ಮಳೆ ಯಾಕೋ ಇವತ್ತು
ಹಠ ಹಿಡಿದಿದೆ ನಿನ್ನ ಹಾಗೆ
ನೆನೆನೆನೆದು ಮುನಿಯುತ್ತಿದೆ
ಮುನಿಮುನಿದು ನೆನೆಸುತ್ತಿದೆ
ಯಾಕೋ…
ಮಳೆ ಯಾಕೋ ಇವತ್ತು
ಹಠ ಹಿಡಿದಿದೆ ನಿನ್ನ ಹಾಗೆ
ನೀ ಕಣ್ತೆರೆದಂತೆ ಮಿಂಚು
ಮಿಂಚಿ ಮೈಯೆಲ್ಲ ಸೆಳೆದು
ಒಳಗೆಲ್ಲೋ ಕೋಡಿ ಒಡೆದು
ಪ್ರವಾಹ ಬಿದ್ದು ಸುಳಿವು
ನಿನ್ನ ನಗುವಿನದೇ ಸಿಡಿಲು-
ನೀ ನಗುನಗುತ್ತ ಸಿಡುಕಿ ಆಡಿದ ಮಾತು
ನನ್ನ ಸುಟ್ಟಿತ್ತಲ್ಲೇ ಸಿಡಿಲ ಹಾಗೆ!
ಹಾಗೆ ಸುಟ್ಟಿದೆ ನೋಡು
ಮನೆಯೆದುರ ಒಂಟಿ ತೆಂಗು,
ಗರಿಗಳೆಲ್ಲ ಉದುರಿ, ಫಲಗಳೆಲ್ಲ ಚದುರಿ
ಉದ್ದಾನುದ್ದ ನಿಂತಿದೆಯಲ್ಲಿ
ದಿಗಂಬರನ ಹಾಗೆ…
ಹವಾಮಾನದ ವರದಿಗಳೆಲ್ಲ
ಥೇಟು ನಿನ್ನ ಹಾಗೇ ಹುಸಿಹೋಗಿ,
ಬರಬಾರದಿಂದು ‘ಧೋ’ ಎಂದು
ಸುರಿಯುತ್ತಿದೆ ಮಳೆ,
ನಾ ತಂದ ಮಲ್ಲಿಗೆಗೂ
ನೀನತ್ತ ಹಾಗೆ!

ನಿಮ್ಮ ಟಿಪ್ಪಣಿ ಬರೆಯಿರಿ