್ತು ರೂಪಾಯಿ ಕೊಡಬೇಕು’ ಅಂತ ಆಟೋದವ ಕಂಡಿಷನ್ ಹಾಕಿದ. ನಾವು ತಲೆಯಾಡಿಸಿದೆವು. ಆಟೋದವನ ಲಿಸ್ಟಿನಲ್ಲಿ ಶೀಶ್‌ಮಂದಿರ್, ಜಮು ಫೋರ್ಟ್, ಬಹು ಫೋರ್ಟ್ ಮೊದಲಾದ ಭಾರೀಭಾರೀ ಹೆಸರುಗಳಿದ್ದವು. ಸರಿ, ನಾವು ಎರಡು ಆಟೋಗಳಲ್ಲಿ ನಮ್ಮನ್ನ ತೂರಿಸಿಕೊಂಡು ಹೊರಟೆವು.
ನಾವು ಮೊದಲು ಹೋಗಿದ್ದು ಶೀಶ್ ಮಂದಿರ್‌ಗೆ. ಅದೊಂದು ಗೋಡೆಗಳ ಮೇಲೆಲ್ಲ ಕನ್ನಡಿ ಕೂರಿಸಿ ಕಟ್ಟಿರುವ ಸಾಧಾರಣ ದೇವಸ್ಥಾನ. ಅಲ್ಲಿ ಶಿವನದೊಂದು ಮೂರ್ತಿ ಇತ್ತು. ಪ್ರವೇಶ ದ್ವಾರದಲ್ಲೆ ರಾಧಾ ಕೃಷ್ಣರು ಒಂದು ಬದಿ, ಹನುಮಂತನ ವಿಗ್ರಹ ಒಂದು ಬದಿ ಇದ್ದವು. ಛಾವಣಿಯ ಮೇಲೆಲ್ಲ ಶಿವನ ಕಥೆಗಳನ್ನು ಚಿತ್ರಿಸಲಾಗಿತ್ತು. ಅವುಗಳಲ್ಲಿ ನಮ್ಮ ಬೇಡರ ಕಣ್ಣಪ್ಪನ ಕಥೆಯೂ ಒಂದು. ಅಲ್ಲಿನ ಪೂಜಾರಿ ಅದನ್ನ `ರಾಜಾ ಕಿರಾತ’ ಅಂದ.
ಅಲ್ಲಿಂದ ಮುಂದೆ `ಜಾಂಬವಂತ ಗುಫಾ’ಕ್ಕೆ ಕರೆದೊಯ್ದರು. ಅಲ್ಲಿ ಒಳಗೆ ಒಟ್ಟು ಮೂರು ಗುಹೆಗಳಿದ್ದು, ಆಟೋದವರು ತೋರಿಸಲಿದ್ದ ೮ ಜಾಗಗಳಲ್ಲಿ ಅವೂ ಸೇರಿದ್ದವು! ಈ ಗುಹೆಗಳಲ್ಲಿ ಒಂದು ಮಾತ್ರ ನಮ್ಮನ್ನು ಬಹಳವಾಗಿ ಆಕರ್ಷಿಸಿತು. ಧ್ಯಾನ ಮಾಡಲು ಅತ್ಯಂತ ಪ್ರಶಸ್ತವಾದ ಸ್ಥಳ ಅದಾಗಿತ್ತು.
ಮತ್ತೆ ನಮ್ಮ ಪ್ರಯಾಣ ಮತ್ತೊಂದು ದೇವಸ್ಥಾನಕ್ಕೆ. ಅದರ ಹೆಸರು ರಘುನಾಥ ಮಂದಿರ. ದೊಡ್ಡ ಆವರಣದೊಳಗೆ ಸಾಧ್ಯವಿರುವ ಎಲ್ಲ ದೇವತೆಗಳ ವಿಗ್ರಹವನ್ನೂ ಇರಿಸಲಾಗಿತ್ತು. `ಶಂಖ್‌ಜೀ’, `ಚಕ್ರ್ ಜೀ’, ಇತ್ಯಾದಿ ಸಿಕ್ಕಿದ್ದಕ್ಕೆಲ್ಲ `ಜೀ’ ಸೇರಿಸಿ ಚಿಕ್ಕಚಿಕ್ಕ ಪೂಜಾ ವೇದಿಕೆಗಳು ಇದ್ದವು. ಅಲ್ಲಿ ಬಹಳಷ್ಟು `ರಾಮ್‌ಸೇವಕ್ ಜೀ’ ವಿಗ್ರಹಗಳೂ ಇದ್ದವು. ಅವುಗಳ ಜೊತೆಗಿದ್ದ ಲಕ್ಷ್ಮಣ- ಊರ್ಮಿಳೆಯರ ಜೋಡಿ ವಿಗ್ರಹ ನನಗೆ ಖುಷಿಯನ್ನೂ ಸಮಾಧಾನವನ್ನೂ ತಂದುಕೊಟ್ಟಿತು. ಬಹುಶಃ ಹೆಂಡತಿ ಜತೆ ಲಕ್ಷ್ಮಣ ಇರುವುದು ಇಲ್ಲಿ ಮಾತ್ರವೇನೋ!
ಮುಂದೆ ಮಿನಿ ಹರ್‌ದ್ವಾರ್‌ಗೆ ನಮ್ಮನ್ನು ಕರೆದೊಯ್ಯಲಾಯ್ತು. ಅಲ್ಲಿ ಶ್ರವಣ ಕುಮಾರ ತನ್ನ ಅಪ್ಪ ಅಮ್ಮಂದಿರನ್ನು ಹೊತ್ತುಕೊಂಡಿರುವ ವಿಗ್ರಹ ಇತ್ತು. ಇಲ್ಲಿ ದೇವಾಲಯದ ಮೆಟ್ಟಿಲಿಳಿದು ಹೋದರೆ ‘ಸೂರ್ಯಪುತ್ರಿ ತವೀ’ ನದಿಯಾಗಿ ಹರಿಯುತ್ತಾಳೆ. ನಾವೂ ಅಲ್ಲಿಗಿಳಿದು ಸ್ವಲ್ಪ ಹೊತ್ತು ಕಾಲು ನೆನೆಸಿದೆವು. ಅದ್ಭುತವಾದ ಕೃಷ್ಣವರ್ಣದ ನದಿ ಅದು. ಮೆಲೆ ಹತತಿ ಬರುವಾಗ ದೇವಸ್ಥಾನದವತಿಯಿಂದ ಒಬ್ಬರು ರಸ್ಕ್ ಮತ್ತು ಟೀ ಹಂಚುತ್ತಿದ್ದರು. ಇದು ಅಲ್ಲಿನ ಪ್ರಸಾದ! ನಾವು ಗೌರವಾದರಗಳಿಂದ ಅವನ್ನೂ ಹೊಟ್ಟೆಗಿಳಿಸಿದೆವು. ನಿಜವಾಗಿಯೂ ನಮಗೆ ಆ ಹೊತ್ತು ತಿನ್ನಲಿಕ್ಕೇನಾದರೂ ಬೇಕಿತ್ತು. ಹಾಗಿರುವಾಗ ಪ್ರಸಾದವೇ ಸಿಕ್ಕರೆ ಹೇಗಾಗಬೇಡ!
ಈ ಎಲ್ಲ ದೆವಸ್ಥಾನಗಳಲ್ಲೂ ಒಂದು ವಿಶೇಷ ಗಮನಿಸುತ್ತಿದ್ದೆ. ಈ ಭಾಗದಲ್ಲಿ ಶಿವ ಮೂರ್ತಿ ರೂಪದಲ್ಲೇ ಪೂಜೆಗೊಳ್ಳುತ್ತಿದ್ದ. ನಮ್ಮ ಕಡೆಯೆಲ್ಲ ಭೃಗು ಅನ್ನೋ ಋಷಿ ಶಾಪ ಕೊಟ್ಟ, ಅವತ್ತಿಂದ ಶಿವಂಗೆ ಮೂರ್ತಿ ಪೂಜೆ ಇಲ್ಲ, ಬರೀ ಲಿಂಗ ಪೂಜೆ ಇತ್ಯಾದಿ ಕಥೆ ಹೇಳ್ತಾರೆ. ಹಾಗಾದ್ರೆ, ಇಲ್ಲಿ ಅಚ್ಚುಕಟ್ಟಾಗಿ ಕೂತಿರೋ ವಿಗ್ರಹಗಳು ಇನ್ಯಾವ ಶಿವಂದು!? ಈ ಕಥೆಗಳನ್ನ ಕಟ್ಟಿಕೊಂಡರೆ ಅಷ್ಟೇ…. ಹಾಗೇನೇ ಈ ದೇವಾಲಯಗಳಲ್ಲಿ ಗಮನಿಸಿದ ಮತ್ತೊಂದು ಅಂಶ ಯಾವ ದೇವಾಲಯದಲ್ಲಿ ಯಾವ ದೇವತೆಗಳು ಬೇಕಾದರೂ ಇರಬಹುದು ಅನ್ನೋದು! ದಕ್ಷಿಣ ಭಾರತದಲ್ಲಿ ಹಾಗಲ್ಲ. ದೇವಾಲಯಕ್ಕೊಂದು ವಾಸ್ತು, ನಕ್ಷೆ, ಇಂಥ ದೆವತೆಗೆ ಇಂಥ ಕಲಶ, ಇಂಥದ್ದೇ ವಿಮಾನ, ಇಂಥದ್ದೇ ಆವರಣ ದೇವತೆಗಳು, ಪರಿವಾರ ದೇವತೆಗಳು ಅಂತೆಲ್ಲ ಇರ್‍ತವೆ. ಇಲ್ಲಿ ಹಾಗಲ್ಲ. ಶಿವ ಮಂದಿರದಲ್ಲೇ ಸೈಡಿನಲ್ಲಿ ಕೃಷ್ಣನೂ ಇರಬಲ್ಲ. ಮತ್ತೊಂದು ಮೂಲೆಯಲ್ಲಿ ಸಾಯಿಬಾಬಾರ ಮೂರ್ತಿಯೂ ಪೂಜೆಗೊಳ್ಳಬಲ್ಲದು! ಜಾತಿಯೊಳಗಿನ ಪಂಥಗಳನ್ನ ಬೆಸೆಯಲಿಕ್ಕಾಗಿ ಇಲ್ಲಿ ಹೀಗಿದೆಯೇನೋ! ಅಚ್ಚರಿಯ ಜತೆ ಖುಷಿಯೂ ಆಯ್ತು.
ಈ ಸುತ್ತಾಟದ ಕೊನೆಯಲ್ಲಿ ನಾವು ಹೋಗಿದ್ದು ಜಮು ಫೋರ್ಟಿನಲ್ಲಿರುವ ಕಾಳಿ ಮಾತಾ ದೇವಾಲಯಕ್ಕೆ. ಊ……ದ್ದನೆಯ ಕ್ಯೂವೇ ನನ್ನ ಕಾಲುಗಳನ್ನು ಹಿಂದಿರುಗಿಸುತ್ತಿತ್ತು. ಆದರೆ ನಾವು ಕೊಡಲಿರುವ ಹಣಕ್ಕೆ ನ್ಯಾಯ ಸಂದಾಯವಾಗಬೇಕೆಂದೂ ಮರಳಿ ಹೋಗಿ ವೈಷ್ಣೋಧಾಮ್‌ನ ಕೋಣೆಯಲ್ಲಿ ಸುಮ್ಮನೆ ಕೂರೋದಕ್ಕಿಂತ ಇಲ್ಲಿನ ಜನರನ್ನು ಗಮನಿಸೋದೇ ಮಜವಾಗಿರುತ್ತದೆಂದೂ ಹೇಳಿದ ಅಣ್ಣ ನನ್ನ ಯೋಚನೆಗೆ ತಣ್ಣೀರೆರಚಿದ. ಆ ಹೊತ್ತಿಗೆ ಸರಿಯಾಗಿ ನನ್ನಲ್ಲಿ ಆಸಕ್ತಿ ಮೂಡಿಸಲೆಂದೇ ಅನ್ನುವಂತೆ ಯಾರೋ ಒಬ್ಬ ಹುಡುಗ `ಮೈಮೇಲೆ ಬರಿಸಿಕೊಂಡು’ ಹುಚ್ಚುಚ್ಚಾಗಿ ಆಡುತ್ತಾ ಕ್ಯೂನ ದಾರಿ ಬಿಡಿಸಿಕೊಂಡು ದೇವಾಲಯದ ಬಳಿಗೆ ಓಡಿದ. ನನಗೆ ಅವನನ್ನ ನೋಡೋದೇ ಒಂದು ಗಮ್ಮತ್ತಾಗಿಹೋಯ್ತು. ಅವನು ಓಡುವಾಗ ಅಲ್ಲಿ ನೆರೆದ ಗಂಡಸರು- ಹೆಂಗಸರೆಲ್ಲ `ಮಾ ಕಾಲಿ ಆಯೀ ಜೈ ಬೋಲೋ… ಮಾ ಕಾಲಿ ಕೀ ಜೈ ಬೋಲೋ…’ ಅನ್ನುತ್ತ ಕೆನ್ನೆ ಬಡೆದುಕೊಳ್ತಿದ್ದರು.
ಆ ಹುಡುಗ ಹೋದ ಸ್ವಲ್ಪ ಹೊತ್ತಿಗೆ ಮತ್ತೆ ಬೋರಾಗತೊಡಗಿತು. ಕಾದು ನಿಂತು ಅರ್ಧ ಗಂಟೆಗೂ ಹೆಚ್ಚು ಸಮಯವಾಗಿತ್ತು. ಗೊಣಗಿಕೊಳ್ಳುತ್ತ ಇರುವಾಗಲೇ ಮತ್ತೊಂದು ರೋಚಕ ಘಟನೆ! ಹುಡುಗಿಯೊಬ್ಬಳು ಬಿಚ್ಚುಗೂದಲನ್ನ ತಿರುಗಿಸುತ್ತಾ ವಿಚಿತ್ರ ಸದ್ದು ಮಾಡುತ್ತಾ ನನ್ನ ಹಿಂದಿನಿಂದಲೇ ಓಡಿ ಬಂದಳು. ಮತ್ತೆ ಗುಂಪಿನಲ್ಲಿ ಕೋಲಾಹಲ… `ಕಾಲೀ ಆಯೀ ಜೈ ಬೋಲೋ….’
ಅಂತೂ ಇಂತೂ ಜಂಗುಳಿಯಲ್ಲಿ ಕಾಳಿಯನ್ನ ಕಂಡು ಹೊರಡುವಾಗ, `ಮಹಾತಾಯಿ, ನೀನು ನನ್ನ ಎದೆಗೂಡೊಳಗೇನೇ ಬಹಳ ಬಹಳ ಚೆಂದವಿದ್ದೀಯ ಕಣೇ….’ ಅಂದುಕೊಂಡೆ. ನಿಜ. ಆ ಜನ ಮರುಳಿನ ಜಾತ್ರೆಯ ಕಾಳಿಗಿಂತ ನನ್ನೊಳಗಿನ ಮೌನ ಕಾಳಿಯನ್ನ ಕಾಣಲು ಕಷ್ಟಪಟ್ಟಿದ್ದರೆ ಸಾಕಿತ್ತು…
ಕಾಳೀಮಂದಿರದ ಬಳಿಯಲ್ಲೇ ಬಗೆಬಗೆಯ ಮೀನುಗಳ ಸಂಗ್ರಹಾಲಯವಿತ್ತು. ಯೋಗೀಶಣ್ಣ ಮತ್ತು ಸಚಿನ್ ಊರುಬಿಟ್ಟ ಎರಡು ದಿನಕ್ಕೇ ಮೀನಿಲ್ಲದೆ ಹೈರಾಣಾಗಿ ಹೋಗಿದ್ದರು. ಅವರ ಮುಖದಲ್ಲಿ ಕೊಂಚ ನಗು ಮೂಡಲಿ ಅಂದುಕೊಂಡು ಅಲ್ಲಿಗೂ ಹೋಗಿ ಬಂದೆವು. ಅವರು ಗಾಜಿನಾಚೆಯಿದ್ದ ಮೀನಿನ ಕಳೇವರಗಳನ್ನು ನೋಡಿಯೇ ತೃಪ್ತಿಪಟ್ಟರು.
ಕೊನೆಗೆ ಕಾಳೀಮಂದಿರದ ಹೊರಗಿನ ಆವರಣದಲ್ಲಿ ಪುದೀನಾ ನಿಂಬೂ ಪಾನಿ ಕುಡಿದು ತಣ್ಣಗೆ ನಮ್ಮ ದಿನದ ಸುತ್ತಾಟವನ್ನು ಮುಗಿಸಿದೆವು. ನಮಗಿಂತ ಹೆಚ್ಚಾಗಿ ಆಟೋ ಅಣ್ಣಂದಿರು ಸುದೀರ್ಘ ನಿಟ್ಟುಸಿರಿಟ್ಟರು. ನಾವು ಮೂರು ಜನ ಕುಳಿತಿದ್ದ ಆಟೋದ ಅಣ್ಣ ವಿಪರೀತ ವಾಚಾಳಿಯಾಗಿದ್ದ. `ನಿಮಗೆ ಫಾರೂಕ್ ಅಬ್ದುಲ್ಲಾ ಯಾರು ಅಂತ ಗೊತ್ತಾ?’ ಕೇಳಿದ. `ಅಂವ ಮೋತೀಲಾಲನ ಮಗ. ಹುಹ್! ಜಮ್ಮು ಕಾಶ್ಮೀರದ ಪ್ರತಿಯೊಬ್ಬರಿಗೂ ಇದು ಗೊತ್ತು. ನೀವು ಹೊರಗಿನ ಜನಗಳು. ಇವನ್ನೆಲ್ಲ ಸುದ್ದಿ ಮಾಡೋದೇ ಇಲ್ಲ. ನಮ್ಮ ರಾಜ್ಯದ ಬಗ್ಗೆ ನಿಮಗೆ ಕಾಳಜಿಯೇ ಇಲ್ಲ’ ಅಂತ ಆಕ್ಷೇಪ ಮಾಡಿದ. ಈ ರೂಮರ್ ಬಗ್ಗೆ ನಮ್ಮ ಕಡೆ `ಬಿಜೆಪಿ ಅಜೆಂಡಾ’ ಅಂತ ಹೆಳಿ ಕೈತೊಳೆದುಕೊಳ್ತಾರೆ. ಬಿಜೆಪಿಯ ನಾಮ್ ಔರ್ ನಿಶಾನ್ ಇಲ್ಲದ ಜಮ್ಮುವಿನಲ್ಲೂ ಇಂಥ ಮಾತು ಕೇಳಿ ಬಂತೆಂದರೆ ಇದು ಯಾರ ಅಜೆಂಡಾ ಇರಬಹುದು!? ಯೋಚಿಸುವ ಗೋಜಿಗೆ ಹೋಗಲಿಲ್ಲ. ಯಾಕಂದರೆ ಇಂತಹ ಇನ್ನೂ ಹಲವು ಅಚ್ಚರಿಗಳು ಎದುರಾಗಲಿವೆಯೆಂದು ನಮಗೆ ಖಾತ್ರಿಯಿತ್ತು. ವೈಷ್ಣೋಧಾಮ್ ಬಳಿಯೇ ಇದ್ದ ಜಮ್ಮು ಪೊಲೀಸ್ ಹುತಾತ್ಮರ ಸ್ಮಾರಕ್ಕೆ ಭೇಟಿಕೊಟ್ಟು, ನಮ್ಮ ಅಂದಿನ ತಿರುಗಾಟ ಮುಗಿಸಿದೆವು.

‘ಬಹುಶಃ ಹೆಂಡತಿ ಜತೆ ಲಕ್ಷ್ಮಣ ಇರುವುದು ಇಲ್ಲಿ ಮಾತ್ರವೇನೋ!’
ಹರಿದ್ವಾರದ ಬಳಿಯಲ್ಲೆಲ್ಲೋ ಲಕ್ಷ್ಮಣ-ಊರ್ಮಿಳೆಯರ ದೇವಸ್ತಾನಕ್ಕೆ ಹೋಗಿದ್ದ ನೆನಪು. ಗೂಗಲಿಸಿ ನೋಡಿದೆ, ರಾಜಸ್ತಾನದ ಭರತಪುರದಲ್ಲೂ ಒಂದು ದೇಗುಲ ಇದೆಯಂತೆ!
ಚಂದದ ಬರಹ, ಮುಂದಿನ ಭಾಗ ಬೇಗ ಬರಲಿ…
-ಪ್ರಸನ್ನ ಆಡುವಳ್ಳಿ, ಬಾಳೆಹೊನ್ನೂರು
ಈ ಮಾಹಿತಿಗೆ ಧನ್ಯವಾದ. ತಿಳಿದು ಖುಷಿಯಾಯ್ತು 🙂
enjoying your vaishno devi trip with u r narration.. 🙂