ದಂಡೆ ನಿರ್ಲಿಪ್ತ
ಓಡೋಡಿ ಬರುವ
ಅಲೆಯ ನಿಯತ್ತು
ಅದಕ್ಕೆ ಗೊತ್ತು.
~
ದಂಡೆ ಬಿಟ್ಟಿರಲಾಗದ
ಅಲೆಗೆ ತಳಮಳ.
ಬಂದಪ್ಪಿದರೆ ಮತ್ತೆ
ನೀರ ಸೆಳೆತ.
~
ಬರುವಾಗ ಹೆದ್ದೆರೆ,
ದಡವನಪ್ಪಿ ಭೋರ್ಗರೆದು
ಹಿಂಜರಿದು ನಡೆವಾಗ
ತಗ್ಗಿ ಕುಗ್ಗಿ, ಇಲ್ಲವಾಗಿಬಿಡುತ್ತಿದೆ.
~
ಸಾಗರದೊಡಲಿಂದ ಬಂಡೆದ್ದ
ಸಾವಿರ ಸಾವಿರ ಅಲೆಗಳು
ನೆಲವ ನೆಚ್ಚಿಕೊಳ್ಳಲಾಗದೆ
ಮರಳಿ ಹೋಗುತ್ತಿವೆ.
~
ದಡ, ಸಾಗರ
ದಡ, ಸಾಗರ-
ದಾಟದಲ್ಲಿ ಅಲೆಗಳು
ಸೋತು ಸೊರಗುತ್ತಿವೆ.
~
ನೀರೋ, ನೆಲವೋ?
ಕ್ಷಣಕ್ಷಣವೂ ದ್ವಂದ್ವ…
ಸಾಗರ ದನಿ ತೆಗೆದು
ಅಳುತ್ತಿದೆ.

ನಿಮ್ಮ ಟಿಪ್ಪಣಿ ಬರೆಯಿರಿ